ಆತ್ಮನಾಶದ ಕಥಾನಕಗಳು

ದೀಪಾ ಫಡ್ಕೆ

ಭಾರತೀಯ ಚಿಂತನೆಗಳ ಶ್ರೀಮಂತಿಕೆಗೆ ಮೂಲ ಕಾರಣ ಅವೆಲ್ಲವೂ ಆತ್ಮ ಸಂಬಂಧಿತ ಚಿಂತನೆಗಳಾಗಿರುವುದು. ಆತ್ಮದ ವಿಸ್ತೃತ ಕಲ್ಪನೆಯನ್ನು ಗೀತೆಯಲ್ಲಿ ಕೃಷ್ಣ ನೀಡಿದ್ದಾನೆ. ಮುಂದೆ ಭಾರತೀಯ ದಾರ್ಶನಿಕರು ಮಾನಸಿಕ ಕ್ರಿಯೆಗಳಿಗೆ ಮನಸ್ಸು ಎನ್ನುವ ಹೆಸರಿದ್ದಂತೆ ವಾಸ್ತವ, ಸತ್ಯವೆನ್ನುವ ಅನುಭವಕ್ಕೆ ಆತ್ಮ ಎಂದರು. ಅಥವಾ ಮನಸ್ಸಿನೊಳಗಿರುವ ದಿವ್ಯಶಕ್ತಿಯೆಂದರು. ಇನ್ನು ಹುಟ್ಟು ಸಾವು ಪ್ರತಿಜೀವಿಯ ಬಾಳಿನ ಎರಡು ಕೊನೆಗಳು. ಹುಟ್ಟಿದ ಪ್ರತಿ ಜೀವಿ ಸಾವನ್ನು ಬಗಲಲ್ಲೇ ಇಟ್ಟುಕೊಂಡು ಹುಟ್ಟುತ್ತದೆ. ಹುಟ್ಟು ನಮ್ಮ ಕೈಯಲಿಲ್ಲ. ಆದರೆ ಸಾವನ್ನು ಕೆಲವು ಸನ್ನಿವೇಶಗಳಲ್ಲಿ ನಮ್ಮಿಚ್ಛೆಯಂತೆ ಬರಮಾಡಿಕೊಳ್ಳಬಹುದು. ಇದರಲ್ಲಿ ಆತ್ಮಹತ್ಯೆ ಒಂದು ವಿಧಾನ. ಆತ್ಮಹತ್ಯೆ ಇಚ್ಛಾಮರಣವಾದರೂ ಇಚ್ಛಾಮರಣಕ್ಕೆ ಸಿಕ್ಕಿದ ಮಾನ ಆತ್ಮಹತ್ಯೆಗೆ ಸಿಕ್ಕಿಲ್ಲ. ಉದಾ; ಭೀಷ್ಮ ಇಚ್ಛಾಮರಣಿಯೆನ್ನುವುದು. ಭೀಷ್ಮನ ಮರಣ ಮಹಾಭಾರತದಲ್ಲಿ ಕಂಡ ಅತ್ಯಂತ ಗೌರವದ ಮರಣ. ಹೀಗೆ, ಆತ್ಮಹತ್ಯೆ ಎನ್ನುವ ನಿಸರ್ಗವಿರೋಧಿ ವಿಷಯ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಕಾವ್ಯಗಳಾದ ರಾಮಾಯಣ, ಮಹಾಭಾರತದಲ್ಲಿ ಹೇಗೆ ಕಂಡು ಬಂದಿದೆ ಎನ್ನುವ ಅಮೂಲ್ಯ ಅವಲೋಕನವನ್ನು ದಿ. ಶ್ರೀ.ರ.ಭಿಡೆಯವರು ಮರಾಠಿಯಲ್ಲಿ ಮಾಡಿದ್ದು ಅದನ್ನು ಕನ್ನಡೀಕರಿಸಿದ್ದು ವಿರೂಪಾಕ್ಷ ಕುಲಕರ್ಣಿಯವರು.

ಮನುಷ್ಯನ ಮನಸ್ಸಿನ ನೂರಾರು ಭಾವನೆಗಳ ಅನಾವರಣ ರಾಮಾಯಣ, ಮಹಾಭಾರತ. ಇವೆರಡು ಕಾವ್ಯಗಳಲ್ಲಿ ಗೆದ್ದವನು ಸೋತ, ಸೋತವನು ಗೆದ್ದ. ಈ ಕಾವ್ಯಗಳಲ್ಲಿನ ನಾಯಕ, ನಾಯಕಿಯರಲ್ಲದೆ ಅದೆಷ್ಟು ಜನ ಸತ್ತು ಬದುಕಿದರು, ಬದುಕಿ ಸತ್ತರು ಅನ್ನುವುದು ಇಲ್ಲಿ ಅವಲೋಕನಕ್ಕೆ ಒಳಗಾದ ವಿಷಯ. ಭಿಡೆಯವರು ಆತ್ಮಹತ್ಯೆ -ಅನ್ನುವ ಶಬ್ದಕ್ಕೆ ಸಮಾನಾರ್ಥಕವೆನ್ನುವಂತೆ ಆತ್ಮನಾಶ ಎನ್ನುವ ಶಬ್ದ ಬಳಸಿದ್ದಾರೆ. ಏಕೆಂದರೆ ಅಲ್ಲಿ ನಾಶವಾಗೋದು ಆತ್ಮ ರೂಪದಲ್ಲಿರುವ ದಿವ್ಯಶಕ್ತಿ. ಸಾವನ್ನೂ ಗಂಭೀರವಾಗಿ ನೋಡಬಯಸುವವರು ನಾವು ಭಾರತೀಯರು, ಎಷ್ಟೆಂದರೂ ನಮ್ಮದು ಆತ್ಮಚೈತನ್ಯಭರಿತ ಬದುಕಲ್ಲವೇ.

ಭಿಡೆಯವರು, “ಸ್ವಾತಂತ್ರವೀರ ಸಾವರ್‍ಕರ್ ಅವರು ಆತ್ಮಹತ್ಯೆ ಮತ್ತು ಆತ್ಮಸಮರ್ಪಣೆ ಪದಗಳ ಅರ್ಥವ್ಯತ್ಯಾಸವನ್ನು ನಿಖರವಾಗಿ ವ್ಯಕ್ತಪಡಿಸಿದ್ದಾರೆ ಎಂದು ಈ ಹೊತ್ತಿಗೆಯಲ್ಲಿ ಹೇಳಿದ್ದಾರೆ. ತುಂಬ ಅಸಮಾಧಾನ, ಸೇಡಿನ ತೀವ್ರವಾದ ಅರಿವು, ಸಂಕಟಗಳ ಬೇಸರ, ನೆಮ್ಮದಿಯಾಗಿ ಬಾಳಲು ಸಾಧ್ಯವಾಗದ ಭಾವನೆಗಳಿಂದಾಗಿ ಅತೀ ಅತೃಪ್ತವಾದ ಮನಃಸ್ಥಿತಿಯಲ್ಲಿ, ಸಹಿಸಿಕೊಳ್ಳಲಾಗದ ತೀವ್ರ ಭಾವಾವೇಶದಲ್ಲಿ ಜೀವ ತೆರುವವರ ಕೃತ್ಯವನ್ನು ಆತ್ಮಹತ್ಯೆ ಎನ್ನಲಾಗುತ್ತದೆ. ಆದರೆ ತಮ್ಮ ಜೀವನದ ಕಾರ್‍ಯ, ಗುರಿ, ಉದ್ದೇಶ ಎಲ್ಲ ಬಗೆಯಲ್ಲೂ ಪೂರ್ತಿಗೊಂಡಿದೆಯೆಂಬ ಕೃತಕೃತ್ಯತೆಯ ಭಾವನೆಯಿಂದ ತಮ್ಮ ಐಹಿಕ ಅಸ್ತಿತ್ವವನ್ನು ತುಂಬು ಹರ್ಷದಿಂದ ಸಮಾಪ್ತಿಗೊಳಿಸುವವರ ಕೃತ್ಯವನ್ನು ಆತ್ಮಸಮರ್ಪಣೆ ಎನ್ನುತ್ತಾರೆ” ಎಂದಿದ್ದಾರೆ. ಎಷ್ಟು ವ್ಯತ್ಯಾಸ ಬದುಕನ್ನು ಸ್ವೀಕರಿಸುವ ಬಗೆಯಲ್ಲೂ.

ಇಲ್ಲಿ ಆತ್ಮನಾಶಕ್ಕೆ ಕಾರಣ, ಉದ್ದೇಶ, ಆತ್ಮನಾಶ ಮತ್ತು ಧರ್ಮ, ಅಗ್ನಿಪ್ರವೇಶ, ಸತಿ, ಜೋಹರ, ಸಂಲೇಖನಾ, ಸಾಮೂಹಿಕ ಆತ್ಮನಾಶ(ಯುದ್ಧಗಳಲ್ಲಿ ಮಡಿದ ವೀರಯೋಧರ ಪತ್ನಿಯರು ಸಾಮೂಹಿಕವಾಗಿ ಮರಣವನ್ನಪ್ಪುವುದು), ಸಂಜೀವನ ಸಮಾಧಿ, ಸದೇಹ ಪರಲೋಕಗಮನ ಇವೆಲ್ಲವುಗಳನ್ನು ಅವಲೋಕಿಸಿದ್ದಾರೆ. ಒಟ್ಟಿನಲ್ಲಿ ಸಾವಿಗೆ ನೂರಾರು ವಿಧಾನಗಳು. ಸೀತೆ, ರಾಮ, ಕೃಷ್ಣ, ಪಾಂಡವರು, ಹನುಮಂತರಾದಿಯಾಗಿ ಪುಟ್ಟ ಪಾರಿವಾಳ ಜೋಡಿಯ ಆತ್ಮನಾಶದ ಪ್ರಸಂಗಗಳನ್ನೂ ಅವಲೋಕಿಸಿದ್ದಾರೆ. ಆದರೆ ಸದೇಹ ಪರಲೋಕಗಮನವನ್ನು ಆತ್ಮನಾಶವೆನ್ನಲಾಗದು ಎಂದಿದ್ದಾರೆ.

ಭಿಡೆಯವರು ಭಾರತೀಯರು ಹೇಗೆ ಆತ್ಮವನ್ನು ಒಂದು ಜೀವಂತಶಕ್ತಿಯಾಗಿ ನೋಡಿದ್ದಾರೆ ಎಂಬುದನ್ನು ಹೇಳಿದ್ದಾರೆ. ಅಲ್ಲದೆ ರಾಮಾಯಣ, ಮಹಾಭಾರತಗಳಲ್ಲಿ ಈ ಶಕ್ತಿ ಹೇಗೆ ಕೆಲವು ಕಡೆ ಸಕಾರಾತ್ಮಕವಾಗಿ, ಇನ್ನೂ ಕೆಲವು ಕಡೆ ನಕಾರಾತ್ಮಕವಾಗಿ ಬಳಕೆಯಾಯಿತು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೇ ಭಾರತೀಯ ವಿಚಾರಧಾರೆಯಲ್ಲಿ ಸಂಕಲ್ಪ ಸ್ವಾತಂತ್ರ್ಯವೆನ್ನುವುದು. ಆತ್ಮನಾಶಕ್ಕೂ ಸಂಕಲ್ಪದ ಅಗತ್ಯವಿದೆ. ರ.ಭಿಡೆಯವರು ಸೀತೆಯ ಆತ್ಮನಾಶವನ್ನು ಹೇಳುವಾಗ ಅರ್ಥವಾಗುತ್ತದೆ. ಸೀತೆ, ಬಂದ ಎಲ್ಲಾ ಸಂಕಟಗಳನ್ನು ರಾಮನ ಮೇಲಿನ ಪ್ರೀತಿಯಿಂದ ಸಹಿಸಿಕೊಂಡಳಾದರೂ ಕೊನೆಯಲ್ಲಿ ಸೀತೆ ಭೂಮಿತಾಯಿಯನ್ನು ಸೇರಿ ಆತ್ಮನಾಶ ಮಾಡಿಕೊಂಡಿದ್ದು ಮಾತ್ರ ಸಮಸ್ತ ಪುರುಷವರ್ಗದ ಶಂಕಾಪ್ರವೃತ್ತಿಯನ್ನು ಧಿಕ್ಕರಿಸಲು ಎನಿಸುತ್ತದೆ. ಈ ಪುಸ್ತಕದಲ್ಲಿ ದಾಖಲಾದ ಎಲ್ಲ ಆತ್ಮನಾಶದ ಕಥಾನಕಗಳಲ್ಲಿ ಕಾಡುವುದೆಂದರೆ ಸೀತೆಯ ವ್ಯಥೆ ಮತ್ತು ಪಾರಿವಾಳದ ಆತ್ಮನಾಶ. ರಾಮಾಯಣ, ಮಹಾಭಾರತದ ಆಳ ಅಧ್ಯಯನಕ್ಕೆ ಭಿಡೆಯವರ ಈ ಹೊತ್ತಿಗೆ ಒಂದು ಆಯ್ಕೆಯಾಗಬಹುದು.

Advertisements

1 Comment (+add yours?)

  1. suman bhatt
    May 01, 2013 @ 00:53:30

    hi deepaaaa,……..

    Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: