ನಾವೆಲ್ಲ ಹೀಗಿದ್ದರೆ…ಮಾನವೀಯ ಮೌಲ್ಯಗಳಿಗೆ ಕೊರತೆಯೆಲ್ಲಿ?

ಮಮತಾ ದೇವ

ಕೆಲವು ತಿಂಗಳ ಹಿಂದೆ ವಾಹಿನಿಯೊಂದರಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ  ಅಧ್ಯಕ್ಷೆ ಮತ್ತು ಲೇಖಕಿ ಸುಧಾ ಮೂರ್ತಿಯವರ ಸಂದರ್ಶನ ಪ್ರಸಾರವಾಗುತ್ತಿತ್ತು. ಸ್ವಲ್ಪವೂ ಕೃತಕತೆಯ ಲೇಪವಿಲ್ಲದೆ ಸಹಜವಾಗಿ ಮಾತನಾಡುವ ಸರಳ ವ್ಯಕ್ತಿ ಸುಧಾ ಮೂರ್ತಿಯವರು ಹೇಳಿದ ಮಾತು ಎಷ್ಟೊಂದು ಮಹತ್ವದ್ದು ಅನ್ನಿಸಿತು. “ಇಂದಿನ ದಿನಗಳಲ್ಲಿ ಪರಸ್ಪರ ನಂಬಿಕೆ, ಗೌರವ ಕಡಿಮೆಯಾಗುತ್ತಿರುವುದು ದಾಂಪತ್ಯ ಜೀವನದ ಬಿರುಕಿಗೆ ಮುಖ್ಯ ಕಾರಣ. ಪತಿ ಪತ್ನಿಯರಲ್ಲಿ ಪರಸ್ಪರ ನಂಬಿಕೆ, ಗೌರವ ಇದ್ದರೆ ಸಾಧನೆಗೆ ಏನೂ ತೊಂದರೆಯಾಗದು. ನಮ್ಮದು ಅಂತಹ ದಾಂಪತ್ಯ. ನಾನು ನನಗೆ ಇಷ್ಟವಾದುದನ್ನು ಮಾಡಲು ಸ್ವಾತಂತ್ರ್ಯವಿದೆ. ನಾವು  ಮಾಡುವ ಕೆಲಸವನ್ನು ಪರಸ್ಪರ ಗೌರವಿಸುತ್ತೇವೆ.” ಹೀಗೆನ್ನುತ್ತಾ ತಮ್ಮ ಮಧುರ ದಾಂಪತ್ಯದ ಗುಟ್ಟನ್ನು ತೆರೆದಿಟ್ಟರು. ಜೊತೆಗೆ ಇನ್ನಷ್ಟು ಅವರ ಆಸಕ್ತಿಗಳ ಬಗ್ಗೆ ಮಾಹಿತಿ ನೀಡಿದರು. ಆದಷ್ಟು ಇವರ ಎಲ್ಲ ಪುಸ್ತಕಗಳನ್ನು ಓದಬೇಕೆನ್ನಿತು. ಆದರೆ ಸಾಧ್ಯವಾಗಿರಲಿಲ್ಲ. ಮೊನ್ನೆ ಪುಸ್ತಕದ ಮಳಿಗೆಯೊಂದರಲ್ಲಿ ಮಕ್ಕಳಿಗಾಗಿ ಕೆಲವೊಂದು ಪುಸ್ತಕ ಖರೀದಿಸುತ್ತಿರುವಾಗ ಒಂದು ಪುಸ್ತಕ ಬಹಳ ಆಕರ್ಷಕವಾಗಿ ಕಾಣಿಸಿತು. ಬೇಸಗೆಯ ಧಗೆ ಬೇರೆ..ನೋಡುವಾಗ ಯಾವುದೋ ತಣ್ಣನೆ ಪೇಯದ ಗ್ಲಾಸುಗಳಿರುವ ಚಿತ್ರ! ಸುಧಾ ಮೂರ್ತಿ ಎಂಬ ಹೆಸರು ದೊಡ್ಡದಾಗಿ ಕಾಣಿಸಿತು. ಇದು ಅಡುಗೆ ಪುಸ್ತಕವಲ್ಲವೆಂಬುದು ಖಚಿತವಾಯಿತು. ಕೈಗೆ ತೆಗೆದುಕೊಂಡು ನೋಡಿದರೆ, ಅದೊಂದು ೨೩ ವಾಸ್ತವ ಕತೆಗಳ ಅಪರೂಪದ ಮಾನವೀಯ ಮೌಲ್ಯ, ಉದಾತ್ತ ಚಿಂತನೆಗಳಿರುವ ಪುಸ್ತಕ. ಖರೀದಿಸಿ ಓದತೊಡಗಿದೆ. ಬೇಸಗೆಯ ಬೇಗೆಯಲ್ಲಿದ್ದರೂ ಮನ ತಂಪೆನಿಸಿತು. ಪ್ರತಿಯೊಂದು ಕತೆಯೂ ಸತ್ಯ ಕತೆ ಆಧಾರಿತವಾಗಿರುವ ಕಾರಣ ಕುತೂಹಲದಿಂದ ಓದಿದೆ. ಸುಲಭವಾಗಿ ಓದಿಸಿಕೊಂಡು ಹೋಗುವ ಈ ಆಂಗ್ಲ ಕೃತಿ ಡಾ. ಸುಧಾ ಮೂರ್ತಿಯವರ ೨೪ನೇ ಕೃತಿ. ಎಲ್ಲ ವಯಸ್ಸಿನವರೂ ಓದಬಹುದಾದ ಪುಸ್ತಕ “ದ ಡೇ ಐ ಸ್ಟಾಪ್ಡ್ ಡ್ರಿಂಕಿಂಗ್ ಮಿಲ್ಕ್”.

ನನಗೆ ಇದರಲ್ಲಿ ಮೊದಲ ಕತೆ ಓದುವಾಗ ರೈಲಿನಲ್ಲಿ ಅಡಗಿ, ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತ, ಹೊರ ದಬ್ಬಲ್ಪಡುತ್ತಿದ್ದ ಒಂದು ಅನಾಥ ಹುಡುಗಿ, ತಂದೆಯ ನಿಧನವಾದ ವಾರದ ನಂತರ ಮಲತಾಯಿಯ ಹಿಂಸೆ ತಡೆಯಲಾಗದೇ ಮನೆಬಿಟ್ಟು ಬಂದ ಚಿತ್ರಾಳಿಗೆ ಟಿಕೆಟ್ ತೆಗೆದು ಮುಂಬಯಿಯಿಂದ ಬೆಂಗಳೂರಿನವರೆಗೆ ಕರೆತಂದು ಸುಧಾ ಮೂರ್ತಿಯವರು ತೋರಿಸಿದ ಮಾನವೀಯತೆ, ಅವಳಿಗೆ ಊಟ ನೀಡಿ, ಅವಳ ಮೇಲಿರುವ ಹೊಡೆತದ, ರಕ್ತದ ಕಲೆಯನ್ನು ನೋಡಿ, ಅವಳ ಕತೆ ಕೇಳಿ ನೊಂದು, ಅವಳನ್ನು ಬೆಂಗಳೂರಿಗೆ ಕರೆತಂದ ಮೇಲೆಯೂ ಕೈಬಿಡದೇ, ಪ್ರತಿ ಹಂತದಲ್ಲೂ ಆಲೋಚಿಸಬೇಕಾಗಿ ಬರುವ ಪರಿಸ್ಥಿತಿ, ಆತಂಕವಿದ್ದರೂ ತೋರ್ಪಡಿಸದೆ ಚಿತ್ರಾಳ ಮನಸ್ಸನ್ನು ಅರಿತು ಅವಳಿಗಾಗಿ ಹಣ ಖರ್ಚು ಮಾಡಿ, ವಸತಿ, ಊಟ, ವಿದ್ಯಾಭ್ಯಾಸ ನೀಡಿ ಉತ್ತಮ ವ್ಯಕ್ತಿಯನ್ನಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದು ಅವರ ಬಗ್ಗೆ ಇನ್ನಷ್ಟು ಗೌರವ  ಮೂಡಿಸಿತು. ಹಾಗೆಯೇ ಚಿತ್ರಾ ಸಹಾ ಉಪಕಾರ ಮಾಡಿದವರನ್ನು ಮರೆಯದೆ, ಚೆನ್ನಾಗಿ ಕಲಿತು, ಉದ್ಯೋಗಕ್ಕೆ ಸೇರಿ, ಪ್ರಥಮ ಸಂಬಳ ಬಂದಾಗ ಸುಧಾ ಅವರಿಗೆ ಸೀರೆ ತಂದುಕೊಟ್ಟು, ವಸತಿ ನಿಲಯದಲ್ಲಿ ಸಲಹಿದ ವಾರ್ಡನ್  ಅಕ್ಕ  ಹಾಗೂ ಕೆಲಸದವರಿಗೂ ಉಡುಗೊರೆ ನೀಡಿ ಪ್ರೀತಿ ವ್ಯಕ್ತಪಡಿಸುವುದು,  ಮನುಷ್ಯರಲ್ಲಿ ಇರುವ ಕೃತಜ್ಞತಾ ಭಾವಕ್ಕೆ ಉದಾಹರಣೆ. ನಂತರ ವಿದೇಶಕ್ಕೆ ಹೋಗಿ ನೆಲೆಸಿದರೂ ಮರೆಯದೇ ಸುಧಾ ಮೂರ್ತಿಯವರನ್ನು ಹಲವು ವರ್ಷಗಳ ಬಳಿಕ ಆಶ್ಚರ್ಯಕರ ರೀತಿಯಲ್ಲಿ ಭೇಟಿಯಾಗಿ, ತನ್ನ ಬಾಳ ಸಂಗಾತಿಯಾಗಲಿರುವ ವಿದೇಶಿ ಹುಡುಗನನ್ನು ಪರಿಚಯಿಸಿ, ಇಬ್ಬರೂ ಪಾದ ಮುಟ್ಟಿ ನಮಸ್ಕರಿಸಿ, ಸುದ್ದಿ ಇಲ್ಲದಂತೆ ಸುಧಾರ ಹೋಟೆಲ್ ಬಿಲ್ ಪಾವತಿಸುವುದು, ಕೊನೆಯಲ್ಲಿ ಸುಧಾಮೂರ್ತಿಯವರ ಪ್ರಶ್ನೆಗೆ ಉತ್ತರಿಸುತ್ತ ಅವರನ್ನು ಅಪ್ಪಿಕೊಂಡು, “ಮ್ಯಾಡಂ, ನೀವು ಆ ದಿನ ನನಗೆ ಟಿಕೆಟ್ ತೆಗೆಸಿ ಬಾಂಬೆಯಿಂದ ಬೆಂಗಳೂರಿಗೆ ಕರೆತಂದು ಸಲಹದೇ ಇದ್ದಿದ್ದರೆ.. ಅನಾಥಳಾಗುತ್ತಿದ್ದೆ, ಭಿಕ್ಷುಕಿ, ಇಲ್ಲವೇ ವೇಶ್ಯೆಯಾಗುತ್ತಿದ್ದೆ. ನಾನು ಈ ರೀತಿ ಉತ್ತಮ ವ್ಯಕ್ತಿಯಾಗಲು ಸಾಧ್ಯವಿರಲಿಲ್ಲ” ಎನ್ನುವ ಮಾತುಗಳು ಮನ ಕಲಕುತ್ತವೆ. ಆದರೂ ಸುಧಾ ಅವರು, “ಇದರಲ್ಲಿ ತನ್ನದೇನಿಲ್ಲ..ನಿನ್ನ ವ್ಯಕ್ತಿತ್ವ ನಿನ್ನ ಶ್ರಮದಿಂದಲೇ ರೂಪುಗೊಂಡಿದೆ” ಎನ್ನುವುದು ಅವರ ದೊಡ್ಡ ಗುಣವನ್ನು ತೋರಿಸುತ್ತದೆ.

ಮಾನವೀಯತೆಯನ್ನು ಬಿಂಬಿಸುವ ಇವರ ಜೀವನಾನುಭವಗಳು ಜೀವನವನ್ನು ಒಳ್ಳೆಯ ರೀತಿಯಲ್ಲಿ ಮಾರ್ಪಡಿಸಲು ಸಹಕಾರಿಯಾಗಿವೆ. ಇಲ್ಲಿನ ಪ್ರತಿಯೊಂದು ಕತೆಯೂ ಅತ್ಯಂತ ಸರಳವಾಗಿ ಚಿತ್ರಿತವಾಗಿದೆ. ಜನರಲ್ಲಿ ಪರಸ್ಪರ ಸಹಕರಿಸಲು, ಉತ್ತಮ ರೀತಿಯಲ್ಲಿ ಬದುಕಲು ಪ್ರೇರೇಪಿಸುತ್ತವೆ. ಎರಡನೇ ಕಥೆ “ರಹಮಾನನ ಅವ್ವ” ಓದುವಾಗ ಹೀಗೂ ಹಿಂದೂ-ಮುಸ್ಲಿಂ ಕುಟುಂಬಗಳು ಹೀಗೂ ಜೊತೆಯಾಗಿ ಬಾಳಲು ಸಾಧ್ಯವೇ ಎಂಬ ಅಚ್ಚರಿಯನ್ನುಂಟುಮಾಡುತ್ತದೆ. ರಹಮಾನ್ ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡು ಹಿಂದೂ ಮನೆಯಲ್ಲಿ ಬೆಳೆಯುತ್ತಾ ಆಚರಣೆಯಲ್ಲಿ ಮುಸಲ್ಮಾನನಾಗಿಯೇ ಉಳಿಯುತ್ತಾನೆ. ತನಗೆ ಉದ್ಯೋಗ ಸಿಕ್ಕಿದ ನಂತರ ಮುಸ್ಲಿಂ ಹುಡುಗಿಯನ್ನೇ ಮದುವೆಯಾಗಿ, ಸಲಹಿದ ಕಾಶೀಬಾಯಿಯನ್ನು ತನ್ನ ಮನೆಗೆ ಕರೆಸಿಕೊಂಡು ತನ್ನ ಅವ್ವನೆಂದು, ಅವರ ಮಗಳು ಉಷ ತನ್ನಕ್ಕನೆಂದು ಪರಿಚಯಿಸುವುದು, ಅವರು ಒಂದೇ ಮನೆಯಲ್ಲಿ ಇರುವುದು, ರಹಮಾನ್ ಮನೆಗೆ ಪಂಚಮಿ ಹಬ್ಬಕ್ಕೆ ಅವನ ಸಾಕುತಾಯಿಯ ಮಗಳು ಉಷ ಬಂದಿರುವುದು, ಅವನ ಮನೆಯಲ್ಲಿ ಹಿಂದೂ ದೇವರ ಫೋಟೋ ಹಾಗೂ ಮುಸಲ್ಮಾನರ ಮೆಕ್ಕಾದ ಚಿತ್ರವಿರುವುದು, ಸುಧಾ ಅವರನ್ನು ತನ್ನ ಮನೆಗೆ ಊಟಕ್ಕೆ ಕರೆಯುವುದು ನಿಜವಾಗಿ ಕೋಮು ಸೌಹಾರ್ದಕ್ಕೆ ಉತ್ತಮ ಉದಾಹರಣೆಯೆನಿಸುತ್ತದೆ.

ಒರಿಸ್ಸಾದ ಹಳ್ಳಿಯೊಂದರಲ್ಲಿ ಶಾಲೆ ನಿರ್ಮಿಸುತ್ತಿರುವಾಗ ವಿಪರೀತ ಮಳೆಗೆ ಸಿಲುಕಿ ಸುಧಾ ಮೂರ್ತಿ ಹತ್ತಿರದ ಗುಡಿಸಲಿನಲ್ಲಿ ಆಶ್ರಯ ಪಡೆಯುತ್ತಾರೆ. ಅಲ್ಲಿ ಅತಿಥಿಯಾಗಿ ಏನಾದರೂ ಸ್ವೀಕರಿಸಲು ಕೇಳಿಕೊಂಡಾಗ, ಬಡವರ ಆತಿಥ್ಯ ಸ್ವೀಕರಿಸದೇ ಇದ್ದರೆ ಬೇಸರವಾದೀತೆಂದು ಟೀ ಕುಡಿಯುತ್ತೀರಾ ಎಂದು ಕೇಳುವಾಗ ಬೇಡವೆಂದು, ಹಾಲು ಆಗಬಹುದೇ ಎಂದಾಗ ಆಗಬಹುದೆನ್ನುತ್ತಾರೆ. ಮನೆಯಾಕೆ ತನ್ನ ಪತಿಯೊಡನೆ  ಮಗುವಿನ ಪಾಲಿನ ಒಂದು ಲೋಟ ಹಾಲು ಮಾತ್ರವಿದೆಯಲ್ಲ. ಏನು ಮಾಡಲಿ? ಎಂಬುದು ಅವರಿಗೆ ಕೇಳಿಸುತ್ತದೆ. ಹೆಂಡತಿಯ ಬಳಿ ಸ್ವಲ್ಪ ನೀರು ಸೇರಿಸಿ ಬಿಸಿಮಾಡಿಸಿ ಮನೆಯಾತ ಕುಡಿಯಲು ಮಗುವಿನ ಪಾಲಿನ ಹಾಲನ್ನು ನೀಡಿದಾಗ ಕುಡಿಯಲಾರದೇ, ತನಗೆ ಇಂದು ಉಪವಾಸದ ದಿನ, ನೀರನ್ನಲ್ಲದೆ ಬೇರೇನೂ ತೆಗೆದುಕೊಳ್ಳಲಾರೆ ಎಂದರೂ ಬಡತನವನ್ನು ನೋಡಿ ಬೇಸರದಿಂದ ನಂತರ ಹಾಲು ಕುಡಿಯುವುದನ್ನೇ ತ್ಯಜಿಸುವ ಲೇಖಕಿಯ ಕಥೆ, ನಂತರ ಚರ್ಮದ ಕಾಯಿಲೆಯಿರುವ ಭಿಕ್ಷುಕರಿಗೆ ಸ್ನಾನಕ್ಕೆ ನೀರು ಕಾಯಿಸಿ ನೀಡುವ ಗಂಗಾಳ ಕತೆ, ಕೈಯಲ್ಲಿ ಕಾಸಿಲ್ಲದಿದ್ದರೂ ಸಮಾಜ ಸೇವೆ ಮಾಡಲು ಸಾಧ್ಯವೆಂಬುದನ್ನು ತಿಳಿಸುತ್ತದೆ. ಹೀಗೆ ಪ್ರತಿಯೊಂದು ಕಥೆಯೂ ಉತ್ತಮ ಸಂದೇಶ ನೀಡುತ್ತದೆ.

ಕೆಲವೊಂದು ಕತೆ ನಿರಾಸೆಯನ್ನುಂಟು ಮಾಡುತ್ತದೆ. ಓದಲು ೨ ಲಕ್ಷ ಸಾಲದ ನೆರವು ಪಡೆದ ಪರಿಚಯದ ಹುಡುಗ ಐ‌ಐಟಿಯಲ್ಲಿ ಕಲಿತು, ವಿದೇಶಕ್ಕೆ ತೆರಳಿ ತುಂಬಾ ಹಣವಂತನಾದರೂ ಸಹಕರಿಸದವರನ್ನು ಗುರುತಿಸದೇ ಇರುವುದು, ಹಣ ಹಿಂದಿರುಗಿಸದೇ ಉಢಾಪೆಯಾಗಿ ಮಾತನಾಡುವುದು..(ತಮ್ಮ ತವರು ಮನೆಯಲ್ಲೇ ಬೆಳೆದ ಪ್ರಾಮಾಣಿಕ ವ್ಯಕ್ತಿಯ ಮೊಮ್ಮಗ)ಲೇಖಕಿಯ ಮನಸ್ಸಿಗೆ ಆಘಾತ ಉಂಟುಮಾಡಿ ವಂಶವಾಹಿಯಾಗಿ ಕಾಯಿಲೆಗಳು ಬರಬಹುದೇ ಹೊರತು ಪ್ರಾಮಾಣಿಕತೆ, ಭಾವೈಕ್ಯತೆ ಬರಲಾರದು ಎನ್ನುತ್ತಾರೆ. ಹಣವೇ ಎಲ್ಲವೂ ಅಲ್ಲ. ಪ್ರೀತಿ, ಪರಸ್ಪರ ಸಮಯ ಕೊಡುವಿಕೆ, ಮಾತು ತುಂಬಾ ಮುಖ್ಯ. ಜೀವನದಲ್ಲಿ ಕುಟುಂಬದ ಪ್ರೀತಿಯ ಕೊರತೆ ಹೇಗೆ ಸಿರಿವಂತರನ್ನೂ ಕಾಡುತ್ತದೆ ಎಂಬುದನ್ನು ಸಿಂಗಾಪೂರ್ ನಲ್ಲಿ ಸಾಫ್ಟ್ವೇರ್ ಕಂಪೆನಿ ಹೊಂದಿದ್ದರೂ ಮನೆಯಲ್ಲಿ ಮಗಳು, ಹೆಂಡತಿ ಮಾತನಾಡಲು ಸಮಯ ಕೊಡದೇ ಇರುವುದು, ತಮ್ಮಷ್ಟಕ್ಕೆ ತಾವಿರುವುದು ಇಂಜಿನಿಯರ್ ವಿಷ್ಣುವಿನ ಜೀವನದ ಕತೆಯಿಂದ ವ್ಯಕ್ತವಾಗುತ್ತದೆ.

ಇನ್ನೂ ಕೆಲವು ಕತೆಗಳಲ್ಲಿ ವಿಭಿನ್ನ ಅನುಭವಗಳು ಒಳ್ಳೆಯ ಪಾಠ ಕಲಿಸುತ್ತವೆ. ನಮ್ಮ ನೆಲದ ಬದುಕನ್ನು ಪ್ರೀತಿಸಲು ಪ್ರೇರೇಪಿಸುವ (ಅಂಕಲ್ ಸ್ಯಾಮ್), ಹೆಣ್ಣುಮಕ್ಕಳು ತಮ್ಮ ಹೆತ್ತವರ ಶ್ರಾದ್ಧ ಮಾಡಬಹುದೆನ್ನುವ (ಶ್ರಾದ್ಧ) ಕಥೆಗಳು ವಿಶಿಷ್ಟವೆನಿಸುತ್ತವೆ. ಕೆಲವು ಕಥೆಗಳು ಅಪಾತ್ರರಿಗೆ ದಾನ ಮಾಡಬಾರದೆಂಬ ಅರಿವನ್ನು ಮೂಡಿಸುತ್ತವೆ. ಕೆಲವು ಜನರು ಉಚಿತ ಸೇವೆಯನ್ನು ದುರುಪಯೋಗ ಮಾಡಿಕೊಳ್ಳುವುದರ ಬಗ್ಗೆ ಸುಧಾ ಮೂರ್ತಿಯವರ ವಿಷಾದವೂ ಇದೆ. ಕೊನೆಗೆ ಸಣ್ಣ ಮಕ್ಕಳಿಂದಲೂ, ಕಡು ಬಡವರಿಂದಲೂ ಒಳಿತನ್ನು ಸ್ವೀಕರಿಸುವ, ಜೀವನದ ಪಾಠ ಕಲಿಯುವ, ತನಗಾಗಿ ಹೆಚ್ಚು ಏನನ್ನೂ ಸಂಗ್ರಹಿಸದ ಕೊಡುಗೈ ದಾನಿ ಸುಧಾ ಮಹಾನ್ ವ್ಯಕ್ತಿಯೇ ಸರಿ. ಅವರು ಜೀವನದಲ್ಲಿ ಕಲಿತ ೮ ಪಾಠಗಳೊಂದಿಗೆ ಕೃತಿ ಮುಕ್ತಾಯಗೊಳ್ಳುತ್ತದೆ. ಕಥೆಯ ಕೊನೆಯಲ್ಲಿ ಸುಧಾ ಅವರು ದ.ಆಫ್ರಿಕಾದಲ್ಲಿರುವಾಗ  ಅವರ ಕಾರಿನ ಚಾಲಕ ನನ್ನ ಪ್ರೀತಿಯ ನಾಯಕ ಮಹಾತ್ಮ ಗಾಂಧಿ ಎನ್ನುತ್ತಾನೆ. ಸುಧಾ ಅಭಿಮಾನದಿಂದ  ಅವರು ನಮ್ಮ ದೇಶದವರು, ನಮ್ಮ ರಾಷ್ಟ್ರಪಿತ ಎಂದಾಗ, ಅವನು ಅವರು ನಮ್ಮ ದೇಶಕ್ಕೆ ಬಂದು ಮಹಾತ್ಮರಾದವರು(ದ. ಆಫಿಕ್ರಾಗೆ ಬರುವಾಗ ಎಂ.ಕೆ. ಗಾಂಧಿಯಾಗಿದ್ದರು); ನಂತರ ನಮ್ಮಲ್ಲೂ ಹಲವಾರು ಸುಧಾರಣೆಗಳಿಗೆ ಕಾರಣವಾಗಿದ್ದಾರೆ. ಅವರೊಬ್ಬ ವಿಶ್ವನಾಯಕನೆನ್ನುವಾಗ ಲೇಖಕಿ ಒಪ್ಪಿಕೊಳ್ಳುತ್ತಾ ನಿಜ, ಮಹಾತ್ಮ ಗಾಂಧಿ, ಬುದ್ಧ ಮೊದಲಾದವರು ತಮ್ಮ ಮಾನವ ನಿರ್ಮಿತ ಗಡಿಯನ್ನು ಮೀರಿ ವಿಶ್ವನಾಯಕರೆಂದು ಗುರುತಿಸಲ್ಪಟ್ಟವರೆನ್ನುತ್ತಾರೆ.

ದೇಶ-ವಿದೇಶಗಳಲ್ಲಿ ಪ್ರತಿಷ್ಠಾನದ ಕೆಲಸದ ನಿಮಿತ್ತ ಸಂಚರಿಸಿ,ಸಮಾಜ ಸೇವಾ ಕಳಕಳಿಯಿಂದ ಹಲವಾರು ನಗರಗಳಲ್ಲಿ, ಹಳ್ಳಿಗಳಲ್ಲಿ ವಿವಿಧ ಸ್ತರದ ಜನರ ಬದುಕನ್ನು ಕಣ್ಣಾರೆ ಕಂಡು, ಸಹಕರಿಸಿ, ತಮ್ಮ ಜೀವನದಲ್ಲಿ ವಿಶಿಷ್ಟ ಅನುಭವ ಪಡೆದ ಲೇಖಕಿಯ ಬಗ್ಗೆ ಹೆಮ್ಮೆಯೆನಿಸುತ್ತದೆ. ಸಮಾಜ ಸೇವೆಯ ಮೂಲಕ ನಿಸ್ವಾರ್ಥವಾಗಿರುವ ಇಂತಹವರ ಸಂಖ್ಯೆ ಹೆಚ್ಚಾಗಲಿ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಇದೊಂದು ಭರವಸೆ ಮೂಡಿಸುವ ಅಪರೂಪದ ಕೃತಿ.

Advertisements

%d bloggers like this: