ವಿಭಾ ಕವಿತೆ ಮತ್ತು ಜೀವ ಮಿಡಿತದ ಸದ್ದು

ಅನುಗುಣ | ಕಾವ್ಯಾ ಪಿ ಕಡಮೆ

ವರು ನಮ್ಮ ಪಾಲಿನ
ರೊಟ್ಟಿ ಕದ್ದರೆಂದು
ನಾವು ದೂರುವುದು ಬೇಡ.
ಅವರ ಹೊಟ್ಟೆ ತಣ್ಣಗಿರಲಿ-
ನಮ್ಮ ಹೊಟ್ಟೆಗಳಿಗೆ ತಣ್ಣೀರು
ಸಮಾಧಾನ ಹೇಳಬಲ್ಲದು.

ಅವರು ನಮ್ಮ ರಾತ್ರಿಯ
ನಿದ್ದೆ ಕದ್ದರೆಂದು
ನಾವು ಹಲಬುವುದು ಬೇಡ.
ಅವರು ನಿದ್ದೆಯಿಂದ
ಎಚ್ಚರಾಗದಿರಲಿ-
ಈ ನಿದ್ರಾಹೀನ ರಾತ್ರಿಗಳಲ್ಲಿ
ನಕ್ಷತ್ರಗಳು ನಮ್ಮ ಜೊತೆಗಿರುತ್ತವೆ.

ಅವರು ನಮ್ಮ ತುಟಿಯ
ಮೇಲಿನ ನಗೆಯ ಕದ್ದರೆಂದು
ನಾವು ದುಃಖಿಸುವುದು ಬೇಡ.
ಅವರು ಸದಾ ಮಂದಸ್ಮಿತರಾಗಿರಲಿ
ನಾವು ಇಡೀ ಜಗತ್ತಿನ ಕಣ್ಣೀರಿಗೆ
ಬೊಗಸೆಯಾಗೋಣ.

ಅವರು ನಮ್ಮ ರೊಟ್ಟಿ, ನಿದ್ರೆ
ಮತ್ತು ನಗೆಯನ್ನು ಕದ್ದದ್ದಕ್ಕೆ
ಒಂದು ಸಲ ನಾವು ಆ ಮೇಲಿನವನ
ಅದಾಲತ್ತಿನಲ್ಲಿ ನ್ಯಾಯ ಕೇಳೋಣ.
ಆದರೆ, ಸದ್ಯದ ಸ್ಥಿತಿ ಹೇಗಿದೆ
ನೋಡು,
ಅವರು ಕದಿಯ ಬೇಕೆಂದರೂ
ನಮ್ಮ ಬಳಿ ಏನೂ ಉಳಿದಿಲ್ಲ!

ಅವರು ನಮ್ಮಷ್ಟೇ ನಿರುಪಾಯರಾದ
ಬಗ್ಗೆ ನನಗೆ ಖೇದವಿದೆ.

‘ಕದ್ದರೆಂದು’ ಎಂಬ ಈ ಕವಿತೆಯನ್ನು ಬರೆದವರು ಕನ್ನಡ ಕಾವ್ಯಲೋಕದಲ್ಲಿ ಮಿಂಚು ಮೂಡಿಸಿ ಮರೆಯಾದ, ಅದರೆ ಆ ಮಿಂಚಿಗೆ ಮಾತ್ರ ಎಂದೂ ಆರದ ಪಣತಿಯ ಶಕ್ತಿ ತುಂಬಿ ಹೋದ ವಿಭಾ. ಅವರ ಕವಿತೆಗಳು ಥೇಟು ಹಣತೆಯಂತೆಯೇ ಅಬ್ಬರವಿಲ್ಲದೇ ಶಾಂತ ಧಾಟಿಯಲ್ಲಿ ಹರಿದು ನಮ್ಮ ದೈನಿಕದ ಕಾಂತಿಯನ್ನು ನಿರಂತರ ಉದ್ದೀಪಿಸುತ್ತವೆ, ಬೆಳಗುತ್ತವೆ. ಅಂಥ ಒಂದು ಖಾಸಾ ಕವಿತೆ ‘ಕದ್ದರೆಂದು’.

ಈ ಕವಿತೆಯ ಓಘವನ್ನು ಗಮನಿಸಿ. ಅದರ ಹೊರಮೈಗೆ ದಟ್ಟ ವಿಷಾದಗಳ ಅಂಗಿ ಇದ್ದರೂ ಅಂತರಂಗದ ಚೈತನ್ಯದಿಂದ ಈ ಕವಿತೆ ತನ್ನ ಸೂಕ್ಷ್ಮತಂತುಗಳ ಮೂಲಕ ನಮ್ಮ ಭಾವಲೋಕವನ್ನು ಮೀಟಿ ನಳನಳಿಸುತ್ತದೆ. ಸಂಚಯ ಪ್ರಕಾಶನದ ‘ಜೀವ ಮಿಡಿತದ ಸದ್ದು’ ಸಂಕಲನದಲ್ಲಿ ಈ ಕವಿ ಮಿಡಿದ ಇಂಥ ನಲವತ್ತು ಕವಿತೆಗಳಿವೆ.

‘ಕದ್ದರೆಂದು’ ಕವಿತೆಯಲ್ಲಿ ಬರುವ ‘ನಾವು’ ರೂಪಕ, ‘ನಾನು’ ಮತ್ತು ‘ನೀನು’ಗಳನ್ನು ಮೀರಿದ ವಿಶಾಲ ಬಯಲಿಗೆ ನಮ್ಮನ್ನು ಮೊದಲು ತಂದು ನಿಲ್ಲಿಸುತ್ತದೆ. ಇಲ್ಲಿ ‘ನಾವು’ ಎಂದರೆ ಗೆಳೆಯ-ಗೆಳತಿ, ತಾಯಿ-ಮಗು, ಗಂಡ-ಹೆಂಡತಿ, ಅಕ್ಕ-ತಂಗಿ ಮುಂತಾದ ಯಾವುದೇ ಸಂಬಂಧದ ಭಾಗವಿರಬಹುದು. ಮೊದಲ ಓದಿಗೆ ದಕ್ಕುವ ಕವಿತೆಯ ಸಾರ ಇಷ್ಟು.

ಆದರೆ ಇದೇ ಕವಿತೆಯನ್ನು ಮತ್ತೆ ಮತ್ತೆ ಓದಿದಾಗ ಹೊಳೆವ ಅರ್ಥಗಳು, ಅರ್ಥಗಳ ಹೊಳೆಯಲ್ಲಿ ನಮ್ಮನ್ನು ಮೆಲ್ಲನೆ ತೇಲಿಸುತ್ತ, ಅಲ್ಲಲ್ಲಿ ಅಬ್ಬರಿಸುತ್ತ ಕರೆದೊಯ್ಯುತ್ತವೆ. ಆಗ ನಮಗೆ ಇಲ್ಲಿ ಬರುವ ‘ನಾವು-ಅವರು’ ಕೂಡ ಎಲ್ಲ ಬಂಧಗಳನ್ನು ದಾಟಿದ, ಎಲ್ಲ ರೂಪಗಳನ್ನು ದಾಟಿದ ಸಂಬಂಧಗಳ ಸಾಕ್ಷಾತ್ಕಾರದಂತೆ ಗೋಚರಿಸುತ್ತವೆ. ಕವಿತೆಯ ಮಾನವೀಯ ತಿರುವು ನಮಗೆ ದಕ್ಕುವುದು ಈ ಕ್ಷಣದಿಂದಲೇ ಎಂದು ದಿಟವಾಗಿ ನುಡಿಯಬಹುದು.

Advertisements

1 Comment (+add yours?)

  1. m. chandra sekharaiah
    Jan 29, 2013 @ 19:23:42

    vibha savillada belaku

    Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: