ಹಾಗೊಬ್ಬಳು ಋಣಮುಕ್ತೆ

ಪದ ಪಾರಿಜಾತ | ಉಷಾ ಕಟ್ಟೆಮನೆ

ಬೆಳಗ್ಗೆ ನಾಲ್ಕು ಘಂಟೆಯ ಸಮಯವಿರಬಹುದು. ದೊಡ್ಡ ಮನೆಯ ದೊಡ್ಡಮಂದಿ ಏಳುವ ಸಮಯವದು.

ಹೆಬ್ಬಾಗಿಲಿಗೆ ಯಾರೋ ಧಡಾರನೆ ಒದ್ದಾಂತಾಯಿತು. “ಇಲ್ಲಿನ ಮುಂಡೆಯರೆಲ್ಲಾ ಎಲ್ಲಿ ಸತ್ತು ಹೋಗಿದ್ರಿ?” ಎನ್ನುತ್ತಾ ಬಂದ ಪಟೇಲರು ಮೊಗಸಾಲೆಯ ಅಡ್ಡಗಳಿಗೆ ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಿದ ತೂಗು ಕಿಂಡಿಯಲ್ಲಿ ಇಟ್ಟ ಜೋಡು ನಳಿಗೆಯ ಬಂದೂಕನ್ನು ಕೈಗೆತ್ತಿಕೊಂಡು ಅಬ್ಬರಿಸುತ್ತಾ “ಎಲ್ಲಿ ಆ ವನಜಾ? ಬನ್ರೋ ಅವಳ ದಾಸ-ದಾಸಿಯರು..ಒಬ್ಬೊಬ್ಬರನ್ನೂ ಸುಟ್ಟು ಹಾಕಿಬಿಡ್ತೀನಿ” ಎಂದು ಕಾಲು ಅಪ್ಪಳಿಸುತ್ತಾ ಅಂಗಳಕ್ಕಿಳಿದವರೇ ಆಕಾಶದತ್ತ ಗುರಿ ಇಟ್ಟು ಗುಂಡು ಹಾರಿಸಿಯೇ ಬಿಟ್ಟರು.

ಆಗ ಒಂದು ಆಭಾಸ ಆಗಿಹೋಯ್ತು. ನಮ್ಮ ಊರಿನಲ್ಲಿ ಒಂದು ಪದ್ಧತಿಯಿದೆ. ಯಾರದಾದರೂ ಮನೆಯಲ್ಲಿ ಗುಂಡಿನ ಶಬ್ದ ಕೇಳಿದರೆ ಆ ಮನೆಯಲ್ಲಿ ಸಾವು ಸಂಭವಿಸಿದೆ ಎಂದು ಅರ್ಥ. ಆಗ ಆ ಊರು ಮತ್ತು ಸುತ್ತಮುತ್ತಲಿನ ಹಳ್ಳಿಯವರೆಲ್ಲಾ ತಕ್ಷಣ ತಮ್ಮೆಲ್ಲ ಕೆಲಸ ಬಿಟ್ಟು ಪರಸ್ಪರ ವಿಚಾರಿಸಿಕೊಂಡು ಆ ಮನೆಗೆ ಧಾವಿಸಿ ಬಂದು ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಿದ್ದರು. ಮಲೆನಾಡಿನಲ್ಲಿ ಹೆಚ್ಚಾಗಿ ಒಂಟಿ ಮನೆಗಳಿರುತ್ತಿದ್ದು, ಒಂದು ಮನೆಗೂ ಇನ್ನೊಂದಕ್ಕೂ ಅರ್ಧ-ಮುಕ್ಕಾಲು ಮೈಲಿಗಳ ಅಂತರವಿರುತ್ತಿತ್ತು. ಅದಕ್ಕಾಗಿ ಈ ವ್ಯಸ್ಥೆಯಿತ್ತೋ ಅಥವಾ ತಮ್ಮ ಮನೆಯ ಸದಸ್ಯನೊಬ್ಬ ಸ್ವರ್ಗದತ್ತ ಪಯಣಿಸುತ್ತಿದ್ದಾನೆ. ಅವನನ್ನು ಸ್ವಾಗತಿಸಿ ಎಂದು ಸ್ವರ್ಗಾಧಿಪತಿಗೆ ಸೂಚಿಸಲು ಆಕಾಶಕ್ಕೆ ಕೋವಿಯನ್ನು ಗುರಿ ಹಿಡಿಯುತ್ತಿದ್ದರೋ ಗೊತ್ತಿಲ್ಲ. ಅಂತೂ ಪಟೇಲರು ಆಕಾಶಕ್ಕೆ ಗುಂಡು ಹೊಡೆದದ್ದು ಊರ ಜನರ ಕಿವಿಗಪ್ಪಳಿಸಿತು. ಅವರು ಯಾರನ್ನೋ ಬೀಳ್ಕೊಡಲು ಸಜ್ಜಾಗಿಬಿಟ್ಟರು.

“ದೊಡ್ಡ ಮನೆಯ ಅಜ್ಜಿ ಹೋಗಿಬಿಟ್ಟ್ರು ಅಂತ ಕಾಣುತ್ತೆ” ಎಂದು ಮಾತಾಡಿಕೊಳ್ಳುತ್ತಾ ಕತ್ತಿ, ಕೊಡಲಿ, ಗರಗಸಗಳನ್ನು ಹಿಡ್ಕೊಂಡು ಪಟೇಲರ ಮನೆ ಕಡೆ ಹೆಜ್ಜೆ ಹಾಕತೊಡಗಿದರು.

ಇತ್ತ ಪಟೇಲರು ಅಂಗಳದಿಂದ ಮನೆಗೆ ಬಂದವರೇ ಭೂತ ಮೈಮೇಲೆ ಬಂದವರಂತೆ ಎದುರು ಸಿಕ್ಕ ಹಲವು ಕೋಣೆಗಳ ಬಾಗಿಲುಗಳನ್ನು ಒದೆಯುತ್ತಾ ಅರಚಾಡತೊಡಗಿದರು. ಒಳಗೆ ಮಲಗಿದ್ದ ಹೆಂಗಸರಿಗೆ ಪಟೇಲರ ಈ ಅರಚಾಟಕ್ಕೆ ಕಾರಣವೇನೆಂದು ಗೊತ್ತಿದ್ದರೂ ಅವರ ಗಂಡಂದಿರಿಗೆ ಏನೊಂದೂ ಅರ್ಥವಾಗದೆ ಏನು ವಿಷಯ ಎಂಬಂತೆ ತಮ್ಮ ತಮ್ಮ ಪತ್ನಿಯರ ಮುಖ ನೋಡತೊಡಗಿದರು.

ಇಷ್ಟಾಗುವಾಗ ಪಟೇಲರ ಮನೆಯ ಪಕ್ಕದಲ್ಲೇ ಇರುವ ಒಕ್ಕಲಿನಾಳು ಮಂಜ ತನ್ನ ಹೆಂಗಸಿನೊಡನೆ ಅಂಗಳಕ್ಕೆ ಕಾಲಿಟ್ಟವನೇ “ಒಡೆಯರೇ” ಎಂದು ಕೂಗಿದ. ಅವನ ಕೂಗು ಕೇಳಿ ವಾಸ್ತವಕ್ಕೆ ಬಂದ ಪಟೇಲರು ಹೆಬ್ಬಾಗಿಲಿಗೆ ಬಂದವರೇ “ಯಾಕೋ ಇಷ್ಟು ಬೇಗ ಬಂದ್ಬಿಟ್ಟೆ? ಏನಾಯ್ತು?” ಎಂದು ಕೇಳಿದಾಗ ಆ ಆಳು ಮಕ್ಕಳು ಗಲಿಬಿಲಿಯಾಗಿ ದಣಿಗಳ ಮುಖವನ್ನೊಮ್ಮೆ, ಅವರು ಕೈಯಲ್ಲಿ ಹಿಡಿದ ಕೋವಿಯನ್ನೊಮ್ಮೆ ನೋಡುತ್ತಾ “ಅಜ್ಜಮ್ಮಾ…” ಎಂದು ರಾಗ ಎಳೆದರು.

ಆಗ ಪಟೇಲರಿಗೆ ಪೂರ್ತಿ ಪ್ರಜ್ಞೆ ಬಂದಂತಾಗಿ, ಸಮಯಸ್ಫೂರ್ತಿಯಿಂದ ನಗುತ್ತಾ ಕೈಯಲ್ಲಿದ್ದ ಕೋವಿಯನ್ನು ನೋಡುತ್ತಾ ಅದನ್ನೆತ್ತಿ ಹೆಗಲಮೇಲಿಟ್ಟುಕೊಳ್ಳುತ್ತಾ “ಬೆಳಿಗ್ಗೆ ಗದ್ದೆ ಕಡೆ ಹೋಗಿದ್ದೆ. ಒಂದು ಹಿಂಡು ಕಾಡು ಹಂದಿ ಭತ್ತ ತಿನ್ನುತ್ತಿತ್ತು. ಗುಂಡು ಹೊಡೆದೆ. ಅದಕ್ಕೆ ನೀನು ಓಡಿ ಬರೋದೆ? ಹೋಗ್ ಹೋಗ್. ಬಿದ್ದ ತೆಂಗಿನಕಾಯಿಗಳನ್ನೆಲ್ಲಾ ಹೆಕ್ಕಿ ತಂದು ಕೊಟ್ಟಿಗೆಗೆ ಹಾಕು” ಎನ್ನುತ್ತಾ ಮೊಗಸಾಲೆ ಕಡೆ ತಿರುಗುತ್ತಿದ್ದವರು, ತೋಟದ ತಿರುವಿನಲ್ಲಿ ನಡೆದು ಬರುತ್ತಿದ್ದ ಇನ್ನಷ್ಟು ಜನರನ್ನು ಕಂಡು ವಿಚಲಿತರಾದರು. ಆಗ ಅವರಿಗೆ ತಾನು ಎಸಗಿದ ಬುದ್ಧಿಗೇಡಿ ಕೃತ್ಯದ ಅರಿವಾಯ್ತು.

ನೋಡ ನೋಡುತ್ತಿದ್ದಂತೆ ಅಲ್ಲಿ ನೂರಕ್ಕೆ ಕಡಿಮೆಯಿಲ್ಲದಂತೆ ಜನ ಜಮೆಯಾದರು.  ಪಟೇಲರಿಗೆ ಇರುಸು-ಮುರುಸಾಗತೊಡಗಿತು. ಆದರೆ ಅವರು ಎಷ್ಟಾದರೂ ಪಟೇಲರಲ್ಲವೇ? ತಕ್ಷಣ ಒಂದು ನಿರ್ಧಾರಕ್ಕೆ ಬಂದರು. ತಮ್ಮ ತಮ್ಮಲ್ಲೇ ಪಿಸುಗುಡುತ್ತಿದ್ದ ಜನರನ್ನುದ್ದೇಶಿಸಿ ಕೈ ಮುಗಿಯುತ್ತಾ “ಅಚಾತುರ್ಯವಾಗಿ ಹೋಯ್ತು. ಈಗ ನೀವೆಲ್ಲಾ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ..ಗಂಡಸರೆಲ್ಲಾ ಹಂದಿ ಬೇಟೆಗೆ ಹೋಗಲು ತಯಾರಾಗಿ ಬನ್ನಿ” ಎಂದವರೇ ಚಿನ್ನಪ್ಪನತ್ತ ತಿರುಗಿ, “ಬರುವಾಗ ನಿನ್ನ ಕಾಳು ನಾಯಿಯನ್ನು ಕರ್ಕೊಂಡು ಬಾ. ಹಾಗೇ ಕರಿಯನಿಗೆ ಅವನ ಬೊಗ್ಗಿ ನಾಯಿಯನ್ನು ಕರ್ಕೊಂಡು ಬರಲು ಹೇಳು” ಎಂದು ಸೂಚನೆ ಕೊಟ್ಟು ಕೋವಿಯನ್ನು ಹೆಗಲ ಮೇಲೆ ಇಟ್ಟುಕೊಂಡು ಅಡಿಕೆ ತೋಟದೊಳಗೆ ಮರೆಯಾದರು.

ಹೊರಗೆ ನಡೆಯುತ್ತಿರುವ ಸದ್ದಿಗೆ ದೊಡ್ಡಮನೆಯ ಜನರಿಗೆಲ್ಲಾ ಎಚ್ಚರವಾಯಿತು. ಅವರೆಲ್ಲ ಎದ್ದು ಅಡುಗೆ ಮನೆ, ದನದ ಕೊಟ್ಟಿಗೆಗಳನ್ನು ಸೇರಿಕೊಂಡರು. ಅವರು ಅತ್ತ ಹೊರಟ ಒಡನೆಯೇ ಮನೆಯಲ್ಲಿದ್ದ ಗಂಡಸರು-ಹೆಂಗಸರೆಲ್ಲಾ ಅಲ್ಲಲ್ಲಿ ಗುಂಪು ಸೇರಿಕೊಂಡು ಗುಸು ಗುಸು ಮಾತಾಡತೊಡಗಿದರು. ಕೆಲವರು “ವನಜಾ ಎಲ್ಲಿ?” ಎಂಬಂತೆ ಕಣ್ಣು ಹಾಯಿಸತೊಡಗಿದರು. ಆದರೆ ಯಾರೂ ದೇವರ ಕೋಣೆಯತ್ತ ದೃಷ್ಟಿ ಹಾಯಿಸಲಿಲ್ಲ. ಯಾಕೆಂದರೆ ಬೆಳಗಿನ ಪೂಜೆ ಮಾಡುವವರು ಸ್ವತಃ ಪಟೇಲರು. ಅದೂ ಹತ್ತು ಘಂಟೆಯ ಮೇಲೆ. ಹಾಗಾಗಿ ಯಾರೂ ಆ ಕಡೆ ಗಮನವೇ ಕೊಟ್ಟಿರಲಿಲ್ಲ. ಹಾಗೆ ಕೊಟ್ಟಿದ್ದರೆ. ಆಗ ಹೊರಗಿನಿಂದ ಬೀಗ ಹಾಕಿರುವುದು ಅವರ ಗಮನಕ್ಕೆ ಬಂದು ಅದನ್ನು ಯಾರನ್ನಾದರೂ ಪ್ರಶ್ನಿಸುವ ಪ್ರಮೇಯ ಬರುತ್ತಿತ್ತು.

ದೊಡ್ಡಮನೆಯ ದೊಡ್ಡ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮುಳುಗಿರುವಾಗಲೇ ಆ ಮನೆಯ ಸದಸ್ಯನೊಬ್ಬನ ತಲೆಯಲ್ಲಿ ಗೊಬ್ಬರದ ಹುಳುಗಳು ಓಡಾಡುತ್ತಿದ್ದವು. ಆತನಿಗೆ ತನ್ನ ಹೆಂಡತಿಯ ಶೀಲದ ಬಗ್ಗೆ ಸದಾ ಸಂಶಯವಿತ್ತು. ಪಟೇಲರು ತನ್ನ ಪತ್ನಿಯತ್ತ ನೋಡುವ ನೋಟ, ಮಾತಾಡಿಸುವ ರೀತಿ ಅವನಿಗೆ ಹೇಗೇಗೋ ಆಗುತ್ತಿತ್ತು. ಜೊತೆಗೆ ಪಟೇಲರ ಬಗ್ಗೆ ಈಕೆಯೂ ಆಸ್ಥೆ ವಹಿಸುತ್ತಿದ್ದಾಳೆಂಬುದು ಇವನ ಗುಮಾನಿ. ಒಂದು ರಾತ್ರಿ ದೇವರ ಕೋಣೆಯ ಪಕ್ಕದ ರೂಮಿನಿಂದ ಇವಳು ಹೊರಬಂದಿದ್ದನ್ನು ನೋಡಿದ ಮೇಲಂತೂ ಅವನ ತಲೆ ಪೂರ್ತಿ ಕೆಟ್ಟು ಹೋಗಿತ್ತು. ಅನಂತರದಲ್ಲಿ ಆತ ಸ್ವಲ್ಪ ಪತ್ತೆದಾರಿಕೆ ಕೆಲಸವನ್ನೂ ಮಾಡಿದ್ದ. ಆಗ ಅವನಿಗೆ ತಿಳಿದು ಬಂದಿದ್ದು ಏನೆಂದರೆ ಅವರಿಬ್ಬರ ನಡುವೆ ಏನೋ ನಡೀತಿದೆ ಅಂತ. ಆದರೆ ಆತ ಅವಸರದಲ್ಲಿ ಯಾವ ತೀರ್ಮಾನಕ್ಕೂ ಬರುವಂತಿರಲಿಲ್ಲ. ಆ ಮನೆತನದ ಪರಂಪರೆಯಂತೆ ಮುಂದಿನ ಪಟೇಲ್ ಗಿರಿ ಈತನದೇ ಆಗಿತ್ತು. ಅದಕ್ಕೆ ಊರಿನ ಒಪ್ಪಿಗೆಯೂ ಬೇಕಾಗಿತ್ತು. ಹಾಗಾಗಿ ತನ್ನ ಸನ್ನಡತೆಯನ್ನು ಆತ ಕನಿಷ್ಟ ಪಕ್ಷ ಅದು ಸಿಗುವಲ್ಲಿಯವರೆಗೂ ಕಾಪಾಡಿಕೊಳ್ಳಬೇಕಾಗಿತ್ತು.

ರಾತ್ರಿ ನಡೆದ ಪ್ರಹಸನ ಎಲ್ಲರಿಗೂ ಗುಟ್ಟಾಗಿ ಪ್ರಸರಣ ಆಗುತ್ತಿರುವಾಗಲೇ ಬೇಟೆಗೆ ಹೊರಟವರು ತಮ್ಮ ತಮ್ಮ ಕೋವಿ, ಬೇಟೆ ನಾಯಿಗಳ ಸಮೇತ ಅಂಗಳದಲ್ಲಿ ಜಮೆಯಾಗತೊಡಗಿದರು.. ಅಷ್ಟಾಗುವಾಗ ತೋಟಕ್ಕೆ ಹೋಗಿದ್ದ ಪಟೇಲರೂ ಅಂಗಳದಲ್ಲಿ ಹಾಜರಾದರು. ಗೆಲುವಿನಿಂದ ಕೂಡಿದ ಅವರ ಮುಖವೇ ಹೇಳುತ್ತಿತ್ತು. ಅವರು ಯಾವುದೋ ಒಕ್ಕಲಿನವರ ಮನೆಯಲ್ಲಿ ತಿಂಡಿ-ಕಾಫೀ ಮುಗಿಸಿ ಬಂದಿರಬೇಕೆಂದು. ಮನೆಗೆ ಬಂದವರೇ ಮೊಗಸಾಲೆಯ ಪಕ್ಕದ ಹಾಲ್ ನ ಅಟ್ಟದ ತೊಲೆಗೆ ತೂಗು ಹಾಕಿದ ಕೋವಿ ಚೀಲವನ್ನು ತೆಗೆದುಕೊಂಡರು. ಅದರಲ್ಲಿ ಎಷ್ಟು ತೋಟೆಗಳಿವೆ ಎಂದು ಪರಿಶೀಲಿಸಿದರು. ತಲೆಗೆ ಕಟ್ಟುವ ಟಾರ್ಚ್ ತಗೊಂಡು ಅದರ ಹಳೆಯ ಬ್ಯಾಟ್ರಿ ಬದಲಾಯಿಸಿ ಹೊಸದನ್ನು ಹಾಕಿದರು. ನಂತರ ಆ ಚೀಲವನ್ನು ಮಂಜನಿಗೆ ವರ್ಗಾಯಿಸಿ, ಆತನ ಹಿಂದೆ-ಮುಂದೆ ಸುತಾಡುತ್ತಿದ್ದ ಬೇಟೆನಾಯಿಗಳಾದ ಈರುಳ್ಳಿ, ಬೆಳ್ಳುಳ್ಳಿ ನಾಯಿಗಳ ತಲೆ ಸವರಿ, ಕಾಡಿನಲ್ಲಿ ಓಡಾಡಲೆಂದೇ ವಿದೇಶದಿಂದ ತರಿಸಿದ್ದೆನ್ನಲಾದ ಮಂಡಿತನಕ ಬರುವ ಬೂಟನ್ನು ಏರಿಸಿಕೊಂಡು ಹೆಗಲಮೇಲೆ ಕೋವಿಯನ್ನಿಟ್ಟುಕೊಂಡು ನಡೆದೇಬಿಟ್ಟರು.

ಶಕುಂತಲಾ ಅತ್ತೆ ಬೆಳಗ್ಗೆ ಎದ್ದೊಡನೆ ಹಾಲು ಕರೆಯಲು ದನದ ಕೊಟ್ಟಿಗೆಯತ್ತ ಹೋಗುತ್ತಾರೆ. ಆಕೆ ಹಾಲು ಕರೆದು ಒಲೆ ಮೇಲೆ ಕಾಯಿಸಲು ಇಟ್ಟ ಒಡನೆಯೇ, ಇನ್ನೊಬ್ಬಾಕೆ ಮೊಸರು ಕಡೆಯಲು ಕೂಡುತ್ತಾಳೆ. ಸಾಮಾನ್ಯವಾಗಿ ಆ ಮನೆಯಲ್ಲಿ ಯಾರು ಗರ್ಭಿಣಿ ಇರುತ್ತಾಳೋ ಅವಳು ಮೊಸರು ಕಡೆಯುವ ಸಹಜ ಹಕ್ಕನ್ನು ಪಡೆದುಕೊಂಡಿರುತ್ತಾಳೆ. ಮೊಸರು ಕಡೆಯುವ ಕ್ರಿಯೆ ಆಕೆಯ ಸ್ನಾಯುಗಳಿಗೆ ಬಲವನ್ನು ಕೊಡುತ್ತದೆ ಎಂಬುದು ತಲೆ ತಲಾಂತರದಿಂದ ಬಂದ ಅನುಭವದ ಮಾತು. ಹಾಗೆ ಮೊಸರು ಕಡೆಯುವ ಹಕ್ಕು ಕಳೆದ ಹಲವಾರು ತಿಂಗಳುಗಳಿಂದ ನನ್ನ ಅಮ್ಮನ ಪಾಲಿಗೆ ಬಂದಿತ್ತು. ಇಂದು ಕೂಡಾ ಆಕೆ ಎಂದಿನಂತೆ ಮೊಸರು ಕಡೆದು ದೊಡ್ಡ ಕಂಚಿನ ಲೋಟದಲ್ಲಿ ಸಿಹಿ ಮಜ್ಜಿಗೆಯನ್ನು ಸುರಿದು ಗಂಡನಿಗೆ ಕೊಡಲು ಮೊಗಸಾಲೆಗೆ ಹೊರಟಳು. ಅಡುಗೆ ಮನೆಯಿಂದ ಮೊಗಸಾಲೆಗೆ ಬರಬೇಕಾದರೆ ದಾಸ್ತಾನು ಕೊಠಡಿಯನ್ನು ಬಳಸಿಕೊಂಡು, ತೀರ ಆಪ್ತರಾದವರ ಸಮಾಲೋಚನಾ ಕೊಠಡಿಯನ್ನು ಹಾದು, ಎರಡು ಊಟದ ಕೋಣೆಗಳನ್ನು ದಾಟಿ ಬರಲು ಕನಿಷ್ಟ ಎರಡು ನಿಮಿಷಗಳಾದರೂ ಬೇಕು. ಲೋಟವನ್ನು ಕೈಯಲ್ಲೇ ಹಿಡಿದುಕೊಂಡೇ ಹಿಂದಿನ ರಾತ್ರಿಯ ಘಟನೆಗಳನ್ನು ಮನಃಪಟಲದಲ್ಲಿ ತಂದುಕೊಂಡ ಅಮ್ಮ, ಅಪ್ಪನನ್ನು ಎದುರಿಸಲು ಸರ್ವ ಸಿದ್ಧತೆ ಮಾಡಿಕೊಂಡೇ ಮೊಗಸಾಲೆಯಲ್ಲಿರುವ ಪಟೇಲರದೇ ಆದ ಪ್ರತ್ಯೇಕ ಕುರ್ಚಿಯನ್ನು ನೋಡುತ್ತಾರೆ. ಅದು ಖಾಲಿಯಾಗಿತ್ತು. ಅಲ್ಲೇ ಅವರ ತಲೆಯ ಮೇಲ್ಬದಿಗೆ ಅಡ್ಡದಿಂದ ಇಳಿಬಿದ್ದ ಕಿಂಡಿಯಲ್ಲಿ ಸದಾ ರಾರಾಜಿಸುತ್ತಿದ್ದ ಕೋವಿ ಸ್ವಸ್ಥಾನದಲ್ಲಿ ಇರಲಿಲ್ಲ. ಲೋಟವನ್ನು ಅಲ್ಲೇ ಇದ್ದ ಟೀಪಾಯಿ ಮೇಲಿಟ್ಟು ಹೆಬ್ಬಾಗಿಲಿಗೆ ಬಂದವರೇ “ಮಂಜ..ಮಂಜ..” ಎಂದು ಧ್ವನಿಯೆತ್ತಿ ಕೂಗಿದರು. ಆಗ ಅಲ್ಲೇ ಅಂಗಳ ಗುಡಿಸುತ್ತಿದ್ದ ಅವನ ಹೆಣ್ಣು ಅಯಿತೆ “ಅವರು ಊರು ಬೇಟೆಗೆ ಹೋದರು ಅಮ್ಮಾ” ಎಂದಳು.

ಅಮ್ಮ ಸ್ವಲ್ಪ ಹೊತ್ತು ಅಂಗಳದಲ್ಲೇ ನಿಂತಿದ್ದವರು ಮೆಲ್ಲನೆ ಒಳಗೆ ಬಂದರು. ಬಂದವರೇ ಹಿಂದಿನ ರಾತ್ರಿ ಮಂಗಲಸೂತ್ರಕ್ಕೆ ಜೋಡಿಸಿದ ಬೀಗದ ಕೈಯಿಂದ ಮುಚ್ಚಿದ್ದ ದೇವರ ಕೋಣೆಯ ಬಾಗಿಲನ್ನು ತೆರೆದರು. ಬಾಗಿಲು ತೆರೆದ ಸದ್ದಿಗೆ ಒಳಗಿದ್ದ ವನಜ ಚಿಕ್ಕಮ್ಮ ಬೆಚ್ಚಿದಂತೆ ಎದ್ದು ಕುಳಿತರು. ಅಮ್ಮ ಒಂದೂ ಮಾತಾಡದೆ ಆಕೆಯನ್ನು ಹೊರಹೋಗುವಂತೆ ಸನ್ನೆ ಮಾಡಿದರು. ಆಕೆ ಹೆದ ಹೆದರುತ್ತಲೇ ಹಿಂತಿರುಗಿ ನೋಡುತ್ತಲೇ ಕೋಣೆ ದಾಟಿ ಹೊರ ಹೋದಳು.

ದೊಡ್ಡಮನೆಯ ಕೆಲಸಗಳೆಲ್ಲ ಸಂಜೆಯತನಕ ಸರ್ವಸಾಧಾರಣ ರೀತಿಯಲ್ಲಿ ನಡೆಯತೊಡಗಿದವು.

ಹೊತ್ತು ನೆತ್ತಿಯ ಮೇಲೆ ಬಂದಾಗಿತ್ತು.. ಮಂಜ ಆ ದೊಡ್ಡಮನೆಯ ತೋಟದ ಅಂಚಿನಲ್ಲಿ ಏಳುತ್ತಾ, ಬೀಳುತ್ತಾ, ಏದುಸಿರು ಬಿಡುತ್ತಾ ಓಡಿಬರುತ್ತಿರುವುದು ಕಾಣಿಸಿತು. ಅವನ ಓಟದ ರೀತಿಯನ್ನು ನೋಡಿದವರಿಗೆ ಯಾವುದೋ ಒಂದು ಬೃಹತ್ ಅವಘಡ ಸಂಭವಿಸಿದೆಯೆಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆತ ಓಡುತ್ತಾ ಬಂದವನೇ ಹೆಬ್ಬಾಗಿಲನ್ನು ಅಂಗಳಕ್ಕೆ ಜೋಡಿಸುವ ಏಳು ಮೆಟ್ಟಲುಗಳನ್ನು ದಡದಡನೆ ಹತ್ತಿದವನೇ ಕೊನೆಯ ಮೆಟ್ಟಲಿಗೆ ತಲೆಯಿಟ್ಟು ಬೋರೆಂದು ಅಳತೊಡಗಿದ. ನಿಜವಾಗಿ ಹೇಳಬೇಕೆಂದರೆ ಮಂಜನಂತಹ ಅಸ್ಪೃಶ್ಯರಿಗೆ ಕೆಳಮೆಟ್ಟಲವರೆಗೆ ಮಾತ್ರ ಬರಲು ಅವಕಾಶವಿತ್ತು. ಅಂತಹದ್ದರಲ್ಲಿ ಆತ ಅದನ್ನೆಲ್ಲ ಮರೆತು ಹೆಬ್ಬಾಗಿಲ ತನಕ ಬಂದನೆಂದರೆ….

ಮಂಜನ ರೋದನ ಕೇಳಿದ ಆ ದೊಡ್ಡ ಮನೆಯ ಸಂದು ಗೊಂದಿನಲ್ಲಿದ್ದ ಜೀವ ರಾಶಿಯೆಲ್ಲಾ ಹೆಬ್ಬಾಗಿಲಿಗೆ ಹರಿದು ಬಂತು. ಆತನನ್ನು ಮುಟ್ಟುವಂತಿಲ್ಲ. ಆದರೂ ಅಮ್ಮ ಆತನ ಬೆನ್ನ ಮೇಲೆ ಕೈಯಿಟ್ಟು “ಏನಾಯ್ತು” ಅಂದರು. ಆತ ಬಿಕ್ಕಳಿಸುತ್ತಲೇ ತಡೆ ತಡೆದು ಹೇಳಿದ: “ಪಟೇಲರು..ಗುಂಡು ಹೊಡೆದುಕೊಂಡು ಜೀವ ಬಿಟ್ಟರು.” ಅಮ್ಮ ತಕ್ಷಣ ಅಲ್ಲೇ ಕುಸಿದು ಬಿದ್ದರು. ಹೆಂಗಸರೆಲ್ಲಾ ಅವರನ್ನು ಹಗುರವಾಗಿ ನಡೆಸಿಕೊಂಡು ಮೊಗಸಾಲೆಯಲ್ಲಿ ಸದಾ ಹರವಿಕೊಂಡಿರುತ್ತಿದ್ದ ಗಾದಿಯ ಮೇಲೆ ಮಲಗಿಸಿ ಬೀಸಣಿಗೆಯಿಂದ ಗಾಳಿ ಬೀಸುತ್ತಲೇ ಹೆಬ್ಬಾಗಿಲಿಗೆ ಕಣ್ಣು, ಕಿವಿಗಳನ್ನು ಕೇಂದ್ರೀಕರಿಸಿದರು.

ಇಡೀ ದೊಡ್ಡಮನೆಯೇ ಆ ಕ್ಷಣಗಳಲ್ಲಿ ಸ್ತಬ್ಧವಾದಂತಿತ್ತು.. ಆಗ ತಕ್ಷಣ ಎಚ್ಚೆತ್ತುಕೊಂಡವರು ಶಕುಂತಲಾ ಅತ್ತೆ. ಆಕೆ ಒಳಗೆ ಹೋಗಿ ದೊಡ್ಡ ಚೆಂಬಿನಲ್ಲಿ ನೀರು ಮಜ್ಜಿಗೆಯನ್ನು ತಂದು ಮಂಜನ ಕೈಯಲ್ಲಿಟ್ಟು “ಇದನ್ನು ಕುಡಿ” ಎಂದು ಸನ್ನೆ ಮಾಡಿ ಒಳಗೆ ಹೋದರು. ಬರುವಾಗ ಅವರ ಕೈಯಲ್ಲಿ ತಾನು ತೋಟಕ್ಕೆ ಹೋಗುವಾಗಲೆಲ್ಲ  ಹಿಡಿದುಕೊಳ್ಳುತ್ತಿದ್ದ ದೊಡ್ಡಕತ್ತಿಯಿತ್ತು. ಅಲ್ಲಿ ಬೇಟೆಗೆ ಹೋಗದೆ ಇರುವ ಮನೆಯ ಗಂಡಸರನ್ನು ಕರೆದು “ನಡೀರಿ ಕಾಡಿಗೆ ಹೋಗೋಣ” ಎಂದು ಮಂಜನನ್ನು ಎಬ್ಬಿಸಿ ಹೊರಟೇಬಿಟ್ಟರು. ಉಳಿದ ಹೆಂಗಸರು-ಮಕ್ಕಳೆಲ್ಲ ಏನು ಮಾಡುವುದೆಂದು ಗೊತ್ತಾಗದೆ ಅಲ್ಲಲ್ಲೇ ಕುಳಿತು ಗುಸುಗುಸು ಮಾತಾಡುತ್ತಾ, ಕಣ್ಣೀರು ಒರೆಸಿಕೊಳ್ಳುತ್ತಾ ತೋಟದ ದಾರಿಯೆಡೆಗೆ ಕಣ್ಣು ನೆಟ್ಟರು.

ಶಕುಂತಲಾ ಅತ್ತೆ ಘಟನಾ ಸ್ಥಳಕ್ಕೆ ಬಂದಾಗ ಅಲ್ಲಾಗಲೇ ಕೆಂಪು ಟೋಪಿಯ ಪೋಲಿಸರು ಹಾಜರಾಗಿ ತಮ್ಮ ಪುಸ್ತಕದಲ್ಲಿ ಏನೇನೋ ಬರೆದುಕೊಳ್ಳುತ್ತಿದ್ದರು. ಅಲ್ಲೇ ದೂರದಲ್ಲಿದ್ದ ದೊಡ್ಡಮನೆಯ ಗಂಡಸೊಬ್ಬರು ಶಕುಂತಲತ್ತೆಯನ್ನು ಮತ್ತು ಅವರ ಜೊತೆ ಬಂದವರನ್ನು ಅಲ್ಲಿಗೆ ಕರೆದುಕೊಂಡು ಹೋದರು. ಅಲ್ಲಿ ಮರವೊಂದಕ್ಕೆ ಒರಗಿ ಕುಳಿತಂತೆ ಪಟೇಲರು ಕಾಲು ನೀಡಿ ಕುಳಿತಿದ್ದಾರೆ. ಅವರ ಎದುರಿನಲ್ಲಿ ಒಂದು ಗಟ್ಟಿ ಬುಡವಿರುವ ಕುರುಚಲು ಪೊದೆಯಿದೆ. ಅದರ ಮೇಲೆ ಕೋವಿಯನ್ನಿಟ್ಟಿದ್ದಾರೆ. ಕೋವಿಯ ನಳಿಗೆ ಎದೆಯನ್ನು ಒತ್ತಿದೆ. ಇದನ್ನು ನೋಡಿದ ಯಾರೂ ಬೇಕಾದರೂ ಊಹಿಸಿಕೊಳ್ಳಬಹುದಾಗಿತ್ತು; ಅವರು ಬಲಗಾಲಿನಿಂದ ಕುದುರೆಯನ್ನು(ಟ್ರಿಗರ್) ಮೀಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು. ಶಕುಂತಲ ಅತ್ತೆ ಉಕ್ಕಿಬರುತ್ತಿರುವ ಅಳುವನ್ನು ಹತ್ತಿಕ್ಕುತ್ತಲೇ ನುರಿತ ಪತ್ತೆದಾರಳಂತೆ ಹೆಣದ ಹಿಂದೆ ಮುಂದೆ, ಎಡ ಬಲ ಪರಿಶೀಲಿಸಿದರು. ನಂತರ ಅಲ್ಲಿದ್ದವರೊಡನೆ ಸ್ವಲ್ಪ ಹೊತ್ತು ಮಾತಾಡಿ ಬಂದಷ್ಟೇ ವೇಗದಲ್ಲಿ ಮನೆಗೆ ಹಿಂದಿರುಗಿದರು.

ಶಕುಂತಲ ಅತ್ತೆ ಬರುವುದನ್ನೇ ಕಾಯುತ್ತಿದ್ದ ದೊಡ್ಡಮನೆಯ ಜನರು ಆಕೆಯನ್ನು ಸುತ್ತುವರಿದು ಪ್ರಶ್ನೆಗಳ ಸುರಿಮಳೆಗರೆದರು. ಆಕೆ ಹೇಳುತ್ತಿದ್ದುದನ್ನೆಲ್ಲಾ ಕೇಳುತ್ತಿದ್ದಂತೆ ಎಲ್ಲರೂ ದೊಡ್ಡ ಧ್ವನಿ ತೆಗೆದು ಅಳಲು ಪ್ರಾರಂಭಿಸಿದರು. ಮೊಗಸಾಲೆಯಲ್ಲಿ ಮಲಗಿದ್ದ ಅಮ್ಮನೆಡೆಗೆ ಶಕುಂತಲಾ ಅತ್ತೆ ಬಂದು ಅದೇನೋ ಗುಸುಗುಸು ಮಾತಾಡಿದರು. ಅಮ್ಮ ಒಮ್ಮೆಗೇ “ನನಗ್ಯಾಕೋ ಭಯವಾಗುತ್ತಿದೆ..ನಾನೇನು ಮಾಡಲಿ?” ಎಂದು ಬಿಕ್ಕಳಿಸಿದರು. ಸ್ವಲ್ಪ ಹೊತ್ತು ಹಾಗೇ ಇದ್ದವರು ಏನೋ ನಿರ್ಧಾರಕ್ಕೆ ಬಂದವರಂತೆ ಎದ್ದು ನಿಂತರು. ನಿಧಾನವಾಗಿ ತನ್ನ ಕೋಣೆಗೆ ಬಂದವರೇ ಒಂದು ಸೀರೆಯನ್ನು ಎರಡಾಗಿ ಮಡಚಿ ನೆಲದಲ್ಲಿ ಹಾಸಿದರು. ಅದರಲ್ಲಿ ನನ್ನ ಮತ್ತು ಅವರ ಒಂದೆರಡು ಬಟ್ಟೆಗಳನ್ನು ಹಾಕಿದರು. ಅದನ್ನು ಗಂಟು ಕಟ್ಟಿ ಕಂಕುಳಲ್ಲಿಟ್ಟುಕೊಂಡವರೇ ನನ್ನ ಕೈ ಹಿಡಿದು ಎಳೆಯುತ್ತಾ “ಬಾ ನಿನ್ನ ಅಜ್ಜ ಮನೆಗೆ ಹೋಗೋಣ” ಎಂದು ಮೊಗಸಾಲೆಯನ್ನು ದಾಟಿಬಿಟ್ಟರು. ಅಲ್ಲಿ ನೆರೆದಿದ್ದ ಜನರೆಲ್ಲಾ ಏನಾಯ್ತು ಎಂದು ಗ್ರಹಿಸುವಷ್ಟರಲ್ಲೇ ಅಮ್ಮ ಅಂಗಳದಲ್ಲಿಳಿದು ತೋಟದ ಎದುರಿನ ಹಾದಿಯನ್ನು ಬಿಟ್ಟು ಹಿತ್ತಿಲ ಹಾದಿಯತ್ತ ನಡೆಯತೊಡಗಿದರು. “ಎಂಟು ತಿಂಗಳ ಗರ್ಭಿಣಿ ನೀನು. ಈ ಸಂದರ್ಭದಲ್ಲಿ ಹೀಗೆಲ್ಲಾ ಉದ್ವೇಗ ಪಡಬಾರದು” ಎನ್ನುತಾ ಕೆಲವು ಹೆಂಗಸರು ಅಮ್ಮನ ಹಿಂದೆ ಓಡಿಬಂದರು.. ಆಗ ಅಮ್ಮ ತನ್ನ ಕೈಯಲ್ಲಿದ್ದ ಕತ್ತಿ ತೋರಿಸಿ “ಯಾರಾದರೂ ನನ್ನನ್ನು ತಡೆದರೆ ಈ ಕತ್ತಿಯಿಂದಲೇ ಕುತ್ತಿಗೆ ಕಡಿದುಕೊಂಡು ಸತ್ತುಬಿಡುತ್ತೇನೆ” ಎಂದವಳೇ ಹಿತ್ತಲಿನ ಏರು ಹತ್ತಿ, ಹಿಂಬದಿಯ ಹರಿಯುವ ಹೊಳೆಯಲ್ಲಿಳಿದಳು. ಆಚೆ ದಡ ತಲುಪಿದವಳೇ. ಬಟ್ಟೆಯ ಗಂಟನ್ನು ದಡದ ಮೇಲೆ ಇಟ್ಟಳು. ನನ್ನ ಕೈ ಹಿಡಿದುಕೊಂಡು ಹೊಳೆಯ ಮಧ್ಯಕ್ಕೆ ಬಂದು ಮೂರು ಮುಳುಗು ಹಾಕಿ ಆಚೆ ದಡಕ್ಕೆ ಹೋಗಿ ಬೇರೆ ಬಟ್ಟೆಯನ್ನುಟ್ಟು ನನ್ನ ಮತ್ತು ಆಕೆಯ ಬಟ್ಟೆಯನ್ನು ಕಳಚಿ ನದಿಯ ಮಧ್ಯಕ್ಕೆ ಎಸೆದುಬಿಟ್ಟಳು.

ನಡೆದೂ ನಡೆದು, ಗುಡ್ಡ ಬೆಟ್ಟ ಹತ್ತಿಳಿದು ಹೊತ್ತು ಮುಳುಗುವ ವೇಳೆಗೆ ನಾವು ನಾಗೂರಿನ ಶಾಲೆಯ ಹತ್ತಿರದಲ್ಲಿದ್ದೆವು. ಅಮ್ಮ ಅಲ್ಲಲ್ಲಿ ನಿಂತು ದಣಿವಾರಿಸಿಕೊಳ್ಳುತ್ತಿದ್ದಳು. “ಅಮ್ಮಾ..ಭಗವತಿ..ತಾಯಿ ರಕ್ತೇಶ್ವರಿ..” ಎಂದೆಲ್ಲಾ ಗೊಣಗಿಕೊಳ್ಳುತ್ತಿದ್ದಳು. ನನಗೆ ಹಸಿವು ಬಾಯಾರಿಕೆಯಲ್ಲಿ ಜೀವ ಹೋದಂತಾಗಿತ್ತು. ಶಾಲೆಯ ಹತ್ತಿರ ಬಂದಾಗ “ಅಮ್ಮಾ..ಅಮ್ಮಾ..” ಎಂದು ನರಳುತ್ತಾ ಒಂದು ಮರದ ಬುಡದಲ್ಲಿ ಹೊಟ್ಟೆ ಹಿಡಿದುಕೊಂಡು ಕುಳಿತುಬಿಟ್ಟಳು. ನನಗೆ ಏನೂ ತೋಚದೆ ಅವಳ ಪಕ್ಕದಲ್ಲಿ ಕುಳಿತುಬಿಟ್ಟೆ. ಅವಳು ನನ್ನ ಕೈಯನ್ನು ಹಿಡಿದುಕೊಂಡು “ಅಕ್ಕಪಕ್ಕದಲ್ಲಿ ಯಾವುದಾದರೂ ಮನೆಯಿದ್ದರೆ ಅಲ್ಲಿರುವವರನ್ನು ಕರೆದುಕೊಂಡು ಬಾ” ಎನ್ನುತ್ತಾ ಮರದ ಬೊಡ್ಡೆಗೆ ಒರಗಿಕೊಂಡಳು. ನಾನು ಅಲ್ಲಿಂದ ಓಡಿದೆ.

ಇತ್ತ ಊರವರು ಪಟೇಲರ ಹೆಣವನ್ನು ದೊಡ್ಡಮನೆಗೆ ಹೊತ್ತು ತಂದರು. “ಅತ್ತಿಗೆ” ಎನ್ನುತ್ತಾ ಮೈದುನಂದಿರು ಆಕೆಗಾಗಿ ಹುಡುಕಾಡಿದರೆ ಮನೆಯಲ್ಲಿ ಆಕೆಯಿಲ್ಲ. ವಿಷಯ ತಿಳಿದ ಮೊದಲ ಮೈದುನ ಆಕೆಯನ್ನು ತಾನು ಕರೆತರುವುದಾಗಿ ಉಳಿದ ಕಾರ್ಯಗಳ ಏರ್ಪಾಡು ಮಾಡಲು ಅಲ್ಲಿದ್ದವರಿಗೆ ಸೂಚನೆ ನೀಡಿ ಸೈಕಲ್ ಹತ್ತಿ ಹೊರಟ. ಅವನಿಗೆ ಅತ್ತಿಗೆಯ ತವರಿನ ಹಾದಿ ಗೊತ್ತಿತ್ತು. ಅಲ್ಲಿಂದ ಸುಮಾರು ಎಂಟು ಮೈಲಿನ ಹಾದಿಯದು. ಸುಮಾರು ನಾಲ್ಕು ಮೈಲಿ ಕಳೆದು ನಾಗೂರಿನ ಶಾಲೆಯ ಹತ್ತಿರ ಬಂದಾಗ ಶಾಲೆಯ ಮುಂದೆ ನಾಲ್ಕೈದು ಹೆಂಗಸರು ನಿಂತಿದ್ದು ಆತನ ಕಣ್ಣಿಗೆ ಬಿತ್ತು. ಅವರ ನಡುವೆ ನಿಂತಿದ್ದ ನಾನು ಚಿಕ್ಕಪ್ಪನ ಕಣ್ಣಿಗೆ ಬಿಳಬಾರದೆಂದು ಪ್ರಯತ್ನಪಡುತ್ತಿರುವಾಗಲೇ ಅವನು ನನ್ನನ್ನು ನೋಡಿಬಿಟ್ಟ. ನಾನಿದ್ದಲ್ಲಿಗೇ ಬಂದುಬಿಟ್ಟ. ಅಲ್ಲಿದ್ದ ಹೆಂಗಸರ ಹತ್ತಿರ ಮಾತಾಡಿದ. ಶಾಲೆಯ ಒಂದು ಕೋಣೆಯ ಮುಚ್ಚಿನ ಬಾಗಿಲ ಮುಂದೆ ನಿಂತು “ಅತ್ತಿಗೆ ಹೆದರಬೇಡಿ. ನಿಮ್ಮನ್ನು ತವರು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿಸುತ್ತೇನೆ.. ನಾನು ಮನೆಗೆ ಹೋಗುವೆ. ಅಲ್ಲಿ ಮುಂದಿನ ಕಾರ್ಯ ಮಾಡಬೇಕಾಗಿದೆ. ನಾಳೆ ನಾಡಿದ್ದರಲ್ಲಿ ನಾವು ನಿಮ್ಮನ್ನು ಬಂದು ಕಾಣುವೆ” ಎಂದು ಹೇಳಿದವನೇ ನನ್ನ ನೆತ್ತಿ ಸವರಿ “ಬಾ ಸೈಕಲ್ಲಿನಲ್ಲಿ ಮನೆಗೆ ಹೋಗುವ” ಎಂದ. ಆದರೆ ನಾನು ಹೋಗಲು ಒಪ್ಪಲಿಲ್ಲ. ಆಗ ಚಿಕ್ಕಪ್ಪ ಅಲ್ಲೇ ಇದ್ದ ಗಂಡಸೊಬ್ಬನನ್ನು ಕರೆದು ನನ್ನನ್ನು ಅಜ್ಜನ ಮನೆಗೆ ಕರೆದೊಯ್ದು ವಿಷಯ ಮುಟ್ಟಿಸುವಂತೆ ತಿಳಿಸಿ ತಾನು ಸೈಕಲ್ ಹತ್ತಿ ಹೊರಟ.

ಆಗ ಆ ಗಂಡಸು – ನಾನವರನ್ನು ಮಾಮ ಎಂದು ಇವತ್ತಿಗೂ ಕರೆಯುತ್ತೇನೆ – ಒಬ್ಬ ಹೆಂಗಸಿನೊಡನೆ ಮಾತಾಡಿ ನನಗೆ ಹಾಲು, ಬಾಳೆ ಹಣ್ಣು ಮತ್ತು ಎರಡು ದೋಸೆಗಳನ್ನು ತರಿಸಿಕೊಟ್ಟರು. ನಾನದನ್ನು ಗಬಗಬನೆ ತಿಂದೆ. ಆಮೇಲೆ ಅವರು “ಬಾ ಅಜ್ಜನ ಮನೆಗೆ ಹೋಗೋಣ” ಎಂದು ನನ್ನನ್ನೆತ್ತಿ ಭುಜದ ಮೇಲೆ ಕೂರಿಸಿಕೊಂಡರು. ನಾನು ಅವರ ಕೊರಳ ಸುತ್ತ ಎರಡು ಕಾಲುಗಳನ್ನು ಇಳಿಬಿಟ್ಟು ಅವರ ತಲೆಯನ್ನು ಹಿಡಿದುಕೊಂಡು ಆರಾಮದಿಂದ ಕೂತು ಅಲ್ಲಿದ್ದವರನ್ನು ತಿರುಗಿ ನೋಡುತ್ತಾ ಅಜ್ಜನ ಮನೆಯತ್ತ ಹೊರಟೆ.

ಆ ರಾತ್ರಿ ಆ ಶಾಲೆಯಲ್ಲಿ ನನ್ನ ತಮ್ಮ ಹುಟ್ಟಿದ. ಮರುದಿನ ಬೆಳಗಿನ ಜಾವ ಅಜ್ಜ ಡೋಲಿ ತಂದು ಮಗಳು ಮತ್ತು ಮೊಮ್ಮಗನನ್ನು ತನ್ನ ಮನೆಗೆ ಕರೆದುಕೊಂಡು ಹೋದವನು ಮತ್ತೆಂದೂ ದೊಡ್ಡಮನೆಗೆ ಕಳುಹಿಸಿಕೊಡಲಿಲ್ಲ. ಅಮ್ಮ ತಾನು ಬದುಕಿರುವ ತನಕವೂ ಆ ಮನೆಯ ಮೆಟ್ಟಲು ತುಳಿಯಲಿಲ್ಲ ಮತ್ತು ನಾವು ದೊಡ್ಡಮನೆಗೆ ಸೇರಿದವರೆಂಬುದನ್ನೂ ಬಾಯಿತಪ್ಪಿಯೂ ಹೇಳಲಿಲ್ಲ. ಆದರೆ ಅಜ್ಜನ ಕಾಲಾಂತರದಲ್ಲಿ ಅಮ್ಮ ಆ ಮನೆಯಿಂದಲೂ ಹೊರದಬ್ಬಿಸಿಕೊಂಡಳು. ಅದೂ ತಾನು ಹೆತ್ತ ಮಗನಿಂದಲೇ.. ಸಾಯುವ ಕಾಲಕ್ಕೆ ಆಕೆ ಬೀದಿ ಹೆಣವಾದಳು ಎಂಬುದನ್ನು ನೆನಪಿಸಿಕೊಂಡರೇ ನನ್ನ ಕೊರಳುಬ್ಬಿ ಬರುತ್ತದೆ; ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.

ಆಗ ನಾನು ದೂರ ದೇಶದಲ್ಲಿದ್ದೆ; ಅಸಹಾಯಕಳಾಗಿದ್ದೆ…

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: