ಪ್ರೀತಿ, ಸುಳ್ಳು ಮತ್ತು ರಕ್ತಗಳಿರುವ ನೆಲದಲ್ಲಿ…

ಮುಕ್ತಛಂದ । ಚೇತನಾ ತೀರ್ಥಹಳ್ಳಿ

ರಾಜನರಮನೆಯ ಚೆಂದದ ಹೆಣ್ಣುಮಗಳೊಬ್ಬಳು ಗುಲಾಮನ ರೂಪಕ್ಕೆ ಮನಸೋಲುತ್ತಾಳೆ. ಪ್ರೇಮದಲ್ಲಿ ಮುಳುಗುತ್ತಾಳೆ. ಈ ಪ್ರೇಮ ಅವಳನ್ನು ಕವಿಯಾಗಿಸುತ್ತೆ. ಕವಿತೆಗಳಿಂದಲೇ ರಟ್ಟಾಗುವ ಗುಟ್ಟು ಅವಳ ಜೀವಕ್ಕೆ ಮುಳುವಾಗುತ್ತೆ. ಗುಲಾಮನನ್ನು ಹಾಳು ಬಾವಿಗೆ ತಳ್ಳಿಸುವ ಅವಳಣ್ಣ, ತಂಗಿಯ ಎರಡೂ ಕೈಗಳ ನರ ಕತ್ತರಿಸಿ ಹಬೆಕೋಣೆಯಲ್ಲಿ ಕೂಡಿ ಹಾಕುತ್ತಾನೆ. ಸೋರಿದ ರಕ್ತದೊಳಗೆ ಬೆರಳದ್ದಿ ಹಬೆಕೋಣೆಯ ಗೋಡೆಯ ಮೇಲೆ ತನ್ನ ಕೊನೆಯ ಕವಿತೆ ಬರೆಯುತ್ತಾಳೆ ರಾಜಕುಮಾರಿ. ರಕ್ತದ ಮಡುವಿನಲ್ಲೇ ಕೊನೆಯಾಗುತ್ತಾಳೆ.

ಅವಳನ್ನು ಪರ್ಷಿಯನ್ ಕಾವ್ಯ ಜಗತ್ತು ತನ್ನ ಭಾಷೆಯ ಮೊದಲ ಕವಯತ್ರಿ ಎಂದು ಹಾಡಿ ಹೊಗಳುತ್ತದೆ. ಅವಳನ್ನು ಆಫ್ಘಾನಿಸ್ತಾನದ ಮಹಿಳಾ ಕಾವ್ಯಪರಂಪರೆಯ ತಾಯಿ ಎಂದು ಕೊಂಡಾಡಲಾಗುತ್ತದೆ.

ರಾಬಿಯಾ ಬಾಲ್ಖಿಯ ಬದುಕಿನ ಒನ್‌ಲೈನ್ ಸ್ಟೋರಿ ಇದು. ಏಳು ಗಝಲ್‌ಗಳು ಹಾಗೂ ಕೆಲವು ಕವಿತೆಯ ತುಣುಕುಗಳು ಈಕೆಯ ಹೆಸರಲ್ಲಿ ದಾಖಲಾಗಿವೆ.

ರಾಬಿಯಾಳ ಕೊನೆಯುಸಿರು... ಕೊನೆ ಕವಿತೆ

ರಾಬಿಯಾಳ ಕೊನೆಯುಸಿರು… ಕೊನೆ ಕವಿತೆ

 

 

 

 

 

 

ರಾಬಿಯಾಳ ಬದುಕಿನ ಇತರ ವಿವರಗಳೇನಿದ್ದರೂ ಮೇಲಿನ ಒನ್‌ಲೈನ್ ಸ್ಟೋರಿಗೆ ಪೂರಕವಾದ ರೂಪಕಾಲಂಕಾರಗಳಷ್ಟೆ. ಅವಳ ನಂತರದ ಜನರು ತಮ್ಮತಮ್ಮ ಭಾವಕ್ಕೆ ಅದನ್ನು ಉಳಿಸಿಕೊಂಡಿದ್ದಾರೆ, ಬೆಳೆಸಿಕೊಂಡಿದ್ದಾರೆ. ಕೆಲವರ ಪಾಲಿಗೆ ಅವಳೊಬ್ಬ ಅಪ್ರತಿಮ ಸುಂದರಿಯಾದರೆ, ಕೆಲವರ ಪಾಲಿಗೆ ಸೂಫೀ ಸಂತಳಂತೆ. ಅವಳು ಆ ನೆಲದ ಮೊದಲ ಕವಯತ್ರಿ ಅನ್ನುವುದಂತೂ ಸರಿಯೇ. ಅವಳು ಬಹಿರಂಗದ ಮೊದಲ ಪ್ರೇಮಿಕೆಯೂ ಹೌದು. ಹಾಗೇನೇ ರಾಬಿಯಾ ಬಾಲ್ಖಿ ಗೌರವ ಮರಣದ ಶಿಕ್ಷೆಯುಂಡ ಆಫ್ಘನ್ನಿನ ಮೊದಲ ಹೆಣ್ಣೂ ಆಗಿದ್ದಾಳೆ. ಇಂದಿನ ತನಕ ಆ ಅವಮಾನವನ್ನು ಉಣ್ಣುತ್ತಲೇ ಇರುವ ಹೆಣ್ಣುಗಳ ಮೊದಲ ನರಳಿಕೆಯಾಗಿದ್ದಾಳೆ. ಸಾವಿನ ಅಂಚಲ್ಲೂ ತನ್ನ ಪ್ರೇಮವನ್ನ ಬಿಟ್ಟುಕೊಡದೆ, ತನ್ನ ರಕ್ತದಿಂದಲೇ ಗೋಡೆಯ ಮೇಲೆ ಕವನ ಕಟ್ಟಿದ ಈ ಹೆಣ್ಣು ಆಫ್ಘನ್ನಿನ ಮೊದಲ ಬಂಡಾಯಗಾರ್ತಿಯೂ ಹೌದಲ್ಲವೆ? ರಾಬಿಯಾ ಶಿಕ್ಷೆಯ ಹೆಸರಲ್ಲಿ ಸತ್ತು ಹೋಗಿದ್ದೇನೋ ಸರಿ. ಅವಳನ್ನು ಕೊಲ್ಲಿಸಿದ ಅವಳಣ್ಣನನ್ನು ಅದೊಂದು ಗೋಡೆ ಮೇಲಿನ ಕವಿತೆ ಸೋಲಿಸಿ ಹಾಕಿತು. ರಾಬಿಯಾಳ ಪ್ರೇಮ ಅಮರವಾಗಿದ್ದು ಆ ಮರಣೋನ್ಮುಖ ಕವಿತೆಯಿಂದಲೇ…

~

ರಾಬಿಯಾಳ ಸಾವಿನ ನಂತರ ಅವಳಣ್ಣ ಹಾರಿಸ್ ಆಕೆಯ ಹೆಸರಲ್ಲೊಂದು ಸಮಾಧಿ ಕಟ್ಟಿಸಿದ. ಅವಳ ಪ್ರೇಮದ ಗುಟ್ಟು ಬಿಟ್ಟುಕೊಟ್ಟಿದ್ದ ಆಸ್ಥಾನ ಕವಿ ರುದಾಕಿಯೇ ಅವಳೆಲ್ಲ ಗಝಲ್‌ಗಳನ್ನು ಪ್ರಚುರ ಪಡಿಸಿದ. ಸೂಫೀಗಳು ಅವಳಿಗೆ ಸಂತ ಪದವಿ ನೀಡಿದರು. ಪ್ರೇಮಿಗಳು ಅವಳನ್ನು ದೇವದೂತಳೆಂದು ನಂಬಿದರು. ಆಫ್ಘನ್ನಿನ ಮೊದಲ ಸಿನೆಮಾ ಅವಳ ಕತೆಯ ಮೇಲೆಯೇ ಮೂಡಿಬಂದಿತು. ಇಂದಿಗೂ ಪ್ರೇಮ ಫಲಿಸಲೆಂದು ಅವಳನ್ನ ಬೇಡಿಕೊಳ್ಳುವ, ಗೋರಿಗೆ ಗುಟ್ಟಾಗಿ ಹರಕೆ ಕಟ್ಟುವ ಜನರಿದ್ದಾರೆ ಅಲ್ಲಿ. ತಾಲಿಬಾನಿಗಳು ಅವಳ ಗೋರಿಯನ್ನ ಗಡಿಯಾಚೆ ಹಾಕಿದ್ದರೂನು.

~

ಇಂತಹದೆಲ್ಲ ಕಥನ ಶ್ರೀಮಂತಿಕೆಯ ರಾಬಿಯಾ ಬಾಲ್ಖಿಯನ್ನ ಆಫ್ಘನ್ನಿನ ಇಂದಿನ ಸಂವೇದನಾಶೀಲ ಕಣ್ಣುಗಳು ಹೇಗೆ ನೋಡುತ್ತವೆ ಅನ್ನುವುದಕ್ಕೆ ಪತ್ರಕರ್ತೆ ನುಶೀನ್ ಅರ್ಬಾಬ್‌ಝಾದೆಯ ಸಾಕಷ್ಟು ಚರ್ಚೆಗೊಳಗಾದ ಒಂದು ಬರಹ ಸಾಕಾಗುತ್ತದೆ. ಪತ್ರರೂಪದಲ್ಲಿ ರಾಬಿಯಾಳ ಜತೆ ಸಂಭಾಷಣೆ ನಡೆಸುವ ನುಶೀನ್, ತನ್ನ ಕಾಲದ ಪರಿಸ್ಥಿತಿ ರಾಬಿಯಾಳ ಕಾಲದ್ದಕ್ಕಿಂತ ಹೇಗೆ ಭಿನ್ನವಾಗಿಲ್ಲ ಎಂದು ನಿರೂಪಿಸುತ್ತ ಹೋಗುತ್ತಾಳೆ. ಆ ಪತ್ರವನ್ನ ಓದಿಕೊಂಡ ಮೇಲೆ ರಾಬಿಯಾ ನಮ್ಮಲ್ಲಿ ಮತ್ತಷ್ಟು ಆಳವಾಗಿ ನಿಲ್ಲುತ್ತಾಳೆ. ನಮ್ಮ ಪ್ರತಿಬಿಂಬವೇ ಆಗಿ ಉಳಿಯುತ್ತಾ….

“ನೀನು ಕೊಲೆಯಾಗಿ ಹೋದ ಸಾವಿರದ ಅರವತ್ತೊಂಭತ್ತು ವರ್ಷಗಳ ಅನಂತರ (ಇದು ೨೦೧೨ರ ಬರಹ) ನಿನಗೆ ಬರೆಯುತ್ತಿದ್ದೇನೆ ರಾಬಿಯಾ, ನಮ್ಮ ಚರಿತ್ರೆಯಲ್ಲಿ  ಮರ್ಯಾದಾ ಹತ್ಯೆಗೆ ಒಳಗಾದ ಮೊದಲಿಗಳೆಂದು ನೀನು ಗೌರವದಿಂದ ದಾಖಲಾಗಿದ್ದೀಯ. ನಿನ್ನ ಪರಂಪರೆಗೆ ಲೆಕ್ಕವಿಲ್ಲದಷ್ಟು ಜೀವಗಳು ಬಂದು ಸೇರಿಕೊಂಡಿವೆ” ಎಂದು ಬರೆಯುವ ನುಶೀನ್, ತನಗೆ ಆಕೆಯ ಕವಿತೆಗಳ ಬಗೆಗಾಗಲೀ ಅವಳ ಸಂತತನ, ಜನಪ್ರಿಯತೆಗಳ ಬಗೆಗಾಗಲೀ ಒಲವಿಲ್ಲ ಎನ್ನುತ್ತಾಳೆ. ಅವಳ ಪ್ರೇಮಗಾಥೆಯನ್ನ ಬಚ್ಚಿಟ್ಟು ಆಕೆ ‘ಪಾವಿತ್ರ್ಯ’ವನ್ನು ಸಾಬೀತುಪಡಿಸಲೆಂದೇ ಅವಳ ಪ್ರೇಮವನ್ನ ಆಧ್ಯಾತ್ಮಿಕವೆಂದು ಕರೆದುಬಿಟ್ಟಿದ್ದಾರೆಂದು ವಿಷಾದಪಡುತ್ತಾಳೆ. ರಾಬಿಯಾಳ ಅಣ್ಣ ಹಾರಿಸ್‌ನಿಗೆ ತಂಗಿಯ ಮೇಲೆ ವಿಪರೀತ ಪ್ರೇಮ. ಹಾಗಿದ್ದೂ ಗುಲಾಮನನ್ನು ಪ್ರೀತಿಸದಳೆಂದು ಆಕೆಯನ್ನ ಕೊಲ್ಲಿಸುತ್ತಾನೆ. “ಇವತ್ತೂ ಅಂಥಾ ಅಣ್ಣಂದಿರೇ ಇದ್ದಾರೆ ರಾಬಿಯಾ. ನಾವು ಬಹಳವಾಗಿ ಪ್ರೀತಿಸಲ್ಪಡ್ತೀವಿ. ಅಷ್ಟೇ ಕ್ರೂರವಾಗಿ ಸಾವಿಗೂ ತಳ್ಳಲ್ಪಡ್ತೀವಿ. ಎರಡು ವಿಪರೀತಗಳ ನಡುವೆ ತೂಗುಯ್ಯಾಲೆಯ ಬದುಕು, ಅವತ್ತಿನಂತೆ ಇವತ್ತೂ. ಸಾವಿರ ವರ್ಷ ಕಳೆದರೂ ನಮ್ಮ ವಿಧಿಯಲ್ಲಿ ಬದಲಾವಣೆಯೇನಾಗಿಲ್ಲ” ಎಂದು ಬರೆಯುತ್ತಾಳೆ ನುಶೀನ್.

ರಾಬಿಯಾಳ ಪ್ರೇಮವನ್ನ ಜಾಹೀರು ಮಾಡಿರುತ್ತಾನಲ್ಲ ರುದಾಕಿ, ರಾಬಿಯಾಳ ಪ್ರೇಮಿ ಭಕ್ತಾಶನ ಹೊರತಾಗಿ ಆತನೊಬ್ಬನೇ ಅವಳ ಕವಿತೆಗಳನ್ನ ಕೇಳಿದ್ದವನು. ಅವಳ ಪ್ರೇಮ ರಹಸ್ಯವನ್ನ ಸತ್ತರೂ ಬಿಟ್ಟುಕೊಡುವುದಿಲ್ಲವೆಂದು ಮಾತು ಕೊಟ್ಟಿದ್ದವನು, ಸಂತೋಷ ಕೂಟದಲ್ಲಿ ಕುಡಿದ ಅಮಲಿನಲ್ಲಿ ಬಾಯಿ ಬಿಡುತ್ತಾನೆ. ಕೂಟದಲ್ಲಿ ಆಕೆಯ ಕವಿತೆಗಳನ್ನು ವಾಚಿಸಿದಾಗ ಹಾರಿಸ್ ಅವು ಯಾರವೆಂದು ಕೇಳುತ್ತಾನೆ. ಆಗ ರುದಾಕಿ “ಪ್ರೇಮದಲ್ಲಿ ಮತ್ತಳಾದ ಹುಡುಗಿಯೊಬ್ಬಳು ಬರೆದಿರುವುದರಿಂದಲೇ ಅವು ಅಷ್ಟು ಸೊಗಸಾಗಿವೆ. ಇವು ರಾಬಿಯಾ ಬರೆದದ್ದಲ್ಲ, ಭಕ್ತಾಶನ ಪ್ರೇಮ ಅವಳಿಂದ ಬರೆಸಿದ್ದು” ಅನ್ನುತ್ತಾನೆ. ಈ ಹೇಳಿಕೆಯ ಹಿಂದೆ ಕೆಲಸ ಮಾಡಿದ್ದು ನಶೆಯಾ? ಅವಳ ಕವಿತ್ವದ ಬಗೆಗಿದ್ದ ಅಸೂಯೆಯಾ? ಎಂದು ಕೇಳುತ್ತಾಳೆ ನುಶೀನ್‌. ಹೆಣ್ಣಿನ ಕೌಶಲ್ಯದ ಬಗ್ಗೆ ಪುರುಷ ಮತ್ಸರ ಅಂದಿಗೂ ಇತ್ತು, ಇಂದಿಗೂ ಅದು ಮುಂದುವರೆದಿದೆ ಅನ್ನುತ್ತಾಳೆ.

ನುಶೀನ್ ಬರೆಯುತ್ತಾಳೆ,
“ರಾಬಿಯಾ, ಇಂದಿಗೂ ನಮ್ಮ ಗಂಡಸರು ಮತ್ತು ಹೆಂಗಸರು ನಿನ್ನನ್ನು ಗೋರಿಯಲ್ಲಿ ಆರಾಧಿಸುತ್ತಾರೆ. ನಮ್ಮ ಪರ್ಷಿಯನ್‌ ಭಾಷೆಯ ಹುಟ್ಟು – ಬೆಳವಣಿಗೆಯ ದಿನಗಳಲ್ಲಿ ನೀನಿದ್ದೆ. ಕವಿತೆ ಬರೆದು ಅದಕ್ಕೆ ಹಸಿರುಣಿಸಿದೆ. ಆದರೆ ನನಗೆ ನಿನ್ನ ಕವಿತೆಗಳ ಬಗ್ಗೆ ತಿಳಿಯುವ ಆಸಕ್ತಿ ಇಲ್ಲ. ಪ್ರೀತಿ, ಸುಳ್ಳು ಹಾಗೂ ರಕ್ತಗಳಿರುವ ನೆಲದಲ್ಲಿ ಪ್ರತಿಯೊಬ್ಬರೂ ಕವಿಯೇ ಆಗಿರುತ್ತಾರೆ. ಪ್ರತಿಯೊಬ್ಬರೂ ಕವಿತೆ ಬರೆಯುತ್ತಾರೆ, ಯುದ್ಧ ದೇವತೆಗಳು ಕೂಡಾ. ನಮ್ಮ ಹೆಣ್ಣುಮಕ್ಕಳೂ ಬರೆಯುತ್ತಾರೆ ಗೊತ್ತಾ? ಕೆಲವರು ತಮ್ಮ ಸೆರೆಕೋಣೆಗಳಲ್ಲಿ, ಕೆಲವರು ಮಣ್ಣಿಟ್ಟಿಗೆಯ ಮೋಟು ಗೋಡೆಗಳ ಹಿಂದೆ ಕೂತು…. ನಮ್ಮಲ್ಲಿ ಅದಕ್ಕಾಗಿಯೇ ಒಂದು ರೆಡಿಯೋ ಸ್ಟೇಷನ್‌ ಕೂಡ ಇದೆ. ಹುಡುಗಿಯರು ಅದಕ್ಕೆ ಕರೆ ಮಾಡಿ ತಮ್ಮಕವಿತೆ ಓದಿ ಹೇಳ್ತಾರೆ. ಅವರು ತಮ್ಮ ನಿಜವನ್ನ ಹೇಳಿಕೊಳ್ಳಲು, ಹಾಗೇ ಮರೆಮಾಚಲು ಕವಿತೆಯನ್ನ ಬಳಸ್ತಾರೆ. ಸಂದರ್ಭಕ್ಕೆ ತಕ್ಕ ಹಾಗೆ ಬಳಸಿಕೊಳ್ಳೋದಕ್ಕೇ ನಮ್ಮ ಭಾಷೆ ರೂಪುಗೊಂಡಿದೆ ಅನ್ನಿಸುತ್ತೆ ನಂಗೆ. ನೇರಾನೇರ ನಿಜ ಹೇಳುವ ಧೈರ್ಯ ಇಲ್ಲದಿರುವವರು ಕವಿತೆ ಬರೆಯುತ್ತಾರೆ ನನ್ನ ನೆಲದಲ್ಲಿ. ಪ್ರತಿಯೊಬ್ಬರೂ ಕವಿತೆಯ ಮೂಲಕ ಪಲಾಯನ ಹೂಡುತ್ತಾರೆ. ಎಲ್ಲವನ್ನೂ ಹೇಳುತ್ತಲೇ ಏನನ್ನೂ ಹೇಳಿಲ್ಲ ಅನ್ನುವಂತೆ. ನಿನಗೆ ಹೇಳ್ತೀನಿ ಕೇಳು ರಾಬಿಯಾ, ಆಫ್ಘನ್ನಿನ ನೆಲದಲ್ಲಿ ಕವಿತೆ ಹೇಡಿಗಳ ಭಾಷೆಯಷ್ಟೆ ಆಗಿದೆ….”

***

ರಾಬಿಯಾ ಬಾಲ್ಖಿಯ ಒಂದು ಕವಿತೆ:

ಲಪಾತವೇ
ನಿನಗಿಂಥ ದುಃಖವೇಕೆ?
ನೋವೇನು ಹೇಳು ನಿನ್ನದೂ
ನನ್ನ ನೋವಿನದೆ ಕಥೆಯೇ?
ಕಲ್ಲು ಬಂಡೆಗೆ ಹೀಗೆ
ತಲೆ ಚಚ್ಚಿ ಚಚ್ಚಿ
ಕಣ್ಣೀರನೇಕೆ ಹರಿಸುತಿರುವೆ?

Advertisements

ವಿಭಾ ಕವಿತೆ ಮತ್ತು ಜೀವ ಮಿಡಿತದ ಸದ್ದು

ಅನುಗುಣ | ಕಾವ್ಯಾ ಪಿ ಕಡಮೆ

ವರು ನಮ್ಮ ಪಾಲಿನ
ರೊಟ್ಟಿ ಕದ್ದರೆಂದು
ನಾವು ದೂರುವುದು ಬೇಡ.
ಅವರ ಹೊಟ್ಟೆ ತಣ್ಣಗಿರಲಿ-
ನಮ್ಮ ಹೊಟ್ಟೆಗಳಿಗೆ ತಣ್ಣೀರು
ಸಮಾಧಾನ ಹೇಳಬಲ್ಲದು.

ಅವರು ನಮ್ಮ ರಾತ್ರಿಯ
ನಿದ್ದೆ ಕದ್ದರೆಂದು
ನಾವು ಹಲಬುವುದು ಬೇಡ.
ಅವರು ನಿದ್ದೆಯಿಂದ
ಎಚ್ಚರಾಗದಿರಲಿ-
ಈ ನಿದ್ರಾಹೀನ ರಾತ್ರಿಗಳಲ್ಲಿ
ನಕ್ಷತ್ರಗಳು ನಮ್ಮ ಜೊತೆಗಿರುತ್ತವೆ.

ಅವರು ನಮ್ಮ ತುಟಿಯ
ಮೇಲಿನ ನಗೆಯ ಕದ್ದರೆಂದು
ನಾವು ದುಃಖಿಸುವುದು ಬೇಡ.
ಅವರು ಸದಾ ಮಂದಸ್ಮಿತರಾಗಿರಲಿ
ನಾವು ಇಡೀ ಜಗತ್ತಿನ ಕಣ್ಣೀರಿಗೆ
ಬೊಗಸೆಯಾಗೋಣ.

ಅವರು ನಮ್ಮ ರೊಟ್ಟಿ, ನಿದ್ರೆ
ಮತ್ತು ನಗೆಯನ್ನು ಕದ್ದದ್ದಕ್ಕೆ
ಒಂದು ಸಲ ನಾವು ಆ ಮೇಲಿನವನ
ಅದಾಲತ್ತಿನಲ್ಲಿ ನ್ಯಾಯ ಕೇಳೋಣ.
ಆದರೆ, ಸದ್ಯದ ಸ್ಥಿತಿ ಹೇಗಿದೆ
ನೋಡು,
ಅವರು ಕದಿಯ ಬೇಕೆಂದರೂ
ನಮ್ಮ ಬಳಿ ಏನೂ ಉಳಿದಿಲ್ಲ!

ಅವರು ನಮ್ಮಷ್ಟೇ ನಿರುಪಾಯರಾದ
ಬಗ್ಗೆ ನನಗೆ ಖೇದವಿದೆ.

‘ಕದ್ದರೆಂದು’ ಎಂಬ ಈ ಕವಿತೆಯನ್ನು ಬರೆದವರು ಕನ್ನಡ ಕಾವ್ಯಲೋಕದಲ್ಲಿ ಮಿಂಚು ಮೂಡಿಸಿ ಮರೆಯಾದ, ಅದರೆ ಆ ಮಿಂಚಿಗೆ ಮಾತ್ರ ಎಂದೂ ಆರದ ಪಣತಿಯ ಶಕ್ತಿ ತುಂಬಿ ಹೋದ ವಿಭಾ. ಅವರ ಕವಿತೆಗಳು ಥೇಟು ಹಣತೆಯಂತೆಯೇ ಅಬ್ಬರವಿಲ್ಲದೇ ಶಾಂತ ಧಾಟಿಯಲ್ಲಿ ಹರಿದು ನಮ್ಮ ದೈನಿಕದ ಕಾಂತಿಯನ್ನು ನಿರಂತರ ಉದ್ದೀಪಿಸುತ್ತವೆ, ಬೆಳಗುತ್ತವೆ. ಅಂಥ ಒಂದು ಖಾಸಾ ಕವಿತೆ ‘ಕದ್ದರೆಂದು’.

ಈ ಕವಿತೆಯ ಓಘವನ್ನು ಗಮನಿಸಿ. ಅದರ ಹೊರಮೈಗೆ ದಟ್ಟ ವಿಷಾದಗಳ ಅಂಗಿ ಇದ್ದರೂ ಅಂತರಂಗದ ಚೈತನ್ಯದಿಂದ ಈ ಕವಿತೆ ತನ್ನ ಸೂಕ್ಷ್ಮತಂತುಗಳ ಮೂಲಕ ನಮ್ಮ ಭಾವಲೋಕವನ್ನು ಮೀಟಿ ನಳನಳಿಸುತ್ತದೆ. ಸಂಚಯ ಪ್ರಕಾಶನದ ‘ಜೀವ ಮಿಡಿತದ ಸದ್ದು’ ಸಂಕಲನದಲ್ಲಿ ಈ ಕವಿ ಮಿಡಿದ ಇಂಥ ನಲವತ್ತು ಕವಿತೆಗಳಿವೆ.

‘ಕದ್ದರೆಂದು’ ಕವಿತೆಯಲ್ಲಿ ಬರುವ ‘ನಾವು’ ರೂಪಕ, ‘ನಾನು’ ಮತ್ತು ‘ನೀನು’ಗಳನ್ನು ಮೀರಿದ ವಿಶಾಲ ಬಯಲಿಗೆ ನಮ್ಮನ್ನು ಮೊದಲು ತಂದು ನಿಲ್ಲಿಸುತ್ತದೆ. ಇಲ್ಲಿ ‘ನಾವು’ ಎಂದರೆ ಗೆಳೆಯ-ಗೆಳತಿ, ತಾಯಿ-ಮಗು, ಗಂಡ-ಹೆಂಡತಿ, ಅಕ್ಕ-ತಂಗಿ ಮುಂತಾದ ಯಾವುದೇ ಸಂಬಂಧದ ಭಾಗವಿರಬಹುದು. ಮೊದಲ ಓದಿಗೆ ದಕ್ಕುವ ಕವಿತೆಯ ಸಾರ ಇಷ್ಟು.

ಆದರೆ ಇದೇ ಕವಿತೆಯನ್ನು ಮತ್ತೆ ಮತ್ತೆ ಓದಿದಾಗ ಹೊಳೆವ ಅರ್ಥಗಳು, ಅರ್ಥಗಳ ಹೊಳೆಯಲ್ಲಿ ನಮ್ಮನ್ನು ಮೆಲ್ಲನೆ ತೇಲಿಸುತ್ತ, ಅಲ್ಲಲ್ಲಿ ಅಬ್ಬರಿಸುತ್ತ ಕರೆದೊಯ್ಯುತ್ತವೆ. ಆಗ ನಮಗೆ ಇಲ್ಲಿ ಬರುವ ‘ನಾವು-ಅವರು’ ಕೂಡ ಎಲ್ಲ ಬಂಧಗಳನ್ನು ದಾಟಿದ, ಎಲ್ಲ ರೂಪಗಳನ್ನು ದಾಟಿದ ಸಂಬಂಧಗಳ ಸಾಕ್ಷಾತ್ಕಾರದಂತೆ ಗೋಚರಿಸುತ್ತವೆ. ಕವಿತೆಯ ಮಾನವೀಯ ತಿರುವು ನಮಗೆ ದಕ್ಕುವುದು ಈ ಕ್ಷಣದಿಂದಲೇ ಎಂದು ದಿಟವಾಗಿ ನುಡಿಯಬಹುದು.

‘ಯಾಕೆ ನನ್ನನ್ನು ತಿರಸ್ಕರಿಸಿದೆ?’

ಪದ ಪಾರಿಜಾತ | ಉಷಾ ಕಟ್ಟೆಮನೆ

ದೊಂದು ಸರ್ಕಾರಿ ಬಂಗಲೆ. ಅವನೊಬ್ಬನೇ ಇದ್ದಾನೆ. ಅವನ ಹೆಂಡತಿ ಮಕ್ಕಳು ದೂರದ ಊರಿನಲ್ಲಿದ್ದಾರೆ. ರಾತ್ರಿಯ ನೀರವತೆ. ನಗರ ಮೆಲ್ಲ ಮೆಲ್ಲನೆ ಸದ್ದು ಕಳೆದುಕೊಳ್ಳುತ್ತದೆ. ಒಂಟಿತನ ಅವನೊಳಕ್ಕೆ ಇಳಿಯುತ್ತಿದೆ. ಜ್ವರದ ಕಾವು ಇನ್ನೂ ಇದೆ. ಫೋನ್ ಎತ್ತಿಕೊಂಡು ಅವಳೊಡನೆ ಮಾತಾಡುತ್ತಾನೆ. ಇಪ್ಪತ್ತು ವರ್ಷಗಳ ಹಿಂದಿನ ನೆನಪುಗಳಿಗೆ ಮೆಲ್ಲ ಮೆಲ್ಲನೆ ಜಾರುತ್ತಾನೆ. “ಯಾಕೆ ನನ್ನನ್ನು ತಿರಸ್ಕರಿದೆ?” ಎಂದು ಬಿಕ್ಕಳಿಸುತ್ತಾನೆ. ಅವಳಿಗಿಲ್ಲಿ ಮೈಯ್ಯೆಲ್ಲ ಬಿಸಿಯಾಗುತ್ತದೆ. ತಲೆ ಭಾರವಾಗುತ್ತದೆ. ಅವನನ್ನು ಹೇಗೆ ಸಂತೈಸುವುದೆಂದು ಗೊತ್ತಾಗದೆ ಕುಸಿದು ಕುಳಿತವಳಿಗೆ….ಮುಂದೇನೂ ಕಾಣಿಸುತ್ತಿಲ್ಲ…..

ಅವನಂದ ಎರಡು ಮಾತುಗಳು ಆಕೆಯನ್ನು ಚೂರಿಯಂತೆ ಇರಿದವು; ಕ್ಷಮಿಸಿ, “ಆಕೆ” ಎಂದು ನಾನೇಕೆ ನನ್ನನ್ನು ವಂಚಿಸಿಕೊಳ್ಳಲಿ? ಈ ಕಥೆಯ ನಾಯಕಿ ನಾನೇ..! ಅವನು ಮಾತಾಡಿದ್ದು ನನ್ನೊಡನೆಯೇ…

“ನಾನು ಕಪ್ಪಗಿದ್ದೆ, ಕೆಳಜಾತಿಯವನಾಗಿದ್ದೆ, ಬಡವನಾಗಿದ್ದೆ. ಹಾಗಾಗಿ ನನ್ನನ್ನು ತಿರಸ್ಕರಿದ್ದೆ ಅಲ್ವಾ?”

ಹೌದಾ..ನಾನಂದು ಹಾಗೆ ಯೋಚಿಸಿದ್ದೆನಾ? ನನಗೆ ಬುದ್ಧಿ ಬಂದಾಗಿನಿಂದ, ಬದುಕಿನುದ್ದಕ್ಕೂ ಜಾತಿ ಭೇದದ ಬಗ್ಗೆ ಯೋಚಿಸಿದವಳೇ ಅಲ್ಲ. ಅರೇ ಈಗ ತಾನೇ ಹೊಳೆದದ್ದು. ನನಗಿಂದಿಗೂ ಅವನ ಜಾತಿ ಯಾವುದೆಂದೂ ಗೊತ್ತಿಲ್ವಲ್ಲಾ..! ಕಪ್ಪಗಿದ್ದಾನೆ, ಜೊತೆಗೆ ನಡೆ-ನುಡಿಯಲ್ಲಿ ನಾಜೂಕುತನವಿಲ್ಲ. ಹಾಗಾಗಿ ಆತ ಬ್ರಾಹ್ಮಣನಾಗಿರಲಾರ. ಗೌಡರ ಗತ್ತು ಅವನಲಿಲ್ಲ. ಪರ ಊರಿನವನಾಗಿರುವ ಕಾರಣ ಬಂಟನಾಗಿರಲಾರ. ಲಿಂಗಾಯಿತ ಎಂಬ ಜಾತಿ ಇದೆ ಎಂಬುದರ ಬಗ್ಗೆ ಆಗ ನನಗೆ ಗೊತ್ತೇ ಇರಲಿಲ್ಲ. ದ.ಕ ದ ಹಳ್ಳಿಯೊಂದರಲ್ಲಿ ಹುಟ್ಟಿದ ನನಗೆ ಜಾತಿಯ ಬಗ್ಗೆ ಯಾವುದೇ ಪೂರ್ವಾಗ್ರಹಗಳಿರಲಿಲ್ಲ. ಬಡವನಾಗಿದ್ದನೇ ಆತ…? ಇಲ್ವಲ್ಲ. ನನಗೆ ತಿಳಿದಂತೆ ಆತನ ಅಪ್ಪ ಸರಕಾರದ ಒಳ್ಳೆಯ ಹುದ್ದೆಯಲ್ಲಿದ್ದರು. ಅಣ್ಣ ಇಂಜಿನಿಯರಿಂಗ್ ಓದುತ್ತಿದ್ದ. ಅವನ ತಂಗಿಯರಿಬ್ಬರು ಸುಂದರಿಯರು; ಓದಿನಲ್ಲಿ ಜಾಣೆಯರು. ನಾನು ಬಡವಳಾಗಿದ್ದೆ ಎಂಬುದು ಸತ್ಯ….ಮತ್ತೆ..?

ನನ್ನ, ಅವನ ಪ್ರಥಮ ಭೇಟಿಯನ್ನು ನೆನಪಿಸಿಕೊಂಡೆ. ನನ್ನ ಅಣ್ಣನ ಮುಖಾಂತರ ಪರಿಚಯವಾದವನು ಅವನು. ನಂತರ ಪತ್ರಗಳ ಮುಖಾಂತರ ಅಭಿರುಚಿಗಳ ವಿನಿಮಯವಾಯ್ತು. ಒಂದು ದಿನ ನನ್ನನ್ನು ಭೇಟಿಯಾಗಬೇಕೆಂದು ಪಕ್ಕದ ಜಿಲ್ಲೆಯಿಂದ ನನ್ನ ಕಾಲೇಜಿಗೆ ಬಂದ. ನನಗೆ ಹುಡುಗರನ್ನು ಭೇಟಿಯಾಗುವುದು ಹೊಸತೇನೂ ಅಲ್ಲ. ಅದಾಗಲೇ ನನ್ನ ನೇರ ನಡೆ ನುಡಿಗಳಿಂದ ನನ್ನ ಮನೆಯವರಿಂದ, ಬಂಧು ಬಾಂಧವರಿಂದ, ಕೊನೆಗೆ ಕಾಲೇಜಿನಲ್ಲಿಯೂ “ಗಂಡುಬೀರಿ” ಎಂದು ಹೆಸರು ಪಡೆದಿದ್ದೆ.

ಆಗೆಲ್ಲಾ ಭೇಟಿ ಹೋಟೇಲಿನಲ್ಲಿ ತಾನೇ? ಹೋಟೇಲ್ ಅಂದ್ರೆ ಈಗ ಬೇರೆಯೇ ಅರ್ಥ ಬರುತ್ತೆ..! ಅದು ಆ ಕಾಲ. ಬಸ್ ಸ್ಟ್ಯಾಂಡಿನಲ್ಲಿ ನಾನು ಕಾದಿದ್ದೆ. ಪೇಟೆಯ ಯಾವುದೋ ಹೋಟೇಲಿನಲ್ಲಿ ಎದುರಾ ಬದುರಾ ಕೂತು ಅವನು ಅವನು ಚಹಾ-ತಿಂಡಿಗೆ ಆರ್ಡರ್ ಮಾಡಿದ.. ನನಗೆ ಬರೀ ಚಾ ಮಾತ್ರ ಸಾಕು ಅಂದೆ. ಅವನು ತಾನು ಇತ್ತೀಚೆಗೆ ಬರೆದ ಕವನಗಳ ಬಗ್ಗೆ ಮಾತಾಡುತ್ತಿದ್ದ. ಬೆಳದಿಂಗಳ ರಾತ್ರಿಯಲ್ಲಿ ತನ್ನ ಪ್ರಿಯತಮೆಯ ಜೊತೆ ಕಳೆಯಲಿರುವ ರಮ್ಯ ಕಲ್ಪನೆಯ ಬಗ್ಗೆ ಹೇಳುತ್ತಿದ್ದ….

ಅವನು ತಿಂಡಿ ತಿನ್ನುತ್ತಿದ್ದ..ಆದರಲ್ಲಿ ನಾಜೂಕು ಇರಲಿಲ್ಲ; ಒರಟುತನವಿತ್ತು. ಕೊನೆಗೆ ತಟ್ಟೆಯಲ್ಲೇ ಕೈ ತೊಳೆದುಕೊಂಡ. (ನನ್ನ ಗಂಡನೂ ಹೀಗೇ ಮಾಡುತ್ತಾನೆ.) ನನಗೆ ತಟ್ಟೆಯಲ್ಲೇ ಕೈ ತೊಳೆದುಕೊಳ್ಳುವವರ ಬಗ್ಗೆ ಕೊಂಚ ಅಸಹನೆಯಿದೆ. ನನ್ನ ಮನೆಯಲ್ಲಿ ಊಟ ಮಾಡಿದವರು ತಟ್ಟೆಯಲ್ಲೇ ಕೈ ತೊಳೆದುಕೊಂಡರೆ ಇನ್ನೊಮ್ಮೆ ಅವರನ್ನು ಊಟ ಮಾಡಿ ಎನ್ನಲು ನಾನು ಸ್ವಲ್ಪ ಹಿಂದೆ ಮುಂದೆ ನೋಡುತ್ತೇನೆ.

ಸ್ವಲ್ಪ ಹೊತ್ತು ಅದೂ-ಇದೂ ಮಾತಾಡಿ ಅವನು ತನ್ನೂರಿಗೆ ಹೊರಡಲು ಸಿದ್ಧನಾದ. ನಾನು ಬಸ್ಟ್ಯಾಂಡ್ ತನಕ ಹೋಗಿ, ಅವನನ್ನು ಬಸ್ ಹತ್ತಿಸಿ, ಬಸ್ ಹೊರಟ ಮೇಲೆ ಕೈ ಬೀಸಿ ಹಾಸ್ಟೇಲಿಗೆ ಬಂದೆ…

ಅವನು ಆಗಾಗ ಕಾಗದ ಬರೆಯುತ್ತಿದ್ದ. ನೀವು ನಂಬುತ್ತೀರೋ ಇಲ್ಲವೋ…ಅವನೊಮ್ಮೆ ಫುಲ್ ಸ್ಕೇಪ್ ಹಾಳೆಯಲ್ಲಿ ಮೂವತ್ತೈದು ಪುಟಗಳ ಕಾಗದ ಬರೆದಿದ್ದ. ಅದರಲ್ಲಿ ಏನು ಬರೆದಿದ್ದ ಎಂಬುದು ನನಗೀಗ ನೆನಪಿಲ್ಲವಾದರೂ ಅದರಲ್ಲಿ “ರಾಜಾ ಪಾರ್ವೈ” ಎಂಬ ಸಿನೇಮಾದ ಬಗ್ಗೆ ಪುಟಗಟ್ಟಲೆ ಬರೆದಿದ್ದ. ಅದರಲ್ಲಿ ಕಮಲ್ ಹಾಸನ್ ಒಬ್ಬ ಅಂಧ ವಯಲಿನ್ ವಾದಕ. ಮಾಧವಿ ಒಬ್ಬಳು ಶ್ರೀಮಂತಳಾದ ಚೆಲುವೆ. ಎಲ್ಲರ ವಿರೋಧದ ನಡುವೆ ಅವರ ಪ್ರೇಮ ಗೆಲ್ಲುವ ಪರಿಯನ್ನು ವಿವರವಾಗಿ ಬರೆದಿದ್ದ..

ಅವನೊಮ್ಮೆ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೂ ಬಂದಿದ್ದ. ನಮ್ಮ ಮನೆಗೆ ಯಾರೇ ಬಂದರೂ, ಅವರು ಅಪರಿಚಿತರಾದರೂ ಆತ್ಮೀಯವಾದ ಆತಿಥ್ಯವಿರುತ್ತದೆ. ನಿನ್ನೆ ಕೂಡಾ ಅದನ್ನು ಫೋನಿನಲ್ಲಿ ನೆನಪಿಸಿಕೊಂಡ. “ನಿನ್ನಮ್ಮ..ಆ ತಾಯಿ ಮಾಡಿದ ಕೋಳಿ ಪದಾರ್ಥ, ಅವರು ಪ್ರೀತಿಯಿಂದ ಮಾಡಿ ಬಡಿಸಿದ ಆ ರೊಟ್ಟಿಯ ಸ್ವಾದ ಇವತ್ತಿಗೂ ನನ್ನ ನಾಲಗೆಯಲ್ಲಿ ಇದೆ…ಆದರೆ ನೀನು ಮಾತ್ರ…” ಎಂದು ಮೌನವಾಗಿದ್ದ.

ಹೌದು. ನನಗೆ ಆತ ಯಾಕೆ ಇಷ್ಟವಾಗಲಿಲ್ಲ. ನನ್ನ ಮುಂದೆ ಒಂದು ಅಸ್ಪಷ್ಟ ಗುರಿಯಿತ್ತು. ಅದನ್ನು ನಾನು ಸಾಧಿಸಬೇಕಾಗಿತ್ತು. ಅಷ್ಟು ಬೇಗನೆ ನನಗೆ ಪ್ರೇಮದಲ್ಲಿ ಬೀಳುವುದು ಬೇಕಾಗಿರಲಿಲ್ಲ. “ದ್ವಂದ್ವಮಾನ- ಭೌತಿಕವಾದ”ದ ಓದು ಹೃದಯದ ಮಾತಿಗಿಂತ ಬುದ್ಧಿಯ ಮಾತಿಗೆ ಹೆಚ್ಚು ಒತ್ತು ಕೊಡುತ್ತಿತ್ತು. ಹಾಗಾಗಿಯೇ ಮುಂದೆ ಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ನಾವು ಎರಡು ವರ್ಷ ಜೊತೆಯಾಗಿಯೇ ಇದ್ದರೂ “ಹಲೋ” “ಹಾಯ್” ಬಿಟ್ಟರೆ ಒಂದು ಟೀ ಗೂ ನಾವು ಜೊತೆಯಾಗಲಿಲ್ಲ.

ಆಮೇಲೆ ಹದಿನೆಂಟು ವರ್ಷ ಹಾಗೊಬ್ಬ ಪರಿಚಿತ ನನಗಿದ್ದ ಎಂಬುದನ್ನು ಮರೆತು ನಾನು ಬದುಕಿದ್ದೆ.

ಅದೊಂದು ಸಂಜೆ ನನಗೊಂದು ಫೋನ್ ಬಂದಿತ್ತು. ನಾನು ಆಫೀಸಿನಲ್ಲಿದ್ದೆ. ಅವನು ಸಂಭ್ರಮದಿಂದ ತನ್ನನ್ನು ಪರಿಚಯಿಸಿಕೊಂಡಿದ್ದ. ತಾನು ಬೆಂಗಳೂರಿನ ಹೊರವಲಯದಲ್ಲಿ ಒಂದು ಮನೆ ಕಟ್ಟಿರುವುದಾಗಿ ಅದರ ಗೃಹ ಪ್ರವೇಶ ದಿನಾಂಕ ತಿಳಿಸಿ, ತನ್ನ ಪತ್ನಿಯ ಕೈಗೂ ಫೋನ್ ಕೊಟ್ಟು ಅವಳ ಕೈಯ್ಯಿಂದಲೂ ಆಮಂತ್ರಿಸಿದ್ದ.  ಕಾಲೇಜು ಗೆಳೆಯನೊಬ್ಬ ಈ ಮಹಾನಗರದಲ್ಲಿ ಸಿಕ್ಕಿದ್ದು ನನಗೆ ನಿಜಕ್ಕೂ ಖುಷಿಯಾಗಿತ್ತು.

ಆಫೀಸಿಗೆ ರಜೆ ಹಾಕಿ, ಒಂದು ಸುಂದರವಾದ ಬುದ್ಧನ ವಿಗ್ರಹವನ್ನು ಖರೀದಿಸಿ ಅವನ ಮನೆಗೆ ಹೋಗಿದ್ದೆ. ಅವನ ಮನೆಯವರೆಲ್ಲಾ ತುಂಬಾ ಆದರದಿಂದ ನನ್ನನ್ನು ಬರಮಾಡಿಕೊಂಡರು. ಅವನ ಪತ್ನಿ ಅಪ್ರತಿಮ ಚೆಲುವೆಯಾಗಿದ್ದಳು. ಅವನ ಮಗನಂತೂ ನನ್ನನ್ನು ನೋಡಿ “ಅಪ್ಪನ ಗರ್ಲ್ ಫ್ರೆಂಡ್ ನೀವೇನಾ?” ಎಂದು ನನ್ನಲ್ಲಿ ಅಚ್ಚರಿ ಮೂಡಿಸಿದ. ಆತನ ಪತ್ನಿಯ ಮೊಗದಲ್ಲೂ ಮೂಡಿದ ಮಂದಹಾಸ ನನ್ನನ್ನು ನಿರಾಳವಾಗಿಸಿತ್ತು.  ಅವನ ತಂದೆ ಮತ್ತು ಅಣ್ಣ ನನ್ನನ್ನು ನೋಡಿ ತುಂಬಾ ಸಂತಸಪಟ್ಟರು. ನಮ್ಮೂರಿನ ಬಗ್ಗೆ ನಾವು ಪರಸ್ಪರ ತುಂಬಾ ಮಾತಾಡಿಕೊಂಡೆವು.  ಬ್ಲಡ್ ಕ್ಯಾನ್ಸರಿನಿಂದ ಒಬ್ಬ ಮಗಳನ್ನು ಕಳೆದುಕೊಂಡ ಸಂಗತಿಯನ್ನು ಹೇಳುತ್ತಲೇ ಆ ತಂದೆ ಕಣ್ಣೀರಾಗುತ್ತಾ ನನ್ನನ್ನೂ ಭಾವುಕರನ್ನಾಗಿಸಿದರು.

ಆಮೇಲೆ ನಾವೆಲ್ಲ ಆಗಾಗ ಫೋನಿನಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಆದರೆ ನಾನು ಅವನ ಮನೆಗೆ ಹೋಗಲಿಲ್ಲ. ಒಂದೆರಡು ಸಾರಿ ಆತ ನಮ್ಮ ಮನೆಗೆ ಬಂದಿದ್ದ. ಒಂದೆರಡು ಪುಸ್ತಕಗಳನ್ನು ಕೊಂಡು ಹೋಗಿದ್ದ.

ಒಂದು ಇಳಿಸಂಜೆ ನನಗವನ ಪತ್ನಿ ಫೋನ್ ಮಾಡಿದ್ದಳು. “ಅವರ ಸ್ಥಿತಿ ಚಿಂತಾಜನಕವಾಗಿದೆ. ನಿಮ್ಮನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ. ನೀವು ಅವರಿಗಿರುವ ಏಕೈಕ ಫ್ರೆಂಡ್ ಅಂತೆ. ದಯಮಾಡಿ ಒಮ್ಮೆ ಮನೆಗೆ ಬರ್ತೀರಾ?”  ಹೇಳುತ್ತಲೇ ಆಕೆ ಬಿಕ್ಕಳಿಸಿದಳು.

ನಾನು ತಕ್ಷಣ ನಮ್ಮ ಡ್ರೈವರನ್ನು ಕರೆದು ಅವನ ಮನೆಗೆ ಧಾವಿಸಿದ್ದೆ. ಅದ್ಯಾವುದೋ ವಿಚಿತ್ರ ಹೆಸರಿನ ಮಾರಣಾಂತಿಕ ಕಾಯಿಲೆಯಿಂದ ಆತ ನರಳುತ್ತಿದ್ದ. ನಾನು ತಡರಾತ್ರಿಯವರೆಗೂ ಅಲ್ಲಿದ್ದು ನಂತರ ಮನೆಗೆ ಬಂದಿದ್ದೆ. ಆಮೇಲೆ ಬಹು ಸಮಯ ಆ ಕುಟುಂಬದೊಡನೆ ನಿರಂತರ ಸಂಪರ್ಕದಲ್ಲಿದ್ದೆ. ನಾನು ಫೋನ್ ಮಾಡಿದಾಗಲೆಲ್ಲ “ಅಪ್ಪಾ.. ನಿನ್ನ ಗರ್ಲ್ ಫ್ರೆಂಡ್ ಫೋನ್..” ಎಂದು ಆತನ ಮಗ ರಾಗ ಎಳೆಯುತ್ತಾ ತನ್ನಪ್ಪನನ್ನು ಕರೆಯುತ್ತಿದ್ದುದು ನಮ್ಮ ಸಹಜ ಮಾತುಕತೆಗೆ ಮುನ್ನುಡಿಯಾಗುತ್ತಿತ್ತು. ಆತ ಕ್ರಮೇಣ ಚೇತರಿಸಿಕೊಂಡ. ಆತನ ಪತ್ನಿ ಅವನನ್ನು ಉಳಿಸಿಕೊಂಡಳು.

ಈಗ ಒಂದೆರಡು ವರ್ಷಗಳಿಂದ ಮತ್ತೆ ಅವನ ಸಂಪರ್ಕ ಕಡಿದು ಹೋಗಿತ್ತು. ಈಗ ಫೋನ್ ಮಾಡಿ ಈ ರೀತಿ ಪ್ರಶ್ನಿಸಿದ್ದಾನೆ.

ನಾನು ಏನೆಂದು ಉತ್ತರಿಸಲಿ?

ಅವನಿಗೆ ನನ್ನಲ್ಲಿ ಪ್ರೀತಿ ಮೂಡಿರಬಹುದು. ನನಗೂ ಹಾಗೆ ಅನ್ನಿಸಬೇಕಲ್ಲವೇ? ಪ್ರೀತಿ ಎಂಬುದು ಒಳಗಿನಿಂದ ಕಾರಂಜಿಯಂತೆ ಚಿಮ್ಮಬೇಕು. ಬೆಂಕಿಯ ಹಾಗೆ ಸುಡಬೇಕು. ಪ್ರತಿಕೂಲ ಸಂದರ್ಭ ಬಂದರೆ ಜ್ವಾಲಾಮುಖಿಯಂತೆ ಸ್ಫೋಟಿಸಬೇಕು. ನನಗೆ ಹಾಗೆ ಆಗಿಲ್ವೆ? ನಾನೇನು ಮಾಡಲಿ?

ಸೀಮೆಯಿಲ್ಲದ ನಿಸ್ಸೀಮಂಗೊಲಿದೆ…

“ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ!
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು.
ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು.
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ
ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ!”

%d bloggers like this: