ರಾಮನವಮಿಯಂದು…

ಅನುರಾಧಾ ಪಿ ಸಾಮಗ

ರಾಮಾ, ನೀನಿಂದು ಮತ್ತೆ ಹುಟ್ಟಿಬಿಟ್ಟೆ.
ನೇರ ಒಳಗಿಂದಲೇ ಉದಯಿಸಿಬಿಟ್ಟೆ.
ಪೂರಾ ಬದಲಾದ ರೂಪದಲಿ,
ನನದಲ್ಲದ ಚಿಂತನೆಯ ಬೀಜದಲಿ..

ವ್ಯಕ್ತಿಯಾಗಲ್ಲ ನೀ ಬೆಳೆದದ್ದು,
ಸಮಷ್ಟಿಯ ಮುಕ್ತಿಮಾರ್ಗಕೆ ದೀಪ್ತಿಯಾಗಿ.
ಮಾದರಿಯಾಗೋ ಹಾದಿಗೆ ಮುನ್ನುಡಿಯಾಗಿ.
ತ್ಯಾಗಪಥಕೊಂದು ಮಾರ್ಗದರ್ಶಿಯಾಗಿ.
ತಾಳ್ಮೆ-ಸಂಯಮ ರೂಪವೆತ್ತ ಮೂರ್ತಿಯಾಗಿ.
ಚಂದಮಾಮನ ಬೇಡಿದ್ದೇ ಕೊನೆ,
ಮುಂದೆಂದೂ ನಿನ್ನ ಹಠಕಾಸ್ಪದವೇ ಇರಲಿಲ್ಲವೇನೋ.
ಜಗ ನಿನ್ನೆದುರು ಹಠವಿಟ್ಟದ್ದು,
ನೀ ಒಪ್ಪಿದ್ದು, ಮಣಿದದ್ದು…
ಕೊನೆಗದು ಮಹಾತ್ಮನಾಗುವ ನಿನ್ನ
ತಂತ್ರವೆನಿಸಿದ್ದು….

ಪಿತೃವಾಕ್ಯಕೆ ಬಗ್ಗಿದ್ದು ನೀನಲ್ಲ,
ಬಗ್ಗಿಸಿದ್ದು ಪಿತನ ಹತಾಶೆ ಮತ್ತು ನಂಬಿಕೆ.
ಸೀತೆಗೆ ನಾರುಡಿಸಿದ್ದು ನೀನಲ್ಲ,
ಪತಿಭಕ್ತಿ ಮೆರೆವ ಅವಳ ಹಠಸಾಧನೆ.
ತಮ್ಮಗೂ ಬೇಕಿತ್ತು ಭ್ರಾತೃಪ್ರೇಮದ ಕಿರೀಟ,
ತ್ರೇತಾಯುಗಕೆ ರಾಮನ ಪರಮನಾಗಿಸುವ ಜಪ…
ಕಪಿಸೈನ್ಯದ ಬಲಮೆರೆಸೆ ಸೇತು ಕಟ್ಟಿಸಿದೆ,
ತಾಳ್ಮೆಬಲ ನಿರೂಪಣೆಗಷ್ಟು ವರುಷ ಏಕಾಂಗಿಯಾದೆ,
ನಿನಗಸಾಧ್ಯವೆಂದಲ್ಲ, ನೀ ಅವತಾರ ಪುರುಷ…
ತಾರೆಗಾಗಿ ಮರೆಯಾಗಿ ಗೆದ್ದಪವಾದ ಹೊತ್ತೆ
ತುಮುಲವಡಗಿಸಿ ತೋರಬೇಕಿತ್ತು ಸಮಚಿತ್ತ,
ಸಾಮಾನ್ಯನಲ್ಲವಲ್ಲಾ, ನೀನದೇ ಅವತಾರ ಪುರುಷ…

ಧರ್ಮ ಧರ್ಮವೆನುತಲೇ ವನದಿ ಕಳೆದ
ಹದಿನಾಲ್ಕು ವರುಷದ ನಿನ್ನ ಯೌವ್ವನ
ಕಾಣಲೇ ಇಲ್ಲ ಜನಕೆ, ಮಹಾನ್ ಎನಿಸಿದ್ದು
ಸೀತೆಯ ತ್ಯಾಗ.
ಅದು ಮರುಗಿದ್ದು,
ಸೌಮಿತ್ರಿಯ ನಿಷ್ಠೆಗೆ,
ಹನುಮನ ಭಕ್ತಿಗೆ.
ಬೆರಗಾದದ್ದು ರಾವಣನ ಪೌರುಷಕೆ,
ಕಪಿಸೈನ್ಯದ ಸಾಹಸಕೆ.
ನಿನ್ನ ತ್ಯಾಗ ಅವತಾರದ ಹೆಸರಲಿ ನಗಣ್ಯ.

ಸೀತೆಯ ದೇಹಕೆ ಅಗ್ನಿಪರೀಕ್ಷೆ,
ನೀ ವಿಧಿಸಿ ಕೆಳಗಿಳಿದದ್ದು, ಅವಳು ಗೆದ್ದು ಮೇಲೇರಿದ್ದು..
ನಿನ್ನತನ ಸುಟ್ಟದ್ದು, ನೀ ಸ್ವಂತದೆದುರು ಸೋತದ್ದು-
ಜಗ ಕಂಡಿಲ್ಲ, ನೀ ತೋರಿಲ್ಲ.
ರಾಜಧರ್ಮ ಪಾಲನೆಯ ಮೋಡಿ ಕವಿದಿತ್ತಲ್ಲಾ..
ಸೀತೆ ವನ ಸೇರಿದಳು,
ಬಸುರಿಗೆ ತುಂಬುವನದ ಆರೈಕೆ,
ತುಂಬುಮನದ ಹಾರೈಕೆ…
ತಪ್ಪೆಸಗಿಲ್ಲದ ನೆಮ್ಮದಿ…
ಹಾಗೂ ಭಾರವನತ್ತು ಕಳೆಯಬಲ್ಲಳು..
ನಿನಗೆ ರಾಜ್ಯಭಾರ, ಅರಮನೆವಾಸ…
ಸುತ್ತುಮುತ್ತೆಲ್ಲಾ ಟೀಕೆ, ಪ್ರಶ್ನೆಗಳು ಬಲು ತೀಕ್ಷ್ಣ..
ಜೈಕಾರದ ಸದ್ದು ಅಲ್ಲೆಲ್ಲೋ ಬಲು ಕ್ಷೀಣ…
ಸಡಿಲಾಗುವಂತಿಲ್ಲ, ಭೋರ್ಗರೆದು ಅಳುವಂತಿಲ್ಲ
ಸುಮ್ಮನಿರಬೇಕು..ನೀ ಅವತಾರಪುರುಷ.

ಸೀತೆ ಕೊನೆಗವನಿಯ ಮಡಿಲು ಹೊಕ್ಕಳು
ಆತ್ಮಹತ್ಯೆ ಅದು ಅಂದದ್ದು, ನೀ ಕೊಂದೆ ಎಂದದ್ದು
ಮಾರ್ನುಡಿಯುತಿವೆ ಇಂದೂ ಎದೆಯಿಂದೆದೆಗೆ ಬಡಿದು…
ನೀ ಹೊಕ್ಕಿದ್ದೂ ಸರಯೂವಿನ ಮಡಿಲನೇ ಅಲ್ಲವೇ?
ಅವತಾರ ಪುರುಷನದು ಅವತಾರಸಮಾಪ್ತಿಯಷ್ಟೆಯೇ?!
ಎದೆಭಾರ ನಿನದೂ ಇದ್ದಿರಬಹುದು,
ತಪ್ಪಲ್ಲದ ತಪ್ಪೆಸಗುತಾ ನೀನೂ ಅತ್ತಿರಬಹುದು,
ಒಪ್ಪಲ್ಲದ ನಿರ್ಧಾರದಡಿ ಅಪ್ಪಚ್ಚಿಯಾಗಿರಬಹುದು,
ಪ್ರಶ್ನೆ- ಜೊತೆಗೊಂದಷ್ಟು ದೂರು ನನವೂ ಇವೆ,
ಇಂದವನು ಅಡಿಗಿಟ್ಟು, ನಿನ್ನ ಮೇಲಿಟ್ಟು ನೋಡುವಾಸೆ
ಈಗಷ್ಟೇ ಜನಿಸಿರುವೆ, ಹೊಸದಾಗಿ ಅಲಂಕರಿಸುವಾಸೆ…
ಸ್ವಲ್ಪ ತಿನಿಸಿ, ಕುಡಿಸಿ, ಆಡಿಸಿ, ಮಲಗಿಸಿ, ಮತ್ತೆಬ್ಬಿಸಿ,
ನಿನ್ನಂದ ಬರೀ ನಿನ್ನವತಾರದ ಚಂದಗಳ ಸವಿಯುವಾಸೆ…

Advertisements

ಅಪೂರ್ಣರಘುನಂದನ

ಹರವು ಸ್ಫೂರ್ತಿ ಗೌಡ

ಚಿಂತೆ ಸಂಪಿಗೆ ಮುಡಿದಳು
ರಾಮ ನಾಮದ ಘಾಟು ಗಮಲು ಒಡಲಲ್ಲಿ

ಗೆದ್ದವನಿಗೆ ಉಡುಗೊರೆಯಾದಳು

ಗೆಲುವುದೊಂದೇ ಗೊತ್ತು ಅವಕ್ಕೆ

ವಿರಹ ತಣಿಸದ
ಮೋಹದ ಗಂಡನಾಗಿ ಉಳಿದ

ಯಾವುದೋ ಯುಗದಲ್ಲಿ
ಯಾರದೋ ಅಶೋಕವನದಲ್ಲಿ
ಯಾರಿಗಾಗಿ ಶೋಕಿಸಿದಳು ಸೀತೆ..

ಆತ್ಮನಾಶದ ಕಥಾನಕಗಳು

ದೀಪಾ ಫಡ್ಕೆ

ಭಾರತೀಯ ಚಿಂತನೆಗಳ ಶ್ರೀಮಂತಿಕೆಗೆ ಮೂಲ ಕಾರಣ ಅವೆಲ್ಲವೂ ಆತ್ಮ ಸಂಬಂಧಿತ ಚಿಂತನೆಗಳಾಗಿರುವುದು. ಆತ್ಮದ ವಿಸ್ತೃತ ಕಲ್ಪನೆಯನ್ನು ಗೀತೆಯಲ್ಲಿ ಕೃಷ್ಣ ನೀಡಿದ್ದಾನೆ. ಮುಂದೆ ಭಾರತೀಯ ದಾರ್ಶನಿಕರು ಮಾನಸಿಕ ಕ್ರಿಯೆಗಳಿಗೆ ಮನಸ್ಸು ಎನ್ನುವ ಹೆಸರಿದ್ದಂತೆ ವಾಸ್ತವ, ಸತ್ಯವೆನ್ನುವ ಅನುಭವಕ್ಕೆ ಆತ್ಮ ಎಂದರು. ಅಥವಾ ಮನಸ್ಸಿನೊಳಗಿರುವ ದಿವ್ಯಶಕ್ತಿಯೆಂದರು. ಇನ್ನು ಹುಟ್ಟು ಸಾವು ಪ್ರತಿಜೀವಿಯ ಬಾಳಿನ ಎರಡು ಕೊನೆಗಳು. ಹುಟ್ಟಿದ ಪ್ರತಿ ಜೀವಿ ಸಾವನ್ನು ಬಗಲಲ್ಲೇ ಇಟ್ಟುಕೊಂಡು ಹುಟ್ಟುತ್ತದೆ. ಹುಟ್ಟು ನಮ್ಮ ಕೈಯಲಿಲ್ಲ. ಆದರೆ ಸಾವನ್ನು ಕೆಲವು ಸನ್ನಿವೇಶಗಳಲ್ಲಿ ನಮ್ಮಿಚ್ಛೆಯಂತೆ ಬರಮಾಡಿಕೊಳ್ಳಬಹುದು. ಇದರಲ್ಲಿ ಆತ್ಮಹತ್ಯೆ ಒಂದು ವಿಧಾನ. ಆತ್ಮಹತ್ಯೆ ಇಚ್ಛಾಮರಣವಾದರೂ ಇಚ್ಛಾಮರಣಕ್ಕೆ ಸಿಕ್ಕಿದ ಮಾನ ಆತ್ಮಹತ್ಯೆಗೆ ಸಿಕ್ಕಿಲ್ಲ. ಉದಾ; ಭೀಷ್ಮ ಇಚ್ಛಾಮರಣಿಯೆನ್ನುವುದು. ಭೀಷ್ಮನ ಮರಣ ಮಹಾಭಾರತದಲ್ಲಿ ಕಂಡ ಅತ್ಯಂತ ಗೌರವದ ಮರಣ. ಹೀಗೆ, ಆತ್ಮಹತ್ಯೆ ಎನ್ನುವ ನಿಸರ್ಗವಿರೋಧಿ ವಿಷಯ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಕಾವ್ಯಗಳಾದ ರಾಮಾಯಣ, ಮಹಾಭಾರತದಲ್ಲಿ ಹೇಗೆ ಕಂಡು ಬಂದಿದೆ ಎನ್ನುವ ಅಮೂಲ್ಯ ಅವಲೋಕನವನ್ನು ದಿ. ಶ್ರೀ.ರ.ಭಿಡೆಯವರು ಮರಾಠಿಯಲ್ಲಿ ಮಾಡಿದ್ದು ಅದನ್ನು ಕನ್ನಡೀಕರಿಸಿದ್ದು ವಿರೂಪಾಕ್ಷ ಕುಲಕರ್ಣಿಯವರು.

ಮನುಷ್ಯನ ಮನಸ್ಸಿನ ನೂರಾರು ಭಾವನೆಗಳ ಅನಾವರಣ ರಾಮಾಯಣ, ಮಹಾಭಾರತ. ಇವೆರಡು ಕಾವ್ಯಗಳಲ್ಲಿ ಗೆದ್ದವನು ಸೋತ, ಸೋತವನು ಗೆದ್ದ. ಈ ಕಾವ್ಯಗಳಲ್ಲಿನ ನಾಯಕ, ನಾಯಕಿಯರಲ್ಲದೆ ಅದೆಷ್ಟು ಜನ ಸತ್ತು ಬದುಕಿದರು, ಬದುಕಿ ಸತ್ತರು ಅನ್ನುವುದು ಇಲ್ಲಿ ಅವಲೋಕನಕ್ಕೆ ಒಳಗಾದ ವಿಷಯ. ಭಿಡೆಯವರು ಆತ್ಮಹತ್ಯೆ -ಅನ್ನುವ ಶಬ್ದಕ್ಕೆ ಸಮಾನಾರ್ಥಕವೆನ್ನುವಂತೆ ಆತ್ಮನಾಶ ಎನ್ನುವ ಶಬ್ದ ಬಳಸಿದ್ದಾರೆ. ಏಕೆಂದರೆ ಅಲ್ಲಿ ನಾಶವಾಗೋದು ಆತ್ಮ ರೂಪದಲ್ಲಿರುವ ದಿವ್ಯಶಕ್ತಿ. ಸಾವನ್ನೂ ಗಂಭೀರವಾಗಿ ನೋಡಬಯಸುವವರು ನಾವು ಭಾರತೀಯರು, ಎಷ್ಟೆಂದರೂ ನಮ್ಮದು ಆತ್ಮಚೈತನ್ಯಭರಿತ ಬದುಕಲ್ಲವೇ.

ಭಿಡೆಯವರು, “ಸ್ವಾತಂತ್ರವೀರ ಸಾವರ್‍ಕರ್ ಅವರು ಆತ್ಮಹತ್ಯೆ ಮತ್ತು ಆತ್ಮಸಮರ್ಪಣೆ ಪದಗಳ ಅರ್ಥವ್ಯತ್ಯಾಸವನ್ನು ನಿಖರವಾಗಿ ವ್ಯಕ್ತಪಡಿಸಿದ್ದಾರೆ ಎಂದು ಈ ಹೊತ್ತಿಗೆಯಲ್ಲಿ ಹೇಳಿದ್ದಾರೆ. ತುಂಬ ಅಸಮಾಧಾನ, ಸೇಡಿನ ತೀವ್ರವಾದ ಅರಿವು, ಸಂಕಟಗಳ ಬೇಸರ, ನೆಮ್ಮದಿಯಾಗಿ ಬಾಳಲು ಸಾಧ್ಯವಾಗದ ಭಾವನೆಗಳಿಂದಾಗಿ ಅತೀ ಅತೃಪ್ತವಾದ ಮನಃಸ್ಥಿತಿಯಲ್ಲಿ, ಸಹಿಸಿಕೊಳ್ಳಲಾಗದ ತೀವ್ರ ಭಾವಾವೇಶದಲ್ಲಿ ಜೀವ ತೆರುವವರ ಕೃತ್ಯವನ್ನು ಆತ್ಮಹತ್ಯೆ ಎನ್ನಲಾಗುತ್ತದೆ. ಆದರೆ ತಮ್ಮ ಜೀವನದ ಕಾರ್‍ಯ, ಗುರಿ, ಉದ್ದೇಶ ಎಲ್ಲ ಬಗೆಯಲ್ಲೂ ಪೂರ್ತಿಗೊಂಡಿದೆಯೆಂಬ ಕೃತಕೃತ್ಯತೆಯ ಭಾವನೆಯಿಂದ ತಮ್ಮ ಐಹಿಕ ಅಸ್ತಿತ್ವವನ್ನು ತುಂಬು ಹರ್ಷದಿಂದ ಸಮಾಪ್ತಿಗೊಳಿಸುವವರ ಕೃತ್ಯವನ್ನು ಆತ್ಮಸಮರ್ಪಣೆ ಎನ್ನುತ್ತಾರೆ” ಎಂದಿದ್ದಾರೆ. ಎಷ್ಟು ವ್ಯತ್ಯಾಸ ಬದುಕನ್ನು ಸ್ವೀಕರಿಸುವ ಬಗೆಯಲ್ಲೂ.

ಇಲ್ಲಿ ಆತ್ಮನಾಶಕ್ಕೆ ಕಾರಣ, ಉದ್ದೇಶ, ಆತ್ಮನಾಶ ಮತ್ತು ಧರ್ಮ, ಅಗ್ನಿಪ್ರವೇಶ, ಸತಿ, ಜೋಹರ, ಸಂಲೇಖನಾ, ಸಾಮೂಹಿಕ ಆತ್ಮನಾಶ(ಯುದ್ಧಗಳಲ್ಲಿ ಮಡಿದ ವೀರಯೋಧರ ಪತ್ನಿಯರು ಸಾಮೂಹಿಕವಾಗಿ ಮರಣವನ್ನಪ್ಪುವುದು), ಸಂಜೀವನ ಸಮಾಧಿ, ಸದೇಹ ಪರಲೋಕಗಮನ ಇವೆಲ್ಲವುಗಳನ್ನು ಅವಲೋಕಿಸಿದ್ದಾರೆ. ಒಟ್ಟಿನಲ್ಲಿ ಸಾವಿಗೆ ನೂರಾರು ವಿಧಾನಗಳು. ಸೀತೆ, ರಾಮ, ಕೃಷ್ಣ, ಪಾಂಡವರು, ಹನುಮಂತರಾದಿಯಾಗಿ ಪುಟ್ಟ ಪಾರಿವಾಳ ಜೋಡಿಯ ಆತ್ಮನಾಶದ ಪ್ರಸಂಗಗಳನ್ನೂ ಅವಲೋಕಿಸಿದ್ದಾರೆ. ಆದರೆ ಸದೇಹ ಪರಲೋಕಗಮನವನ್ನು ಆತ್ಮನಾಶವೆನ್ನಲಾಗದು ಎಂದಿದ್ದಾರೆ.

ಭಿಡೆಯವರು ಭಾರತೀಯರು ಹೇಗೆ ಆತ್ಮವನ್ನು ಒಂದು ಜೀವಂತಶಕ್ತಿಯಾಗಿ ನೋಡಿದ್ದಾರೆ ಎಂಬುದನ್ನು ಹೇಳಿದ್ದಾರೆ. ಅಲ್ಲದೆ ರಾಮಾಯಣ, ಮಹಾಭಾರತಗಳಲ್ಲಿ ಈ ಶಕ್ತಿ ಹೇಗೆ ಕೆಲವು ಕಡೆ ಸಕಾರಾತ್ಮಕವಾಗಿ, ಇನ್ನೂ ಕೆಲವು ಕಡೆ ನಕಾರಾತ್ಮಕವಾಗಿ ಬಳಕೆಯಾಯಿತು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೇ ಭಾರತೀಯ ವಿಚಾರಧಾರೆಯಲ್ಲಿ ಸಂಕಲ್ಪ ಸ್ವಾತಂತ್ರ್ಯವೆನ್ನುವುದು. ಆತ್ಮನಾಶಕ್ಕೂ ಸಂಕಲ್ಪದ ಅಗತ್ಯವಿದೆ. ರ.ಭಿಡೆಯವರು ಸೀತೆಯ ಆತ್ಮನಾಶವನ್ನು ಹೇಳುವಾಗ ಅರ್ಥವಾಗುತ್ತದೆ. ಸೀತೆ, ಬಂದ ಎಲ್ಲಾ ಸಂಕಟಗಳನ್ನು ರಾಮನ ಮೇಲಿನ ಪ್ರೀತಿಯಿಂದ ಸಹಿಸಿಕೊಂಡಳಾದರೂ ಕೊನೆಯಲ್ಲಿ ಸೀತೆ ಭೂಮಿತಾಯಿಯನ್ನು ಸೇರಿ ಆತ್ಮನಾಶ ಮಾಡಿಕೊಂಡಿದ್ದು ಮಾತ್ರ ಸಮಸ್ತ ಪುರುಷವರ್ಗದ ಶಂಕಾಪ್ರವೃತ್ತಿಯನ್ನು ಧಿಕ್ಕರಿಸಲು ಎನಿಸುತ್ತದೆ. ಈ ಪುಸ್ತಕದಲ್ಲಿ ದಾಖಲಾದ ಎಲ್ಲ ಆತ್ಮನಾಶದ ಕಥಾನಕಗಳಲ್ಲಿ ಕಾಡುವುದೆಂದರೆ ಸೀತೆಯ ವ್ಯಥೆ ಮತ್ತು ಪಾರಿವಾಳದ ಆತ್ಮನಾಶ. ರಾಮಾಯಣ, ಮಹಾಭಾರತದ ಆಳ ಅಧ್ಯಯನಕ್ಕೆ ಭಿಡೆಯವರ ಈ ಹೊತ್ತಿಗೆ ಒಂದು ಆಯ್ಕೆಯಾಗಬಹುದು.

ಮಗಳನ್ನೇ ಕೊಲ್ಲಲು ಬಂದರು; ಸಬಾಟಿನಾ ಸಾಯಲಿಲ್ಲ!

ಎನಿಗ್ಮಾ ಪೋಸ್ಟ್

ದಿನೈದು ವರ್ಷದ ಆ ಹುಡುಗಿಗೆ, ತನ್ನ ಜೊತೆ ಓದುತ್ತಿರೋ ಇತರ ಹುಡುಗಿಯರ ಹಾಗೇ ಲಿಪ್ಸ್ಟಿಕ್ ಹಚ್ಚಿಕೊಳ್ಳಬೇಕು ಅನ್ನಿಸಿತು. ಅವರ ಹಾಗೆಯೇ ಜೀನ್ಸ್ ತೊಡಬೇಕು ಅನ್ನಿಸಿತು. ಅಷ್ಟೆ; ಅವಳ ಅಪ್ಪ, ಅಮ್ಮ ಕೆಂಡಾಮಂಡಲವಾಗಿಬಿಟ್ಟಿದ್ದರು.

ಹದಿಹರೆಯದ ಹುಡುಗನನ್ನು ಚುಂಬಿಸಿದ ಬಗ್ಗೆ ಆಕೆ ಡೈರಿಯಲ್ಲಿ ಬರೆದುಕೊಂಡಿದ್ದಳು. ಅದನ್ನೋದಿದ ಅವಳ ತಾಯಿ, ಅವಳನ್ನು ಒದೆದಳು, ಕೆನ್ನೆಗೆ ಬಾರಿಸಿದಳು. ಸೂಳೆ ಎಂದು ಬೆಂಕಿ ಕಾರಿದಳು.

ಅವಳೊಮ್ಮೆ ಬಿಗಿಯಾದ ಟೀ-ಶರ್ಟ್ ಧರಿಸಿದ್ದಕ್ಕೆ ಅವಳ ತಾಯಿ ಚಪ್ಪಲಿಯಿಂದ ಮಗಳ ಮುಖದ ಮೇಲೆ ಹೊಡೆದಳು – ತುಟಿ ಸೀಳಿ ಹೋಗುವ ಹಾಗೆ.

ಹೆತ್ತವರಿಂದಲೇ ಅಂಥ ರಾಕ್ಷಸ ಹಿಂಸೆಯನ್ನು ಅನುಭವಿಸಿದ ಆ ಹುಡುಗಿ ಸಬಾಟಿನಾ; ಸಬಾಟಿನಾ ಜೇಮ್ಸ್. ಮುಸ್ಲಿಂ ಕುಟುಂಬದ ಹುಡುಗಿ, ತನ್ನ ಕುಟುಂಬದ ಕತ್ತಲ ಕೋಣೆಯಿಂದ ಆಸ್ಟ್ರಿಯಾದ ಪಾಶ್ಚಾತ್ಯ ಸಂಸ್ಕೃತಿಯ ಬೆಳಕಿನ ಎಳೆಗಳಿಗೆ ಒಡ್ಡಿಕೊಳ್ಳಬಯಸಿದ್ದಳು. ಅವಳ ಕುಟುಂಬದ ಲೆಕ್ಕದಲ್ಲಿ, ಅವಳು ಮಹಾಪರಾಧ ಮಾಡಹೊರಟಿದ್ದಳು.

ಕಾಶ್ಮೀರ ಸಮೀಪದ ಹಳ್ಳಿಯೊಂದರಲ್ಲಿ ಬೆಳೆದ ಅವಳು, ಆಸ್ಟ್ರಿಯಾಕ್ಕೆ ಹೋದದ್ದು ಹನ್ನೊಂದು ವರ್ಷದವಳಿದ್ದಾಗ. ಅವಳ ಕುಟುಂಬ ಪಾಕಿಸ್ತಾನದ ಲಾಹೋರ್ನಿಂದ ಆಸ್ಟ್ರಿಯಾಕ್ಕೆ ವಲಸೆ ಹೋಗಿತ್ತು. ಅವಳ ಪಾಲಿಗೆ ಬದುಕು ನರಕವಾದದ್ದು ಕೂಡ ಅಲ್ಲಿಂದಲೇ. ಅಲ್ಲಿ ಅವಳು ಹೊಸ ಕನಸು ಹುಡುಕಿಕೊಳ್ಳತೊಡಗಿದ್ದರೆ, ಅವಳ ಕುಟುಂಬ ಮಾತ್ರ, ಅವಳನ್ನು ಸೆರಗಿನ ಕೆಂಡವೆಂಬಂತೆ ನೋಡಿತ್ತು.

ಸಾಂಪ್ರದಾಯಿಕ ಉಡುಪನ್ನು ಮಗಳು ಧಿಕ್ಕರಿಸತೊಡಗಿದ್ದು ಅವಳ ತಂದೆತಾಯಿಗೆ ಒಪ್ಪಿಗೆಯಾಗಲಿಲ್ಲ. ಸಂಬಂಧಿಯೊಬ್ಬನೊಂದಿಗೆ ಅವಳ ಮದುವೆ ಮಾಡಬೇಕೆಂದು ಅವರಾಗಲೇ ನಿರ್ಧರಿಸಿದ್ದರು. ಅದನ್ನೂ ಆಕೆ ನಿರಾಕರಿಸಿದಳು. ಅವಳು ಹೋಗುತ್ತಿರುವ ಶಾಲೆಯಲ್ಲಿ ವೇಶ್ಯಾವೃತ್ತಿ ಹೇಳಿಕೊಡಲಾಗುತ್ತಿದೆಯಾ ಅಂತಲೂ ಯೋಚಿಸುವ ಮಟ್ಟಕ್ಕೆ ಅವಳಪ್ಪ ಇಳಿದ. ಮಗಳ ಕನ್ಯತ್ವವನ್ನೇ ಪರೀಕ್ಷೆ ಮಾಡಿ ನೋಡುವ ಮಟ್ಟಕ್ಕೆ ಅವಳ ತಾಯಿ ಹೋದಳು.

ಹದಿಹರೆಯದವಳ ಮನಸ್ಸು ಒಡೆದುಹೋಗಿತ್ತು.

ಆಸ್ಟ್ರಿಯಾದಿಂದ ಪಾಕಿಸ್ತಾನಕ್ಕೊಮ್ಮೆ ಹೋದಾಗಲಂತೂ ಅವಳು ಭಯಂಕರ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳೋ ಹಾಗಾಯಿತು. ಅಲ್ಲಿ ಬಿಗಿಯುಡುಪಿನಲ್ಲಿದ್ದ ಮಗಳು ಪುರುಷರ ಕಣ್ಣಿನ ಕೇಂದ್ರಬಿಂದುವಾದದ್ದಕ್ಕೆ ಸಂಬಂಧಿಗಳ ಎದುರೇ ಅವಳ ತಾಯಿ ದನ ಬಡಿಯುವ ಹಾಗೆ ಅವಳನ್ನು ಬಡಿದುಬಿಟ್ಟಳು. ಆಸ್ಟ್ರಿಯಾ ಶಾಲೆಯ ಸಹವಾಸ ಸಾಕೆಂದು, ಮಗಳನ್ನು ಮದರಸಾಕ್ಕೆ ಕಳಿಸುವ ನಿರ್ಧಾರವೂ ಆಗಿಹೋಯಿತು. ಆಕೆಗೆ ಆಗ ಹದಿನಾರು. ಮದರಸಾದಲ್ಲಿ ಅವಳು ಸುಮಾರು ಮೂವತ್ತು ಹುಡುಗಿಯರಿರುವ ಕೋಣೆಯ ಪಾಲಾಗಿಬಿಟ್ಟಳು. ದಿನವಿಡೀ ಕುರಾನ್ ಅಧ್ಯಯನ, ಪ್ರಾರ್ಥನೆ ಮತ್ತು ಪ್ರವಚನ ಆಲಿಸುವುದು. ಸಾಕುಸಾಕಾಗಿಹೋಯಿತು. ಎಷ್ಟು ರೋಸಿಹೋಗಿದ್ದಳೆಂದರೆ, ಊಟವನ್ನೇ ತಿರಸ್ಕರಿಸಿ ಕುಳಿತುಬಿಟ್ಟಳು. ಮದರಸಾ ಅವಳನ್ನು ಹೊರಹಾಕಿತು. ಮೂರು ತಿಂಗಳ ನರಕ ಅಲ್ಲಿಗೆ ಮುಗಿದಿತ್ತು. ಆಸ್ಟ್ರಿಯಾಕ್ಕೆ ಮರಳಬೇಕು ಅನ್ನೋ ಆಸೆ ಹೆಚ್ಚಾದಾಗ, ತಂದೆ ತಾಯಿ ತೋರಿಸಿದ ಹುಡುಗನ ಜೊತೆ ಮದುವೆಗೆ ಒಪ್ಪಿಗೆ ಹೇಳಿದಳು. ಕಡೆಗೂ ಆಸ್ಟ್ರಿಯಾಕ್ಕೆ ಹಿಂತಿರುಗೋಕ್ಕೆ ಅವಕಾಶ ಸಿಕ್ಕಿತು. ಆದರೆ ಅದಕ್ಕಾಗಿ ಅವಳು ಆ ಹುಡುಗನ ಜೊತೆ ನಿಶ್ಚಿತಾರ್ಥದ ದಿನದವರೆಗೂ ಕಾಯಬೇಕಾಯಿತು.

ಮರಳಿ ಮನೆಗೆ ಬಂದವಳಿಗೆ, ಆ ಹುಡುಗನ ಜೊತೆ ಮದುವೆಯಾಗೋ ಮನಸ್ಸಂತೂ ಇರಲಿಲ್ಲ. ತನ್ನ ಆಲೋಚನೆ ಬಗ್ಗೆ ತಂದೆ ತಾಯಿಗೆ ಸುಳಿವು ಸಿಕ್ಕಿಬಿಟ್ಟಿತು. ಮಗಳು ತಮ್ಮ ಮಾತಿಗೆ ಮಣಿಯುವುದಿಲ್ಲ ಅನ್ನೋದು ಹೆಚ್ಚು ಸ್ಪಷ್ಟವಾಗುತ್ತಿದ್ದಂತೆ ಅವರು, ಅವಳನ್ನು ಕೊಂದುಬಿಡುವ ಮಾತಾಡಿದರು. ಮನೆಯ ಮರ್ಯಾದೆಗಿಂತ ನಿನ್ನ ಪ್ರಾಣ ದೊಡ್ಡದಲ್ಲ, ಹುಷಾರ್ ಎಂದು ಸಿಡಿದುಬಿಟ್ಟರು. ಅದರ ಕ್ರೌರ್ಯದಿಂದ ತಪ್ಪಿಸಿಕೊಳ್ಳಲೇಬೇಕಿತ್ತು. ಮನೆ ಬಿಟ್ಟು ಓಡಿದಳು. ಎಲ್ಲೋ ಒಂದು ಕೆಲಸಕ್ಕೆ ಸೇರಿಕೊಂಡಳು. ಅಲ್ಲಿಗೂ ಕುಟುಂಬದ ಕಿರಿಕಿರಿ ಅಟ್ಟಿಸಿಕೊಂಡು ಬಂತು. ಆ ಕಾರಣಕ್ಕಾಗಿಯೇ ಕೆಲಸವೂ ಹೋಯಿತು. ಅಲ್ಲಿಂದಲು ಓಡಿಹೋಗಬೇಕಾದ ಅನಿವಾರ್ಯತೆ ಬಂತು. ಗೆಳೆಯರ ನೆರವು ಪಡೆದು ವಿಯೆನ್ನಾಕ್ಕೆ ಹೋದಳು.

ವಿಯೆನ್ನಾ ಅವಳಿಗೆ ಹೊಸ ಬದುಕು ಕೊಟ್ಟಿತು. ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದಿದಳು. ಆಕೆ ಸಬಾಟಿನಾ ಜೇಮ್ಸ್ ಆದದ್ದು ಆಗ.

ಇವತ್ತು  ಸಬಾಟಿನಾ ಜರ್ಮನಿಯಲ್ಲೊಂದು ಸಂಸ್ಥೆ ನಡೆಸುತ್ತಿದ್ದಾಳೆ. ತಾನು ಎದುರಿಸಿದಂಥದೇ ಪರಿಸ್ಥಿತಿಯ ಕಾರಣದಿಂದಾಗಿ ಮನೆಬಿಟ್ಟು ಓಡಬಂದ ಹೆಣ್ಣುಮಕ್ಕಳಿಗೆ ನೆಲೆ ಮತ್ತು ನೆರಳು ಕಲ್ಪಿಸುವ ಸಂಸ್ಥೆ ಅದು.

~

ಮರ್ಯಾದಾ ಹತ್ಯೆಯ ಕರಾಳತೆಯಿಂದ ತಪ್ಪಿಸಿಕೊಂಡಳಲ್ಲ ಅನ್ನೋ ಕಾರಣಕ್ಕೆ ಸಬಾಟಿನಾ ಜೇಮ್ಸ್ ಕಥೆ ಒಂದು ನಿರಾಳತೆಯನ್ನು ನಮ್ಮ ಮನಸ್ಸಲ್ಲಿ ಉಳಿಸುತ್ತದೆ. ಆದರೆ ಅದಕ್ಕಾಗಿ ಅವಳು ಹಾದುಬಂದ ಕಡುಭಯಂಕರ ದಾರಿ ತಲ್ಲಣ ಹುಟ್ಟಿಸುತ್ತದೆ.

ತನ್ನ ಕಥೆಯನ್ನು ‘ಸಬಾಟಿನಾ – ಫ್ರಮ್ ಇಸ್ಲಾಂ ಟು ಕ್ರಿಶ್ಚಿಯಾನಿಟಿ – ಎ ಡೆತ್ ಸೆಂಟೆನ್ಸ್’ ಎಂದು ಆಕೆ ಬರೆದುಕೊಂಡಿದ್ದಾಳೆ. ಮನೆಬಿಟ್ಟ ಬಳಿಕ ವಿಯೆನ್ನಾಕ್ಕೆ ಬಂದವಳನ್ನು ಫೊಟೋಗ್ರಾಫರನೊಬ್ಬ, ಮಾಡೆಲ್ ಲೋಕಕ್ಕೆ ಪರಿಚಯ ಮಾಡಿಕೊಡ್ತೀನಿ ಎಂದು ಹೇಳಿ, ಬೆತ್ತಲೆ ಪೋಸು ಕೊಡಲು ಅವಳನ್ನೊಪ್ಪಿಸಿ ವಂಚಿಸುತ್ತಾನೆ. ಅವಳ ಸಮ್ಮತಿಯೇ ಇಲ್ಲದೆ ಆಸ್ಟ್ರಿಯಾದ ಪತ್ರಿಕೆಯಲ್ಲಿ ಅವಳ ಆ ಚಿತ್ರಗಳು ಪ್ರಕಟವಾಗುತ್ತವೆ. ಅಸಹಾಯಕಳೊಬ್ಬಳನ್ನು ಹೆಜ್ಜೆಹೆಜ್ಜೆಗೂ ಜಗತ್ತು ಹೇಗೆ ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತದೆ ಎನ್ನೋದಕ್ಕೆ ಅದೊಂದು ಉದಾಹರಣೆ ಅಷ್ಟೆ. ಅವೆಲ್ಲ ವಂಚನೆ, ಸಂಚುಗಳನ್ನು ದಾಟಿ ಸಬಾಟಿನಾ ಇವತ್ತು ನಮ್ಮೆದುರು ದಿಟ್ಟೆಯಾಗಿ ನಿಂತಿದ್ದಾಳೆಂದರೆ, ಅದು ಅವಳ ಸ್ವಂತ ಬಲದಿಂದ ಮಾತ್ರ.

ಸಾವಿರ ಸಾವಿರ ಹುಡುಗಿಯರ ಪ್ರತಿನಿಧಿ ತಾನು ಎಂದು ಹೇಳಿಕೊಳ್ಳುವಾಗ, ಸಬಾಟಿನಾಗೆ ಗೊತ್ತಿದೆ: ಎಷ್ಟೊಂದು ಹುಡುಗಿಯರು ತಾನು ಕಂಡಂಥದೇ ಕ್ರೂರ ಪ್ರಪಂಚದಲ್ಲಿ ಚಡಪಡಿಸುತ್ತಿದ್ದಾರೆ; ತಪ್ಪಿಸಿಕೊಳ್ಳಲಾರದೆ ಸಾಯುತ್ತಿದ್ದಾರೆ ಅನ್ನುವುದು.

ಸಬಾಟಿನಾ, ಅವರೆಲ್ಲರ ಪಾಲಿನ ಸಂಕಲ್ಪ.

%d bloggers like this: