ಮುಕ್ತಿ ಅನ್ನುವ ಪರಮಪದ

ನೋಡುವ ಬೆಡಗು । ದೀಪಾ ಫಡ್ಕೆ

`ಜೋ ಭಜೆ ಹರಿ ಕೋ ಸದಾ, ಸೋ ಹಿ ಪರಮಪದ ಪಾವೇಗಾ, ಸೋ ಹಿ ಪರಮಪದ ಪಾವೇಗಾ’ ಭೈರವಿರಾಗದಲ್ಲಿ ಸ್ವರಮಾಂತ್ರಿಕ ಭೀಮಸೇನರು ಪರವಶರಾಗಿ ಸಂಕೀರ್ತನ ಮಾಡುತ್ತಿದ್ದರೆ ತುಂಬಿದ ಸಭಾಂಗಣದಲ್ಲಿ ಶ್ರೋತ್ರುಗಳ ಮನವೂ ಆದ್ರ್ರವಾಗುತ್ತಿತ್ತು. ಆ ಕ್ಷಣದಲ್ಲಿ ಅನೇಕರಿಗೆ ಅದುವೇ ಪರಮಪದ. ಸ್ವಯಂಸಾಧನೆಯಿಂದ ಸಿದ್ಧಿಯ ಶಿಖರವೇರಿದ ಭೀಮಸೇನರು ಹಾಡುತ್ತಾ ಹಾಡುತ್ತಾ ಮುಕ್ತರಾಗುತ್ತಿದ್ದರೆ, ಕೇಳುತ್ತಿದ್ದ ಕಿವಿಗಳು ಆ ಸಿದ್ಧಿಯ ರಸದಲ್ಲಿ ಮುಳುಗೇಳುತ್ತಾ ಮುಕ್ತರಾಗುತ್ತಿದ್ದರು. ಇದೇ ಅಥವಾ ಇಷ್ಟೇ ಮುಕ್ತಿ ಅನ್ನುವ ಪರಮಪದದ ಸರಳ ವ್ಯಾಖ್ಯಾನ. ಮೋಕ್ಷ, ಕೈವಲ್ಯ, ಲಿಂಗೈಕ್ಯ, ವೈಕುಂಠ ಪ್ರಾಪ್ತಿ, ಅರ್ಹತ್, ನಿರ್ವಾಣ ಹೀಗೆ ಹತ್ತಾರು ಹೆಸರುಗಳಿಂದ ಸಮ್ಮೋಹನಗೊಳಿಸುವ ಮುಕ್ತಿಯೆಂದರೆ ಕ್ಷಣದ ಸತ್ಯದಿಂದ, ಕ್ಷಣಭಂಗುರತೆಯಿಂದ ಬಿಡುಗಡೆಯಾಗುವುದು, ಜೇಡ ಕಟ್ಟಿದ ಬಲೆಯಂತೆ ತನ್ನದೇ ಆಸೆಗಳ ಬಂಧಗಳಿಂದ ಕಳಚಿಕೊಳ್ಳುವುದು.

ಈ ಭೂಮಿಯಲ್ಲಿ ಮನುಷ್ಯನಿಗಷ್ಟೇ ಅವಕಾಶವಿರುವುದು ಮುಕ್ತವಾಗಲು, ಏಕೆಂದರೆ ಯೋಚನೆಗಳ ಆಗರ ಅವನು. ಯೋಚನೆಗಳು ಮೂಡಿದಲ್ಲೇ ಬಂಧಗಳು ಹುಟ್ಟಿಕೊಳ್ಳುವುದು. ಬಂಧ ಮೂಡಿದ ಮೇಲೆಯೇ ಮುಕ್ತಿಗೆ ಹಾತೊರೆಯುವುದು. ಆಸೆ ಮನುಷ್ಯನನ್ನು ಬದುಕಲು ಪ್ರೇರೇಪಿಸಿದರೆ, ಸುಖ ಮನುಷ್ಯನನ್ನು ಕಳಕೊಳ್ಳುವ ಭ್ರಾಂತಿಗೆ ತಳ್ಳುತ್ತದೆ. ಇದರಿಂದ ಪಾರಾಗಿ, ಬಿಡುಗಡೆಯಾಗಿ ಹೊಂದುವ ನಿರಾಳತೆಯೇ ಮುಕ್ತಿ. ಆದರೆ ಸಾಮಾನ್ಯವಾಗಿ ವೈಯಕ್ತಿಕ ಸುಖವೇ ಹಿರಿದಾಗಿ ಕಂಡುಬರುವುದರಿಂದ ನಿರಾಳತೆ ಸಿಗದೇ ಹೋಗುತ್ತದೆ. ಒಂದು ಬಂಧದಿಂದ ಇನ್ನೊಂದಕ್ಕೆ ಸಿಲುಕುತ್ತಾ ಇರುವುದೇ ಸುಖವಾಗುತ್ತದೆ. ಇದನ್ನು ಕ್ಷಣದ ಮುಕ್ತಿಯೆನ್ನಲಡ್ಡಿಯಿಲ್ಲ. ಪ್ರತಿಯೊಬ್ಬರ ಮನದಲ್ಲಿ ಪಡೆಯುವ, ಹೊಂದುವ ಬಯಕೆಯಿರುತ್ತದೆ. ಅದು ಸಿಕ್ಕಿದೊಡನೆ ಮನಸ್ಸು ಮುಕ್ತವಾದಂತೆ ಅನಿಸುತ್ತದೆ ಅಥವಾ ಸುಖದ ಕ್ಷಣದಲ್ಲಿ ಅದೇ ಮುಕ್ತಿಯಂತೆ ಭಾಸವಾಗುತ್ತದೆ. ಆದರೆ ಅದು ಕ್ಷಣಿಕಕ್ಕೆ ದಕ್ಕಿದ ಮುಕ್ತಿ. ಏಕೆಂದರೆ ಸ್ವಲ್ಪ ಹೊತ್ತಿನಲ್ಲೇ ಮನಸ್ಸು ಮತ್ತೇನಕ್ಕೋ ಭೋರ್ಗರೆಯಲಾರಂಬಿಸುತ್ತದೆ. ಹೀಗೆ, ಇಂತಹ ಸಣ್ಣಪುಟ್ಟ ಮುಕ್ತಿಗಳಿಂದ ಹಿಡಿದು ಜಗಕೆ ಬೆಳಕು ನೀಡಿದ ಸಂತರು, ದಾರ್ಶನಿಕರು, ಅವರವರ ಶಕ್ತಿಗೆ, ಭಾವಕ್ಕೆ ತಕ್ಕಂತೆ ಸಾಧಿಸಿದ ಮುಕ್ತಿಯನ್ನೂ ಜಗತ್ತು ಕಂಡಿದೆ. ಅತ್ಯಂತ ಸರಳವಾಗಿ ಮುಕ್ತಿಯ ಪರಿಭಾಷ್ಯ ಹೇಳಿದವರು ಸರಳ ಬದುಕಿನ ಪಾಠ ಹೇಳಿದ ಡಿ.ವಿ.ಜಿ.ಯವರು. ತಮ್ಮ `ಮಂಕುತಿಮ್ಮನ ಕಗ್ಗ’ದಲ್ಲಿ ಮುಕ್ತಿಯೆನ್ನುವುದು ನಿತ್ಯಬದುಕನ್ನು ಬಾಳುವ ರೀತಿಯಲ್ಲಿದೆ ಎಂದಿದ್ದಾರೆ.
                            ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ
                            ಯುಕ್ತದಿಂದೆರಡು ಮಂಚುಗಳೊಂದೆ ಪಥಕೆ
                            ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ
                            ಶಕ್ತಿಯುಧ್ಯಾತ್ಮಕದು-ಮಂಕುತಿಮ್ಮ

ಭುಕ್ತಿಪಥ-ಹೊಟ್ಟೆಪಾಡಿನ ಜೀವನ. ಇದೂ ಮುಕ್ತಿಪಥವೆ. ಇವೆರಡೂ ದಾರಿಯ ಎರಡು ಬದಿಗಳಷ್ಟೇ. ಬದುಕು ಒದಗಿಸಿದ ಕೆಲಸಗಳನ್ನು ನಿರ್ವಂಚನೆಯಿಂದ ಮಾಡಿದಾಗ ಅಧ್ಯಾತ್ಮಶಕ್ತಿ ದ್ವಿಗುಣವಾಗುತ್ತದೆ ಎನ್ನುತ್ತಾರೆ ಡಿ.ವಿ.ಜಿ. ಅಧ್ಯಾತ್ಮಶಕ್ತಿಯೆಂದರೆ ಮನಸ್ಸಿನ ಶಕ್ತಿ, ಅಂತ:ಸತ್ತ್ವ. ಇದನ್ನೇ ಕುವೆಂಪು ಅವರು ತಮ್ಮ ನೇಗಿಲಯೋಗಿ’  ಕವನದಲ್ಲಿ ರೈತನನ್ನು ಭುಕ್ತಿಪಥದಿಂದ `ಮುಕ್ತ’ನಾದವನು ಎಂದಿದ್ದು.
                            ನೇಗಿಲ ಹಿಡಿದಾ ಹೊಲದೊಳು ಹಾಡುತ
                            ಉಳುವಾ ಯೋಗಿಯ ನೋಡಲ್ಲಿ
                            ಫಲವನು ಬಯಸದೆ ಸೇವೆಯೆ ಪೂಜೆಯ
                            ಕರ್ಮವೇ ಇಹಪರ ಸಾಧನವು

ಅನ್ನ ನೀಡುವ ರೈತ ನಿಜಕ್ಕೂ ಯೋಗಿಯೇ. ತಾನು ಬೆಳೆಯುವ ಅನ್ನ ಯಾರ್ಯಾರ ಹೊಟ್ಟೆಗೆ ತಂಪನ್ನೀಯುವುದೋ ಎನ್ನುವ ಅರಿವಿಲ್ಲದೆ ನಿವರ್ಿಕಾರದಿಂದ ಬಿತ್ತಿ ಬೆಳೆದು ಅನ್ನ ನೀಡಿ ಮುಕ್ತನಾಗುತ್ತಾನೆ. `ಅರಿವಿಲ್ಲದಿರುವುದು’ ಎಷ್ಟು ಸುಖ ನೀಡುತ್ತದೆ ಎನ್ನುವುದಕ್ಕೆ ಈ ಉಳುವಾ ಯೋಗಿಯೇ ಸಾಕ್ಷಿ. ಅರಿವಿಲ್ಲದೆ ಬದುಕುವ ಸುಖ ಎಷ್ಟು ಜನರಿಗಿದೆ? ಅರಿವಿಲ್ಲದೆ ಬದುಕುವ ಹಕ್ಕಿಗಳು ಎಷ್ಟು ಮುಕ್ತವಲ್ಲವೇ? ಅಸೂಯೆ ಮೂಡುತ್ತದೆ ಬಾನಲ್ಲಿ ಹಾರಾಡುವ ಈ ಪಕ್ಷಿಸಂಕುಲದೆಡೆಗೆ. ತಮ್ಮ ಬಣ್ಣಬಣ್ಣದ, ವೈವಿಧ್ಯಮಯ ರೆಕ್ಕೆಪುಕ್ಕಗಳ ಮಹತ್ತ್ವವನ್ನು, ಆಕರ್ಷಣೆಯನ್ನೂ ಒಂಚೂರೂ ಅರಿಯದೆ ಜೀವಿಸುವ ಇವುಗಳ ಸುಖ ಮನುಷ್ಯನಿಗೆ ಎಲ್ಲಿದೆ?

ಮನುಷ್ಯನಿಗೆ ಯಾವೆಲ್ಲವುದರಿಂದ ಮುಕ್ತಿ ದೊರೆಯಬಹುದೆಂದು ಪುರಂದರದಾಸರು ಇಲ್ಲಿ ಹೇಳುತ್ತಾರೆ.
                            ಸುಮ್ಮನೆ ಬರುವುದೇ ಮುಕ್ತಿ
                            ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ
                            ಮನದಲ್ಲಿ ದೃಢವಿರಬೇಕು ಪಾಪಿ
                            ಜನರ ಸಂಸರ್ಗವ ನೀಗಲಿ ಬೇಕು
                            ಅನುಮಾನವನು ಬಿಡಬೇಕು ತನ್ನ
                            ತನುಮನಧನವನೊಪ್ಪಿಸಿ ಕೊಡಬೇಕು
ದಾಸರು ಕೊನೆಯಲ್ಲಿ ವ್ಯಾಪಾರವನು ಬಿಡಬೇಕು ಎಂದಿದ್ದಾರೆ. ಇದೇ ಅತ್ಯಂತ ಕಷ್ಟಕರ ಕೆಲಸ. ಈ ಭೂಮಿ ವ್ಯಾಪಾರಿಗಳ ಸ್ವರ್ಗ. ಇಲ್ಲಿ ಕೊಡುಕೊಳ್ಳುವಿಕೆಯಿಲ್ಲದೆ ಬದುಕು ನಿಂತಂತೆ. ಹಾಗಾದರೆ ಮುಕ್ತಿಯ ಕಥೆ? ಹರಿಯನ್ನು ಮನದಲ್ಲಿ ತುಂಬಿಕೊಂಡ ದಾಸರು ಮುಕ್ತಿಯೆಡೆಗೆ ಪಯಣವೆಂದರೆ ಹೊಟ್ಟೆಪಾಡಿನೊಂದಿಗೆ ಹರಿಯನ್ನು ನೆನೆಯುವುದು ಎನ್ನುತ್ತಾರೆ. ಅಷ್ಟು ಸರಳ, ಮುಕ್ತಿಯೆಂದರೆ ಹರಿಯ ದಾಸರಿಗೆ. ಹರಿದಾಸರಲ್ಲೇ ಏಕೈಕ ಕವಿಯಾದ ಕನಕದಾಸರು ಹರಿದಾಸ ಬದುಕಿನಿಂದಲೇ ಮುಕ್ತಿ ಕಂಡವರು.
                            ಈಶ ನಿನ್ನ ಚರಣಭಜನೆ ಆಸೆಯಿಂದ ಮಾಡುವೆನು
                            ದೋಶರಾಶಿ ನಾಶಮಾಡೊ ಶ್ರೀಶ ಕೇಶವ
                            ಮರೆಯದಲೆ ಹರಿಯ ನಾಮ ಬರೆದು ಓದಿ ಕೇಳಿದರ್ಗೆ
                            ಕರೆದು ಮುಕ್ತಿ ಕೊಡುವ ನೆಲೆಯಾದಿ ಕೇಶವ

ಹೀಗೆ ಒಬ್ಬ ಶ್ರೀಮಂತ ಚಿನಿವಾರ, ಮತ್ತೊಬ್ಬ ದಂಡನಾಯಕ ಹರಿನಾಮ ಸ್ಮರಣೆ ಮಾಡಿ ಭಕ್ತಿಮಾರ್ಗದಲ್ಲಿ ನಡೆದು ಆರಾಧನಾಮುಕ್ತಿಯನ್ನು ಹೊಂದಿದರು. `ದಾಸ’ ಅನ್ನುವ ಪದ ಗುಲಾಮಗಿರಿಯನ್ನು ಪೋಷಿಸುವ ಭಾವವಾಗಿ ಕಂಡುಬರೋದುಂಟು. ಅದು ಬರೀ ಅಕ್ಷರಗಳಿಂದ ಮೂಡುವ ಭಾವವಷ್ಟೇ. `ದಾಸ’ ಇಲ್ಲಿ `ನಾನು’ ಅನ್ನುವ ಅಹಂಕಾರವಿರದ ಮನದ ಭಾವ. ಕನಕದಾಸರ ಜನಪ್ರಿಯ `ನಾನು ಹೋದರೆ ಹೋದೇನು’ ಅನ್ನುವ ಮಾತು ಮುಕ್ತಿಯ ಪಥ.
               
ತನ್ನ ವೈಯಕ್ತಿಕ, ಸ್ವಂತದ್ದು ಎನ್ನಲಾಗುವುದನ್ನು ಇನ್ನೊಂದು ಮಹತ್ತರವಾದುದಕ್ಕೆ ಅಪರ್ಿಸುವುದು, ಕಳಕೊಳ್ಳುವುದು, ಅದರಲ್ಲಿ ಐಕ್ಯವಾಗುವುದು ಮುಕ್ತಿ. ಹಾಗಾದರೆ ಇದು ಸಮರ್ಪಣಾ ಪ್ರೇಮವಲ್ಲವೇ?     ಸಖಿಯರ ಸಖಿ ರಾಧೆ ತನ್ನ ಸಖ ಕೃಷ್ಣನಲ್ಲಿ, ರಜಪೂತ ರಾಜಕುವರಿ ಮೀರಾ ತನ್ನ ಗಿರಿಧರನಲ್ಲಿ, ಹನುಮ ರಾಮನಲ್ಲಿ ಐಕ್ಯಗೊಂಡದ್ದು ಪ್ರೇಮಮುಕ್ತಿಯಲ್ಲೇ. ಭಾರತೀಯ ದರ್ಶನಗಳಲ್ಲೊಂದಾದ ಅದ್ವೈತದಲ್ಲಿ ಈಶ್ವರನ ಜ್ಞಾನ ಅಥವಾ ಬ್ರಹ್ಮೈಕ್ಯವೇ ಮೋಕ್ಷ ಎಂದಿದೆ. ಅಂದರೆ ಕರ್ಮ, ಭಕ್ತಿಯಿಂದ ಉಂಟಾದ ಸ್ಪಷ್ಟಜ್ಞಾನದ ಸ್ಥಿತಿ. ದ್ವೈತದಲ್ಲಿ ತನ್ನನ್ನು ತಾನು ಪರತಂತ್ರನೆಂದು ಅರಿಯುವುದು ಮುಕ್ತಿಯ ಪಥ. ಕನಕದಾಸರು ಇದನ್ನೇ `ಈಶ ನಿನ್ನ ಚರಣ ಭಜನೆ’ ಕೀರ್ತನೆಯಲ್ಲಿ ಹೇಳಿದ್ದು. ಜಗನ್ನಾಥದಾಸರು `ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು’ ಎಂದು ಹಾಡಿ ಭಕ್ತಿಯು ಮುಕ್ತಿಯ ಸರಳ, ಸುಲಭ ದಾರಿ ಎನ್ನುತ್ತಾರೆ. ಕನಕದಾಸರ ಜನಪ್ರಿಯ ಕೀರ್ತನೆ `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ’ ಕೀರ್ತನೆಯಲ್ಲಿ `ಉನ್ನಂತ ನೆಲೆಯಾದಿ ಕೇಶವನ ಧ್ಯಾನವನ್ನು ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ’ ಎನ್ನುತ್ತಾ ಮಹದಾನಂದವೂ ಮುಕ್ತಿಯ ಪ್ರತಿಬಿಂಬವೆನ್ನುವಂತೆ ನೋಡಿದ್ದಾರೆ. ಆನಂದವೆನ್ನುವುದು ಸಂತೃಪ್ತಿಯ ಲಕ್ಷಣ. ಅಲ್ಲಿಗೆ ಸಂತೃಪ್ತಿಯೇ ಮುಕ್ತಿ ಎಂದಾಗಲಿಲ್ಲವೇ?

ಭರತಭೂಮಿ ನೋಡಿದ ಮತ್ತೆರಡು ಅದ್ಭುತ ದರ್ಶನಗಳಾದ ಜೈನ ಮತ್ತು ಬೌದ್ಧದಲ್ಲಿ ಮುಕ್ತಿಯೆಂದರೆ ಅರ್ಹತ್ ಪದವಿ ಮತ್ತು ನಿರ್ವಾಣ. ಜೈನರು ಜೀವ, ಪುದ್ಗಲ(ಪ್ರಾಪಂಚಿಕ ವಸ್ತುಗಳು) ಸಂಬಂಧಗಳಿಂದ ಬಿಡಿಸಿಕೊಂಡು ತನ್ನ ಮೂಲಸ್ಥಿತಿಯನ್ನು ಸಾರಿದಾಗ `ಅರ್ಹತ್’ ಪದವಿಯನ್ನು ಮುಟ್ಟುತ್ತದೆ. ಅದೇ ಮುಕ್ತಿ. ಇನ್ನು ಬೌದ್ಧರ ನಿವರ್ಾಣವೆಂದರೆ ನಾನು ಎಂಬ ಭಾವದ ನಿವಾರಣ. ದರ್ಶನಗಳ ಹೆಸರು ಬೇರೆಬೇರೆಯಷ್ಟೇ. ಹೇಳಿದ ಸಾರವೆಲ್ಲವೂ ಒಂದೇ. ಎಲ್ಲ ದರ್ಶನಗಳನ್ನು ಸಮೀಕರಿಸಿ ಸರಳವಾಗಿ ಓಶೋ ಹೇಳುತ್ತಾರೆ, `ಶರಣಾಗುವ ಕಲೆಯನ್ನು ಕಲಿಯಿರಿ, ಸಮಪರ್ಿತರಾಗುವ ಕಲೆಯನ್ನು ಕಲಿಯಿರಿ, ಇಲ್ಲವಾಗುವ ಕಲೆಯನ್ನು ಕಲಿಯಿರಿ’. ಎಷ್ಟು ಸರಳ ಸುಂದರ ಮಾತುಗಳು. ಈ ಇಲ್ಲವಾಗುವುದು ಸಮಪರ್ಿತವಾಗುವುದು ಮುಕ್ತಿಯೇ. ಎಷ್ಟೊಂದು ಹೆಸರುಗಳು ಮುಕ್ತಿಗೆ. ಅರ್ಥವಾಗಬೇಕಷ್ಟೇ.

ನಿಷ್ಕಾಮ ಭಕ್ತಿಯ ಅರಿವನ್ನು ಮೂಡಿಸಿದ ಮಹಂತ, ಅಲ್ಲಮಪ್ರಭು. ಅವನ ಎಲ್ಲ ವಚನಗಳು ಮುಕ್ತತೆಯ ಹೂರಣವನ್ನೇ ಬಡಿಸಿದ್ದು. ಆಳಕ್ಕೆ ಆಳ, ವಿಸ್ತಾರಕ್ಕೆ ವಿಸ್ತಾರ ಅಷ್ಟೇ ಎತ್ತರಕ್ಕೆ ಮಹತ್ತರವೆನಿಸುವ ಅನುಭಾವ ಅವನದು.
                            ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
                            ಬಯಲು ಬಯಲಾಗಿ ಬಯಲಾಯಿತ್ತಯ್ಯಾ
                            ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
                            ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಬಿತ್ತು, ಬೆಳೆ, ಪೂಜೆ, ಬಯಲು ಎಲ್ಲವೂ ಮುಕ್ತಿಪಥದ ಮೈಲುಗಲ್ಲುಗಳು. ಪೂಜೆಯೆನ್ನುವುದು ಬಿತ್ತುವ, ಬೆಳೆಯುವ ಎಲ್ಲವನ್ನೂ ಒಳಗೊಂಡ ಕಾಯಕದ ಅನುಸಂಧಾನ. ಸಂತರು, ಶರಣರು, ಹರಿದಾಸರು ಈ ಎಲ್ಲ ಮಹಾಮಹಿಮರು ಪೂಜಿಸಿಯೇ ಬಯಲಾದವರು. ಬಯಲು, ಮೋಕ್ಷ, ಅರ್ಹತ್, ನಿರ್ವಾಣ ಇವೆಲ್ಲವೂ ಮೂಡಬೇಕಾಗಿರುವುದು ಮನವೆಂಬ ಆಲಯದಲ್ಲಿ. ಮನಸ್ಸೇ ಇವೆಲ್ಲದ್ದಕ್ಕೆ ತಳಪಾಯ. ಬಯಲಿನ ಬಯಕೆ ಪಾಯದಲ್ಲಿ ಮೂಡದಿದ್ದರೆ ಮುಕ್ತಿಸೌಧ ಎದ್ದು ನಿಲ್ಲದು. ಹೀಗೆ ತಳಪಾಯದಲ್ಲಿ ಬಯಲಿನ ಹೆಬ್ಬಯಕೆ ಮೂಡಿ ಭಕ್ತಿಯನ್ನು ಬಿತ್ತಿದರೆ ಮುಕ್ತಿಯ ಬೆಳೆ ಕೊಯಿಲಿಗೆ ಸಿಗುತ್ತದೆ. ಕುವೆಂಪು ಅವರ `ಮಂತ್ರಾಕ್ಷತೆ’ ಕವನದಲ್ಲಿ ಈ ಮೂರುಸಾಲಿನ ಮಂತ್ರವಿದೆ. `ಶಕ್ತಿಯು ದೇಹದ ಕರ್ತವ್ಯ, ಭಕ್ತಿಯು ಹೃದಯದ ಕರ್ತವ್ಯ, ಮುಕ್ತಿಯು ಆತ್ಮದ ಕರ್ತವ್ಯ’. ಕರ್ತವ್ಯವೂ ಮುಕ್ತಿಯಾಯಿತು. ಆದ್ದರಿಂದ ಮುಕ್ತಿಗಾಗಿ ಪರಿತಪಿಸಬೇಕಿಲ್ಲ. ಅಲ್ಲಿ ಇಲ್ಲಿ ಓಡಾಡಬೇಕಿಲ್ಲ. ಇರುವಲ್ಲೇ ಮೋಕ್ಷ ಕಾಣುತ್ತೇನೆ ಎಂದವಳು ಸಂತ ಮೀರಾಬಾಯಿ. ` ನಾ ಜಾವೂ ಮಥುರಾ, ನಾ ಗೋಕುಲ ಜಾವೂ ನಾ ಜಾವೂ ಮೇ ಕಾಶಿ, ಮೋಹೆ ಭರೋಸೋ ಏಕ ತುಮ್ಹರೋ’ ಎಂದು ಹಾಡುತ್ತಾ ಗಿರಿಧರನಲ್ಲಿ ಲೀನವಾದವಳು. ಇದೇ ಅದ್ಭುತ ಭಾವ ತುಂಬಿದ ಸಾಲುಗಳು ಕುವೆಂಪು ಅವರ `ದೇವರ ಮನೆ’ ಕವನದಲ್ಲೂ ನೋಡಬಹುದು.
                            ಇಲ್ಲೆ ಗಂಗಾತೀರ; ಇಲ್ಲೆ ಹಿಮಗಿರಿ ಪಾರ
                            ಇಲ್ಲಯೆ ಕಣಾ ಆ ಹರಿದ್ವಾರ
                            ಇಲ್ಲೆ ವಾರಣಾಸಿ ಇಲ್ಲಿಯೇ ಹೃಷಿಕೇಶ
                            ಇಲ್ಲೇ ಇದೆ ಮುಕ್ತಿಗೆ ಮಹಾದ್ವಾರ
                            ಅಲ್ಲಿಗಿಲ್ಲಿಗೆ ಏಕೆ ಸುಮ್ಮನಲೆಯುವೆ ದೂರದೂರ
                            ಇಲ್ಲೆ ಓಂ ಪೂರ್ಣಮದೆ ಓ ಮನವೇ ಓ ಬಾರಬಾರ

ಮತ್ತೆ ಮನಸ್ಸಿಂದಲೇ ಮುಕ್ತಿ ಕಾಣುವ ಭಾವ. ಮುಕ್ತಿಗೆ ಎಷ್ಟೊಂದು ವ್ಯಾಖ್ಯಾನಗಳು.  ಬಯಲಾಗುವ ಶಕ್ತಿಗೆ ಅನುಗುಣವಾಗಿ ಕಾಣುವ ಮುಕ್ತಿಪಥಗಳು ಮುಕ್ತಿ, ಮೋಕ್ಷ ಅನ್ನುವುದರ ಹೊಸಹೊಸ ಭಾಷ್ಯಗಳನ್ನು ನೀಡುತ್ತವೆ. ವೈಚಾರಿಕ ನೆಲೆಯಿಂದ ಕಂಡ ಮುಕ್ತಿಪಥಗಳ ಪಯಣದಷ್ಟೇ ಮುಖ್ಯ, ಸರಳ, ಸಾಮಾನ್ಯ ಲೌಕಿಕ ಬದುಕಿನ ಮುಕ್ತಿಪಥಗಳ ಪಯಣ. ಏಕೆಂದರೆ ನಾವೆಲ್ಲರೂ ಈ ಪಥದ ಪಯಣಿಗರು. ಹೊಟ್ಟೆಪಾಡಿಗಾಗಿ ಭೂಮಿ ಹಸನು ಮಾಡಿ ಬೀಜ ಬಿತ್ತಿ, ಹೂ ಮೂಡಿದಾಗ ಬೆಳೆದ ರೈತನ ಮುಖದಲ್ಲಿ ಮೂಡುವ ಸಂತೃಪ್ತಿಯೇ ಮುಕ್ತಿ. ಬಣ್ಣಬಣ್ಣದ ಆಟಿಕೆಗಳನ್ನು ಮಾರುತ್ತಾ ಮಕ್ಕಳ ಮುಖದಲ್ಲಿ ನಗು ಮೂಡಿಸುವವನೇ ಮುಕ್ತ. ಚಿತ್ತಾರ ತುಂಬಿದ ರಂಗುರಂಗಿನ ಬಳೆಗಳ ಮಲ್ಹಾರವನ್ನು ಜತನದಿಂದ ಹೊತ್ತೊಯ್ದು ಕೈಗಳಿಗೆ ಸೌಂದರ್ಯ ತುಂಬುವವನು ಮುಕ್ತಿಗೆ ಹಕ್ಕುದಾರ. ಒಟ್ಟಿನಲ್ಲಿ ಕರ್ತವ್ಯ ನಿರ್ವಹಣೆಯೇ ಮುಕ್ತಿ. ನಿರ್ವಂಚನೆಯಿಂದ ಕಾಯಕ ಮಾಡುವವನೇ ಮುಕ್ತ. ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ತನಗೆ ಬದುಕು ನೀಡಿದ ಕೆಲಸದಲ್ಲಿ ಫಲಾಪೇಕ್ಷೆಯಿಲ್ಲದೆ ಸಂತೋಷದಿಂದ ತೊಡಗಿಸಿಕೊಳ್ಳವುದೇ ಮುಕ್ತಿ. ಹೆಚ್.ಎಸ್.ವೆಂಕೇಶಮೂರ್ತಿಯವರ ಈ ಕವನ ನಾಡಿನ ಜನರ ಮನಗೆದ್ದಿದ್ದು ಮುಕ್ತಿಯ ಸುಂದರ ಸರಳ ವ್ಯಾಖ್ಯಾನದಿಂದ.
                            ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ
                            ಬೇವ ಅಗಿವ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಈ ನೀಡುವುದು ಎಂದರೆ ಯೋಚಿಸದೆ ಮಾಡುವ ಕರ್ಮ. ಮನುಷ್ಯನಿಗೆ ಸಾಧ್ಯವೇ? ತಾನು, ತನ್ನದು ಎನ್ನುವ ಆತ್ಮರತಿಯಿಂದ ನರಳಾಡುವ ಮನುಷ್ಯನಿಗೆ ಕೊನೆಗೆ ಅಂತ್ಯಕಾಲದಲ್ಲಿ ಸಂತಾನದಿಂದ ಮುಕ್ತಿಯೆನ್ನುವ ಭ್ರಮೆಗೆ ಬಿದ್ದು ತೊಳಲಾಡುತ್ತಾನೆ. ಮುಕ್ತಿಯೆನ್ನುವುದು ಸರಳ, ಶುದ್ಧ ಮನಸ್ಸಿನ, ನಿರ್ವಿಕಾರದಿಂದ ಹೊಂದುವ ಭಾವ. ಅದು ಬೇರೆಯವರಿಂದ ಹೊಂದಲು ಸಾಧ್ಯವಿಲ್ಲ. ಮುಕ್ತಿ ಕೊಡುವುದು ನಮ್ಮದೇ ಮನಸ್ಸು, ನಮ್ಮದೇ ಯೋಚನೆಗಳು.
                            ಸತ್ಯಕ್ಕೊಬ್ಬ ಮಗ ಶಾಂತಕ್ಕೊಬ್ಬ ಮಗ
                            ದುರ್ವೃತ್ತಿ ನಿಗ್ರಹಕ್ಕೊಬ್ಬ ಸಮಚಿತ್ತನೊಬ್ಬನು
                            ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ
                            ಹೆತ್ತರೇನು? ಇನ್ನು ಹೆರದಿದ್ದರೇನಯ್ಯ?

ಜನಮನದ ಕತ್ತಲು ತೊಲಗಿಸಲು ಕನಕದಾಸರ ಪ್ರಯತ್ನವಿದು. `ನಾ ಪುತ್ರಸ್ಯ ಗತಿರ್ನಾಸ್ತಿ’ ಎಂದು ಅಖಂಡವಾಗಿ ನಂಬಿರುವ ಸಾಮಾನ್ಯ ಸಂಪ್ರದಾಯವನ್ನು ಪ್ರಶ್ನಿಸಿ, ಒಳ್ಳೆಯ ಆಚಾರ, ವಿಚಾರವಿಲ್ಲದವನಿಗೆ ಮಕ್ಕಳಿದ್ದರೂ(ಮಗನಿದ್ದರೂ) ಮುಕ್ತಿ ಇಲ್ಲವೆನ್ನುವ ಕನಕದಾಸರು ಮುಕ್ತಿ ಪಡೆಯಬೇಕೆಂದರೆ ಕೆಟ್ಟವಿಚಾರಗಳಿಂದ, ಅಹಂಕಾರದಿಂದ ಮುಕ್ತವಾಗಬೇಕು ಎನ್ನುತ್ತಾರೆ. ಅಷ್ಟೇ ಅಲ್ಲದೆ `ಇಷ್ಟು ದಿನ ಈ ವೈಕುಂಠ ಎಷ್ಟು ದೂರವೆನ್ನುತ್ತದ್ದೆ’ ಕೀರ್ತನೆಯಲ್ಲಿ ಪರಮಪದವನ್ನು  ಭೂಮಿ ಮೇಲೆ ಅನುಭವಿಸಲು ಸಾಧ್ಯ ಎನ್ನುತ್ತಾರೆ. ಪ್ರಕೃತಿ ಮಾತೆಯ ಮಡಿಲು ಅದ್ಭುತಗಳ, ಕೌತುಕಗಳು ನೆಲೆ. ಅದನ್ನು ಗುರುತಿಸಿ ಮನದಿಂದ, ಒಳಗಣ್ಣಿಂದ ನೋಡುವ ಪ್ರಯತ್ನ ಮಾಡಿ ಇಲ್ಲೆ ಪರಂಧಾಮ ಪಡೆಯಬಹುದು ಎನ್ನುತ್ತಾ ಮುಕ್ತವಾಗುತ್ತಾರೆ. ನಿಜ, ಹೂಗಳಿವೆ, ಮುಳ್ಳುಗಳೂ ಇವೆ. ಮುಳ್ಳುಗಳಿಂದ ಹೂಗಳನ್ನು ಬೇರ್ಪಡಿಸಿ ಆರಿಸಿ ಸಂತೃಪ್ತಿಯ ಭಾವದಲ್ಲಿ ಮೀಯುವುದೇ ಮುಕ್ತಿ.
                           
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ….

(‘ವಿಜಯವಾಣಿ’ ಪ್ರಕಟಿತ)

ಹರಿದಾಸರು ಕಂಡ ಮನಸು

ನೋಡುವ ಬೆಡಗು । ದೀಪಾ ಫಡ್ಕೆ

`ಮನವ ನಿಲಿಸುವುದು ಬಲು ಕಷ್ಟ’, `ಮನವ ಶೋಧಿಸಬೇಕು ನಿಚ್ಚ’, `ಮನಶುದ್ಧಿಯಿಲ್ಲದವಗೆ ಮಂತ್ರದ ಫಲವೇನು?’ ಈ ಎಲ್ಲ ಕೀರ್ತನೆಗಳಲ್ಲಿ ಸಾಮಾನ್ಯಪದ ಮನ ಅಥವಾ ಮನಸ್ಸು. ಭಕ್ತಿಪಂಥದ ಹರಿದಾಸರು  ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ. ಹೌದು, ಅಷ್ಟು ಕುತೂಹಲಕಾರಿ ಈ ಮನಸ್ಸು. ಒಮ್ಮೊಮ್ಮೆ ಆತಂಕಕಾರಿ ಕೂಡ. ಪ್ರಜ್ಞೆ ಇರುವ ಮನುಷ್ಯನ ಮನಸ್ಸು ಆತನನ್ನು ಚಿಂತನೆಗೆ ಹಚ್ಚಿ, ಸಾಮಾನ್ಯನಿಂದ  ಅಸಾಮಾನ್ಯನನ್ನಾಗಿಸುತ್ತದೆ.

ಭಾರತೀಯ ದಾರ್ಶನಿಕ ಶಾಖೆಗಳಲ್ಲಿ, ಅದರ ತತ್ತ್ವಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ  ಮನಸ್ಸೆಂಬ ವಸ್ತುವಿಗೆ ಒಂದು ಉತ್ಕೃಷ್ಟ ಸ್ಥಾನ ದೊರೆತಿದೆ.ಭಾರತೀಯ ದರ್ಶನಶಾಸ್ತ್ರದಲ್ಲಿ ಆತ್ಮವನ್ನು ಸಂಬಂಧಿಸಿದಂತೆ ಬುದ್ಧಿ(ಜ್ಞಾನ), ಅಹಂಕಾರ(ಅಹಂ) ಮತ್ತು ಮನಸ್ಸು(ಮತಿ) ಎನ್ನುವ ಮೂರು ಪದಪ್ರಯೋಗವನ್ನು ಕಾಣಬಹುದು. ಬುದ್ಧಿ ಮತ್ತು ಅಹಂಕಾರ, ಮನಸ್ಸಿನ ಬೇರೆ ಬೇರೆ ಆಯಾಮಗಳೇ. ಆದರೂ ಮನಸ್ಸಿನ ಅತ್ಯುನ್ನತ ಸ್ತರವನ್ನು ಆತ್ಮವೆನ್ನುತ್ತಾರೆ. ಆತ್ಮನಿವೇದನಾ ಪ್ರಕ್ರಿಯೆಯನ್ನು ಅವಲೋಕಿಸಿದಾಗ, ಮನುಷ್ಯ ,ಒಂದು ಉನ್ನತವಾದ ಆದರ್ಶ, ಧ್ಯೇಯ, ಮತ ಅಥವಾ ವ್ಯಕ್ತಿಯ ಮುಂದೆ ತನ್ನ ಅಂತರಂಗದಲ್ಲಾಗುವ ಎಲ್ಲಾ ಕ್ರಿಯೆಗಳನ್ನು ಅನಾವರಣಗೊಳಿಸುವುದು ಆತ್ಮನಿವೇದನೆ. ಹರಿದಾಸರು ತಮ್ಮ ಇಷ್ಟದೈವ ಹರಿಯಲ್ಲಿ ಎಲ್ಲವನ್ನು ತೋಡಿಕೊಳ್ಳುವ, ಹಾಡಿಕೊಳ್ಳುವ ವಿಧಾನ ಆತ್ಮನಿವೇದನೆ.

ಮನಸ್ಸಿನ ಬಗ್ಗೆ ಭಾರತೀಯರು ಚಿಂತನೆ ಮಾಡಿದಷ್ಟು ಬೇರಾವ ದೇಶ, ಜನಾಂಗದವರು ಮಾಡಿಲ್ಲವೆನ್ನಬೇಕು. ಮನಸ್ಸು ಮತ್ತದರ ರಚನೆ, ಅದರ ಶಕ್ತಿ ಸಾಮಥ್ರ್ಯ, ಇತಿಮಿತಿಗಳು, ಮನಸ್ಸಿನ ನೆಮ್ಮದಿ, ಆರೋಗ್ಯಕ್ಕೆ ಪ್ರೇರಕವಾದ ಅಂಶಗಳು ಹಾಗೂ ಮನಸ್ಸಿನ ಅಸ್ವಸ್ಥತೆಗೆ ಕಾರಣವಾಗುವ ಅಂಶಗಳು ಇವೆಲ್ಲದರ ಕುರಿತು ವೇದಗಳ ಕಾಲದಿಂದಲೂ ಭಾರತೀಯರು ಯೋಚಿಸಿದ್ದಾರೆ. ತರ್ಕಬದ್ಧ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅಂಕೆ ಮೀರಿದ ಚಂಚಲಮನಸ್ಸಿನ ಹತೋಟಿ, ಅವ್ಯಕ್ತ ಹಾಗೂ ಅಗಾಧ ಶಕ್ತಿಯ ಸರಿಯಾದ ಬಳಕೆ, ಕ್ಷಣಮಾತ್ರದಲ್ಲಿ ನಿರಾಶೆ,ನೋವುಗಳಿಗೆ ಸಿಕ್ಕಿ ತೊಳಲಾಡುವ ಮನಸ್ಸನ್ನು ಶಾಶ್ವತ ಆನಂದದೆಡೆಗೆ ಕೊಂಡೊಯ್ಯುವ ವಿಧಾನಗಳನ್ನೂ ಹೇಳಿದ್ದಾರೆ.

ಹೊರಗಡೆ ಕಾಣುವ ಕಾಯ(ದೇಹ), ಒಳಗೆ ಇದೆ ಎಂದು ನಂಬುವ, ಕಾಣದ ಆತ್ಮ-ಇವೆರಡರ ನಡುವೆ ಇರುವ, ಅಂದರೆ ವ್ಯಕ್ತಿತ್ವದ ಅತ್ಯಂತ  ಕ್ರಿಯಾತ್ಮಕ ಭಾಗವೇ ಮನಸ್ಸು. ಮನಸ್ಸಿನ ಮೂರು ಗುಣಗಳನ್ನು ಪ್ರಸ್ತಾಪಿಸಿದ್ದಾರೆ. ಸತ್ವ, ತಮ ಹಾಗೂ ರಜ. ಸತ್ವ ಗುಣದಿಂದ ಮಾನಸಿಕ ಆರೋಗ್ಯ ಲಭ್ಯವಾದರೆ, ತಮೋಗುಣ ಮತ್ತು ರಜೋಗುಣಗಳಿಂದ ಮಾನಸಿಕ ಏರುಪೇರು ಉಂಟಾಗುತ್ತದೆ ಎಂದು ಋಗ್ವೇದದಲ್ಲಿ ಹೇಳಿದ್ದಾರೆ. ಯಜುರ್ವೇದದಲ್ಲಿ ಜ್ಞಾನದ ಒಳಸ್ತರವೇ ಮನಸ್ಸು ಎಂದಿದೆ. ಜ್ಞಾನಾರ್ಜನೆಯೇ ಮನಸ್ಸು. ಮನಸ್ಸು ಜಾಗೃತ ಸ್ಥಿತಿ ಮತ್ತು ಸ್ವಪ್ನ ಸ್ಥಿತಿ ಎನ್ನುವ ಎರಡು ವ್ಯವಸ್ಥೆಗಳಲ್ಲಿದ್ದು, ಆತ್ಮದ ಒಂದು ಭೂಮಿಕೆಯೇ ಮನಸ್ಸು ಎಂದಿದ್ದಾರೆ.

ಉಪನಿಷತ್ತುಗಳಲ್ಲಿ ಸಂವೇದನೆ, ಆಲೋಚನೆ,ಚಿತ್ತಸ್ಮೃತಿಯ ಬಗ್ಗೆ ಪ್ರಸ್ತಾಪವಿದೆ. ಜಾಗೃತ, ಸ್ವಪ್ನ, ಸುಷುಪ್ತಿ ಮತ್ತು ಸಮಾಧಿ ಎನ್ನುವ ನಾಲ್ಕು ಮಾನಸಿಕ ಸ್ಥಿತಿಗಳ ಉಲ್ಲೇಖವಿದೆ. ಆರು ಬಗೆಯ ಮಾನಸಿಕ ಶಕ್ತಿಗಳಾದ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ, ವೇದನಾಶಕ್ತಿ, ಸ್ಮರಾಶಕ್ತಿ, ಭಾವನಾಶಕ್ತಿಯ ಜೊತೆಗೆ  ಮನೀಶ(ನಿರ್ಧಾರ ಕೈಗೊಳ್ಳುವುದು), ಸಂಕಲ್ಪ ಮತ್ತು ಧಾರಣಶಕ್ತಿಯ ಬಗ್ಗೆ ವಿವರಿಸಲಾಗಿದೆ.

ವೇದಾಂತದಲ್ಲಿಯೂ ದೇಹ,ಮನಸ್ಸು ಆತ್ಮದ ಸಂಬಂಧಗಳನ್ನು ವಿವರಿಸಿದ್ದಾರೆ. ಜಗತ್ತಿನ ಅತ್ಯಂತ ಹಳೆಯ ಹಾಗೂ ಈಗಲೂ ಪ್ರಚುರವಿರುವ ವೈದ್ಯ ಪದ್ಧತಿ ಆಯುರ್ವೇದ. ಈ ವೈದ್ಯ ಪದ್ಧತಿಯನ್ನು ಅಥರ್ವಣವೇದದ ಒಂದು ಭಾಗವೆಂದು ಹೇಳಲಾಗಿದೆ. ಆಯುರ್ವೇದವನ್ನು ವಿವರಿಸಿರುವ ಚರಕ ಮತ್ತು ಸುಶ್ರುತ ಸಂಹಿತೆಯಲ್ಲಿ ಮನಸ್ಸು, ಮನಸ್ಸಿನ ಕ್ರಿಯೆಗಳು, ಮಾನಸಿಕ ಆರೋಗ್ಯ ಹಾಗೂ ಅನಾರೋಗ್ಯದ ಕುರಿತು ವಿಪುಲವಾದ ಮಾಹಿತಿ ಇದೆ. ಹೀಗೆ ಭಾರತೀಯರು ಪ್ರಾಚೀನಕಾಲದಿಂದಲೂ ಮನಸ್ಸನ್ನು ಕುರಿತು ಪ್ರೌಢ ಚಿಂತನೆಗಳನ್ನು ನಡೆಸಿದ್ದಾರೆ.

ಮನೋವಿಜ್ಞಾನಿಗಳ ಪ್ರಕಾರ ನಮ್ಮ ಮನಸ್ಸಿನಲ್ಲಿ ಎರಡು ಭಾಗಗಳಿವೆ. ಒಂದು ಜಾಗೃತ ಮನಸ್ಸು, ಇನ್ನೊಂದು ಸುಪ್ತ ಮನಸ್ಸು. ಜಾಗೃತ ಮನಸ್ಸಿನಲ್ಲಿ ಏನಾಗುತ್ತಿದೆ, ಏನೇನು ವಿಚಾರಗಳಿವೆ ಎಲ್ಲವೂ ನಮಗೆ ಗೊತ್ತಾಗುತ್ತದೆ. ಆದ್ದರಿಂದ ಅವುಗಳ ಮೇಲೆ ನಮ್ಮ ಸಂಪೂರ್ಣ ಹಿಡಿತವಿರುತ್ತದೆ. ಆದರೆ ನಮ್ಮ ಸುಪ್ತ ಮನಸ್ಸಿನಲ್ಲಿ ಏನಾಗುತ್ತಿರುತ್ತದೆ,ಏನೇನು ವಿಚಾರಗಳಿವೆ ಎಂಬುದೇ ನಮಗೆ ತಿಳಿಯುವುದಿಲ್ಲ. ನಮ್ಮ ಮನಸ್ಸನ್ನು ಒಂದು ಕೆರೆಗೆ ಹೋಲಿಸಿದರೆ ಮೇಲಿರುವ ತಿಳಿನೀರಿನ ಭಾಗವೇ ಜಾಗೃತ ಮನಸ್ಸು. ನೀರಿನ ಆಳಕ್ಕೆ ಹೋದಂತೆ ತಳದಲ್ಲಿ ಏನಿದೆ ಎಂದು ತಿಳಿಯುವುದಿಲ್ಲವೋ ಹಾಗೆ ನಮ್ಮ ಮನಸ್ಸು ಕೂಡಾ ನಿಗೂಢ. ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ನ ಪ್ರಕಾರ ನಮ್ಮ ಜಾಗೃತ ಮನಸ್ಸಿಗೆ ಹಿತವಲ್ಲದ ಆಸೆಗಳು, ವಿಚಾರಗಳು, ಅನುಭವಗಳು ಎಲ್ಲವೂ ಸುಪ್ತ ಮನಸ್ಸಿನೊಳಗೆ ತಳ್ಳಲ್ಪಡುತ್ತವೆ. ಅವು ಮತ್ತೆ ಜಾಗೃತ ಮನದೊಳಕ್ಕೆ ಬರದಂತೆ ನೋಡಿಕೊಳ್ಳುವ ಒಂದು ತೆರೆ ಜಾಗೃತ ಮನಸ್ಸು ಮತ್ತು ಸುಪ್ತ ಮನಸ್ಸಿನ ನಡುವೆ ಇರುತ್ತದೆ. ಹೀಗೆ ಮಾನವ ಸ್ವಭಾವವೂ ಅದರ ಶ್ರೀಮಂತಿಕೆ ಮತ್ತು ವೈವಿಧ್ಯಗಳಲ್ಲಿ, ಗಹನತೆಯಲ್ಲಿ, ಮನೋದೈಹಿಕ ವಿಸ್ತರಣದಲ್ಲಿ ಹಾಗೂ ಆತ್ಮೋನ್ನತಿಯಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಅಧ್ಯಯನ ಯೋಗ್ಯ ವಿಷಯ. ಅಷ್ಟೇ ಅಲ್ಲದೆ ಮನೋವಿಜ್ಞಾನಿ ಹಕ್ಲ್ಸಿಯ ಪ್ರಕಾರ “ಎಷ್ಟು ಅನ್ವೇಷಿಸಿದರೂ ಮುಗಿಸಲಾರದಂಥ ವಿಶಾಲವಾದ ಕ್ಷೇತ್ರವಿದು. ಅದೊಂದು ಮಾನವರೂಪಿ ಖಂಡ(ಹ್ಯೂಮನ್ ಕಾಂಟಿನೆಂಟ್) ಎಂದಿದ್ದಾನೆ.

ಮಾನವ ಸ್ವಭಾವಕ್ಕೆ ಎರಡು ಮುಖಗಳಿವೆ. ಒಂದು ಮಾನವನ ಅಸದೃಶತೆ(ಯುನಿಕ್ನೆಸ್).ಇದು ಪ್ರತಿ ಮನುಷ್ಯನಿಗೆ ಒಂದು ಬಗೆಯ ತನ್ನತನವನ್ನು ತಂದುಕೊಡುತ್ತದೆ. ಇನ್ನೊಂದು ಮಾನವನ ಸಾಮಾನ್ಯತೆ(ಕಾಮನ್ನೆಸ್). ಇದರಲ್ಲಿ ವ್ಯಕ್ತಿ ವೈಶಿಷ್ಟವಾದ ಅಸದೃಶತೆ ವಿಶ್ಲೇಷಣೆಗೆ ಮೀರಿದ ಲಕ್ಷಣವಾಗಿದೆ. ಸಿಗ್ಮಂಡ್ ಫ್ರಾಯ್ಡ್ ಅಪ್ರಜ್ಞೆ, ಪೂರ್ವಪ್ರಜ್ಞೆ ಮತ್ತು ಪ್ರಜ್ಞೆ ಎನ್ನುವ ವ್ಯವಸ್ಥೆಗಳನ್ನು ನಿರೂಪಿಸಿ ಮನಸ್ಸಿನ ವಿದ್ಯಮಾನಗಳನ್ನು ವಿವರಿಸುವ ಪ್ರಯತ್ನ ನಡೆಸಿದರು. ಆ ಪ್ರಯತ್ನ ಇಂದಿನವರೆಗೂ ನಡೆಯುತ್ತಿದೆ. ಅಷ್ಟು ಗಹನವಾದುದು ಮನಸ್ಸು.

ಮಾನವ ವ್ಯಕ್ತಿತ್ವವು ಅತ್ಯಂತ ಗಹನವಾದುದು. ಇದರ ವೈವಿಧ್ಯತೆಯ ವೈಶಾಲ್ಯತೆ ಎಷ್ಟಿದೆಯೆಂದರೆ ದಿಗ್ಭ್ರಮೆ ಹುಟ್ಟಿಸುವಷ್ಟು. ಪಂಡಿತನಿಂದ ಪಾಮರನವರೆಗೂ, ಸಾಮಾನ್ಯನಿಂದ ಜಿತೇಂದ್ರಿಯನವರೆಗೂ ಅನಂತ ವೈವಿಧ್ಯ ಕಣ್ಣ ಮುಂದೆ ಕಂಡುಬರುತ್ತದೆ. ಹಾಗೆಯೇ ಮನಸ್ಸಿನ ಬದಲಾಗುವ ಭೂಮಿಕೆಗಳೂ ಅಚ್ಚರಿ ಮೂಡಿಸುತ್ತವೆ. ಕೃಪಣ ವ್ಯಾಪಾರಿ ಶ್ರೀನಿವಾಸನಾಯಕ ಮೂಗುತಿ ಸಂದರ್ಭದಿಂದ ಭ್ರಮೆಗೊಳಗಾದವನಂತೆ ಸಂಪೂರ್ಣ ವೈರಾಗ್ಯ ತಾಳಿ ಪುರಂದರದಾಸನಾಗಿದ್ದು ಮನಸ್ಸಿನ  ವೈಶಿಷ್ಟಪೂರ್ಣ ವೈವಿಧ್ಯವಲ್ಲವೇ? ಕುತೂಹಲ ಮೂಡಿಸುತ್ತದೆ ಮನಸ್ಸು ಮತ್ತದರ ಭೂಮಿಕೆಗಳು.

ಉಪನಿಷತ್ತುಗಳಲ್ಲಿ ಮನಸ್ಸಿಗೆ ವಿವಿಧ ಹೆಸರುಗಳಿವೆ. ಬುದ್ಧಿ, ಚಿತ್ತ, ಸಂಜ್ಞಾನ, ಪ್ರಜ್ಞಾನ, ದೃಷ್ಟಿ, ಧೃತಿ, ಮತಿ, ಮನೀಷಾ, ಸ್ಮೃತಿ, ಸಂಕಲ್ಪ, ಕ್ರತು, ಕಾಮ ಮತ್ತು ವಶ. ಸರಿಯಾಗಿ ಅರ್ಥೈಸಿದರೆ ಇವೆಲ್ಲವೂ ಮನಸ್ಸಿನ ಕ್ರಿಯೆಗಳು. ವೇದಾಂತದ ಶಾಖೆಗಳಲ್ಲಿ ಒಂದಾದ ಅದ್ವೈತದಲ್ಲಿ ಮನಸ್ಸು ಒಂದು ಅಂತ:ಕರಣ.

ದ್ವೈತವನ್ನು ಪ್ರತಿಪಾದಿಸಿದ ಹರಿದಾಸರೆಲ್ಲರೂ ಮನಸ್ಸನ್ನು ನಿವೇದನೆಗೆ ಮಾಧ್ಯಮವಾಗಿಸಿಕೊಂಡಿದ್ದಾರೆ. ಪ್ರತಿಯೊಂದು ಕೀರ್ತನೆಯಲ್ಲಿ ವಿಶೇಷವಾಗಿ ಹರಿಯಲ್ಲಿ ಬಿನ್ನಹ ಮಾಡಿಕೊಳ್ಳುವಾಗ ಮನ, ಚಿತ್ತ, ಬುದ್ಧಿ ಇವುಗಳ ಪ್ರಯೋಗ ಕಂಡುಬರುತ್ತದೆ. ಭಕ್ತಿಪಂಥದ ಕೊಡುಗೆಯಾದ ನವವಿಧ ಭಕ್ತಿ ಮಾನಸಪೂಜೆಯಲ್ಲಿ ಕೊನೆಗೊಳ್ಳುವುದನ್ನು ಕಾಣುತ್ತೇವೆ. ಶ್ರವಣ, ಕೀರ್ತನೆ ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಹಾಗು ಆತ್ಮನಿವೇದನೆ ಎಲ್ಲವೂ ಮನಸ್ಸನ್ನು ಹರಿಯ ಪಾದಗಳಲ್ಲಿ ಶರಣು ಹೋಗುವುದೇ ಆಗಿದೆ. ಪುರಂದರದಾಸರ ಮಾನಸಿಕ ಪರಿವರ್ತನೆ, ಕನಕದಾಸರು ಕನಸಿನಲ್ಲಿ ಭಗವಂತನನ್ನು ಕಂಡ ಸನ್ನಿವೇಶ, ವಿಜಯದಾಸರಿಗೆ ಗುರು ಪುರಂದರದಾಸರು ಕನಸಿನಲ್ಲಿ ಆಶೀರ್ವದಿಸಿದ ಪರಿ ಎಲ್ಲವೂ ಮನಸ್ಸಿನ ಕ್ರಿಯೆಗಳೇ. ಬಾಹ್ಯದ ಪರಿವೆಯಿಲ್ಲದೆ ಮನಸ್ಸಿನ ಸಂಕಲ್ಪದ್ದೆ ಪಾರುಪತ್ಯ. “ಈಶ ನಿನ್ನ ಚರಣಭಜನೆ ಆಸೆಯಿಂದ ಮಾಡುವೆನು.”.. ಕನಕದಾಸರ ಈ ಕೀರ್ತನೆಯಲ್ಲಿ ಆಸೆ ಎನ್ನುವ ಪದ ಮನವನ್ನು ಸಂಬಂಧಿಸಿದ್ದು. ವ್ಯಾಸರಾಯಸ್ವಾಮಿಗಳು “ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟುಕುರುಡನೋ.”.. ಈ ಕೀರ್ತನೆಯಲ್ಲಿ ಅಂತರಂಗ ಮನವೇ ಆಗಿದೆ.

ಕರ್ಮಮಾರ್ಗ,ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ ಮುಕ್ತಿದಾಯಕ ಜೀವನಶೈಲಿಗಳು. ಇದರಲ್ಲಿ ಭಕ್ತಿಮಾರ್ಗ ಸರಳ ಹಾಗು ಸಾಮಾನ್ಯರಿಗೂ ಸುಲಭವಾದುದು.ಇಲ್ಲಿ ಕರ್ಮಬಂಧನವಿಲ್ಲದೆ, ಕಠಿಣ ಜ್ಞಾನಮಾರ್ಗದ ತೊಡಕಿಲ್ಲದೆ ಭಕ್ತಿಪೂರಿತ ಮಾನಸಪೂಜೆಯಿಂದಲೇ ಮುಕ್ತಿ ಪಡೆಯಬಹುದು. ಭಕ್ತಿಪಂಥದ ಎಲ್ಲ ಸಾಧಕರು ಈ ಮಾನಸಪೂಜೆಯಿಂದಲೇ ಮುಕ್ತಿ ಸಾಧಿಸಿದವರು. ಮನಸ್ಸು ಶುದ್ಧವಾಗಿದ್ದರೆ ಅಲ್ಲಿ ಹರಿ ನೆಲೆಸಿರುತ್ತಾನೆ. “ಇಟ್ಹಾಂಗೆ ಇರುವೆನೋ ಹರಿಯೇ”… “ತೇಲಿಸೋ ಇಲ್ಲಾ ಮುಳುಗಿಸೋ” ..ಈ ಕೀರ್ತನೆಗಳಲ್ಲಿ ದಾಸರ ಸಂಪೂರ್ಣ ಶರಣಾಗತಿಯನ್ನು ಕಾಣಬಹುದು. ಇಲ್ಲಿ ನಿಜಕ್ಕೂ ಶರಣು ಹೋಗುವುದು ಮನಸ್ಸು. ಮನಸ್ಸಿನ ಸಂಕಲ್ಪಭಾವವೇ ಅವರನ್ನು ಹರಿದಾಸ್ಯವನ್ನು ಅಪ್ಪಿಕೊಳ್ಳುವಂತೆ ಮಾಡಿರುವುದು. “ನಿನ್ನ ಚಿತ್ತಕ್ಕೆ ಬಂದುದನು ಮಾಡು ಸರ್ವೇಶ” ಎನ್ನುವಲ್ಲಿಯೂ ಹರಿದಾಸರ ದಾಸ್ಯಭಾವವನ್ನು ಗಮನಿಸಬಹುದು. ಸಖ್ಯ, ದಾಸ್ಯವೆಲ್ಲವೂ ಮನದ ಭಾವಗಳು. ಭಕ್ತಿಯಲ್ಲಿ ಜ್ಞಾನದ ಅಂಶ ಸೇರಿರುತ್ತದೆ. ಜ್ಞಾನವೆಂದರೆ ಅರಿವು. ಅರಿವು ಮತ್ತೆ ಮನಸ್ಸಿನ ಒಂದು ಸ್ತರ. ಯಾವುದಾದರೂ ಒಂದು ವಸ್ತುವಿನ ಅರಿವು ಮೂಡುವುದೇ ಜ್ಞಾನ. ಆದ್ದರಿಂದ ಭಕ್ತಿಯಿದ್ದಲ್ಲಿ ಜ್ಞಾನವಿರುತ್ತದೆ. ಆದರೆ ಭಕ್ತಿಯೆನ್ನುವುದು ಆಡಂಬರವಲ್ಲ.  ಅದು ಅಂತರಾಳದ ಜೀವಜಲ. ಢಂಬಾಚಾರವನ್ನು ಕಟುವಾಗಿ ಟೀಕಿಸಿರುವ ದಾಸರು “ಕಣ್ಣಿನೊಳಗೆ ನೋಡೋ ಒಳಗಣ್ಣಿನಿಂದಲಿ ನೋಡೋ ಮೂಜಗದ ದೊರೆಯ” ಎನ್ನುವ ಕೀರ್ತನೆಯಲ್ಲಿ “ಒಳಗಣ್ಣು” ಮನಸ್ಸನ್ನು ಪ್ರತಿಬಿಂಬಿಸುತ್ತದೆ. ಹರಿದಾಸರು ಈ ಪ್ರಪಂಚ ಕಂಡ ಸಂತಸಾಧಕರು. ಭಕ್ತಿಗೆ ಇನ್ನೊಂದು ಹೆಸರಾದ ಹರಿದಾಸರು ತಮ್ಮ ಎಲ್ಲ ಅಭಿವ್ಯಕ್ತಿಗಳಲ್ಲಿ ಮನಸ್ಸಿಗೆ  ಒಂದು ವಿಶೇಷ ಪ್ರಾಧಾನ್ಯತೆ ಕೊಟ್ಟಿರುವುದನ್ನು ಕಾಣಬಹುದು. ಮುಕ್ತಿಯೆನ್ನುವುದು,ವೈಕುಂಠಪ್ರಾಪ್ತಿಯೆನುವುದು  ಕಾಣದ ಅರಿಯದ ಲೋಕ. ಆದರೆ ಹರಿದಾಸರ  ಅಂತರಂಗದಲಿ ಹರಿವಾಸಿಸುವ ಕಾರಣ ಅವರು ಬದುಕಿದ್ದಾಗಲೇ ಮುಕ್ತಿ ಸಾಧಿಸಿದವರು. “ಬಲ್ಲವಗಿಲ್ಲಿದೆ ವೈಕುಂಠ” ಎಂದ ದಾಸರು “ಮನವ ದಂಡಿಸಿ ಪರಮಾತ್ಮನ ಕಾಣೋ ಕೊನೆಗೆ ನಿನ್ನೊಳಗೆ ನೀ ಜಾಣೊ ಮುಕ್ತಿ” ಎನ್ನುವ ಮೂಲಕ ಮನುಷ್ಯ ಶರೀರವನ್ನು ಸಾಧನ ಶರೀರವಾಗಿ ಕಂಡಿದ್ದಾರೆ. ಭಗವಂತನ ಜ್ಞಾನವನ್ನು ಭಕ್ತಿಯಿಂದ ಪಡೆದು ಮಾನಸಮಾರ್ಗದಲ್ಲಿ ಮುಕ್ತಿ ಪಡೆಯಲು ಕರೆನೀಡಿದವರು ಹರಿದಾಸರು.

ಇಂತಹ ಅದ್ಭುತ ಶಕ್ತಿಯಿದೆ ನಮ್ಮ ಮನಸ್ಸಿಗೆ. ಈ ಮನಸ್ಸು ನಮ್ಮನ್ನು ಭೂಮಿ ಮೇಲಿನ ಇತರ ಪ್ರಾಣಿಗಳಿಂದ ಭಿನ್ನವಾಗಿಸಿದೆ, ವಿಶೇಷವಾಗಿಸಿದೆ. ಇದಕ್ಕಾಗಿಯೇ ಅಲ್ಲವೇ ಪುರಂದರದಾಸರು ಪ್ರೀತಿಯಿಂದ ಗದರಿದ್ದು… “ಮಾನವಜನ್ಮ ದೊಡ್ಡದು ಅದ ಹಾನಿಮಾಡಲೀ ಬೇಡಿ ಹುಚ್ಚಪ್ಪಗಳಿರಾ…”

ಅವರೆಲ್ಲರದೂ ನಿವೇದನಾ ಕಾವ್ಯ

ನೋಡುವ ಬೆಡಗು । ದೀಪಾ ಫಡ್ಕೆ

ನಮುಖಿ ಸಾಹಿತ್ಯವಾದ ಹರಿದಾಸ ಸಾಹಿತ್ಯ ಭಕ್ತಿ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದ, ಜನಸಾಮಾನ್ಯರಿಗೆ ಮಾರ್ಗದರ್ಶನ ನೀಡಿದ ಸಾಹಿತ್ಯ ಪ್ರಕಾರ. ವಿರಕ್ತಿಯನ್ನು ಮೈಮನಗಳಲ್ಲಿ ತುಂಬಿಕೊಂಡ ಹರಿದಾಸರದು ಅತ್ಯಂತ ಸರಳ ಜೀವನಧರ್ಮ. ಈ ಹರಿದಾಸರ ಸಾಹಿತ್ಯಕ್ಕಿದ್ದ ಸಹಜ ಶಕ್ತಿಯೆಂದರೆ ಅದಕ್ಕಿದ್ದ ಸಾಮಾಜಿಕ ಕಳಕಳಿ. ನಿಂತ ನೀರಾಗಿದ್ದ ವೈದಿಕ ಧರ್ಮಕ್ಕೆ  ಸಡ್ಡು ಹೊಡೆದು ಸಾಮಾಜಿಕ ಕ್ರಾಂತಿಯ ಕಹಳೆ ಮೊಳಗಿಸಿದ ದಾಸಸಾಹಿತ್ಯ ಸರಳ, ಉತ್ತಮ ಜೀವನತತ್ವ್ತಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಹೇಳಿ ಮಹತ್ತರ ಬದಲಾವಣೆಯನ್ನು ತಂದಿತು.  ಭಗವಂತನನ್ನು ನವವಿಧಭಕ್ತಿಯ ಮೂಲಕ ಆರಾಧಿಸುವ ಹರಿದಾಸರ ನಾಲಗೆ ತುಂಬಾ ವಿಠ್ಠಲ,ವಿಠ್ಠಲ ಹರಿನಾಮ. ಭಕ್ತಿಯೊಂದೇ ಹರಿದಾಸರಿಗೆ ಗೊತ್ತಿದ್ದ ವಿದ್ಯೆ. ಹೀಗಾಗಿ ಹದಿನೈದನೆಯ ಶತಮಾನ, ಭಕ್ತಿಪಂಥದ ಹರಿದಾಸರ ಯುಗವೆಂದು ಹೇಳಬೇಕು.

ಹುಟ್ಟಿದ ಪ್ರತಿಯೊಬ್ಬ ಮನುಷ್ಯ, ನೈಸರ್ಗಿಕ ಮತ್ತು ಆಧ್ಯಾತ್ಮಿಕ ಎಂಬ ಎರಡು ಜಗತ್ತುಗಳಿಗೆ ಸೇರಿದವನು. ನೈಸರ್ಗಿಕವಾದ ದೇಹ ಮತ್ತು ಅದರೊಂದಿಗೆ ಮನಸ್ಸು, ಆಧ್ಯಾತ್ಮಿಕ ಪ್ರಪಂಚದ ಆತ್ಮದ ಸಂಬಂಧವನ್ನು ತಿಳಿಯದಷ್ಟು ಹೊರಜಗತ್ತಿನೊಂದಿಗೆ ಮಿಳಿತವಾಗಿರುತ್ತದೆ. ಭಕ್ತಿ ಎನ್ನುವ ಮಾಂತ್ರಿಕ ಶಕ್ತಿ ಈ ಎರಡು ಜಗತ್ತುಗಳಿಗೆ ಸಂಬಂಧ ಏರ್ಪಡಿಸಿದರೆ ಮನುಷ್ಯನ ಮನಸ್ಸು ಸತ್ಯದ ಅನ್ವೇಷಣೆಗೆ ತೊಡಗುತ್ತದೆ. ಭಕ್ತಿ ಉಪಾಸನೆಯಾಗಿ ಹರಿಸರರ್ವೋತ್ತಮತ್ವಕ್ಕೆ ಶರಣಾದಾಗ ಹರಿದಾಸ ಜನನವಾಗುತ್ತದೆ. ನಾನು, ನನ್ನದು, ನಾನು ಯಾರು ಇಂತಹ ಎಲ್ಲ ಶಬ್ದಗಳಿಗೆ ಅರ್ಥ ಹುಡುಕುವ ಪ್ರಯತ್ನವನ್ನು ಹರಿದಾಸರು ಮಾಡಲಾರಂಭಿಸಿದಾಗ ಮೂಡಿದ ಅಭಿವ್ಯಕ್ತಿಯೆಲ್ಲವೂ ಹರಿದಾಸ ಸಾಹಿತ್ಯವಾಯಿತು.

ಸಾಮಾನ್ಯ ಜನರಿಗೆ ಧರ್ಮದ ಅರಿವು, ನೈತಿಕತೆಯ ಪಾಠದೊಂದಿಗೆ ಬದುಕಿದು ನೀರ ಮೇಲಿನ ಗುಳ್ಳೆ ಎನ್ನುವ ಅಸ್ಥಿರತೆಯ ತಿಳಿವನ್ನು ನೀಡುತ್ತಾ, ಹರಿದಾಸರು ಮಾಡಿದ್ದು ಮಹಾನ್ ಚಳುವಳಿ. ತಾಳ ತಂಬೂರಿಯ ದಾಸಯ್ಯ ಎಂದು ಹರಿದಾಸರನ್ನು ಗೇಲಿ ಮಾಡುತ್ತಿದ್ದ ಪಂಡಿತ ವರ್ಗ, ರಾಜ್ಯವಾಳುತ್ತಿದ್ದ ರಾಜಾಧಿರಾಜರು, ಅವರ ಕಾನೂನು, ಆಡಲಿತ ವ್ಯವಸ್ಥೆ ಮಾಡದೇ ಇದ್ದ ಸಾಮಾಜಿಕ ಕಾರ್ಯವನ್ನು ಗೋಪಾಳಬುಟ್ಟಿ(ಜೋಳಿಗೆ), ಚಿಟಿಕೆಯ ಹರಿದಾಸರು  ಬೀದಿಬೀದಿಗಳಲ್ಲಿ “ತಂಬೂರಿ ಮೀಟಿದವ ಭವಾಬ್ಧಿ ದಾಟಿದವ….” ಎಂದು ಹಾಡುತ್ತಾ ಕುಣಿಯುತ್ತಾ, ಬದಲಾವಣೆಯನ್ನು ತಂದರೆಂದರೆ ಅವರ ಕ್ರಾಂತಿಯ ಶಕ್ತಿ ಎಂತಹದು ಎಂದು ಅರಿವಾಗುತ್ತದೆ. ಹೀಗೆ ಹರಿ, ಅವನ ಲೀಲೆ, ಅವತಾರಗಳು, ಪವಾಡಗಳು ಎಲ್ಲವೂ ಹರಿದಾಸರಿಗೆ ಅತ್ಯಂತ ಪ್ರಿಯ.  ಈ ಎಲ್ಲಾ ಅಂಶಗಳನ್ನು ತುಂಬಿಕೊಂಡ ಅವರ ನಿವೇದನೆಗಳು, ಕೀರ್ತನೆಗಳಾಗಿ ಇಂದಿಗೂ ಮನೆಮಾತಾಗಿವೆ.

ನೂರಾರು ಹರಿದಾಸರು ಸಾವಿರಾರು ಕೀರ್ತನೆಗಳನ್ನು ರಚಿಸಿ ದಾಸಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಶ್ರೀಪಾದರಾಯರಿಂದ ಆರಂಭಗೊಂಡ ಈ ಅದ್ಭುತ ಪರಂಪರೆ ಪುರಂದರದಾಸ, ಕನಕದಾಸರಿಂದ ಉಚ್ಛ್ರಾಯ ಸ್ಥಿತಿಯನ್ನು ಕಂಡು, ಇತ್ತೀಚೆಗೆ ಆಗಿಹೋದ ಪ್ರಾಣೇಶಾಚಾರ್ಯ, ಬೇಲೂರು ಕೇಶವದಾಸರ ತನಕ ಜೀವಂತವಾಗಿತ್ತು. ಈಗಲೂ ಈ ಜೀವನಧರ್ಮ ಸ್ವಲ್ಪವಾದರೂ  ಉಸಿರಾಡುತ್ತಿದೆ ಎನ್ನುವ ಸಂತಸವಿದೆ. ಈ ಹರಿದಾಸರ ನಡುವೆ ಕೆಲವು ವಿರಕ್ತ ಮಹಿಳೆಯರು ನಕ್ಷತ್ರಗಳಂತೆ  ಮಿಂಚಿ ಮಹಿಳಾ ಹರಿದಾಸಲೋಕವನ್ನು ಅತ್ಯಂತ ವಿಶೇಷವಾಗಿಸಿದ್ದಾರೆ. ಪುರುಷ ಹರಿದಾಸರನ್ನೇ “ದಾಸಯ್ಯ” ಎಂದು ಹೀಗಳೆಯುತ್ತಿದ್ದ ಕಾಲದಲ್ಲಿ ಈ ಮಹಿಳಾ ಹರಿದಾಸರ ಅಭಿವ್ಯಕ್ತಿ ಬಹಳ ಮೆಚ್ಚುಗೆ ಅಚ್ಚರಿ ಮೂಡಿಸುತ್ತದೆ.

ಮಹಿಳಾ ಹರಿದಾಸರಲ್ಲಿ, ಗಲಗಲಿಯ ಅವ್ವ(ರಮಾಬಾಯಿ) ಮೊದಲಿಗರು. ನಂತರದ ಪ್ರಸಿದ್ಧ ಹೆಳವನಕಟ್ಟೆ ಗಿರಿಯಮ್ಮ, ಜೀವೂಬಾಯಿ, ಹರಪನಹಳ್ಳಿ ಭೀಮವ್ವ,  ಅಂಬಾಬಾಯಿ, ಯದಿಗಿರಿಯಮ್ಮನವರು, ನಾಡಿಗರ ಶಾಂತಿಬಾಯಿ, ಓರಬಾಯಿ, ಲಕ್ಷ್ಮೀದೇವಮ್ಮ, ಸರಸಾಬಾಯಿ, ನಂಜನಗೂಡು ತಿರುಮಲಾಂಬಾ, ಬಳ್ಳಾರಿ ರಾಧಾಬಾಯಿ, ಕಳಸದ ಸುಂದರಮ್ಮ, ಗುಂಡಮ್ಮ ಮತ್ತು ಸರಸ್ವತಿಬಾಯಿ. ಹೀಗೆ ಬೆರಳೆಣಿಕೆಯ ಮಹಿಳಾ ಹರಿದಾಸರು ಸಾಮಾಜಿಕವಾಗಿ ಹೊಸಕ್ರಾಂತಿಯನ್ನು ಸದ್ದಿಲ್ಲದೇ ಮಾಡಿಹೋದರು.

ಏನಿದು ಬಯಲ ಪಾಶ ನೋಡಿದರಿಲ್ಲಿ
ಏನು ಹುರುಡುಗಾಣೆನೊ
ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ
ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ

ಹೆಳವನಕಟ್ಟೆ ಗಿರಿಯಮ್ಮನ ನಿವೇದನೆಯಿದು. ಸ್ತ್ರೀ ಸಹಜ ಭಾವಗಳಾದ ಮಮತೆ, ಪ್ರೀತಿ, ಆರ್ತಭಾವ, ದೀನತೆ, ನಿವೇದನೆ ಮತ್ತು ಆತ್ಮಸಮರ್ಪಣೆ ಎಲ್ಲಾ ಮಹಿಳಾ ಹರಿದಾಸರ ಸಾಹಿತ್ಯದ ಪ್ರಧಾನ ಅಂಶ. ಮಮತೆ, ವಾತ್ಸಲ್ಯದ ಮಧುರ ಭಕ್ತಿಯಿಂದ ಆರಂಭವಾಗುವ ಕೀರ್ತನೆಗಳು ನಂತರ ಪಕ್ವಗೊಂಡ ಮನಸ್ಸಿನಿಂದ, ಆತ್ಮನಿವೇದನೆಯನ್ನು ಮಾಡಿಕೊಂಡ ಕೀರ್ತನೆಗಳನ್ನೂ ನೋಡಬಹುದು. ಅನಾದಿಕಾಲದಿಂದಲೂ ಸ್ತ್ರೀ ಮತ್ತವಳ ಸಂವೇದನೆಗಳು ಉಪೇಕ್ಷೆಗೆ ಒಳಗಾದವುಗಳು. ದೇಹ, ಮನಸ್ಸು, ಸ್ವಂತಿಕೆ ಹಾಗೂ ಸಂವೇದನೆಗಳನ್ನೂ ಪುರುಷ ಪ್ರಧಾನ ಸಮಾಜದೆದುರು ಅದುಮಿಟ್ಟುಕೊಂಡೇ ಬದುಕುವ ಯತ್ನ ಸ್ತ್ರೀಯರದ್ದಾಗಿತ್ತು. ಉಪೇಕ್ಷೆಯನ್ನೂ ಕಡೆಗಣಿಸಿಕೊಂಡು ಸ್ತ್ರೀ ಶೋಷಣೆಯನ್ನು ಸಮರ್ಥವಾಗಿ, ಸಾತ್ವಿಕತೆಯಿಂದ ಎದುರಿಸಿದ ಧೀರೆಯರು ಈ ಮಹಿಳಾ ಹರಿದಾಸರು. ಕುಹಕ, ವಿರೋಧದ ನಡುವೆಯೂ ಸಾಮಾನ್ಯರಿಗೆ ಅತೀ ಎನ್ನಿಸುವ ವಿರಕ್ತ ಜೀವನವನ್ನು ಅಪ್ಪಿಕೊಂಡು ನೂರಾರು ಕೀರ್ತನೆಗಳಲ್ಲಿ ಹರಿಭಕ್ತಿಯನ್ನು, ತಮ್ಮ ಅಂತರಂಗದ ಬವಣೆಗಳನ್ನೂ ತೋಡಿಕೊಂಡಿದ್ದಾರೆ.

ಮಹಿಳಾ ಹರಿದಾಸರು ತಮ್ಮ ಸರ್ವಸ್ವವನ್ನು ದಾನ ಮಾಡಿ ತಾಳ ತಂಬೂರಿಯೊಂದಿಗೆ ಬೀದಿಗಿಳಿಯಲಿಲ್ಲ. ಸಂಸಾರದ ಜವಾಬ್ದಾರಿಗಳನ್ನೂ ತೊರೆಯಲಿಲ್ಲ.ನಾಲ್ಕು ಗೋಡೆಗಳ ಒಳಗೆ, ತಮ್ಮ ಮಿತಿಯಲ್ಲೇ ಹರಿದಾಸ್ಯವನ್ನು ಒಪ್ಪಿಕೊಂಡು, ಎಲ್ಲಾ ಸಾಮಾಜಿಕ ಕಟ್ಟಳೆಗಳ ನಡುವೆಯೂ ಹರಿದಾಸ್ಯವನ್ನು ಅಪ್ಪಿಕೊಂಡು  ಒಳಗಿನವರ, ಹೊರಗಿನವರ ಕುತ್ಸಿತ ಮನದ ನಿಂದನೆಗಳನ್ನು ಸಹಿಸಿಕೊಂಡು ಹರಿಯನ್ನು ಆರಾಧಿಸುತ್ತಾ ಭಕ್ತಿಲೋಕದ ಅಲೌಕಿಕ ಅನುಭವಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡರು.

ಮಹಿಳಾ ಹರಿದಾಸರ ಇತಿಹಾಸ ತಿರುವಿದಾಗ ವಿಷಾದ ಮೂಡಿಸುವ ಸಂಗತಿಯೆಂದರೆ ಇವರಲ್ಲಿ ಹೆಚ್ಚಿನವರು ಬಾಲವಿಧವೆಯರು. ಹದಿಹರೆಯದ ಬಾಲಕಿಯರನ್ನು ವೃದ್ಧ “ವರ”ನಿಗೆ ವಿವಾಹ ಮಾಡಿಕೊಟ್ಟ ಅಕ್ಷಮ್ಯದ ನಿದರ್ಶನಗಳು. ತಮ್ಮ ಚಿಗುರು ದೇಹಕ್ಕೆ ಸಮಾಜ, ಧರ್ಮ, ಸಂಪ್ರದಾಯದ ಹೆಸರಿನಲ್ಲಿ ತಾವೇ ಬೆಂಕಿಯ ಕೊಳ್ಳಿ ಹಚ್ಚಿಕೊಂಡವರು. ಅರಳುವ ಮುನ್ನವೇ ಬಾಡಿಹೋದ ಬದುಕುಗಳು. ಹೀಗೆ ಮುರುಟಿಹೋಗುತ್ತಿದ್ದ ಜೀವಗಳಿಗೆ ಸಂಜೀವಿನಿಯಾಗಿ ದೊರೆಕಿದ್ದು ಹರಿದಾಸ್ಯ. ಹರಿಯ ಆರಾಧನೆ ಅವರಲ್ಲಿ ನೆಮ್ಮದಿ ಮೂಡಿಸಿತೋ ಏನೋ? ಕೆಲವರಿಗೆ ತಂದೆಯಂತೆ ಹರಿ ಕಂಡರೆ ಅವನನ್ನು ಪೂಜಿಸಿದರು, ಸಖನೆಂದುಕೊಂಡು ಅವನೊಂದಿಗೆ ಹರಟಿ ವಾಗ್ವಾದ ನಡೆಸಿದರು, ಅವನೊಂದಿಗೆ ಹಾಡಿ ಕುಣಿದರು, ಜೋಕಾಲಿಯಾಡಿದರು, ವಾಸ್ತವಕ್ಕೆ ಇಳಿದಾಗ ಅವನ ಹೆಗಲಿಗೆ ತಲೆಯಿಟ್ಟು ರೋದಿಸಿದರು. ಮಾತೃ ಹೃದಯದ ಇವರಿಗೆ ಬೆಣ್ಣೆಕಳ್ಳ ಕೃಷ್ಣ ಮಗುವಾಗಿ ಕಂಡಾಗ ಅವನಿಗಾಗಿ ಜೋಗುಳ ಹಾಡಿದರು ತೊಟ್ಟಿಲು ತೂಗಿದರು ಈ ಮಾತೆಯರು. ಹೀಗಾಗಿ ಅವರ ಕೀರ್ತನ ಪ್ರಪಂಚದ ತುಂಬ ಹರಿ, ಹರಿ, ಹರಿ. ಒಟ್ಟಿನಲ್ಲಿ ಅವರ ಭಾವಪ್ರಪಂಚದಲ್ಲಿ ಹರಿ ದೊರೆಯಾದರೆ ಅವರು ರಾಣಿಯರಾದರು, ಸಖಿಯಾದರು, ದಾಸಿಯಾದರು ಮತ್ತು ಮಮತೆಯ ಮಾತೆಯರೂ ಆಗಿಹೋದರು. ಹರಿಯೊಂದಿಗಿರುವಾಗ ಬಾಹ್ಯ ಪ್ರಪಂಚದ ಕೊಂಕು, ಟೀಕೆಗಳು ಮುಟ್ಟಲೇ ಇಲ್ಲ. ಮುಟ್ಟಿದರೂ ಅದು ಬಾಡಿದ ದೇಹಕ್ಕಷ್ಟೇ ಹೊರತು ಹರಿಯಿಂದ ತುಂಬಿಹೊದ ಮನಸ್ಸಿಗಲ್ಲ.

ಆರಂಭದಲ್ಲಿ ಈ ಸಂತಮಹಿಳೆಯರು ಹೆಚ್ಚು ಗಮನವಿತ್ತಿದ್ದು ಹರಿಯ ಒಂದು ಅವತಾರವಾದ ಮುರಲೀಮನೋಹರ ಶ್ರೀಕೃಷ್ಣನ ಲೀಲೆಗಳಿಗೆ. ನಿಜ, ಅಂತಹ ಚುಂಬಕ ವ್ಯಕ್ತಿತ್ವ ಗಿರಿಧಾರಿಯದು. ಹುಟ್ಟಿನಿಂದ ತೊಡಗಿ ತನ್ನ ನಿರ್ವಾಣದವರೆಗೂ ವಿವಾದ, ಕುತೂಹಲದ ಕೇಂದ್ರವಾಗಿದ್ದ.  ವಿಶ್ವದ ಎಲ್ಲಾ ನಿಗೂಢತೆಯನ್ನು ತನ್ನೊಡಲಲ್ಲಿರಿಸಿಕೊಂಡ ವಾಸುದೇವಕೃಷ್ಣ ಈ ನೊಂದ ಸಾಧ್ವಿಯರಿಗೆ ಪರಮಾಪ್ತನಾದ.  ಹೆಚ್ಚಿನ ಮಹಿಳಾ ಹರಿದಾಸರ ಕೀರ್ತನೆಗಳಲ್ಲಿ ಶ್ರೀಕೃಷ್ಣನ ಅಲಂಕಾರ, ಬಾಲಲೀಲೆಗಳು, ತನ್ನನ್ನು ನಂಬಿದವರನ್ನು ಕೃಷ್ಣ ಕಾಪಾಡುತ್ತಿದ್ದ ಪರಿ ಅಲ್ಲದೆ ಹರಿಯ ದಶಾವತಾರಗಳ ವರ್ಣನೆಯನ್ನು ಮಾಡಿದ್ದಾರೆ.

ಮನದ ಚಿಂತೆಯಬಿಡಿಸೊ ಮಾಧವಾ ಮುಕಂದ ಹರಿ
ದನುಜಾರಿದಯಾವಾರಿಧಿ
ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ
ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ

ಸಣ್ಣ ವಯಸ್ಸಿನ ಮಹಿಳಾ ಹರಿದಾಸರು ಪ್ರಪಂಚದ ಜೀವವಿರೋಧಿ ನೀತಿಗೆ ನೊಂದು “ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೋ ದೇವಾ” ಎಂದು ಪ್ರಶ್ನಿಸಿಕೊಂಡು  “ಅಸಾರವಾದ ಸಂಸಾರದಿಂದ ಪಾರು ಮಾಡುವುದೆಂದಿಗೋ ರಂಗಯ್ಯ” ಎಂದು ಗೋಗರೆಯುವುದನ್ನು ಕಾಣಬಹುದು. ನಿಜ, ಪ್ರಕೃತಿ ಧರ್ಮವನ್ನು ಅರ್ಥೈಸಿಕೊಳ್ಳದೆ ಮನುಷ್ಯ ತನ್ನ ಹಿಡಿತದಲ್ಲಿರುವ ಪ್ರತಿಯೊಂದರ ಮೇಲೂ ಹಕ್ಕು ಚಲಾಯಿಸಿ ಜೀವವಿರೋಧಿಯಾಗುತ್ತಾನೆ. ಇಂಥದ್ದನ್ನು ಮಹಿಳಾ ಹರಿದಾಸರು ನಿವೇದನೆಯ ಮೂಲಕ ವಿರೋದಿಸಿದರು. ಹೀಗೆ ಉಪದೇಶ, ಲೋಕನೀತಿಯ ಬೋಧನೆ, ಕೃಷ್ಣ ಲೀಲಾ ವರ್ಣನೆಗಳ ಕೀರ್ತನೆಗಳಲ್ಲದೇ ಕಥನಾತ್ಮಕಗಳೊಂದಿಗೆ, ದೀರ್ಘವಾದ ಕೀರ್ತನೆಗಳನ್ನೂ ಮಹಿಳಾ ಸಾಹಿತ್ಯದಲ್ಲಿ ಕಾಣಬಹುದು.

ಪುರಂದರದಾಸ, ಕನಕದಾಸರ ಕೀರ್ತನಸಾಹಿತ್ಯದಲ್ಲಿ ಕಂಡುಬರುವ ಜೀವನಾನುಭವ, ಲೋಕಾನುಭವದ ಕೊರತೆ ಮಹಿಳಾ ಹರಿದಾಸಸಾಹಿತ್ಯದಲ್ಲಿ ಕಂಡುಬಂದರೂ ಅದಕ್ಕೆ ಕಾರಣಗಳಿವೆ. ಸಾಮಾಜಿಕ ಕಟ್ಟುಪಾಡುಗಳಿಂದ ಬಂಧಿತರಾದ ಈ ಸಂತಮಹಿಳೆಯರಿಗೆ ಮನೆಯೇ ಬೃಂದಾವನವಾಗಿತ್ತು. ಹೊಸ್ತಿಲು ದಾಟಿದರೆ ಸಿಗುವ ಲೋಕಾನುಭವ ಇವರಿಗಾಗುವುದೇ ಇಲ್ಲ. ಆಳವಾದ ಶಾಸ್ತ್ರಜ್ಞಾನ, ವೇದಾಂತದ ಛಾಯೆಯು ಅಷ್ಟಾಗಿ ಕಾಣದಿದ್ದರೂ ಮಾನಸಿಕ ಉನ್ನತಿಯನ್ನು ಸಾಧಿಸಿದ್ದನ್ನು ಗುರುತಿಸಬಹುದು.

ಈ ಮಹಿಳಾ ಹರಿದಾಸರದು ನಿಜಕ್ಕೂ ಅಳಿಲಸೇವೆ. ಖಂಡಿತ ಕಡೆಗಣಿಸುವಂತಿಲ್ಲ. ಎಲ್ಲದಕ್ಕಿಂತಲೂ ಹೆಚ್ಚಾಗಿ ಈ ಮಹಿಳೆಯರು ಯಾರ ಬೆಂಬಲವಿಲ್ಲದೆ ತಮ್ಮದೇ ಆದ ರೀತಿಯಲ್ಲಿ ಸಮಾಜವನ್ನು ಎದುರಿಸಿದವರು. ಸಮಾಜದ ಹರಿತ ಕುಡುಗೋಲಿಗೆ ತಮ್ಮ ಬದುಕು ಬಲಿಯಾಗಿದ್ದರೂ, ಸಮಾಜಕ್ಕೆ ತಿರುಗಿ ಕೀರ್ತನೆಗಳ ಹೂ ಮಳೆಯನ್ನು ನೀಡಿದ್ದಾರೆ. ಈ ಎಲ್ಲಾ ಮಹಿಳಾ ಹರಿದಾಸರದು ನಿವೇದನಾ ಕಾವ್ಯ. ಒಬ್ಬೊಬ್ಬರ ಬದುಕು ಒಂದೊಂದು ಕಾವ್ಯ. ಅವರವರ ಕಾವ್ಯದಲ್ಲಿ ಅವರೇ ನಾಯಕಿಯರು, ನಾಯಕ ಮಾತ್ರ ಅವನೊಬ್ಬ ಮಾಂತ್ರಿಕ, ಶ್ರೀಕೃಷ್ಣ. ಈ ಲೋಕನಾಯಕ ತನ್ನನ್ನು ನಂಬಿದ, ಆರಾಧಿಸಿದ ನಾಯಕಿಯರನ್ನು ವಿಠಲ, ಪಾಂಡುರಂಗ, ರಂಗ, ಮಾಧವ, ಶ್ರೀನಿವಾಸ ಹೀಗೆ ಸಹಸ್ರ ಹೆಸರುಗಳಿಂದ ಬಿಡದೇ ಸಂತೈಸಿದ. ಎಷ್ಟೆಂದರೂ ಹರಿ ಜಗನ್ನಾಥನಲ್ಲವೇ?

‘ತಿಲ್ಲಾನ’ ಮಾಸಿಕ ಪ್ರಕಟಿತ

ಹಿಂತಿರುಗಿ ನೋಡಲಾರೆ..!

ಮಮತಾ ದೇವ

ಇಂದಿನ ಸೊಬಗನ್ನು ಸವಿಯುವ ಹೊತ್ತು..
ನೆನಪಾಗದಿರಲಿ ಹಳೆಯ ಕನಸುಗಳು ಕ್ಷಣ ಹೊತ್ತೂ..

ಅಂದು ಹೆಣೆದ ಗೊಂದಲದ ಬಲೆಯೇಕೆ ಇಂದು ?
ನಿಶ್ಚಿತತೆಯ ಕಡೆಗಿರಲು ಪ್ರಬಲ ಗುರಿ ಇಂದು.

ಹಿಂತಿರುಗಿ ನೋಡಲಾರೆ ಮಣ್ಣುಗೂಡಿದ ಕನಸುಗಳ ಪರಿಧಿ
ಚಿಂತಿಸದೆ ಸಾಗುತಿಹೆ ಭವ್ಯ ಭವಿಷ್ಯದ ಹೊಸ ಹಾದಿ !

ಆ ದಟ್ಟ ಕತ್ತಲಿನ ದಾರಿಯನ್ನರಸಿ ಹೋಗುವುದೇ ವ್ಯರ್ಥ..
ಹೊಂಗಿರಣ ತುಂಬಿರುವೀ ಅಮೂಲ್ಯ ಕ್ಷಣಗಳೇ ಪರಮಾರ್ಥ.

ವಾಸ್ತವವೇ ಅಭಿಜಾತವಾಗಿರಲು ಹಳೆಯ ಕಹಿಯೇಕೆ ಬೇಕು ?
ಹೊಸ ಕನಸುಗಳು ಆವರಿಸಿರಲು..ಹಿಂತಿರುಗಿ ನೋಡುವುದೇಕೆ ಬೇಕು..?

ಭಸ್ಮವಾಗಬಲ್ಲೆ; ಆದರೆ ತಣಿಯಲೊಲ್ಲೆ

ಇಬ್ಬನಿ ಬಿಂಬ | ದೀಪಾ ಹಿರೇಗುತ್ತಿ

ಡಿಯಾರ ಎಂದಿನಂತೆ ನಿಷ್ಕರುಣಿಯಾಗಿದೆ. ಸಮಯ ನಿಧಾನವಾಗಿ ಸಾಗಲಿ ಎಂದು ಬಯಸಿದಾಗ ಚಿರತೆಯ ವೇಗ ಪಡೆದು ಓಡುವಂತೆ ಅನ್ನಿಸುವ ಅದರ ಮುಳ್ಳುಗಳು ಈ ಗಂಟೆಗಳ ಗೊಂದಲ ಬೇಗ ಸರಿದು ಹೋಗಲಿ ಎಂದು ಬಯಸಿದಾಗ ಭರ್ಜರಿ ಬೇಟೆ ನುಂಗಿದ ಅನಕೊಂಡದ ಹಾಗೆ ಮುಂದೆ ಸಾಗಲಾಗದೆ ಕಷ್ಟಪಡುತ್ತಿರುವಂತೆ ಭಾಸವಾಗುತ್ತವೆ. ನ್ಯಾಶನಲ್ ಜಿಯೋಗ್ರಾಫಿಕ್ ಚಾನೆಲ್ಲಿನಲ್ಲಿ ನೋಡಿದ ಅನಕೊಂಡ, ಅದೇ ಹೆಸರಿನ ಇಂಗ್ಲಿಷ್ ಚಿತ್ರದ ದೈತ್ಯ ಉರಗಗಳೆಲ್ಲ ನೆನಪಾಗಿ ರೊಮ್ಯಾಂಟಿಕ್ ಆಗಿ ಯೋಚನೆ ಮಾಡಬೇಕಾದ ಹೊತ್ತಿನಲ್ಲಿ ತಾನು ಏನೇನೋ ಚಿಂತಿಸುತ್ತಿದ್ದೇನಲ್ಲ ಎಂದುಕೊಳ್ಳುತ್ತ ತನ್ನಷ್ಟಕ್ಕೆ ತಾನೇ ಮುಗುಳ್ನಕ್ಕಳು. ಕಾಫಿ ಮಾಡಿ ಕುಡಿಯುವಾಗಲೂ ಎಂಥದೋ ಲಹರಿಯಲ್ಲೇ ಇದ್ದಳು. ಹಾಲಿನ ಪಾತ್ರೆಯಲ್ಲಿದ್ದ ಕೆನೆಗೆ ಚೂರೇ ಅರಶಿನ ಬೆರೆಸಿ ಮುಖಕ್ಕೆ ಹಚ್ಚಿಕೊಂಡಳು. ಕೊರಳಿಗೆ ಹಚ್ಚುವಾಗ ಕಚಗುಳಿಟ್ಟಂತಾಗಿ ಅವನು ಮತ್ತೆ ನೆನಪಾದ. ಅರೆಕ್ಷಣವಾದರೂ ಮರೆತರೆ ತಾನೇ ನೆನಪಾಗುವುದು ಎಂದುಕೊಳ್ಳುತ್ತಿರುವಾಗಲೇ ಒಡನೆಯೇ ನೋವಿನ ಎಳೆಯೊಂದು ಹಣೆಯ ಮೇಲೆ ಕಂಡೂ ಕಾಣದಂತೆ ಹಾದುಹೋಯಿತು. ರಾಧೆಯಾಗಿಯೋ, ಗೋಪಿಯಾಗಿಯೋ ನೀಲಮೇಘಶ್ಯಾಮನ ಬಾನ್ಸುರಿಯ ಹಾಡಿಗೆ ನವಿಲಾಗಿ ನರ್ತಿಸಬೇಕಾದವಳು ಈಗಲೇ ಮೀರಾಳ ಹಾಗೆ ಭಜನ್ ಮಾಡತೊಡಗಿದ್ದೇನೆಯೇ ಎಂದು ಗೊಂದಲಕ್ಕೊಳಗಾದಳು.

ಅವಳಿಗೆ ಅಕ್ಕನ ವಚನಗಳೆಂದರೆ ಪ್ರಿಯ.

ಅರಸಿನವನೆ ಮಿಂದು ಹೊನ್ನುಡಿಗೆಯನೆ ತೊಟ್ಟು
ಪುರುಷ ಬಾರಾ ಪುರುಷ ರೂಪವೇ ಬಾರಾ
ನಿನ್ನಬರುವೆನ್ನಸುವಿನ ಬರುವು ಬಾರಯ್ಯಾ

ವಚನದ ಶಬ್ದಗಳು ಅವಳಿಗೆ ಸರಿಯಾಗಿ ನೆನಪಿಲ್ಲ. ಆದರೆ ಮೊದಲ ಬಾರಿ ಈ ಪದ್ಯ ಓದಿದಾಗಲೇ ಅವಳು ಸೋತು ಹೋಗಿದ್ದಳು, ಅಕ್ಕನ ಆ ಉತ್ಕಟ ಪ್ರೇಮನಿವೇದನೆಯ ಪರಿಗೆ. ಈ ಜಗದಲ್ಲೇ ಇಲ್ಲದ ಚೆನ್ನಮಲ್ಲಿಕಾರ್ಜುನನಿಗಾಗಿ ಆಕೆ ಪರಿತಪಿಸುವುದು ವಿಶೇಷವಾಗಿ ಕಂಡಿತ್ತವಳಿಗೆ. ನಿನ್ನ ಬರುವು ಎಂದರೆ ನನ್ನ ಹೋದ ಪ್ರಾಣ ಮರಳಿದಂತೆ ಎಂದು ತನ್ನಿಂದ ಅನ್ನಿಸಿಕೊಳ್ಳುವ ವ್ಯಕ್ತಿ ಎಲ್ಲಿರಬಹುದು ಏನು ಮಾಡುತ್ತಿರಬಹುದು  ಎಂದು ಕನಸುತ್ತಿದ್ದಳು. ಆ ಕನಸಿಗೆ ಮೂರ್ತರೂಪ ತಂದುಕೊಟ್ಟವನು ಬಂದಮೇಲೆ ಪುರುಷ ಬಾರಾ ಪುರುಷರೂಪವೇ ಬಾರಾ ಎನ್ನುವಾಗಲೆಲ್ಲ ಸಣ್ಣಗೆ ಮೈ ನಡುಗಿ ಇದ್ದಕ್ಕಿದ್ದಂತೆ ದನಿ ಕಿರಿದುಗೊಳಿಸಿಬಿಡುತ್ತಿದ್ದಳು. ಅಕ್ಕನ ವಚನವಾಗಿದ್ದಾಗ ಸರಾಗವಾಗಿ ಹೊರಡುತ್ತಿದ್ದ ಪದಗಳು ಸ್ವಂತಕ್ಕಾದ ಮೇಲೆ ನಾಚಿಕೆಯಿಂದ ಅಡಗಿ ಕೂರುತ್ತಿದ್ದವು.

ಇನ್ನೂ ಹೆಚ್ಚು ಆಲಸಿಯಾಗಿದೆ ಇವತ್ತು ಗಡಿಯಾರ. ಎಷ್ಟು ಸತಾಯಿಸುತ್ತೀ ನನ್ನ? ಸಂಜೆಯವರೆಗೆ ಸತಾಯಿಸಬಹುದು ಅಷ್ಟೇ ತಾನೇ ಎನ್ನುತ್ತ ಓರೆಗಣ್ಣಿನಲ್ಲಿ ಅದನ್ನು  ನೋಡಿ ಮೂಗು ಕೊಂಕಿಸಿದಳು. ಮಧ್ಯಾಹ್ನಕ್ಕೆ ಅಡಿಗೆ ಮಾಡುವ ಬದಲು ಏನಾದರೊಂದು ವಿಶೇಷ ಮಾಡಲು ಯೋಚಿಸಿದಳು. ತಟಕ್ಕನೇ ನೆನಪಾದದ್ದು ಅವನೇ ಕಳಿಸಿದ ಗ್ರೀಟಿಂಗ್ ಕಾರ್ಡ್. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮದ ರೂಪ ಪಡೆದುಕೊಳ್ಳುತ್ತಿರುವ ಸಮಯದಲ್ಲಿ ಕಳಿಸಿದ್ದು. ಅವಳಿಗೆ ಎಲ್ಲವೂ ನೆನಪಿದೆ. ಎಲ್ಲ ಭರವಸೆಗಳೂ ಎಲ್ಲವೂ….ಎರಡು ಭಾಗ ಶುದ್ಧ ನಂಬಿಕೆ ಮತ್ತು ಕರುಣೆ, ಒಂದು ಕಪ್ ಸುಂದರ ನೆನಪುಗಳು, ಹೊಸದಾದ ತಾಜಾ ಒಳನೋಟ, ಒಂದು ದೊಡ್ಡ ಚಮಚ ನಗು, ಜೀವನದ ಅನುಭವ ಇವು ಬೇಕಾದ ಸಾಮಗ್ರಿಗಳು. ನಂಬಿಕೆ ಮತ್ತು ಕರುಣೆಯನ್ನು ಮಿಶ್ರ ಮಾಡಿ, ಸುಂದರ ನೆನಪುಗಳ ಜತೆ ಚೆನ್ನಾಗಿ ತಿರುಗಿಸಬೇಕು. ತಾಜಾ ಒಳನೋಟವನ್ನು ಮಿಶ್ರಣ ಮಾಡಬೇಕು. ನಗುವನ್ನು ಮೇಲೆ ಚಿಮುಕಿಸಿ ಜೀವನದ ಅನುಭವವೆಂಬ ಸಣ್ಣ ಉರಿಯ ಮೇಲಿರಿಸಬೇಕು. ಇಲ್ಲಿಗೆ ಅಡುಗೆ ರೆಡಿ. ಇಬ್ಬರು ಸ್ನೇಹಿತರಿಗೆ ಜೀವನಪೂರ್ತಿ ಬಡಿಸುವ ಅಡುಗೆ. ಆಹ್, ಕೇಳಲು ಎಷ್ಟು ಚೆನ್ನಾಗಿದೆ? ನಿಟ್ಟುಸಿರಿಟ್ಟಳು. ಇಂತಹ ಮಾತು ಪತ್ರಗಳೊಂದಿಗೆ ಇಡೀ ಬದುಕನ್ನೇ ಅವನೊಂದಿಗೆ ಕಳೆದುಬಿಡಬಹುದೆಂದು ಅಂದುಕೊಂಡಿದ್ದು ನೆನಪಾಗಿ ಅದು ತನ್ನ ಮೂರ್ಖತನವೋ ಅಥವಾ ಪಲ್ಲವಿ ಹೇಳಿದ ಹಾಗೆ ಎಲ್ಲ ಸಂಬಂಧಗಳ ಕಹಿ ಕೊನೆಯೋ ಇನ್ನೂ ಅರ್ಥವಾಗದಿರುವುದಕ್ಕೆ ಯಾಕೋ ಕಿರುನಗು ಮೂಡಿತು. ಮೊನ್ನೆ ಊರಿಗೆ ಹೋದಾಗ ಕೆರೆಯಲ್ಲಿ ಹುಡುಗರಿಬ್ಬರು ಮುಳುಗಿ ಸತ್ತಿದ್ದರು. ಆಗ ಪಕ್ಕದ ಮನೆಯ ಗೌರಜ್ಜಿ ಈ ಬದುಕೇ ಹೀಗೆ ಅರ್ಥಾನೇ ಆಗಲ್ಲ ಎನ್ನುತ್ತಿದ್ದುದು ನೆನಪಾಗಿ ತೊಂಭತ್ತರ ಅಜ್ಜಿಗೇ ಅರ್ಥವಾಗದ್ದು ತನಗೇನು ಅರ್ಥವಾದೀತು ಎಂದುಕೊಂಡಳು.

ಜಗತ್ತಿನಲ್ಲಿ ಅತ್ಯಂತ ಕಷ್ಟದ ಕೆಲಸವೆಂದರೆ ಕಾಯುವುದೇ ಇರಬೇಕು. ಆದರೆ ಇಷ್ಟವಿಲ್ಲದವರ ಜತೆ ಗಂಟೆಗಟ್ಟಲೆ ಸಮಯ ಕಳೆಯುವುದಕ್ಕಿಂತ ಬೇಕಾದವರ ಹಾದಿ ಕಾಯುವುದರಲ್ಲೇ ಹಿತವಿದೆಯಲ್ಲವೇ? ಖ್ಯಾತ ವಿಜ್ಞಾನಿ ಐನ್ ಸ್ಟೀನ್‌ರನ್ನು ಅವರ ರಿಲೇಟಿವಿಟಿ ಥಿಯರಿಯನ್ನು ವಿವರಿಸುವಂತೆ ಕೇಳಿದಾಗ ಅವರೆಂದಿದ್ದರಂತೆ: ನೀವು ಒಬ್ಬ ಸುಂದರ ಹುಡುಗಿಯ ಜತೆ ಒಂದು ಗಂಟೆ ಮಾತಾಡಿದರೂ ಒಂದೇ ನಿಮಿಷ ಎನಿಸುತ್ತದೆ; ಅದೇ ಬಿಸಿ ಸ್ಟವ್ ಮೇಲೆ ಒಂದೇ ನಿಮಿಷ ಕೂತರೂ ಒಂದು ಗಂಟೆ ಕಳೆದಂತೆನಿಸುತ್ತದೆ. ಹಾಗೆಯೇ ಇವನ ಕಾಯುವಿಕೆಯೂ ತನಗೆ ಪ್ರಿಯವಾದದ್ದೇ ಎಂದುಕೊಂಡಳು. ಅರೇ ಎಲ್ಲರೂ ವಿರಹ ದುಃಖದ್ದೆಂದರೆ ತಾನು ಬೇರೆಯೇ ಆಗಿ ಯೋಚಿಸುತ್ತಿದ್ದೇನಾ ಗೊಂದಲಕ್ಕೊಳಗಾದಳು. ಚಲನಚಿತ್ರ ಗೀತೆಗಳಲ್ಲಿ ಮೀಠೀ ದರ್ದ್ ಅಥವಾ ಸಿಹಿಯಾದ ನೋವು ಅಂದಹಾಗೆ ಅಲ್ಲವೇ?

ಎಷ್ಟು ಸಿಹಿ ಇದ್ದರೂ ಅದು ನೋವೇ. ಹಾಗಾಗಿ ಕೆಲಕಾಲ ಮಾತ್ರ ಖುಷಿ ಕೊಡಬಹುದು. ಬಹುಕಾಲ ಅಲ್ಲ. ನಾಳೆ ಆತ ವಿಮಾನ ಹತ್ತುತ್ತಾನೆ. ಕಳೆದವಾರ ಆತ ಮೂರು ತಿಂಗಳ ಮಟ್ಟಿಗೆ ಜರ್ಮನಿಗೆ ಹೋಗಬೇಕೆಂದು ಹೇಳಿದಾಗಿನಿಂದ ತನ್ನ ಅಸಮಾಧಾನ ಸ್ಪಷ್ಟವಾಗಿಯೇ ತನ್ನ ನಡೆನುಡಿಗಳಲ್ಲಿ ಕಾಣುತ್ತಿದೆ. ಅವನ ಯಾವ ಮನಾಯಿಸುವಿಕೆಗೂ ಬಗ್ಗದ ಹಠವೇ? ಹಾಗನ್ನುತ್ತಾನವನು. ಅವನಿಗೇನು, ತುಂಡುಡುಗೆಯ ಬಿಳಿ ಚೆಲುವೆಯರು ಸುತ್ತ ಇರುತ್ತಾರಲ್ಲವೇ ಎಂದರೆ ಕೆನ್ನೆ ಗುಳಿ ಕಂಡೂ ಕಾಣದಂತೆ ನಗುತ್ತಾನೆ ಕಳ್ಳ! ಅವನನ್ನು ಬಿಟ್ಟಿರಬೇಕೆಂಬ ನೋವಿಗೆ ತಾನೇ ಈ ಕೋಪ? ಮೊನ್ನೆ ಅವನು ಮನೆಗೆ ಬರುವುದು ತುಂಬ ತಡವಾದಾಗ ಫೇಸ್ ಬುಕ್‌ಗೆ ಸ್ಟೇಟಸ್ ಅಪ್‌ಡೇಟ್ ಮಾಡಿದ್ದಳು:

ನಿನ್ನ ನೆನಪಲ್ಲಿ ಸುಡುತ್ತಿದ್ದೇನೆ
ಭಸ್ಮವಾಗಬಲ್ಲೆ
ಆದರೆ ತಣಿಯಲೊಲ್ಲೆ

ಓಹ್, ಶಬ್ದಗಳು ಎಷ್ಟೆಂದು ಸಾಂತ್ವನ ಹೇಳಿಯಾವು? ಹೊತ್ತಿ ಉರಿವ ತೈಲ ಬಾವಿಯ ವರ್ಷಗಟ್ಟಲೆ ಆರದ ಬೆಂಕಿಯಂತೆ ವಿರಹದ ನೋವು ಕೂಡ. ನಿಟ್ಟುಸಿರಿಟ್ಟಳು.

ಇಂದು ಬೇಗ ಬರುತ್ತಾನೆ ಅವನು. ಕೋಪ ಗೀಪ ಎಲ್ಲ ಬಿಟ್ಟು ಇದ್ದಕ್ಕಿದ್ದಂತೆ ತನ್ನಿಂದಲೇ ಹೊತ್ತಿಕೊಂಡ ಕಿಡಿಯನ್ನು ಇವತ್ತು ತನ್ನ ಪ್ರೀತಿಯ ಆರ್ದೃತೆಯಿಂದ ಆರಿಸಿಬಿಡುತ್ತೇನೆ ಕಣೋ, ಪ್ಲೀಸ್ ಬೇಗ ಬಾ ಎಂದು ಪ್ರಾರ್ಥಿಸಿಕೊಳ್ಳುತ್ತ ಮಿಸ್ಸಿಂಗ್ ಯೂ ಎಂದು ಮೆಸೇಜ್ ಕಳಿಸಿ ಕರೆಗಂಟೆಯ ಸದ್ದಿಗಾಗಿ ತನ್ನ ಕಿವಿಗಳು ಎಂದೆಂದೂ ಈ ರೀತಿ ಕಾತರವಾಗಿರಲಿಲ್ಲವೇನೋ ಎಂದು ಧ್ಯಾನದಲ್ಲೆಂಬಂತೆ ಕಾಯುತ್ತ ಕೂತಳು.

ಮಾಯೆ ಎಂಬ ಸುರಸುಂದರಿ…

ನೋಡುವ ಬೆಡಗು | ದೀಪಾ ಫಡ್ಕೆ

ವನೊಬ್ಬನಿದ್ದ; ಉತ್ಕಟ ಪ್ರೇಮಿ. ಅರೆಗಳಿಗೆಯೂ ಸುಂದರಿ, ಚಿಕ್ಕಪ್ರಾಯದ ಚದುರೆ, ಪ್ರಿಯಪತ್ನಿಯನ್ನು ಬಿಟ್ಟಿರಲಾರ. ಕಾಳರಾತ್ರಿಯಲ್ಲಿ, ಭೋರೆಂದು ಸುರಿಯುತ್ತಿದ್ದ ಕುಂಭದ್ರೋಣ ಮಳೆಯಲ್ಲಿ ನೆನೆಯುತ್ತಾ, ತುಂಬಿ ಹರಿಯುತ್ತಿದ್ದ ನದಿಯನ್ನು ಈಜಿಕೊಂಡು ದಾಟಿ, ಮುಚ್ಚಿದ ಬಾಗಿಲ ಮನೆಯ ಮಹಡಿಯಿಂದ ಇಳಿಬಿದ್ದಿದ್ದ ಹಾವನ್ನು ಹಗ್ಗವೆಂದು ತಿಳಿದು, ಹಿಡಿದುಕೊಂಡು ಹತ್ತಿ ಹೋಗಿ ಮನದರಸಿಯನ್ನು ಕೂಡಿದ. ಹುಚ್ಚು ಪ್ರೀತಿಯಲ್ಲಿ ಕೊಚ್ಚಿಹೋದವನನ್ನು ಸೆಳೆದದ್ದು ಪ್ರೀತಿಯಲ್ಲ, ಪ್ರೀತಿಯೆಂಬ ಮಾಯೆ.

ಇವನೊಬ್ಬನಿದ್ದ; ಜಿಪುಣ ವ್ಯಾಪಾರಿ. ಸಾಮಾನ್ಯ ವ್ಯಾಪಾರಿಯಲ್ಲ, ಅಪ್ಪಟ ಮುತ್ತಿನ ವ್ಯಾಪಾರಿ. ಎಂಜಲು ಕೈಯಲ್ಲಿ ಕಾಗೆಯನ್ನೂ ಓಡಿಸದವ. ಕಾಸಿಗೆ ಕಾಸು ಗಂಟು ಹಾಕುವುದರಲ್ಲೇ ಸ್ವರ್ಗಸುಖ ಕಾಣುತ್ತಿದ್ದ ಚಿನಿವಾರ. ಬದುಕಿರೋದೇ ಧನ ಸಂಗ್ರಹಕ್ಕೆ ಎಂದು ಕೂಡಿ ಕೂಡಿ ಬದುಕುತ್ತಿದ್ದವನನ್ನು ಆಡಿಸಿದ್ದು ಕಾಂಚಾಣವಲ್ಲ, ಕಾಂಚಾಣವೆಂಬ ಮಾಯೆ.

ಮತ್ತೊಬ್ಬನಿದ್ದ…ದೊರೆ, ದೊರೆಯೆಂದರೆ ಅಂತಿಂಥಾ ದೊರೆಯಲ್ಲ. ಚಕ್ರವರ್ತಿ. ಭೂಮಂಡಲವನ್ನೇ ತನ್ನ ಮುಷ್ಠಿಯಲ್ಲಿರಿಸಿಕೊಳ್ಳಬೇಕೆಂದು, ಮಹತ್ವಾಕಾಂಕ್ಷೆಯಿಂದ ಯುದ್ಧದ ಮೇಲೆ ಯುದ್ಧ ಸಾರುತ್ತಾ ಜೀವವಿರೋಧಿಯಾಗುತ್ತಿದ್ದವನನ್ನು ನಿಜವಾಗಿ ಆಳುತ್ತಿದ್ದದ್ದು ಮಾತ್ರ ಅಧಿಕಾರ, ಯಶಸ್ಸೆನ್ನುವ ಮಾಯೆ. ಅಬ್ಬಾ ಈ ಮಾಯೆಯೇ? ಇವಳದ್ದು ರಾಕ್ಷಸ ತೋಳುಗಳು, ಎಲ್ಲರನ್ನು ನಾನಾ ರೂಪದಲ್ಲಿ ತನ್ನ ಮಡಿಲಿಗೆ ಸೆಳೆದುಕೊಳ್ಳುತ್ತಾಳೆ. ಯಾರಿವಳು..ಮಾಯೆ?

ನಿಲ್ಲೇ..ನಿಲ್ಲೇ.. ಎಂದವರಿಗೆ ನಿಲ್ಲದೆ, ಹಿಂದೆ ಹೋದವರ ಕೈಗೂ ಸಿಗದೆ ಮೋಹಿನಿಯಂತೆ ತಿಲ್ಲಾನದ ತಾಳಕ್ಕೆ ಕುಣಿಸುತ್ತಿದ್ದಾಳೆ….ಕುಣಿಸುತ್ತಲೇ ಇರುತ್ತಾಳೆ ಈ ಮಾಟಗಾತಿ ಮಾಯಾಂಗನೆ. ಸುರೆ ಕುಡಿದ ಮರ್ಕಟದಂತೆ ಮನುಷ್ಯ ಕುಣಿಯುತ್ತಲೇ ಇರುತ್ತಾನೆ. ಎಲ್ಲ ಮುಗಿದು ಕೊನೆಗೆ ಸೋತು ಸುಣ್ಣವಾಗಿ ಬಿದ್ದಾಗ, ಈ ಹುಲುಮಾನವ, `ನನ್ನನ್ನು ಈಕೆ ಕುಣಿಸಿದಳು’ ಎಂದು ಮಾಯೆಯನ್ನೇ ದೂಷಿಸುತ್ತಾನೆ. ಮನುಷ್ಯನ ಸೋಲು ಗ್ರಹಿಸಿದ ತಕ್ಷಣ ಮಾಯೆ ವಿಕಟನಗೆ ನಗುತ್ತಾ ಇನ್ನೊಂದು ಮನುಷ್ಯಜೀವಿಯನ್ನು ಹುಡುಕಿಕೊಂಡು ಹೋಗುತ್ತಾಳೆ. ಎಷ್ಟೆಂದರೂ ಮಾಯೆ ಚಲನಶೀಲೆ. ನಿಂತಲ್ಲಿ ನಿಲ್ಲಲಾರಳು. ಹೀಗೆ ತುಲಸಿದಾಸ, ಪುರಂದರದಾಸ ಮತ್ತು ಅಶೋಕ ಚಕ್ರವರ್ತಿಯನ್ನು ಸಮ್ಮೋಹನಗೊಳಿಸಿದವಳೇ ಮಾಯೆ. ಒಂದರ್ಥದಲ್ಲಿ ಮಾಯೆಯ ಮಡಿಲಿಂದ ಬಿದ್ದ ಕೂಸುಗಳಿವರು. ಒಮ್ಮೆ ತನ್ನತ್ತ ಸೆಳೆದುಕೊಂಡು ತನಗೆ ಬೇಕಾದಂತೆ ಆಡಿಸಿ, ಮತ್ತೆ ಕನಿಕರದಿಂದ ಬೀಸಿ ಒಗೆದಳು ಮೂವರನ್ನೂ… ಮೂರು ಶುದ್ಧಾತ್ಮಗಳ ಜನನವಾಯಿತು. ಹಾಗಾದರೆ….ಯಾರಿವಳು,….. ಇವಳು ಮಾಯೆ. ಮನಸ್ಸಿನ ಸಾಮ್ರಾಜ್ಯದ ಅನಭಿಷಿಕ್ತ ಮಹಾರಾಣಿ. ಇವಳಿಗೆ ಮನದ ಮಾಯೆಯೆಂದೂ ಕರೆಯುತ್ತಾರೆ. ಮಾಯೆಯನ್ನು ಸ್ತ್ರಿಲಿಂಗಕ್ಕೆ ಕಟ್ಟುಹಾಕಿದುದರ ಹಿಂದೆ ಅಂಥಾ ಬೇರೇನೂ ಹುನ್ನಾರವಿಲ್ಲದಿದ್ದರೂ ಮನುಷ್ಯತ್ವವನ್ನು ಪುರುಷನೆಂದು ಕರೆಯುವ ಸಂಪ್ರದಾಯವಿರುವ ಭೂಮಂಡಲದಲ್ಲಿ ಮನುಷ್ಯತ್ವವನ್ನೇ ಬುಡಮೇಲು ಮಾಡುವವಳು ಪ್ರಕೃತಿ(ಸ್ತ್ರಿ) ಎಂದು ನಿರ್ಧರಿಸಿರಬೇಕು. ಭೂಮಿ ಮೇಲೆ ಹಕ್ಕು ಸ್ಥಾಪಿಸಲು ನಿರಂತರವಾಗಿ, ಉಸಿರಿರೋ ತನಕ ಹೋರಾಡುವವನು ಪುರುಷನೇ. ಇವನನ್ನೇ ಮೂಗುದಾರ ಹಾಕಿ ಆಡಿಸಿ ಬೀಳಿಸಿ ನೋಡುವವಳು ಪ್ರಕೃತಿ. ಇಂತಿಪ್ಪ ಪ್ರಕೃತಿಯೇ ಮಾಯೆ.

ಭ್ರಾಂತಿಯ ತತ್ತ್ವವೇ ಮಾಯೆ. ಬುದ್ಧಿಗೆ ಪರೆ ಮೂಡುವುದೇ ಮಾಯೆ. ಈ ಮಾಯೆ ಬಲು ಮೋಸಗಾತಿ. ಸತ್ಯದರ್ಶನದ ದಾರಿಯಲ್ಲಿ ಈಕೆಯದ್ದು ದೊಡ್ಡ ತಡೆ. ಇಂಥ ಮಾಯೆಗೆ ಆರು ರೂಪಗಳು. ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹ. ಒಂದಕ್ಕಿಂತ ಒಂದು ಮೈಮರೆಸುವಂಥ ರೂಪಗಳು. ಇಷ್ಟೆ ಅಲ್ಲದೆ ಹತ್ತಾರು ಉಪರೂಪಗಳು. ಯಾವಾಗ ಯಾವ ರೂಪ ಧರಿಸಿ ಬರುತ್ತಾಳೆಂದೇ ತಿಳಿಯದು ಈ ಮಾಟಗಾತಿ. ಹರಿನಾಮವನ್ನೇ ಉಸಿರಾಡುತ್ತಿದ್ದ ತ್ರಿಲೋಕ ಸಂಚಾರಿ ನಾರದನೂ ಈಕೆಯ ವಶವಾಗಿದ್ದ ಅಂದರೆ ಮಾಯೆಯ ಶಕ್ತಿ ಎಂಥಹುದು ಅನ್ನುವ ಅರಿವಾಗುತ್ತದೆ.

ಗೀತೆ, ಭಾಗವತ, ಅದ್ವೈತ, ದ್ವೈತ, ಶರಣಸಾಹಿತ್ಯ, ಹರಿದಾಸಸಾಹಿತ್ಯ ಎಲ್ಲದರಲ್ಲೂ ಮಾಯೆಯ ಪ್ರಸ್ತಾಪವಿದೆ. ಅವಳಿಲ್ಲದ ಜಾಗವಿಲ್ಲ. ಅವಳು ಮುಟ್ಟದ, ತಟ್ಟದ ಮನಸ್ಸಿಲ್ಲ. ಮನದ ಬಾಗಿಲ ಸಂದಿಯಿಂದ ಒಳ ನುಗ್ಗಿ ಸಂಪೂರ್ಣವಾಗಿ ಆಕ್ರಮಿಸಿ ಕೋಲಾಹಲ ಆರಂಭಿಸಿಯೇ ಬಿಡುವಳೀ ಭಯಂಕರಿ. ಅನುಭಾವಿ ಅಲ್ಲಮನೆನ್ನುತ್ತಾನೆ…

ದೇವರೆಲ್ಲರ ಹೊಡೆತಂದು ದೇವಿಯರೊಳಗೆ ಕೂಡಿತ್ತು ಮಾಯೆ
ಹರಹರಾ, ಮಾಯೆ ಇದ್ದೆಡೆಯ ನೋಡಾ
ಶಿವಶಿವಾ, ಮಾಯೆ ಇದ್ದೆಡೆಯ ನೋಡಾ

ಅಲ್ಲಮ ವಚನದಲ್ಲಿ ಮಾಯೆಯೆನ್ನುವುದು ಸಮರ್ಥವಾದುದು. ಸರ್ವಶಕ್ತವಾದುದು. ಅದಿಲ್ಲದ ಜಾಗವಿಲ್ಲ, ಸ್ಥಾನವಿಲ್ಲ. ಅದು ಮಾಡದಿರುವ ಕಾರ್ಯವಿಲ್ಲ. ಅದು ಪ್ರವೇಶಿಸದ ಮನಸ್ಸಿಲ್ಲ ಎಂದಿದ್ದಾನೆ. ಅಲ್ಲದೆ ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮಾಯೆಯೇನಿದ್ದರೂ ಅದು ಮನದ ಆಸೆಯೆಂದು ಹೇಳಿದ್ದಾನೆ. ಕಬೀರನೆನ್ನುತ್ತಾನೆ..

ಜಾಣೌಂ ಜೇ ಹರಿ ಕೌಂ ಭಜೌಂ, ಭೋ ಮನಿ ಮೋಟಿ ಅಸ
ಹರಿ ಬಿಚಿ ಘಾಲೈ ಅಂತರಾ, ಮಾಯಾ ಬಡೀ ಬಿಸಾಸ

ಹರಿನಾಮ ನುಡಿದಿದೆ ಜಿಹ್ವೆ, ಮನದಿ ನಡೆದಿದೆ ಮಾಯೆಯಾಟ, ಈ ಮಾಯಾಂಗನೆ ನನ್ನನ್ನು ಹರಿಯಿಂದ ದೂರ ಮಾಡಿದೆ, ಮಾಯೆಗಿದುವೆ ಚೆಲ್ಲಾಟ. ಚೆಲ್ಲಾಟ ಆಡುವುದೇ ಮಾಯೆಯ ಸಹಜ, ಹುಟ್ಟುಗುಣ. ಮಾಯೆ, ಮನುಷ್ಯನ್ನು ಸಾಮಾನ್ಯ ಅವಸ್ಥೆಗೆ ತಳ್ಳುತ್ತಾಳೆ. ಇಲ್ಲಿ ಸಾಮಾನ್ಯ ಎಂದರೆ ಲೌಕಿಕಕ್ಕೆ ಹತ್ತಿರವಾದ ಬದುಕು. ಕಬೀರ ಹೇಳುತ್ತಾನೆ: ಮಾಯೆ ಮನುಷ್ಯನನ್ನು ಧನಾರ್ಜನೆಗೆ ಒಡ್ಡಿ, ಅದನ್ನು ಕಾಪಾಡುವ ಮೋಹ, ಲೋಭವನ್ನೂ ಬಿತ್ತುತ್ತಾಳೆ.

ಜಗ ಹಟವಾಡಾ ಸ್ವಾದ ಠಗ, ಮಾಯಾ ಬೇಸಾ ಲಾ‌ಇ
ರಾಮಚರನ ನೀಕಾಂ ಗಹೀ, ಜಿನಿ ಜಾ‌ಇ ಜನಮ ಠಗಾಯಿ

ಜಗವು ಸಂತೆ, ರುಚಿಯೆ ಠಕ್ಕು, ಮಾಯೆಯು ಹೌದು ಬೆಲೆವೆಣ್ಣು, ರಾಮಚರಣ ಬಲವಾಗಿ ಹಿಡಿ ಅಗದಿದ್ದಲ್ಲಿ ಜನ್ಮ ಮಣ್ಣು(ನಿರರ್ಥಕ). ಇವಳು ಪ್ರತಿಯೊಬ್ಬರ ಮಡಿಲಲ್ಲಿ ಸ್ಥಾಪನೆಯಾಗುತ್ತಾಳೆ. ಮೈ ಮರೆಸುವಂತೆ ನಗುತ್ತಾಳೆ. ಶುದ್ಧ ಅಣಕದ ನಗುವದು, ಬಿದ್ದೆ ನೀ ಬಿದ್ದೆ ಎಂದು ಎಚ್ಚರಿಸುವ ನಗು. ಆ ನಗುವಿಗೆ ಮಾರು ಹೋದವ ತೇಲಿ ಹೋಗುತ್ತಾನೆ. ನಗುವಿನಲ್ಲಿ ಮುಳುಗೇಳುತ್ತಾ ಸುಖ ಅನ್ನು ಸುಳ್ಳು ಮುಖವಾಡದೊಳಗೆ ಹೂತು ಹೋಗುತ್ತಾನೆ. ಅಷ್ಟಾದ ಮೇಲೆ ಮಾಯೆ ಅಲ್ಲಿಂದ ಇನ್ನೊಂದು ತೆಕ್ಕೆಗೆ ಜಾರುತ್ತಾಳೆ ಎಂದು ಕಬೀರ ಎಚ್ಚರಿಸುತ್ತಾನೆ. ಎಚ್ಚರ ತಪ್ಪುವುದು ಮನುಷ್ಯ ಗುಣವಲ್ಲವೇ?

ಹರಿದಾಸರಲ್ಲೆ ಏಕೈಕ ಕವಿ ಕನಕದಾಸರು ಅಸಹಾಯಕರಾಗಿ ನಿವೇದನೆ ಮಾಡುತ್ತಾರೆ.

ಮಾಯಾಪಾಶದ ಬಲೆಯೊಳಗೆ ಸಿಲ್ಕಿರುವಂಥ
ಕಾಯ ಪಂಚೇಂದ್ರಿಯಂಗಳು ನಿನ್ನವು
ಮಾಯಾರಹಿತ ಕಾಗಿನೆಲೆಯಾದಿ ಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೆ

ಭಗವಂತನ ವಿರಾಟ್ ಶಕ್ತಿಯ ಮುಂದೆ ಮನುಷ್ಯ(ಭಕ್ತ) ತೀರಾ ಕುಬ್ಜನಾಗುತ್ತಾನೆ. ಶರೀರ ನಿನ್ನದಾಗಿರುವಾಗ ಶರೀರದ ಲೋಪದೋಷಗಳು ನಿನ್ನವೇ ಎಂದು ಹರಿಯನ್ನೇ ಹೊಣೆಯಾಗಿಸುತ್ತಾರೆ. ಭಕ್ತಿಯ ಒಂದು ರೂಪವಿದು. ಭಕ್ತನಿಗೆ ಮಾತ್ರ ಈ ಧೈರ್‍ಯ ಮೈಗೂಡುವುದು. ಮತ್ತೆ ಮುಂದೆ ಕನಕದಾಸರು “ನೀ ಮಾಯೆಯೋ, ನಿನ್ನೊಳು ಮಾಯೆಯೋ” ಎಂದು ಭ್ರಮಾಧೀನರಾದವರಂತೆ ಹರಿಯನ್ನೇ ಶಬ್ದವ್ಯೂಹ ರಚಿಸಿ ಸಂದೇಹಿಸುತ್ತಾರೆ. ಭಾಗವತದಲ್ಲಿ ಹೇಳಿರುವುದೂ ಇದೇ. ಭಗವಂತನೇ ಈ ನಿಗೂಢ ಮಾಯಾಶಕ್ತಿಯನ್ನು ಪ್ರಯೋಗಿಸುವ ಸೂತ್ರಧಾರಿಯೆಂದು. ಬಂಧನ ಮತ್ತು ಮೋಕ್ಷ ಮಾಯೆಯ ಕ್ಷೇತ್ರಕ್ಕೆ ಒಳಪಟ್ಟಿವೆ. ಬಂಧನ ಎನ್ನುವುದು ಅಶುದ್ಧ(ಹೊಲಸು) ಮನಸ್ಸಿನಿಂದಲೂ, ಬಿಡುಗಡೆ(ಮೋಕ್ಷ) ಪರಿಶುದ್ಧ ಮನಸ್ಸಿನಿಂದಲೂ ಪ್ರಾಪ್ತವಾಗುತ್ತದೆ.
ಮನುಷ್ಯ ಸ್ವಭಾವತಃ ಒಳಿತು ಕೆಡುಕಿನ ಮಿಶ್ರಣ. ದೇವ ದಾನವರು(ಸ್ವಭಾವದಲ್ಲಿ) ಮನಃಸಾಗರದಲ್ಲಿ ಮಥನ ಆರಂಭಿಸುತ್ತಾರೆ. ಮಜ್ಜಿಗೆ ಕಡೆದಂತೆ, ಕಡೆಯೋದು ಕೆಡೆಯೋದು ಮಾನವ ಗುಣ. ಈ ಯುದ್ಧ ಯಾವಾಗ ಆರಂಭವಾಯಿತೋ, ನಿಲ್ಲುವ ಲಕ್ಷಣಗಳಿಲ್ಲ. ನಿಂತರೆ ಸೃಷ್ಟಿಯೆ ನಿಂತು ಹೋದೀತು. ಇಷೆಲ್ಲಾ ಹೇಳಿದ ಮೇಲೆ, ಒಂದು ಪ್ರಶ್ನೆ ಉದ್ಭವಿಸುತ್ತದೆ. ಮಾಯೆ ಕೆಟ್ಟವಳೇ?….ಯಾಕೆ…ಮಾಯೆ ಯಾಕೆ ಕೆಟ್ಟವಳಾಗಬೇಕು? ಆಕೆ ಯಾರನ್ನೂ ನನ್ನ ತೆಕ್ಕೆಗೆ ಬಾ ಎಂದು ರಮಿಸಿಲ್ಲ, ಬಲವಂತ ಮಾಡಿಲ್ಲ. ಆದರೆ ಆಕೆಗೊಂದು ನೆಲೆ ಬೇಕು. ಹಾಗೆಯೇ ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು ಎನ್ನುವ ಕವಿವಾಣಿಯಂತೆ….ಈ ಮಾಯೆ ಎಲ್ಲಿಯೂ ಶಾಶ್ವತವಾಗಿ ನೆಲೆ ನಿಲ್ಲಳು. ಮನುಷ್ಯನ ಪುಣ್ಯವದು. ಸಿಕ್ಕ ನೆಲೆಯಲ್ಲಿ ಸುರೆಯಂತೆ ಆಳಲಾರಂಭಿಸುತ್ತಾಳೆ, ಇವಳು ರಾಜ್ಯಲಕ್ಷೀ. ಅಜ್ಞಾನ, ಅವಿದ್ಯೆ ಯಾವತ್ತಿಗೂ ಆಳಿಸಿಕೊಳ್ಳಲೇ ಹುಟ್ಟಿದ್ದು.

ಮನುಷ್ಯನೊಂದಿಗೆ ಹುಟ್ಟಿದವಳು ಈ ಸುರಸುಂದರಿ ಮಾಯೆ. ಆದರೆ ಮನುಷ್ಯ ನಾಶಗೊಂಡರೂ ಈಕೆ ನಾಶವಾಗುವ ಲಕ್ಷಣಗಳಿಲ್ಲ. ಏಕೆಂದರೆ ಈಕೆಗೆ ವರದಾನವಿದೆ…..ನೀನು ಅಮರ, ಅಮರ..ಅಮರಳಾಗು ಎಂದು. ಹುಲುಮಾನವ ಏನು ಮಾಡಬಹುದು? ಉತ್ತರ ಸರಳ, ಸರಳ. ಈ ಮಾಯೆಯನ್ನು ತೆಕ್ಕೆಗೇರಿಸದೆ ಪಕ್ಕದಲ್ಲಿ ಕುಳ್ಳಿರಿಸಿ. ಹಾಗೆ ಆಕೆಯ ಉಪಸ್ಥಿತಿಯ ಸಂಪೂರ್ಣ ಲಾಭವನ್ನೂ ಜೀವನೋಪಾಯಕ್ಕೆ, ಸೃಷ್ಟಿಯ ನಿರಂತರ, ನಿರ್ವಿಘ್ನ ಚಲನೆಗೆ ಬೇಕಾಗುವಷ್ಟು ಬಳಸಿಕೊಂಡು, ಮನದಲ್ಲಿ ಬೇರೂರಲು ಅವಕಾಶ ನೀಡದೆ ನಿಶ್ಚಿಂತೆಯಿಂದ ಬದುಕಬಹುದು. ನಿಶ್ಚಿಂತೆಯ ಇನ್ನೊಂದು ಅರ್ಥ ಸ್ವತಂತ್ರ. ಸ್ವತಂತ್ರದ ಮುಂದುವರಿದ ಅರ್ಥ ಮುಕ್ತನಾಗುವುದು, ನೀಡುವುದು. ನೀಡುವುದು ಎಂದರೆ ಸಂತೋಷ. ಸಂತೋಷ ಎನ್ನುವುದು ಆನಂದ, ಮಹದಾನಂದ….ಇದು ಮಾಯೆಯ ನಗುವಲ್ಲವೇ? ಹೌದು, ಇದು ವ್ಯೂಹ. ಬಾಳವ್ಯೂಹ. ಹೀಗಾಗಿ ಮಾಯೆಯೆನ್ನುವುದು ಮನಸ್ಸಿನ ಒಂದು ಅವಸ್ಥೆ ಅಷ್ಟೆ. ಮಾಯೆಯೂ ಇರಲಿ, ಜೊತೆಗೆ ಜಾಗ್ರತಬುದ್ಧಿಯ ಬಲವಿರಲಿ. ಜಾಗ್ರತಾವಸ್ಥೆಯಲ್ಲಿ ಮಾಯೆಯ ಆಟ ನಡೆಯದು. ಸ್ವಲ್ಪ ನಡೆದರೂ ಹೆಚ್ಚು ದೂರ ನಡೆಯಲಾಗದು ಅವಳಿಂದ. ಮಾಯೆಯನ್ನೆ ಆಡಿಸಿಕೊಂಡೂ ಬದುಕು ಸಾಧ್ಯ. ಅಷ್ಟೂ ಮಾಯೆಯಿಲ್ಲದೇ ಹೋದರೆ ಈ ಭೂಮಿ ಪ್ರತಿಸ್ವರ್ಗವಾಗುವುದು. ಉಹುಂ…ನಮಗ್ಯಾರಿಗೂ ಪ್ರತಿಸ್ವರ್ಗದ ಅಗತ್ಯವಿಲ್ಲ. ಈ ಭೂಸ್ವರ್ಗವೇ ಸಾಕು.

‘ವಿಜಯವಾಣಿ’ ಪ್ರಕಟಿತ

ಸಮುದ್ರದೊಡನೆ ನೆಂಟಸ್ತಿಕೆಯಾದರೂ. . .

ದೀಪಾ ಹಿರೇಗುತ್ತಿ

ಸುಕಿನ ನಾಲ್ಕು ಗಂಟೆಗೇ ಎದ್ದು
ಕುಪ್ಪಸವಿಲ್ಲದ ನಡುಗುವ ಎದೆಯಲಿ
ಗದ್ದೆಯಂಚಿನುದ್ದಕ್ಕೂ ನಡೆದುಹೋಗುತ್ತಾರೆ
ಮಗನ ಸಿಂಬಳ ತೆಗೆವಷ್ಟೇ
ಜತನವಾಗಿ ಗಿಡದಿಂದ
ತರಕಾರಿ ಬಿಡಿಸಿ
ಪಾಟೀಚೀಲಕ್ಕೆ ಪುಸ್ತಕ ತುಂಬಿದಷ್ಟೇ
ಕಾಳಜಿಯಿಂದ ಮೂಟೆ ಕಟ್ಟುತ್ತಾರೆ. . .

ಈಜಿಪ್ಟಿನ ಕ್ರೂರ ಬರಗಾಲದಲ್ಲೋ
ಬೇಂದ್ರೆ ಮಾಸ್ತರರ ಒಕ್ಕಲಗೇರಿಯಲ್ಲೋ
ಮಕ್ಕಳ ಮಾರುವ ಅಮ್ಮಂದಿರಂತೆ
ಏಜೆಂಟರು ಹೇಳಿದ ರೇಟಿಗೆ
ತಮ್ಮ ತರಕಾರಿ ಚೀಲ ಒಪ್ಪಿಸುತ್ತಾರೆ ಮತ್ತು
ಗಟ್ಟಿಯಾಗಿ ಚೌಕಾಶಿ ಮಾಡಲಾಗದ್ದಕ್ಕೆ
ನಿಡುಸುಯ್ಯುತ್ತ ತಮ್ಮನ್ನು ತಾವೇ
ಶಪಿಸಿಕೊಳ್ಳುತ್ತಾರೆ. .

“ಗೋಕರ್ಣದ ಸ್ಪೆಷಲ್ ತರಕಾರಿ”
ಚೀಟಿ ಅಂಟಿಸಿಕೊಂಡ
ಬೆಂಡೆ ಬದನೆ ಬಸಲೆ ಎಲ್ಲವೂ
ನೂರಾರು ಮೈಲು ಸಾಗಿ
ಉಳ್ಳವರ ಮೇಜಿನ ಮೇಲೆ
ಪರಿಮಳ ಬೀರುತ್ತ ಉಣ್ಣುವವರನ್ನು ಕಾಯುತ್ತಿವೆ

ಗದ್ದೆಗೆ ಹೋಗಿ ತರಕಾರಿ ಗಿಡಗಳ
ಕಳೆ ಕಿತ್ತು ನೀರು ಹನಿಸಿ
ಸುಸ್ತಾಗಿದ್ದಾಳೆ ದೇವಮ್ಮ
ಗಂಜಿಯ ಜತೆ ನೆಂಚಿಕೊಳ್ಳಲು
ಒಣಮೀನಿನ ಚೂರು ಸುಡಲು
ಕೆಂಡ ಕೆದಕುತ್ತಿದ್ದಾಳೆ. . .

ನಾವೆಲ್ಲ ಹೀಗಿದ್ದರೆ…ಮಾನವೀಯ ಮೌಲ್ಯಗಳಿಗೆ ಕೊರತೆಯೆಲ್ಲಿ?

ಮಮತಾ ದೇವ

ಕೆಲವು ತಿಂಗಳ ಹಿಂದೆ ವಾಹಿನಿಯೊಂದರಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ  ಅಧ್ಯಕ್ಷೆ ಮತ್ತು ಲೇಖಕಿ ಸುಧಾ ಮೂರ್ತಿಯವರ ಸಂದರ್ಶನ ಪ್ರಸಾರವಾಗುತ್ತಿತ್ತು. ಸ್ವಲ್ಪವೂ ಕೃತಕತೆಯ ಲೇಪವಿಲ್ಲದೆ ಸಹಜವಾಗಿ ಮಾತನಾಡುವ ಸರಳ ವ್ಯಕ್ತಿ ಸುಧಾ ಮೂರ್ತಿಯವರು ಹೇಳಿದ ಮಾತು ಎಷ್ಟೊಂದು ಮಹತ್ವದ್ದು ಅನ್ನಿಸಿತು. “ಇಂದಿನ ದಿನಗಳಲ್ಲಿ ಪರಸ್ಪರ ನಂಬಿಕೆ, ಗೌರವ ಕಡಿಮೆಯಾಗುತ್ತಿರುವುದು ದಾಂಪತ್ಯ ಜೀವನದ ಬಿರುಕಿಗೆ ಮುಖ್ಯ ಕಾರಣ. ಪತಿ ಪತ್ನಿಯರಲ್ಲಿ ಪರಸ್ಪರ ನಂಬಿಕೆ, ಗೌರವ ಇದ್ದರೆ ಸಾಧನೆಗೆ ಏನೂ ತೊಂದರೆಯಾಗದು. ನಮ್ಮದು ಅಂತಹ ದಾಂಪತ್ಯ. ನಾನು ನನಗೆ ಇಷ್ಟವಾದುದನ್ನು ಮಾಡಲು ಸ್ವಾತಂತ್ರ್ಯವಿದೆ. ನಾವು  ಮಾಡುವ ಕೆಲಸವನ್ನು ಪರಸ್ಪರ ಗೌರವಿಸುತ್ತೇವೆ.” ಹೀಗೆನ್ನುತ್ತಾ ತಮ್ಮ ಮಧುರ ದಾಂಪತ್ಯದ ಗುಟ್ಟನ್ನು ತೆರೆದಿಟ್ಟರು. ಜೊತೆಗೆ ಇನ್ನಷ್ಟು ಅವರ ಆಸಕ್ತಿಗಳ ಬಗ್ಗೆ ಮಾಹಿತಿ ನೀಡಿದರು. ಆದಷ್ಟು ಇವರ ಎಲ್ಲ ಪುಸ್ತಕಗಳನ್ನು ಓದಬೇಕೆನ್ನಿತು. ಆದರೆ ಸಾಧ್ಯವಾಗಿರಲಿಲ್ಲ. ಮೊನ್ನೆ ಪುಸ್ತಕದ ಮಳಿಗೆಯೊಂದರಲ್ಲಿ ಮಕ್ಕಳಿಗಾಗಿ ಕೆಲವೊಂದು ಪುಸ್ತಕ ಖರೀದಿಸುತ್ತಿರುವಾಗ ಒಂದು ಪುಸ್ತಕ ಬಹಳ ಆಕರ್ಷಕವಾಗಿ ಕಾಣಿಸಿತು. ಬೇಸಗೆಯ ಧಗೆ ಬೇರೆ..ನೋಡುವಾಗ ಯಾವುದೋ ತಣ್ಣನೆ ಪೇಯದ ಗ್ಲಾಸುಗಳಿರುವ ಚಿತ್ರ! ಸುಧಾ ಮೂರ್ತಿ ಎಂಬ ಹೆಸರು ದೊಡ್ಡದಾಗಿ ಕಾಣಿಸಿತು. ಇದು ಅಡುಗೆ ಪುಸ್ತಕವಲ್ಲವೆಂಬುದು ಖಚಿತವಾಯಿತು. ಕೈಗೆ ತೆಗೆದುಕೊಂಡು ನೋಡಿದರೆ, ಅದೊಂದು ೨೩ ವಾಸ್ತವ ಕತೆಗಳ ಅಪರೂಪದ ಮಾನವೀಯ ಮೌಲ್ಯ, ಉದಾತ್ತ ಚಿಂತನೆಗಳಿರುವ ಪುಸ್ತಕ. ಖರೀದಿಸಿ ಓದತೊಡಗಿದೆ. ಬೇಸಗೆಯ ಬೇಗೆಯಲ್ಲಿದ್ದರೂ ಮನ ತಂಪೆನಿಸಿತು. ಪ್ರತಿಯೊಂದು ಕತೆಯೂ ಸತ್ಯ ಕತೆ ಆಧಾರಿತವಾಗಿರುವ ಕಾರಣ ಕುತೂಹಲದಿಂದ ಓದಿದೆ. ಸುಲಭವಾಗಿ ಓದಿಸಿಕೊಂಡು ಹೋಗುವ ಈ ಆಂಗ್ಲ ಕೃತಿ ಡಾ. ಸುಧಾ ಮೂರ್ತಿಯವರ ೨೪ನೇ ಕೃತಿ. ಎಲ್ಲ ವಯಸ್ಸಿನವರೂ ಓದಬಹುದಾದ ಪುಸ್ತಕ “ದ ಡೇ ಐ ಸ್ಟಾಪ್ಡ್ ಡ್ರಿಂಕಿಂಗ್ ಮಿಲ್ಕ್”.

ನನಗೆ ಇದರಲ್ಲಿ ಮೊದಲ ಕತೆ ಓದುವಾಗ ರೈಲಿನಲ್ಲಿ ಅಡಗಿ, ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತ, ಹೊರ ದಬ್ಬಲ್ಪಡುತ್ತಿದ್ದ ಒಂದು ಅನಾಥ ಹುಡುಗಿ, ತಂದೆಯ ನಿಧನವಾದ ವಾರದ ನಂತರ ಮಲತಾಯಿಯ ಹಿಂಸೆ ತಡೆಯಲಾಗದೇ ಮನೆಬಿಟ್ಟು ಬಂದ ಚಿತ್ರಾಳಿಗೆ ಟಿಕೆಟ್ ತೆಗೆದು ಮುಂಬಯಿಯಿಂದ ಬೆಂಗಳೂರಿನವರೆಗೆ ಕರೆತಂದು ಸುಧಾ ಮೂರ್ತಿಯವರು ತೋರಿಸಿದ ಮಾನವೀಯತೆ, ಅವಳಿಗೆ ಊಟ ನೀಡಿ, ಅವಳ ಮೇಲಿರುವ ಹೊಡೆತದ, ರಕ್ತದ ಕಲೆಯನ್ನು ನೋಡಿ, ಅವಳ ಕತೆ ಕೇಳಿ ನೊಂದು, ಅವಳನ್ನು ಬೆಂಗಳೂರಿಗೆ ಕರೆತಂದ ಮೇಲೆಯೂ ಕೈಬಿಡದೇ, ಪ್ರತಿ ಹಂತದಲ್ಲೂ ಆಲೋಚಿಸಬೇಕಾಗಿ ಬರುವ ಪರಿಸ್ಥಿತಿ, ಆತಂಕವಿದ್ದರೂ ತೋರ್ಪಡಿಸದೆ ಚಿತ್ರಾಳ ಮನಸ್ಸನ್ನು ಅರಿತು ಅವಳಿಗಾಗಿ ಹಣ ಖರ್ಚು ಮಾಡಿ, ವಸತಿ, ಊಟ, ವಿದ್ಯಾಭ್ಯಾಸ ನೀಡಿ ಉತ್ತಮ ವ್ಯಕ್ತಿಯನ್ನಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದು ಅವರ ಬಗ್ಗೆ ಇನ್ನಷ್ಟು ಗೌರವ  ಮೂಡಿಸಿತು. ಹಾಗೆಯೇ ಚಿತ್ರಾ ಸಹಾ ಉಪಕಾರ ಮಾಡಿದವರನ್ನು ಮರೆಯದೆ, ಚೆನ್ನಾಗಿ ಕಲಿತು, ಉದ್ಯೋಗಕ್ಕೆ ಸೇರಿ, ಪ್ರಥಮ ಸಂಬಳ ಬಂದಾಗ ಸುಧಾ ಅವರಿಗೆ ಸೀರೆ ತಂದುಕೊಟ್ಟು, ವಸತಿ ನಿಲಯದಲ್ಲಿ ಸಲಹಿದ ವಾರ್ಡನ್  ಅಕ್ಕ  ಹಾಗೂ ಕೆಲಸದವರಿಗೂ ಉಡುಗೊರೆ ನೀಡಿ ಪ್ರೀತಿ ವ್ಯಕ್ತಪಡಿಸುವುದು,  ಮನುಷ್ಯರಲ್ಲಿ ಇರುವ ಕೃತಜ್ಞತಾ ಭಾವಕ್ಕೆ ಉದಾಹರಣೆ. ನಂತರ ವಿದೇಶಕ್ಕೆ ಹೋಗಿ ನೆಲೆಸಿದರೂ ಮರೆಯದೇ ಸುಧಾ ಮೂರ್ತಿಯವರನ್ನು ಹಲವು ವರ್ಷಗಳ ಬಳಿಕ ಆಶ್ಚರ್ಯಕರ ರೀತಿಯಲ್ಲಿ ಭೇಟಿಯಾಗಿ, ತನ್ನ ಬಾಳ ಸಂಗಾತಿಯಾಗಲಿರುವ ವಿದೇಶಿ ಹುಡುಗನನ್ನು ಪರಿಚಯಿಸಿ, ಇಬ್ಬರೂ ಪಾದ ಮುಟ್ಟಿ ನಮಸ್ಕರಿಸಿ, ಸುದ್ದಿ ಇಲ್ಲದಂತೆ ಸುಧಾರ ಹೋಟೆಲ್ ಬಿಲ್ ಪಾವತಿಸುವುದು, ಕೊನೆಯಲ್ಲಿ ಸುಧಾಮೂರ್ತಿಯವರ ಪ್ರಶ್ನೆಗೆ ಉತ್ತರಿಸುತ್ತ ಅವರನ್ನು ಅಪ್ಪಿಕೊಂಡು, “ಮ್ಯಾಡಂ, ನೀವು ಆ ದಿನ ನನಗೆ ಟಿಕೆಟ್ ತೆಗೆಸಿ ಬಾಂಬೆಯಿಂದ ಬೆಂಗಳೂರಿಗೆ ಕರೆತಂದು ಸಲಹದೇ ಇದ್ದಿದ್ದರೆ.. ಅನಾಥಳಾಗುತ್ತಿದ್ದೆ, ಭಿಕ್ಷುಕಿ, ಇಲ್ಲವೇ ವೇಶ್ಯೆಯಾಗುತ್ತಿದ್ದೆ. ನಾನು ಈ ರೀತಿ ಉತ್ತಮ ವ್ಯಕ್ತಿಯಾಗಲು ಸಾಧ್ಯವಿರಲಿಲ್ಲ” ಎನ್ನುವ ಮಾತುಗಳು ಮನ ಕಲಕುತ್ತವೆ. ಆದರೂ ಸುಧಾ ಅವರು, “ಇದರಲ್ಲಿ ತನ್ನದೇನಿಲ್ಲ..ನಿನ್ನ ವ್ಯಕ್ತಿತ್ವ ನಿನ್ನ ಶ್ರಮದಿಂದಲೇ ರೂಪುಗೊಂಡಿದೆ” ಎನ್ನುವುದು ಅವರ ದೊಡ್ಡ ಗುಣವನ್ನು ತೋರಿಸುತ್ತದೆ.

ಮಾನವೀಯತೆಯನ್ನು ಬಿಂಬಿಸುವ ಇವರ ಜೀವನಾನುಭವಗಳು ಜೀವನವನ್ನು ಒಳ್ಳೆಯ ರೀತಿಯಲ್ಲಿ ಮಾರ್ಪಡಿಸಲು ಸಹಕಾರಿಯಾಗಿವೆ. ಇಲ್ಲಿನ ಪ್ರತಿಯೊಂದು ಕತೆಯೂ ಅತ್ಯಂತ ಸರಳವಾಗಿ ಚಿತ್ರಿತವಾಗಿದೆ. ಜನರಲ್ಲಿ ಪರಸ್ಪರ ಸಹಕರಿಸಲು, ಉತ್ತಮ ರೀತಿಯಲ್ಲಿ ಬದುಕಲು ಪ್ರೇರೇಪಿಸುತ್ತವೆ. ಎರಡನೇ ಕಥೆ “ರಹಮಾನನ ಅವ್ವ” ಓದುವಾಗ ಹೀಗೂ ಹಿಂದೂ-ಮುಸ್ಲಿಂ ಕುಟುಂಬಗಳು ಹೀಗೂ ಜೊತೆಯಾಗಿ ಬಾಳಲು ಸಾಧ್ಯವೇ ಎಂಬ ಅಚ್ಚರಿಯನ್ನುಂಟುಮಾಡುತ್ತದೆ. ರಹಮಾನ್ ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡು ಹಿಂದೂ ಮನೆಯಲ್ಲಿ ಬೆಳೆಯುತ್ತಾ ಆಚರಣೆಯಲ್ಲಿ ಮುಸಲ್ಮಾನನಾಗಿಯೇ ಉಳಿಯುತ್ತಾನೆ. ತನಗೆ ಉದ್ಯೋಗ ಸಿಕ್ಕಿದ ನಂತರ ಮುಸ್ಲಿಂ ಹುಡುಗಿಯನ್ನೇ ಮದುವೆಯಾಗಿ, ಸಲಹಿದ ಕಾಶೀಬಾಯಿಯನ್ನು ತನ್ನ ಮನೆಗೆ ಕರೆಸಿಕೊಂಡು ತನ್ನ ಅವ್ವನೆಂದು, ಅವರ ಮಗಳು ಉಷ ತನ್ನಕ್ಕನೆಂದು ಪರಿಚಯಿಸುವುದು, ಅವರು ಒಂದೇ ಮನೆಯಲ್ಲಿ ಇರುವುದು, ರಹಮಾನ್ ಮನೆಗೆ ಪಂಚಮಿ ಹಬ್ಬಕ್ಕೆ ಅವನ ಸಾಕುತಾಯಿಯ ಮಗಳು ಉಷ ಬಂದಿರುವುದು, ಅವನ ಮನೆಯಲ್ಲಿ ಹಿಂದೂ ದೇವರ ಫೋಟೋ ಹಾಗೂ ಮುಸಲ್ಮಾನರ ಮೆಕ್ಕಾದ ಚಿತ್ರವಿರುವುದು, ಸುಧಾ ಅವರನ್ನು ತನ್ನ ಮನೆಗೆ ಊಟಕ್ಕೆ ಕರೆಯುವುದು ನಿಜವಾಗಿ ಕೋಮು ಸೌಹಾರ್ದಕ್ಕೆ ಉತ್ತಮ ಉದಾಹರಣೆಯೆನಿಸುತ್ತದೆ.

ಒರಿಸ್ಸಾದ ಹಳ್ಳಿಯೊಂದರಲ್ಲಿ ಶಾಲೆ ನಿರ್ಮಿಸುತ್ತಿರುವಾಗ ವಿಪರೀತ ಮಳೆಗೆ ಸಿಲುಕಿ ಸುಧಾ ಮೂರ್ತಿ ಹತ್ತಿರದ ಗುಡಿಸಲಿನಲ್ಲಿ ಆಶ್ರಯ ಪಡೆಯುತ್ತಾರೆ. ಅಲ್ಲಿ ಅತಿಥಿಯಾಗಿ ಏನಾದರೂ ಸ್ವೀಕರಿಸಲು ಕೇಳಿಕೊಂಡಾಗ, ಬಡವರ ಆತಿಥ್ಯ ಸ್ವೀಕರಿಸದೇ ಇದ್ದರೆ ಬೇಸರವಾದೀತೆಂದು ಟೀ ಕುಡಿಯುತ್ತೀರಾ ಎಂದು ಕೇಳುವಾಗ ಬೇಡವೆಂದು, ಹಾಲು ಆಗಬಹುದೇ ಎಂದಾಗ ಆಗಬಹುದೆನ್ನುತ್ತಾರೆ. ಮನೆಯಾಕೆ ತನ್ನ ಪತಿಯೊಡನೆ  ಮಗುವಿನ ಪಾಲಿನ ಒಂದು ಲೋಟ ಹಾಲು ಮಾತ್ರವಿದೆಯಲ್ಲ. ಏನು ಮಾಡಲಿ? ಎಂಬುದು ಅವರಿಗೆ ಕೇಳಿಸುತ್ತದೆ. ಹೆಂಡತಿಯ ಬಳಿ ಸ್ವಲ್ಪ ನೀರು ಸೇರಿಸಿ ಬಿಸಿಮಾಡಿಸಿ ಮನೆಯಾತ ಕುಡಿಯಲು ಮಗುವಿನ ಪಾಲಿನ ಹಾಲನ್ನು ನೀಡಿದಾಗ ಕುಡಿಯಲಾರದೇ, ತನಗೆ ಇಂದು ಉಪವಾಸದ ದಿನ, ನೀರನ್ನಲ್ಲದೆ ಬೇರೇನೂ ತೆಗೆದುಕೊಳ್ಳಲಾರೆ ಎಂದರೂ ಬಡತನವನ್ನು ನೋಡಿ ಬೇಸರದಿಂದ ನಂತರ ಹಾಲು ಕುಡಿಯುವುದನ್ನೇ ತ್ಯಜಿಸುವ ಲೇಖಕಿಯ ಕಥೆ, ನಂತರ ಚರ್ಮದ ಕಾಯಿಲೆಯಿರುವ ಭಿಕ್ಷುಕರಿಗೆ ಸ್ನಾನಕ್ಕೆ ನೀರು ಕಾಯಿಸಿ ನೀಡುವ ಗಂಗಾಳ ಕತೆ, ಕೈಯಲ್ಲಿ ಕಾಸಿಲ್ಲದಿದ್ದರೂ ಸಮಾಜ ಸೇವೆ ಮಾಡಲು ಸಾಧ್ಯವೆಂಬುದನ್ನು ತಿಳಿಸುತ್ತದೆ. ಹೀಗೆ ಪ್ರತಿಯೊಂದು ಕಥೆಯೂ ಉತ್ತಮ ಸಂದೇಶ ನೀಡುತ್ತದೆ.

ಕೆಲವೊಂದು ಕತೆ ನಿರಾಸೆಯನ್ನುಂಟು ಮಾಡುತ್ತದೆ. ಓದಲು ೨ ಲಕ್ಷ ಸಾಲದ ನೆರವು ಪಡೆದ ಪರಿಚಯದ ಹುಡುಗ ಐ‌ಐಟಿಯಲ್ಲಿ ಕಲಿತು, ವಿದೇಶಕ್ಕೆ ತೆರಳಿ ತುಂಬಾ ಹಣವಂತನಾದರೂ ಸಹಕರಿಸದವರನ್ನು ಗುರುತಿಸದೇ ಇರುವುದು, ಹಣ ಹಿಂದಿರುಗಿಸದೇ ಉಢಾಪೆಯಾಗಿ ಮಾತನಾಡುವುದು..(ತಮ್ಮ ತವರು ಮನೆಯಲ್ಲೇ ಬೆಳೆದ ಪ್ರಾಮಾಣಿಕ ವ್ಯಕ್ತಿಯ ಮೊಮ್ಮಗ)ಲೇಖಕಿಯ ಮನಸ್ಸಿಗೆ ಆಘಾತ ಉಂಟುಮಾಡಿ ವಂಶವಾಹಿಯಾಗಿ ಕಾಯಿಲೆಗಳು ಬರಬಹುದೇ ಹೊರತು ಪ್ರಾಮಾಣಿಕತೆ, ಭಾವೈಕ್ಯತೆ ಬರಲಾರದು ಎನ್ನುತ್ತಾರೆ. ಹಣವೇ ಎಲ್ಲವೂ ಅಲ್ಲ. ಪ್ರೀತಿ, ಪರಸ್ಪರ ಸಮಯ ಕೊಡುವಿಕೆ, ಮಾತು ತುಂಬಾ ಮುಖ್ಯ. ಜೀವನದಲ್ಲಿ ಕುಟುಂಬದ ಪ್ರೀತಿಯ ಕೊರತೆ ಹೇಗೆ ಸಿರಿವಂತರನ್ನೂ ಕಾಡುತ್ತದೆ ಎಂಬುದನ್ನು ಸಿಂಗಾಪೂರ್ ನಲ್ಲಿ ಸಾಫ್ಟ್ವೇರ್ ಕಂಪೆನಿ ಹೊಂದಿದ್ದರೂ ಮನೆಯಲ್ಲಿ ಮಗಳು, ಹೆಂಡತಿ ಮಾತನಾಡಲು ಸಮಯ ಕೊಡದೇ ಇರುವುದು, ತಮ್ಮಷ್ಟಕ್ಕೆ ತಾವಿರುವುದು ಇಂಜಿನಿಯರ್ ವಿಷ್ಣುವಿನ ಜೀವನದ ಕತೆಯಿಂದ ವ್ಯಕ್ತವಾಗುತ್ತದೆ.

ಇನ್ನೂ ಕೆಲವು ಕತೆಗಳಲ್ಲಿ ವಿಭಿನ್ನ ಅನುಭವಗಳು ಒಳ್ಳೆಯ ಪಾಠ ಕಲಿಸುತ್ತವೆ. ನಮ್ಮ ನೆಲದ ಬದುಕನ್ನು ಪ್ರೀತಿಸಲು ಪ್ರೇರೇಪಿಸುವ (ಅಂಕಲ್ ಸ್ಯಾಮ್), ಹೆಣ್ಣುಮಕ್ಕಳು ತಮ್ಮ ಹೆತ್ತವರ ಶ್ರಾದ್ಧ ಮಾಡಬಹುದೆನ್ನುವ (ಶ್ರಾದ್ಧ) ಕಥೆಗಳು ವಿಶಿಷ್ಟವೆನಿಸುತ್ತವೆ. ಕೆಲವು ಕಥೆಗಳು ಅಪಾತ್ರರಿಗೆ ದಾನ ಮಾಡಬಾರದೆಂಬ ಅರಿವನ್ನು ಮೂಡಿಸುತ್ತವೆ. ಕೆಲವು ಜನರು ಉಚಿತ ಸೇವೆಯನ್ನು ದುರುಪಯೋಗ ಮಾಡಿಕೊಳ್ಳುವುದರ ಬಗ್ಗೆ ಸುಧಾ ಮೂರ್ತಿಯವರ ವಿಷಾದವೂ ಇದೆ. ಕೊನೆಗೆ ಸಣ್ಣ ಮಕ್ಕಳಿಂದಲೂ, ಕಡು ಬಡವರಿಂದಲೂ ಒಳಿತನ್ನು ಸ್ವೀಕರಿಸುವ, ಜೀವನದ ಪಾಠ ಕಲಿಯುವ, ತನಗಾಗಿ ಹೆಚ್ಚು ಏನನ್ನೂ ಸಂಗ್ರಹಿಸದ ಕೊಡುಗೈ ದಾನಿ ಸುಧಾ ಮಹಾನ್ ವ್ಯಕ್ತಿಯೇ ಸರಿ. ಅವರು ಜೀವನದಲ್ಲಿ ಕಲಿತ ೮ ಪಾಠಗಳೊಂದಿಗೆ ಕೃತಿ ಮುಕ್ತಾಯಗೊಳ್ಳುತ್ತದೆ. ಕಥೆಯ ಕೊನೆಯಲ್ಲಿ ಸುಧಾ ಅವರು ದ.ಆಫ್ರಿಕಾದಲ್ಲಿರುವಾಗ  ಅವರ ಕಾರಿನ ಚಾಲಕ ನನ್ನ ಪ್ರೀತಿಯ ನಾಯಕ ಮಹಾತ್ಮ ಗಾಂಧಿ ಎನ್ನುತ್ತಾನೆ. ಸುಧಾ ಅಭಿಮಾನದಿಂದ  ಅವರು ನಮ್ಮ ದೇಶದವರು, ನಮ್ಮ ರಾಷ್ಟ್ರಪಿತ ಎಂದಾಗ, ಅವನು ಅವರು ನಮ್ಮ ದೇಶಕ್ಕೆ ಬಂದು ಮಹಾತ್ಮರಾದವರು(ದ. ಆಫಿಕ್ರಾಗೆ ಬರುವಾಗ ಎಂ.ಕೆ. ಗಾಂಧಿಯಾಗಿದ್ದರು); ನಂತರ ನಮ್ಮಲ್ಲೂ ಹಲವಾರು ಸುಧಾರಣೆಗಳಿಗೆ ಕಾರಣವಾಗಿದ್ದಾರೆ. ಅವರೊಬ್ಬ ವಿಶ್ವನಾಯಕನೆನ್ನುವಾಗ ಲೇಖಕಿ ಒಪ್ಪಿಕೊಳ್ಳುತ್ತಾ ನಿಜ, ಮಹಾತ್ಮ ಗಾಂಧಿ, ಬುದ್ಧ ಮೊದಲಾದವರು ತಮ್ಮ ಮಾನವ ನಿರ್ಮಿತ ಗಡಿಯನ್ನು ಮೀರಿ ವಿಶ್ವನಾಯಕರೆಂದು ಗುರುತಿಸಲ್ಪಟ್ಟವರೆನ್ನುತ್ತಾರೆ.

ದೇಶ-ವಿದೇಶಗಳಲ್ಲಿ ಪ್ರತಿಷ್ಠಾನದ ಕೆಲಸದ ನಿಮಿತ್ತ ಸಂಚರಿಸಿ,ಸಮಾಜ ಸೇವಾ ಕಳಕಳಿಯಿಂದ ಹಲವಾರು ನಗರಗಳಲ್ಲಿ, ಹಳ್ಳಿಗಳಲ್ಲಿ ವಿವಿಧ ಸ್ತರದ ಜನರ ಬದುಕನ್ನು ಕಣ್ಣಾರೆ ಕಂಡು, ಸಹಕರಿಸಿ, ತಮ್ಮ ಜೀವನದಲ್ಲಿ ವಿಶಿಷ್ಟ ಅನುಭವ ಪಡೆದ ಲೇಖಕಿಯ ಬಗ್ಗೆ ಹೆಮ್ಮೆಯೆನಿಸುತ್ತದೆ. ಸಮಾಜ ಸೇವೆಯ ಮೂಲಕ ನಿಸ್ವಾರ್ಥವಾಗಿರುವ ಇಂತಹವರ ಸಂಖ್ಯೆ ಹೆಚ್ಚಾಗಲಿ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಇದೊಂದು ಭರವಸೆ ಮೂಡಿಸುವ ಅಪರೂಪದ ಕೃತಿ.

ರಾಮನವಮಿಯಂದು…

ಅನುರಾಧಾ ಪಿ ಸಾಮಗ

ರಾಮಾ, ನೀನಿಂದು ಮತ್ತೆ ಹುಟ್ಟಿಬಿಟ್ಟೆ.
ನೇರ ಒಳಗಿಂದಲೇ ಉದಯಿಸಿಬಿಟ್ಟೆ.
ಪೂರಾ ಬದಲಾದ ರೂಪದಲಿ,
ನನದಲ್ಲದ ಚಿಂತನೆಯ ಬೀಜದಲಿ..

ವ್ಯಕ್ತಿಯಾಗಲ್ಲ ನೀ ಬೆಳೆದದ್ದು,
ಸಮಷ್ಟಿಯ ಮುಕ್ತಿಮಾರ್ಗಕೆ ದೀಪ್ತಿಯಾಗಿ.
ಮಾದರಿಯಾಗೋ ಹಾದಿಗೆ ಮುನ್ನುಡಿಯಾಗಿ.
ತ್ಯಾಗಪಥಕೊಂದು ಮಾರ್ಗದರ್ಶಿಯಾಗಿ.
ತಾಳ್ಮೆ-ಸಂಯಮ ರೂಪವೆತ್ತ ಮೂರ್ತಿಯಾಗಿ.
ಚಂದಮಾಮನ ಬೇಡಿದ್ದೇ ಕೊನೆ,
ಮುಂದೆಂದೂ ನಿನ್ನ ಹಠಕಾಸ್ಪದವೇ ಇರಲಿಲ್ಲವೇನೋ.
ಜಗ ನಿನ್ನೆದುರು ಹಠವಿಟ್ಟದ್ದು,
ನೀ ಒಪ್ಪಿದ್ದು, ಮಣಿದದ್ದು…
ಕೊನೆಗದು ಮಹಾತ್ಮನಾಗುವ ನಿನ್ನ
ತಂತ್ರವೆನಿಸಿದ್ದು….

ಪಿತೃವಾಕ್ಯಕೆ ಬಗ್ಗಿದ್ದು ನೀನಲ್ಲ,
ಬಗ್ಗಿಸಿದ್ದು ಪಿತನ ಹತಾಶೆ ಮತ್ತು ನಂಬಿಕೆ.
ಸೀತೆಗೆ ನಾರುಡಿಸಿದ್ದು ನೀನಲ್ಲ,
ಪತಿಭಕ್ತಿ ಮೆರೆವ ಅವಳ ಹಠಸಾಧನೆ.
ತಮ್ಮಗೂ ಬೇಕಿತ್ತು ಭ್ರಾತೃಪ್ರೇಮದ ಕಿರೀಟ,
ತ್ರೇತಾಯುಗಕೆ ರಾಮನ ಪರಮನಾಗಿಸುವ ಜಪ…
ಕಪಿಸೈನ್ಯದ ಬಲಮೆರೆಸೆ ಸೇತು ಕಟ್ಟಿಸಿದೆ,
ತಾಳ್ಮೆಬಲ ನಿರೂಪಣೆಗಷ್ಟು ವರುಷ ಏಕಾಂಗಿಯಾದೆ,
ನಿನಗಸಾಧ್ಯವೆಂದಲ್ಲ, ನೀ ಅವತಾರ ಪುರುಷ…
ತಾರೆಗಾಗಿ ಮರೆಯಾಗಿ ಗೆದ್ದಪವಾದ ಹೊತ್ತೆ
ತುಮುಲವಡಗಿಸಿ ತೋರಬೇಕಿತ್ತು ಸಮಚಿತ್ತ,
ಸಾಮಾನ್ಯನಲ್ಲವಲ್ಲಾ, ನೀನದೇ ಅವತಾರ ಪುರುಷ…

ಧರ್ಮ ಧರ್ಮವೆನುತಲೇ ವನದಿ ಕಳೆದ
ಹದಿನಾಲ್ಕು ವರುಷದ ನಿನ್ನ ಯೌವ್ವನ
ಕಾಣಲೇ ಇಲ್ಲ ಜನಕೆ, ಮಹಾನ್ ಎನಿಸಿದ್ದು
ಸೀತೆಯ ತ್ಯಾಗ.
ಅದು ಮರುಗಿದ್ದು,
ಸೌಮಿತ್ರಿಯ ನಿಷ್ಠೆಗೆ,
ಹನುಮನ ಭಕ್ತಿಗೆ.
ಬೆರಗಾದದ್ದು ರಾವಣನ ಪೌರುಷಕೆ,
ಕಪಿಸೈನ್ಯದ ಸಾಹಸಕೆ.
ನಿನ್ನ ತ್ಯಾಗ ಅವತಾರದ ಹೆಸರಲಿ ನಗಣ್ಯ.

ಸೀತೆಯ ದೇಹಕೆ ಅಗ್ನಿಪರೀಕ್ಷೆ,
ನೀ ವಿಧಿಸಿ ಕೆಳಗಿಳಿದದ್ದು, ಅವಳು ಗೆದ್ದು ಮೇಲೇರಿದ್ದು..
ನಿನ್ನತನ ಸುಟ್ಟದ್ದು, ನೀ ಸ್ವಂತದೆದುರು ಸೋತದ್ದು-
ಜಗ ಕಂಡಿಲ್ಲ, ನೀ ತೋರಿಲ್ಲ.
ರಾಜಧರ್ಮ ಪಾಲನೆಯ ಮೋಡಿ ಕವಿದಿತ್ತಲ್ಲಾ..
ಸೀತೆ ವನ ಸೇರಿದಳು,
ಬಸುರಿಗೆ ತುಂಬುವನದ ಆರೈಕೆ,
ತುಂಬುಮನದ ಹಾರೈಕೆ…
ತಪ್ಪೆಸಗಿಲ್ಲದ ನೆಮ್ಮದಿ…
ಹಾಗೂ ಭಾರವನತ್ತು ಕಳೆಯಬಲ್ಲಳು..
ನಿನಗೆ ರಾಜ್ಯಭಾರ, ಅರಮನೆವಾಸ…
ಸುತ್ತುಮುತ್ತೆಲ್ಲಾ ಟೀಕೆ, ಪ್ರಶ್ನೆಗಳು ಬಲು ತೀಕ್ಷ್ಣ..
ಜೈಕಾರದ ಸದ್ದು ಅಲ್ಲೆಲ್ಲೋ ಬಲು ಕ್ಷೀಣ…
ಸಡಿಲಾಗುವಂತಿಲ್ಲ, ಭೋರ್ಗರೆದು ಅಳುವಂತಿಲ್ಲ
ಸುಮ್ಮನಿರಬೇಕು..ನೀ ಅವತಾರಪುರುಷ.

ಸೀತೆ ಕೊನೆಗವನಿಯ ಮಡಿಲು ಹೊಕ್ಕಳು
ಆತ್ಮಹತ್ಯೆ ಅದು ಅಂದದ್ದು, ನೀ ಕೊಂದೆ ಎಂದದ್ದು
ಮಾರ್ನುಡಿಯುತಿವೆ ಇಂದೂ ಎದೆಯಿಂದೆದೆಗೆ ಬಡಿದು…
ನೀ ಹೊಕ್ಕಿದ್ದೂ ಸರಯೂವಿನ ಮಡಿಲನೇ ಅಲ್ಲವೇ?
ಅವತಾರ ಪುರುಷನದು ಅವತಾರಸಮಾಪ್ತಿಯಷ್ಟೆಯೇ?!
ಎದೆಭಾರ ನಿನದೂ ಇದ್ದಿರಬಹುದು,
ತಪ್ಪಲ್ಲದ ತಪ್ಪೆಸಗುತಾ ನೀನೂ ಅತ್ತಿರಬಹುದು,
ಒಪ್ಪಲ್ಲದ ನಿರ್ಧಾರದಡಿ ಅಪ್ಪಚ್ಚಿಯಾಗಿರಬಹುದು,
ಪ್ರಶ್ನೆ- ಜೊತೆಗೊಂದಷ್ಟು ದೂರು ನನವೂ ಇವೆ,
ಇಂದವನು ಅಡಿಗಿಟ್ಟು, ನಿನ್ನ ಮೇಲಿಟ್ಟು ನೋಡುವಾಸೆ
ಈಗಷ್ಟೇ ಜನಿಸಿರುವೆ, ಹೊಸದಾಗಿ ಅಲಂಕರಿಸುವಾಸೆ…
ಸ್ವಲ್ಪ ತಿನಿಸಿ, ಕುಡಿಸಿ, ಆಡಿಸಿ, ಮಲಗಿಸಿ, ಮತ್ತೆಬ್ಬಿಸಿ,
ನಿನ್ನಂದ ಬರೀ ನಿನ್ನವತಾರದ ಚಂದಗಳ ಸವಿಯುವಾಸೆ…

ಅಪೂರ್ಣರಘುನಂದನ

ಹರವು ಸ್ಫೂರ್ತಿ ಗೌಡ

ಚಿಂತೆ ಸಂಪಿಗೆ ಮುಡಿದಳು
ರಾಮ ನಾಮದ ಘಾಟು ಗಮಲು ಒಡಲಲ್ಲಿ

ಗೆದ್ದವನಿಗೆ ಉಡುಗೊರೆಯಾದಳು

ಗೆಲುವುದೊಂದೇ ಗೊತ್ತು ಅವಕ್ಕೆ

ವಿರಹ ತಣಿಸದ
ಮೋಹದ ಗಂಡನಾಗಿ ಉಳಿದ

ಯಾವುದೋ ಯುಗದಲ್ಲಿ
ಯಾರದೋ ಅಶೋಕವನದಲ್ಲಿ
ಯಾರಿಗಾಗಿ ಶೋಕಿಸಿದಳು ಸೀತೆ..

Previous Older Entries

%d bloggers like this: