ನೆಟ್ಟಾರು ಅಜ್ಜ ಅನ್ನೋ ನಿರ್ವಚನ…

ದೀಪಾ ಫಡ್ಕೆ

ಕ್ಷ್ಮೀಶ ತೊಳ್ಪಾಡಿಯವರ “ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ”- ನಮ್ಮೊಡನೆಯೇ ಇದ್ದ ನೆಟ್ಟಾರು ರಾಮಚಂದ್ರ ಭಟ್ ಮತ್ತು ಇಸ್ಮಾಯಿಲ್ ಕುಂಞಪ್ಪನವರ ಪರಸ್ಪರ ಧಾರಣದ ಗಾಥೆ. ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣಗಳ ಗುಚ್ಛವಿದು. ಲೇಖಕ ತೊಳ್ಪಾಡಿ ಹಾಗೂ ನೆಟ್ಟಾರಜ್ಜನ ಬಹು ವರ್ಷಗಳ ಸಾಂಗತ್ಯದ ಫಲವಿದು. ಬೆಟ್ಟ ಮಹಮದನ……ಕೃತಿಯುದ್ದಕ್ಕೂ ಅಧ್ಯಾತ್ಮ, ಅಧ್ಯಾತ್ಮ ಮತ್ತು ವೈಚಾರಿಕತೆಯ ಅಧ್ಯಾತ್ಮ.

betta

ಇದ್ದಷ್ಟು ಸಮಯ ಹೆಚ್ಚಿನವರಿಂದ “ಹುಚ್ಚ” ಎಂದು, ಸ್ವಲ್ಪವೇ ಜನರಿಂದ “ಅವಧೂತ” ಎಂದೂ ಕರೆಸಿಕೊಂಡ ನೆಟ್ಟಾರಜ್ಜನಿಗೆ ನಾಮಕರಣವಾದ ಹೆಸರು, ಬೇರೆ ಯಾವ ಹೆಸರೂ ತಾಗಲೇ ಇಲ್ಲ, ಅಲ್ಲಲ್ಲ ತಾಗಿಸಿಕೊಳ್ಳಲಿಲ್ಲ. ಬದುಕಲ್ಲಿ ತಾಗಿಸಿಕೊಂಡಿದ್ದು ಏನಾದ್ರೂ ಇದ್ರೆ ಅದು ಇಸ್ಮಾಯಿಲ್ ಕುಂಞಪ್ಪ ಮತ್ತು ಇಸ್ಮಾಯಿಲ್ ಕುಂಞಪ್ಪ. ನೆಟ್ಟಾರಜ್ಜನನ್ನು ನಾನೂ ಒಮ್ಮೆ ಭೇಟಿಯಾಗಿದ್ದೆ. ಓ, ಚಿತ್ಪಾವನರು, ಮುಂಡಾಜೆ ಕಡೆಯವರು. ನಾಟಕದ ರಂಗಣ್ಣ ಗೊತ್ತಿರಬೇಕು ಎಂದು ನಕ್ಕಿದ್ದರು. ಇವರು  ಎಲ್ಲೂ ಪ್ರವಚನ ಮಾಡಿದ್ದನ್ನು ಕೇಳಿಲ್ಲ. ಹಾಗಾಗಿ ಅವರ ಸಿಡಿ, ಕ್ಯಾಸೆಟ್ಟುಗಳು, ಪ್ರವಚನ ಪುಸ್ತಕಗಳು ಇಲ್ಲ. ಲಕ್ಷ್ಮೀಶ ತೊಳ್ಪಾಡಿಯವರು ನೆಟ್ಟಾರಜ್ಜನ “ನಾವು ಬಂದವರು”- ಈ “ಬಂದ” ಬದುಕಿನ ಚಿತ್ರಣವನ್ನು ನಮ್ಮ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಅಜ್ಜನ ಬಾಯಿಂದ ಸತ್ಯ, ಸಂವಹನ, ಅಹಂಕಾರ, ತೋರಿಕೆ, ಹೊಳಹು, ಕುಶಲತೆ, ಸ್ವೀಕಾರ, ಸಂಭವ, ಅದು, ಅದೃಷ್ಟ, ಅಹಿಂಸೆ, ಶಕ್ತಿ ಮೊದಲಾದ ಶಬ್ದಗಳ ಗೊತ್ತಿದ್ದ ಅರ್ಥದ ಸಿಪ್ಪೆ ತೆಗೆದು ಹಸಿಯಾದ ನಗ್ನರೂಪವನ್ನು ತೋರಿಸಿದ್ದಾರೆ. ಎಲ್ಲಾ ಅರ್ಥಗಳಲ್ಲಿ ಖುಷಿ ಕೊಟ್ಟ  ಅರ್ಥ ಅಹಂಕಾರದ್ದು. ರೋಗವೆಂದಿದ್ದಾರೆ ಅಹಂಕಾರವನ್ನು. ಸಮಂಜಸವಾದ ಅರ್ಥ. ಇದೊಂದು ಔಷಧಿಯಿಲ್ಲದ, ಮನಸ್ಸಿನ ರೋಗ.

ಬೆಟ್ಟ ಮಹಮದನ…. ಆರಂಭವಾಗೋದು, ಬುದ್ಧನ ಭೂಮಿಸ್ಪರ್ಶಮುದ್ರಾ ಕಥೆಯಿಂದ. ಒಬ್ಬೊಬ್ಬರದು ಒಂದೊಂದು ಮುದ್ರೆ. ಈ ಮುದ್ರೆಗನುಗುಣವಾಗಿ ಮಂದಿರ ಮಸೀದಿ ಅನ್ನುವ ಗೋರಿ ಕಟ್ಟಿದರು ಎಲ್ಲರೂ, ಎಲ್ಲರೂ. ಮುದ್ರೆಯ ಉದ್ದೇಶ, ಅರ್ಥ ಗೋರಿಯೊಳಗೆ, ಅನರ್ಥ ಹೊರಗೆ ಆಗಿದ್ದಿಷ್ಟೇ. ಒಬ್ಬ ಬ್ರಾಹ್ಮಣ ಹುಟ್ಟಿನ ನೆಟ್ಟಾರಜ್ಜನ ಜೊತೆಯಾಗಿದ್ದು ಮುಸಲ್ಮಾನ ಇಸ್ಮಾಯಿಲ್ ಕುಂಞಪ್ಪ.  ಇಬ್ಬರಿಗೂ ಗೊತ್ತಿತ್ತು ಅವರಿಬ್ಬರದು ಒಂದೇ ಧರ್ಮವೆಂದು. ಬೆಳಕಿನ ಪಥದವರು. ಮತೀಯ ಮತ್ತು ಮತಿಯ ಅಹಂಕಾರದ ಉರುಳು ಬಿಗಿಯುತ್ತಿದ್ದರೂ ಉದಾಸೀನದಿಂದಿದ್ದರು. ಅಹಂಕಾರಕ್ಕೆ ಉದಾಸೀನ ಮದ್ದಲ್ಲವೇ! ಎಷ್ಟು ಜನರಿಗೆ ಸಾಧ್ಯವಾದೀತು ಈ ಬದುಕು? ಎಷ್ಟು ಜನರಿಗಿದೆ ಈ ಪ್ರಿವಿಲೇಜ್? ಬದುಕಿನಲ್ಲಿ ಎರಡು ಬದುಕು. ಒಂದು ಅನಿವಾರ್‍ಯವಾದ ಆದರೆ ಇಷ್ಟವಿಲ್ಲದ ಸಂಸಾರದ ಬದುಕು; ಇನ್ನೊಂದು ಇಷ್ಟವಿರುವ ಆದರೆ ಅನಿವಾರ್‍ಯವಲ್ಲದ, ಈ ಲೋಕಕ್ಕೆ ಬೇಡದ ಸತ್ಯದ ಬದುಕು. ಎಲ್ಲರಿಗೂ ಒಮ್ಮೆಯಾದ್ರೂ ಕಾಡುವ ಸತ್ಯವಿದು. ಮನುಷ್ಯ ಇವೆರಡರ ಮಧ್ಯೆ ಉಯ್ಯಾಲೆಯಾಡಿ ಆಡಿ… ಒಮ್ಮೊಮ್ಮೆ ಒಂದು ಮೂಲೆಗೆ ಹೋಗಿ ಬೀಳೋದುಂಟು! ನೆಟ್ಟಾರಜ್ಜ ಈ ಇಷ್ಟವಿರುವ, ಅನಿವಾರ್‍ಯವಲ್ಲದ ಬದುಕನ್ನು ಹುಚ್ಚ ಅನ್ನುವ ಹೆಸರಿನೊಂದಿಗೆ “ನಾವು ಬಂದವರು” ಎಂದು ಹೇಳಿಕೊಂಡೇ ಇದ್ದವರು. ಒಂದರ್ಥದಲ್ಲಿ ಅದೃಷ್ಟವಂತ.(ಈ ಅದೃಷ್ಟ ನೆಟ್ಟಾರಜ್ಜನ ವ್ಯಾಖ್ಯಾನಕ್ಕೆ ಒಳಗಾದ ಅದೃಷ್ಟವಲ್ಲ, ನಮ್ಮ ಸಾಮಾನ್ಯ ಮನಸ್ಸಿನ ಅದೃಷ್ಟ)

ವ್ಯವಸ್ಥೆ ನೆಟ್ಟಾರಜ್ಜನ ಮಾತಿನಲ್ಲಿ ಬಲಾತ್ಕಾರ. ನಿಜ ಮನುಷ್ಯ ವ್ಯವಸ್ಥೆ ಮಾಡುತ್ತಾನಂದ್ರೆ ಇನ್ನೊಂದು ಅಸಹಾಯಕ ಸ್ಥಿತಿ ಮೇಲೆ ಮಾಡುವ ಬಲಾತ್ಕಾರ. ಅಭಿವೃದ್ಧಿಯ ಹೆಸರಲ್ಲಿ ಬಲಾತ್ಕಾರ, ಕನಸನ್ನು ನನಸು ಮಾಡುವ ಹೆಸರಲ್ಲಿ ಬಲಾತ್ಕಾರ…. “ಸೆರೆನಿಟಿ” ಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಪ್ರಯತ್ನ. ಮತ, ಮನಸ್ಸು ಎಲ್ಲದರ ಮೇಲಿನ ಬಲಾತ್ಕಾರಕ್ಕೆ ಅಡ್ಜಸ್ಟ್ ಆಗುತ್ತಿದೆ ಸಮಾಜ.

ಈ ಭೂಮಿ ಮೇಲೆ ಅನೇಕ ಜಾತಿ, ಪಂಥಗಳಿಗೆ ಸೇರಿದ ಅನುಭಾವಿಗಳು, ತತ್ವಜ್ಞಾನಿಗಳು ಆಗಿಹೋದರು. ಅವರೆಲ್ಲ ಅವರ ಹೆಸರಿನ ಪಂಥ, ಸಾಹಿತ್ಯವನ್ನೂ ಬಿಟ್ಟುಹೋದರು. ನೆಟ್ಟಾರಜ್ಜ ಅಂಥದ್ದು ಯಾವುದನ್ನೂ ಮಾಡಲಿಲ್ಲ. ಹೀಗೂ ಒಬ್ಬ ಇದ್ದ ಎನ್ನವಂತೆ ಬದುಕಿದರು, ಹೀಗೂ ಬದುಕಬಹುದು ಎನ್ನುವಂತೆ ಬದುಕಿದರು. ಹೀಗೂ ಸ್ನೇಹ ಮಾಡಬಹುದು ಎನ್ನುವಂತೆ ಇಸ್ಮಾಯಿಲ್ ಕುಂಞಪ್ಪನವರನ್ನು ನೆಚ್ಚಿಕೊಂಡರು. ಸತ್ಯದ ಪ್ರತಿಫಲನ. ನೆಟ್ಟಾರಜ್ಜ ಮತ್ತು ಕುಂಞಪ್ಪನವರು ಒಬ್ಬರಿಗೊಬ್ಬರು “ಫನಾ” ಆಗಿದ್ದರು.

ಒಮ್ಮೊಮ್ಮೆ ಅಧ್ಯಾತ್ಮವೂ ಗಾಬರಿ ಹುಟ್ಟಿಸುತ್ತದೆ ಅನ್ನೋದಕ್ಕೆ ಕತೆಗಾರ “ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ” ಅಂದದ್ದು ಉದಹರಿಸಬಹುದು. ಉಸಿರು ಕಟ್ಟಿದಂತಾಗುತ್ತದೆ ಸತ್ಯ ದರ್ಶನವಾದಾಗ. ಅಧ್ಯಾತ್ಮದ ಸಹವಾಸವೇ ಅಂತಹುದು, ವ್ಯೂಹದೊಳಕ್ಕೆ ಪ್ರವೇಶಿಸಿದಂತೆ. ಅಧ್ಯಾತ್ಮ ಚಕ್ರವ್ಯೂಹವಿದ್ದಂತೆ. ಸ್ಥಿತಪ್ರಜ್ಞನಿಗೆ ದಕ್ಕಬಹುದು ಅಷ್ಟೆ. ಮನಸ್ಸು ಅಭಿಮನ್ಯು ಇಲ್ಲಿ. ಮನಸ್ಸಿನ ಕೊಳಕು ವಿಕಾರಗಳ ಕೈಕಾಲುಗಳನ್ನು, ಸತ್ಯ, ಹೊಳಹು, ಪ್ರಜ್ಞೆ ಮುಂತಾದವು ಘಾತಿಸಿ ನಾಶಮಾಡುತ್ತವೆ. ಮಹಾಭಾರತದಲ್ಲಿ ಎಲ್ಲ ದುಷ್ಟರು ಸೇರಿ ಅಭಿಮನ್ಯುವನ್ನು ಹತ ಮಾಡಿದರೆ ಇಲ್ಲಿ ಮನಸ್ಸಿನ ದುಷ್ಟತೆಯನ್ನು ಪ್ರಜ್ಞೆ ನಾಶ ಮಾಡುವ ಪ್ರಯತ್ನ ಮಾಡುತ್ತದೆ. ಈ ಸತ್ಯವನ್ನು ಅಜ್ಜ ಸ್ವತಂತ್ರ ಎಂದರು. ನಿಜಕ್ಕೂ ಸ್ವತಂತ್ರನಾದವನು ಮಾತ್ರ ಇನ್ನೊಬ್ಬನನ್ನು ಪರಿಪೂರ್ಣವಾಗಿ ನಂಬಬಲ್ಲ ಎಂದೂ ಹೇಳಿದರು. ಹೊರಗಣ್ಣಿಗೆ ಎಲ್ಲರೂ ಸ್ವತಂತ್ರರು. ಒಳಗಿನಿಂದ ಅಷ್ಟೇ ಪರತಂತ್ರರು. ಯಾರಿಗೂ ಯಾರ ಮೇಲೂ ವಿಶ್ವಾಸವಿಲ್ಲ. ಎಲ್ಲರೂ “ನಾನು” ಅಧೀನರು. ಕಬೀರನ ದೋಹಾ ಒಂದಿದೆ: “ಜಬ್ ಮೈ ಥಾ ತಬ್ ಹರಿ ನಹೀ, ಜಬ್ ಹರಿ ಹೈ ಮೈ ನಹಿ”(ನಾನು ಇದ್ದಾಗ ಹರಿ ಇರಲಿಲ್ಲ, ಹರಿ ಇದ್ದಾಗ ನಾನು ಇರಲಿಲ್ಲ). ಎಲ್ಲರಿಗೂ ನಾನು ಇಷ್ಟ. ಹರಿಯನ್ನು ಒದ್ದೋಡಿಸಿದವರು ನಾವೆಲ್ಲಾ. ಅಜ್ಜನ ನಾನು, ನೀನು ಯಾರು…ಹೊಳೆ ನೀರು ಮುಂದಕ್ಕೆ ಹರಿಯುತ್ತದೆ…..ಸುಂದರವಾಗಿ, ಮಾರ್ಮಿಕವಾಗಿ ಅಭಿವ್ಯಕ್ತಿಸಿದ್ದಾರೆ.

“ವಿಠಲ ಮತ್ತು ದಾಸ”, ಯಾರು ಯಾರ ದಾಸ? ಎನ್ನುವ ಪ್ರಶ್ನೆ ಮತ್ತು ಉತ್ತರ ಎರಡೂ ಖುಕೊಡುತ್ತವೆ. ದಾಸಸಾಹಿತ್ಯವೇ ಅಂತಹದು. ಶುಷ್ಕವೆನಿಸದ, ತಂಪೆರೆಯುವ ಪ್ರಪಂಚ. ನಿರಾಳವಾಗಿ ಉಸಿರಾಡಿಸುತ್ತದೆ ಅದು. ಏಕೆಂದರೆ ಅಲ್ಲಿ ರೋಗ(ಅಹಂಕಾರ)ವಿಲ್ಲ. ಸ್ವಲ್ಪ ರೋಗ ತಗುಲಿದರೂ ದಾಸರ ಗೋಪಾಳಬುಟ್ಟಿ ತುಂಬಾ ಔಷಧಿಗಳು. ತೊಳ್ಪಾಡಿಯವರದ್ದು ಒಂದೊಳ್ಳೆಯ ಪ್ರಯೋಗ, ಬೆಳಕು ತೋರಿಸುವ ಪ್ರಯೋಗ. ಈ ಪ್ರಯೋಗಕ್ಕೆ ಟೀಕೆ, ಮೆಚ್ಚುಗೆಗಳು ಬಾಧಿಸವು. ಅಧ್ಯಾತ್ಮವೇ ಹಾಗೆ. ಬೆಳಕು ತೋರಿಸಿದವ, ಬೆಳಕು ನೋಡಿದವ ಇಬ್ಬರಿಗಿಂತಲೂ ಬೆಳಕೇ ದೊಡ್ಡದೆನಿಸುತ್ತದೆ. ಓದಿಸಿಕೊಂಡು ಹೋಗುತ್ತದೆ ಬೆಟ್ಟ ಮಹನದನ….ಪುನ: ಓದಿಸಲೂಬಹುದು. ಇಸ್ಮಾಯಿಲ್ ಕುಂಞಪ್ಪನವರ ಪತ್ನಿಯ ಅಸಮಾಧಾನ ಅಲ್ಲಲ್ಲಿ ಬಿಂಬಿಸಿದ ತೊಳ್ಪಾಡಿಯವರು ನೆಟ್ಟಾರಜ್ಜನ ಪತ್ನಿಯ ಮನಸ್ಥಿತಿ ಬಿಂಬಿಸದೇ ಹೋಗುತ್ತಾರೆ. ಮೌನಕ್ಕೆ ನೂರಾರು ಅರ್ಥಗಳು. ಈ ಭೂಮಿ ತುಂಬಾ ಅಲ್ಲೊಮ್ಮೆ ಇಲ್ಲೊಮ್ಮೆ ಝಾಂತಿಪ್ಪೆಯರೂ ಕಾಣಿಸಿಕೊಳ್ಳುತ್ತಾರೆ.

Advertisements

2 Comments (+add yours?)

  1. prasadvmurthy
    Mar 27, 2013 @ 23:25:59

    “ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ…” ಎಂಬ ಪುಸ್ತಕದ ಬಗ್ಗೆ ಲವಲವಿಕೆಯುಕ್ತ, ಚೈತನ್ಯದಾಯಕ ವಿಮರ್ಶೆಯನ್ನು ಕೊಟ್ಟಿದ್ದೀರಿ. ಈ ಬರಹವನ್ನು ನಿರೂಪಿಸುವಾಗಿನ ನಿಮ್ಮ ತಂತ್ರಗಾರಿಕೆ ಮತ್ತು ಭಾಷೆಗಳು ಗಮನ ಸೆಳೆಯುತ್ತವೆ. ಈ ಪುಸ್ತಕವನ್ನು ಓದಿ, ಕಾಲಾತೀತ ಮತ್ತು ಧರ್ಮಾತೀತನಾಗಿ ನಿಲ್ಲಬಲ್ಲ ನೆಟ್ಟಾರಜ್ಜನನ್ನು ದಕ್ಕಿಸಿಕೊಳ್ಳಬೇಕು ಎನಿಸುತ್ತದೆ ನಿಮ್ಮ ವಿಮರ್ಶೆಯನ್ನು ಓದುವಾಗ. ವೈಚಾರಿಕ ಆಧ್ಯಾತ್ಮ ಎಂಬ ಕಲ್ಪನೆಯು ವಿಶಿಷ್ಟವಾಗಿದ್ದು, ಲಕ್ಷ್ಮೀಶ ತೊಳ್ಪಾಡಿಯವರ “ಬೆಟ್ತ ಮಹಮದನ ಬಳಿಗೆ ಬಾರದಿದ್ದರೆ ಎಂಬ ಪುಸ್ತಕವನ್ನು ಓದುವಂತೆ ಪ್ರೇರೇಪಿಸುತ್ತದೆ. ಅಭಿನಂದನೆಗಳು ದೀಪಾ ಫಡ್ಕೆ ಅವರಿಗೆ 🙂

    – ಪ್ರಸಾದ್.ಡಿ.ವಿ.

    Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: