ಲಂಕೇಶರ ‘ಅವ್ವ’ : ದುಡಿಮೆಯಲ್ಲಿ ಜೀವಿಸುವ ಅವಿರತ ತೀವ್ರತೆ

ಎನಿಗ್ಮಾ ಪೋಸ್ಟ್

ನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು,
ಹೆಂಟೆಗೊಂಡು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ
ಹಸುರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?

ಸತಿಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು;

ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.

ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ.

~

ಪಾರ್ವತಿದೇವಿ ಕೊಳೆಯಿಂದ ಕೂಡಿದ ತನ್ನ ಮೈಯ ಬೆವರಿಂದಲೇ ಗೊಂಬೆ ಮಾಡಿ ಅದಕ್ಕೆ ಜೀವ ಕೊಟ್ಟಳು; ಆತನೇ ಗಣಪತಿ ಎಂಬ ಕಥೆಯೊಂದು ಬರುತ್ತದೆ. ಕೃಷಿ ಸಂಸ್ಕೃತಿಯ ಮನಸ್ಸು ತಾಯಿ ಮತ್ತು ಮಗುವಿನ ಸಂಬಂಧವನ್ನು ರೂಪಕಗೊಳಿಸಿರುವ ಬಗೆಗಿನ ಅನನ್ಯ ನಿದರ್ಶನ ಈ ಕಥೆ.

ಲಂಕೇಶರ “ಅವ್ವ” ಕವಿತೆಯನ್ನು ಓದಿಕೊಳ್ಳುವಾಗೆಲ್ಲ, ಈ ಕಥೆಯೊಳಗಿನ ನೆಲದ ಗುಣವೇ ತಾನಾಗಿರುವ ಅವ್ವ ಕಾಣುತ್ತಾಳೆ. ಈ ಅವ್ವ ತನ್ನ ಸಂತಾನವನ್ನು ತನ್ನ ಬೆವರಿಂದಲೇ ಬಾಳಿಸುವವಳು. ನೆಲ, ಕೃಷಿ, ದುಡಿಮೆ, ಕುಟುಂಬ ಹೀಗೆ ಸಾಂದ್ರವಾದ ತನ್ಮಯತೆಯ ಹರಿವು ಆಕೆ.

“ನನ್ನವ್ವ ಫಲವತ್ತಾದ ಕಪ್ಪು ನೆಲ” ಎಂಬುದೇ ಒಂದು ಬೆಳಕಿನ ಸಾಕ್ಷಾತ್ಕಾರದ ಹಾಗಿದೆ. ನೆಲವನ್ನು ಬಿಟ್ಟು ಬದುಕಿಲ್ಲ; ಹಾಗೇ ತಾಯಿಯಿದ್ದರೇನೇ ಸಾತತ್ಯ. ಶ್ರಮ ಸಂಸ್ಕೃತಿಯನ್ನೂ ಮಾತೃ ಪರಂಪರೆಯನ್ನೂ ಒಂದೆಡೆಯಲ್ಲಿ ಕಂಡುಕೊಳ್ಳುವ ಪ್ರತಿಮೆ ಇದು.

“ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ”

ಈ ಅವ್ವನ ಕಥೆ, ಮಗುವಿಗೆ ಹಾಲೂಡಿದರೆ ಎದೆ ಬಿಗುವು ಸೋರಿಹೋದೀತು ಎಂದು ಆತಂಕಗೊಳ್ಳುವ “ಪೇಜ್ ಥ್ರೀ” ಮಮ್ಮಿಯದ್ದಲ್ಲ; ಬದಲಾಗಿ ನಿರಂತರ ಜೀವ ತೇಯುವ, ಎಲ್ಲ ನೋವನ್ನೂ ಒಂದು ನಿಟ್ಟುಸಿರಲ್ಲೇ ನುಂಗಿಕೊಳ್ಳುವ ಶಕ್ತಿವಂತೆಯ ಕಥೆ. ಮಗು ಪಡುವ ಅನೂಹ್ಯ ಸುಖದಲ್ಲೇ ಅವಳ ತಾಯ್ತನದ ಚೆಲುವು ಪುಳಕ ಗಳಿಸುತ್ತದೆ.

“ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ”

-ಹೀಗೆ ಯಾನ ಮುಗಿಸುವ ಅವ್ವ, ಅನ್ನ ಕೊಡುವ ಹೊಲದ ಕಸುವಿಗಾಗಿ, ಜೀವನದ ಜೊತೆಗಾರನ ಸಂತೋಷಕ್ಕಾಗಿ ತನ್ನದೆಂಬುವ ಪ್ರತಿ ಕ್ಷಣವನ್ನೂ ಒತ್ತೆಯಿಟ್ಟಿದ್ದವಳು. “ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ” ದುಡಿಮೆಯಲ್ಲಿ ತಾದಾತ್ಮ್ಯ ಸಾಧಿಸಿದ ಅವಳದ್ದು ನಿಸ್ವಾರ್ಥ ಪಯಣ: “ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.”

ಇವಳು ಕಣ್ಣೀರಿಟ್ಟಿದ್ದು ದಾರಿದ್ರ್ಯದ ದಣಿವಿನಲ್ಲಿ, ಕೈಗೆ ಫಸಲು ಬಾರದ ದುಃಖದಲ್ಲಿ, ಮನೆಯೊಳಗಿನ ಕರು ಸತ್ತು ಹೋದದ್ದರ ಕುರಿತ ತೀವ್ರ ಯಾತನೆಯಲ್ಲಿ. ಹಟ್ಟಿಯ ಮುದಿಯೆಮ್ಮೆ ತಪ್ಪಿಸಿಕೊಂಡಾಗೆಲ್ಲ ಪ್ರಾಣವನ್ನೇ ಹುಡುಕುವವಳ ಧಾವಂತದಲ್ಲಿ ಊರೂರು ಅಲೆದ ಈ ಅವ್ವ ಒಂದು ಕಾಳಜಿ, ಒಂದು ಕಳಕಳಿ, ಒಂದು ಸಂಸ್ಕೃತಿ, ಒಂದು ಪರಂಪರೆ.

ಹಾಗೆಂದು ಸತಿ ಸಾವಿತ್ರಿಯಂಥವರ ಆದರ್ಶವೇನೂ ಇವಳ ಮುಂದಿರಲಿಲ್ಲ. ಅದರ ಗರಜೂ ಇವಳಿಗಿರಲಿಲ್ಲ. ತನ್ನದೇ ಧಾಟಿಯಲ್ಲಿ ಬದುಕಿನ ಹಾಡು ಹಾಡಿದವಳು. ಅತ್ಯಂತ ಸಹಜವಾಗಿ, ಎಲ್ಲ ಸಿಟ್ಟು, ಸೆಡವು, ಸಣ್ಣತನಗಳ ಕಂತೆಯೇ ಆಗಿ ಬಾಳ ದಾರಿ ನಡೆದವಳು. ಆದರೆ ಅದೆಲ್ಲದರ ಹಿಂದೊಂದು ಸೂತ್ರವಿತ್ತು:

“ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.”

ಯಾವುದೇ ಸಂಗತಿಯ ಮೇಲೆ ಇಂಥದೊಂದು ಪೊಸೆಸಿವ್ ಆದ ಒಳಗೊಳ್ಳುವಿಕೆ ಸಾಧ್ಯವಾಗುವುದು ಅದರ ಕುರಿತ ನಿಷ್ಕಳಂಕ ಪ್ರೀತಿಯಿಂದ ಮಾತ್ರ. ಇದು ಸೋಗಿನ ಹಂಗು ಬೇಡುವುದಿಲ್ಲ. ಎಲ್ಲರಿಗೂ ಕೋಲೆ ಬಸವನ ಹಾಗೆ ಹೂಂ ಹೂಂ ಎನ್ನುತ್ತ, ಎಲ್ಲರನ್ನೂ ಮೆಚ್ಚಿಸುತ್ತ ತನ್ನ ಒಳ್ಳೆಯತನವನ್ನು ಸ್ಥಾಪಿಸಲು ಹೊಂಚುವುದಿಲ್ಲ. ಬದಲಾಗಿ, ಸಿಟ್ಟು ಅಥವಾ ದ್ವೇಷವನ್ನು ಎದುರಿಸುವುದಾದರೂ ಸರಿಯೆ, ಸತ್ಯದ ಅಲಗಿಗೆ ಒಡ್ಡಿಕೊಳ್ಳಬೇಕು ಎಂಬ ಸ್ವಾಭಿಮಾನದ ದೃಢತೆಯೊಂದಿಗಿರುತ್ತದೆ. ಅವ್ವ ಅಂಥವಳಾಗಿದ್ದವಳು.

“ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳು ಕಡ್ಡಿಗೆ ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ರೊಟ್ಟಿ, ಹಚಡಕ್ಕೆ
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.”

ಬದುಕುವುದಕ್ಕೆ ಯಾವುದೇ ಉದಾತ್ತವಾದ ನೆಪಗಳು ಬೇಕಿಲ್ಲ. ಶ್ರಮ ಸಂಸ್ಕೃತಿಯ ತಳಪಾಯವೇ, “ಶರೀರ ನಶ್ವರ” ಎಂಬ ಆತ್ಮವಂಚಕ ನಿಲುವಿನಿಂದ ದೂರ ಕಾಯ್ದುಕೊಳ್ಳುವುದು. ಅಸ್ತಿತ್ವದ ಪ್ರಶ್ನೆಯಲ್ಲೇ ಸತ್ಯದ ಬೆಳಕಿಗಾಗಿ ಕಾಯುವುದು. ಇರುವಷ್ಟು ದಿನ ತಲೆ ಬಾಗದೆ ಬದುಕುವ ಬಲವನ್ನು ಹಂಬಲಿಸುವುದು. ಹೀಗೆ ದುಡಿಮೆಯೊಂದಿಗೆ ಅವಿನಾಭಾವವೆಂಬಂತೆ ಒಂದಾಗಿ ಹೋಗಿದ್ದ ಅವ್ವ, ದುಡಿಯುತ್ತ ದುಡಿಯುತ್ತಲೇ ಸಾವಿನ ಬಾಗಿಲಲ್ಲೂ ನಿರಾಯಾಸವಾಗೇ ನಡೆದುಬಿಡುತ್ತಾಳೆ. “ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ” ಹೊರಟು ಹೋಗುತ್ತಾಳೆ.

ಅಷ್ಟೊಂದು ತೀವ್ರವಾಗಿ ಬದುಕಿದ್ದ ಅವ್ವ ಮತ್ತು ಹಾಗೆ ನಿರಾಳವಾಗಿ ಸಾವಿನೊಳಗೆ ನಡೆದುಬಿಟ್ಟ ಅವ್ವ -ಈ ಎರಡೂ ಚಿತ್ರಗಳು ಬಹುವಾಗಿ ಕಾಡುತ್ತವೆ. ಆರ್ದ್ರವಾದ ಸಂಬಂಧವೊಂದರ ಅಗಲುವಿಕೆಗೂ ಕರಗಿ ಕಣ್ಣೀರಾಗದವರ ಕಾಲದಲ್ಲಿ, ಅವ್ವ ಅದೊಂದು ಮುದಿಯೆಮ್ಮೆಗಾಗಿ, ಸತ್ತ ಕರುವಿಗಾಗಿ ಅಳುತ್ತ ಕೂತದ್ದು ಕಾಣಿಸುತ್ತದೆ.

ಬಹುಶಃ ಎಲ್ಲ ಅಳುವಿನ ಚಿತ್ರಗಳಲ್ಲೂ ಅವ್ವ ಮಸುಕು ಮಸುಕಾಗಿ ಇದ್ದೇ ಇರುತ್ತಾಳೆ.

ಲಂಕೇಶರು ಅವ್ವನನ್ನು, ತಾಯಗುಣವನ್ನು ಹಸಿರು ಪತ್ರ ಮತ್ತು ಬಿಳಿಯ ಹೂವಿನ ಜೊತೆಗಿನ ಜೀವನಸಿರಿ ಮತ್ತು ಸಡಗರಕ್ಕೆ ಸಂವಾದಿಯಾಗಿ ಕಾಣುತ್ತಾರೆ. ನೆಲ ಅನುಭವಿಸುವ ಋತುಗಳೆಲ್ಲವನ್ನೂ ಅವ್ವ ಅನುಭವಿಸುತ್ತಾಳೆ. ಇಲ್ಲಿ ಅನುಭವಿಸುವುದೆಂದರೆ ಸುಖಪಡುವುದಲ್ಲ; ಸುಖವನ್ನು ಧಾರೆಯೆರೆಯುವುದು. ಹಾಗೆಯೇ ಕಷ್ಟವನ್ನು, ಕ್ಷೋಭೆಯನ್ನು ತನ್ನೊಳಗೇ ಅರಗಿಸಿಕೊಳ್ಳುವುದು. ಮಣ್ಣಲ್ಲಿ ಬದುಕಿದ ಅವ್ವನದು ತೇವದ ಗುಣ; ತಂಪೆರೆಯುವ ಗುಣ; ಕಾಯುವ ಗುಣ.

ತಾವು ಕಂಡುದನ್ನು ಪ್ರಕೃತಿಯ ಸಮೀಪವಿಟ್ಟೇ ಕಾಣಿಸುವುದು, ಭಾವನಾತ್ಮಕವಾದದ್ದನ್ನು ಒಂದು ಘಳಿಗೆಯ ಮಟ್ಟಿಗಾದರೂ ಎಲ್ಲ ಉದ್ವೇಗಗಳ ಆಚೆಗೆ ಕೈಚಾಚುವ ಆಸೆಯಿಂದೆಂಬಂತೆ ಮತ್ತು ಅಲ್ಲಿಯೇ ಬದುಕು ನಿಜವಾಗಿಯೂ ಕಾದಿದೆ ಎಂಬ ವಿಶ್ವಾಸದಿಂದ ಸ್ವರಗೊಳಿಸುವುದು ಲಂಕೇಶರ ಬರವಣಿಗೆಯಲ್ಲಿನ ಒಂದು ಧಾರೆಯೂ ಹೌದು. ಇಡೀ ಬದುಕನ್ನೇ ಪ್ರಭಾವಿಸಿದ ಅವ್ವ ಆ ಬದುಕಿನ ಅಂತರಾಳದಲ್ಲೂ ತನ್ನಷ್ಟೇ ಎತ್ತರ ಬೆಳೆದು ನಿಲ್ಲುತ್ತಾಳೆ. ಪ್ರಕೃತಿಗೆ ಹತ್ತಿರವಾಗಿ ಬಾಳುವಾಗ, ನಿಜವಾಗಿಯೂ ಅನಗತ್ಯವಾದುದರ ಕುರಿತ ನಿರಾಕರಣೆಯೊಂದಿಗೇ ಅವ್ವ ಸಾಮಾನ್ಯ ಕಟ್ಟುಪಾಡುಗಳನ್ನು ದಾಟಿ ನಿಲ್ಲುತ್ತಾಳೆ. “ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ” ಎಂದು ಕವಿ ಹೇಳುವಾಗ, ಅದು ಅವ್ವ ಹೇಳಿಕೊಟ್ಟ ಬದುಕಿನ ಧ್ಯಾನದಲ್ಲಿ ಕಂಡುಕೊಂಡ ಸತ್ಯವೇ ಆಗಿದೆ.

ಅವ್ವ ಇಲ್ಲಿ ಒಂದು ಸಂಸಾರದ ನೊಗ ಹೊತ್ತವಳು ಮಾತ್ರವಾಗಿರದೆ, ಒಂದು ಪೀಳಿಗೆಯ ಬದುಕನ್ನೇ ತಿದ್ದಿ ತೀಡಿದ ಶಿಲ್ಪಿಯೂ ಆಗಿದ್ದಾಳೆ. ಅವಳು ಬಿಸಿಲೊಳಗೆ ಕರಗುತ್ತಲೇ ಜೀವಿಸಿದವಳು. ಜೀವನಕ್ಕಾಗಿ ಬಿಸಿಲನ್ನೇ ಕರಗಿಸುವ ಕಠಿಣ ದಾರಿಯನ್ನೂ ಉತ್ತರಿಸಿದವಳು. ಈ ಕರಗುವಿಕೆ ಮತ್ತು ಕರಗಿಸುವಿಕೆಯ, ಆರ್ದ್ರಗೊಳ್ಳುವುದು ಮತ್ತು ಆರ್ದ್ರಗೊಳಿಸುವುದರ ಅನವರತ ತುಡಿತ, ತಳಮಳ, ಗುದ್ದಾಟಗಳಲ್ಲೇ ಅವ್ವ ಬದುಕಿದ್ದಾಳೆ.

ಬಹುಶಃ ಎಲ್ಲ ಕಾಲದಲ್ಲೂ ನಿಜದ ಕಡೆಗೆ ನಡೆಯುವುದಕ್ಕಾಗಿನ ಉಲ್ಲಂಘನೆಯಾಗಿ ಅವ್ವ ಉರಿದೇಳುವವಳೇ.

ವೆಂಕಟ್ರಮಣ ಗೌಡ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: