ಸವತೆಹಳ್ಳಿಯ ಸೌಂದರ್ಯ ಲಹರಿ

ಎನಿಗ್ಮಾ ಪೋಸ್ಟ್

“ತಾತಾ, ಮೊನ್ನೆ ನಾನೊಂದು ಚಿತ್ರ ಬರೆದೆ ಗೊತ್ತಾ?” ಜಗುಲಿಯಲ್ಲಿ ಚಿಟ್ಟೆಯ ಮೇಲೆ ಕೂತಿದ್ದ ಜಲಜಾಕ್ಷಿ ಹೇಳಿದಾಗ, ಒಳಗೊಳಗೇ ಬೆಚ್ಚಿಬಿದ್ದಿದ್ದ ಯೋಗುಗೌಡ. ಹೇಗೋ ಸಾವರಿಸಿಕೊಂಡು, “ಏನು ಚಿತ್ರ ಮಗಳೆ?” ಎಂದು ತಡವರಿಸುತ್ತಲೇ ಕೇಳಿದ. “ಅದು ಹೀಗೇ ಅಂತ ಹೇಳೋಕ್ಕಾಗೋದಿಲ್ಲ ತಾತಾ. ನನ್ನ ಮನಸ್ಸಿಂದ ಅದು ಬಂತು ಅನ್ನೋದು ಮಾತ್ರ ನಿಜ” ಎಂದಳು ಜಲಜಾಕ್ಷಿ. ಅವಳ ಮುಖದಲ್ಲಿ ಆ ಹೊತ್ತಿನ ಹಿತವಾದ ಬಿಸಿಲಿನ ಅಷ್ಟೂ ಬಣ್ಣಗಳು ಒಂದು ಕ್ಷಣ ಹೊಳೆದಂತೆ ಕಂಡದ್ದು ಅವಳೊಳಗಿನ ಖುಷಿಯಿಂದಾಗಿಯೊ ಅಥವಾ ಆವಳು ಕೂತಿದ್ದ ಚಿಟ್ಟೆಯ ಜಾಗದ ಪ್ರಭಾವವೊ ಅರ್ಥವಾಗಲಿಲ್ಲ ಯೋಗುಗೌಡನಿಗೆ.

ಅಲ್ಲಿ ಕೂತರೆ ಸಾಕು, ಊರೊಳಗೆ ಎಂಟ್ರಿಯಾಗುವ ಯಾರೇ ಆದರೂ ಕಾಣಬೇಕು; ಹಾಗಿತ್ತು ಯೋಗುಗೌಡನ ಮನೆಯ ಜಗುಲಿಯ ವಿನ್ಯಾಸ. ಬೆಳಕು ಹರಿಯುವ ಹೊತ್ತಲ್ಲಿ ಜಗುಲಿಯ ಒಂದು ಮಗ್ಗುಲಲ್ಲಿರೋ ಆ ಚಿಟ್ಟೆಯ ಮೇಲೆ ಕೂತರೆ ಪೂರ್ವವನ್ನೆಲ್ಲ ಕೆಂಪೇರಿಸುತ್ತ ಮೇಲೇರುವ ದೊಡ್ಡ ಗೋಳದಂಥ ಸೂರ್ಯ ಕಾಣಿಸುತ್ತಾನೆ. ಸೂರ್ಯನ ಆ ಬಾಲಸ್ವರೂಪವನ್ನು ಕಣ್ತುಂಬಿಕೊಳ್ಳುವ ಸುಖಕ್ಕಾಗಿ ಯೋಗುಗೌಡ ಕಾದುಕೂತಿರುತ್ತಿದ್ದ ಕಾಲವಿತ್ತು. ಯೋಗುಗೌಡನಿಗೆ ಅಂಥದೊಂದು ಸುಖದ ಕನಸನ್ನು ಹಂಚಿದ್ದವನು ಅವನ ಅಪ್ಪ. ಅವನೇ ಆ ಮನೆಯನ್ನು ಕಟ್ಟಿದವನು. ಮೂಡುವ ದಿಕ್ಕು ಮನೆಯ ಅಂತಃಕರಣವನ್ನು ಯಾವಾಗಲೂ ಕಾಯುತ್ತಾ ಇರಬೇಕು ಎಂದೇ ಅವನು ಜಗುಲಿಯ ಪ್ರತಿ ಮೂಲೆಯೂ ಮುಂಜಾವದ ಸಿರಿಗೆ ತೆರೆದುಕೊಳ್ಳುವ ಹಾಗೆ ಕಟ್ಟಿದ್ದ. ನೆಲಮಟ್ಟದಿಂದ ಏಳು ಮೆಟ್ಟಿಲುಗಳಷ್ಟು  ಎತ್ತರದಲ್ಲಿದ್ದ ಮನೆ ಅದು. ಅಂಥ ಮನೆಯ ಜಗುಲಿಯಲ್ಲಿನ ಚಿಟ್ಟೆಯಂತೂ ಮತ್ತೆ ಅರ್ಧ ಆಳೆತ್ತರವಿತ್ತು. ಹಾಯಾಗಿ ಅಡ್ಡಾಗುವುದಕ್ಕೆ ಮಾತ್ರವಲ್ಲ, ಆನಿಸಿಕೊಂಡು ಕೂರುವುದಕ್ಕೂ ಆಗುವ ಹಾಗೆ ಕಟ್ಟಿದ್ದ ಆ ಚಿಟ್ಟೆ, ಎಂಥ ತಾಪತ್ರಯವನ್ನೂ ಮರೆಸಿಬಿಡುವಂಥ ತಂಪಾದ ನೇವರಿಕೆಯನ್ನು ಕರುಣಿಸಬಲ್ಲ ಹದವಾದ ಗಾಳಿಯ ತೋಳುಗಳಲ್ಲೇ ತೂಗುತ್ತಿತ್ತು ಯಾವಾಗಲೂ. ಯೋಗುಗೌಡನ ಅಪ್ಪ ತನ್ನ ಬದುಕಿನ ಒಂದು ಹಂತದಿಂದ ಆ ಚಿಟ್ಟೆಯ ಮಟ್ಟಿಗೆ ಅಧಿಪತಿಯಂತೆಯೇ ಬೆಳಗಿದ್ದವನು.

ಅಪ್ಪನ ಕಾಲ ಮುಗಿದು ಯೋಗುಗೌಡನ ಕೈಗೆ ಸವತೆಹಳ್ಳಿಯ ಪಂಚಾಯ್ತಿಕಟ್ಟೆ ವಾರಸುದಾರಿಕೆ ಬಂದಾಗ ಅವನಿಗೆ ಐವತ್ತರ ಮೇಲಾಗಿತ್ತು ಅನ್ನುವುದಕ್ಕಿಂತ ಹೆಚ್ಚಾಗಿ, ಅವನ ಬೆನ್ನಿಗೊಂದು ಚರಿತ್ರೆಯ ಹೆಗ್ಗಳಿಕೆಯೇ ಇತ್ತು. ಯೋಗುಗೌಡನನ್ನು ಸವತೆಹಳ್ಳಿಯ ಸಂತನ ಸ್ಥಾನಕ್ಕೆ ಏರಿಸುವಲ್ಲಿ ಅವನ ಅಪ್ಪ ಹೇಳಿದ ಒಂದೊಂದು ಕಥೆಯೂ, ಅಪ್ಪ ಕಲಿಸಿದ ಒಂದೊಂದು ಮಾತೂ ಕೈಗೂಡಿಸಿದ್ದವು. ಹುಡುಗಾಟಿಕೆಯೆಲ್ಲ ಮರೆತುಹೋದ ಮೇಲೂ ಮತ್ತೆ ರಾತ್ರಿಯ ಬಾನಲ್ಲಿ ನಕ್ಷತ್ರಗಳನ್ನೆಣಿಸಲು, ಚಂದ್ರನ ಓಟದ ಜೊತೆ ಒಂದಾಗುತ್ತ ಈ ಜೀವನದಾಚೆಗಿನ ದಿಗಂತದ ಸಾಮೀಪ್ಯ ಗಳಿಸಲು ಯೋಗುವಿಗೆ ಒದಗಿದ್ದು ಅಪ್ಪ ಬಹು ಸಮಯ ಕಳೆಯುತ್ತಿದ್ದ ಆ ಚಿಟ್ಟೆಯೇ ಆಗಿತ್ತು. ಅಲ್ಲಿ ಅಪ್ಪ ಮಲಗಿದ್ದರೆ ಒಂದು ಬಗೆಯಲ್ಲಿ, ಆನಿಸಿಕೊಂಡು ಕೂತಿದ್ದರೆ ಮತ್ತೊಂದೇ ಬಗೆಯಲ್ಲಿ ಆಕಾಶದ ಬೆಳಕು ಅವನ ಕಣ್ಣೊಳಗೆ ಮಿನುಗುತ್ತಿದ್ದುದು ಯೋಗಿಗೆ ಕಾಣಿಸುತ್ತಿತ್ತು.

ಯೋಗಿ ಅಪ್ಪನ ಆಸರೆಯಲ್ಲೇ ಬೆಳೆದವನು. ಹಸುಗೂಸಾಗಿದ್ದಾಗಲೇ ಅವನ ತಾಯಿ ಕಣ್ಮುಚ್ಚಿಬಿಟ್ಟಿದ್ದಳು. ಪುಣ್ಯಾತಗಿತ್ತಿ ಎಂಬ ಪದ ಸಿಕ್ಕಿತ್ತು ಅವಳಿಗೆ, ಊರ ಹೆಂಗಸರ ಬಾಯಲ್ಲಿ. ಯೋಗಿ ಬೆಳೆದದ್ದು ಇನ್ನಾವಳದೋ ಎದೆಹಾಲು ಕುಡಿದು. ತನಗೆ ಎದೆಹಾಲು ಕುಡಿಸುವುದಕ್ಕಿಂತಲೂ ಮಿಗಿಲಾದ ರಹಸ್ಯ ಸಂಬಂಧವೇನಾದರೂ ಆ ಹೆಂಗಸಿಗೂ ಅಪ್ಪನಿಗೂ ಮಧ್ಯೆ ಇತ್ತಾ ಎಂಬ ಅನುಮಾನ ಕೂಡ ಬೆಳೆದ ಯೋಗಿಯ ತಲೆಯೊಳಗೆ ಹೊಕ್ಕಿತ್ತು. ಆದರೆ ಅವನಿಗೆ ಎದೆಹಾಲುಣಿಸಿದ್ದ ಆ ಹೆಂಗಸು ಆಗಲೇ ಹಣ್ಣಾಗಿ ಹೋಗಿದ್ದಳು. ಅಂಥವಳ ಬಗ್ಗೆ ತಾನು ಏನೆಲ್ಲಾ ಯೋಚಿಸ್ತಾ ಕೂತಿದ್ದೀನಲ್ಲ ಅನ್ನುವ ನೋವು ಕೂಡ ಯೋಗಿಯನ್ನು ಬಾಧಿಸುತ್ತಿತಾದರೂ, ಒಂದು ಕಾಲದಲ್ಲಿ ಎಂಥ ಗಂಡಸನ್ನೂ ವಿಚಲಿತಗೊಳಿಸಬಲ್ಲ ಸುಂದರಿಯಾಗಿದ್ದಳು ಎಂಬುದು ಈಗಲೂ ಅವಳ ಚಹರೆಯಿಂದ ಗೊತ್ತಾಗುತ್ತದಲ್ಲ ಎನ್ನಿಸಿ ಮತ್ತೆ ಸಂಶಯದ ನೆರಳಿನಡಿಯಲ್ಲಿ ತೆವಳುತ್ತಿದ್ದ.

ಅಪ್ಪ ರಸಿಕನಾಗಿದ್ದನಾ ಎಂಬ ಪ್ರಶ್ನೆ ಕೂಡ ಅದೆಷ್ಟೋ ಸಲ ಕಾಡಿದ್ದಿದೆ ಯೋಗಿಯನ್ನು. ಅಪ್ಪ ಕಟ್ಟಿಸಿದ್ದ ಮನೆಯ ಸೊಗಸನ್ನು ಅಪ್ಪನಿಗಿಂತ ಹೆಚ್ಚು ಆಸ್ವಾದಿಸಿದ್ದು ತಾನೇ. ಯಾವ ಮೂಲೆಯಿಂದ ನೋಡಿದರೂ ಆ ಮನೆಯ ಗತ್ತೇ ಗತ್ತು. ಅದಕ್ಕೊಂದು ಸಿರಿವಂತಿಕೆಯ ಕಳೆ ತಾನೇತಾನಾಗಿಯೇನೊ ಎಂಬಂತೆ ಬಂದುಬಿಟ್ಟಿತ್ತು. ಅಷ್ಟೊಂದು ಆಸ್ಥೆವಹಿಸಿ ಕಟ್ಟಿದ್ದ ಮನೆಯನ್ನು ಅಪ್ಪ ಮಾತ್ರ ಯಾವತ್ತೂ ವಿಪರೀತವೆಂಬಂಥ ಮೋಹದಿಂದ ಕಂಡಿದ್ದೇ ಇರಲಿಲ್ಲ. ಆದರೆ ಅಪ್ಪ ಮಲಗುವುದಕ್ಕೆಂದು ಮಾಡಿದ್ದ ಆ ದೊಡ್ಡ ಕೋಣೆಯಲ್ಲಿದ್ದ ಶೃಂಗಾರಮಯ ಚಿತ್ರ ಹೇಳುತ್ತಿದ್ದುದೇನು ಹಾಗಾದರೆ? ಮಿಲನಕ್ಕೆ ಅಣಿಗೊಳ್ಳುತ್ತಿರುವ ಗಂಡು ಹೆಣ್ಣು. ಆ ಜೋಡಿಯ ಮುಖದಲ್ಲಿ ಪ್ರಜ್ವಲಿಸೋ ಕಾಮೋನ್ಮಾದ. ತನ್ನ ಹುಟ್ಟಿಗಿಂತ ಮುಂಚಿನಿಂದ ಶುರುವಾಗಿ, ತನಗೆ ಬುದ್ಧಿ ತಿಳಿಯುವ ಘಟ್ಟದತನಕ ಆ ಕೋಣೆಯೊಳಗೆ, ಆ ಶೃಂಗಾರಮಯ ಚಿತ್ರದ ಎದುರಿನಲ್ಲಿ ಏನೇನು ನಡೆದಿರಬಹುದು? ತಾನು ಬೆಳೆದ ಮೇಲಾದರೂ ಅದನ್ನು ಅಳಿಸಿಹಾಕಬೇಕೆಂದು ಅಪ್ಪ ಏಕೆ ಯೋಚಿಸಲಿಲ್ಲ? ಅಪ್ಪನ ಮುಖದೊಳಗೆ ಸದಾ ನಳನಳಿಸುತ್ತಿದ್ದ ಉಮೇದಿಗೂ ಆ ಚಿತ್ರಕ್ಕೂ ಏನಾದರೂ ಅಂತರ್ಗತ ಸಂಬಂಧವಿತ್ತಾ? ತಾನು ಆ ಚಿತ್ರವನ್ನು ನೋಡುತ್ತಲೇ ಬೆಳೆದೆ. ಊರೊಳಗಿನ ಯಾವುದೇ ಹೆಣ್ಣನ್ನೂ ತಾನೇ ಎಂದು ಬಿಂಬಿಸಿಬಿಡಬಲ್ಲಂಥ ಅಸಾಧಾರಣತೆಯಿಂದ ಮೈವೆತ್ತ ಹಾಗಿತ್ತು ಆ ಚಿತ್ರ. ವೈಯಕ್ತಿಕ ಎನ್ನುವಂಥ ಶರೀರದ ಹಂಗು ಮೀರಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಹೆಚ್ಚುಗಾರಿಕೆ ಅದು ಹೇಗೆ ಒಳಗೊಂಡಿತ್ತು ಆ ಚಿತ್ರದಲ್ಲಿ? ಯೋಗಿಗೆ ಯಾವತ್ತೂ ಆ ನಿಗೂಢತೆ ಬಗೆಹರಿಯಲೇ ಇಲ್ಲ. ಅಂಥ ಬಗೆಹರಿಯದ ಪ್ರಶ್ನೆಗಳನ್ನಿಟ್ಟುಕೊಂಡೇ ಅವನು ಅದೇ ಕೋಣೆಯೊಳಗೆ ಅದೇ ಚಿತ್ರದ ಮುಂದೆ ತನ್ನ ಹೆಂಡತಿಯನ್ನು ಕೂಡಿದ್ದ. ಅವಳು ಸುಖದ ನರಳಿಕೆಗಳಲ್ಲಿ ಆ ಕೋಣೆಯೊಳಗೊಂದು ಸಮುದ್ರವೇ ಉಕ್ಕಿತೆನ್ನುವಂಥ ಭಾಸ ಹುಟ್ಟಿಸುತ್ತಿದ್ದರೆ, ತಾನು ಮಾತ್ರ ಅನಿಯಂತ್ರಿತ ಯಾನದ ಪಥಿಕನಂತೆ ದಿಕ್ಕೆಟ್ಟು, ಎಲ್ಲ ಖಾಲಿಯಾದಂತಾಗಿ ಉರುಳಿಕೊಂಡುಬಿಟ್ಟಿರುತ್ತಿದ್ದ. ತನಗೆ ಹೆಣ್ಣಿನ ಜೊತೆ ಇಡಿಯಾಗಿ ಮೈಮರೆಯುವುದಕ್ಕೇ ಆಗುವುದಿಲ್ಲವೇ? ತನ್ನೊಳಗಿನ ಈ ದೋಷದ ಬಗ್ಗೆ ಯಾವತ್ತೋ ತಿಳಿದುಬಿಟ್ಟವನ ರೀತಿಯ ಜಾಣ್ಮೆಯಿಂದಲೇ ಅಪ್ಪ ಆ ಕೋಣೆಯನ್ನು ಅಂಥದೊಂದು ಶೃಂಗಾರಮಯ ಚಿತ್ರದ ಬಿಡಿಸಲಿಕ್ಕಾಗದ ಸಾಂಗತ್ಯದೊಂದಿಗೆ ಕೂಡಿಸಿ ಕಟ್ಟಿಸಿದನೆ? ಪ್ರಶ್ನೆಗಳು ಹೀಗೆ ಪೂರ್ತಿ ವಿರುದ್ಧ ದಿಕ್ಕಿನಲ್ಲಿ ತಿವಿಯತೊಡಗಿದಾಗಲಂತೂ ಮತ್ತಷ್ಟು ಕನಲಿಬಿಟ್ಟಿದ್ದ ಯೋಗಿ. ಆ ಕನಲಿಕೆಯನ್ನು ಇನ್ನೂ ಹೆಚ್ಚಿಸುವ ಹಾಗೆ, ತನಗೆ ಬುದ್ಧಿ ತಿಳಿದಾಗಿಂದಲೂ ಅಪ್ಪ ಜಗುಲಿಯಲ್ಲಿನ ಚಿಟ್ಟೆಯ ಮೇಲೆಯೇ ಮಲಗುತ್ತಿದ್ದನೆಂಬ ಸತ್ಯ ಯೋಗಿಯ ಕಣ್ಣೆದುರು ಬರೋದು. ಇದೆಲ್ಲ ಒಂದು ಕಡೆಯಾದರೆ, ತನ್ನೊಂದಿಗೆ ಕೂಡಿದ ಮಾರನೇ ಬೆಳಗು ತನ್ನ ಹೆಂಡತಿಯಲ್ಲಿ ಕಾಣಿಸುತ್ತಿದ್ದ ವಿಲಕ್ಷಣ ಉಲ್ಲಾಸ ಮತ್ತೊಂದು ಕಡೆಯಿಂದ ಯೋಗಿಯನ್ನು ಬಾಧಿಸುತ್ತಿತ್ತು. ಅಪ್ಪ ಕಟ್ಟಿದ್ದ ಆ ಮನೆ ಮತ್ತಷ್ಟು ಕಣ್ತುಂಬುವ ಹಾಗೆ ತನ್ನ ಹೆಂಡತಿ ಅದನ್ನು ಒಪ್ಪಗೊಳಿಸುತ್ತ, ಮನೆಯೊಳಗಿನ ಅಷ್ಟೂ ಕೋಣೆಗಳೊಳಗೆ ಹೋಗಿ ಬರುತ್ತ, ಕಿವಿ ನಿಮಿರುವುದಕ್ಕೆ ಕಾರಣವಾಗುವಂತೆ ಅದೇನೋ ಹಾಡು ಗುನುಗುತ್ತ ಅವಳು ಥಳಥಳಿಸುತ್ತಿದ್ದುದು ತನ್ನೊಂದಿಗೆ ಹಾಸಿಗೆಯಲ್ಲಿ ನಾಗಿಣಿಯಂತೆ ಹೊರಳುತ್ತ, ತಾನು ಅನಾಸಕ್ತನಂತೆ ಸೋರಿಹೋಗುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಸುಖದ ಶಿಖರ ಮುಟ್ಟುತ್ತಿದ್ದ ಇರುಳಿನ ಮಾರನೇ ಬೆಳಗೇ ಆಗಿರುತ್ತಿತ್ತು. ಅವಳಿಗೆ ತನ್ನ ತೆಕ್ಕೆಯ ಹಂಗನ್ನೂ ಮೀರಿದ ಬೇರೊಂದು ರಹಸ್ಯ ಬಿಗಿಯಾಲಿಂಗನದ ಕೃಪೆಯಾಗುತ್ತಿದೆಯಾ? ಕಣ್ಣಿಗೆ ಕಾಣುವುದಕ್ಕಿಂತ ಬೇರೆಯಾದ ಒಂದು ಪ್ರಭೆಯಲ್ಲಿ ಈ ಮನೆಯೊಳಗಿನ ಚಲನೆಗಳು ನಿಕ್ಕಿಯಾಗುತ್ತಿವೆಯಾ? ಹೀಗೆ ಮತ್ತೆ ಪ್ರಶ್ನೆಗಳ ಹುತ್ತದೊಳಗೆ ಭುಸುಗುಡುವಂತಾಗುತ್ತಿತ್ತು ಯೋಗಿಗೆ.

ಅದೊಂದು ದಿನ, ಅಲ್ಲಿಯತನಕವೂ ಅರಿವಿಗೇ ಬಂದಿರದಂಥ ಮತ್ತೊಂದು ಸಂಗತಿ ತಿಳಿದುಬಿಟ್ಟಿತ್ತು ಯೋಗಿಗೆ. ಬೆಳಗ್ಗೆ ಹೊಲ ತೋಟ, ಆಳು ಕಾಳು ಅಂತ ಅವನು ಮನೆಯಿಂದ ಹೊರಬಿದ್ದರೆ ಮತ್ತೆ ಬರುತ್ತಿದ್ದುದು ಮಧ್ಯಾಹ್ನದ ಊಟಕ್ಕೇ. ಊಟ ಮುಗಿಸಿ ಮತ್ತೆ ಹೊರಟರೆ ವಾಪಸಾಗುತ್ತಿದ್ದುದು ಮನೆಯೊಳಗೆ ದೀಪಗಳು ಬೆಳಗುತ್ತಿದ್ದ ಹೊತ್ತಿಗೇ. ಹೀಗಿರುವ ದಿನಚರಿಯಲ್ಲಿ ಅವತ್ತು ಅಚಾನಕ್ಕಾಗಿ ಮನೆಗೆ ಬಂದಿದ್ದ. ಆಗಿನ್ನೂ ಸಂಜೆ ಬೀಳುವುದಕ್ಕೆ ವೇಳೆಯಿತ್ತು. ನೋಡಿದರೆ ಹೆಂಡತಿ ಕಾಣಿಸಲಿಲ್ಲ. ಈ ಅಪ್ಪ ಮಾತ್ರ ಚಿಟ್ಟೆಯ ಮೇಲೆ ಕೂತು, ಮೊಮ್ಮಗನನ್ನು ಆಟವಾಡಿಸ್ತಾ ಇದ್ದ. ಒಳಕೋಣೆಗೆ ಹೋಗಿ ನೋಡಿದ್ರೆ ಅಲ್ಲೂ ಇರಲಿಲ್ಲ ಅವಳು. ಆಗಲೇ ಅವಳ ನಗು ಅತ್ಯಂತ ಮಿದುವಾಗಿ ಆದರೆ ಕಿವಿಯೊಳಗೆ ಅಲೆಗೊಳ್ಳುವಂತೆ ಕೇಳಿಸಿತ್ತು, ಮಲಗುವ ಕೋಣೆಯಿಂದ. ಒಂದು ಕ್ಷಣ ನಿಂತಲ್ಲೇ ಕುಸಿದಂತಾಯಿತು. ಈ ಅಪ್ಪನಿಗೆ ಮನೆಯೊಳಗೆ ಏನೇನು ನಡೆಯುತ್ತದೆ ಅನ್ನೋದು ಕೂಡ ತಿಳಿಯೋದಿಲ್ಲವಲ್ಲ ಎಂದು ಕೆಂಡ ಕಾರತೊಡಗಿದ. ಕಾಲುಗಳು ನಿಂತಲ್ಲಿ ನಿಲ್ಲಲಾರದೆ ನಡುಗತೊಡಗಿದವು. ಧುಮುಗುಡುತ್ತ, ದುಡುಗುಟ್ಟಿಕೊಂಡು ಸೀದಾ ಆ ಕೋಣೆಯ ಕಡೆ ನಡೆದ. ಬಾಗಿಲು ತೆರೆದೇ ಇತ್ತು. ಬಾಗಿಲ ಮರೆಯಿಂದಲೇ ಒಳಗಿಣುಕಿದ. ನೋಡುತ್ತಾನೆ: ಅಲ್ಲಿ ಅವಳು ಆ ಚಿತ್ರದ ಮುಂದೆ ವೈಯಾರಿಯಂತೆ ನಿಂತಿದ್ದಾಳೆ. ಆ ಚಿತ್ರದಲ್ಲಿನ ಹೆಣ್ಣಿನ ಶೃಂಗಾರದ ಭಂಗಿಯನ್ನೇ ಅನುಕರಿಸುವ ಪ್ರಯತ್ನ ನಡೀತಾ ಇದೆ. ಆ ಪ್ರಯತ್ನದಲ್ಲಿ ಮತ್ತೆ ಮತ್ತೆ ಸೋಲುತ್ತಿರುವುದಕ್ಕಾಗಿ ತನ್ನ ಬಗ್ಗೆ ತಾನೇ ನಾಚಿ ನಗುತ್ತಿದ್ದಾಳೆ. ಯೋಗಿ ನಡುಗಿಹೋದ. ಆ ತಲ್ಲಣದ ಕ್ಷಣದಲ್ಲಿ ಕೂಡ, ಸೊಂಟವನ್ನು ವಿಚಿತ್ರ ಬಿಂಕದಲ್ಲಿ ಬಾಗಿಸಿ ತುಂಬಿದೆದೆಯನ್ನು ಅತ್ಯಂತ ಉತ್ಕಟತೆಯಲ್ಲಿ ಅನುಗೊಳಿಸಿ ನಿಂತಿದ್ದ ಅವಳ ಲಾವಣ್ಯಕ್ಕೆ ಬೆರಗಾಗಿ ಹೋದ. ಇವಳ ಇಂಥ ಚೆಲುವು ತನಗೆ ಕಾಣಲೇ ಇಲ್ಲವೇ ಎನ್ನಿಸಿತು ಆ ಕ್ಷಣಕ್ಕೆ. ಆವಾಹಿಸಿಕೊಳ್ಳದೆ, ಅನುಭವಿಸದೆ, ಒಳಗೊಳ್ಳದೆ ಮಗುವಿಗೆ ಬರೀ ಅಪ್ಪನಾದದ್ದೇ ದೊಡ್ಡದು ಅನ್ನುವವನ ಹಾಗೆ ಇದ್ದಲ್ಲೇ ಇದ್ದುಬಿಟ್ಟೆನಾ ಅನ್ನಿಸಿ ತಲೆತಗ್ಗಿಸಿದ, ಅವಳೆದುರೇ ತಲೆತಗ್ಗಿಸಿದವನ ಹಾಗೆ. ಆ ಕಡೆ ಅವಳು ಒಂದು ಅನಪೇಕ್ಷಿತ ಮಧ್ಯಪ್ರವೇಶಕ್ಕೆ ತತ್ತರಿಸಿದ್ದಳು. ಎಲ್ಲ ಬಯಲಾದ ಹಾಗೆನ್ನಿಸಿ ಬಿಳಿಚಿಕೊಂಡುಬಿಟ್ಟಳು. ಅವತ್ತು ರಾತ್ರಿ ಯೋಗಿ ನಿಜವಾಗಿಯೂ ಅವಳನ್ನು ಬಯಸಿದ. ಗಾಢ ಬೆಸುಗೆಗೆ ಹಾತೊರೆದು ಏರಿಬರುವವಳಂತಿರುತ್ತಿದ್ದ ಅವಳು ಅವತ್ತು ಮಾತ್ರ ದೂರ ಸರಿದಳು. ಬೆಳಗ್ಗೆದ್ದು ನೋಡಿದರೆ ಮಲಗಿದ್ದಲ್ಲೇ ಹೆಣವಾಗಿದ್ದಳು.

ಅಪ್ಪನ ಮುಂದೆ ಗಳಗಳನೆ ಅತ್ತುಬಿಟ್ಟಿದ್ದ ಯೋಗಿ. ಹಿಂದಿನ ಸಂಜೆ ಏನಾಯಿತು ಅನ್ನುವುದನ್ನು ಹೇಳಿದಾಗ ಅಪ್ಪ ಆಡಿದ ಮಾತುಗಳಂತೂ ಇನ್ನೂ ಬಾಧಿಸಿದ್ದವು ಅವನನ್ನು. ಅವಳ ಲೋಕವನ್ನು ನೀನೇಕೆ ಚೂರುಮಾಡಿಬಿಟ್ಟೆ ಎಂಬರ್ಥದಲ್ಲಿ ಅಪ್ಪ ಪ್ರಶ್ನಿಸಿದ್ದ. ಹಾಗಾದರೆ, ಅವಳ ಆ ರೀತಿ ಅದೆಷ್ಟು ಕಾಲದಿಂದ ಅಬಾಧಿತವಾಗಿ ನಡೆದುಬಂದಿತ್ತು? ಅಪ್ಪನಿಗೆ ಅದೆಲ್ಲ ಗೊತ್ತಿತ್ತೇ? ಯೋಗಿಯ ಮುಂದೆ ಪ್ರಶ್ನೆಗಳು ಮುಗಿಯಲೇ ಇಲ್ಲ.

ಯೋಗಿಗೂ ಯೋಗಿಯ ಅಪ್ಪನಿಗೂ ದೊಡ್ಡ ಆಘಾತವಾದದ್ದು ಅವಳು ಆತ್ಮಹತ್ಯೆ ಮಾಡಿಕೊಂಡು ಬದುಕು ಮುಗಿಸಿಕೊಂಡಳೆಂಬ ಕಾರಣಕ್ಕೆ. ಅದಕ್ಕಿಂತ ದೊಡ್ಡ ಅಪರಾಧಿ ಭಾವದಿಂದ ಜರ್ಜರಿತವಾಗೋ ಹಾಗಾದದ್ದು ಮನೆತನದ ಮರ್ಯಾದೆ ಸಲುವಾಗಿ ಆತ್ಮಹತ್ಯೆ ಅನ್ನೋದನ್ನು ಮರೆಮಾಚಿ ಇಡೀ ಸವತೆಹಳ್ಳಿಯನ್ನು ವಂಚಿಸುವ ಸಂದಿಗ್ಧತೆಗೆ ಆಳಾದೆವಲ್ಲ ಎಂಬುದಕ್ಕೆ.

ಆ ತೀವ್ರ ಸಂಕಟದಿಂದ ಯೋಗಿಯ ಅಪ್ಪ ಹೊರಬರಲೇ ಇಲ್ಲ. ತನ್ನ ಹೆಂಡತಿ ಹಸುಗೂಸನ್ನೇ ತಬ್ಬಲಿಯಾಗಿಸಿ ಕಣ್ಮುಚ್ಚಿದ್ದುದು ಇನ್ನೂ ಮಾಸದ ಗಾಯದಂತಿರುವಾಗಲೇ ಸೊಸೆಯೂ ಹೊರಟುಹೋದಳೆಂಬುದು ಒಂದು ಯಾತನೆಯಾಗಿ ಆಕ್ರಮಿಸತೊಡಗಿತು. ಯೋಗಿಯ ಥರವೇ ಮೊಮ್ಮಗನೂ ಅಮ್ಮನ ಮಡಿಲ ಅನುಭೂತಿಯನ್ನು ಹಣೆಯಲ್ಲಿ ಬರೆದುಕೊಂಡು ಬರಲಿಲ್ಲವೇನೊ ಎನ್ನಿಸಿ ಹೃದಯ ಒಡೆದುಹೋಯಿತು. ತನ್ನ ಪಾಡೂ ಅಷ್ಟೇ ಆಗಿತ್ತಲ್ಲ ಅನ್ನಿಸಿ, ಇದೊಂದು ಶಾಪವಾ ಎಂಬ ಸಂದೇಹ ಯಾವತ್ತೂ ಜೀವ ಹಿಂಡುವ ಹಾಗೆ ಮತ್ತೆ ವ್ಯಾಪಿಸಿತು. ಈ ಮನೆಗೂ ಹೆಣ್ಣುಜೀವಕ್ಕೂ ಆಗಿಬರೋದಿಲ್ಲವಾ ಎಂಬುದು ಇನ್ನಿಲ್ಲದಂತೆ ತಿವಿಯತೊಡಗಿತು. ಈ ಮನೆತನ ಹೆಣ್ಣು ಜೀವ ಅಂತ ಕಂಡಿದ್ದು ಒಮ್ಮೆ ಮಾತ್ರವಂತೆ. ಅವಳು ನನ್ನ ಅಕ್ಕ. ಅವಳ ಮುಖವೂ ತನಗೆ ಗೊತ್ತಿಲ್ಲ. ಭಯಂಕರ ರೀತಿಯಲ್ಲಿ ಸಾವಿನ ಪಾಲಾಗಿದ್ದಳು ಅನ್ನುವ ನೋವಿನ ಕಥೆ ಮಾತ್ರವೇ ಗೊತ್ತು. ಅವಳು ಹಾಗೆ ಸತ್ತಾಗ ನಾನಿನ್ನೂ ಹುಟ್ಟಿ ಕೆಲವೇ ತಿಂಗಳಾಗಿದ್ದವಂತೆ. ಮಗಳ ಸಾವಿನ ಬೆನ್ನಲ್ಲೇ ಅಮ್ಮ ಕೂಡ ಹೋಗಿಬಿಟ್ಟಿದ್ದಳಂತೆ. ಬೇರೆ ಯಾರದೋ ಕೈಗಳಲ್ಲಿ ನಾನು ಬೆಳೆದೆನಂತೆ. ತನಗೆ ಹೆಣ್ಣು ಹುಟ್ಟಲಿ ಎಂದು ಬಯಸಿದ್ದಿತ್ತು ಯೋಗಿಯ ಅಪ್ಪ. ಆದರೆ ಯೋಗಿ ಹುಟ್ಟಿದ್ದ. ಯೋಗಿಗಾದರೂ ಹೆಣ್ಣುಮಗುವಾಗಲಿ ಎಂದು ಹಂಬಲಿಸಿದ್ದ. ಮತ್ತೆ ಆಗಿದ್ದು ಗಂಡುಮಗುವೇ. ಅಪ್ಪ ಇಂಥದೊಂದು ಹೇಳಿಕೊಳ್ಳಲಿಕ್ಕಾಗದ  ಕೊರಗಿನಲ್ಲಿದ್ದಾಗಲೇ ತನ್ನ ಹೆಂಡತಿ ಸತ್ತುಹೋಗಿದ್ದು ಯೋಗಿಯನ್ನು ಒಳಗಿಂದೊಳಗೇ ಅಧೀರನನ್ನಾಗಿ ಮಾಡಿತ್ತು. ಹೆಂಡತಿ ಹಾಗೆ ಹೋಗಿಬಿಟ್ಟ ನಂತರ ಯಾವುದರ ಬಗ್ಗೆ ಯೋಗಿ ಹೆದರಿದ್ದನೋ ಅದೇ ಆಗಿಹೋಯಿತು. ಅಪ್ಪ ತೀರಿಕೊಂಡುಬಿಟ್ಟ. ಕಟ್ಟಕಡೇ ಕ್ಷಣದಲ್ಲಿ ಅಪ್ಪ ಏನನ್ನೋ ಹೇಳುವುದಕ್ಕೆ ಪ್ರಯತ್ನಿಸಿದ್ದ. ತಾನು ಅರ್ಥ ಮಾಡಿಕೊಂಡ ಹಾಗೆ ಅದು, ಆ ಕೋಣೆಯಲ್ಲಿದ್ದ ಚಿತ್ರವನ್ನು ಅಳಿಸಿಬಿಡು ಅನ್ನೋದಾಗಿತ್ತು. ಅದನ್ನು ಅಳಿಸಬೇಕು ಅನ್ನೋದು ಯಾವತ್ತಿನಿಂದಲೂ ತನ್ನ ಮನಸ್ಸಲ್ಲಿತ್ತು ಯೋಗಿಗೆ. ಆ ಕೆಲಸ ಮಾಡಿಮುಗಿಸಿಬಿಟ್ಟ. ಆದರೆ, ಅದೆಲ್ಲ ಆದ ಮೇಲೆ, ತನ್ನ ಮನಸ್ಸಲ್ಲಿದ್ದುದನ್ನು ತನ್ನ ಅಪ್ಪ ಹೇಳಿದ್ದು ಎಂಬ ನೆಪ ಮುಂದೆ ಮಾಡಿಕೊಂಡು ಸಾಧಿಸಿದೆನಾ ಎಂಬ ತಳಮಳ ಯಾವತ್ತೂ ಯೋಗಿಯ ಮನಸ್ಸನ್ನು ಕುಟುಕುತ್ತಲೇ ಉಳಿಯಿತು.

ಕೋಣೆಯಿಂದ ಆ ಚಿತ್ರವೇನೋ ಅಳಿದುಹೋಗಿತ್ತು. ಆದರೆ ಅದರ ಮುಂದೆ ನಿಂತು ಅತ್ಯಂತ ಏಕಾಂತದಲ್ಲಿ ಕಂಗೊಳಿಸಿದ್ದ ತನ್ನ ಹೆಂಡತಿ ಜೀವ ಕಳೆದುಕೊಳ್ಳಲು ತಾನೇ ಕಾರಣವಾಗಿಬಿಟ್ಟೆ ಅನ್ನುವುದು ಮಾತ್ರ ಅಳಿಸಿಹಾಕಿಬಿಡುವಂಥದ್ದಾಗಿರಲಿಲ್ಲ. ಚಿತ್ರದ ಮುಂದೆ ನಿಂತು ನಕ್ಕಿದ್ದ ಅವಳ ನಗುವಿನ ಸದ್ದು ಕಿವಿಯಲ್ಲಿ ಮತ್ತೆ ಮತ್ತೆ ತುಂಬಿಕೊಂಡುಬಿಡೋದು. ಅದೆಂಥ ಸುಖದ ನಗುವಾಗಿತ್ತಲ್ಲ? ಅಂಥ ಸುಖವನ್ನು ಅವಳಿಗೆ ತಾನು ಕಡೆಯತನಕವೂ ಕೊಡಲಾರದೇ ಹೋದೆನಾ? ಅದರ ಬದಲಾಗಿ ವಿನಾಕಾರಣ ಅವಳನ್ನು ಅನುಮಾನಿಸಿದೆ. ಅದು ತನ್ನ ಮನಸ್ಸೊಳಗೇ ಹುಟ್ಟಿದ ಪಾಪ. ಹೀಗೆ ಯೋಗಿ ಕನಲುವುದು ದಿನೇದಿನೇ ಹೆಚ್ಚಿತು.

ಒಂದರ ಬೆನ್ನಿಗೊಂದರಂತೆ ಮನೆಯೊಳಗೆ ಸಂಭವಿಸಿದ ಎರಡು ಸಾವುಗಳು ಯೋಗುಗೌಡನನ್ನು ಮಹಾಮೌನಿಯಾಗಿಸಿಬಿಟ್ಟವು. ಮಗನನ್ನು ಬೆಳೆಸಬೇಕಾದ ಹೊಣೆಯೊಂದು ಹೆಗಲ ಮೇಲಿರಲಿಲ್ಲವೆಂದರೆ ತಾನು ಆಗಲೇ ಏನಾಗಿಹೋಗುತ್ತಿದ್ದೆನೊ ಎಂದೇ ಯೋಗುಗೌಡ ಎಷ್ಟೋ ಸಲ ಅಂದುಕೊಂಡದ್ದಿದೆ. ಆದರೆ ಸವತೆಹಳ್ಳಿಯ ಒಂದು ಥರದ ಧ್ಯಾನಸ್ಥ ಲಯದ ಆಪ್ತತೆಯಲ್ಲಿ ತಲೆಮಾರುಗಳನ್ನು ಕಂಡ ಮನೆತನವಾಗಿತ್ತು ಅದು. ಸವತೆಹಳ್ಳಿಯ ಪ್ರತಿ ನಡೆಗಳೂ ಯೋಗುಗೌಡನ ಮನೆತನದ ಜೊತೆ ಒಂದು ಬಂಧವಿಟ್ಟುಕೊಂಡೇ ಇರುತ್ತಿದ್ದವು. ಹಾಗೆಯೇ ಆ ಮನೆತನದೊಳಗಿನ ಎಲ್ಲವೂ ಊರ ಪಾಲಿನದೂ ಆಗಿರುತ್ತಿತ್ತು. ಯೋಗುವಿನ ಕಾಲದಲ್ಲಂತೂ ಅದೆಷ್ಟೋ ಸ್ಥಿತ್ಯಂತರಗಳು ಜರುಗಿಬಿಟ್ಟವು. ಪಂಚಾಯ್ತಿ ಕಟ್ಟೆಯ ಸಾಧ್ಯತೆಗಳು ಕ್ಷೀಣಿಸಿದ ತಲಗಳಿಗೆಗೆ ಯೋಗುಗೌಡ ಸಾಕ್ಷಿಯಾಗಬೇಕಾಯಿತು. ಸವತೆಹಳ್ಳಿಯ ಮಟ್ಟಿಗೆ ಅವನ ಹಿರಿಯರು ಹೊಂದಿದ್ದ ಹೊಣೆಗಾರಿಕೆಗಳೆಲ್ಲವನ್ನೂ ಒಂದು ಕಾಲದಲ್ಲಿ ನಿಭಾಯಿಸಿದ್ದವನ ಮುಂದೆ ಪ್ರಭಾವಳಿಯನ್ನು ತೆಗೆದಿಟ್ಟಂಥ ಅನುಭವವೊಂದು ದಟ್ಟವಾಗಿಬಿಟ್ಟಿತು. ಅಲ್ಲಿ ಶೂನ್ಯದ ಗೋಚರವಾಯಿತು. ಇದೆಲ್ಲ ವಿದ್ಯಮಾನಗಳ ಮಧ್ಯೆಯೂ ಸವತೆಹಳ್ಳಿ ಯೋಗುವನ್ನು ಯಾವತ್ತಿನದೇ ಗೌರವದಿಂದ ನೋಡಿತೆಂಬುದು ಮಾತ್ರ ಖರೆ. ಅದಕ್ಕಿಂತ ದೊಡ್ಡ ಧನ್ಯತೆಯಾಗಿ ಯೋಗುವಿನ ಪಾಲಿಗೆ ಒದಗಿದ ಸಂಗತಿಯಿತ್ತು. ಅದು, ಜಲಜಾಕ್ಷಿ.

ಅಪ್ಪ ಮತ್ತೆ ಮತ್ತೆ ಹಂಬಲಿಸಿದ್ದ ಕನಸು ಜಲಜಾಕ್ಷಿಯ ಹುಟ್ಟಿನೊಂದಿಗೆ ಕೈಗೂಡಿತ್ತು. ಈ ಮನೆಗೊಂದು ಹೆಣ್ಣುಜೀವ ಬೇಕು; ಮತ್ತದು ತುಂಬಿದ ಬಾಳನ್ನು ಬಾಳಬೇಕು ಎಂದು ಅಪ್ಪ ಅದೆಷ್ಟು ದೇವರುಗಳ ಮುಂದೆ ಕೈಮುಗಿದು ಕೇಳಿದ್ದನೊ? ಯೋಗುವಿನ ಮೊಮ್ಮಗಳಾಗಿ ಮನೆ ತುಂಬಿದ್ದಳು ಜಲಜಾಕ್ಷಿ.

ಜಲಜಾಕ್ಷಿ ಇಡೀ ಸವತೆಹಳ್ಳಿಯ ಸಂಭ್ರಮವಾದಳು. ಅವಳು ಬಂದ ಮೇಲೆ ಮತ್ತೆ ಯೋಗುಗೌಡನ ಮನೆಗೆ ಹಳೆಯ ಸಿರಿವಂತಿಕೆ ಬಂದಿತ್ತು. ಯೋಗುಗೌಡನ ಮಹಾಮೌನವನ್ನೂ ಮಣಿಸಿಬಿಟ್ಟಿದ್ದಳು ಆ ಮನೆಯ ಮುದ್ದಿನ ಮಗಳು. ಮನೆಯೆಂದರೆ ಜಲಜಾಕ್ಷಿ ಎಂಬಂತಾಗಿತ್ತು.

ಆ ಅಷ್ಟು ದೊಡ್ಡ ಮನೆಯಲ್ಲಿ, ಅವಳದೇ ಕನ್ನಡಿ ಅವಳದೇ ಮಂಚದ ಒಂದು ಪ್ರತ್ಯೇಕ ಪ್ರಪಂಚದಂತೆ ಅವಳ ಕೋಣೆ. ತನ್ನ ಓರಗೆಯ ಎಲ್ಲಾ ಹುಡುಗಿಯರನ್ನು ಜಲಜಾಕ್ಷಿ ಆ ಮನೆಯೊಳಗೆ ಸೇರಿಸುತ್ತಿದ್ದಳಾದರೂ, ಅವರಾರೂ ಗೆಳೆತಿಯ ಸಲಿಗೆಯನ್ನು ದುಂದು ಮಾಡುತ್ತಿರಲಿಲ್ಲ. ಹೀಗಾಗಿ ಅವರೆಲ್ಲರ ಕಣ್ಣಲ್ಲಿ ಜಲಜಾಕ್ಷಿ ದೊಡ್ಡವಳೇ ಆಗಿ, ಅವಳ ಆ ಕೋಣೆ ಬೆಚ್ಚಗಿನ ಸ್ವಪ್ನಕ್ಕೆ ಅವರನ್ನಿಳಿಸುವಂಥದ್ದಾಗಿ ಗಾಢವಾಗುಳಿದಿತ್ತು.

ಆ ಕೋಣೆಯೆಂದರೆ ಅದು ಒಂದೇ ಕೋಣೆಯಲ್ಲ. ಬಾಗಿಲು ತೆರೆದರೆ ಒಂದು, ಇನ್ನೊಂದು, ಮತ್ತೊಂದು ಎಂದು ಮೂರು ಕೋಣೆಗಳ ಪ್ರತ್ಯೇಕ ಮನೆಯೇ ಎಂಬಂತಿರುವ ಅದನ್ನು ಕೋಣೆಯೆಂದೇ ಕರೆದುಕೊಂಡು ಬರಲಾಗಿದೆ. ಈಗ ಜಲಜಾಕ್ಷಿ ಆ ಮನೆಯಲ್ಲಿರುವುದು ಹಾಗಿರಲಿ, ಊರೊಳಗೆ ಇರುವುದೇ ಅಪರೂಪ. ಹಾಗಾಗಿ ಆ ಕೋಣೆಯನ್ನು ಅವಳು ಬಳಸುವುದೂ ಅಷ್ಟೇ ಅಪರೂಪ. ಆದರೂ, ಅದು ಜಲಜಾಕ್ಷಿಗಾಗಿ ಇರುವಂಥದ್ದು ಎಂದುಕೊಂಡೇ ಅವಳ ಕೋಣೆ ಎಂದು ಗೌರವ ಮತ್ತು ವಿನೀತ ಭಾವವನ್ನು ತೋರುವುದು ಯೋಗುಗೌಡನ ಮನೆಯೊಳಗೆ ನಡೆದುಬಂದಿದೆ.

ಅವಳ ಆ ಕೋಣೆಯ ಮುಂಬಾಗಿಲು ತೆರೆದು ಒಳಹೋದರೆ ನೇರ ಮುಖಕ್ಕೆ ಮುಖ ಕೊಟ್ಟು ಸ್ವಾಗತಿಸುವುದೇ ಅಷ್ಟೆತ್ತರದ ಕನ್ನಡಿ. ಈಗಷ್ಟೇ ಅರಳಿದ್ದೆಂಬಂಥ ಭಾಸದಲ್ಲಿ ಒಂದು ಕ್ಷಣ ಅದ್ದಿ ತೆಗೆಯುವಂತಹ ಜೀವಂತ ಹೂಚಿತ್ರಗಳನ್ನು ಬಿಡಿಸಿರುವ ಮರದ ಚೌಕಟ್ಟು ಆ ಕನ್ನಡಿಗೆ. ಯೋಗುಗೌಡನ ಮನೆತನದ ಲಾಗಾಯ್ತಿನ ಆಸ್ತಿಯಂತೆ ಉಳಿದುಬಂದಿದ್ದ ಅದು ಜಲಜಾಕ್ಷಿಯ ಬೆಳವಣಿಗೆಯ ಪ್ರತಿ ಹಂತವನ್ನೂ ತನ್ನ ಕಣ್ಣಲ್ಲಿ ಹಿಡಿದಿದೆ. ನಾಲ್ಕು ತಲಗಳಿಗೆಯ ತರುವಾಯ ಹುಟ್ಟಿದ ಆ ಹೆಣ್ಣುಮಗಳಿಗೆ ಎಷ್ಟೊಂದು ಅಕ್ಕರೆಯಿಂದ ಚೆಲುವನ್ನು ದಯಪಾಲಿಸಿ ಧನ್ಯಗೊಂಡಂತಿದೆ. ಪುಟ್ಟ ಪೋರಿಯಾಗಿದ್ದಾಗ ಫ್ರಾಕನ್ನು ಸೀದಾ ಮೇಲೆತ್ತಿ ಬಾಯಿಗಿಟ್ಟು ಕಚ್ಚುತ್ತಿದ್ದ ಹುಡುಗಿಗೆ ಅನಂತರ ಪ್ರಾಯದ ವಜ್ಜೆಯನ್ನು ಎಂಥದೋ ಬಿಗಿತವನ್ನು ಸಂಭಾಳಿಸಲು ಕಲಿಸಿದ್ದು; ಕೋಡುಬಳೆ ತಿನ್ನುವಾಗಲೂ ಕನ್ನಡಿಯೆದುರೇ ನಿಂತು ತಾನು ಹೇಹೇಗೆಲ್ಲಾ ಜಗಿಯುತ್ತೇನೆ ಎಂದು ನೋಡುತ್ತ ದೊಡ್ಡವರನ್ನು ನಗಿಸುತ್ತಿದ್ದವಳಿಗೆ, ತನ್ನ ಬೆಳೆದ ಕಣ್ಣುಗಳ ಸಮುದ್ರದಲ್ಲಿ ಪೈಪೋಟಿಗೆ ಬಿದ್ದ ಕನಸುಗಳನ್ನು ಹೊತ್ತ ದೋಣಿ ಅಲೆಗಳನ್ನು ದಾಟುವಾಟದಲ್ಲಿ ಚೆಂದಗಟ್ಟಿದೆಯೆಂಬ ಸುಳಿವು ಕೊಟ್ಟಿದ್ದು; ಮೈನೆರೆದ ಅನುಭವವಾದ ಮೊದಲ ಕ್ಷಣದಲ್ಲಿ ತನ್ನ ತುಂಬಾ ಮೂಡಿದ್ದ ಆತಂಕದ ಕಂಪನದ ಬಾಧೆಯಲ್ಲಿ ಬೆಚ್ಚಿದ್ದವಳಿಗೆ ಲಜ್ಜೆಯ ಬಣ್ಣಗಳ ಗುರುತನ್ನು ಹೇಳಿಕೊಡುತ್ತ ಪುಳಕ ಮೀಯಿಸಿದ್ದು… ಎಲ್ಲವೂ ಎಲ್ಲವೂ ಇದೇ ಕನ್ನಡಿ.

ಈ ಕನ್ನಡಿಯ ಹೂಚಿತ್ರಗಳ ಚೌಕಟ್ಟನ್ನು ಮಾಡಿದ್ದ ಮಾಟದ ಕೈಯವನೇ ಕಟ್ಟಿದ್ದೆಂಬಂತಿದ್ದ ಒಂದು ಮಂಚ ಈ ಹಿಂದೆ ಯೋಗುಗೌಡನ ಮನೆತನದಲ್ಲಿತ್ತು. ಮನೆತನದ ಹಿರಿಯನೇ ಆ ಮಂಚವನ್ನು ಮಾಡಿದವನಾಗಿದ್ದ. ಅದು ನಾಲ್ಕು ತಲಗಳಿಗೆಯ ಹಿಂದೆ. ಜಲಜಾಕ್ಷಿಗಿಂತ ಮೊದಲು ಆ ಮನೆತನದಲ್ಲಿ ಹುಟ್ಟಿದ್ದ ಹೆಣ್ಣುಮಗಳಿಗಾಗಿ ಅವನು ಅಷ್ಟೊಂದು ಪ್ರೀತಿಯಿಂದ ಮಾಡಿದ್ದ ಆ ಮಂಚ ಎಂಥ ಚೆಂದವಿತ್ತೆಂದರೆ, ಅದನ್ನು ನೋಡುತ್ತಾ ನೋಡುತ್ತಾ ಇದ್ದರೆ ಅದು ಹೇಗೋ ಮೈತುಂಬಿದ ಹೆಣ್ಣುಮಗಳನ್ನೇ ಎದುರಲ್ಲಿ ಕಂಡಂತಾಗಿಬಿಡುತ್ತಿತ್ತಂತೆ. ಎಲ್ಲರೂ ಆ ಮಂಚದ ಸೊಗಸನ್ನು ಹೊಗಳುವವರೇ. ಆದರೆ ಹೊಗಳಿಕೆ ಕೇಳಿಸಿಕೊಳ್ಳಲು ಅದನ್ನು ತಯಾರು ಮಾಡಿದ್ದ ಹಿರಿಯನೇ ಇರಲಿಲ್ಲ. ಮಂಚವನ್ನು ಪೂರ್ತಿಗೊಳಿಸಿದ ದಿನ ಅದರ ಚೆಂದಕ್ಕೆ ತಾನೇ ಹುಚ್ಚನಂತಾಗಿ ಸಂಭ್ರಮಪಟ್ಟವನು ಮತ್ತೆ ಮೂರೇ ದಿನಗಳಲ್ಲಿ ಸತ್ತಿದ್ದ. ಆ ಮೂರು ದಿನಗಳಲ್ಲಿ ಅವನು ಮಂಕಾಗುತ್ತಾ ಮಂಕಾಗುತ್ತಾ , ಮಂಚ ತಯಾರಾದ ದಿನ ಎಷ್ಟು ಸಂಭ್ರಮಪಟ್ಟಿದ್ದನೊ ಅದಕ್ಕೆ ಪೂರ್ತಿ ವಿರುದ್ಧವಾಗಿ ವಿಚಿತ್ರ ಕನಲಿಕೆಯ ಸ್ಥಿತಿಗೆ ಹೋಗಿಬಿದ್ದಿದ್ದವನನ್ನು ಗಮನಿಸುವುದಕ್ಕೂ ಒಬ್ಬರೂ ಇರಲಿಲ್ಲ. ಎಲ್ಲರೂ ಮಂಚದ ಮೋಡಿಗೆ ಸಿಕ್ಕಿಬಿಟ್ಟಿದ್ದರು. ಆ ಹಿರಿ ಜೀವ ಅತ್ಯಂತ ದರಿದ್ರ ಮತ್ತು ಅನಾಥ ಭಾವದಲ್ಲಿ ಬಾಯೇ ಇಲ್ಲದಂಥ ಸ್ಥಿತಿಯಲ್ಲಿ ಏನೇನನ್ನೋ ಕನವರಿಸುತ್ತ ಎದೆ ಬಡಿದುಕೊಳ್ಳುತ್ತ ಉಸಿರು ಬಿಟ್ಟಿತ್ತು. ಎಂತಾ ಚೆಂದದ ಮಂಚ ಮಾಡಿದ್ದವ ಅದರ ಮೇಲೆ ಒಂದು ದಿನವಾದರೂ ಮಲಗಲಿಲ್ಲ; ಯಾವುದಕ್ಕೂ ಪಡೆದು ಬಂದಿರಬೇಕನ್ನೂದು ಎಷ್ಟು ಖರೆ ಎಂದೇ ಕೊರಗಿತ್ತು ಊರು. ಆಮೇಲೆ ಅವನ ಸಾವು ಮರೆತುಹೋಯಿತು; ಅವನ ನೆನಪು ಅಡಗಿಹೋಯಿತು. ಮಂಚ ಮಾತ್ರ ಎಲ್ಲರ ಕಣ್ಣಲ್ಲಿ ನಿಂತುಬಿಟ್ಟಿತು.

ಗೌಡನ ಮನೆಮಗಳ ಹೆಸರಲ್ಲೇ ತಯಾರಾದ ಮಂಚಕ್ಕೆ ಅದಾಗಲೇ ಪ್ರಾಯಕ್ಕೆ ಬಂದಿದ್ದ ಆಕೆಯೇ ಹಕ್ಕುದಾರಳಾಗಿದ್ದಳು. ಅದರ ಹೂಗೊಂಡೆ ಸುತ್ತಿದಂಥ ಕಾಲುಗಳ ಸೊಗಸಿಗೆ, ಕಾಲುಗಳ ತುದಿಯಲ್ಲಿ ನೆಲದಿಂದ ಒಂದಂಗುಲ ಮೇಲೆ ತೂಗುತ್ತಿರುವಂತೆ ಕಟ್ಟಿದ್ದ ಬೆಳ್ಳಿಗೆಜ್ಜೆಗಳ ಇಂಪಾದ ಉಲಿತಕ್ಕೆ, ಮಂಚದ ಮೈಯ ನಯಕ್ಕೆ ಅವಳು ಸೋಲುತ್ತಾ ಹೋಗುವಳು. ಮಂಚದೊಂದಿಗೆ ಒಬ್ಬಳೇ ಮಾತಾಡುತ್ತಾ ಎಷ್ಟೋ ಹೊತ್ತು ಕಳೆದುಬಿಡುವಳು. ಹೀಗೆ ಮಂಚದೊಂದಿಗೆ ಸಂಬಂಧ ಬೆಳೆದ ಕೆಲವೇ ದಿನಗಳಲ್ಲಿ ಅವಳು ಮತ್ತಷ್ಟು ಚೆಲುವೆಯಾಗುತ್ತಾ ಹೋದಳು. ಅಷ್ಟೇ ಮಟ್ಟಿಗೆ ಮನೆಮಂದಿಯಿಂದ ದೂರವಾಗುತ್ತಲೂ ಹೋದಳು. ಅದು ಎಷ್ಟಕ್ಕೆ ಬಂತೆಂದರೆ, ಮಂಚವನ್ನು ಬಿಟ್ಟು ಅವಳು ಉಳಿಯುವುದೇ ಅಪರೂಪವಾಯಿತು. ಆದರೆ ಮನೆಮಂದಿಗಾರಿಗೂ ಅದು ಕಾಡಲಿಲ್ಲ. ಬದಲಾಗಿ ಮಂಚದ ಬಗ್ಗೆಯೇ ಹೊಗಳುವರು.

ಹೀಗಿರುವಾಗಲೇ ಒಂದು ರಾತ್ರಿ ಊರೆಲ್ಲಾ ಮಲಗಿದೆ. ಗೌಡನ ಮನೆಯಲ್ಲೂ ಮಾತಿಲ್ಲ, ಕಥೆಯಿಲ್ಲ. ಆಳುಮಕ್ಕಳೂ ಎಚ್ಚರವಿರಲಿಲ್ಲ. ಇದ್ದಕ್ಕಿದ್ದಂತೆ ಯಾರೋ ಚೀರಿಕೊಂಡಂತೆ ಒಂದು ಭೀಕರ ದನಿ ಎದ್ದಿತ್ತು. ಇಡೀ ಊರನ್ನೇ ಬೆಚ್ಚಿಬೀಳಿಸಿದ್ದ ಚೀರಿಕೆಯಾಗಿತ್ತು ಅದು. ಎಚ್ಚರಾದ ಎಲ್ಲರಿಗೂ ಆ ಚೀರಿಕೆಯ ಕೊನೆಯ ಸೊಲ್ಲು ಎಲ್ಲಿಂದಲೋ ಕೇಳಿಬಂದಂತಾಯಿತೇ ಹೊರತು ಇಂಥ ದಿಕ್ಕಿನಿಂದಲೇ ಇಂಥ ಮನೆಯಿಂದಲೇ ಬಂತು ಎಂದು ತಿಳಿಯಲು ಆಗಲೇ ಇಲ್ಲ. ಗೌಡನ ಮನೆಮಂದಿಗೂ ಹಾಗೇ ಅನುಭವವಾಗಿತ್ತು. ರಾತ್ರಿ ಕಳೆದು ಬೆಳಗಾದಾಗಲೇ ಎಲ್ಲಾ ಗೊತ್ತಾದದ್ದು. ಮಂಚದ ಮೇಲೆ ಮಲಗಿದ್ದ ಗೌಡನ ಮಗಳು ಮಂಚದಿಂದ ಸಿಡಿದೇ ಬಿದ್ದಿದ್ದಾಳೆಂಬಂತೆ ಬಾಗಿಲ ಬಳಿ ಹೆಣವಾಗಿ ಬಿದ್ದಿದ್ದಳು. ಅಷ್ಟೊಂದು ಚೆಂದವಿದ್ದವಳ ಮುಖ ನೋಡಲಿಕ್ಕೇ ಆಗದ ಹಾಗೆ ವಿಕಾರವಾಗಿಬಿಟ್ಟಿತ್ತು. ಅವಳ ಮಂಚವೆಂದರೆ ಆಸೆಗಣ್ಣಿಂದ ನೋಡುತ್ತಿದ್ದವರೆಲ್ಲರ ಕಣ್ಣಲ್ಲಿ ಮಂಚದ ಬಗ್ಗೆಯೇ ಭಯ ತುಂಬಿದ ಅನುಮಾನ ಮೊಳೆತುಬಿಟ್ಟಿತು. ಮಾತು ಕಳಕೊಂಡು ದಕ್ಕಾಗಿ ಹೋಗಿದ್ದರು ಎಲ್ಲ. ಕನ್ನೆಹೆಣ್ಣಿನ ಹೆಣದೊಂದಿಗೇ ಆ ಮಂಚವನ್ನೂ ಸುಟ್ಟುಬಿಟ್ಟರು. ಮೋಹಿನಿ ನೆಲೆಯಾಗಿದ್ದ ಮಂಚ ಅದಾಗಿತ್ತೆಂಬ ಮಾತು ಹುಟ್ಟಿತ್ತು. ಹಾಗೆ ಅವತ್ತು ಸತ್ತುಹೋಗಿದ್ದವಳು ಯೋಗಿಯ ಅಪ್ಪನ ಅಕ್ಕ. ತಾನು ಕಂಡೇ ಇರದ ಆ ಅಕ್ಕ ತನ್ನ ಮನೆತನದ ಭಾಗ್ಯವನ್ನೇ ಬಸಿದುಕೊಂಡು ಹೋದಳಾ? ಮತ್ತೊಂದು ಹೆಣ್ಣು ಈ ಮನೆಯಲ್ಲಿ ಬಾಳಲಿಕ್ಕಾಗದಂತೆ ಆಗಿಹೋಯಿತಾ ಎಂದೇ ಯೋಗುಗೌಡನ ಅಪ್ಪ ಕೊನೆಯತನಕವೂ ಹಳಹಳಿಸಿದ್ದ.

ಗೌಡನ ಮನೆತನದಲ್ಲಿ ಅಂಥದೊಂದು ದುರಂತವಾದ ಮೇಲೆ ಯಾರೂ ಮಂಚದ ಬಗ್ಗೆ ಮೋಹಪಟ್ಟಿರಲಿಲ್ಲ. ಆ ಕೆಟ್ಟ ಘಟನೆಯ ನೆನಪು ಮುಂದಿನ ಪೀಳಿಗೆಗಳಲ್ಲೂ ಉಳಿದುಕೊಂಡು ಬಂದಿತ್ತು. ಹಾಗಿದ್ದಾಗಲೇ ಜಲಜಾಕ್ಷಿ ತನಗೊಂದು ಮಂಚ ಬೇಕೇ ಬೇಕೆಂದು ಹಠ ಹಿಡಿದಾಗ ಯೋಗುಗೌಡ ದಿಗ್ಭ್ರಾಂತನಾಗಿಹೋಗಿದ್ದ. ಕಡೆಗೂ ದೇವರಲ್ಲಿ ಪ್ರಸಾದ ಕೇಳಿ ಒಪ್ಪಿಗೆ ಸಿಕ್ಕಿದ ಮೇಲೆಯೇ ಮಂಚ ತಯಾರಾಗಿತ್ತು. ಈಗ ಜಲಜಾಕ್ಷಿಯ ಕೋಣೆಯಲ್ಲಿ ಕನ್ನಡಿಯಷ್ಟೇ ದೊಡ್ಡ ಆಸ್ತಿಯೆಂಬಂತಿರುವ ಈ ಹೊಸ ಮಂಚವೂ ತುಂಬಾ ಸುಂದರವಾದದ್ದೇ. ಜಲಜಾಕ್ಷಿಗೂ ಈ ಮಂಚವೆಂದರೆ ಇಷ್ಟ. ಈ ಮಂಚದ ಮೇಲೆ ಕೂತೇ ಅವಳು ಅಜ್ಜನ ಬಾಯಿಂದ ಹಳೇ ಮಂಚದ ಕಥೆ ಕೇಳಿಸಿಕೊಂಡಿದ್ದಿದೆ.

ಸವತೆಹಳ್ಳಿಗೊಂದು ವಿಸ್ತಾರ ತಂದವಳು ಕೂಡ ಜಲಜಾಕ್ಷಿಯೇ. ಅವಳಿಗೀಗ ತನ್ನ ಮಂಚದ ಬಗ್ಗೆ ವೈಯಕ್ತಿಕವಾದ ಮೋಹವಿಲ್ಲ. ಬದಲಾಗಿ ಅದರಲ್ಲಿರುವಂಥ ಕುಸುರಿಗೆ ಅವಳು ಶಿಲ್ಪಕಲೆಯಲ್ಲಿ ಆಸಕ್ತಿಯುಳ್ಳವಳಾಗಿ ಕುತೂಹಲಗೊಳ್ಳುತ್ತಾಳೆ. ಅವಳ ಈ ಕುತೂಹಲವೇ ಸವತೆಹಳ್ಳಿಯನ್ನು ಅವಳ ಹಾಗೆಯೇ ಮತ್ತೆಷ್ಟೋ ಆಸಕ್ತರ ಪಾಲಿಗೆ ಒಂದು ಪುಸ್ತಕವೆಂಬಂತೆಯೂ ಮಾಡಿದೆ. ಅವರೆಲ್ಲ ಸವತೆಹಳ್ಳಿಯ ಯಾವುದೋ ಒಂದು ಬಿಂದುವಿನಿಂದ ಅಗೋಚರ ಇತಿಹಾಸದ ಸುಳಿವು ಹುಡುಕಿ ಪುಳಕಿತರಾಗುತ್ತಾರೆ.

ಚಿಟ್ಟೆಯ ಮೇಲೆ ಕೂತಿದ್ದ ಜಲಜಾಕ್ಷಿಯನ್ನು ದಿಟ್ಟಿಸಿ ನೋಡುತ್ತಲೇ ಇದ್ದ ಯೋಗುಗೌಡ. ಊರೊಳಗಿನ ಹಾಳು ಮಂಟಪ, ಕೆರೆ ಕಲ್ಯಾಣಿಗಳ ಬಗ್ಗೆಲ್ಲ ಅವಳು ಕೇಳುವುದು, ಕೆದಕುವುದು ಇದ್ದೇ ಇತ್ತು. ಆದರೆ ಯಾವತ್ತೂ ಚಿತ್ರದ ಮಾತೆತ್ತಿದ್ದವಳಲ್ಲ. ಅಂಥವಳು ತಾನೇ ಚಿತ್ರ ಬರೆದಿದ್ದೇನೆ ಎಂದಾಗ ದಂಗುಬಡಿದುಹೋಗಿದ್ದ ಯೋಗು. ಚಿತ್ರ ಎಂದೊಡನೆ ಅವನನ್ನು ಕಾಡಿದ್ದು ತನ್ನ ಹೆಂಡತಿಯ ಸಾವಿಗೆ ಒಂದು ನೆವವಾದ ಆ ಶೃಂಗಾರಮಯ ಚಿತ್ರ.

“ತಾತಾ ನೀನು ಹೇಳಿದ್ದೆಯಲ್ಲ, ನಮ್ಮ ಮನೆತನದೊಳಗೆ ಮಂಚದ ಶಾಪದಿಂದಾಗಿ ಹೆಣ್ಣಿನ ಸಾವಾಯಿತು ಅಂತ. ಮುಖವೇ ಗೊತ್ತಿಲ್ಲದ ಆ ಹೆಣ್ಣೇ ನನ್ನ ಕಣ್ಣಲ್ಲಿ ಬಂದ ಹಾಗಾಯಿತು ನಾನು ಚಿತ್ರ ಬರೆಯೋವಾಗ” ಎಂದಳು ಜಲಜಾಕ್ಷಿ. ಅವಳ ಬಾಯಿಂದ ನಿರೀಕ್ಷಿಸಿಯೇ ಇರದ ಈ ಮಾತಿನಿಂದಂತೂ ಬೇರೆಯದೇ ರೀತಿಯಲ್ಲಿ ಭಯ ಒದ್ದ ಹಾಗಾಯಿತು ಯೋಗುವಿಗೆ. ತಲಗಳಿಗೆಯಷ್ಟು ಹಿಂದಿನ ಗೊತ್ತಿಲ್ಲದ ಹೆಣ್ಣಿನ ಚಹರೆ ಇವಳಿಗೆ ಕಾಣೋದೆಂದರೇನು? ಮಂಚದಲ್ಲಿ ನೆಲೆಗೊಂಡಿದ್ದ ಮೋಹಿನಿ ಇವಳ ಬೆನ್ನಿಗೇನಾದರೂ ಬಿದ್ದಿದೆಯಾ? ಅತ್ಯಂತ ಆತಂಕದ ಸೆಳಕೊಂದು ಪಾದದಿಂದ ನೆತ್ತಿಯತನಕವೂ ಹರಿದಂತಾಯಿತು. ಜಲಜಾಕ್ಷಿಗೆ ಏನಂತ ಉತ್ತರ ಹೇಳುವುದು ಎಂದು ತಡಕಾಡಿದ.

“ಅಲ್ಲ ತಾತಾ, ಮಂಚದ ಕಾರಣದಿಂದ ಆ ಹೆಣ್ಣು ಸತ್ತಳು ಅಂತಲೇ ಎಲ್ಲಾ ನಂಬಿದರಲ್ವಾ? ಆದರೆ ಅಲ್ಲೊಂದು ಕೊಲೆಯೇ ಆಗಿಹೋಗಿದ್ದಿರಬಹುದಲ್ವಾ? ಇಲ್ಲಾ ಆಕೆ ಸುಸೈಡ್ ಮಾಡಿಕೊಂಡುಬಿಟ್ಟಳೋ ಏನೊ? ಇದೆಲ್ಲಾ ಬಿಟ್ಟು ಆ ಮರದ ಮಂಚ ಏನು ಮಾಡಿರೋಕ್ಕೆ ಸಾಧ್ಯ ಹೇಳಿ ತಾತಾ.” ಮತ್ತೆ ಜಲಜಾಕ್ಷಿಯೇ ಮಾತು ತೆಗೆದಿದ್ದಳು. ಯೋಗು ಯಾವತ್ತೂ ಎದುರಿಸದೇ ಇದ್ದ ಮತ್ತು ಎದುರಿಸಲು ಎಂದೂ ಬಯಸದಂಥ ತರ್ಕ ಮುಂದಿಟ್ಟಿದ್ದಳು. ಈಗಂತೂ ಯೋಗು ಅಪ್ರತಿಭನಾಗತೊಡಗಿದ. ನಿಜವಾಗಿಯೂ ಮನೆಯೊಳಗೆ ನಡೆದ ಆತ್ಮಹತ್ಯೆಯನ್ನೇ ಗುಟ್ಟಾಗಿ ಎದೆಯೊಳಗೆ ಅಡಗಿಸಿಕೊಂಡಿದ್ದವರು, ಹೇಗಾಯಿತೆಂದೇ ಗೊತ್ತಿಲ್ಲದೆ ನಡೆದುಹೋದ ಸಾವನ್ನು ಅಂಥದೊಂದು ತರ್ಕದ ಅಷ್ಟೊಂದು ಬೆಳಕಿನಲ್ಲಿಟ್ಟು ನೋಡೋಕ್ಕೆ ಸಾಧ್ಯವಾ ಅನ್ನಿಸಿತು. ಜಲಜಾಕ್ಷಿಯ ಪ್ರಶ್ನೆಗೆ ಉತ್ತರಿಸಲಾರೆ ಎನ್ನಿಸಿ ತಲೆತಗ್ಗಿಸಿದ.

ಅವತ್ತು, ಮಲಗುವ ಕೋಣೆಯಲ್ಲಿ ಅಸಾಧಾರಣ ಏಕಾಂತದಲ್ಲಿ ಶೃಂಗಾರಮಯ ಚಿತ್ರದೆದುರು ತನ್ನ ಹೆಂಡತಿ ಆಹ್ಲಾದದ ಉನ್ನತಿಯಲ್ಲಿದ್ದುದು ಕಂಡಾಗಲೂ ಹೀಗೇ ತಲೆತಗ್ಗಿಸಿದ್ದೆನಲ್ಲ ಅನ್ನುವುದು ಅಯಾಚಿತವಾಗಿ ನೆನಪಾಯಿತು.

ವೆಂಕಟ್ರಮಣ ಗೌಡ

Advertisements

ಹಾಗೊಬ್ಬಳು ಋಣಮುಕ್ತೆ

ಪದ ಪಾರಿಜಾತ | ಉಷಾ ಕಟ್ಟೆಮನೆ

ಬೆಳಗ್ಗೆ ನಾಲ್ಕು ಘಂಟೆಯ ಸಮಯವಿರಬಹುದು. ದೊಡ್ಡ ಮನೆಯ ದೊಡ್ಡಮಂದಿ ಏಳುವ ಸಮಯವದು.

ಹೆಬ್ಬಾಗಿಲಿಗೆ ಯಾರೋ ಧಡಾರನೆ ಒದ್ದಾಂತಾಯಿತು. “ಇಲ್ಲಿನ ಮುಂಡೆಯರೆಲ್ಲಾ ಎಲ್ಲಿ ಸತ್ತು ಹೋಗಿದ್ರಿ?” ಎನ್ನುತ್ತಾ ಬಂದ ಪಟೇಲರು ಮೊಗಸಾಲೆಯ ಅಡ್ಡಗಳಿಗೆ ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಿದ ತೂಗು ಕಿಂಡಿಯಲ್ಲಿ ಇಟ್ಟ ಜೋಡು ನಳಿಗೆಯ ಬಂದೂಕನ್ನು ಕೈಗೆತ್ತಿಕೊಂಡು ಅಬ್ಬರಿಸುತ್ತಾ “ಎಲ್ಲಿ ಆ ವನಜಾ? ಬನ್ರೋ ಅವಳ ದಾಸ-ದಾಸಿಯರು..ಒಬ್ಬೊಬ್ಬರನ್ನೂ ಸುಟ್ಟು ಹಾಕಿಬಿಡ್ತೀನಿ” ಎಂದು ಕಾಲು ಅಪ್ಪಳಿಸುತ್ತಾ ಅಂಗಳಕ್ಕಿಳಿದವರೇ ಆಕಾಶದತ್ತ ಗುರಿ ಇಟ್ಟು ಗುಂಡು ಹಾರಿಸಿಯೇ ಬಿಟ್ಟರು.

ಆಗ ಒಂದು ಆಭಾಸ ಆಗಿಹೋಯ್ತು. ನಮ್ಮ ಊರಿನಲ್ಲಿ ಒಂದು ಪದ್ಧತಿಯಿದೆ. ಯಾರದಾದರೂ ಮನೆಯಲ್ಲಿ ಗುಂಡಿನ ಶಬ್ದ ಕೇಳಿದರೆ ಆ ಮನೆಯಲ್ಲಿ ಸಾವು ಸಂಭವಿಸಿದೆ ಎಂದು ಅರ್ಥ. ಆಗ ಆ ಊರು ಮತ್ತು ಸುತ್ತಮುತ್ತಲಿನ ಹಳ್ಳಿಯವರೆಲ್ಲಾ ತಕ್ಷಣ ತಮ್ಮೆಲ್ಲ ಕೆಲಸ ಬಿಟ್ಟು ಪರಸ್ಪರ ವಿಚಾರಿಸಿಕೊಂಡು ಆ ಮನೆಗೆ ಧಾವಿಸಿ ಬಂದು ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಿದ್ದರು. ಮಲೆನಾಡಿನಲ್ಲಿ ಹೆಚ್ಚಾಗಿ ಒಂಟಿ ಮನೆಗಳಿರುತ್ತಿದ್ದು, ಒಂದು ಮನೆಗೂ ಇನ್ನೊಂದಕ್ಕೂ ಅರ್ಧ-ಮುಕ್ಕಾಲು ಮೈಲಿಗಳ ಅಂತರವಿರುತ್ತಿತ್ತು. ಅದಕ್ಕಾಗಿ ಈ ವ್ಯಸ್ಥೆಯಿತ್ತೋ ಅಥವಾ ತಮ್ಮ ಮನೆಯ ಸದಸ್ಯನೊಬ್ಬ ಸ್ವರ್ಗದತ್ತ ಪಯಣಿಸುತ್ತಿದ್ದಾನೆ. ಅವನನ್ನು ಸ್ವಾಗತಿಸಿ ಎಂದು ಸ್ವರ್ಗಾಧಿಪತಿಗೆ ಸೂಚಿಸಲು ಆಕಾಶಕ್ಕೆ ಕೋವಿಯನ್ನು ಗುರಿ ಹಿಡಿಯುತ್ತಿದ್ದರೋ ಗೊತ್ತಿಲ್ಲ. ಅಂತೂ ಪಟೇಲರು ಆಕಾಶಕ್ಕೆ ಗುಂಡು ಹೊಡೆದದ್ದು ಊರ ಜನರ ಕಿವಿಗಪ್ಪಳಿಸಿತು. ಅವರು ಯಾರನ್ನೋ ಬೀಳ್ಕೊಡಲು ಸಜ್ಜಾಗಿಬಿಟ್ಟರು.

“ದೊಡ್ಡ ಮನೆಯ ಅಜ್ಜಿ ಹೋಗಿಬಿಟ್ಟ್ರು ಅಂತ ಕಾಣುತ್ತೆ” ಎಂದು ಮಾತಾಡಿಕೊಳ್ಳುತ್ತಾ ಕತ್ತಿ, ಕೊಡಲಿ, ಗರಗಸಗಳನ್ನು ಹಿಡ್ಕೊಂಡು ಪಟೇಲರ ಮನೆ ಕಡೆ ಹೆಜ್ಜೆ ಹಾಕತೊಡಗಿದರು.

ಇತ್ತ ಪಟೇಲರು ಅಂಗಳದಿಂದ ಮನೆಗೆ ಬಂದವರೇ ಭೂತ ಮೈಮೇಲೆ ಬಂದವರಂತೆ ಎದುರು ಸಿಕ್ಕ ಹಲವು ಕೋಣೆಗಳ ಬಾಗಿಲುಗಳನ್ನು ಒದೆಯುತ್ತಾ ಅರಚಾಡತೊಡಗಿದರು. ಒಳಗೆ ಮಲಗಿದ್ದ ಹೆಂಗಸರಿಗೆ ಪಟೇಲರ ಈ ಅರಚಾಟಕ್ಕೆ ಕಾರಣವೇನೆಂದು ಗೊತ್ತಿದ್ದರೂ ಅವರ ಗಂಡಂದಿರಿಗೆ ಏನೊಂದೂ ಅರ್ಥವಾಗದೆ ಏನು ವಿಷಯ ಎಂಬಂತೆ ತಮ್ಮ ತಮ್ಮ ಪತ್ನಿಯರ ಮುಖ ನೋಡತೊಡಗಿದರು.

ಇಷ್ಟಾಗುವಾಗ ಪಟೇಲರ ಮನೆಯ ಪಕ್ಕದಲ್ಲೇ ಇರುವ ಒಕ್ಕಲಿನಾಳು ಮಂಜ ತನ್ನ ಹೆಂಗಸಿನೊಡನೆ ಅಂಗಳಕ್ಕೆ ಕಾಲಿಟ್ಟವನೇ “ಒಡೆಯರೇ” ಎಂದು ಕೂಗಿದ. ಅವನ ಕೂಗು ಕೇಳಿ ವಾಸ್ತವಕ್ಕೆ ಬಂದ ಪಟೇಲರು ಹೆಬ್ಬಾಗಿಲಿಗೆ ಬಂದವರೇ “ಯಾಕೋ ಇಷ್ಟು ಬೇಗ ಬಂದ್ಬಿಟ್ಟೆ? ಏನಾಯ್ತು?” ಎಂದು ಕೇಳಿದಾಗ ಆ ಆಳು ಮಕ್ಕಳು ಗಲಿಬಿಲಿಯಾಗಿ ದಣಿಗಳ ಮುಖವನ್ನೊಮ್ಮೆ, ಅವರು ಕೈಯಲ್ಲಿ ಹಿಡಿದ ಕೋವಿಯನ್ನೊಮ್ಮೆ ನೋಡುತ್ತಾ “ಅಜ್ಜಮ್ಮಾ…” ಎಂದು ರಾಗ ಎಳೆದರು.

ಆಗ ಪಟೇಲರಿಗೆ ಪೂರ್ತಿ ಪ್ರಜ್ಞೆ ಬಂದಂತಾಗಿ, ಸಮಯಸ್ಫೂರ್ತಿಯಿಂದ ನಗುತ್ತಾ ಕೈಯಲ್ಲಿದ್ದ ಕೋವಿಯನ್ನು ನೋಡುತ್ತಾ ಅದನ್ನೆತ್ತಿ ಹೆಗಲಮೇಲಿಟ್ಟುಕೊಳ್ಳುತ್ತಾ “ಬೆಳಿಗ್ಗೆ ಗದ್ದೆ ಕಡೆ ಹೋಗಿದ್ದೆ. ಒಂದು ಹಿಂಡು ಕಾಡು ಹಂದಿ ಭತ್ತ ತಿನ್ನುತ್ತಿತ್ತು. ಗುಂಡು ಹೊಡೆದೆ. ಅದಕ್ಕೆ ನೀನು ಓಡಿ ಬರೋದೆ? ಹೋಗ್ ಹೋಗ್. ಬಿದ್ದ ತೆಂಗಿನಕಾಯಿಗಳನ್ನೆಲ್ಲಾ ಹೆಕ್ಕಿ ತಂದು ಕೊಟ್ಟಿಗೆಗೆ ಹಾಕು” ಎನ್ನುತ್ತಾ ಮೊಗಸಾಲೆ ಕಡೆ ತಿರುಗುತ್ತಿದ್ದವರು, ತೋಟದ ತಿರುವಿನಲ್ಲಿ ನಡೆದು ಬರುತ್ತಿದ್ದ ಇನ್ನಷ್ಟು ಜನರನ್ನು ಕಂಡು ವಿಚಲಿತರಾದರು. ಆಗ ಅವರಿಗೆ ತಾನು ಎಸಗಿದ ಬುದ್ಧಿಗೇಡಿ ಕೃತ್ಯದ ಅರಿವಾಯ್ತು.

ನೋಡ ನೋಡುತ್ತಿದ್ದಂತೆ ಅಲ್ಲಿ ನೂರಕ್ಕೆ ಕಡಿಮೆಯಿಲ್ಲದಂತೆ ಜನ ಜಮೆಯಾದರು.  ಪಟೇಲರಿಗೆ ಇರುಸು-ಮುರುಸಾಗತೊಡಗಿತು. ಆದರೆ ಅವರು ಎಷ್ಟಾದರೂ ಪಟೇಲರಲ್ಲವೇ? ತಕ್ಷಣ ಒಂದು ನಿರ್ಧಾರಕ್ಕೆ ಬಂದರು. ತಮ್ಮ ತಮ್ಮಲ್ಲೇ ಪಿಸುಗುಡುತ್ತಿದ್ದ ಜನರನ್ನುದ್ದೇಶಿಸಿ ಕೈ ಮುಗಿಯುತ್ತಾ “ಅಚಾತುರ್ಯವಾಗಿ ಹೋಯ್ತು. ಈಗ ನೀವೆಲ್ಲಾ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ..ಗಂಡಸರೆಲ್ಲಾ ಹಂದಿ ಬೇಟೆಗೆ ಹೋಗಲು ತಯಾರಾಗಿ ಬನ್ನಿ” ಎಂದವರೇ ಚಿನ್ನಪ್ಪನತ್ತ ತಿರುಗಿ, “ಬರುವಾಗ ನಿನ್ನ ಕಾಳು ನಾಯಿಯನ್ನು ಕರ್ಕೊಂಡು ಬಾ. ಹಾಗೇ ಕರಿಯನಿಗೆ ಅವನ ಬೊಗ್ಗಿ ನಾಯಿಯನ್ನು ಕರ್ಕೊಂಡು ಬರಲು ಹೇಳು” ಎಂದು ಸೂಚನೆ ಕೊಟ್ಟು ಕೋವಿಯನ್ನು ಹೆಗಲ ಮೇಲೆ ಇಟ್ಟುಕೊಂಡು ಅಡಿಕೆ ತೋಟದೊಳಗೆ ಮರೆಯಾದರು.

ಹೊರಗೆ ನಡೆಯುತ್ತಿರುವ ಸದ್ದಿಗೆ ದೊಡ್ಡಮನೆಯ ಜನರಿಗೆಲ್ಲಾ ಎಚ್ಚರವಾಯಿತು. ಅವರೆಲ್ಲ ಎದ್ದು ಅಡುಗೆ ಮನೆ, ದನದ ಕೊಟ್ಟಿಗೆಗಳನ್ನು ಸೇರಿಕೊಂಡರು. ಅವರು ಅತ್ತ ಹೊರಟ ಒಡನೆಯೇ ಮನೆಯಲ್ಲಿದ್ದ ಗಂಡಸರು-ಹೆಂಗಸರೆಲ್ಲಾ ಅಲ್ಲಲ್ಲಿ ಗುಂಪು ಸೇರಿಕೊಂಡು ಗುಸು ಗುಸು ಮಾತಾಡತೊಡಗಿದರು. ಕೆಲವರು “ವನಜಾ ಎಲ್ಲಿ?” ಎಂಬಂತೆ ಕಣ್ಣು ಹಾಯಿಸತೊಡಗಿದರು. ಆದರೆ ಯಾರೂ ದೇವರ ಕೋಣೆಯತ್ತ ದೃಷ್ಟಿ ಹಾಯಿಸಲಿಲ್ಲ. ಯಾಕೆಂದರೆ ಬೆಳಗಿನ ಪೂಜೆ ಮಾಡುವವರು ಸ್ವತಃ ಪಟೇಲರು. ಅದೂ ಹತ್ತು ಘಂಟೆಯ ಮೇಲೆ. ಹಾಗಾಗಿ ಯಾರೂ ಆ ಕಡೆ ಗಮನವೇ ಕೊಟ್ಟಿರಲಿಲ್ಲ. ಹಾಗೆ ಕೊಟ್ಟಿದ್ದರೆ. ಆಗ ಹೊರಗಿನಿಂದ ಬೀಗ ಹಾಕಿರುವುದು ಅವರ ಗಮನಕ್ಕೆ ಬಂದು ಅದನ್ನು ಯಾರನ್ನಾದರೂ ಪ್ರಶ್ನಿಸುವ ಪ್ರಮೇಯ ಬರುತ್ತಿತ್ತು.

ದೊಡ್ಡಮನೆಯ ದೊಡ್ಡ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮುಳುಗಿರುವಾಗಲೇ ಆ ಮನೆಯ ಸದಸ್ಯನೊಬ್ಬನ ತಲೆಯಲ್ಲಿ ಗೊಬ್ಬರದ ಹುಳುಗಳು ಓಡಾಡುತ್ತಿದ್ದವು. ಆತನಿಗೆ ತನ್ನ ಹೆಂಡತಿಯ ಶೀಲದ ಬಗ್ಗೆ ಸದಾ ಸಂಶಯವಿತ್ತು. ಪಟೇಲರು ತನ್ನ ಪತ್ನಿಯತ್ತ ನೋಡುವ ನೋಟ, ಮಾತಾಡಿಸುವ ರೀತಿ ಅವನಿಗೆ ಹೇಗೇಗೋ ಆಗುತ್ತಿತ್ತು. ಜೊತೆಗೆ ಪಟೇಲರ ಬಗ್ಗೆ ಈಕೆಯೂ ಆಸ್ಥೆ ವಹಿಸುತ್ತಿದ್ದಾಳೆಂಬುದು ಇವನ ಗುಮಾನಿ. ಒಂದು ರಾತ್ರಿ ದೇವರ ಕೋಣೆಯ ಪಕ್ಕದ ರೂಮಿನಿಂದ ಇವಳು ಹೊರಬಂದಿದ್ದನ್ನು ನೋಡಿದ ಮೇಲಂತೂ ಅವನ ತಲೆ ಪೂರ್ತಿ ಕೆಟ್ಟು ಹೋಗಿತ್ತು. ಅನಂತರದಲ್ಲಿ ಆತ ಸ್ವಲ್ಪ ಪತ್ತೆದಾರಿಕೆ ಕೆಲಸವನ್ನೂ ಮಾಡಿದ್ದ. ಆಗ ಅವನಿಗೆ ತಿಳಿದು ಬಂದಿದ್ದು ಏನೆಂದರೆ ಅವರಿಬ್ಬರ ನಡುವೆ ಏನೋ ನಡೀತಿದೆ ಅಂತ. ಆದರೆ ಆತ ಅವಸರದಲ್ಲಿ ಯಾವ ತೀರ್ಮಾನಕ್ಕೂ ಬರುವಂತಿರಲಿಲ್ಲ. ಆ ಮನೆತನದ ಪರಂಪರೆಯಂತೆ ಮುಂದಿನ ಪಟೇಲ್ ಗಿರಿ ಈತನದೇ ಆಗಿತ್ತು. ಅದಕ್ಕೆ ಊರಿನ ಒಪ್ಪಿಗೆಯೂ ಬೇಕಾಗಿತ್ತು. ಹಾಗಾಗಿ ತನ್ನ ಸನ್ನಡತೆಯನ್ನು ಆತ ಕನಿಷ್ಟ ಪಕ್ಷ ಅದು ಸಿಗುವಲ್ಲಿಯವರೆಗೂ ಕಾಪಾಡಿಕೊಳ್ಳಬೇಕಾಗಿತ್ತು.

ರಾತ್ರಿ ನಡೆದ ಪ್ರಹಸನ ಎಲ್ಲರಿಗೂ ಗುಟ್ಟಾಗಿ ಪ್ರಸರಣ ಆಗುತ್ತಿರುವಾಗಲೇ ಬೇಟೆಗೆ ಹೊರಟವರು ತಮ್ಮ ತಮ್ಮ ಕೋವಿ, ಬೇಟೆ ನಾಯಿಗಳ ಸಮೇತ ಅಂಗಳದಲ್ಲಿ ಜಮೆಯಾಗತೊಡಗಿದರು.. ಅಷ್ಟಾಗುವಾಗ ತೋಟಕ್ಕೆ ಹೋಗಿದ್ದ ಪಟೇಲರೂ ಅಂಗಳದಲ್ಲಿ ಹಾಜರಾದರು. ಗೆಲುವಿನಿಂದ ಕೂಡಿದ ಅವರ ಮುಖವೇ ಹೇಳುತ್ತಿತ್ತು. ಅವರು ಯಾವುದೋ ಒಕ್ಕಲಿನವರ ಮನೆಯಲ್ಲಿ ತಿಂಡಿ-ಕಾಫೀ ಮುಗಿಸಿ ಬಂದಿರಬೇಕೆಂದು. ಮನೆಗೆ ಬಂದವರೇ ಮೊಗಸಾಲೆಯ ಪಕ್ಕದ ಹಾಲ್ ನ ಅಟ್ಟದ ತೊಲೆಗೆ ತೂಗು ಹಾಕಿದ ಕೋವಿ ಚೀಲವನ್ನು ತೆಗೆದುಕೊಂಡರು. ಅದರಲ್ಲಿ ಎಷ್ಟು ತೋಟೆಗಳಿವೆ ಎಂದು ಪರಿಶೀಲಿಸಿದರು. ತಲೆಗೆ ಕಟ್ಟುವ ಟಾರ್ಚ್ ತಗೊಂಡು ಅದರ ಹಳೆಯ ಬ್ಯಾಟ್ರಿ ಬದಲಾಯಿಸಿ ಹೊಸದನ್ನು ಹಾಕಿದರು. ನಂತರ ಆ ಚೀಲವನ್ನು ಮಂಜನಿಗೆ ವರ್ಗಾಯಿಸಿ, ಆತನ ಹಿಂದೆ-ಮುಂದೆ ಸುತಾಡುತ್ತಿದ್ದ ಬೇಟೆನಾಯಿಗಳಾದ ಈರುಳ್ಳಿ, ಬೆಳ್ಳುಳ್ಳಿ ನಾಯಿಗಳ ತಲೆ ಸವರಿ, ಕಾಡಿನಲ್ಲಿ ಓಡಾಡಲೆಂದೇ ವಿದೇಶದಿಂದ ತರಿಸಿದ್ದೆನ್ನಲಾದ ಮಂಡಿತನಕ ಬರುವ ಬೂಟನ್ನು ಏರಿಸಿಕೊಂಡು ಹೆಗಲಮೇಲೆ ಕೋವಿಯನ್ನಿಟ್ಟುಕೊಂಡು ನಡೆದೇಬಿಟ್ಟರು.

ಶಕುಂತಲಾ ಅತ್ತೆ ಬೆಳಗ್ಗೆ ಎದ್ದೊಡನೆ ಹಾಲು ಕರೆಯಲು ದನದ ಕೊಟ್ಟಿಗೆಯತ್ತ ಹೋಗುತ್ತಾರೆ. ಆಕೆ ಹಾಲು ಕರೆದು ಒಲೆ ಮೇಲೆ ಕಾಯಿಸಲು ಇಟ್ಟ ಒಡನೆಯೇ, ಇನ್ನೊಬ್ಬಾಕೆ ಮೊಸರು ಕಡೆಯಲು ಕೂಡುತ್ತಾಳೆ. ಸಾಮಾನ್ಯವಾಗಿ ಆ ಮನೆಯಲ್ಲಿ ಯಾರು ಗರ್ಭಿಣಿ ಇರುತ್ತಾಳೋ ಅವಳು ಮೊಸರು ಕಡೆಯುವ ಸಹಜ ಹಕ್ಕನ್ನು ಪಡೆದುಕೊಂಡಿರುತ್ತಾಳೆ. ಮೊಸರು ಕಡೆಯುವ ಕ್ರಿಯೆ ಆಕೆಯ ಸ್ನಾಯುಗಳಿಗೆ ಬಲವನ್ನು ಕೊಡುತ್ತದೆ ಎಂಬುದು ತಲೆ ತಲಾಂತರದಿಂದ ಬಂದ ಅನುಭವದ ಮಾತು. ಹಾಗೆ ಮೊಸರು ಕಡೆಯುವ ಹಕ್ಕು ಕಳೆದ ಹಲವಾರು ತಿಂಗಳುಗಳಿಂದ ನನ್ನ ಅಮ್ಮನ ಪಾಲಿಗೆ ಬಂದಿತ್ತು. ಇಂದು ಕೂಡಾ ಆಕೆ ಎಂದಿನಂತೆ ಮೊಸರು ಕಡೆದು ದೊಡ್ಡ ಕಂಚಿನ ಲೋಟದಲ್ಲಿ ಸಿಹಿ ಮಜ್ಜಿಗೆಯನ್ನು ಸುರಿದು ಗಂಡನಿಗೆ ಕೊಡಲು ಮೊಗಸಾಲೆಗೆ ಹೊರಟಳು. ಅಡುಗೆ ಮನೆಯಿಂದ ಮೊಗಸಾಲೆಗೆ ಬರಬೇಕಾದರೆ ದಾಸ್ತಾನು ಕೊಠಡಿಯನ್ನು ಬಳಸಿಕೊಂಡು, ತೀರ ಆಪ್ತರಾದವರ ಸಮಾಲೋಚನಾ ಕೊಠಡಿಯನ್ನು ಹಾದು, ಎರಡು ಊಟದ ಕೋಣೆಗಳನ್ನು ದಾಟಿ ಬರಲು ಕನಿಷ್ಟ ಎರಡು ನಿಮಿಷಗಳಾದರೂ ಬೇಕು. ಲೋಟವನ್ನು ಕೈಯಲ್ಲೇ ಹಿಡಿದುಕೊಂಡೇ ಹಿಂದಿನ ರಾತ್ರಿಯ ಘಟನೆಗಳನ್ನು ಮನಃಪಟಲದಲ್ಲಿ ತಂದುಕೊಂಡ ಅಮ್ಮ, ಅಪ್ಪನನ್ನು ಎದುರಿಸಲು ಸರ್ವ ಸಿದ್ಧತೆ ಮಾಡಿಕೊಂಡೇ ಮೊಗಸಾಲೆಯಲ್ಲಿರುವ ಪಟೇಲರದೇ ಆದ ಪ್ರತ್ಯೇಕ ಕುರ್ಚಿಯನ್ನು ನೋಡುತ್ತಾರೆ. ಅದು ಖಾಲಿಯಾಗಿತ್ತು. ಅಲ್ಲೇ ಅವರ ತಲೆಯ ಮೇಲ್ಬದಿಗೆ ಅಡ್ಡದಿಂದ ಇಳಿಬಿದ್ದ ಕಿಂಡಿಯಲ್ಲಿ ಸದಾ ರಾರಾಜಿಸುತ್ತಿದ್ದ ಕೋವಿ ಸ್ವಸ್ಥಾನದಲ್ಲಿ ಇರಲಿಲ್ಲ. ಲೋಟವನ್ನು ಅಲ್ಲೇ ಇದ್ದ ಟೀಪಾಯಿ ಮೇಲಿಟ್ಟು ಹೆಬ್ಬಾಗಿಲಿಗೆ ಬಂದವರೇ “ಮಂಜ..ಮಂಜ..” ಎಂದು ಧ್ವನಿಯೆತ್ತಿ ಕೂಗಿದರು. ಆಗ ಅಲ್ಲೇ ಅಂಗಳ ಗುಡಿಸುತ್ತಿದ್ದ ಅವನ ಹೆಣ್ಣು ಅಯಿತೆ “ಅವರು ಊರು ಬೇಟೆಗೆ ಹೋದರು ಅಮ್ಮಾ” ಎಂದಳು.

ಅಮ್ಮ ಸ್ವಲ್ಪ ಹೊತ್ತು ಅಂಗಳದಲ್ಲೇ ನಿಂತಿದ್ದವರು ಮೆಲ್ಲನೆ ಒಳಗೆ ಬಂದರು. ಬಂದವರೇ ಹಿಂದಿನ ರಾತ್ರಿ ಮಂಗಲಸೂತ್ರಕ್ಕೆ ಜೋಡಿಸಿದ ಬೀಗದ ಕೈಯಿಂದ ಮುಚ್ಚಿದ್ದ ದೇವರ ಕೋಣೆಯ ಬಾಗಿಲನ್ನು ತೆರೆದರು. ಬಾಗಿಲು ತೆರೆದ ಸದ್ದಿಗೆ ಒಳಗಿದ್ದ ವನಜ ಚಿಕ್ಕಮ್ಮ ಬೆಚ್ಚಿದಂತೆ ಎದ್ದು ಕುಳಿತರು. ಅಮ್ಮ ಒಂದೂ ಮಾತಾಡದೆ ಆಕೆಯನ್ನು ಹೊರಹೋಗುವಂತೆ ಸನ್ನೆ ಮಾಡಿದರು. ಆಕೆ ಹೆದ ಹೆದರುತ್ತಲೇ ಹಿಂತಿರುಗಿ ನೋಡುತ್ತಲೇ ಕೋಣೆ ದಾಟಿ ಹೊರ ಹೋದಳು.

ದೊಡ್ಡಮನೆಯ ಕೆಲಸಗಳೆಲ್ಲ ಸಂಜೆಯತನಕ ಸರ್ವಸಾಧಾರಣ ರೀತಿಯಲ್ಲಿ ನಡೆಯತೊಡಗಿದವು.

ಹೊತ್ತು ನೆತ್ತಿಯ ಮೇಲೆ ಬಂದಾಗಿತ್ತು.. ಮಂಜ ಆ ದೊಡ್ಡಮನೆಯ ತೋಟದ ಅಂಚಿನಲ್ಲಿ ಏಳುತ್ತಾ, ಬೀಳುತ್ತಾ, ಏದುಸಿರು ಬಿಡುತ್ತಾ ಓಡಿಬರುತ್ತಿರುವುದು ಕಾಣಿಸಿತು. ಅವನ ಓಟದ ರೀತಿಯನ್ನು ನೋಡಿದವರಿಗೆ ಯಾವುದೋ ಒಂದು ಬೃಹತ್ ಅವಘಡ ಸಂಭವಿಸಿದೆಯೆಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆತ ಓಡುತ್ತಾ ಬಂದವನೇ ಹೆಬ್ಬಾಗಿಲನ್ನು ಅಂಗಳಕ್ಕೆ ಜೋಡಿಸುವ ಏಳು ಮೆಟ್ಟಲುಗಳನ್ನು ದಡದಡನೆ ಹತ್ತಿದವನೇ ಕೊನೆಯ ಮೆಟ್ಟಲಿಗೆ ತಲೆಯಿಟ್ಟು ಬೋರೆಂದು ಅಳತೊಡಗಿದ. ನಿಜವಾಗಿ ಹೇಳಬೇಕೆಂದರೆ ಮಂಜನಂತಹ ಅಸ್ಪೃಶ್ಯರಿಗೆ ಕೆಳಮೆಟ್ಟಲವರೆಗೆ ಮಾತ್ರ ಬರಲು ಅವಕಾಶವಿತ್ತು. ಅಂತಹದ್ದರಲ್ಲಿ ಆತ ಅದನ್ನೆಲ್ಲ ಮರೆತು ಹೆಬ್ಬಾಗಿಲ ತನಕ ಬಂದನೆಂದರೆ….

ಮಂಜನ ರೋದನ ಕೇಳಿದ ಆ ದೊಡ್ಡ ಮನೆಯ ಸಂದು ಗೊಂದಿನಲ್ಲಿದ್ದ ಜೀವ ರಾಶಿಯೆಲ್ಲಾ ಹೆಬ್ಬಾಗಿಲಿಗೆ ಹರಿದು ಬಂತು. ಆತನನ್ನು ಮುಟ್ಟುವಂತಿಲ್ಲ. ಆದರೂ ಅಮ್ಮ ಆತನ ಬೆನ್ನ ಮೇಲೆ ಕೈಯಿಟ್ಟು “ಏನಾಯ್ತು” ಅಂದರು. ಆತ ಬಿಕ್ಕಳಿಸುತ್ತಲೇ ತಡೆ ತಡೆದು ಹೇಳಿದ: “ಪಟೇಲರು..ಗುಂಡು ಹೊಡೆದುಕೊಂಡು ಜೀವ ಬಿಟ್ಟರು.” ಅಮ್ಮ ತಕ್ಷಣ ಅಲ್ಲೇ ಕುಸಿದು ಬಿದ್ದರು. ಹೆಂಗಸರೆಲ್ಲಾ ಅವರನ್ನು ಹಗುರವಾಗಿ ನಡೆಸಿಕೊಂಡು ಮೊಗಸಾಲೆಯಲ್ಲಿ ಸದಾ ಹರವಿಕೊಂಡಿರುತ್ತಿದ್ದ ಗಾದಿಯ ಮೇಲೆ ಮಲಗಿಸಿ ಬೀಸಣಿಗೆಯಿಂದ ಗಾಳಿ ಬೀಸುತ್ತಲೇ ಹೆಬ್ಬಾಗಿಲಿಗೆ ಕಣ್ಣು, ಕಿವಿಗಳನ್ನು ಕೇಂದ್ರೀಕರಿಸಿದರು.

ಇಡೀ ದೊಡ್ಡಮನೆಯೇ ಆ ಕ್ಷಣಗಳಲ್ಲಿ ಸ್ತಬ್ಧವಾದಂತಿತ್ತು.. ಆಗ ತಕ್ಷಣ ಎಚ್ಚೆತ್ತುಕೊಂಡವರು ಶಕುಂತಲಾ ಅತ್ತೆ. ಆಕೆ ಒಳಗೆ ಹೋಗಿ ದೊಡ್ಡ ಚೆಂಬಿನಲ್ಲಿ ನೀರು ಮಜ್ಜಿಗೆಯನ್ನು ತಂದು ಮಂಜನ ಕೈಯಲ್ಲಿಟ್ಟು “ಇದನ್ನು ಕುಡಿ” ಎಂದು ಸನ್ನೆ ಮಾಡಿ ಒಳಗೆ ಹೋದರು. ಬರುವಾಗ ಅವರ ಕೈಯಲ್ಲಿ ತಾನು ತೋಟಕ್ಕೆ ಹೋಗುವಾಗಲೆಲ್ಲ  ಹಿಡಿದುಕೊಳ್ಳುತ್ತಿದ್ದ ದೊಡ್ಡಕತ್ತಿಯಿತ್ತು. ಅಲ್ಲಿ ಬೇಟೆಗೆ ಹೋಗದೆ ಇರುವ ಮನೆಯ ಗಂಡಸರನ್ನು ಕರೆದು “ನಡೀರಿ ಕಾಡಿಗೆ ಹೋಗೋಣ” ಎಂದು ಮಂಜನನ್ನು ಎಬ್ಬಿಸಿ ಹೊರಟೇಬಿಟ್ಟರು. ಉಳಿದ ಹೆಂಗಸರು-ಮಕ್ಕಳೆಲ್ಲ ಏನು ಮಾಡುವುದೆಂದು ಗೊತ್ತಾಗದೆ ಅಲ್ಲಲ್ಲೇ ಕುಳಿತು ಗುಸುಗುಸು ಮಾತಾಡುತ್ತಾ, ಕಣ್ಣೀರು ಒರೆಸಿಕೊಳ್ಳುತ್ತಾ ತೋಟದ ದಾರಿಯೆಡೆಗೆ ಕಣ್ಣು ನೆಟ್ಟರು.

ಶಕುಂತಲಾ ಅತ್ತೆ ಘಟನಾ ಸ್ಥಳಕ್ಕೆ ಬಂದಾಗ ಅಲ್ಲಾಗಲೇ ಕೆಂಪು ಟೋಪಿಯ ಪೋಲಿಸರು ಹಾಜರಾಗಿ ತಮ್ಮ ಪುಸ್ತಕದಲ್ಲಿ ಏನೇನೋ ಬರೆದುಕೊಳ್ಳುತ್ತಿದ್ದರು. ಅಲ್ಲೇ ದೂರದಲ್ಲಿದ್ದ ದೊಡ್ಡಮನೆಯ ಗಂಡಸೊಬ್ಬರು ಶಕುಂತಲತ್ತೆಯನ್ನು ಮತ್ತು ಅವರ ಜೊತೆ ಬಂದವರನ್ನು ಅಲ್ಲಿಗೆ ಕರೆದುಕೊಂಡು ಹೋದರು. ಅಲ್ಲಿ ಮರವೊಂದಕ್ಕೆ ಒರಗಿ ಕುಳಿತಂತೆ ಪಟೇಲರು ಕಾಲು ನೀಡಿ ಕುಳಿತಿದ್ದಾರೆ. ಅವರ ಎದುರಿನಲ್ಲಿ ಒಂದು ಗಟ್ಟಿ ಬುಡವಿರುವ ಕುರುಚಲು ಪೊದೆಯಿದೆ. ಅದರ ಮೇಲೆ ಕೋವಿಯನ್ನಿಟ್ಟಿದ್ದಾರೆ. ಕೋವಿಯ ನಳಿಗೆ ಎದೆಯನ್ನು ಒತ್ತಿದೆ. ಇದನ್ನು ನೋಡಿದ ಯಾರೂ ಬೇಕಾದರೂ ಊಹಿಸಿಕೊಳ್ಳಬಹುದಾಗಿತ್ತು; ಅವರು ಬಲಗಾಲಿನಿಂದ ಕುದುರೆಯನ್ನು(ಟ್ರಿಗರ್) ಮೀಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು. ಶಕುಂತಲ ಅತ್ತೆ ಉಕ್ಕಿಬರುತ್ತಿರುವ ಅಳುವನ್ನು ಹತ್ತಿಕ್ಕುತ್ತಲೇ ನುರಿತ ಪತ್ತೆದಾರಳಂತೆ ಹೆಣದ ಹಿಂದೆ ಮುಂದೆ, ಎಡ ಬಲ ಪರಿಶೀಲಿಸಿದರು. ನಂತರ ಅಲ್ಲಿದ್ದವರೊಡನೆ ಸ್ವಲ್ಪ ಹೊತ್ತು ಮಾತಾಡಿ ಬಂದಷ್ಟೇ ವೇಗದಲ್ಲಿ ಮನೆಗೆ ಹಿಂದಿರುಗಿದರು.

ಶಕುಂತಲ ಅತ್ತೆ ಬರುವುದನ್ನೇ ಕಾಯುತ್ತಿದ್ದ ದೊಡ್ಡಮನೆಯ ಜನರು ಆಕೆಯನ್ನು ಸುತ್ತುವರಿದು ಪ್ರಶ್ನೆಗಳ ಸುರಿಮಳೆಗರೆದರು. ಆಕೆ ಹೇಳುತ್ತಿದ್ದುದನ್ನೆಲ್ಲಾ ಕೇಳುತ್ತಿದ್ದಂತೆ ಎಲ್ಲರೂ ದೊಡ್ಡ ಧ್ವನಿ ತೆಗೆದು ಅಳಲು ಪ್ರಾರಂಭಿಸಿದರು. ಮೊಗಸಾಲೆಯಲ್ಲಿ ಮಲಗಿದ್ದ ಅಮ್ಮನೆಡೆಗೆ ಶಕುಂತಲಾ ಅತ್ತೆ ಬಂದು ಅದೇನೋ ಗುಸುಗುಸು ಮಾತಾಡಿದರು. ಅಮ್ಮ ಒಮ್ಮೆಗೇ “ನನಗ್ಯಾಕೋ ಭಯವಾಗುತ್ತಿದೆ..ನಾನೇನು ಮಾಡಲಿ?” ಎಂದು ಬಿಕ್ಕಳಿಸಿದರು. ಸ್ವಲ್ಪ ಹೊತ್ತು ಹಾಗೇ ಇದ್ದವರು ಏನೋ ನಿರ್ಧಾರಕ್ಕೆ ಬಂದವರಂತೆ ಎದ್ದು ನಿಂತರು. ನಿಧಾನವಾಗಿ ತನ್ನ ಕೋಣೆಗೆ ಬಂದವರೇ ಒಂದು ಸೀರೆಯನ್ನು ಎರಡಾಗಿ ಮಡಚಿ ನೆಲದಲ್ಲಿ ಹಾಸಿದರು. ಅದರಲ್ಲಿ ನನ್ನ ಮತ್ತು ಅವರ ಒಂದೆರಡು ಬಟ್ಟೆಗಳನ್ನು ಹಾಕಿದರು. ಅದನ್ನು ಗಂಟು ಕಟ್ಟಿ ಕಂಕುಳಲ್ಲಿಟ್ಟುಕೊಂಡವರೇ ನನ್ನ ಕೈ ಹಿಡಿದು ಎಳೆಯುತ್ತಾ “ಬಾ ನಿನ್ನ ಅಜ್ಜ ಮನೆಗೆ ಹೋಗೋಣ” ಎಂದು ಮೊಗಸಾಲೆಯನ್ನು ದಾಟಿಬಿಟ್ಟರು. ಅಲ್ಲಿ ನೆರೆದಿದ್ದ ಜನರೆಲ್ಲಾ ಏನಾಯ್ತು ಎಂದು ಗ್ರಹಿಸುವಷ್ಟರಲ್ಲೇ ಅಮ್ಮ ಅಂಗಳದಲ್ಲಿಳಿದು ತೋಟದ ಎದುರಿನ ಹಾದಿಯನ್ನು ಬಿಟ್ಟು ಹಿತ್ತಿಲ ಹಾದಿಯತ್ತ ನಡೆಯತೊಡಗಿದರು. “ಎಂಟು ತಿಂಗಳ ಗರ್ಭಿಣಿ ನೀನು. ಈ ಸಂದರ್ಭದಲ್ಲಿ ಹೀಗೆಲ್ಲಾ ಉದ್ವೇಗ ಪಡಬಾರದು” ಎನ್ನುತಾ ಕೆಲವು ಹೆಂಗಸರು ಅಮ್ಮನ ಹಿಂದೆ ಓಡಿಬಂದರು.. ಆಗ ಅಮ್ಮ ತನ್ನ ಕೈಯಲ್ಲಿದ್ದ ಕತ್ತಿ ತೋರಿಸಿ “ಯಾರಾದರೂ ನನ್ನನ್ನು ತಡೆದರೆ ಈ ಕತ್ತಿಯಿಂದಲೇ ಕುತ್ತಿಗೆ ಕಡಿದುಕೊಂಡು ಸತ್ತುಬಿಡುತ್ತೇನೆ” ಎಂದವಳೇ ಹಿತ್ತಲಿನ ಏರು ಹತ್ತಿ, ಹಿಂಬದಿಯ ಹರಿಯುವ ಹೊಳೆಯಲ್ಲಿಳಿದಳು. ಆಚೆ ದಡ ತಲುಪಿದವಳೇ. ಬಟ್ಟೆಯ ಗಂಟನ್ನು ದಡದ ಮೇಲೆ ಇಟ್ಟಳು. ನನ್ನ ಕೈ ಹಿಡಿದುಕೊಂಡು ಹೊಳೆಯ ಮಧ್ಯಕ್ಕೆ ಬಂದು ಮೂರು ಮುಳುಗು ಹಾಕಿ ಆಚೆ ದಡಕ್ಕೆ ಹೋಗಿ ಬೇರೆ ಬಟ್ಟೆಯನ್ನುಟ್ಟು ನನ್ನ ಮತ್ತು ಆಕೆಯ ಬಟ್ಟೆಯನ್ನು ಕಳಚಿ ನದಿಯ ಮಧ್ಯಕ್ಕೆ ಎಸೆದುಬಿಟ್ಟಳು.

ನಡೆದೂ ನಡೆದು, ಗುಡ್ಡ ಬೆಟ್ಟ ಹತ್ತಿಳಿದು ಹೊತ್ತು ಮುಳುಗುವ ವೇಳೆಗೆ ನಾವು ನಾಗೂರಿನ ಶಾಲೆಯ ಹತ್ತಿರದಲ್ಲಿದ್ದೆವು. ಅಮ್ಮ ಅಲ್ಲಲ್ಲಿ ನಿಂತು ದಣಿವಾರಿಸಿಕೊಳ್ಳುತ್ತಿದ್ದಳು. “ಅಮ್ಮಾ..ಭಗವತಿ..ತಾಯಿ ರಕ್ತೇಶ್ವರಿ..” ಎಂದೆಲ್ಲಾ ಗೊಣಗಿಕೊಳ್ಳುತ್ತಿದ್ದಳು. ನನಗೆ ಹಸಿವು ಬಾಯಾರಿಕೆಯಲ್ಲಿ ಜೀವ ಹೋದಂತಾಗಿತ್ತು. ಶಾಲೆಯ ಹತ್ತಿರ ಬಂದಾಗ “ಅಮ್ಮಾ..ಅಮ್ಮಾ..” ಎಂದು ನರಳುತ್ತಾ ಒಂದು ಮರದ ಬುಡದಲ್ಲಿ ಹೊಟ್ಟೆ ಹಿಡಿದುಕೊಂಡು ಕುಳಿತುಬಿಟ್ಟಳು. ನನಗೆ ಏನೂ ತೋಚದೆ ಅವಳ ಪಕ್ಕದಲ್ಲಿ ಕುಳಿತುಬಿಟ್ಟೆ. ಅವಳು ನನ್ನ ಕೈಯನ್ನು ಹಿಡಿದುಕೊಂಡು “ಅಕ್ಕಪಕ್ಕದಲ್ಲಿ ಯಾವುದಾದರೂ ಮನೆಯಿದ್ದರೆ ಅಲ್ಲಿರುವವರನ್ನು ಕರೆದುಕೊಂಡು ಬಾ” ಎನ್ನುತ್ತಾ ಮರದ ಬೊಡ್ಡೆಗೆ ಒರಗಿಕೊಂಡಳು. ನಾನು ಅಲ್ಲಿಂದ ಓಡಿದೆ.

ಇತ್ತ ಊರವರು ಪಟೇಲರ ಹೆಣವನ್ನು ದೊಡ್ಡಮನೆಗೆ ಹೊತ್ತು ತಂದರು. “ಅತ್ತಿಗೆ” ಎನ್ನುತ್ತಾ ಮೈದುನಂದಿರು ಆಕೆಗಾಗಿ ಹುಡುಕಾಡಿದರೆ ಮನೆಯಲ್ಲಿ ಆಕೆಯಿಲ್ಲ. ವಿಷಯ ತಿಳಿದ ಮೊದಲ ಮೈದುನ ಆಕೆಯನ್ನು ತಾನು ಕರೆತರುವುದಾಗಿ ಉಳಿದ ಕಾರ್ಯಗಳ ಏರ್ಪಾಡು ಮಾಡಲು ಅಲ್ಲಿದ್ದವರಿಗೆ ಸೂಚನೆ ನೀಡಿ ಸೈಕಲ್ ಹತ್ತಿ ಹೊರಟ. ಅವನಿಗೆ ಅತ್ತಿಗೆಯ ತವರಿನ ಹಾದಿ ಗೊತ್ತಿತ್ತು. ಅಲ್ಲಿಂದ ಸುಮಾರು ಎಂಟು ಮೈಲಿನ ಹಾದಿಯದು. ಸುಮಾರು ನಾಲ್ಕು ಮೈಲಿ ಕಳೆದು ನಾಗೂರಿನ ಶಾಲೆಯ ಹತ್ತಿರ ಬಂದಾಗ ಶಾಲೆಯ ಮುಂದೆ ನಾಲ್ಕೈದು ಹೆಂಗಸರು ನಿಂತಿದ್ದು ಆತನ ಕಣ್ಣಿಗೆ ಬಿತ್ತು. ಅವರ ನಡುವೆ ನಿಂತಿದ್ದ ನಾನು ಚಿಕ್ಕಪ್ಪನ ಕಣ್ಣಿಗೆ ಬಿಳಬಾರದೆಂದು ಪ್ರಯತ್ನಪಡುತ್ತಿರುವಾಗಲೇ ಅವನು ನನ್ನನ್ನು ನೋಡಿಬಿಟ್ಟ. ನಾನಿದ್ದಲ್ಲಿಗೇ ಬಂದುಬಿಟ್ಟ. ಅಲ್ಲಿದ್ದ ಹೆಂಗಸರ ಹತ್ತಿರ ಮಾತಾಡಿದ. ಶಾಲೆಯ ಒಂದು ಕೋಣೆಯ ಮುಚ್ಚಿನ ಬಾಗಿಲ ಮುಂದೆ ನಿಂತು “ಅತ್ತಿಗೆ ಹೆದರಬೇಡಿ. ನಿಮ್ಮನ್ನು ತವರು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿಸುತ್ತೇನೆ.. ನಾನು ಮನೆಗೆ ಹೋಗುವೆ. ಅಲ್ಲಿ ಮುಂದಿನ ಕಾರ್ಯ ಮಾಡಬೇಕಾಗಿದೆ. ನಾಳೆ ನಾಡಿದ್ದರಲ್ಲಿ ನಾವು ನಿಮ್ಮನ್ನು ಬಂದು ಕಾಣುವೆ” ಎಂದು ಹೇಳಿದವನೇ ನನ್ನ ನೆತ್ತಿ ಸವರಿ “ಬಾ ಸೈಕಲ್ಲಿನಲ್ಲಿ ಮನೆಗೆ ಹೋಗುವ” ಎಂದ. ಆದರೆ ನಾನು ಹೋಗಲು ಒಪ್ಪಲಿಲ್ಲ. ಆಗ ಚಿಕ್ಕಪ್ಪ ಅಲ್ಲೇ ಇದ್ದ ಗಂಡಸೊಬ್ಬನನ್ನು ಕರೆದು ನನ್ನನ್ನು ಅಜ್ಜನ ಮನೆಗೆ ಕರೆದೊಯ್ದು ವಿಷಯ ಮುಟ್ಟಿಸುವಂತೆ ತಿಳಿಸಿ ತಾನು ಸೈಕಲ್ ಹತ್ತಿ ಹೊರಟ.

ಆಗ ಆ ಗಂಡಸು – ನಾನವರನ್ನು ಮಾಮ ಎಂದು ಇವತ್ತಿಗೂ ಕರೆಯುತ್ತೇನೆ – ಒಬ್ಬ ಹೆಂಗಸಿನೊಡನೆ ಮಾತಾಡಿ ನನಗೆ ಹಾಲು, ಬಾಳೆ ಹಣ್ಣು ಮತ್ತು ಎರಡು ದೋಸೆಗಳನ್ನು ತರಿಸಿಕೊಟ್ಟರು. ನಾನದನ್ನು ಗಬಗಬನೆ ತಿಂದೆ. ಆಮೇಲೆ ಅವರು “ಬಾ ಅಜ್ಜನ ಮನೆಗೆ ಹೋಗೋಣ” ಎಂದು ನನ್ನನ್ನೆತ್ತಿ ಭುಜದ ಮೇಲೆ ಕೂರಿಸಿಕೊಂಡರು. ನಾನು ಅವರ ಕೊರಳ ಸುತ್ತ ಎರಡು ಕಾಲುಗಳನ್ನು ಇಳಿಬಿಟ್ಟು ಅವರ ತಲೆಯನ್ನು ಹಿಡಿದುಕೊಂಡು ಆರಾಮದಿಂದ ಕೂತು ಅಲ್ಲಿದ್ದವರನ್ನು ತಿರುಗಿ ನೋಡುತ್ತಾ ಅಜ್ಜನ ಮನೆಯತ್ತ ಹೊರಟೆ.

ಆ ರಾತ್ರಿ ಆ ಶಾಲೆಯಲ್ಲಿ ನನ್ನ ತಮ್ಮ ಹುಟ್ಟಿದ. ಮರುದಿನ ಬೆಳಗಿನ ಜಾವ ಅಜ್ಜ ಡೋಲಿ ತಂದು ಮಗಳು ಮತ್ತು ಮೊಮ್ಮಗನನ್ನು ತನ್ನ ಮನೆಗೆ ಕರೆದುಕೊಂಡು ಹೋದವನು ಮತ್ತೆಂದೂ ದೊಡ್ಡಮನೆಗೆ ಕಳುಹಿಸಿಕೊಡಲಿಲ್ಲ. ಅಮ್ಮ ತಾನು ಬದುಕಿರುವ ತನಕವೂ ಆ ಮನೆಯ ಮೆಟ್ಟಲು ತುಳಿಯಲಿಲ್ಲ ಮತ್ತು ನಾವು ದೊಡ್ಡಮನೆಗೆ ಸೇರಿದವರೆಂಬುದನ್ನೂ ಬಾಯಿತಪ್ಪಿಯೂ ಹೇಳಲಿಲ್ಲ. ಆದರೆ ಅಜ್ಜನ ಕಾಲಾಂತರದಲ್ಲಿ ಅಮ್ಮ ಆ ಮನೆಯಿಂದಲೂ ಹೊರದಬ್ಬಿಸಿಕೊಂಡಳು. ಅದೂ ತಾನು ಹೆತ್ತ ಮಗನಿಂದಲೇ.. ಸಾಯುವ ಕಾಲಕ್ಕೆ ಆಕೆ ಬೀದಿ ಹೆಣವಾದಳು ಎಂಬುದನ್ನು ನೆನಪಿಸಿಕೊಂಡರೇ ನನ್ನ ಕೊರಳುಬ್ಬಿ ಬರುತ್ತದೆ; ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.

ಆಗ ನಾನು ದೂರ ದೇಶದಲ್ಲಿದ್ದೆ; ಅಸಹಾಯಕಳಾಗಿದ್ದೆ…

ರಾಧೆ ಕಟ್ಟಿದ ಬದುಕು

ಎನಿಗ್ಮಾ ಪೋಸ್ಟ್

ಗೋಕುಲದ ಪರಿಸರವನ್ನು ನಮ್ಮ ಮಿತಿಯಲ್ಲಾದರೂ ಕಣ್ಣೆದುರು ಕಟ್ಟಿಕೊಳ್ಳಲು ಪ್ರಯತ್ನಿಸುವುದಾದರೆ, ಅದು ಇಂಡಿಯಾದ ಯಾವುದೇ ಒಂದು ಕುಗ್ರಾಮದಂತೆ ಇದ್ದ ಪುಟ್ಟ ಹಳ್ಳಿ. ಬೆಂಗಳೂರಂಥ ಜನಗಾಡಲ್ಲಿ ವಾಹನಗಾಡಲ್ಲಿ ಉಸಿರು ಕಟ್ಟಿದಂತಾಗುವಾಗ ಎಂಥದೋ ಆಪ್ತತೆಯನ್ನು, ಮಾಧುರ್ಯವನ್ನು ಹಂಬಲಿಸಿ ಧ್ಯಾನಿಸುವ, ನಾವೆಲ್ಲರೂ ಕಂಡಿರುವ ಹಳ್ಳಿಗಳ ಹಾಗೆ ಇದ್ದಿರಬಹುದಾದ ಹಳ್ಳಿ. ನಾನಿಲ್ಲಿ ನನ್ನ ಹಳ್ಳಿಯ ಮಳೆ, ಬಿಸಿಲು, ಚಳಿ, ಗಾಳಿಯ ನೆನಪು ಮಾಡಿಕೊಂಡರೆ ಅಪ್ರಸ್ತುತವಾಗಲಿಕ್ಕಿಲ್ಲ ಎಂದುಕೊಳ್ಳುತ್ತೇನೆ. ಬಾಗಿಲು ಭದ್ರಪಡಿಸಿಕೊಂಡು ಒಳಗೆ ಹೂತು ಕುಳಿತುಕೊಳ್ಳಬೇಕಾದ ಜರೂರಿಲ್ಲದ ಹಳ್ಳಿ ಅದು. ಅಲ್ಲಿ ಪ್ರತಿಯೊಂದು ಮನೆಯ ಸಂಗತಿಯೂ ಇಡೀ ಹಳ್ಳಿಯ ಸಂಗತಿಯೇ. ನಿಗೂಢಗಳನ್ನು ಕಳಚಿಟ್ಟು ಬೆರೆತುಹೋಗುವ ಭಾವನದಿಯ ಒರತೆ ಅಲ್ಲಿ ಸದಾ ಜೀವಂತ. ಅಲ್ಲಿ ಮಳೆ ತರುವ ಸಂಭ್ರಮ, ಬಿರುಮಳೆಯ ಕಾರಣದ ದಿಗಿಲು, ಚಳಿಯು ತಂದಿಡುವ ಆಹ್ಲಾದ, ಬಿಸಿಲು ಕರುಣಿಸುವ ಬದುಕಿನ ಪಾಠಗಳು ಎಲ್ಲವೂ ಸಮೂಹದ ಬಯಲಲ್ಲೇ ಅನುಭವವಾಗುವಂಥದ್ದು. ಅವರ ಹಟ್ಟಿಯ ಹಸುಗರು ಕಳೆದುಹೋದರೆ ಅದು ಇತರರೆಲ್ಲರ ಪಾಲಿನ ದಿಗಿಲು. ಕತ್ತಲನ್ನು ಹರಡುವ ಸಂಜೆಯ ಧಾವಂತವನ್ನು ಸೀಳುತ್ತಲೇ ಹುಡುಗರೆಲ್ಲ ಅಂಬಾ ಎನ್ನುತ್ತ ಕಾಣೆಯಾದ ಕರುವಿನ ಹುಡುಕಾಟಕ್ಕಿಳಿಯುತ್ತಾರೆ. ದನವನ್ನು ಅಡಗಿಸಿಡುತ್ತಾನೆ ಎಂಬ ಆರೋಪವಿರುವ ಕಾರಣಕ್ಕಾಗೇ ಜನಮನದಲ್ಲಿ ನೆಲೆಗೊಂಡಿರುವ ಗುತ್ತದ ದೇವರಿಗೆ ಹರಕೆ ಕಟ್ಟುತ್ತಾರೆ. ಕಡೆಗೂ ಕರು ಕಂಡಾಗ ಹಳ್ಳಿಯೇ ಒಂದಾಗಿ ಸಂಭ್ರಮಿಸುತ್ತದೆ. ಸಂಕಟದ ಮಧ್ಯೆಯೇ ಒಂದು ಸಡಗರಕ್ಕಾಗಿ ಅಲ್ಲಿ ನಿರೀಕ್ಷೆಗಳು ಕುಡಿಯೊಡೆಯುತ್ತಿರುತ್ತವೆ. ಲವಲವಿಕೆಯನ್ನು ಕಾದಿಡುವ ತವಕಗಳು ದನಿಗೈಯುತ್ತಲೇ ಇರುತ್ತವೆ.

ಇಂಥದೊಂದು ಹಳ್ಳಿಯ ಚಿತ್ರ ಇವತ್ತು ಎಷ್ಟರ ಮಟ್ಟಿಗೆ ವಾಸ್ತವ ಎಂಬ ಎಚ್ಚರದ ಬಾಜುವಿನಲ್ಲೂ ಹೀಗೊಂದು ಭಾವುಕ ಸ್ಪರ್ಷವಿರುವ ಹಂಬಲ ತಪ್ಪಲ್ಲ ಎನ್ನಿಸುತ್ತದೆ. ಈ ಕಿರುದಾರಿಯ ಮೂಲಕ ಗೋಕುಲವನ್ನು ಅಸ್ಪಷ್ಟವಾಗಿಯಾದರೂ ಕಾಣುವುದು ಸಾಧ್ಯವಾಗುವುದಾದರೆ, ಅಲ್ಲಿ ಯಶೋದೆ ಮತ್ತು ನಂದರ ಮನೆಯಂಗಳದಲ್ಲಿ ಹುಡುಗರ ತಂಟೆ ಜೋರಾಗಿದೆ. ಆ ಎಲ್ಲ ತಂಟೆಕೋರರ ನಾಯಕ ಕೃಷ್ಣ. ಯಮುನೆಯ ಸಮೀಪ ಹೆಣ್ಣುಮಕ್ಕಳನ್ನು ಹುಡುಗರ ಗುಂಪೊಂದು ಗೋಳುಹೊಯ್ದುಕೊಳ್ಳುತ್ತಿದೆ. ಆ ಪುಂಡರ ನಾಯಕ ಅದೇ ಕೃಷ್ಣ.

ರಾಜಪುತ್ರ ಕೃಷ್ಣ ಗೋಕುಲದಲ್ಲಿ ಅವರದೇ ಮನೆಯ ಹುಡುಗನೆಂಬಂತೆ ಒಂದಾಗಿ ಹೋದವನು. ಅವನ ತಂಟೆ ತಕರಾರುಗಳೆಲ್ಲಕ್ಕೂ ಗೋಕುಲದ ಸರಳತೆಯದ್ದೇ ಲೇಪ. ರಾಜಮನೆತನದ ಎಳೆಯ ಶ್ರೀಕೃಷ್ಣನ ಮನಸ್ಸಲ್ಲಿ ಬಡವರ ಹಟ್ಟಿಯ ಪ್ರಾಣಬಿಂದುವನ್ನು ಗುರುತಿಸಬಲ್ಲ ಶಕ್ತಿ ಚಿಗಿತದ್ದು ಗೋಕುಲದೊಂದಿಗಿನ ಆತನ ಈ ಸಖ್ಯದ ಕಾರಣದಿಂದ. ಕೃಷ್ಣನ ಜೀವನದ ನಿಜವಾದ ಭಾಗ್ಯಗಳಲ್ಲಿ ಮೊದಲನೆಯದು ಆತನ ಗೋಕುಲದ ದಿನಗಳು. ಬುದ್ಧನನ್ನು, ಗಾಂಧಿಯನ್ನು ಓದಿಕೊಳ್ಳುವಾಗ ಅವರೊಳಗೆ ನಾವು ಕೃಷ್ಣನ ಇಂಥ ಭಾಗ್ಯವೇ ಅಂತರ್ ವಾಹಕದಂತೆ ಹರಿಯುವುದನ್ನು ಕಾಣುತ್ತೇವೆ. ಸಿದ್ಧಾರ್ಥ ಅರಮನೆಯ ಆಚೆಗಿನ ವಿದ್ಯಮಾನಗಳಿಗಾಗಿ ಕುತೂಹಲಿಸುತ್ತಾನೆ. ಸಾಮಾನ್ಯನ ಬದುಕು ಏನು ಎಂಬ ಅರಿವಿನಲ್ಲಿ ನಿಜವಾದ ಪ್ರೀತಿಯ ಹೊಳಹು ಗಳಿಸುತ್ತಾನೆ. ಗಾಂಧಿ ಸರಳತೆಯ ಬೆಳಕಿನಲ್ಲಿ ಜನರ ಎದೆಯೊಳಗೆ ನಡೆದುಬರುತ್ತಾರೆ.

ತಮ್ಮ ಕರುಳ ಕುಡಿಯಲ್ಲದಿದ್ದರೂ ಯಶೋದೆ ಮತ್ತು ನಂದರು, ಅಷ್ಟೇ ಯಾಕೆ ಇಡೀ ಗೋಕುಲ ಕೃಷ್ಣನನ್ನು ತಮ್ಮವನೆಂದು ತುಂಬಿಕೊಳ್ಳುವ ಪರಿ ಯಾವ ರಾಜಸಿರಿಗಿಂತ ದೊಡ್ಡದು. ಕೃಷ್ಣನನ್ನು ಯಶೋದೆಯಾಗಲಿ, ಗೋಕುಲವಾಗಲಿ ರಾಜಪುತ್ರನೆಂದು ನೋಡಲಿಲ್ಲ. ಗೊಲ್ಲತಿಯರು ಕೃಷ್ಣನ ತಂಟೆಕೋರತನದ ಬಗ್ಗೆ, ಪುಂಡತನದ ಬಗ್ಗೆ ಯಶೋದೆಯ ಬಳಿ ಬಂದು ದೂರು ಹೇಳಲು ಅಂಜಲಿಲ್ಲ. ಯಶೋದೆ ಕೂಡ ಅವನನ್ನು ದಂಡಿಸುವ ಅಧಿಕಾರವಿಟ್ಟುಕೊಂಡೇ ಅವನನ್ನು ಪ್ರೀತಿಸಿದಳು, ಪಾಲಿಸಿದಳು.

ಕೃಷ್ಣನನ್ನು ಗೋಕುಲದವರೆಲ್ಲ ಬೆರಗಿನಿಂದ ಕಾಣಲು ಇದ್ದ ಕಾರಣವೆಂದರೆ, ಆತ ಅವರಿಂದ ಆಗದ್ದನ್ನು ಮಾಡಿ ತೋರಿದ್ದು. ಕಾಳಿಂಗವನ್ನು ಮೆಟ್ಟಿ ನಿಂತ ಹುಡುಗನ ಚಿತ್ರ ಗೋಕುಲದ ಯಾವನ ಮನಸ್ಸಿನಿಂದಲೂ ಕಡೆಯವರೆಗೂ ಮರೆತುಹೋಗಿರಲಿಕ್ಕಿಲ್ಲ. ಗೋಕುಲವನ್ನೇ ತೊಳೆದುಹಾಕಿಬಿಡುವಂಥ ಮಳೆಯ ಪ್ರಹಾರಕ್ಕೆ ಪ್ರತಿಯಾಗಿ ಗೋವರ್ಧನಗಿರಿಯನ್ನು ಕಿರುಬೆರಳಲ್ಲಿ ಎತ್ತಿ ನಸುನಗುತ್ತ ನಿಂತು ಎಲ್ಲರನ್ನೂ ಕಾಯ್ದವನು ದೇವರಾಗಿ ಅವರ ಮನದಲ್ಲಿ ಅಚ್ಚೊತ್ತಲು ಹೆಚ್ಚು ಹೊತ್ತು ಬೇಕಾಗಿರಲಿಕ್ಕಿಲ್ಲ. ಅಷ್ಟಾಗಿಯೂ ಕೃಷ್ಣ ಯಾವ ಕ್ಷಣದಲ್ಲೂ ಅದೇ ತಂಟೆಕೋರನ, ಪುಂಡನ ರೂಪದಲ್ಲೇ ಅವರೊಳಗೆ ಉಳಿದ. ಅದು ಕೃಷ್ಣನ ರಾಜತಾಂತ್ರಿಕ ಶಕ್ತಿಯಿರಬಹುದು. ಗೋಕುಲದವರ ಮನದಾಚೆಯ ರಾಜಯೋಗಕ್ಕಿಂತ, ಅವರ ಮನದೊಳಗಿನ ಒಡ್ಡೋಲಗದಲ್ಲಿ ಶಾಶ್ವತ ನೆಲೆಯನ್ನು ಕೃಷ್ಣ ಬಯಸಿದ್ದಿರಬಹುದು.

ಇಂಥ ಕೃಷ್ಣನನ್ನು ರಾಧೆ ಹಂಬಲಿಸುತ್ತಾಳೆ. ಇದು ಕೃಷ್ಣನ ಪಾಲಿನ ಮತ್ತೊಂದು ಬಹುದೊಡ್ಡ ಭಾಗ್ಯ. ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬೇಕು. ರಾಧೆ ಮಾತ್ರವಲ್ಲ, ಗೋಪಿಕೆಯರ ಸಮೂಹವೇ ಕೃಷ್ಣನಿಗಾಗಿ ಎದೆಯ ಡವಡವವನ್ನು ಬಚ್ಚಿಡುತ್ತ ಕಾತರಿಸುತ್ತದೆ. ಈ ಕಾತರದ ಸೆಳವಿನಲ್ಲಿ ಸೆರೆಯಾದವರ ಪೈಕಿ ರಾಧೆಯೇ ಪ್ರತ್ಯೇಕವಾಗಿ ಕಂಡರೂ, ಅವಳೆಂದೂ ಕೃಷ್ಣನ ಬಗ್ಗೆ ಪೊಸೆಸಿವ್ ಆಗಿದ್ದಳೆಂದು ಅನ್ನಿಸುವುದಿಲ್ಲ. ಬಹುಶಃ ಆಕೆ ಈ ಮನೋಭಾವದಿಂದಾಗೇ ತನ್ನ ವಿಷಯದಲ್ಲಿ ಕೃಷ್ಣ ಕೂಡ ಪೊಸೆಸಿವ್ ಆಗದಂಥ ಸನ್ನಿವೇಶವನ್ನು ಕೂಡ ತನಗರಿವಿಲ್ಲದಂತೆ ಸಾಧ್ಯವಾಗಿಸಿಕೊಂಡಿದ್ದಿರಬಹುದು.

ಗೋಕುಲ ಬಿಟ್ಟು ಕೃಷ್ಣ ಮಧುರೆಗೆ ಹೊರಡಬೇಕಾಗಿ ಬಂದಾಗ ಗೋಕುಲದ ಹರೆಯದ ಹುಡುಗರಲ್ಲಿ ಎಷ್ಟು ಹುಚ್ಚು ಉಮೇದು ಇತ್ತೊ ಅಷ್ಟೇ ಮಟ್ಟಿನ ದುಃಖ ಗೋಪಿಕೆಯರನ್ನು ತುಂಬಿತ್ತು. ಆದರೆ ಇಲ್ಲಿಯೂ ಕೃಷ್ಣನ ದಾರಿಗೆ ಅಡ್ಡಿಯಾಗದ ಹಾಗೆ, ಸಡಗರಕ್ಕೆ ಭಂಗವಾಗದ ಹಾಗೆ ದುಃಖ ನುಂಗಿಕೊಂಡು ಗಟ್ಟಿಯಾಗಿ ನಿಂತುಬಿಡುತ್ತದೆ ಗೋಪಿಕಾ ಸಮೂಹ. ಕೃಷ್ಣ ಬಿಸುಟ ಕೊಳಲನ್ನು ರಾಧೆ ಎದೆಗೊತ್ತಿಕೊಳ್ಳುತ್ತಾಳೆ. ಬಹುಶಃ ಇನ್ನು ಮುಂದೆ ತಾನು ಕೃಷ್ಣನ ಕೊಳಲ ಉಲಿಯಾಗಲಾರೆ ಎಂಬ ಸಂಕಟ ಅವಳನ್ನು ಆ ಗಳಿಗೆ ತೀವ್ರ ಯಾತನೆಯಾಗಿ ಕಾಡಿರಲು ಸಾಕು. ಬಿಲ್ಲಹಬ್ಬದ ನೆಪದಲ್ಲಿ ರಾಜಕಾರ್ಯಕ್ಕಾಗಿ ಹೊರಟುನಿಂತ ಕೃಷ್ಣನಿಗೆ ವಿದಾಯದ ಕ್ಷಣ ಕಾಡಿದ್ದರೂ ಅದನ್ನು ಮರೆತು ಮುಂದುವರಿಯುವುದು ಅವನಿಗೆ ಸುಲಭವಿತ್ತು. ಆದರೆ ಎದೆಯೊಳಗೆ ಕಾದಿಟ್ಟ ಕನಸಾಗಿದ್ದ ಕೃಷ್ಣನ ವಿದಾಯ ಗೋಪಿಕೆಯರ ಪಾಲಿಗೆ ಅಷ್ಟೂ ಜೀವನಸಮಯದ ಆಘಾತವೇ ಆಗಿ ಎರಗಿರಲು ಸಾಕು. ರಾಧೆಯನ್ನು ಬೇರೆಯಾಗಿ ನೋಡುವುದಕ್ಕಿಂತ ಇಡೀ ಗೋಪಿಕಾ ಸಮೂಹದ ಮನಃಸ್ಥಿತಿಯಾಗಿ ಕಂಡುಕೊಳ್ಳುವುದು ಅವಶ್ಯವೆನ್ನಿಸುತ್ತದೆ.

ಕೃಷ್ಣ ಮತ್ತು ಗೋಪಿಕಾ ಸ್ತ್ರೀಯರ ಮಧ್ಯೆ ಇದ್ದ ಸಂಬಂಧವಾದರೂ ಎಂಥದಾಗಿತ್ತು? ಅಲ್ಲಿ ಉದ್ದಕ್ಕೂ ನಮಗೆ ಕಾಣುವುದು ಗೋಪಿಕೆಯರನ್ನು ಗೋಳುಹೊಯ್ದುಕೊಳ್ಳುವ ಕೃಷ್ಣ. ಅವರ ಬೈಗುಳವನ್ನು ಆಸ್ವಾದಿಸುವ ಕೃಷ್ಣ. ಕೃಷ್ಣನ ಬಗ್ಗೆ ಅವರೂ ಅಷ್ಟೆ. ಸಿಟ್ಟಾದಂತೆ ತೋರಿದರೂ ಅದು ಹುಸಿಮುನಿಸು. ಅವನ ತುಂಟತನದಿಂದ ಒಳಗೊಳಗೇ ಖುಷಿ. ಈ ಖುಷಿಯನ್ನು ಹಾಗೇ ಇಡು ದೇವರೆ ಎಂದು ಪ್ರಾರ್ಥಿಸುವಂತಿದ್ದ ಅವರ ಮನಃಸ್ಥಿತಿಯಲ್ಲಿನ ಪ್ರೇಮಕ್ಕೆ ವಾಂಛೆಯ ಎಂಜಲಿದ್ದಿರಲಾರದು.

ಗೋಪಿಕೆಯರೊಂದಿಗಿನ ಕೃಷ್ಣನ ಹುಡುಗಾಟ, ಸಖ್ಯದ ಹುಡುಕಾಟವೇ ಆಗಿದ್ದಿರಬಹುದು. ನಲ್ಲನಿದ್ದರೆ ಅವನಂತಿರಲಿ ಎಂದು ಗೋಪಿಕೆಯರೂ ಹಂಬಲಿಸಿದ್ದರೆ ಅದು ತಪ್ಪಲ್ಲ. ಇನ್ನೊಂದು ಮನಸ್ಸಿನ ಮೌನವನ್ನು ಆಲಿಸಬಲ್ಲ ಶಕ್ತಿ ನಿಜವಾದ ಸಖ್ಯಕ್ಕಿರುತ್ತದೆ. ಕೃಷ್ಣ ಮತ್ತು ಗೋಪಿಕೆಯರ ಮಧ್ಯೆ ಬೆಳೆದಿದ್ದ ಸಲಿಗೆ ಇಂಥ ಗೆಳೆತನದ ಭಾವದ್ದಾಗಿರಬಹುದು. ರಾಧೆ ಇಡೀ ಕೃಷ್ಣ ಕಥಾನಕದಲ್ಲಿ ಅಂಥ ಬೆಸುಗೆ ಬಯಸುವ ಗೋಪಿಕಾ ಸಮೂಹದ ಪ್ರತಿನಿಧಿ ಅಷ್ಟೆ. ಹದಿನಾರು ಸಾವಿರ ಗೋಪಿಕಾ ಸ್ತ್ರೀಯರು ಎಂಬುದು ಒಂದು ಸಮಷ್ಟಿ ಎಂಬ ಅರ್ಥ ಹೊಂದಿರುವಂತೆಯೇ, ಭಾವುಕ ಸಖ್ಯಕ್ಕೆ ಕಾತರಿಸಿದ ರಾಧೆಯ ಹಿರಿಮೆಯನ್ನೂ ಧ್ವನಿಸುತ್ತದೆಯೇ?

ಒಬ್ಬ ಸಾಧಾರಣ ಹೆಣ್ಣಾಗಿಯೇ ರಾಧೆ, ಕೃಷ್ಣನ ಲೋಕಕ್ಕೆ ಒಂದು ವಿಸ್ತಾರ ತಂದಳು ಎಂಬುದನ್ನು ಗಮನಿಸದೆ ಇರುವುದು ಸಾಧ್ಯವಿಲ್ಲ. ಕಡೆಗೂ ರಾಧೆ, ಅಥವಾ ಗೋಪಿಕಾ ಸಮೂಹ ಕೃಷ್ಣನನ್ನು ಗೋಕುಲದ ಗಂಧವಾಗಿ ಉಳಿಸಿಕೊಳ್ಳಲು ಹಂಬಲಿಸಿತು.

ಪುತಿನ ಅವರ “ಗೋಕುಲ ನಿರ್ಗಮನ”  ನಾಟಕದ ಕಡೆಯಲ್ಲಿ, ಕೃಷ್ಣನಿಲ್ಲದ ಗೋಕುಲ ಆತನ ನೆನಪನ್ನೇ ಮಿಡಿಯುತ್ತಿರುವ ಸನ್ನಿವೇಶ ಹೀಗೆ ಬರುತ್ತದೆ:

ಇದ್ದುದು ದಿಟ ಅವನೊಲಿದುದು ದಿಟ ನಾವು
ನಲಿದುದು ದಿಟ ಬಹ ನೆಚ್ಚು ದಿಟ

ಎಂದೆಂದೂ ಮುಗಿಯದ ವಸಂತಕ್ಕಾಗಿ ನಿರೀಕ್ಷಿಸುತ್ತಲೇ ಕೃಷ್ಣನನ್ನು ಬೀಳ್ಕೊಟ್ಟ ಗೋಕುಲ, ಅದರೊಳಗೆ ಬದುಕಿದ್ದ ರಾಧೆ, ಅವಳ ಗೆಳತಿಯರು -ಇವರೆಲ್ಲ ಬದುಕು ದಯಪಾಲಿಸಿದ್ದು ಕೃಷ್ಣನಿಗೆ ಮಾತ್ರವಲ್ಲ, ನಮ್ಮ ಕಾಲಕ್ಕೂ ಆ ಧ್ಯಾನದ ದೀಕ್ಷೆ ದಯಪಾಲಿಸುತ್ತಿರುವವರು.

ಹಾಗಾಗಿಯೇ ಗೋಕುಲ ಅನ್ನುವುದನ್ನು, ಅಂಥ ಮಾರ್ದವತೆಯನ್ನು ರಾಧೆಯ ಅಂತಃಕರಣದೊಳಗಿನ ಲೋಕ ಎಂದು ನೋಡಬೇಕೆಂಬ ಆಸೆಯಾಗುತ್ತದೆ.

ವೆಂಕಟ್ರಮಣ ಗೌಡ

ಅವಳಿರುವುದು ಹಾಗೇ ಅಂತೆ

ಅನುಗುಣ | ಕಾವ್ಯಾ ಕಡಮೆ

ದು ಎರಡು ವರುಷಗಳ ಹಿಂದೆ ನಾನು ಪೀಜಿಯಲ್ಲಿದ್ದಾಗ ನಡೆದ ಘಟನೆ. “ಅಕ್ಕಾರ.. ಏನ್ ಮಾಡಾತ್ತೀರೀ..” ಅಂತ ಸರಿಯಾಗಿ ಮಧ್ಯಾಹ್ನ ಮೂರೂವರೆಗೆ ರೇಣವ್ವಳ ದೊಡ್ಡ ದನಿ ಕೇಳಿಸಿತೆಂದರೆ “ಛೇ ಮಲಗಿ ಬಿಟ್ಟಿದ್ದೆನಲ್ಲ” ಎಂದು ಒಮ್ಮೆಲೇ ಕಣ್ಣು ನಿಚ್ಚಳವಾಗುವುದು; ಅದರ ಬೆನ್ನ ಹಿಂದೆಯೇ ಮಧ್ಯಾಹ್ನ ಮಲಗುವುದಿಲ್ಲ ಅಂತ ಮನೆಬಿಟ್ಟು ಪೀಜಿಗೆ ಬರುವಾಗ ಅಮ್ಮನಿಗೆ ಮಾಡಿದ ಪ್ರಾಮಿಸ್ ಕೂಡ ನೆನಪಾಗುವುದು. ಇನ್ನು ರೇಣವ್ವ ಬಟ್ಟೆ ಒಗೆಯುತ್ತಲೋ ಪಾತ್ರೆ ತೊಳೆಯುತ್ತಲೋ ನಮ್ಮ ಪೀಜಿ ಆಂಟಿಯ ಹತ್ತಿರ ಸುತ್ತ ನಾಲ್ಕು ಮನೆಯ ಕಿಟಕಿ-ಬಾಗಿಲು-ಗೋಡೆಗಳಿಗೆಲ್ಲ ಕೇಳಿಸುವ ಹಾಗೆ ತನ್ನ ಸಂಸಾರ ಪುರಾಣ ಶುರುಮಾಡಿದಳೆಂದರೆ ನನ್ನ ರೂಮ್‌ಮೇಟ್‌ಗಳಿಬ್ಬರೂ “ಬಂತಾವಾ? ಕಮ್ಯುನಿಟಿ ರೇಡಿಯೋ!” ಅಂತ ಮಗ್ಗಲು ಬದಲಿಸುತ್ತಾರೆ. ನಾನು ನೆಪಕ್ಕೆ ಅಂತ ಒಂದು ಪುಸ್ತಕವನ್ನೋ ಪತ್ರಿಕೆಯನ್ನೋ ಕೈಯಲ್ಲಿ ಹಿಡಿದು ರೇಣವ್ವಳ ಮಾತು ಕೇಳಲು ನಮ್ಮ ರೂಮಿನ ಮುಂದಿರುವ ಜಗಲಿಯಲ್ಲಿ ಹೋಗಿ ಕೂಡುತ್ತೇನೆ. “ಏನ್ ಅವಿ? ಊಟಾತಾ?” ಅಂತ ತನ್ನ ಮಾತಿನ ರಭಸದಲ್ಲೂ ಒಮ್ಮೆ ನನ್ನೆಡೆ ತಿರುಗಿ ಮುಗುಳ್ನಕ್ಕು ಮತ್ತೆ ಆಂಟಿಯ ಹತ್ತಿರ ಅವಳ ಹರಟೆ ಮುಂದುವರೆಸುತ್ತಾಳೆ.

ಅವಳ ದಟ್ಟ ಬಣ್ಣದ ಸೀರೆ, ಎತ್ತಿ ಮುಡಿ ಕಟ್ಟಿದ ಕೂದಲು, ಎರಡೂ ಕೈಗಳಿಗೆ ಕೆಂಪು ಕಚ್ಚಿನ ಎರಡು ಡಜನ್ ಗಾಜಿನ ಬಳೆಗಳು, ಹಣೆಗೆ ಮರೂನ್ ಬಣ್ಣದ ದಟ್ಟ ಕುಂಕುಮ, ಕಿವಿಗೆ ಜುಮುಕಿಯ ಜೊತೆಗೆ ಎರಡು ಬುಗುಡಿ ಎಲ್ಲವೂ ಅವಳನ್ನು ನನ್ನ ದೃಷ್ಟಿಯಲ್ಲಿ ನನ್ನ ತಾಯಿಯ ವಯಸ್ಸಿನವಳಿರಬೇಕು ಅಂತ ಅನ್ನಿಸಲು ಪ್ರೇರಕವಾಗಿದ್ದವು. ಆದರೆ ಆಂಟಿ ಮಾತ್ರ ಆಕೆಗಿನ್ನೂ ಇಪ್ಪತ್ತೈದೇ ವರ್ಷ ಎಂದು ಹೇಳಿದಾಗ ನನ್ನನ್ನೂ ಸೇರಿ ನನ್ನ ರೂಮ್‌ಮೇಟ್‌ಗಳೆಲ್ಲರೂ ಆಶ್ಚರ್ಯಗೊಂಡೆವು. ಅವಳ ಸಣಕಲು ಶರೀರ ನೋಡಿದ ಪ್ರತೀಸಲವೂ ಇವಳು ದಿನಕ್ಕೆ ಹನ್ನೆರಡು ಮನೆಯ ಕೆಲಸ ಮಾಡುತ್ತಾಳೆಯೇ ಅಂತ ಅಚ್ಚರಿಪಟ್ಟಿದ್ದೇವೆ. ಆದರೆ ರೇಣವ್ವ ಮಾತ್ರ ಅದೂ ಇದೂ ಮಾತನಾಡುತ್ತಲೇ ಕಡಿಮೆ ಬಟ್ಟೆಯಿದ್ದರೆ ಖುಷಿಯಿಂದ ಹಾಡು ಗುನುಗುನಿಸುತ್ತ, ಹೆಚ್ಚು ಬಟ್ಟೆಯಿದ್ದರೆ ಬಕೇಟನ್ನು ಎತ್ತಿ ಎತ್ತಿ ಕುಟ್ಟುತ್ತ ತನ್ನ ಕೆಲಸವನ್ನು ಅರ್ಧತಾಸಿನಲ್ಲೇ ಮಾಡಿ ಮುಗಿಸಿಬಿಡುತ್ತಾಳೆ. ಕೆಲಸದ ಆಯಾಸ ಮರೆಯಲೆಂದೇ ಅವಳು ತುಸು ಹೆಚ್ಚು ಮಾತನಾಡುತ್ತಾಳೆ ಅಂತಲೇ ಆಂಟಿಗೆ ಯಾವಾಗಲೂ ಗುಮಾನಿ.

ನನಗೆ ರೇಣವ್ವಳ ವ್ಯಕ್ತಿತ್ವದ ಕುರಿತು ಅಚ್ಚರಿ ಮೂಡಲು ನಮ್ಮ ಪೀಜಿಯ ಆಂಟಿ ಆಗಾಗ ಅವಳ ಬಗ್ಗೆ ಹೇಳುವ ಆಸಕ್ತಿಕರ ವಿಷಯಗಳೇ ಕಾರಣವಾಗಿದ್ದವು. ಅವಳು ಕೆಲಸ ಮಾಡಬೇಕಾದರೆ ಇರುವೆಯೇನಾದರೂ ಕೈಹತ್ತಿ ಬಂದರೆ ಅದನ್ನು ಮೆಲುವಾಗಿ ಎತ್ತಿ ನೆಲದ ಮೇಲೆ ಇಟ್ಟು ಅದು ಹರಿದುಹೋಗುವ ತನಕ ಆತಂಕದಿಂದ ನೋಡುವುದೂ, ಸೊಳ್ಳೆಯನ್ನು ಹೊಡೆಯದೇ ಉಫ್ ಅಂತ ಅದನ್ನು ಊದಿಯೇ ಹಾರಿಸುವುದು ಎಲ್ಲ ಮೊದಮೊದಲು ತಮಾಷೆಯೆನಿಸಿದರೂ ಕಡೆಕಡೆಗೆ ರೇಣವ್ವಳ ಹೊಸದೇ ರೂಪು ನಮ್ಮೆಲ್ಲರ ಮನದಲ್ಲಿ ನೆಲ ಪಡೆದುಕೊಳ್ಳುತ್ತಿತ್ತು. ಹೆಚ್ಚು ಕಡಿಮೆ ನಮ್ಮದೇ ವಯಸ್ಸಿನ ಈ ಪುಟ್ಟ ಹೆಂಗಸಿನ ಕುರಿತು ಒಂದು ಬಗೆಯ ಅನನ್ಯ ಉತ್ಸಾಹವೇ ನಮ್ಮಲ್ಲಿ ಮನೆಮಾಡಿತ್ತು.

ಅವಳ ಕುರಿತು ಕೌತುಕ ಮೂಡಿಸಲು ಆಂಟಿ ಆಗೀಗ ಹೇಳುವ ಉಪಕತೆಗಳೇ ಸಾಕಾಗಿದ್ದವು. ರೇಣವ್ವ ಚಿಕ್ಕವಳಿದ್ದಾಗಿನಿಂದಲೇ ಇವರ ಮನೆಯ ಕೆಲಸಕ್ಕೆ ಬರುತ್ತಿರುವುದೂ, ಇವರೂ ತಮ್ಮ ಮಕ್ಕಳದೇ ಹಳೆಯ ಚೂಡಿದಾರವನ್ನೋ ಫ್ರಾಕುಗಳನ್ನೋ ಕೊಟ್ಟರೆ ಖುಷಿಯಿಂದ ಹಾಕಿಕೊಳ್ಳುತ್ತಿದ್ದುದೂ, ಹಾಗೆಯೇ ಹದಿನಾರಕ್ಕೇ ಅವಳ ಮದುವೆ ಗೊತ್ತಾದಾಗ “ಛೇ ಪಾಪ ಇಷ್ಟು ಸಣ್ಣ ವಯಸ್ಸಿಗ್ಯಾಕೆ?” ಅಂತ ಆಂಟಿಯೇ ಅವರಮ್ಮನನ್ನು ತರಾಟೆಗೆ ತೆಗೆದುಕೊಂಡಿದ್ದೂ, ನಂತರ ಮದುವೆಯಾಗಿ ಆರೇ ತಿಂಗಳಿಗೆ ರೇಣವ್ವ ತಿರುಗಿ ಬಂದಾಗ ಅವಳ ಮುಖದಲ್ಲಿ ಹತ್ತು ವರ್ಷ ದೊಡ್ಡವರ ಕಳೆ ಬಂದದ್ದು, ನೋಡನೋಡುತ್ತಲೇ ಎಷ್ಟು ಚೆಂದದ ಪೋರಿ ಹೇಗಾಗಿ ಹೋದಳು ಅಂತ ಆಂಟಿ ಪದೇ ಪದೇ ರೇಣವ್ವಳ ಕುರಿತು ಮರುಕ ವ್ಯಕ್ತಪಡಿಸುತ್ತಾರೆ. ಇವಳು ದುಡಿದಿದ್ದೆಲ್ಲವೂ ಇವಳಿಗೆ ಡೈವೋರ್ಸ್ ಕೊಡಿಸಲು ಜವಾಬ್ದಾರಿ ವಹಿಸಿಕೊಂಡಿರುವ ವಕೀಲರ ಖರ್ಚಿಗೇ ಹೋಗುತ್ತಿರುವ ಮಾತು ಕೂಡ ಅವರ ಆ ಉಪಕತೆಯಲ್ಲಿಯೇ ಸೇರಿಕೊಂಡಿರುತ್ತದೆ.

ಇಂಥ ರೇಣವ್ವ ಒಮ್ಮೆ ಪಾತ್ರೆ ತೊಳೆಯುತ್ತ ಕೂತಾಗ ಪಾದಕ್ಕೆ ತಂಪು ಹಿಡಿದ ಹಾಗೆ ಆಯ್ತಂತೆ. ಒಂದೇ ಭಂಗಿಯಲ್ಲಿ ಕೂತು ಕೂತು ಕಾಲು ಹಿಡಿದಿರಬಹುದು ಅಂದುಕೊಂಡು ಪಾದವನ್ನು ಅತ್ತಿತ್ತ ಸರಿಸಾಡಿದಾಗ ಅವಳ ಕಾಲು ಸರಿಹೋಯಿತು. ಅಷ್ಟೇ, ರೇಣವ್ವ ಮತ್ತೆ ತನ್ನ ಕಾಯಕವನ್ನು ಮುಂದುವರೆಸಿದಳು.

ಅಲ್ಲೇ ಹಿಂದಿನ ದಿನದ ಒಣಗಿದ ಬಟ್ಟೆಯನ್ನು ಬಳ್ಳಿಯಿಂದ ತೆಗೆಯುತ್ತ ನಿಂತ ಆಂಟಿ ಒಮ್ಮೆಲೆ “ಹಾ.. ಹಾವು, ಅಯ್ಯೋ ಹಾವು” ಅಂತ ಕೂಗಾಡಲು ಶುರು ಮಾಡಿದಾಗಲೇ ಗೊತ್ತಾದದ್ದು ರೇಣವ್ವಗೆ, ಆಗ ತನ್ನ ಪಾದಕ್ಕೆ ತಂಪಾಗಿ ಹತ್ತಿದ್ದು ಏನು ಎಂಬುದು. ಅವಳ ಮೈ ಒಮ್ಮೆ ನಖಶಿಖಾಂತ ನಡುಗಿದರೂ ಮುಂದೆರುಗಲಿರುವ ಅನಾಹುತಕ್ಕೆ ಮಂಗಳ ಹಾಡಲು ಅವಳು ಸನ್ನದ್ಧಳಾಗಿ ನಿಂತಳು.

ಹೊರಗೆ ಆಂಟಿ ಚೀರಿದ್ದು ಕೇಳಿದ್ದೇ ನಾವೆಲ್ಲ ಬಾಗಿಲು ತೆರೆದು ಹೊರಗೋಡಿದೆವು. “ಹೊಡೀಬ್ಯಾಡ್ರೀ ಅಕ್ಕಾರ, ತಂತಾನ ಹೊಕ್ಕತದು” ಎಂದ ರೇಣವ್ವಳ ಮಾತು ಆಂಟಿಯ ಕಿವಿಗೆ ಕೇಳದಷ್ಟು ದೂರದಲ್ಲಿರದಿದ್ದರೂ ಅವರ ಬುದ್ಧಿಗೆ ನಾಟುವಷ್ಟು ಹತ್ತಿರವೂ ಇರಲಿಲ್ಲ. ಆ ಹಾವಿಗೆ ಮೊದಲೇ ಎಲ್ಲಿ ನೋವಾಗಿತ್ತೋ ಏನೋ ತುಂಬ ತ್ರಾಸಿನಿಂದ ಜೀವ ಎಳೆದುಕೊಂಡು ಸಾವಕಾಶವಾಗಿ ಸರಿದು ಹೋಗುತ್ತಿತ್ತು. ಆಂಟಿ ಬಟ್ಟೆ ಒಣಗಿಸುವ ದೊಡ್ಡ ಕೋಲನ್ನು ಒಮ್ಮೆ ಕೈಯಲ್ಲಿ ಹಿಡಿದು ಅದು ಕೆಲಸಕ್ಕೆ ಬರುವುದಿಲ್ಲ ಎಂದು ಮನಗಂಡು ದೊಡ್ಡದೊಂದು ಇಟ್ಟಂಗಿಯನ್ನೆತ್ತಿಕೊಂಡು ಹಾವನ್ನು ಸಮೀಪಿಸುತ್ತಿದ್ದರು. ಹಿಂದಿನಿಂದ ರೇಣವ್ವ “ಬ್ಯಾಡರೀ ಅಕ್ಕಾರ, ಬ್ಯಾಡರೀ” ಅಂತ ಕೂಗೇ ಕೂಗಿದಳು. ಆಂಟಿ ಇನ್ನೇನು ಹಾವಿನ ತೀರ ಸಮೀಪ ಬಂದರು ಎನ್ನುವಾಗ ರೇಣವ್ವ ತಾಳ್ಮೆಗೆಟ್ಟು ಅವರನ್ನು ಹಿಂದೆ ತಳ್ಳಿ “ಹೊಡೀಬ್ಯಾಡಾ ಅಂದರ ಕೇಳಂಗಿಲ್ಲೇನವಾ ನಿಂಗ? ಪುಣ್ಯಾತಗಿತ್ತಿ?” ಅಂತ ಆಂಟಿಯನ್ನು ದೊಡ್ಡ ಬಾಯಲ್ಲಿ ಗದರಿಬಿಟ್ಟಳು. ನಾವ್ಯಾರೂ ಇದನ್ನು ಅವಳಿಂದ ಅಪೇಕ್ಷಿಸಿರಲಿಲ್ಲ; ಆಂಟಿಯೂ ಕೂಡ. ರೇಣವ್ವಳ ಆ ಕೆರಳಿದ ಕಣ್ಗಳು, ತಾಳ್ಮೆಗೆಟ್ಟ ನಿಲುವು ಈ ಘಟನೆಯನ್ನು ಪ್ರಹಸನದಂತೆ ನೋಡುತ್ತ ನಿಂತ ನಮ್ಮೆಲ್ಲರ ಮುಖಕ್ಕೂ ತೆಗೆದು ಬಾರಿಸಿದಂತಿತ್ತು.

ಆ ಹಾವು ಮಾತ್ರ ಈಗಷ್ಟೇ ಭಯಂಕರ ಅಪಘಾತದಿಂದ ತಪ್ಪಿಸಿಕೊಂಡ ನಡುಗುವ ವೃದ್ಧನಂತೆ ತೆವಳಿ, ಸರಿಸರಿದು ಗಿಡಗಳ ಮರೆಯಲ್ಲಿ ಕಾಣೆಯಾಯಿತು.

‘ಗರ್ಭಗುಡಿ’ಯ ಮರ್ಮಗಳು!

ಎನಿಗ್ಮಾ ಪೋಸ್ಟ್

ವಳ ಹೆಸರು ಮೇರಿ. ಕೇರಳದ ಹೆಣ್ಣುಮಗಳು. ಅದೇಕೋ ಎಳೆತನದಿಂದಲೇ ಧಾರ್ಮಿಕ ಸೆಳೆತ. ಕ್ರೈಸ್ತ ಸನ್ಯಾಸಿನಿಯಾಗುವ ಬಯಕೆಯಿಂದ 13ನೇ ವಯಸ್ಸಲ್ಲೇ ಮನೆ ಬಿಟ್ಟು ಓಡುತ್ತಾಳೆ. ಕ್ಯಾಥೊಲಿಕ್ ಚರ್ಚಿನಲ್ಲಿ ಸನ್ಯಾಸಿನಿಯಾಗುವ ಅವಳ ಕನಸೇನೋ ನನಸಾಯಿತು. ಆದರೆ, 40 ವರ್ಷಗಳ ಅವಳ ಸನ್ಯಾಸಿನಿ ಜೀವನದಲ್ಲಿ ಅವಳಿಗಾದದದ್ದು ಮಾತ್ರ ಕಹಿ ಅನುಭವ; ಮತ್ತು ಅಂತಿಮವಾಗಿ ಉಳಿದದ್ದು ಅತಿ ದೊಡ್ಡ ಹತಾಶೆ.

ಕಡೆಗೆ, ಚರ್ಚಿನಿಂದ ಹೊರಬಂದು ಅನಾಥಾಶ್ರಮ ಕಟ್ಟಿ ಜನಸೇವೆ ಮುಂದುವರಿಸುವ ಮೂಲಕ ತಾನು ನಂಬಿದ ದೇವರನ್ನು ಕಾಣಲು ತೊಡಗುತ್ತಾಳೆ. ಧರ್ಮದ ಹಣತೆಗೆ ತೈಲದಂತೆ ತನ್ನನ್ನು ತಾನು ಧಾರೆಯೆರೆದುಕೊಳ್ಳಬಯಸಿದ್ದವಳನ್ನು ಧರ್ಮ ಸಾರಥ್ಯದ ಹೆಸರಿನಲ್ಲಿ ಮುಂದೆ ನಿಂತವರು ಹೇಗೆಲ್ಲಾ ನಡೆಸಿಕೊಂಡರೆಂಬುದು ಮಾತ್ರ, ಕರಾಳ ಮುಖವೊಂದರ ಅನಾವರಣ ಮಾಡುತ್ತದೆ.

40 ವರ್ಷಗಳ ಸನ್ಯಾಸಿನಿ ಜೀವನದಲ್ಲಿ ಏನೆಲ್ಲವನ್ನು ಕಾಣಬೇಕಾಯಿತು ಅನ್ನೋದನ್ನು ಮೇರಿ ತಾನು ಬರೆದ ಪುಸ್ತಕದಲ್ಲಿ ಬಯಲು ಮಾಡಿದ್ದಾಳೆ. ದೇವರ ಸನ್ನಿಧಿ ಎಂದು ನಂಬುವ ಮತ್ತು ನಂಬಿಸುವ ಚರ್ಚ್ ಒಂದರೊಳಗೆ (ಅಥವಾ ಯಾವುದೇ ಒಂದು ಧಾರ್ಮಿಕ ಕೇಂದ್ರದೊಳಗೆ) ಎಂಥೆಂಥ ಅನಾಹುತ ನಡೆಯಬಹುದು ಎಂಬುದನ್ನು ಹೇಳುತ್ತದೆ ಮೇರಿ ಬರೆದ ಪುಸ್ತಕ.

ಅಲ್ಲಿ ಕೆಲ ಸನ್ಯಾಸಿನಿಯರು ಸೆಕ್ಸ್ ಮ್ಯಾಗಝಿನ್ನುಗಳನ್ನು ಓದುತ್ತಿದ್ದರೆಂಬುದು ಮೇರಿ ಹೇಳುವ ಸತ್ಯಗಳಲ್ಲಿ ಒಂದು. ಕೋಣೆಯ ಬಾಗಿಲು ಮುಚ್ಚಿಕೊಂಡು, ಅಶ್ಲೀಲ ಚಿತ್ರಗಳಿರುವ ಮ್ಯಾಗಝಿನ್ ಓದುತ್ತ, ಆ ಬೆತ್ತಲೆ ಚಿತ್ರಗಳನ್ನು ಮೋಹಗೊಂಡವರ ಹಾಗೆ ಕೈಯಿಂದ ತೀಡುತ್ತಿದ್ದರು ಎಂದು ಬರೆವಾಗ ಮೇರಿ ಅಸಹ್ಯಿಸಿಕೊಳ್ಳುತ್ತಾರೆ. ಒಂದು ದಿನ, ನೋಡಲು ಸುಂದರಳಾಗಿದ್ದ ಸನ್ಯಾಸಿನಿಯೊಬ್ಬಳು ಬೆತ್ತಲೆ ಗಂಡು ಹೆಣ್ಣಿನ ಚಿತ್ರವಿರುವ ಅಂಥ ಮ್ಯಾಗಝಿನ್ ಒಂದನ್ನು ಓದುತ್ತಿದ್ದುದನ್ನು ಗಮನಿಸಿದ ಮೇರಿಗೆ, ಒಮ್ಮೆ ಸನ್ಯಾಸವನ್ನು ಒಪ್ಪಿ ಬಂದವರು ಹೀಗೆ ಮಾಡಕೂಡದಲ್ಲವೇ ಎನ್ನಿಸುತ್ತದೆ. ಅವಳನ್ನು ಕರೆದು ಎಚ್ಚರಿಕೆಯ ಮಾತುಗಳನ್ನೂ ಹೇಳುತ್ತಾಳೆ. ಫಾದ್ರಿಗಳ ಜೊತೆ ಸನ್ಯಾಸಿನಿಯರು ಮಾತಾಡುತ್ತ, ಫ್ಲರ್ಟ್ ಮಾಡುತ್ತ ಕಾಲ ಕಳೆಯುವುದು ಕೂಡ ಚರ್ಚಿನೊಳಗೆ ಸಾಮಾನ್ಯ ಸಂಗತಿ. ಅದನ್ನು ಮೇರಿ ವಿರೋಧಿಸುತ್ತಾಳೆ. ಅಂಥ ನಡೆಯೆಲ್ಲ ತಪ್ಪು ಹಾದಿಗೆ ಎಳೆಯುತ್ತದೆ ಎಂಬ ಆತಂಕ ಮೇರಿಯದು. ಆದರೆ ಇಂಥದ್ದರ ಬಗ್ಗೆಲ್ಲ ಮದರ್ಬಳಿ ಕಂಪ್ಲೇಂಟ್ ಮಾಡಿದರೂ ಅವರು ಸುಮ್ಮನಿರುತ್ತಿದ್ದುದು ಮೇರಿಗೆ ಅರ್ಥವಾಗದ ಸಂಗತಿಯಾಗಿತ್ತು.

ಎಷ್ಟೋ ಸಲ, ಅಕಸ್ಮಾತ್ತಾಗಿ ಸನ್ಯಾಸಿನಿಯರ ಕೋಣೆಗಳ ಮುಂದೆ ಹಾದುಹೋಗುವಾಗ, ಮುಚ್ಚಿದ ಬಾಗಿಲ ಹಿಂದೆ ಏನೋ ನಡೆಯಬಾರದ್ದು ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿತ್ತು. ಒಳಗಿಂದ ಕೇಳಿಬರುತ್ತಿದ್ದ ಪಿಸುದನಿ ರೇಜಿಗೆ ಹುಟ್ಟಿಸುತ್ತಿತ್ತು. ಬ್ರಹ್ಮಚರ್ಯ ಒಪ್ಪಿ ಬಂದವರ ರೀತಿಯಲ್ಲಿರುತ್ತಿರಲಿಲ್ಲ ಅವರ ನಡೆ. ಇದನ್ನೆಲ್ಲ ಕಂಡು ತನ್ನಷ್ಟಕ್ಕೆ ತಾನೇ ಅವಮಾನಪಟ್ಟುಕೊಳ್ಳುತ್ತಿದ್ದಳು ಮೇರಿ.

ಒಮ್ಮೆ ಚರ್ಚಿನ ಆಸ್ಪತ್ರೆಗೆ, ತುಂಬಾ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬನನ್ನು ಕರೆತಂದಾಗ, ಅಲ್ಲಿ ವೈದ್ಯ ಮತ್ತು ನರ್ಸ್ ಇರಲೇ ಇಲ್ಲ. ಎಲ್ಲಿ ಎಂದು ಹುಡುಕಿಕೊಂಡು ಹೋದರೆ, ಕಡೆಗೆ ಅವರಿಬ್ಬರೂ ಒಂದು ಕೋಣೆಯೊಳಗೆ ಸೇರಿಕೊಂಡಿದ್ದುದು ಪತ್ತೆಯಾಯಿತು. ಮದರ್ ಅವರಿಗೂ ವಿಷಯ ಗೊತ್ತಾದ ಬಳಿಕ ಕೆಲಕಾಲ ಆ ಡಾಕ್ಟರ್ ಮತ್ತು ನರ್ಸ್ ಸುಮ್ಮನಿದ್ದರು. ಆದರೆ ಅನಂತರ ಯಥಾಪ್ರಕಾರ ತಮ್ಮ ಚಾಳಿ ಮುಂದುವರಿಸಿದ್ದರು. ಮದರ್ ಬಳಿ ಕಂಪ್ಲೇಂಟ್ ಮಾಡಿದ್ದಕ್ಕಾಗಿ, ಮೇರಿಗೆ ಆ ಡಾಕ್ಟರ್ ಜೀವಬೆದರಿಕೆಯನ್ನೂ ಹಾಕಿದ್ದನಂತೆ. ಆಮೇಲೆ ಆ ಡಾಕ್ಟರ್ ಮತ್ತು ನರ್ಸ್ ಮದುವೆ ಮಾಡಿಕೊಳ್ಳುತ್ತಾರೆ. ನರ್ಸ್ ಚರ್ಚಿನ ಕೆಲಸ ಬಿಟ್ಟುಬಿಡುತ್ತಾಳೆ.

ಮೇರಿ ಹೇಳುವ ಪ್ರಕಾರ, ಚರ್ಚಿನ ಕೆಲ ಫಾದ್ರಿಗಳು ಹೊರಗೆ ಕಾಣಿಸುವಷ್ಟು ಸರಳವಾಗಿರುವುದಿಲ್ಲ. ಚರ್ಚಿನ ಆಸ್ತಿಗೆ ಮತ್ತು ಚರ್ಚಿಗೆ ಸಂಬಂಧಪಟ್ಟಿದ್ದಕ್ಕೆಲ್ಲ ತಾವೇ ಒಡೆಯರು ಎಂಬ ಭಾವನೆ ಹೊಂದಿರುತ್ತಾರೆ. ಚರ್ಚಿನೊಳಗಿನ ಸನ್ಯಾಸಿನಿಯರು ಪೂರ್ತಿಯಾಗಿ ತಮ್ಮ ನಿಯಂತ್ರಣದಲ್ಲಿರಬೇಕಾದವರು ಎಂದು ಭಾವಿಸುತ್ತಾರೆ. ಅವರ ಅಪೇಕ್ಷೆಯಂತೆ ನಡೆದುಕೊಳ್ಳದವರು ತೊಂದರೆಪಡಬೇಕಾಗುತ್ತದೆ.

ತಾನಿದ್ದ ಚರ್ಚಿನಲ್ಲಿ ಏನಾಯಿತು ಎಂಬುದನ್ನು ಹೇಳುತ್ತ, ಮೇರಿ ಮತ್ತೊಂದು ಪ್ರಸಂಗ ನೆನಪಿಸಿಕೊಳ್ಳುತ್ತಾರೆ. ಅದು ನಡೆದಾಗ ಮೇರಿಗಿನ್ನೂ ಇಪ್ಪತ್ತು ವರ್ಷ. ಬೆಳಗಿನ ಪ್ರಾರ್ಥನೆಯಾದ ಬಳಿಕ ಫಾದ್ರಿಗಳಿಗೆ ಸನ್ಯಾಸಿನಿಯರು ಉಪಾಹಾರ ಸಿದ್ಧಪಡಿಸಿ ಬಡಿಸುವ ರೂಢಿ. ಒಮ್ಮೆ ಮೇರಿಯ ಸರದಿ ಬಂದಾಗ, ಉಪಾಹಾರ ಸಿದ್ಧಪಡಿಸಿಕೊಂಡು ಡೈನಿಂಗ್ ಹಾಲ್ಗೆ ಹೋಗುತ್ತಾಳೆ. ಫಾದ್ರಿ ಒಳಗೆ ಬರುತ್ತಾನೆ. ಕೈತೊಳೆದುಕೊಂಡು ತಿನ್ನಲು ಕೂರುವ ಮುನ್ನ ಕೋಣೆಯ ಬಾಗಿಲು ಹಾಕುತ್ತಾನೆ. ಬಡಿಸಲು ಹೇಳುತ್ತಾನೆ. ಆದರೆ, ಅವನ ಧಾಟಿಯಲ್ಲಿ ಎಂಥದೋ ಲಂಪಟತನ. ಮೇರಿ ಹೆದರಿ ದೂರವೇ ನಿಲ್ಲುತ್ತಾಳೆ. ಆದರೆ ಅವನು ಆರ್ಡರ್ ಮಾಡುವವನಂತೆ ಹೇಳಿದಾಗ ಮೇರಿ ಅವನಿಗೆ ಬಡಿಸತೊಡಗುತ್ತಾಳೆ. ಧಡ್ಡನೆ ಎದ್ದವನೇ ಫಾದ್ರಿ ಆಕೆಯ ಕೈಹಿಡಿದು ಎಳೆಯುತ್ತಾನೆ. ಅಪ್ರತಿಭಳಾದ ಮೇರಿಯನ್ನು, ನಿನಗಿದೆಲ್ಲಾ ಗೊತ್ತಿಲ್ಲವಾ ಎಂದು ಕೇಳುತ್ತಾನೆ. ಮೇರಿ ಜೋರಾಗಿ ಅಳತೊಡಗಿದಾಗ, ಎದೆಯ ಹತ್ತಿರಕ್ಕೆ ಅವಳನ್ನು ಎಳೆದುಕೊಳ್ಳುತ್ತಾನೆ. ಹೇಗೋ ತಪ್ಪಿಸಿಕೊಂಡು ಓಡಿದವಳನ್ನು ಬೆನ್ನಟ್ಟುತ್ತಾನೆ. ಡೈನಿಂಗ್ ಟೇಬಲ್ಲಿನ ಸುತ್ತ ಹುಲಿ-ಹಸುವಿನ ಆಟ. ಕಂಗಾಲಾದ ಮೇರಿ, ಕೈಗೆ ಸಿಕ್ಕ ಮರದ ಸ್ಟೂಲೊಂದನ್ನು ಎತ್ತಿ ಅವನ ತಲೆಗೆ ಬಡಿಯುತ್ತಾಳೆ. ಅವನ ತಲೆಯಿಂದ ನೆತ್ತರು ಸೋರತೊಡಗುತ್ತದೆ. ನೆಲಕ್ಕೆ ಬೀಳುತ್ತಾನೆ. ಮೇರಿಗೆ ದುಃಖ ಮತ್ತು ಭಯ. ಚೀರಿಕೊಳ್ಳುತ್ತಲೇ ಹೊರಗೋಡಿ, ಇತರರಿಗೆ ಹೀಗಾಯಿತು ಎಂದು ತಿಳಿಸುತ್ತಾಳೆ. ಫಾದ್ರಿಯನ್ನು ಆಸ್ಪತ್ರಗೆ ದಾಖಲಿಸಲಾಗುತ್ತದೆ. ಆದರೆ, ಎಲ್ಲರಿಂದಲೂ ಮೇರಿ ಮಾತು ಕೇಳಿಸಿಕೊಳ್ಳಬೇಕಾಗುತ್ತದೆ. ಆತ್ಮರಕ್ಷಣೆಗೋಸ್ಕರ ಅನಿವಾರ್ಯವಾಗಿ ತಾನು ಹಾಗೆ ಮಾಡಬೇಕಾಗಿ ಬಂತೆಂಬುದನ್ನು ವಿಚಿತ್ರ ಎಂಬಂತೆ ನೋಡುತ್ತಾರೆ. ಉಳಿದ ಸನ್ಯಾಸಿನಿಯರೆಲ್ಲ ಒಂದು ವರ್ಗವಾಗಿ, ಮೇರಿಯೇ ಬೇರೆಯಾಗಿ ನಿಲ್ಲುವಂತಾಗುತ್ತದೆ. ಅವರ ದೃಷ್ಟಿಯಲ್ಲಿ ಮೇರಿ ಅಪರಾಧಿಯಾಗುತ್ತಾಳೆ. ಫಾದ್ರಿ ಏನೇ ಮಾಡಿದರೂ ಯಾರೂ ಅದನ್ನು ಪ್ರಶ್ನಿಸಕೂಡದು ಎಂಬುದು ಅಲ್ಲಿನ ಅಲಿಖಿತ ನಿಯಮ ಎನ್ನುತ್ತಾಳೆ ಮೇರಿ.

ಮೇರಿಯೊಬ್ಬಳೇ ಅಲ್ಲ: ಮೇರಿ ಯಾವ ನಂಬಿಕೆ ಇಟ್ಟುಕೊಂಡು ಚರ್ಚಿನೊಳಕ್ಕೆ ಬಂದಿದ್ದಳೋ ಅದೇ ಭಾವನೆಯಿಂದ ಚರ್ಚಿನೊಳಕ್ಕೆ ಬಂದವರು, ಅಲ್ಲಿನ ಈ ಥರದ ವಾಸ್ತವ ಎದುರಿಸಲಾರೆವು ಎನ್ನಿಸಿದಾಗ, ತಮ್ಮ ನಂಬಿಕೆಗೆ ಘಾಸಿಯಾದಾಗ ಆತ್ಮಹತ್ಯೆಗೆ ಶರಣಾದದ್ದೂ ಇದೆ. ಮೇರಿ ಮಾತ್ರ ಇದನ್ನೆಲ್ಲ ಎದುರಿಸಿ, ವಿರೋಧಿಸಿ ನಿಂತವಳು. ಅವಳು ತನ್ನ ನಂಬಿಕೆಗೆ ಬದ್ಧಳಾಗಿದ್ದಕ್ಕೆ ಇತರರ ದೃಷ್ಟಿಯಲ್ಲಿ ಕೆಟ್ಟವಳಾಗಬೇಕಾಯಿತು. ಕೆಟ್ಟದ್ದನ್ನೇ ಮಾಡುತ್ತಿದ್ದವರು ಯಾವ ತಳಮಳವಿಲ್ಲದೆ ನೆಮ್ಮದಿಯಿಂದಿರುತ್ತಿದ್ದರು.

ಮೇರಿ ತಾನು ನೋಡಬೇಕಾಗಿ ಬಂದುದರ ಬಗ್ಗೆ ಖೇದ ವ್ಯಕ್ತಪಡಿಸುವುದು, ಒಪ್ಪಿದ ಚೌಕಟ್ಟನ್ನು ಮೀರುವವರೇ ಧರ್ಮವನ್ನು ಕಾಯಬೇಕಾದ ಜಾಗದಲ್ಲಿ ದರ್ಬಾರು ನಡೆಸುತ್ತಾರೆ ಎಂಬುದಕ್ಕಾಗಿ. ದುರಂತವೆನ್ನಬೇಕೊ, ತಮಾಷೆಯೆನ್ನಬೇಕೊ ಗೊತ್ತಿಲ್ಲ; ಮೇರಿ ಅಥವಾ ಇಂಥ ಪ್ರಶ್ನೆಗಳನ್ನು ಕೇಳುವ ಯಾರನ್ನೇ ಆದರೂ ಉಳಿದವರು ವಿಚಿತ್ರವೆಂಬಂತೆ ನೋಡುತ್ತಾರೆ. ತಲೆಕೆಟ್ಟವರು ಎಂಬ ರೀತಿಯಲ್ಲೇ ಅವರನ್ನು ಪರಿಗಣಿಸಲಾಗುತ್ತದೆ. ಆಗ ಮೇರಿಯಂಥವಳಿಗೆ ಅನುಭವಕ್ಕೆ ಬರುವ ನೋವು ಎಷ್ಟು ತೀವ್ರವಾದದ್ದೆಂದರೆ, ಅದು ಪ್ರಾಮಾಣಿಕ ಮನಸ್ಸನ್ನು ತೀರಾ ಅಸಹಾಯಕತೆಯ ಪ್ರಪಾತದಂಚಿಗೆ ತಂದು ನಿಲ್ಲಿಸಿಬಿಡುತ್ತದೆ.

ಧರ್ಮದ ಮುಸುಕಿನಲ್ಲಿ ಕೆಟ್ಟದ್ದು ಅಥವಾ ಕೆಟ್ಟದ್ದಕ್ಕೆಲ್ಲ ಧರ್ಮದ ಮುಸುಕು ಎಂದು ಇದನ್ನು ಸರಳೀಕರಿಸುವುದಕ್ಕಿಂತ, ಮೇರಿಯಂಥ ಹೆಣ್ಣಿಗೆ ಹೆಣ್ಣುಗಳೇ ಬೆಂಬಲವಾಗಿ ನಿಲ್ಲದೇ ಹೋದದ್ದು ಗರ್ಭಗುಡಿಯ ಮರ್ಮ ಎನ್ನುವುದೇ ಸರಿಯೇನೊ.

ಅಲ್ಲೊಂದು ಕತ್ತಲ ಕೋಣೆ…

ಪದ ಪಾರಿಜಾತ । ಉಷಾ ಕಟ್ಟೆಮನೆ

ದೊಂದು ದೊಡ್ಡಮನೆ. ಕೂಡು ಕುಟುಂಬ. ಅಲ್ಲಿ ಎಷ್ಟು ಸಂಸಾರಗಳು ವಾಸ ಮಾಡುತ್ತವೆಯೆಂದು ಪಕ್ಕನೆ ಲೆಖ್ಖ ಸಿಕ್ಕುವುದಿಲ್ಲ. ಆ ಮನೆಗೆ ಸೇರಿದ ಮಕ್ಕಳೆಲ್ಲ ಒಮ್ಮೊಮ್ಮೆ ಕೈ ಬೆರಳು ಮಡಚುತ್ತಾ ಆ ಕೊಣೆಗಳನ್ನು ಲೆಖ್ಖ ಹಾಕಲು ಪ್ರಯತ್ನಿಸುತ್ತಿಸುತ್ತಿದ್ದರು. ಆದರೆ ಪ್ರತಿಬಾರಿಯೂ ಲೆಖ್ಖ ತಪ್ಪಿಹೋಗಿ ಎದುರಿಗೆ ಸಿಕ್ಕವರನ್ನು ಕೇಳಿ ಅವರಿಂದಲೂ ಸರಿಯಾದ ಉತ್ತರ ಸಿಕ್ಕದೆ ಪೆಚ್ಚು ಮೋರೆ ಹಾಕಿಕೊಳ್ಳುತ್ತಿದ್ದುದ್ದುಂಟು. ಆದರೆ ಮಕ್ಕಳೆಲ್ಲಾ ಸೇರಿಕೊಂಡು ‘ಕಣ್ಣೇ ಮುಚ್ಚೇ ಕಾಡೇಗೂಡೇ’ ಆಡಲು ಇದಕ್ಕಿಂತ ಪ್ರಶಸ್ತ ಜಾಗ ಅವರಿಗೆ ಇನ್ನೆಲ್ಲೂ ಸಿಕ್ಕಿರಲಿಲ್ಲ. ಪ್ರತಿಯೊಂದು ಕೋಣೆಯಲ್ಲೂ ಜೋಡಿ ಮಂಚ ಇರುತ್ತಿತ್ತು. ಮತ್ತು ರಾತ್ರಿಯಲ್ಲಿ ಮಾತ್ರ ಅಲ್ಲಿ ದೀಪ ಉರಿಯುತ್ತಿತ್ತು. ಉಳಿದಂತೆ ಹಗಲಿನಲ್ಲಿ ಅವಕ್ಕೆ ಬೀಗ ಹಾಕಿರದಿದ್ದರೂ ಅವು ಸದಾ ಮುಚ್ಚಿಯೇ ಇರುತ್ತಿದ್ದವು.

ಆ ಮನೆಯ ದೊಡ್ಡ ಮೊಗಸಾಲೆಯಲ್ಲಿ ಅತ್ಯಂತ ಸುಂದರ ಕೆತ್ತನೆಗಳಿಂದ ಕೂಡಿದ, ಎರಡು ಜನ ತಬ್ಬಿ ನಿಲ್ಲಬಹುದಾದ ಚಿತ್ತಾರದ ಎರಡು ಗೋದಿಗಂಭಗಳಿದ್ದವು. ಅದನ್ನು ಗೋದಿಗಂಬಗಳೆಂದು ಯಾಕೆ ಕರೆಯುತ್ತಿದ್ದರೆಂಬುದು ನನಗೆ ಗೊತ್ತಿಲ್ಲ. ಆದರೆ ಆ ಮೊಗಸಾಲೆ ಪ್ರವೇಶ ಮಾಡುವಾಗ ಅದು ರಾಜನೊಬ್ಬನ ಆಸ್ಥಾನಕ್ಕೆ ಪ್ರವೇಶ ಮಾಡುವ ಹಾಗೆ ಅನ್ನಿಸುತ್ತಿತ್ತು. ರಾಜನಿರಬಹುದಾಗಿದ್ದ ಜಾಗದಲ್ಲಿ ದೇವರ ಕೊಣೆಯಿತ್ತು. ಅಲ್ಲಿ ನಂದಾದೀಪದ ಬೆಳಕಿನಲ್ಲಿ ಮಂದಸ್ಮಿತೆಯಾದ ಅಮ್ಮನ ಅಳೆತ್ತರದ ವಿಗ್ರಹವಿತ್ತು. ಆ ವಿಗ್ರಹದ ಕಾರಣದಿಂದಾಗಿಯೋ ಏನೋ ಆ ಮೊಗಸಾಲೆಗೆ, ಆ ಮೊಗಸಾಲೆಯ ವೈಭವದಿಂದಾಗಿ ಆ ಮನೆಗೆ ಪ್ರವೇಶಿಸುವಾಗ ಭವ್ಯತೆಯ ಅನುಭವ ಆಗುತ್ತಿತ್ತು.

ಆ ಮನೆಯನ್ನು ಸುತ್ತಲಿನ ಹಳ್ಳಿಯವರೆಲ್ಲಾ ‘ದೊಡ್ಡಮನೆ’ ಎಂದೇ ಕರೆಯುತ್ತಿದ್ದರು. ಹಾಗೆ ಕರೆಯಲು ಇನ್ನೂ ಒಂದು ಕಾರಣವಿದ್ದಿರಬಹುದು; ಅಲ್ಲಿ ವಾಸ ಮಾಡುತ್ತಿದ್ದವರು ಆ ಊರಿನ ಪಟೇಲರು ಮತ್ತು ಅವರ ದೊಡ್ಡ ಪರಿವಾರು. ನ್ಯಾಯ ಪಂಚಾಯಿತಿಕೆಯ ಕಟ್ಟೆ ಮೇಲೆ ಕುಳಿತುಕೊಳ್ಳುವ ದೊಡ್ಡ ಮನುಷ್ಯರು ಅವರು.

ನಾನು ಹುಟ್ಟಿದ್ದು ಅದೇ ಮನೆಯಲ್ಲಿ. ಆದರೆ ಬೆಳೆದದ್ದು ಪುಟ್ಟ ಗುಡಿಸಲೊಂದರಲ್ಲಿ. ಇಲ್ಲಿ ಈ ದೊಡ್ಡಮನೆಯಲ್ಲಿ ನನ್ನ ಅಪ್ಪ-ಅಮ್ಮ ಯಾವ ರೂಮಿನಲ್ಲಿ ವಾಸ ಮಾಡುತ್ತಿದ್ದರು ಎಂಬುದರ ಸ್ಪಷ್ಟ ನೆನಪು ನನಗಿದೆ. ಅಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಗೊತ್ತಿರದ ಗುಟ್ಟಿನ ಸಂಗತಿಯೊಂದು ಆ ಮನೆಯ ಬಗ್ಗೆ ನನಗೆ ಗೊತ್ತಿತ್ತು. ಆ ಮನೆಯ ಮೊಗಸಾಲೆಗೆ ಅಂಟಿಕೊಂಡಂತೆ ಅಲ್ಲೊಂದು ಗುಪ್ತ ಕೊಠಡಿಯಿತ್ತು. ಅದಕ್ಕೆ ಕಿಟಿಕಿಯಿರಲಿಲ್ಲ. ಬೆಳಕಿನ ಕಿರಣ ಎಂದೂ ಅಲ್ಲಿಗೆ ಪ್ರವೇಶಿಸಿರಲಿಲ್ಲ. ಆ ಕತ್ತಲ ಕೋಣೆಗೆ ಮೂರಡಿ ಎತ್ತರದ ಒಂದೂವರೆ ಅಗಲದ ಒಂದು ಪುಟ್ಟ ಬಾಗಿಲಿತ್ತು. ಆ ಕೋಣೆಯ ಸುತ್ತ ಮೂರೂ ಬದಿಗೆ ಬೇರೆ ಕೋಣೆಯಿದ್ದ ಕಾರಣ ಈ ಕೋಣೆಯನ್ನು ಯಾರೂ ಗಮನಿಸುತ್ತಿರಲಿಲ್ಲ. ಅಕಸ್ಮತ್ತಾಗಿ ಯಾರಾದರೂ ಅದನ್ನು ಗಮನಿಸಿದರೂ ಅದು ಯಾವುದೋ ಕೋಣೆಯೊಂದರ ಕಿಟಕಿಯಿರಬಹುದೆಂದು ಭಾವಿಸುವ ಹಾಗೆ ಅದನ್ನು ವಿನ್ಯಾಸ ಮಾಡಲಾಗಿತ್ತು. ಬ್ರಿಟೀಷರ ಕಾಲದಲ್ಲಿ ಅವರ ಕಣ್ಣಳತೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಕ್ಕಿ, ಭತ್ತ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಬಚ್ಚಿಡುವುದಕ್ಕಾಗಿ, ಕೆಲವೊಮ್ಮೆ ದೇಶಭಕ್ತರನ್ನು ಅಡಗಿಸಿಡುವುದಕ್ಕಾಗಿ ಆ ಕೋಣೆಯನ್ನು ಬಳಸಿಕೊಳ್ಳಲಾಗುತ್ತಿತ್ತೆಂಬುದು ನಾನು ದೊಡ್ಡವಳಾದ ಮೇಲೆ ಅವರಿವರಿಂದ ಕೇಳಿ ತಿಳಿದುಕೊಂಡ ಸಂಗತಿಯಾಗಿತ್ತು.

ನಾನು ಆ ಮನೆಗೆ ಹೋದಾಗಲೆಲ್ಲ ಆ ಮನೆಯ ಕತ್ತಲ ಕೋಣೆ ಮತ್ತು ಆ ಕೋಣೆಯಲ್ಲಿ ನಡೆದ ಘಟನೆಯೊಂದು ನನಗೆ ನೆನಪಿಗೆ ಬರುತ್ತದೆ. ಅದನ್ನು ನೆನೆಸುವಾಗಲೆಲ್ಲ ನನ್ನ ಮೈಮನ ನನಗರಿವಿಲ್ಲದೆ  ಕಂಪಿಸುತ್ತದೆ.

ಅಂದು ರಾತ್ರಿ ಸುಮಾರು ಹತ್ತು ಘಂಟೆಯಾಗಿರಬಹುದು. ನಾನಾಗ ಒಂದನೇ ತರಗತಿಯಲ್ಲಿ ಓದುತ್ತಿದ್ದಿರಬೇಕು. ನಾವು ಮಕ್ಕಳೆಲ್ಲಾ ದೊಡ್ಡದಾದ ಊಟದ ಹಾಲ್ ನಲ್ಲಿ ಎಂದಿನಂತೆ ಅಜ್ಜಿಯ ಬಾಯಿಯಿಂದ ಕಥೆ ಕೇಳುತ್ತಾ ಮಲಗಿ ನಿದ್ರಿಸಿದ್ದೆವು. ಮಧ್ಯೆ ನನಗೆ ಎಚ್ಚರವಾದರೆ ಅಪ್ಪ-ಅಮ್ಮ ಮಲಗುತ್ತಿದ್ದ ಕೋಣೆಯಲ್ಲಿ ಮಲಗುವುದು ನನ್ನ ಅಭ್ಯಾಸವಾಗಿತ್ತು. ಆದರೆ ಅಲ್ಲಿ ಅಪ್ಪನನ್ನು ನಾನು ಕಂಡಿದ್ದು ಅಪರೂಪ. ಅಲ್ಲಿರುವ ದೊಡ್ಡದಾದ ಚಿತ್ತಾರದ ಮಂಚದಲ್ಲಿ ಅಮ್ಮ ಒಬ್ಬಳೇ ಮಲಗಿರುತ್ತಿದ್ದರು. ನಾನು ಅಲ್ಲಿಗೆ ಹೋಗಿ ಮಲಗುವುದು ಆಕೆಗೂ ಇಷ್ಟವಿದ್ದಂತಿತ್ತು. ನಾನು ಅಲ್ಲಿಗೆ ಹೋದೋಡನೆಯೇ ಆಕೆ ನನ್ನನ್ನು ಬಾಚಿ ತಬ್ಬಿಕೊಳ್ಳುತ್ತಿದ್ದರು. ನಂತರ ಎದೆಗವಚಿಕೊಂಡು ಲಾಲಿ ಹೇಳಿ ಮಲಗಿಸುತ್ತಿದ್ದರು. ಒಮ್ಮೊಮ್ಮೆ ಕಣ್ಣಿರು ಹಾಕುತ್ತಾ ಏನೇನೋ ನನಗರ್ಥವಾಗದ ರೀತಿಯಲ್ಲಿ ಗೊಣಗಿಕೊಳ್ಳುತ್ತಿದ್ದರು.

ಅಂದು ಕೂಡಾ ನನಗೆ ಎಚ್ಚರವಾಗಿತ್ತು. ಅಮ್ಮನನ್ನು ಹುಡುಕಿಕೊಂಡು ನಾನು ರೂಮಿಗೆ ಹೋದರೆ ಅಲ್ಲಿ ಅಮ್ಮನಿರಲಿಲ್ಲ. ಎಲ್ಲಿ ಹೋದರೆಂದು ನಾನು ಹುಡುಕುತ್ತಾ ಬಂದಾಗ ಒಂದು ಕಿಟಕಿಯ ಬಳಿ ಚಿಮಿಣಿ ದೀಪದ ಬೆಳಕು ಕಂಡಿತು. ಜೊತೆಯಲ್ಲಿ ಕುಸು ಕುಸು..ಪಿಸುಪಿಸು…ಮಾತುಗಳು ಕೇಳಿ ಬಂದವು. ನಾನು ಆ ಕಿಟಕಿಯನ್ನು ಮೆಲ್ಲನೆ ದೂಡಿದೆ. ಅದು ತೆರೆದುಕೊಂಡಿತು. ಅಲ್ಲಿ ನನ್ನ ಅತ್ತೆಯಂದಿರು, ಚಿಕ್ಕಮ್ಮ-ದೊಡ್ಡಮ್ಮಂದಿರು ಎಲ್ಲರೂ ಸೇರಿಕೊಂಡು ಯಾರೋ ಒಬ್ಬರಿಗೆ ಬಯ್ಯುತ್ತಿದ್ದರು. ಕೋಣೆಯ ಒಂದು ಮೂಲೆಯಲ್ಲಿ ಯಾರೋ ಒಬ್ಬರು ಮೊಣಕಾಲುಗಳ ಮೇಲೆ ತಲೆಯಿಟ್ಟು ಬಗ್ಗಿ ಕುಳಿದ್ದರು. ‘ಇದರಲ್ಲಿ ನನ್ನದೇನೂ ತಪ್ಪಿಲ್ಲ..ಅವರೇ..’ ಎಂದು ಅಳುತ್ತಲೇ ತಲೆಯೆತ್ತಿ ಅಲ್ಲಿದ್ದ ಎಲ್ಲರ ಹತ್ತಿರ ಮುಖ್ಯವಾಗಿ ನನ್ನಮ್ಮನ ಹತ್ತಿರ ನೋಟ ಬೀರಿದಾಗಲೇ ನನಗೆ ಗೊತ್ತಾಗಿದ್ದು, ಅವರು ನನ್ನ ಪ್ರೀತಿಯ ವನಜ ಚಿಕ್ಕಮ್ಮನೆಂದು. ತುಂಬಾ ಒಳ್ಳೆಯವರು ಅವರು. ಅಂಥವರ ಮೇಲೆ ಇವರೆಲ್ಲಾ ಯಾಕೆ ರೇಗಾಡುತ್ತಿದ್ದಾರೆ. ಅವರಿಂದ ಏನು ತಪ್ಪಾಗಿದೆ. ನನಗೆ ಅರ್ಥವಾಗಲಿಲ್ಲ.

‘ನೋಡುವುದೇನು..ಅವಳ ಕೈಕಾಲುಗಳನ್ನು ಹಿಡಿದುಕೊಳ್ಳಿ’ ಎಂದು ಶಕುಂತಲಾ ಅತ್ತೆ ಹೇಳಿದಾಗ, ಅಲ್ಲಿದ್ದ ಕೆಲವು ಜನ ವನಜ ಚಿಕ್ಕಮ್ಮನನ್ನು ನೆಲಕ್ಕೆ ದಬ್ಬಿದರು. ‘ಇವತ್ತೂ ಅಲ್ಲಿಗೆ ಹೋಗುತ್ತಿಯೇನೇ ಮುಂಡೆ’ ಎಂದು ಒಬ್ಬಾಕೆ ಅವಳ ಜುಟ್ಟು ಹಿಡಿದು ಕೇಳಿದಳು. ಅವಳು  ‘ಹೌದು…’ ಎಂದು, ಬಿಕ್ಕಳಿಸುತ್ತಲೇ  ‘ಹೋಗದೆ ಇದ್ದರೆ ನನ್ನನ್ನು ಈ ಮನೆಯಿಂದ  ಹೊರಗೆ ಹಾಕುತ್ತಾರಂತೆ..ನಾನು ಎಲ್ಲಿಗೆ ಹೋಗಲಿ?’ ಎಂದು ಅಸಹಾಯಕಳಾಗಿ ಎಲ್ಲರ ಮುಖ ನೋಡಿದಳು. ‘ಎಷ್ಟು ಹೊತ್ತಿಗೆ?’ ಶಕುಂತಲಾ ಅತ್ತೆ ಅಬ್ಬರಿಸಿದರು. ಆಕೆ ನಡುಗುತ್ತಾ ‘ಈಗಲೇ ಹೋಗಬೇಕಂತೆ..ಸೂಚನೆ ನೀಡಿ ಹೋಗಿದ್ದಾರೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ’ ಎನ್ನುತ್ತಾ ತೆವಳುತ್ತಲೇ ಬಂದು ಅಮ್ಮನ ಕಾಲ ಮೇಲೆ ತಲೆಯಿಟ್ಟಳು. ಅಮ್ಮ ಸೆರಗನ್ನು ಬಾಯಿಗೆ ಅಡ್ಡ ಇಟ್ಟುಕೊಂಡು ಜೋರಾಗಿ ಅಳುತ್ತಾ ಕಂಬದಂತೆ ನಿಂತುಬಿಟ್ಟರು. ಅಲ್ಲಿದ್ದ ಎಲ್ಲರೂ ರಣೋತ್ಸಾಹದಲ್ಲಿದ್ದರು.ಅವಳ ದೀನ ನುಡಿ ಅವರ ಕಿವಿಗೇ ಬಿದ್ದಂತಿರಲಿಲ್ಲ. ಅವರಲ್ಲಿ ಒಬ್ಬಾಕೆ ಅವಳ ಸೀರೆಯನ್ನು ಸೊಂಟದ ತನಕ ಎತ್ತಿದಳು. ‘ಹೋಗಲಿ ಬಿಟ್ಟು ಬಿಡಿ..ಅದೊಂದು ಹೆಣ್ಣು ಜೀವ ತಾನೆ? ಎಲ್ಲಾ ನನ್ನ ಹಣೆಬರಹ’ ಎನ್ನುತ್ತಾ ಅಮ್ಮ ಕೋಣೆಯಿಂದ ಹೊರಹೋಗಿಬಿಟ್ಟರು.

‘ಅದನ್ನು ತಾ’ ಎಂದು ಶಕುಂತಲಾ ಅತ್ತೆ ಹೇಳಿದಾಗ ಪಾರ್ವತಿ ಚಿಕ್ಕಮ್ಮ ಒಂದು ತಾಮ್ರದ ಗಿಂಡಿಯನ್ನು ಆಕೆಯ ಮುಂದೆ ಒಡ್ಡಿದರು. ಆಕೆ ಅದರಲ್ಲಿ ಕೈ ಅದ್ದಿ ಮುಷ್ಟಿಯಲ್ಲಿ ಏನನ್ನೋ ತೆಗೆದುಕೊಂಡು ಅವಳ ತೊಡೆಗಳ ಮಧ್ಯೆ ಸವರಿಬಿಟ್ಟರು. ವನಜ ಚಿಕ್ಕಮ್ಮನ ಬಾಯಿಯಿಂದ ಹೊರಟ ಚಿತ್ಕಾರ ಶಕುಂತಲಾ ಅತ್ತೆಯ ಎಡಗೈಯ ಅಡ್ಡದಲ್ಲಿ ಕೇವಲ ನರಳಿಕೆಯಾಗಿ ಹೊಮ್ಮಿತು. ‘ತಕ್ಷಣ… ಈ ಕೂಡಲೇ ಆ ಕೋಣೆಗೆ ತೆರಳು. ಅವರಿಗೆ ಒಂಚೂರು ಅನುಮಾನ ಬರಬಾರದು. ನಿನ್ನ ಕಣ್ಣಿಂದ ನೀರು ಬಂದರೆ…ಬಾಯಿಯಿಂದ ಅಳುವಿನ ಧ್ವನಿ ಹೊರಟರೆ…ನಾವೆಲ್ಲಾ ಸೇರಿ ಈ ಮನೆಯಿಂದಲೇ ನಿನ್ನನ್ನು ಅಟ್ಟಿಬಿಡುತ್ತೇವೆ’ ಎಂದು ಆಕೆಯನ್ನು ದಬ್ಬಿಕೊಂಡೇ ದೇವರ ಕೋಣೆಯ ಪಕ್ಕದ ಕೋಣೆಯ ಮುಂದೆ ತಂದು ನಿಲ್ಲಿಸಿದರು. ವನಜ ಚಿಕ್ಕಮ್ಮ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳುತ್ತಾ, ಕೆಳತುಟಿಯನ್ನು ಮೇಲಿನ ಹಲ್ಲುಗಳಿಂದ ಕಚ್ಚಿ ಹಿಡಿದು, ತನ್ನೆಲ್ಲಾ ಧೀಶಕ್ತಿಯನ್ನ ಎಡಗೈಗೆ ವರ್ಗಾಯಿಸಿದಂತೆ ಅದನ್ನು ಸೊಂಟದ ಮೇಲೆ ಒತ್ತಿ ಹಿಡಿದು ಬಸವಳಿದ ಬಲಗೈಯಿಂದ ಮುಚ್ಚಿದ ಬಾಗಿಲನ್ನು ತಟ್ಟಿದಳು. ಬಾಗಿಲು ತೆರೆದುಕೊಂಡಿತು.

ಇತ್ತ ಶಕುಂತಲಾ ಅತ್ತೆ ‘ಎಲ್ಲರೂ ನಿಮ್ಮ ನಿಮ್ಮ ಕೋಣೆಗಳಿಗೆ ಹೋಗ್ರೇ..ಅಲ್ಲಿ ನಿಮ್ಮ ಗಂಡಂದಿರು ಕಾಯ್ತಿರಬಹುದು.ಇಲ್ಲೇನಾದ್ರೂ ಆದ್ರೆ ನಾನು ನೋಡಿಕೊಳ್ತೇನೆ’ ಎಂದು ಅವರನ್ನೆಲ್ಲಾ ಸಾಗಹಾಕಿದಳು. ಆಗ ಅವಳ ನೋಟ ಗೋದಿ ಕಂಬಕ್ಕೆ ಒರಗಿ ಕೂತ ನನ್ನೆಡೆಗೆ ಹರಿಯಿತು. ‘ಇಲ್ಲೇನು ಮಾಡ್ತಿದ್ದೀಯಾ ನನ್ನ ಕಂದಾ’ ಎನ್ನುತ್ತಾ ಓಡಿ ಬಂದು ನನ್ನ ಮುಂದೆ ಮೊಣಕಾಲೂರಿ ನನ್ನ ಗಲ್ಲ ಹಿಡಿದೆತ್ತಿ ‘ನಿದ್ದೆ ಬರಲಿಲ್ವಾ?’ ಎನ್ನುತ್ತಾ ಎದೆಗೊತ್ತಿಕೊಂಡಳು. ನನಗೆ ಸ್ವಲ್ಪ ಹಿಂದೆ ಕಂಡ ಅವಳ ರುದ್ರ ರೂಪ ನೋಡಿ ಭಯವಾಗಿತ್ತು. ಅವಳಿಂದ ಬಿಡಿಸಿಕೊಳ್ಳಲು ಕೊಸರಾಡಿದೆ. ಅವಳು ನನ್ನನ್ನು ತಬ್ಬಿಕೊಂಡೇ ಅಮ್ಮನ ರೂಮಿಗೆ ಕರೆತಂದಳು. ‘ಈ ಕೂಸು ನೋಡು ಅಲ್ಲಿ ಗೋದಿಕಂಬಕ್ಕೆ ಒರಗಿ ಕೂತ್ಕೊಂಡಿತ್ತು. ನಿದ್ದೆ ಮಂಪರಲ್ಲಿದೆ’ ಎಂದು ಹಾಸಿಗೆ ಮೇಲೆ ಮಲಗಿಸಿ ಚಾದರ ಹೊದೆಸುತ್ತಿರುವಾಗಲೇ ದಡಕ್ಕನೆ ಬಾಗಿಲು ತೆರೆದ ಸದ್ದಾಯಿತು. ಜೊತೆಗೆ ಏದುಸಿರು ಬಿಡುತ್ತಾ ಹೆಬ್ಬಾಗಿಲು ತೆರೆದು ಅಂಗಳದಲ್ಲಿ ನರಳುತ್ತಾ ಓಡಿದ ಸದ್ದು. ಅಮ್ಮ ಮತ್ತು ಶಕುಂತಲ ಅತ್ತೆ ಒಬ್ಬರ ಮುಖ ಒಬ್ಬರು ನೋಡುತ್ತಾ ಕೋಣೆಯಿಂದ ಹೊರ ನಡೆದರು. ಅವರು ನೋಡುತ್ತಿರುವಂತೆಯೇ ಆ ವ್ಯಕ್ತಿ ಎದುರಿನ ತೋಟದಲ್ಲಿರುವ ಕೆರೆಗೆ ಇಳಿದು ದಬಕ್ಕನೆ ಅಲ್ಲಿಯೇ ಕುಳಿತುಕೊಂಡಿತು.

‘ಕೋಣ ಪಳ್ಳ ಬಿದ್ದಿದೆ. ಮೈ ನೊಚ್ಚಗಾದ ಮೇಲೆ ಎದ್ದು ಬರುತ್ತೆ. ನೀವು ಹೋಗಿ ಮಲಗಿಕೊಳ್ಳಿ ಅಕ್ಕಾ’ ಎಂದು ವ್ಯಂಗ್ಯದ ನಗುವೊಂದನ್ನು ನಕ್ಕು ಶಕುಂತಲಾ ಅತ್ತೆ ತನ್ನ ಕೋಣೆಗೆ ಹೊರಟರು. ‘ಅಲ್ಲೇ..ಆ ವನಜ.. ಪಾಪದು..ಅವಳು ಏನಾದಳೋ..’ ಎಂದು ಅಮ್ಮ ಹೇಳಿದರೆ, ‘ಎಲ್ಲಾದರೂ ಬಿದ್ದುಕೊಂಡಿರ್ತಾಳೆ ಬಿಡಿ’ ಎಂದು ಉಢಾಪೆಯ ಉತ್ತರ ಕೊಟ್ಟು ಅವರು ಕಣ್ಮರೆಯಾದರು.

ಅಮ್ಮ ಆ ಕೋಣೆಯಲ್ಲೊಮ್ಮೆ ಇಣುಕಿ ನೋಡಿ ಅಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ರೂಮಿಗೆ ಬಂದು ಮಲಗಿಕೊಂಡರು. ಆದರೆ ಅವರಿಗೆ ನಿದ್ದೆ ಬರಲಿಲ್ಲವೆಂಬುದು ಅವರ ಹೊರಳಾಟದಿಂದ ಗೊತ್ತಾಗುತ್ತಿತ್ತು. ಅವರು ಇದ್ದಕ್ಕಿದ್ದಂತೆ ಒಮ್ಮೆಲೇ ಎದ್ದು ಕುಳಿತವರೇ ‘ಕೋಣ ಪಳ್ಳ ಬಿದ್ದಿದೆ’ ಎಂಬುದನ್ನು ಗಟ್ಟಿಯಾಗಿ ಹೇಳಿಕೊಂಡವರೇ ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ದನದ ಕೊಟ್ಟಿಗೆಗೆ ಹೋದರು. ಅಲ್ಲಿ ದನಗಳಿಗೆ ಕಲಗಚ್ಚು ಕೊಡುವ ದೊಡ್ಡ ಬಾನೆಯೆಡೆಗೆ ಟಾರ್ಚ್ ಬಿಟ್ಟಾಗ ಕಂಡ ದೃಶ್ಯವನ್ನು ನೋಡಿ ಅವರ ಕರುಳು ಬೆಂದು ಹೋದಂತಾಯ್ತು. ಅಲ್ಲಿ ನೀರು ತುಂಬಿದ ಬಾನೆಯಲ್ಲಿ ಬೆತ್ತಲೆಯಾಗಿ ವನಜ ಕುಳಿತಿದ್ದಾಳೆ. ಅವಳ ಕಣ್ಣುಗಳು ಅತ್ತು ಅತ್ತು ಕೆಂಡದುಂಡೆಗಳಾಗಿವೆ. ಅಮ್ಮನನ್ನು ಕಂಡ ಒಡನೆ ಅವಳ ಬಿಕ್ಕಳಿಕೆ ಮರುಕಳಿಸಿ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ರೋದಿಸಲಾರಂಭಿಸಿದಳು.

ಅಮ್ಮ ಆಕೆಯ ಬಳಿ ಸಾರಿದವಳೇ ಅವಳ ನೆತ್ತಿಯ ಮೇಲೆ ಕೈಯಾಡಿಸುತ್ತಾ, ‘ಹೆದರಬೇಡ ನಾನಿದ್ದೇನೆ. ಸ್ವಲ್ಪ ಹೊತ್ತು ಇಲ್ಲಿಯೇ ಕೂತಿರು. ನಾನು ಈಗ ಬರುತ್ತೇನೆ’ ಎಂದವಳೇ ಸೀದಾ ಅಡುಗೆ ಮನೆಯತ್ತ ಧಾವಿದಳು. ಅಲ್ಲಿ ನೆಲುವಿನಲ್ಲಿ ತೂಗಾಡುತ್ತಿದ್ದ ದೊಡ್ಡ ಬೆಣ್ಣೆಯ ಚೆಟ್ಟಿಯನ್ನು ಕೆಳಗಿಳಿಸಿ ರಟ್ಟೆ ಗಾತ್ರದ ಬೆಣ್ಣೆಯನ್ನು ಗಿಂಡಿಯೊಂದಕ್ಕೆ ಹಾಕಿಕೊಂಡು ಇನ್ನೊಂದು ಕೈಯ್ಯಲ್ಲಿ ಕತ್ತಿಯನ್ನು ಹಿಡಿದು  ಹಿತ್ತಿಲಿಗೆ ಬಂದವಳೇ ಅರಶಿಣದ ಗಿಡವನ್ನು ಎಳ್ಳಿ ದಪ್ಪನೆಯ ಹತ್ತಾರು ಕೊಂಬುಗಳನ್ನು ಹಾಗೂ ಮುರ್ನಾಲ್ಕು ಬಗೆಯ ಸೊಪ್ಪುಗಳನ್ನು  ತೆಗೆದುಕೊಂಡು  ಬಚ್ಚಲು ಮನೆಗೆ ಬಂದು ಅವೆಲ್ಲವನ್ನೂ ಅಲ್ಲೇ ಇರುವ ಒರಳು ಕಲ್ಲಿನಲ್ಲಿ ಹಾಕಿ ಜಜ್ಜತೊಡಗಿದಳು. ಅವು ಪುಡಿ ಪುಡಿಯಾಗುತ್ತಿದ್ದಂತೆಯೇ ಅದಕ್ಕೆ ಬೆಣ್ಣೆಯನ್ನು ಸೇರಿಸಿ ನಯವಾಗಿ ಅರೆಯತೊಡಗಿದಳು. ಅದು ಬೆಣ್ಣೆಯಷ್ಟು ಮೃದುವಾದ ಮೇಲೆ ಅದಕ್ಕೆ ಇನ್ನಷ್ಟು ಬೆಣ್ಣೆಯನ್ನು ಸೇರಿಸಿ, ಅದೆಲ್ಲವನ್ನೂ ಗಿಂಡಿಯಲ್ಲಿ ಹಾಕಿ ವನಜಳ ಮುಂದೆ ನಿಂತರು.

ವನಜ ಕಣ್ಣುಚ್ಚಿ ನೀರಿನಲ್ಲಿ ಹಾಗೆಯೇ ಕುಳಿತಿದ್ದಳು. ಅಮ್ಮ ಅವಳನ್ನು ಮೈಮುಟ್ಟಿ ಎಬ್ಬಿಸಿದರು. ಜೊತೆಯಲ್ಲಿ ತಂದಿದ್ದ ಸೀರೆಯನ್ನು ಅವಳ ಮೈಗೆ ಹೊದೆಸಿದರು. ನಂತರ ಆಕೆಯನ್ನು ಮೆಲ್ಲನೆ ನಡೆಸುತ್ತಾ ದೇವರ ಕೋಣೆಯೆಡೆಗೆ ಕರೆತಂದರು. ಅವಳನ್ನು ಸುತ್ತಿದ್ದ ಸೀರೆಯನ್ನು ಕೆಳಗೆ ಸರಿಸಿದರು. ಅಷ್ಟು ಹೊತ್ತು ನೀರಲ್ಲಿ ಕುಳಿತ ಕಾರಣದಿಂದಲೋ ಅಥವಾ ಜೀವಕ್ಕಂಟಿದ ಭಯದ ನೆರಳಿನಿಂದಲೋ ನಂದಾದೀಪದ ಬೆಳಕಿನಲ್ಲಿ ವನಜಳ ಮೈ, ಬೂದಿ ಬಳಿದುಕೊಂಡಂತೆ ಬೆಳ್ಳಗಾಗಿತ್ತು. ಅಮ್ಮ ಗಿಂಡಿಯನ್ನು ದೇವರ ಮುಂದಿಟ್ಟು, ಅಲ್ಲಿ ಹಿತ್ತಾಳೆ ಚೊಂಬಿನಲ್ಲಿದ್ದ ನೀರನ್ನು ವನಜತ್ತೆಯ ಕೈಯ್ಯಲಿಟ್ಟರು. ಆಕೆ ಅದೆಲ್ಲವನ್ನೂ ಒಂದೇ ಉಸಿರಿನಲ್ಲಿ ಶತಮಾನಗಳ ನೀರಡಿಕೆಯಿದೆಯೇನೋ ಎಂಬ ರೀತಿಯಲ್ಲಿ ಗಟಗಟನೆ ಕುಡಿದಳು.

ತಮ್ಮ ಕೈನಲ್ಲಿದ್ದ ಗಿಂಡಿಯನ್ನು ಅವಳೆಡೆಗೆ ಚಾಚಿ, ‘ಇದರಲ್ಲಿ ಎಂತಹ ಕಿಚ್ಚನ್ನಾದರೂ ತಣಿಸಬಲ್ಲ ಔಷಧವಿದೆ. ಎಲ್ಲೆಲ್ಲಿ ನಿನಗೆ ಉರಿಯೆನಿಸುತ್ತದೆಯೋ ಅಲ್ಲಿಗೆಲ್ಲಾ ಇದನ್ನು ಲೇಪಿಸಿಕೋ. ನಿನಗರಿವಿಲ್ಲದಂತೆ ನಿದ್ದೆ ನಿನ್ನನ್ನು ಆವರಿಸಿಬಿಡುತ್ತೆ. ಇಂದು ಈ ಕೋಣೆಯಲ್ಲಿಯೇ, ಅಮ್ಮನ ಮಡಿಲಲ್ಲಿ ಮಲಗಿದಂತೆ ಮಲಗಿಬಿಡು. ಹಸಿವಾದರೆ ದೇವರ ಮುಂದಿರುವ ಹಾಲು ಕುಡಿ, ಹಣ್ಣು ತಿನ್ನು. ನಾಳೆ ಬೆಳಿಗ್ಗೆ ನಿನ್ನನ್ನು ನಾನೇ ಬಂದು ಎಚ್ಚರಿಸುತ್ತೇನೆ’ ಎಂದು ಆಕೆಯ ನೆತ್ತಿ ಸವರಿ, ಹಣೆಯ ಮೇಲೊಂದು ಮುತ್ತನ್ನಿಟ್ಟು ಬಾಗಿಲನ್ನು ಎಳೆದುಕೊಂಡು, ಅಲ್ಲೇ ಬಾಗಿಲಿನ ಎಡಮೂಲೆಯಲ್ಲಿರುವ ಮೊಳೆಗೆ ನೇತು ಹಾಕಿರುವ ಕೀಲಿ ಕೈಯನ್ನು ತೆಗೆದುಕೊಂಡು ಬೀಗ ಜಡಿದು, ಕೀಯನ್ನು ತನ್ನ ಮಂಗಳ ಸೂತ್ರಕ್ಕೆ ಸಿಕ್ಕಿಸಿಕೊಂಡು, ಪಡಸಾಲೆಯನ್ನು ದಾಟಿ, ತೋಟದಂಚಿನಲ್ಲಿರುವ ಕೆರೆಯತ್ತ ಒಮ್ಮೆ ದಿಟ್ಟಿಸಿ ನೋಡಿ, ಯಾವುದೋ ಆಕೃತಿಯೊಂದು ನೀರಿನಲ್ಲಿ ಕುಳಿತಿರುವುದು ಕಂಡಂತಾಗಿ ನಿಟ್ಟುಸಿರು ಬಿಡುತ್ತಾ, ಹೆಬ್ಬಾಗಿಲನ್ನು ಅಡ್ಡಮಾಡಿ, ಸೆರಗಿನಿಂದ ಕಣ್ಣಿರನ್ನು ಒರೆಸಿಕೊಳ್ಳುತ್ತಾ, ಆ ನಡುರಾತ್ರಿಯಲ್ಲಿ ಅತೃಪ್ತ ಆತ್ಮದಂತೆ ಕಾಲೆಳೆಯುತ್ತಾ ತನ್ನ ಕೋಣೆಯತ್ತ ಸಾಗಿದಳು.

ಪ್ರೇಮದ ಅಂತರಗಂಗೆಗೆ ಬೊಗಸೆ

ಅನುಗುಣ | ಕಾವ್ಯಾ ಪಿ ಕಡಮೆ

ಮ್ಮೆ ಒಬ್ಬ ತನ್ನ ಪ್ರಿಯತಮೆಯ ಮನೆಯ ಬಾಗಿಲು ತಟ್ಟಿದ.
“ಯಾರದು?” ಒಳಗಿನಿಂದ ದನಿ ಕೇಳಿತು.
“ನಾನು” ಎಂದ.
“ಈ ಮನೆಯಲ್ಲಿ ಇಬ್ಬರಿಗೆ ಸ್ಥಳವಿಲ್ಲ” ಅಂದಿತು ದನಿ.
ಬಾಗಿಲು ತೆರೆಯಲೇ ಇಲ್ಲ.
ಏಕಾಂತ, ಉಪವಾಸದಿಂದ ಅಲೆದ.
ಎಷ್ಟೋ ದಿವಸಗಳ ನಂತರ ಅವಳ ಭೇಟಿಗಾಗಿ ವಾಪಸು ಬಂದ.
ಮನೆಯ ಬಾಗಿಲು ತಟ್ಟಿದ.
“ಯಾರದು?” ಅದೇ ದನಿ ಮತ್ತೆ ಕೇಳಿತು.
“ನೀನೇ” ಎಂದ.
ಬಾಗಿಲ ತೆರೆಯಿತು ಆತನಿಗಾಗಿ.

ರೂಮಿಯ ಪದ್ಯ ಇದು. ಒಲವಿನ ಉತ್ಕಟತೆಯನ್ನು ಅಷ್ಟೇ ತೀಕ್ಷ್ಣವಾಗಿ ಸೆರೆಹಿಡಿಯುವ ಈ ಪುಟ್ಟ ಪದ್ಯ ಪ್ರೇಮದ ಅರ್ಥವಂತಿಕೆಯನ್ನು ದಿಟವಾಗಿ ಹೆಚ್ಚಿಸುತ್ತದೆ.

ಕವಿ ತುರವೀಹಾಳ ಚಂದ್ರು ಪ್ರಕಾರ ಭಕ್ತಿಯಂತೆ ಪ್ರೇಮ ಕೂಡ ಅಂತಃಕರಣದ, ಅಂತರಂಗದ ವಿಷಯ. ಅಲ್ಲಿ ನಾನು, ನೀನು, ಅವನು, ಅವಳು ಎನ್ನುವ ಗೋಡೆಗಳೇ ಇಲ್ಲ. ಈ ಒಲವು ಅನ್ನುವುದು ಗಂಡು-ಹೆಣ್ಣಿನ ವಿಷಯಕ್ಕಷ್ಟೇ ಸೀಮಿತವಾಗಿರದೇ ಬದುಕಿನ ಎಲ್ಲ ಹಂತಗಳನ್ನೂ ಮೀರಿ, ಹಾಯ್ದು ಕಡೆಗೆ ಮನುಷ್ಯ ಹಾಗೂ ದೇವರ ಸಂಬಂಧದಲ್ಲಿಯೂ ವಿಸ್ತಾರಗೊಳ್ಳುತ್ತದೆ. ಒಲವಿನಲ್ಲಿ ನಾನು, ನೀನೆಂಬ ಮಾತಿಲ್ಲ. “ನಾನೆಂಬ ನೀನು” ಇಲ್ಲಿ ಅಂತಿಮ ಸತ್ಯ.

ಪ್ರಪಂಚದ ಯಾವ ಹೂವೂ ಹೊಸ ವರ್ಷಕ್ಕೇನೇ ಅರಳುವಾ ಅಂತ ಸುಮ್ಮನೇ ಕೂಡುವುದಿಲ್ಲ. ಒಲುಮೆ ಸಹ ಹಾಗೆಯೇ. ವರ್ಷದ ಯಾವುದೋ ಒಂದು ದಿನ ಮಾತ್ರ ಪ್ರಕಟಗೊಳ್ಳುವಾ ಅಂತ ಕಾಯಲು ಅದೇನು ಗಣೇಶ ಚತುರ್ಥಿಯೂ ಅಲ್ಲ, ಶ್ರಾವಣ ಸೋಮವಾರವೂ ಅಲ್ಲ. ಒಲವಿಗೆ ಕಾಲ, ವಯಸ್ಸು, ಜಾತಿ, ರಾಗ, ದ್ವೇಷಗಳ ಹಂಗಿಲ್ಲ. ಒಲವಿಗೆ ಒಂದೇ ರೂಪ ಅಂತಿಲ್ಲ. ಒಲವಿಗೆ ಆಕಾರವೂ ಇಲ್ಲ. ನಮ್ಮ ಮನದ ಆಳ, ಸಾಂದ್ರತೆ ಎಷ್ಟಿದೆಯೋ ಒಲವಿಗೆ ಅಷ್ಟು ಜಾಗ. ಹೀಗಾಗಿ ಅದು ಪ್ರಪಂಚದ ಎಲ್ಲ ಬೇಲಿಗಳನ್ನೂ ಮೀರಿ ತನ್ನ ಛಾಪು ಅಚ್ಚೊತ್ತುತ್ತದೆ.

ನಿಜ ಹೇಳಬೇಕೆಂದರೆ ಪ್ರೇಮಿಗಳ ದಿನಾಚರಣೆಯ ಕುರಿತು ಮಾತನಾಡುವುದಕ್ಕೇ ಈ ಹೊತ್ತಿನಲ್ಲಿ ಮುಜುಗರವಾಗುತ್ತದೆ. ತೆರೆದ ಕೂಡಲೆ “ವಿಲ್ ಯೂ ಬೀ ಮೈ ವ್ಯಾಲಂಟೈನ್?” ಎಂದು ಮಧುರವಾಗಿ ಉಲಿಯಲು ಶುರುಮಾಡುವ ದುಬಾರಿ ಗ್ರೀಟಿಂಗ್‌ಗಳಿಂದ ಹಿಡಿದು ತಮಗೆ ಅಂಟಿಸಿರುವ ಬೆಲೆಗಳಿಂದಲೇ ಸ್ವಂಥದ್ದೊಂದು ವ್ಯಕ್ತಿತ್ವ ಪಡೆದುಕೊಂಡಂತೆ ಬೀಗುವ ಶೋರೂಮಿನ ಟೆಡ್ಡಿಬೇರ್‌ಗಳವರೆಗೆ ಎಲ್ಲವೂ ಕ್ಲೀಷೆಯಾಗಿ ಎಲ್ಲದರ ಬಗ್ಗೆಯೂ ಒಂದು ಅಘೋಷಿತ ಗುಮಾನಿ ಕವಿಯುತ್ತದೆ. ನಿಜವಾದ ಪ್ರೇಮ ಎಂದರೆ, ಎಂಥದದು? ಅದು ಇಲ್ಲಿಯವರೆಗೆ ಯಾರ ಭಾಷೆಗೂ ಸಿಗದ, ಯಾರ ಡೆಫಿನಿಷನ್‌ಗೂ ಸಿಗದ ಉತ್ಕಟ ಭಾವಾನುಭೂತಿ ಎನ್ನೋಣವೇ?

ಕವಯಿತ್ರಿ ಕೆ. ಅಕ್ಷತಾ ಹೇಳುವ ಹಾಗೆ “ಪ್ರೇಮ ಅಂತರಂಗಕ್ಕೆ ಸಂಬಂಧಪಟ್ಟ ವಿಷಯ. ಈ ವಿಚಾರವಾಗಿ ಹೆಣ್ಣು ಯಾವತ್ತೂ ಬದಲಾಗಿಲ್ಲ. ಯಾವುದೇ ಕಟ್ಟುಪಾಡುಗಳಿದ್ದರೂ, ಯಾರದೇ ಒತ್ತಾಯಗಳಿದ್ದರೂ ಹೆಣ್ಣು ತನ್ನ ಆಯ್ಕೆಯನ್ನು ಪ್ರಕಟಿಸಿಯೇ ತೀರುತ್ತಾಳೆ. ಈ ಮಾತು ಗಂಡಿಗೂ ಅನ್ವಯವಾಗಬಹುದು. ಜಾಗತೀಕರಣದ ಪರಿಣಾಮವಾಗಿ ಪ್ರೇಮನಿವೇದನೆಯ ‘ಫಾರ್ಮ್ಸ್’ ಬದಲಾಗಿರಬಹುದು. ಮುಂಚೆ ಪತ್ರಗಳು ಹೇಳಿದ್ದನ್ನು ಈಗ ಎಸ್‌ಎಮ್‌ಎಸ್‌ಗಳು ಹೇಳುತ್ತಿವೆ. ಆದರೆ ಪ್ರೇಮದ “ಆತ್ಮ”ವೆಂಬುದು ಇವತ್ತಿಗೂ ತನ್ನ ಮೂಲ ರೂಪದಲ್ಲಿಯೇ ಇದೆ.”

ಕವಿ ಕೆ ಎಸ್ ನರಸಿಂಹಸ್ವಾಮಿ ತಮ್ಮ “ನಿನ್ನೊಲುಮೆಯಿಂದಲೇ” ಕವಿತೆಯಲ್ಲಿ ವಿವರಿಸುವ “ಒಲುಮೆ” ನಿತ್ಯನೂತನವಾದುದು. ಪ್ರೇಯಸಿಯ ಒಲುಮೆಗೆ ಬಾಳ ಬೆಳಕಾಗುವ, ದಾರಿಯ ನೆರಳಾಗುವ ಶಕ್ತಿ ಇರುವುದರಿಂದಲೇ ಅಲ್ಲವೇನು ಜಗದ ಅಸಂಖ್ಯಾತ ಮನಗಳಲ್ಲಿ ಪ್ರೇಮದ ಪಲ್ಲವಿ ಅನುಕ್ಷಣ ಅನುರಣಿಸುವುದು? ಒಲವಿನ ಶಕ್ತಿಯೇ ಅಂಥದು. ಪ್ರೇಯಸಿಗಾಗಿ ದಿನವಿಡೀ ಕಾಯ್ದ ಹುಡುಗನ ಕಣ್ಣ ನೀಲಿಯಲ್ಲಿ ಒಲವಿನ ಒರತೆ ಅಚ್ಚಾಗಿದೆ. ಒಲವು ಸದಾ ಎದೆಯಿಂದ ಎದೆಗೆ ಹರಿಯುವ ನದಿ, ಕೆಲವೊಮ್ಮೆಯಂತೂ ನಿಂತಲ್ಲೇ ಹೊಸ ಭರವಸೆಗಳನ್ನು ಸೃಷ್ಟಿಸುವ ಒರತೆ. ನಿನ್ನೆ ಮೊನ್ನೆಯಷ್ಟೇ ತೊದಲು ನುಡಿದ, ಶಾಲೆಯಲ್ಲಿ ಮಗ್ಗಿ ಕೇಳುತ್ತಾರೆ ಎಂದೇ ಶಾಲೆಗೆ ಹೋಗುವುದಿಲ್ಲ ಅಂತ ಹಟ ಮಾಡಿದ ಮಗಳು ಹರೆಯದ ಆಕರ್ಷಣೆಯನ್ನೇ ಎಲ್ಲಿ ಒಲವೆಂದು ಮಾರುಹೋಗುತ್ತಾಳೋ ಎಂದು ಅಪ್ಪ ಅಮ್ಮರ ಮನದಲ್ಲಿ ನಡುಕ. ತಲೆಗೇ ಹೋಗದ ಒಂದು ವಿಷಯದಲ್ಲಿ ಗೆಳೆಯನೊಬ್ಬನ ನೋಟದಲ್ಲಿರುವ ಒಲವಿನ ಭರವಸೆಯೇ ಬದುಕಿಗೆ ಹೊಸ ಶಕ್ತಿಯನ್ನು ದಯಪಾಲಿಸುತ್ತದೆ. ಯಾರ ಹತ್ತಿರವೂ ಹೇಳಿಕೊಳ್ಳಲಾಗದ ಅಂತರಂಗದ ವಿಷಯವನ್ನು ಒಬ್ಬ ಜೀವದ ಗೆಳತಿಯ ಹತ್ತಿರ ಹೇಳಿಕೊಳ್ಳಬಹುದು ಅಂತಾದರೆ, ಹುಡುಗನೊಬ್ಬ ತನ್ನ ಪ್ರೇಯಸಿಯ ಕಣ್ಣುಗಳನ್ನೇ ದಿಟ್ಟಿಸಿ ನೋಡಿ ಮೌನದಲ್ಲೇ ಎಲ್ಲವನ್ನೂ ಅರಿಯುತ್ತಾನೆ ಅಂತಾದರೆ- ಅದು ಒಲವಲ್ಲದೇ ಮತ್ತೇನು?

ನಿಜ, ಒಲವು ವಿಸ್ಮಯವೇ. ಆದರೆ ಕೆಲವೊಮ್ಮೆ ಮಾತ್ರ ನಿತ್ಯದ ಬದುಕಿಗೆ ದೀಪಧಾರಿಣಿಯಾಗಬೇಕಿದ್ದ ಒಲವು ಸದ್ದಿಲ್ಲದೇ ಭೂಗತವಾಗಿಬಿಡುತ್ತದೆ. ಆಗ ಮಾತ್ರ ಬದುಕು ಅಕ್ಷರಶಃ ಮರುಭೂಮಿ ಎಂದೇ ಅನ್ನಿಸುತ್ತದೆ. ಸಾರ್ವಕಾಲಿಕವಾದ ಒಲವು ಒಂದಿಷ್ಟು ಸಮಯದವರೆಗೆ ಹೀಗೆ ಮೌನವಾಗಿ ಹಟದಿಂದ ಕೈಕಟ್ಟಿ ಕುಳಿತುಬಿಟ್ಟರೆ ಮನುಕುಲದ ಸೂಕ್ಷ್ಮ ಭಾವಗಳನ್ನು ಯಾರು ಸಲಹಬೇಕು? ಒಲವು ಅಭಿವ್ಯಕ್ತಿಗೊಳ್ಳದೇ ಮೂಕವಾಗಿಬಿಟ್ಟರೆ ಜಗದ ಗಾಯ ಮಾಯಲು ಸಾಧ್ಯವಿಲ್ಲ. ಅಥವಾ ಅದನ್ನು ಹೀಗೆಯೂ ಹೇಳಬಹುದು- ಜಗದ ಪ್ರತೀ ಗಾಯಕ್ಕೂ, ಮನಸ್ತಾಪಕ್ಕೂ, ನೋವಿಗೂ, ದುಃಖಕ್ಕೂ ಒಲವೇ ದಿವ್ಯೌಷಧಿ, ಅದುವೇ ಜೀವಧಾತು, ಅದುವೇ ಶೃತಿ ಮೀಟುವ ವೀಣೆಯ ನಾಕುತಂತಿ.

ಹೀಗೇ ಒಲವಿನ ಸಾಂಗತ್ಯವೆಂದರೆ ಸ್ವರವಿಲ್ಲದೇ ಸಂತೈಸುವ ನಿಶ್ಶಬ್ದ, ನಿಶ್ಚಲ ಮೌನದಂತೆ; ಸಂಜೆಯ ಹೊತ್ತು ಅಕಾರಣವಾಗಿ ಸುರಿಯುವ ಶುದ್ಧ ಶುಭ್ರ ಮಳೆಯಂತೆ; ಅವ್ಯಕ್ತ ಹಾಡಿನಂತೆ…

ಕ್ರೂರ ಕಣ್ಣುಗಳೆಡೆಗಿನ ತಣ್ಣನೆಯ ನೋಟ!

ಮುಕ್ತಛಂದ । ಚೇತನಾ ತೀರ್ಥಹಳ್ಳಿ

ಪುಟ್ಟ ‘ಗುಯಿ’ಗೆ ಹಾಡುವುದು ಅಂದರೆ ಇಷ್ಟ. ನರ್ತಿಸೋದು ಕೂಡಾ. ಬರಿ ಹಸ್ತಗಳನ್ನೆ ಬಳಕಿಸುತ್ತ ಚೂರು ಚೂರೆ ಸೊಂಟ ತಿರುಗಿಸುತ್ತ ಕೊರಿಯಾದ ಹಳೆ ಹಾಡುಗಳಿಗೆ ಹೆಜ್ಜೆ ಹಾಕುತ್ತ ಅಂತಃಪುರದ ಉದ್ದಗಲ ಬಣ್ಣ ತುಂಬುತ್ತಿದ್ದಳು. ಅವಳು ರಾಜ ಕುಮಾರಿ. ಹಾಗಂತ ಅವಳಮ್ಮ ರಾಣಿಯೇನಲ್ಲ. ಜೊಸೆಯಾನ್ ವಂಶದ ರಾಜ ಯಂಗ್‌ಯುಂಗ್‌ನ ಹಾದರಕ್ಕೆ ಹುಟ್ಟಿದವಳು. ಜನ್ಮ ಕೊಡುತ್ತಲೇ ಅಮ್ಮ ತೀರಿಕೊಂಡಿದ್ದರಿಂದ ಅಂತಃಪುರದ ಹಿರಿಯ ಹೆಂಗಸರು ಮಗುವನ್ನ ತಂದು ಜೋಪಾನ ಮಾಡಿದ್ದರು, ಮುದ್ದಿನಿಂದ ‘ಗುಯಿ’ ಎಂದು ಕರೆದರು. ಅವಳ ಪೂರ್ತಿ ಹೆಸರು ಹ್ಯುನ್‌ಯು ಗುಯಿ.

~

ಗುಯಿ ಹುಟ್ಟಿಕೊಂಡ ಕಾಲ ಹದಿನೈದನೆ ಶತಮಾನ. ಕಾಲಗಟ್ಟಲೆಯಿಂದ ಸಮಾಜ ಮನ್ನಣೆ ಪಡೆದಿದ್ದ ಗೀಸಾನ್ ಪದ್ಧತಿಯ ಮೇಲೆ ಜೊಸೆಯಾನ್ ರಾಜಮನೆತನ ಅಸಹನೆಯನ್ನು ಹೊಂದಿತ್ತು. ಕೊರಿಯಾದಲ್ಲಿ ಚಾಲ್ತಿಗೆ ತರಲಾಗಿದ್ದ ಹೊಸವ್ಯಾಖ್ಯೆಯ ಕನ್ಪ್ಯೂಶಿಯನ್ ಮತದಲ್ಲಿ ಹೆಂಗಸರಿಗೆ ಅತಿ ಕೀಳಾದ ಸ್ಥಾನ ಕೊಡಲಾಗಿತ್ತು. ಅವರು ಯಾವ ಕೆಲಸಕ್ಕೂ ಬರದ ಜೀವಿಗಳು, ಕೇವಲ ಮನೆವಾಳ್ತೆಗೆ ಲಾಯಕ್ಕಾದವರು ಎನ್ನುವ ಭಾವ ಜೊಸೆಯಾನ್‌ ದೊರೆಗಳಿಗಿತ್ತು. ಅದು ಹೆಣ್ಣು ಮಕ್ಕಳು ಹಾಡುವುದು, ನರ್ತಿಸುವುದು, ಅಲಂಕರಿಸಿಕೊಳ್ಳುವುದೆಲ್ಲ ಅನೈತಿಕವೆಂಬಂತೆ ಬಿಂಬಿತವಾಗತೊಡಗಿದ ಕಾಲ. ಹೀಗಿರುವಾಗ ವೇಶ್ಯಾವಾಟಿಕೆಯ ಗೀಸಾನ್‌ಗಳನ್ನು ಅವರು ಹೇಗೆ ನಡೆಸಿಕೊಂಡಿದ್ದಿರಬಹುದು ಊಹಿಸಿ! (ಮೊನ್ನೆ ಮೊನ್ನೆ ಫತ್ವಾ ಹೇರಿಸಿಕೊಂಡ ನಮ್ಮ ಕಾಶ್ಮೀರಿ ಹೆಣ್ಣುಮಕ್ಕಳು ಈ ಸಾಲುಗಳನ್ನೋದಿ ತುಟಿ ಕೊಂಕಿಸಬಹುದು. ಹದಿನೈದನೇ ಶತಮಾನ ಮತ್ತು ಇಪ್ಪತ್ತೊಂದನೇ ಶತಮಾನಗಳ ನಡುವೆ ಅಂಥಾ ವ್ಯತ್ಯಾಸವೇನಿಲ್ಲ. ಬಹುಶಃ, ಹೆಂಗಸರ ಪಾಲಿಗೆ ಕಾಲ ಬದಲಾಗುವುದೇ ಇಲ್ಲವೇನೋ).

ಗೀಸಾನ್‌ಗಳನ್ನು ತೀರಾ ಕ್ರಿಮಿಗಳಂತೆ ತಾತ್ಸಾರದಿಂದ ನೋಡುತ್ತಿತ್ತು ರಾಜಾಡಳಿತ. ದೊರೆ ಸೋಯನ್ ಅಂತೂ ಅವರ ಮೇಲೆ ಸಂಪೂರ್ಣ ನಿಷೇಧ ಹೇರಿಬಿಡುವ ಯೋಜನೆ ಹಾಕಿಕೊಂಡಿದ್ದ. ಆದರೆ ಆಸ್ಥಾನದ ಕೆಲವು ಬುದ್ಧಿವಂತರು ಅದರ ದುಷ್ಪರಿಣಾಮಗಳನ್ನು ಮನದಟ್ಟು ಮಾಡಿ ಗೀಸಾನ್‌ಗಳನ್ನು ಉಳಿಸಿಕೊಂಡರಂತೆ. ವೇಶ್ಯಾವಾಟಿಕೆಯಿಂದ ಈಚೆ ತಂದ ಹೆಣ್ಣುಮಕ್ಕಳಿಗೆ ಉತ್ತಮ ಬದುಕು ಸಿಗುವಂತಾಗಿದ್ದರೆ ಧಾರಾಳ ನಿಷೇಧ ಹೇರಬಹುದಿತ್ತು. ಅವರನ್ನು ಬೆಂಕಿಯಿಂದ ಬಾಣಲೆಗೆ ದೂಡುವುದು ಬೇಡವೆಂಬುದು ಆಸ್ಥಾನಿಕರ ಕಳಕಳಿಯಾಗಿತ್ತೇನೋ. ಸಾಲದ್ದಕ್ಕೆ ಈ ಪ್ರಸ್ತಾಪಕ್ಕೆ ಊರ ಹೆಂಗಸರೂ ವಿರೋಧ ತೋರಿದ್ದರು. ತಮ್ಮ ಗಂಡಂದಿರು ಈಗ ಎಲ್ಲಾದರೂ ’ಒಂದೆಡೆ’ ಮೆದ್ದು ಬರುತ್ತಾರೆ. ಇನ್ನು ಎಲ್ಲೆಂದರಲ್ಲಿ, ಯಾರಂದರವರ ಬೇಲಿ ಹಾರುವಂತಾದರೆ!?

ಸತ್ಯಕಾಮರ ಸಾಲು ನೆನಪಾಗುತ್ತದೆ; “ಊರಲ್ಲಿ ಸೂಳೆಯರಿದ್ದಾರೆಂದೇ ಗರತಿಯರು ನೆಮ್ಮದಿಯಿಂದಿರುತ್ತಾರೆ…”

ಇಂಥಾ ರಾಜಮನೆತನದಲ್ಲಿ ಹುಟ್ಟಿದ ಗುಯಿಗೆ ಹಾಡುವುದೆಂದರೆ, ಕುಣಿಯುವುದೆಂದರೆ ಜೀವೋನ್ಮತ್ತವಾಗುವಷ್ಟು ಪ್ರೇಮ. ಅವಳು ಮುಳ್ಳುಬೇಲಿಗಳ ನಡುವೆಯೂ ಕನಸುಗಳನ್ನ ಅರಳಿಸಿಕೊಂಡು ಬೆಳೆದ ಹುಡುಗಿ. ಅವುಗಳನ್ನೆಲ್ಲ ಹಿಚುಕಿ ಕೆಳ ದರ್ಜೆಯ ಅಧಿಕಾರಿಯೊಬ್ಬನ ಜತೆ ಅವಳ ಮದುವೆ ಮಾಡುತ್ತಾರೆ. ಅದಕ್ಕೆ ಕಾರಣ, ಆಡಳಿತದ ರಾಜಕಾರಣ! ಕನ್ಯೆಯಾಗಿದ್ದಷ್ಟು ದಿನ ಗೋಡೆಗಳ ನಡುವೆ ಹಾಡಿಕೊಂಡಿದ್ದ ಗುಯಿ ಈಗ ಸಂಪೂರ್ಣ ಮೂಕಳಾಗುತ್ತಾಳೆ. ಅವಳಲ್ಲಿ ಒಂದೂ ಹಾಡು ಹುಟ್ಟುವುದಿಲ್ಲ, ಮಗು ಕೂಡಾ.

ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡ ಸತ್ತು ಹೋಗುತ್ತಾನೆ. ಗುಯಿ ಕಾಮನೆಗಳ ಪುಟ್ಟ ಹೆಂಗಸು. ಅದಂತೂ ಮರುಮದುವೆಯ ಮಾತಿರಲಿ, ಯೋಚನೆಗೂ ಅಡ್ಡಿ ಇದ್ದ ಕಾಲ. ಒಂಟಿತನದ ವಿಷಾದದಲ್ಲಿ, ಮನಸ್ಸಿನ, ದೇಹದ ಹಸಿವಿನಲ್ಲಿ ಕಂಗಾಲಾಗುವ ಹೆಣ್ಣು ಚುನ್‌ರೆ ಎಂಬ ಗುಲಾಮನ ವಶವಾಗುತ್ತಾಳೆ. ಅವನನ್ನು ಪ್ರೇಮಿಸತೊಡಗುತ್ತಾಳೆ. ಅವನಿಂದ ಯುನ್‌ಬಿ ಎಂಬ ಒಂದು ಹೆಣ್ಣು ಮಗುವನ್ನೂ ಪಡೆಯುತ್ತಾಳೆ.

ಸಮಾಜಕ್ಕೆ ಅಚ್ಚರಿಯ ಆಘಾತ. ಜೊಸೆಯಾನ್‌ ವಂಶದ ಹೆಣ್ಣು, ಕಟ್ಟುನಿಟ್ಟಿನ ಅರಸ ಟೀ ಯಾಂಗನ ಮೊಮ್ಮಗಳು ಇಂಥಾ ಕೆಲಸ ಮಾಡುವುದೆ? ಗುಯಿ ಗಣ್ಯ ಸಮಾಜದಿಂದ ಬಹಿಷ್ಕೃತಳಾಗುತ್ತಾಳೆ. ಭಾವನೆಗಳ, ಕಾಮನೆಗಳ ಭೋರ್ಗರೆತಕ್ಕೆಸಿಲುಕಿದ್ದ ಅವಳೀಗ ತನ್ನನ್ನು ಅದರ ಧಾರೆಗೆ ಒಡ್ಡಿಕೊಳ್ಳುತ್ತಾಳೆ. ತನ್ನನ್ನು ತಾನು ಗೀಸಾನ್ ಎಂದು ಘೋಷಿಸಿಕೊಳ್ಳುತ್ತಾಳೆ.

ಯಾರ ಎಗ್ಗಿಲ್ಲದೆ ನರ್ತಿಸುತ್ತಾಳೆ ಗುಯಿ. ಮನದೆಲ್ಲ ಸುಖ ದುಃಖಗಳನ್ನು ಹಾಳೆಗಿಳಿಸಿ ಹಾಡಾಗುತ್ತಾಳೆ.

***
ಚರಿತ್ರೆಯ ವ್ಯಂಗ್ಯ ಇರುವುದು ಇಲ್ಲಿಯೇ. ಯಾವ ಅರಸು ಮನೆತನ ಗೀಸಾನ್‌ ಪದ್ಧತಿಯನ್ನೆ ನಿರ್ನಾಮ ಮಾಡಲು ಹೊರಟಿತ್ತೋ ಅದೇ ಮನೆತನದ ಹೆಣ್ಣೊಬ್ಬಳು ಸ್ವತಃ ಗೀಸಾನ್‌ ಆಗುತ್ತಾಳೆ. ಯಾವ ಜನರು ಹೆಣ್ಣಿಗೆ ಹಾಡುವ, ಬರೆಯುವ, ಕುಣಿಯುವ ಹಕ್ಕಿಲ್ಲ ಎಂದರೋ ಅದೇ ಜನರ ನಡುವಿಂದ ಒಬ್ಬ ಕವಿ ಹುಟ್ಟಿಕೊಳ್ಳುತ್ತಾಳೆ.

ಗುಯಿ, ಕ್ರೂರ ಕಣ್ಣುಗಳೆಡೆಗಿನ ಒಂದು ತಣ್ಣನೆಯ ನೋಟದಂತೆ ಭಾಸವಾಗುತ್ತಾಳೆ.
ಗುಯಿ, ಅಟ್ಟಹಾಸಕ್ಕೆ ಪ್ರತಿಯಾಗಿ ಉಡಾಫೆಯ ಚಿಕ್ಕ ನಗುವಿನಂತೆ ಅನ್ನಿಸುತ್ತಾಳೆ.

ಪಾರಿಜಾತದ ಬಿಕ್ಕಳಿಕೆ

ಪದ ಪಾರಿಜಾತ | ಉಷಾ ಕಟ್ಟೆಮನೆ

ಧ್ಯರಾತ್ರಿ..ನಾನು ಪಾರಿಜಾತದ ಕಂಪಿನಲ್ಲಿದ್ದೆ.

ನನ್ನ ಬೆಡ್ ರೂಮಿನ ಕಿಟಕಿಯತ್ತ ಬಾಗಿದ ಆ ದೇವಲೋಕದ ವೃಕ್ಷದಲ್ಲಿ ಬಿರಿಯುತ್ತಿದ್ದ ದೇವಪುಷ್ಪದ ಸುಂಗಂಧಲ್ಲಿ ಮೈಮರೆತು ನಿದ್ರೆಯಾಳಕ್ಕೆ ಜಾರುತ್ತಲಿದ್ದೆ..

ಆಗ ನನ್ನ ಮೊಬೈಲ್ ಫೋನ್ ರಿಂಗಣಿಸಿತು.

ಆತ ರಣರಂಗದಲ್ಲಿದ್ದ.. ನನ್ನ ಹೆಸರನ್ನು ಹೇಳುತ್ತಾ ತಡೆ ತಡೆದು ಬಿಕ್ಕಳಿಸುತ್ತಿದ್ದ..

“ಏನಾಯ್ತು?” ಎನ್ನುತ್ತಲೇ ತಟ್ಟನೆದ್ದು ಕುಳಿತವಳು, ನನ್ನ ಮಾತಿನಿಂದ ಮನೆಯಲ್ಲಿದ್ದವರಿಗೆ ತೊಂದರೆಯಾಗಬಾರದೆಂದು ಟೆರೇಸ್ ಮೇಲೆ ಹೋದೆ. ಪಾರಿಜಾತದ ಗೆಲ್ಲಿನ ನೆರಳಲ್ಲಿ ಹಾಕಿದ ಕುರ್ಚಿಯಲ್ಲಿ ದೊಪ್ಪನೆ ಕುಳಿತೆ. ಅಲ್ಲಿಗೆ ಬರುವ ತನಕ “ಹೆದರಬೇಡಿ ನಾನಿದ್ದೇನೆ” ಎಂದು ಸಮಾಧಾನಿಸುತ್ತಲೇ ಬಂದಿದ್ದೆ.

ಅಂದೇ ಮೊದಲ ಬಾರಿ ಗಂಡಸೊಬ್ಬ – ಅದರಲ್ಲೂ ಬಹಳಷ್ಟು ಜೀವನವನ್ನು ಕಂಡಿದ್ದ, ಮಧ್ಯವಯಸ್ಸನ್ನು ಸಮೀಸುತ್ತಿರುವ ವ್ಯಕ್ತಿಯೊಬ್ಬ ಮಗುವಿನಂತೆ, ಅಸಹಾಯಕನಾಗಿ ಅತ್ತದ್ದನ್ನು ನಾನು ನನ್ನ ಕಿವಿಯಾರೆ ಕೇಳುತ್ತಲಿದ್ದೆ..

ಆತ ನಡುಗಿ, ಜರ್ಜರಿತನಾಗುವುದಕ್ಕೆ ಕಾರಣವಿತ್ತು. ಆತನ ಸಹೋದ್ಯೋಗಿಯಾಗಿದ್ದ, ಆತನ ಜೀವದ ಗೆಳೆಯ ಅವನ ಕಣ್ಣೆದುರಿನಲ್ಲೇ ಬಾಂಬ್ ಸ್ಫೋಟದಿಂದಾಗಿ ಛಿದ್ರ ಛಿದ್ರವಾಗಿ ಸತ್ತು ಬಿದ್ದಿದ್ದ. ಆ ಕ್ಷಣದಲ್ಲಿ ಆತನಿಗೆ ನನ್ನ ನೆನಪಾಗಿದೆ. ಫೋನ್ ಮಾಡಿದ್ದಾನೆ. ಅದು ಅಂತಾರಾಷ್ಟ್ರೀಯ ಕರೆ. ಆದರೂ ಒಂದು ಘಂಟೆಗೂ ಮಿಗಿಲಾಗಿ ಆತ ನನ್ನೊಡನೆ ಮಾತಾಡಿದ. ಆತ ರಣರಂಗದ ಮಾತಾಡುತ್ತಲಿದ್ದರೆ. ನಾನು ಪಾರಿಜಾತದ ಕಂಪಿನೊಡನೆ ಅಲೌಕಿಕತೆಯ ಗಂಧವನ್ನು ಬೆರೆಸಿ ಅವನಿಗೆ ರವಾನಿಸುತ್ತಿದ್ದೆ.

ನಿಮಗೀಗ ಅನ್ನಿಸಬಹುದು..ಆತ ನಿಮ್ಮ ಆತ್ಮೀಯ ಗೆಳೆಯನಾಗಿರಬೇಕೆಂದು. ಖಂಡಿತಾ ಅಲ್ಲ. ಅದೊಂದು ಫೇಸ್ ಬುಕ್ ಗೆಳೆತನ ಅಷ್ಟೇ.. ಅದನ್ನೇ ಆತ ಮಾತಿನ ಮಧ್ಯೆ ಹೇಳಿದ: “ಇಷ್ಟೊಂದು ಗೆಳೆಯ-ಗೆಳತಿಯರಿದ್ದಾರೆ ನನಗೆ.. ಆದರೆ ಈ ಹೊತ್ತಿನಲ್ಲಿ ನನಗೆ ನೀವು ಮಾತ್ರ ಯಾಕೆ ನೆನಪಾದಿರೋ ಗೊತ್ತಿಲ್ಲ.”

ಹೌದು. ಆತ ನನಗೆ ಫೇಸ್ ಬುಕ್ ನಲ್ಲಿ ಪರಿಚಿತನಾದವನು. ಯಾವುದೋ ಒಂದು ಮಾಹಿತಿಗಾಗಿ ನನ್ನ ಪತಿಯ ಸಲಹೆಯಂತೆ ನಾನವನನ್ನು ಸಂಪರ್ಕಿಸಿದ್ದೆ. ಹಾಗಾಗಿ ಆತನ ಬಳಿ ನನ್ನ ದೂರವಾಣಿ ನಂಬರ್ ಇತ್ತು. ಮುಂದೆ ಅದು ಒಂದು ಸೌಹಾರ್ದ ಗೆಳೆತನವಾಗಿ ಮುಂದುವರಿದಿತ್ತು. ಆದರೆ ನಡುವೆ ಒಂದು ಚಿಕ್ಕ ತಪ್ಪು ತಿಳುವಳಿಕೆಯಿಂದಾಗಿ ನಮ್ಮಿಬ್ಬರ ನಡುವಿನ ಸಂಪರ್ಕ ಕೊಂಡಿಗೆ ತುಕ್ಕು ಹಿಡಿದಿತ್ತು. ನಾನವನನ್ನು ಪೇಸ್ ಬುಕ್ ನಲ್ಲಿ ಅನ್ಫ್ರೆಂಡ್ ಮಾಡಿದ್ದೆ.

ಹೀಗಿರುವಾಗಲೇ ಆ ಫೋನ್..ಅದೂ ಮಧ್ಯರಾತ್ರಿಯಲ್ಲಿ ಬಂದಿತ್ತು.

ಅಂದು ಹುಣ್ಣಿಮೆಯಾಗಿರಬೇಕು. ಸುತ್ತ ಬೆಳದಿಂಗಳು ಚೆಲ್ಲಿತ್ತು. ಆ ಹಾಲ್ಬೆಳಕಲ್ಲಿ ಮಾಯಾನಗರಿ ಬೆಂಗಳೂರು ಹೇಗೆ ನಿಶ್ಶಬ್ದವಾಗಿ ಮಲಗಿ ನಿಟ್ಟುಸಿರು ಬಿಡುತ್ತಿದೆಯೆಂದು ನಾನವನಿಗೆ ವಿವರಿಸುತ್ತಾ, ತಲೆಯೆತ್ತಿ ಆಕಾಶವನ್ನು ನೋಡುವಂತೆ ಹೇಳಿದೆ. “ಆ ಚಂದಿರನ್ನು ನೋಡು. ಅಲ್ಲಿ ನಿನ್ನ ಗೆಳೆಯನಿರಬಹುದು..ಅವನು ಅಲ್ಲಿಂದ ನಿನ್ನನ್ನು ನೋಡುತ್ತಿರಬಹುದು..ನಾನು ನಿನ್ನ ಮಾತುಗಳಿಂದ ಅವನನ್ನು ಅಲ್ಲಿ ಕಾಣುತ್ತಿದ್ದೇನೆ. ಜಗತ್ತಿಗೆ ತಂಪನ್ನು ತರಲು ಅವನು ಚಂದಿರನಲ್ಲಿ ಸೇರಿ ಹೋಗಿದ್ದಾನೆ. ನಾವಿಬ್ಬರೂ ಏಕಕಾಲದಲ್ಲಿ ಅವನನ್ನು ನೋಡುತ್ತಲಿದ್ದರೆ ಅವನು ನಗದೆ ಇರಲು ಸಾಧ್ಯವೇ?”

ನಾನು ಅವನೊಡನೆ ಮಾತಾಡುತ್ತಲೇ ಹೋದೆ. ಅವನು ಚಿಕ್ಕ ಮಗುವಿನಂತೆ ಕೇಳುತ್ತಲೇ ಹೋದ.

ಅವನು ಸಹಜಸ್ಥಿತಿಗೆ ಬರುವುದು ನನ್ನ ಅರಿವಿಗೆ ಬರುತ್ತಿತ್ತು. ಹಾಗಾಗಿ ಅವನಿಂದ ಕಳಚಿಕೊಳ್ಳುವುದರ ಬಗ್ಗೆ ಆಲೋಚಿಸುತ್ತಲೇ ಮತ್ತಷ್ಟು ಮಾತು ಮುಂದುವರಿಸುತ್ತಾ ಹೇಳಿದೆ “ಎರಡು ಪೆಗ್ ವಿಸ್ಕಿ ಕುಡಿದು ಚಂದಿರನ ಜೊತೆ ಸೇರಿರುವ ನಿನ್ನ ಗೆಳೆಯನನ್ನು ನೆನೆಯುತ್ತಾ ಮಲಗು. ನಾಳೆ ಬೆಳಿಗ್ಗೆ ಏಳುವಾಗ ನೀನು ಹೊಸ ಮನುಷ್ಯನಾಗಿರುತ್ತಿ” ಎಂದು ಅಮ್ಮನಂತೆ ರಮಿಸಿ ನಾನು ಪೋನ್ ಡಿಸ್ಕನೆಕ್ಟ್ ಮಾಡಿದೆ.

ನನ್ನನ್ನು ಅತ್ಯಂತ ಕೀಳಾಗಿ ಕಂಡ ಈ ವ್ಯಕ್ತಿಯೊಡನೆ ಇಂತಹ ಅಪರಾತ್ರಿಯಲ್ಲಿ ನಾನು ಯಾಕಾಗಿ ಇಷ್ಟೊಂದು ಮಾರ್ದವತೆಯಿಂದ ನಡೆದುಕೊಂಡೆ? ಎಂದು ನನ್ನ ಬಗ್ಗೆ ನಾನೇ ಅಚ್ಚರಿಗೊಳ್ಳುತ್ತಾ, ಪಾರಿಜಾತದ ಒಂದೆರಡು ಹೂಗಳನ್ನು ಬಿಡಿಸಿಕೊಂಡು, ಬೊಗಸೆಯಲ್ಲಿ ಹಿಡಿದು ಅದನ್ನು ಆಘ್ರಾಣಿಸುತ್ತಾ ಮೆಟ್ಟಿಲಿಳಿದು ಮನೆಗೆ ಬಂದೆ.  ರಾತ್ರಿ ಓದಿ ಮಡಚಿಟ್ಟ ಪುಸ್ತಕದ ಮೇಲೆ ಹೂಗಳನ್ನಿಟ್ಟೆ. ಹಾಸಿಗೆಯ ಮೇಲೆ ಒಂದೆರಡು ನಿಮಿಷ ವಜ್ರಾಸನದಲ್ಲಿ ಕಣ್ಮುಚ್ಚಿ ಕುಳಿತೆ. ಆಮೇಲೆ ಸಮಾಧಾನ ಚಿತ್ತದಿಂದ ಮಲಗಿಕೊಂಡೆ.

ಬೆಳಗ್ಗಿನ ಜಾವವಿರಬೇಕು. ಎಚ್ಚರವೂ ಅಲ್ಲದ ಕನಸೂ ಅಲ್ಲದ ಸ್ಥಿತಿ. ನನ್ನ ಕೆನ್ನೆಯ ಮೇಲೆ ಸುಕೋಮಲ ಸ್ಪರ್ಶ. “ನನ್ನ ಮೇಲೆ ನಿನಗೇಕೆ ಇಷ್ಟು ಮೋಹ?” ಕಿವಿಯ ಬಳಿ ಉಲಿದ ಪಿಸುನುಡಿ. ನಾನು ಗಲಿಬಿಲಿಗೊಳ್ಳುತ್ತಿರುವಾಗಲೇ..ಮತ್ತೆ ಅದೇ ಇನಿದನಿ…

“ನೀನು ಯಾಕೆ ನನ್ನ ಹಾಗೆ ಆದೆ?”

“ನಿನ್ನ ಹಾಗೆಯೇ…ಹಾಗೆಂದರೇನು?”

“ಲಜ್ಜಾಭರಣೆ..!.ನಿನ್ನ ಹಾಗೆ ನನಗೂ ಒಂದು ಕಥೆಯಿದೆ. ಹೇಳಲೇ?”

ಕಥೆಯೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಕ್ಕಳ-ಪಕ್ಕಳ ಕೂತು ಗಲ್ಲಕ್ಕೆ ಕೈನೆಟ್ಟೆ.

“ನಾನೊಬ್ಬಳು ರಾಜಕುಮಾರಿಯಾಗಿದ್ದೆ. ದಿನಾ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶಸ್ತ್ರಾಭ್ಯಾಸ ಮಾಡುತ್ತಿದ್ದೆ. ಪ್ರತಿದಿನ ಸೂರ್ಯ ನಮಸ್ಕಾರ ಮಾಡುತ್ತಿದ್ದಾಗ ಅವನನ್ನು ನೋಡುತ್ತಿದ್ದೆ. ಕೆಂಪನೆಯ ಕೆಂಡದುಂಡೆಯಂತಿದ್ದ ಆತ ಬರಬರುತ್ತಾ ಹೊಂಬಣ್ಣದ ರೂಪ ಪಡೆಯುತ್ತದ್ದ; ನನ್ನ ಯೌವನದಂತೆಯೇ! ನನ್ನ ಹೆಣ್ತನ ಅರಳುವುದನ್ನು ನೋಡುತ್ತಲೇ ಅವನೂ ಬಣ್ಣಗಾರನಾಗುತ್ತಿದ್ದ. ಅವನು ನನ್ನ ಮೋಹಿಸಿದ. ನಾನವನನ್ನು ಅಚ್ಚರಿಯಿಂದ ನೋಡುತ್ತಿದ್ದೆ. ಪ್ರತಿದಿನ ಸೂರ್ಯ ನಮಸ್ಕಾರಕ್ಕಾಗಿ ಕೈಯೆತ್ತಿದಾಗಲೆಲ್ಲ ಅವನು ನನ್ನ ಬೆರಳುಗಳನ್ನು ಹಿಡಿದೇ ನನ್ನೊಳಗೆ ಇಳಿಯುತ್ತಿದ್ದ. ನಾನವನನ್ನು ಪ್ರೀತಿಸಿಬಿಟ್ಟೆ. ಮುಂಜಾನೆಯಲ್ಲಿ ಪ್ರತಿದಿನ ಅವನೊಡನೆ ಅವನ ಪ್ರಿಯ ಮಡದಿ ಉಷೆಯಿರುತ್ತಿದ್ದಳು. ಆದರೂ ಆತ ಜಾರತನದಲ್ಲಿ ನನ್ನೆಡೆಗೆ ಬಾಗಿದ..ನಾವು ಭೂಮ್ಯಾಕಾಶಗಳಲ್ಲಿ ಒಂದಾಗಿ ಬೆರೆಯುತ್ತಿದ್ದೆವು.

“ಆದರೆ ಒಂದು ದಿನ ಅವನು ನನ್ನ ನನ್ನ ಬೆರಳುಗಳಿಗೆ ತನ್ನ ಬೆರಳನ್ನು ಜೋಡಿಸಲಿಲ್ಲ. ಮರುದಿನವೂ ಇಲ್ಲ. ಮತ್ತೆಂದೂ ಬರಲಿಲ್ಲ. ನಾನು ಕಾದೇ ಕಾದೆ. ಸೊರಗಿದೆ.. ಕೈಚಾಚಿದರೆ ಅವನು ನನಗೆಟುಕದಷ್ಟು ಎತ್ತರದಲ್ಲಿದ್ದ. ಅವನಿಲ್ಲದೆ ನನ್ನೊಳಗೆ ಬೆಳಕಿರಲಿಲ್ಲ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶಸ್ತ್ರಾಭ್ಯಾಸ ಮಾಡುವ ನನ್ನೊಳಗಿನ ರಾಜಕುಮಾರಿ ಕಳೆದುಹೋಗಿದ್ದಳು.ಅದು ಗೊತ್ತಾದ ಒಡನೆ ನನಗೆ ಬದುಕುವುದರಲ್ಲಿ ಅರ್ಥವಿಲ್ಲವೆನಿಸಿತು. ಜಗತ್ತನ್ನೆಲ್ಲಾ ಆ ಸೂರ್ಯದೇವ ಬೆಳಗುತ್ತಾನೆಂದು ನೀವೆಲ್ಲಾ ಅನ್ನುತ್ತೀರಿ. ಆತ ಬೆಳಕಿನೊಡೆಯನಂತೆ. ಆದರೆ ನನ್ನೊಳಗಿನ ಬೆಳಕನ್ನು ಅವನ್ಯಾಕೆ ಕಿತ್ತುಕೊಂಡ? ಸಾವಿರಾರು ಕರ ಚಾಚಿ ಕಮಲೆಯರ ಕಣ್ಣ ನೀರ ಒರೆಸುವವನು ಎಂದೆಲ್ಲ ಅನ್ನುತ್ತೀರಿ. ನನ್ನ ಕಣ್ಣೀರು ಅವನಿಗೆ ಕಾಣದಾಯಿತೆ?

“ಮತ್ತೆ ಬದುಕಬೇಕೆನಿಸಲಿಲ್ಲ. ಕಠಾರಿಯಿಂದ ಇರಿದುಕೊಂಡು ಸತ್ತು ಹೋದೆ. ದೇಹವನ್ನು ನಾಶಪಡಿಸಿಕೊಂಡರೇನು ಆತ್ಮ ಅವಿನಾಶಿನಿಯಲ್ಲವೇ? ನನ್ನನ್ನು ಸುಟ್ಟ ಬೂದಿಯೇ ಬೀಜವಾಗಿ ರೂಪುವಡೆದು ಸಸಿಯಾಗಿ ಭೂಮಿಯನ್ನು ಸೀಳಿ ನಿಂತೆ. ಹೂವಾಗಿ ಅರಳಿದೆ. ಯಾರಾದರೂ ಮುಟ್ಟಿದರೆ ಬಾಡಿ ಹೋಗುವ ಭಯ. ಅದಕ್ಕಾಗಿ ಸುತ್ತ ಒರಟು ಎಲೆಯನ್ನು ಹೊದ್ದೆ.  ಅದರ ಆಕಾರವನ್ನು ನೋಡಿದೆಯಾ? ಅದು ನನ್ನದೇ ಹೃದಯ. ಪೂರ್ವ ಜನ್ಮದ ಸೆಳೆತ. ದೇಹ ನಶ್ವರವಾದರೂ ಪ್ರೀತಿ ಅವಿನಾಶಿಯಲ್ಲವೇ? ನನ್ನನ್ನು ದೂರದಲ್ಲಿ ನಿಂತು ಜನರು ನೋಡಿ ಆನಂದಿಸಲಿ. ನಾನೆಂದೂ ಅವನನ್ನು ತಲೆಯೆತ್ತಿ ನೋಡಲಾರೆ. ನಾನು ಕತ್ತಲಲ್ಲಿಯೇ ಅರಳುತ್ತೇನೆ. ನೊಂದ ಮನಸ್ಸುಗಳಿಗೆ ತಂಪನ್ನೀಯುತ್ತೇನೆ; ಕಂಪನ್ನು ತುಂಬುತ್ತೇನೆ. ತೊರೆದು ಹೋದವರಿಗಾಗಿ ದುಃಖಿಸುವುದರಲ್ಲಿ ಅರ್ಥವಿಲ್ಲ. ಅವರು ಆಕಾಶದಲ್ಲೇ ಇರಲಿ..ನಾವು ಭೂಮಿಯಲ್ಲೇ ಇರೋಣ..ಅಲ್ಲವೇ ನನ್ನ ಪ್ರಿಯ ಸಖಿ…?”

ಇಷ್ಟನ್ನು ಹೇಳಿದವಳೇ, ತನ್ನ ಹವಳದ ಬೆರಳುಗಳಿಂದ ನನ್ನ ಗಲ್ಲವನ್ನು ಹಿಡಿದೆತ್ತಿ ನನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ, “ನನ್ನ ಹಾಗೆ ನೀನಾಗಬೇಡ.. ದಿನಾ ನನ್ನನ್ನು ಬೊಗಸೆಯಲ್ಲಿ ತುಂಬಿಕೊಂಡು ನಿನ್ನ ಮನೆಯೊಳಗೆ ಬರಮಾಡಿಕೊಳ್ಳುತ್ತಿಯಲ್ಲಾ… ಆಗ ನಿನ್ನ ನಿಟ್ಟುಸಿರ ಬೇಗೆಗೆ ನಾನು ಬಾಡಿ ಹೋಗುತ್ತೇನೆ. ಅದಕ್ಕೆ ಕಾರಣ ನನಗೆ ಗೊತ್ತು..ನನ್ನವನು ನನಗೆ ಕೈಗೆಟುಕದಷ್ಟು ದೂರದಲ್ಲಿದ್ದ. ಆದರೆ ನಿನಗಾಗಿ ಹಂಬಲಿಸುವವನು ಇಲ್ಲೇ ಹತ್ತಿರದಲ್ಲಿದ್ದಾನೆ. ನಾನು ನಿನ್ನ ಅಂತರಂಗದ ಗೆಳತಿಯಲ್ಲವೇ? ನನಗಾಗಿಯಾದರೂ ಇವತ್ತಿನ ಒಂದು ದಿನದ ಮಟ್ಟಿಗೆ ನೀ ಅಭಿಸಾರಿಕೆಯಾಗು. ನಿನ್ನ ಜೊತೆಗೆ ನಾನಿರುತ್ತೇನೆ. ಅವನೆದುರಲ್ಲಿ ನೀನೇನೂ ಮಾತೇ ಆಡಬೇಕಿಲ್ಲ. ಅವನ ಕೈಗೆ ನನ್ನನ್ನು ಹಸ್ತಾಂತರಿಸು. ಮತ್ತೆ ಬರುವುದೆಲ್ಲಾ ಮೇಘಸಂದೇಶವೇ… ನೀನು ಕಾಣುವುದೆಲ್ಲಾ ಯಕ್ಷ-ಕಿನ್ನರ ಲೋಕವೇ…!”

ಹಾಗೆ ಹೇಳುತ್ತಲೇ ಆ ಧ್ವನಿ ಬಣ್ಣ-ಬಣ್ಣಗಳ ಸುಂದರವಾದ ಬೆಳಕಿನ ರೇಖೆಗಳಾಗಿ, ನೋಡ ನೋಡುತ್ತಲೇ ಬಣ್ಣದ ಗೋಲವಾಗಿ, ನನ್ನನ್ನು ನುಂಗಲೋ ಎಂಬಂತೆ ನನ್ನತ್ತ ಶರವೇಗದಲ್ಲಿ ಬರತೊಡಗಿತು. ನಾನು ಜೋರಾಗಿ ಕಿರುಚಿ, ಧಡಕ್ಕನೆ ಎದ್ದು ಕುಳಿತೆ. ಕೆನ್ನೆ ಮುಟ್ಟಿ ನೋಡಿಕೊಂಡೆ. ಒದ್ದೆಯಾಗಿತ್ತು. ಅಚ್ಚರಿಗೊಳ್ಳುತ್ತಾ ಪುಸ್ತಕದತ್ತ ನೋಡಿದೆ. ಪಾರಿಜಾತದ ಹೂಗಳು ನಗುತ್ತಿದ್ದವು. ಎದುರಿಗಿದ್ದ ಕನ್ನಡಿಯತ್ತ ದಿಟ್ಟಿ ಹಾಯಿಸಿದೆ.. ಪಾರಿಜಾತದ ಕಂಪಿನಲ್ಲಿ ನನ್ನ ಬಿಂಬ ಮಸುಕು ಮಸುಕಾಗಿ ಕಂಡಿತು.

ನಿಜವಾದ ಬೆಳಕು ಮೂಡುವುದು…

ಅನುಗುಣ | ಕಾವ್ಯಾ ಪಿ ಕಡಮೆ

“ಏಟೊಂದ್ ಹೊಡದು ಬಡದುನೂ ಆಗಿತ್ರಿ. ತಿಳೀಸಿ ಬುದ್ದೀನೂ ಹೇಳ್ಯಾಗಿತ್ತು, ಆದರೂ ಸಾಲಿ ಅಂದರ ಸ್ವಾಟಿ ತಿರುವತಿದ್ದ. ಈಗ ನಮ್ಮ ಸುಂದ್ರವ್ವ ಬಂದು ಪುಸ್ತಕ ತೋರಿಸಿ ಅದೇನೇನೋ ಹೇಳಿದಮ್ಯಾಗ ಈ ವರ್ಷ ಸಾಲೀಗೆ ಹೋಗ್ತೀನಿ ಅನ್ನಾಕತ್ತಾನು. ಈಗ ನಮಗೂ ಸಮಾಧಾನಾಗೇತಿ ನೋಡ್ರಿ.” ಎನ್ನುತ್ತ ಖುಷಿ ಹಂಚಿಕೊಂಡರು ಧಾರವಾಡ ಜಿಲ್ಲೆಯ ತಿಮ್ಮಾಪುರ ಗ್ರಾಮದ ಕರಿಯವ್ವ ಹಂಚಿನಮನಿ. ಅವರ ಮಗ ಹತ್ತು ವರುಷದ ಮರಿಯಪ್ಪ ಪಕ್ಕದಲ್ಲೇ ಕಾಲಾಡಿಸುತ್ತ ಕುಳಿತಿದ್ದ. “ಸಾಲಿ ಯಾಕ ಬಿಟ್ಯೋ?” ಎನ್ನುವ ಪ್ರಶ್ನೆಗೆ ಅವನಲ್ಲಿ ಉತ್ತರವಿರಲಿಲ್ಲ. “ಬರೂ ವರ್ಸದಿಂದ ಹೊಕ್ಕೀನ್ರಿ, ಅಕ್ಕಾರು ಹೇಳ್ಯಾರು” ಎಂದಷ್ಟೇ ಹೇಳಿ ಮುಗ್ಧ ನಗೆಯೊಂದನ್ನು ನಕ್ಕ.

ಇಲ್ಲಿ ಹೀಗೆ. ಶಾಲೆಗೆ ಹೋಗುವುದನ್ನು ಯಾಕೆ ಬಿಟ್ಟೆವು ಎಂಬುದಕ್ಕೆ ಮಕ್ಕಳಲ್ಲಿ ಸ್ಪಷ್ಟ ಉತ್ತರವೇ ಇಲ್ಲ. ಪದೇ ಪದೇ ಮರುಕಳಿಸುವ ಆರೋಗ್ಯ ಸಮಸ್ಯೆಯಿಂದ ಒಬ್ಬರು ಶಾಲೆಗೆ ವಿಮುಖವಾದರೆ ಅಲ್ಲೇ ಎಂದೋ ಜರುಗಿಹೋದ ಕಹಿ ಘಟನೆಯ ನೆಪದಿಂದ ಇನ್ನೊಬ್ಬರು ಮುಖ ತಿರುಗಿಸಿದ್ದಾರೆ. ಅವರನ್ನೆಲ್ಲ ಒಗ್ಗೂಡಿಸಿ ಅವರ ಮನವೊಲಿಸಿ ಪುನಃ ಶಾಲೆಯೆಡೆಗೆ ಮುಖ ಮಾಡುವಂತೆ ಮಾಡಿರುವ ಗ್ರಾಮದ ಸುಂದರವ್ವ ಅವರನ್ನು ತುಂಬ ಗೌರವದಿಂದ ಕಾಣುತ್ತಿದ್ದಾರೆ.

ಮಾಲಾ, ಸುಂದರಮ್ಮ ಹಾಗೂ ರೂಪಾ

ಸುಂದರವ್ವ, ’ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್’ ನ ’ಯೂಥ್ ಫಾರ್ ಡೆವಲಪ್ ಮೆಂಟ್’ (ವೈಫೋರ್ ಡಿ) ಕಾರ್ಯಕರ್ತೆ. ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ- ಪಿಯೂಸಿ ತನಕ ಓದಿರುವ, ಸಾಮಾಜಿಕ ಕಳಕಳಿಯಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತರಬೇತಿ ಕೊಟ್ಟು ಒಂದೊಂದು ಹಳ್ಳಿಯನ್ನು ದತ್ತು ತೆಗೆದುಕೊಂಡು, ಆ ಹಳ್ಳಿಯ ಸಾಮಾಜಿಕ ಆಗು-ಹೋಗುಗಳ ಬಗ್ಗೆ, ಅಲ್ಲಿರುವ ಸಮಸ್ಯೆಗಳ ಬಗ್ಗೆ ಹಳ್ಳಿಗರಿಂದಲೇ ಮಾಹಿತಿ ತೆಗೆಸಿ ಕೈಲಾದ ಪರಿಹಾರ ಒದಗಿಸುವುದು ವೈಫೋರ್ ಡಿಯ ಕಾರ್ಯಕರ್ತರ ಕೆಲಸ. ’ಅಭಿವೃದ್ಧಿಗಾಗಿ ಯುವಕರು’ ಇದರ ಧ್ಯೇಯವಾಕ್ಯ.

ಈ ಅಭಿಯಾನಕ್ಕೆ ಎಸ್ ಎಸ್ ಎಲ್ ಸಿ ಇಲ್ಲವೇ ಪಿಯುಸಿ ಮುಗಿಸಿ ಮನೆಯಲ್ಲಿರುವ ಹುಡುಗರನ್ನೇ ಏಕೆ ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ ವೈಫೋರ್ ಡಿಯ ಕೋಆರ್ಡಿನೇಟರ್ ಸುನಿತಾ, “ನಮಗೆ ಬೇಕಿರುವುದು ಹಳ್ಳಿಯಲ್ಲಿದ್ದು, ಆ ಪರಿಸರದಲ್ಲೇ ಒಂದಾಗಿ ಗ್ರಾಮಕ್ಕೆ ಅಭಿವೃದ್ಧಿಯ ಸಾಕ್ಷಾತ್ಕಾರ ಮಾಡಿಸುವವರು. ಪದವಿ ಮುಗಿದು ಮನೆಯಲ್ಲಿದ್ದರೂ ಶಿಬಿರಕ್ಕೆ ಸೇರಿಸಿಕೊಳ್ಳಲು ನಮಗೇನೂ ಅಭ್ಯಂತರವಿಲ್ಲ. ಆದರೆ ಜೆಓಸಿ(Job oriented course) ಮಾಡಿಕೊಂಡು ಪಟ್ಟಣದ ಕೆಲಸಕ್ಕೆ ಹಾರಬಹುದಾದ ಹುಡುಗರನ್ನು ಆಯ್ಕೆ ಮಾಡಿ ಏನು ಪ್ರಯೋಜನ” ಎಂದು  ತುಂಬ ಸಂಯಮದಿಂದ ಉತ್ತರಿಸುತ್ತಾರೆ.

ಗ್ರಾಮದ ಮಹಿಳೆಯರಿಗೆ ಅಕ್ಷರ

ಗ್ರಾಮದ ಮಹಿಳೆಯರಿಗೆ ಅಕ್ಷರ

 

 

 

 

 

 

 

 

ಈ ಊರಿನಲ್ಲೇ ಮೂವರು ಕಾರ್ಯಕರ್ತೆಯರಿದ್ದಾರೆ. ಸುಂದರಮ್ಮ, ರೂಪಾ ಮತ್ತು ಮಾಲಾಶ್ರೀ. ಇವರು ಸುತ್ತ ಮೂರು ಗ್ರಾಮಗಳ ಅಂದರೆ ತಡಕೋಡ, ತಿಮ್ಮಾಪುರ, ಖಾನಾಪುರಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ವೈಫೋರ್ ಡಿ ತರಬೇತಿ ಮುಗಿಸಿದ ಮೊದಲ ವಾರವೇ ಇವರು ಈ ಮೂರೂ ಗ್ರಾಮಗಳ ಪಿಆರ್ ಎ (ಗ್ರಾಮೀಣ ಸಮಭಾಗಿತ್ವದಲ್ಲಿ ಸಮೀಕ್ಷೆ) ಮಾಡಿದ್ದಾರೆ. ಒಂದು ತಿಂಗಳ ತರಬೇತಿಯಲ್ಲಿ ಹೇಳಿಕೊಟ್ಟಂತೆ ಗ್ರಾಮದ ಸಮಗ್ರ ನಕ್ಷೆ, ಋತುಮಾನ ನಕ್ಷೆ, ಮಾತೃಕೆ ನಕ್ಷೆಗಳನ್ನು ಜನರಿಂದಲೇ ಮಾಡಿಸಿ ಅವರ ಸಮಸ್ಯೆಯನ್ನು ಅವರಿಗೇ ಮೊದಲು ಮನವರಿಕೆ ಮಾಡಿಕೊಟ್ಟಿದ್ದಾರೆ.

ಹಾಗೆಯೇ ಮೂರೂ ಗ್ರಾಮಗಳಲ್ಲಿ ಪ್ರಚಲಿತವಿರುವ ಮೂರು ಸಮಸ್ಯೆಗಳ ಮೇಲೆ ಪ್ರತ್ಯೇಕವಾಗಿ ಕೆಲಸಮಾಡುತ್ತಲೇ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಸುಂದರಮ್ಮ, ಗ್ರಾಮದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸುವ ಪಣತೊಟ್ಟರೆ ಮಾಲಾ, ಅನಕ್ಷರಸ್ಥ ಮಹಿಳೆಯರನ್ನೆಲ್ಲ ಸಂಜೆ ಯಾರಾದರೊಬ್ಬರ ಮನೆಯ ಜಗಲಿಯ ಮೇಲೆ ಸೇರಿಸಿ ಅಕ್ಷರ ಹೇಳಿಕೊಡುತ್ತಾರೆ. ರೂಪಾ, ತಡಕೋಡ ಗ್ರಾಮದ ಜನರಿಗೆ ಬಯಲು ಶೌಚಾಲಯದಿಂದಾಗುವ ಅನಾನುಕೂಲತೆಗಳನ್ನೆಲ್ಲ ಮನವರಿಕೆ ಮಾಡಿಕೊಡುತ್ತಲೇ ’ಮನೆಗೊಂದು ಶೌಚಾಲಯ’ ಯೋಜನೆಯ ಬಗ್ಗೆ ಅವರಲ್ಲಿ ಜನಾಭಿಪ್ರಾಯ ಮೂಡಿಸಿ ಅವರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.

~

ತಿಮ್ಮಾಪುರ-ತಡಕೋಡ ಗ್ರಾಮಗಳಲ್ಲಿ ಸುಮಾರು ಎಂಟು ಮಕ್ಕಳು ಶಾಲೆಬಿಟ್ಟು ಕೂಲಿ ಕೆಲಸಕ್ಕೆ ಸೇರಿದ್ದರು. ವೈಫೋರ್ ಡಿ ಕಾರ್ಯಾಗಾರ ಶುರುವಾದ ಎರಡೇ ವಾರದಲ್ಲಿ ಸುಂದರಮ್ಮ ಮಕ್ಕಳ ಮನವೊಲಿಸಿ ಈ ವರ್ಷದಿಂದ ಅವರಲ್ಲಿ ಶಾಲೆಗೆ ಹೋಗುವ ಆಸೆಯನ್ನು ಮತ್ತೆ ಚಿಗುರೊಡೆಸಿದ್ದಾರೆ.

ಅಭಿವೃದ್ಧಿಯ ಕುರಿತು ಐಫೆಲ್ ಟವರ್ ನಂಥ ಕಟ್ಟಡದಲ್ಲಿ ಕುಳಿತು ಸಾವಿರ ಮಾತನಾಡಬಹುದು. ಆದರೆ ನಿಜವಾದ ಬೆಳಕು ಮೂಡುವುದು ಪುಟ್ಟ ಪುಟ್ಟ ಹಣತೆಗಳಿಂದಲೇ ಹೊರತು ಉದ್ದುದ್ದ ವಿದ್ಯುತ್ ಕಂಬಗಳಿಂದಲ್ಲ ಎಂಬುದನ್ನು ಪದೇ ಪದೇ ನೆನಪಿಗೆ ತರುವ, ಓಯಾಸಿಸ್ ಗಳಂತೆ ಕಾಣುವ ಇಂಥ ಭರವಸೆಯ ಹಣತೆಗಳಿಗೆ ನಮನ.

%d bloggers like this: