ಭಸ್ಮವಾಗಬಲ್ಲೆ; ಆದರೆ ತಣಿಯಲೊಲ್ಲೆ

ಇಬ್ಬನಿ ಬಿಂಬ | ದೀಪಾ ಹಿರೇಗುತ್ತಿ

ಡಿಯಾರ ಎಂದಿನಂತೆ ನಿಷ್ಕರುಣಿಯಾಗಿದೆ. ಸಮಯ ನಿಧಾನವಾಗಿ ಸಾಗಲಿ ಎಂದು ಬಯಸಿದಾಗ ಚಿರತೆಯ ವೇಗ ಪಡೆದು ಓಡುವಂತೆ ಅನ್ನಿಸುವ ಅದರ ಮುಳ್ಳುಗಳು ಈ ಗಂಟೆಗಳ ಗೊಂದಲ ಬೇಗ ಸರಿದು ಹೋಗಲಿ ಎಂದು ಬಯಸಿದಾಗ ಭರ್ಜರಿ ಬೇಟೆ ನುಂಗಿದ ಅನಕೊಂಡದ ಹಾಗೆ ಮುಂದೆ ಸಾಗಲಾಗದೆ ಕಷ್ಟಪಡುತ್ತಿರುವಂತೆ ಭಾಸವಾಗುತ್ತವೆ. ನ್ಯಾಶನಲ್ ಜಿಯೋಗ್ರಾಫಿಕ್ ಚಾನೆಲ್ಲಿನಲ್ಲಿ ನೋಡಿದ ಅನಕೊಂಡ, ಅದೇ ಹೆಸರಿನ ಇಂಗ್ಲಿಷ್ ಚಿತ್ರದ ದೈತ್ಯ ಉರಗಗಳೆಲ್ಲ ನೆನಪಾಗಿ ರೊಮ್ಯಾಂಟಿಕ್ ಆಗಿ ಯೋಚನೆ ಮಾಡಬೇಕಾದ ಹೊತ್ತಿನಲ್ಲಿ ತಾನು ಏನೇನೋ ಚಿಂತಿಸುತ್ತಿದ್ದೇನಲ್ಲ ಎಂದುಕೊಳ್ಳುತ್ತ ತನ್ನಷ್ಟಕ್ಕೆ ತಾನೇ ಮುಗುಳ್ನಕ್ಕಳು. ಕಾಫಿ ಮಾಡಿ ಕುಡಿಯುವಾಗಲೂ ಎಂಥದೋ ಲಹರಿಯಲ್ಲೇ ಇದ್ದಳು. ಹಾಲಿನ ಪಾತ್ರೆಯಲ್ಲಿದ್ದ ಕೆನೆಗೆ ಚೂರೇ ಅರಶಿನ ಬೆರೆಸಿ ಮುಖಕ್ಕೆ ಹಚ್ಚಿಕೊಂಡಳು. ಕೊರಳಿಗೆ ಹಚ್ಚುವಾಗ ಕಚಗುಳಿಟ್ಟಂತಾಗಿ ಅವನು ಮತ್ತೆ ನೆನಪಾದ. ಅರೆಕ್ಷಣವಾದರೂ ಮರೆತರೆ ತಾನೇ ನೆನಪಾಗುವುದು ಎಂದುಕೊಳ್ಳುತ್ತಿರುವಾಗಲೇ ಒಡನೆಯೇ ನೋವಿನ ಎಳೆಯೊಂದು ಹಣೆಯ ಮೇಲೆ ಕಂಡೂ ಕಾಣದಂತೆ ಹಾದುಹೋಯಿತು. ರಾಧೆಯಾಗಿಯೋ, ಗೋಪಿಯಾಗಿಯೋ ನೀಲಮೇಘಶ್ಯಾಮನ ಬಾನ್ಸುರಿಯ ಹಾಡಿಗೆ ನವಿಲಾಗಿ ನರ್ತಿಸಬೇಕಾದವಳು ಈಗಲೇ ಮೀರಾಳ ಹಾಗೆ ಭಜನ್ ಮಾಡತೊಡಗಿದ್ದೇನೆಯೇ ಎಂದು ಗೊಂದಲಕ್ಕೊಳಗಾದಳು.

ಅವಳಿಗೆ ಅಕ್ಕನ ವಚನಗಳೆಂದರೆ ಪ್ರಿಯ.

ಅರಸಿನವನೆ ಮಿಂದು ಹೊನ್ನುಡಿಗೆಯನೆ ತೊಟ್ಟು
ಪುರುಷ ಬಾರಾ ಪುರುಷ ರೂಪವೇ ಬಾರಾ
ನಿನ್ನಬರುವೆನ್ನಸುವಿನ ಬರುವು ಬಾರಯ್ಯಾ

ವಚನದ ಶಬ್ದಗಳು ಅವಳಿಗೆ ಸರಿಯಾಗಿ ನೆನಪಿಲ್ಲ. ಆದರೆ ಮೊದಲ ಬಾರಿ ಈ ಪದ್ಯ ಓದಿದಾಗಲೇ ಅವಳು ಸೋತು ಹೋಗಿದ್ದಳು, ಅಕ್ಕನ ಆ ಉತ್ಕಟ ಪ್ರೇಮನಿವೇದನೆಯ ಪರಿಗೆ. ಈ ಜಗದಲ್ಲೇ ಇಲ್ಲದ ಚೆನ್ನಮಲ್ಲಿಕಾರ್ಜುನನಿಗಾಗಿ ಆಕೆ ಪರಿತಪಿಸುವುದು ವಿಶೇಷವಾಗಿ ಕಂಡಿತ್ತವಳಿಗೆ. ನಿನ್ನ ಬರುವು ಎಂದರೆ ನನ್ನ ಹೋದ ಪ್ರಾಣ ಮರಳಿದಂತೆ ಎಂದು ತನ್ನಿಂದ ಅನ್ನಿಸಿಕೊಳ್ಳುವ ವ್ಯಕ್ತಿ ಎಲ್ಲಿರಬಹುದು ಏನು ಮಾಡುತ್ತಿರಬಹುದು  ಎಂದು ಕನಸುತ್ತಿದ್ದಳು. ಆ ಕನಸಿಗೆ ಮೂರ್ತರೂಪ ತಂದುಕೊಟ್ಟವನು ಬಂದಮೇಲೆ ಪುರುಷ ಬಾರಾ ಪುರುಷರೂಪವೇ ಬಾರಾ ಎನ್ನುವಾಗಲೆಲ್ಲ ಸಣ್ಣಗೆ ಮೈ ನಡುಗಿ ಇದ್ದಕ್ಕಿದ್ದಂತೆ ದನಿ ಕಿರಿದುಗೊಳಿಸಿಬಿಡುತ್ತಿದ್ದಳು. ಅಕ್ಕನ ವಚನವಾಗಿದ್ದಾಗ ಸರಾಗವಾಗಿ ಹೊರಡುತ್ತಿದ್ದ ಪದಗಳು ಸ್ವಂತಕ್ಕಾದ ಮೇಲೆ ನಾಚಿಕೆಯಿಂದ ಅಡಗಿ ಕೂರುತ್ತಿದ್ದವು.

ಇನ್ನೂ ಹೆಚ್ಚು ಆಲಸಿಯಾಗಿದೆ ಇವತ್ತು ಗಡಿಯಾರ. ಎಷ್ಟು ಸತಾಯಿಸುತ್ತೀ ನನ್ನ? ಸಂಜೆಯವರೆಗೆ ಸತಾಯಿಸಬಹುದು ಅಷ್ಟೇ ತಾನೇ ಎನ್ನುತ್ತ ಓರೆಗಣ್ಣಿನಲ್ಲಿ ಅದನ್ನು  ನೋಡಿ ಮೂಗು ಕೊಂಕಿಸಿದಳು. ಮಧ್ಯಾಹ್ನಕ್ಕೆ ಅಡಿಗೆ ಮಾಡುವ ಬದಲು ಏನಾದರೊಂದು ವಿಶೇಷ ಮಾಡಲು ಯೋಚಿಸಿದಳು. ತಟಕ್ಕನೇ ನೆನಪಾದದ್ದು ಅವನೇ ಕಳಿಸಿದ ಗ್ರೀಟಿಂಗ್ ಕಾರ್ಡ್. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮದ ರೂಪ ಪಡೆದುಕೊಳ್ಳುತ್ತಿರುವ ಸಮಯದಲ್ಲಿ ಕಳಿಸಿದ್ದು. ಅವಳಿಗೆ ಎಲ್ಲವೂ ನೆನಪಿದೆ. ಎಲ್ಲ ಭರವಸೆಗಳೂ ಎಲ್ಲವೂ….ಎರಡು ಭಾಗ ಶುದ್ಧ ನಂಬಿಕೆ ಮತ್ತು ಕರುಣೆ, ಒಂದು ಕಪ್ ಸುಂದರ ನೆನಪುಗಳು, ಹೊಸದಾದ ತಾಜಾ ಒಳನೋಟ, ಒಂದು ದೊಡ್ಡ ಚಮಚ ನಗು, ಜೀವನದ ಅನುಭವ ಇವು ಬೇಕಾದ ಸಾಮಗ್ರಿಗಳು. ನಂಬಿಕೆ ಮತ್ತು ಕರುಣೆಯನ್ನು ಮಿಶ್ರ ಮಾಡಿ, ಸುಂದರ ನೆನಪುಗಳ ಜತೆ ಚೆನ್ನಾಗಿ ತಿರುಗಿಸಬೇಕು. ತಾಜಾ ಒಳನೋಟವನ್ನು ಮಿಶ್ರಣ ಮಾಡಬೇಕು. ನಗುವನ್ನು ಮೇಲೆ ಚಿಮುಕಿಸಿ ಜೀವನದ ಅನುಭವವೆಂಬ ಸಣ್ಣ ಉರಿಯ ಮೇಲಿರಿಸಬೇಕು. ಇಲ್ಲಿಗೆ ಅಡುಗೆ ರೆಡಿ. ಇಬ್ಬರು ಸ್ನೇಹಿತರಿಗೆ ಜೀವನಪೂರ್ತಿ ಬಡಿಸುವ ಅಡುಗೆ. ಆಹ್, ಕೇಳಲು ಎಷ್ಟು ಚೆನ್ನಾಗಿದೆ? ನಿಟ್ಟುಸಿರಿಟ್ಟಳು. ಇಂತಹ ಮಾತು ಪತ್ರಗಳೊಂದಿಗೆ ಇಡೀ ಬದುಕನ್ನೇ ಅವನೊಂದಿಗೆ ಕಳೆದುಬಿಡಬಹುದೆಂದು ಅಂದುಕೊಂಡಿದ್ದು ನೆನಪಾಗಿ ಅದು ತನ್ನ ಮೂರ್ಖತನವೋ ಅಥವಾ ಪಲ್ಲವಿ ಹೇಳಿದ ಹಾಗೆ ಎಲ್ಲ ಸಂಬಂಧಗಳ ಕಹಿ ಕೊನೆಯೋ ಇನ್ನೂ ಅರ್ಥವಾಗದಿರುವುದಕ್ಕೆ ಯಾಕೋ ಕಿರುನಗು ಮೂಡಿತು. ಮೊನ್ನೆ ಊರಿಗೆ ಹೋದಾಗ ಕೆರೆಯಲ್ಲಿ ಹುಡುಗರಿಬ್ಬರು ಮುಳುಗಿ ಸತ್ತಿದ್ದರು. ಆಗ ಪಕ್ಕದ ಮನೆಯ ಗೌರಜ್ಜಿ ಈ ಬದುಕೇ ಹೀಗೆ ಅರ್ಥಾನೇ ಆಗಲ್ಲ ಎನ್ನುತ್ತಿದ್ದುದು ನೆನಪಾಗಿ ತೊಂಭತ್ತರ ಅಜ್ಜಿಗೇ ಅರ್ಥವಾಗದ್ದು ತನಗೇನು ಅರ್ಥವಾದೀತು ಎಂದುಕೊಂಡಳು.

ಜಗತ್ತಿನಲ್ಲಿ ಅತ್ಯಂತ ಕಷ್ಟದ ಕೆಲಸವೆಂದರೆ ಕಾಯುವುದೇ ಇರಬೇಕು. ಆದರೆ ಇಷ್ಟವಿಲ್ಲದವರ ಜತೆ ಗಂಟೆಗಟ್ಟಲೆ ಸಮಯ ಕಳೆಯುವುದಕ್ಕಿಂತ ಬೇಕಾದವರ ಹಾದಿ ಕಾಯುವುದರಲ್ಲೇ ಹಿತವಿದೆಯಲ್ಲವೇ? ಖ್ಯಾತ ವಿಜ್ಞಾನಿ ಐನ್ ಸ್ಟೀನ್‌ರನ್ನು ಅವರ ರಿಲೇಟಿವಿಟಿ ಥಿಯರಿಯನ್ನು ವಿವರಿಸುವಂತೆ ಕೇಳಿದಾಗ ಅವರೆಂದಿದ್ದರಂತೆ: ನೀವು ಒಬ್ಬ ಸುಂದರ ಹುಡುಗಿಯ ಜತೆ ಒಂದು ಗಂಟೆ ಮಾತಾಡಿದರೂ ಒಂದೇ ನಿಮಿಷ ಎನಿಸುತ್ತದೆ; ಅದೇ ಬಿಸಿ ಸ್ಟವ್ ಮೇಲೆ ಒಂದೇ ನಿಮಿಷ ಕೂತರೂ ಒಂದು ಗಂಟೆ ಕಳೆದಂತೆನಿಸುತ್ತದೆ. ಹಾಗೆಯೇ ಇವನ ಕಾಯುವಿಕೆಯೂ ತನಗೆ ಪ್ರಿಯವಾದದ್ದೇ ಎಂದುಕೊಂಡಳು. ಅರೇ ಎಲ್ಲರೂ ವಿರಹ ದುಃಖದ್ದೆಂದರೆ ತಾನು ಬೇರೆಯೇ ಆಗಿ ಯೋಚಿಸುತ್ತಿದ್ದೇನಾ ಗೊಂದಲಕ್ಕೊಳಗಾದಳು. ಚಲನಚಿತ್ರ ಗೀತೆಗಳಲ್ಲಿ ಮೀಠೀ ದರ್ದ್ ಅಥವಾ ಸಿಹಿಯಾದ ನೋವು ಅಂದಹಾಗೆ ಅಲ್ಲವೇ?

ಎಷ್ಟು ಸಿಹಿ ಇದ್ದರೂ ಅದು ನೋವೇ. ಹಾಗಾಗಿ ಕೆಲಕಾಲ ಮಾತ್ರ ಖುಷಿ ಕೊಡಬಹುದು. ಬಹುಕಾಲ ಅಲ್ಲ. ನಾಳೆ ಆತ ವಿಮಾನ ಹತ್ತುತ್ತಾನೆ. ಕಳೆದವಾರ ಆತ ಮೂರು ತಿಂಗಳ ಮಟ್ಟಿಗೆ ಜರ್ಮನಿಗೆ ಹೋಗಬೇಕೆಂದು ಹೇಳಿದಾಗಿನಿಂದ ತನ್ನ ಅಸಮಾಧಾನ ಸ್ಪಷ್ಟವಾಗಿಯೇ ತನ್ನ ನಡೆನುಡಿಗಳಲ್ಲಿ ಕಾಣುತ್ತಿದೆ. ಅವನ ಯಾವ ಮನಾಯಿಸುವಿಕೆಗೂ ಬಗ್ಗದ ಹಠವೇ? ಹಾಗನ್ನುತ್ತಾನವನು. ಅವನಿಗೇನು, ತುಂಡುಡುಗೆಯ ಬಿಳಿ ಚೆಲುವೆಯರು ಸುತ್ತ ಇರುತ್ತಾರಲ್ಲವೇ ಎಂದರೆ ಕೆನ್ನೆ ಗುಳಿ ಕಂಡೂ ಕಾಣದಂತೆ ನಗುತ್ತಾನೆ ಕಳ್ಳ! ಅವನನ್ನು ಬಿಟ್ಟಿರಬೇಕೆಂಬ ನೋವಿಗೆ ತಾನೇ ಈ ಕೋಪ? ಮೊನ್ನೆ ಅವನು ಮನೆಗೆ ಬರುವುದು ತುಂಬ ತಡವಾದಾಗ ಫೇಸ್ ಬುಕ್‌ಗೆ ಸ್ಟೇಟಸ್ ಅಪ್‌ಡೇಟ್ ಮಾಡಿದ್ದಳು:

ನಿನ್ನ ನೆನಪಲ್ಲಿ ಸುಡುತ್ತಿದ್ದೇನೆ
ಭಸ್ಮವಾಗಬಲ್ಲೆ
ಆದರೆ ತಣಿಯಲೊಲ್ಲೆ

ಓಹ್, ಶಬ್ದಗಳು ಎಷ್ಟೆಂದು ಸಾಂತ್ವನ ಹೇಳಿಯಾವು? ಹೊತ್ತಿ ಉರಿವ ತೈಲ ಬಾವಿಯ ವರ್ಷಗಟ್ಟಲೆ ಆರದ ಬೆಂಕಿಯಂತೆ ವಿರಹದ ನೋವು ಕೂಡ. ನಿಟ್ಟುಸಿರಿಟ್ಟಳು.

ಇಂದು ಬೇಗ ಬರುತ್ತಾನೆ ಅವನು. ಕೋಪ ಗೀಪ ಎಲ್ಲ ಬಿಟ್ಟು ಇದ್ದಕ್ಕಿದ್ದಂತೆ ತನ್ನಿಂದಲೇ ಹೊತ್ತಿಕೊಂಡ ಕಿಡಿಯನ್ನು ಇವತ್ತು ತನ್ನ ಪ್ರೀತಿಯ ಆರ್ದೃತೆಯಿಂದ ಆರಿಸಿಬಿಡುತ್ತೇನೆ ಕಣೋ, ಪ್ಲೀಸ್ ಬೇಗ ಬಾ ಎಂದು ಪ್ರಾರ್ಥಿಸಿಕೊಳ್ಳುತ್ತ ಮಿಸ್ಸಿಂಗ್ ಯೂ ಎಂದು ಮೆಸೇಜ್ ಕಳಿಸಿ ಕರೆಗಂಟೆಯ ಸದ್ದಿಗಾಗಿ ತನ್ನ ಕಿವಿಗಳು ಎಂದೆಂದೂ ಈ ರೀತಿ ಕಾತರವಾಗಿರಲಿಲ್ಲವೇನೋ ಎಂದು ಧ್ಯಾನದಲ್ಲೆಂಬಂತೆ ಕಾಯುತ್ತ ಕೂತಳು.

Advertisements

ಮಾಯೆ ಎಂಬ ಸುರಸುಂದರಿ…

ನೋಡುವ ಬೆಡಗು | ದೀಪಾ ಫಡ್ಕೆ

ವನೊಬ್ಬನಿದ್ದ; ಉತ್ಕಟ ಪ್ರೇಮಿ. ಅರೆಗಳಿಗೆಯೂ ಸುಂದರಿ, ಚಿಕ್ಕಪ್ರಾಯದ ಚದುರೆ, ಪ್ರಿಯಪತ್ನಿಯನ್ನು ಬಿಟ್ಟಿರಲಾರ. ಕಾಳರಾತ್ರಿಯಲ್ಲಿ, ಭೋರೆಂದು ಸುರಿಯುತ್ತಿದ್ದ ಕುಂಭದ್ರೋಣ ಮಳೆಯಲ್ಲಿ ನೆನೆಯುತ್ತಾ, ತುಂಬಿ ಹರಿಯುತ್ತಿದ್ದ ನದಿಯನ್ನು ಈಜಿಕೊಂಡು ದಾಟಿ, ಮುಚ್ಚಿದ ಬಾಗಿಲ ಮನೆಯ ಮಹಡಿಯಿಂದ ಇಳಿಬಿದ್ದಿದ್ದ ಹಾವನ್ನು ಹಗ್ಗವೆಂದು ತಿಳಿದು, ಹಿಡಿದುಕೊಂಡು ಹತ್ತಿ ಹೋಗಿ ಮನದರಸಿಯನ್ನು ಕೂಡಿದ. ಹುಚ್ಚು ಪ್ರೀತಿಯಲ್ಲಿ ಕೊಚ್ಚಿಹೋದವನನ್ನು ಸೆಳೆದದ್ದು ಪ್ರೀತಿಯಲ್ಲ, ಪ್ರೀತಿಯೆಂಬ ಮಾಯೆ.

ಇವನೊಬ್ಬನಿದ್ದ; ಜಿಪುಣ ವ್ಯಾಪಾರಿ. ಸಾಮಾನ್ಯ ವ್ಯಾಪಾರಿಯಲ್ಲ, ಅಪ್ಪಟ ಮುತ್ತಿನ ವ್ಯಾಪಾರಿ. ಎಂಜಲು ಕೈಯಲ್ಲಿ ಕಾಗೆಯನ್ನೂ ಓಡಿಸದವ. ಕಾಸಿಗೆ ಕಾಸು ಗಂಟು ಹಾಕುವುದರಲ್ಲೇ ಸ್ವರ್ಗಸುಖ ಕಾಣುತ್ತಿದ್ದ ಚಿನಿವಾರ. ಬದುಕಿರೋದೇ ಧನ ಸಂಗ್ರಹಕ್ಕೆ ಎಂದು ಕೂಡಿ ಕೂಡಿ ಬದುಕುತ್ತಿದ್ದವನನ್ನು ಆಡಿಸಿದ್ದು ಕಾಂಚಾಣವಲ್ಲ, ಕಾಂಚಾಣವೆಂಬ ಮಾಯೆ.

ಮತ್ತೊಬ್ಬನಿದ್ದ…ದೊರೆ, ದೊರೆಯೆಂದರೆ ಅಂತಿಂಥಾ ದೊರೆಯಲ್ಲ. ಚಕ್ರವರ್ತಿ. ಭೂಮಂಡಲವನ್ನೇ ತನ್ನ ಮುಷ್ಠಿಯಲ್ಲಿರಿಸಿಕೊಳ್ಳಬೇಕೆಂದು, ಮಹತ್ವಾಕಾಂಕ್ಷೆಯಿಂದ ಯುದ್ಧದ ಮೇಲೆ ಯುದ್ಧ ಸಾರುತ್ತಾ ಜೀವವಿರೋಧಿಯಾಗುತ್ತಿದ್ದವನನ್ನು ನಿಜವಾಗಿ ಆಳುತ್ತಿದ್ದದ್ದು ಮಾತ್ರ ಅಧಿಕಾರ, ಯಶಸ್ಸೆನ್ನುವ ಮಾಯೆ. ಅಬ್ಬಾ ಈ ಮಾಯೆಯೇ? ಇವಳದ್ದು ರಾಕ್ಷಸ ತೋಳುಗಳು, ಎಲ್ಲರನ್ನು ನಾನಾ ರೂಪದಲ್ಲಿ ತನ್ನ ಮಡಿಲಿಗೆ ಸೆಳೆದುಕೊಳ್ಳುತ್ತಾಳೆ. ಯಾರಿವಳು..ಮಾಯೆ?

ನಿಲ್ಲೇ..ನಿಲ್ಲೇ.. ಎಂದವರಿಗೆ ನಿಲ್ಲದೆ, ಹಿಂದೆ ಹೋದವರ ಕೈಗೂ ಸಿಗದೆ ಮೋಹಿನಿಯಂತೆ ತಿಲ್ಲಾನದ ತಾಳಕ್ಕೆ ಕುಣಿಸುತ್ತಿದ್ದಾಳೆ….ಕುಣಿಸುತ್ತಲೇ ಇರುತ್ತಾಳೆ ಈ ಮಾಟಗಾತಿ ಮಾಯಾಂಗನೆ. ಸುರೆ ಕುಡಿದ ಮರ್ಕಟದಂತೆ ಮನುಷ್ಯ ಕುಣಿಯುತ್ತಲೇ ಇರುತ್ತಾನೆ. ಎಲ್ಲ ಮುಗಿದು ಕೊನೆಗೆ ಸೋತು ಸುಣ್ಣವಾಗಿ ಬಿದ್ದಾಗ, ಈ ಹುಲುಮಾನವ, `ನನ್ನನ್ನು ಈಕೆ ಕುಣಿಸಿದಳು’ ಎಂದು ಮಾಯೆಯನ್ನೇ ದೂಷಿಸುತ್ತಾನೆ. ಮನುಷ್ಯನ ಸೋಲು ಗ್ರಹಿಸಿದ ತಕ್ಷಣ ಮಾಯೆ ವಿಕಟನಗೆ ನಗುತ್ತಾ ಇನ್ನೊಂದು ಮನುಷ್ಯಜೀವಿಯನ್ನು ಹುಡುಕಿಕೊಂಡು ಹೋಗುತ್ತಾಳೆ. ಎಷ್ಟೆಂದರೂ ಮಾಯೆ ಚಲನಶೀಲೆ. ನಿಂತಲ್ಲಿ ನಿಲ್ಲಲಾರಳು. ಹೀಗೆ ತುಲಸಿದಾಸ, ಪುರಂದರದಾಸ ಮತ್ತು ಅಶೋಕ ಚಕ್ರವರ್ತಿಯನ್ನು ಸಮ್ಮೋಹನಗೊಳಿಸಿದವಳೇ ಮಾಯೆ. ಒಂದರ್ಥದಲ್ಲಿ ಮಾಯೆಯ ಮಡಿಲಿಂದ ಬಿದ್ದ ಕೂಸುಗಳಿವರು. ಒಮ್ಮೆ ತನ್ನತ್ತ ಸೆಳೆದುಕೊಂಡು ತನಗೆ ಬೇಕಾದಂತೆ ಆಡಿಸಿ, ಮತ್ತೆ ಕನಿಕರದಿಂದ ಬೀಸಿ ಒಗೆದಳು ಮೂವರನ್ನೂ… ಮೂರು ಶುದ್ಧಾತ್ಮಗಳ ಜನನವಾಯಿತು. ಹಾಗಾದರೆ….ಯಾರಿವಳು,….. ಇವಳು ಮಾಯೆ. ಮನಸ್ಸಿನ ಸಾಮ್ರಾಜ್ಯದ ಅನಭಿಷಿಕ್ತ ಮಹಾರಾಣಿ. ಇವಳಿಗೆ ಮನದ ಮಾಯೆಯೆಂದೂ ಕರೆಯುತ್ತಾರೆ. ಮಾಯೆಯನ್ನು ಸ್ತ್ರಿಲಿಂಗಕ್ಕೆ ಕಟ್ಟುಹಾಕಿದುದರ ಹಿಂದೆ ಅಂಥಾ ಬೇರೇನೂ ಹುನ್ನಾರವಿಲ್ಲದಿದ್ದರೂ ಮನುಷ್ಯತ್ವವನ್ನು ಪುರುಷನೆಂದು ಕರೆಯುವ ಸಂಪ್ರದಾಯವಿರುವ ಭೂಮಂಡಲದಲ್ಲಿ ಮನುಷ್ಯತ್ವವನ್ನೇ ಬುಡಮೇಲು ಮಾಡುವವಳು ಪ್ರಕೃತಿ(ಸ್ತ್ರಿ) ಎಂದು ನಿರ್ಧರಿಸಿರಬೇಕು. ಭೂಮಿ ಮೇಲೆ ಹಕ್ಕು ಸ್ಥಾಪಿಸಲು ನಿರಂತರವಾಗಿ, ಉಸಿರಿರೋ ತನಕ ಹೋರಾಡುವವನು ಪುರುಷನೇ. ಇವನನ್ನೇ ಮೂಗುದಾರ ಹಾಕಿ ಆಡಿಸಿ ಬೀಳಿಸಿ ನೋಡುವವಳು ಪ್ರಕೃತಿ. ಇಂತಿಪ್ಪ ಪ್ರಕೃತಿಯೇ ಮಾಯೆ.

ಭ್ರಾಂತಿಯ ತತ್ತ್ವವೇ ಮಾಯೆ. ಬುದ್ಧಿಗೆ ಪರೆ ಮೂಡುವುದೇ ಮಾಯೆ. ಈ ಮಾಯೆ ಬಲು ಮೋಸಗಾತಿ. ಸತ್ಯದರ್ಶನದ ದಾರಿಯಲ್ಲಿ ಈಕೆಯದ್ದು ದೊಡ್ಡ ತಡೆ. ಇಂಥ ಮಾಯೆಗೆ ಆರು ರೂಪಗಳು. ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹ. ಒಂದಕ್ಕಿಂತ ಒಂದು ಮೈಮರೆಸುವಂಥ ರೂಪಗಳು. ಇಷ್ಟೆ ಅಲ್ಲದೆ ಹತ್ತಾರು ಉಪರೂಪಗಳು. ಯಾವಾಗ ಯಾವ ರೂಪ ಧರಿಸಿ ಬರುತ್ತಾಳೆಂದೇ ತಿಳಿಯದು ಈ ಮಾಟಗಾತಿ. ಹರಿನಾಮವನ್ನೇ ಉಸಿರಾಡುತ್ತಿದ್ದ ತ್ರಿಲೋಕ ಸಂಚಾರಿ ನಾರದನೂ ಈಕೆಯ ವಶವಾಗಿದ್ದ ಅಂದರೆ ಮಾಯೆಯ ಶಕ್ತಿ ಎಂಥಹುದು ಅನ್ನುವ ಅರಿವಾಗುತ್ತದೆ.

ಗೀತೆ, ಭಾಗವತ, ಅದ್ವೈತ, ದ್ವೈತ, ಶರಣಸಾಹಿತ್ಯ, ಹರಿದಾಸಸಾಹಿತ್ಯ ಎಲ್ಲದರಲ್ಲೂ ಮಾಯೆಯ ಪ್ರಸ್ತಾಪವಿದೆ. ಅವಳಿಲ್ಲದ ಜಾಗವಿಲ್ಲ. ಅವಳು ಮುಟ್ಟದ, ತಟ್ಟದ ಮನಸ್ಸಿಲ್ಲ. ಮನದ ಬಾಗಿಲ ಸಂದಿಯಿಂದ ಒಳ ನುಗ್ಗಿ ಸಂಪೂರ್ಣವಾಗಿ ಆಕ್ರಮಿಸಿ ಕೋಲಾಹಲ ಆರಂಭಿಸಿಯೇ ಬಿಡುವಳೀ ಭಯಂಕರಿ. ಅನುಭಾವಿ ಅಲ್ಲಮನೆನ್ನುತ್ತಾನೆ…

ದೇವರೆಲ್ಲರ ಹೊಡೆತಂದು ದೇವಿಯರೊಳಗೆ ಕೂಡಿತ್ತು ಮಾಯೆ
ಹರಹರಾ, ಮಾಯೆ ಇದ್ದೆಡೆಯ ನೋಡಾ
ಶಿವಶಿವಾ, ಮಾಯೆ ಇದ್ದೆಡೆಯ ನೋಡಾ

ಅಲ್ಲಮ ವಚನದಲ್ಲಿ ಮಾಯೆಯೆನ್ನುವುದು ಸಮರ್ಥವಾದುದು. ಸರ್ವಶಕ್ತವಾದುದು. ಅದಿಲ್ಲದ ಜಾಗವಿಲ್ಲ, ಸ್ಥಾನವಿಲ್ಲ. ಅದು ಮಾಡದಿರುವ ಕಾರ್ಯವಿಲ್ಲ. ಅದು ಪ್ರವೇಶಿಸದ ಮನಸ್ಸಿಲ್ಲ ಎಂದಿದ್ದಾನೆ. ಅಲ್ಲದೆ ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮಾಯೆಯೇನಿದ್ದರೂ ಅದು ಮನದ ಆಸೆಯೆಂದು ಹೇಳಿದ್ದಾನೆ. ಕಬೀರನೆನ್ನುತ್ತಾನೆ..

ಜಾಣೌಂ ಜೇ ಹರಿ ಕೌಂ ಭಜೌಂ, ಭೋ ಮನಿ ಮೋಟಿ ಅಸ
ಹರಿ ಬಿಚಿ ಘಾಲೈ ಅಂತರಾ, ಮಾಯಾ ಬಡೀ ಬಿಸಾಸ

ಹರಿನಾಮ ನುಡಿದಿದೆ ಜಿಹ್ವೆ, ಮನದಿ ನಡೆದಿದೆ ಮಾಯೆಯಾಟ, ಈ ಮಾಯಾಂಗನೆ ನನ್ನನ್ನು ಹರಿಯಿಂದ ದೂರ ಮಾಡಿದೆ, ಮಾಯೆಗಿದುವೆ ಚೆಲ್ಲಾಟ. ಚೆಲ್ಲಾಟ ಆಡುವುದೇ ಮಾಯೆಯ ಸಹಜ, ಹುಟ್ಟುಗುಣ. ಮಾಯೆ, ಮನುಷ್ಯನ್ನು ಸಾಮಾನ್ಯ ಅವಸ್ಥೆಗೆ ತಳ್ಳುತ್ತಾಳೆ. ಇಲ್ಲಿ ಸಾಮಾನ್ಯ ಎಂದರೆ ಲೌಕಿಕಕ್ಕೆ ಹತ್ತಿರವಾದ ಬದುಕು. ಕಬೀರ ಹೇಳುತ್ತಾನೆ: ಮಾಯೆ ಮನುಷ್ಯನನ್ನು ಧನಾರ್ಜನೆಗೆ ಒಡ್ಡಿ, ಅದನ್ನು ಕಾಪಾಡುವ ಮೋಹ, ಲೋಭವನ್ನೂ ಬಿತ್ತುತ್ತಾಳೆ.

ಜಗ ಹಟವಾಡಾ ಸ್ವಾದ ಠಗ, ಮಾಯಾ ಬೇಸಾ ಲಾ‌ಇ
ರಾಮಚರನ ನೀಕಾಂ ಗಹೀ, ಜಿನಿ ಜಾ‌ಇ ಜನಮ ಠಗಾಯಿ

ಜಗವು ಸಂತೆ, ರುಚಿಯೆ ಠಕ್ಕು, ಮಾಯೆಯು ಹೌದು ಬೆಲೆವೆಣ್ಣು, ರಾಮಚರಣ ಬಲವಾಗಿ ಹಿಡಿ ಅಗದಿದ್ದಲ್ಲಿ ಜನ್ಮ ಮಣ್ಣು(ನಿರರ್ಥಕ). ಇವಳು ಪ್ರತಿಯೊಬ್ಬರ ಮಡಿಲಲ್ಲಿ ಸ್ಥಾಪನೆಯಾಗುತ್ತಾಳೆ. ಮೈ ಮರೆಸುವಂತೆ ನಗುತ್ತಾಳೆ. ಶುದ್ಧ ಅಣಕದ ನಗುವದು, ಬಿದ್ದೆ ನೀ ಬಿದ್ದೆ ಎಂದು ಎಚ್ಚರಿಸುವ ನಗು. ಆ ನಗುವಿಗೆ ಮಾರು ಹೋದವ ತೇಲಿ ಹೋಗುತ್ತಾನೆ. ನಗುವಿನಲ್ಲಿ ಮುಳುಗೇಳುತ್ತಾ ಸುಖ ಅನ್ನು ಸುಳ್ಳು ಮುಖವಾಡದೊಳಗೆ ಹೂತು ಹೋಗುತ್ತಾನೆ. ಅಷ್ಟಾದ ಮೇಲೆ ಮಾಯೆ ಅಲ್ಲಿಂದ ಇನ್ನೊಂದು ತೆಕ್ಕೆಗೆ ಜಾರುತ್ತಾಳೆ ಎಂದು ಕಬೀರ ಎಚ್ಚರಿಸುತ್ತಾನೆ. ಎಚ್ಚರ ತಪ್ಪುವುದು ಮನುಷ್ಯ ಗುಣವಲ್ಲವೇ?

ಹರಿದಾಸರಲ್ಲೆ ಏಕೈಕ ಕವಿ ಕನಕದಾಸರು ಅಸಹಾಯಕರಾಗಿ ನಿವೇದನೆ ಮಾಡುತ್ತಾರೆ.

ಮಾಯಾಪಾಶದ ಬಲೆಯೊಳಗೆ ಸಿಲ್ಕಿರುವಂಥ
ಕಾಯ ಪಂಚೇಂದ್ರಿಯಂಗಳು ನಿನ್ನವು
ಮಾಯಾರಹಿತ ಕಾಗಿನೆಲೆಯಾದಿ ಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೆ

ಭಗವಂತನ ವಿರಾಟ್ ಶಕ್ತಿಯ ಮುಂದೆ ಮನುಷ್ಯ(ಭಕ್ತ) ತೀರಾ ಕುಬ್ಜನಾಗುತ್ತಾನೆ. ಶರೀರ ನಿನ್ನದಾಗಿರುವಾಗ ಶರೀರದ ಲೋಪದೋಷಗಳು ನಿನ್ನವೇ ಎಂದು ಹರಿಯನ್ನೇ ಹೊಣೆಯಾಗಿಸುತ್ತಾರೆ. ಭಕ್ತಿಯ ಒಂದು ರೂಪವಿದು. ಭಕ್ತನಿಗೆ ಮಾತ್ರ ಈ ಧೈರ್‍ಯ ಮೈಗೂಡುವುದು. ಮತ್ತೆ ಮುಂದೆ ಕನಕದಾಸರು “ನೀ ಮಾಯೆಯೋ, ನಿನ್ನೊಳು ಮಾಯೆಯೋ” ಎಂದು ಭ್ರಮಾಧೀನರಾದವರಂತೆ ಹರಿಯನ್ನೇ ಶಬ್ದವ್ಯೂಹ ರಚಿಸಿ ಸಂದೇಹಿಸುತ್ತಾರೆ. ಭಾಗವತದಲ್ಲಿ ಹೇಳಿರುವುದೂ ಇದೇ. ಭಗವಂತನೇ ಈ ನಿಗೂಢ ಮಾಯಾಶಕ್ತಿಯನ್ನು ಪ್ರಯೋಗಿಸುವ ಸೂತ್ರಧಾರಿಯೆಂದು. ಬಂಧನ ಮತ್ತು ಮೋಕ್ಷ ಮಾಯೆಯ ಕ್ಷೇತ್ರಕ್ಕೆ ಒಳಪಟ್ಟಿವೆ. ಬಂಧನ ಎನ್ನುವುದು ಅಶುದ್ಧ(ಹೊಲಸು) ಮನಸ್ಸಿನಿಂದಲೂ, ಬಿಡುಗಡೆ(ಮೋಕ್ಷ) ಪರಿಶುದ್ಧ ಮನಸ್ಸಿನಿಂದಲೂ ಪ್ರಾಪ್ತವಾಗುತ್ತದೆ.
ಮನುಷ್ಯ ಸ್ವಭಾವತಃ ಒಳಿತು ಕೆಡುಕಿನ ಮಿಶ್ರಣ. ದೇವ ದಾನವರು(ಸ್ವಭಾವದಲ್ಲಿ) ಮನಃಸಾಗರದಲ್ಲಿ ಮಥನ ಆರಂಭಿಸುತ್ತಾರೆ. ಮಜ್ಜಿಗೆ ಕಡೆದಂತೆ, ಕಡೆಯೋದು ಕೆಡೆಯೋದು ಮಾನವ ಗುಣ. ಈ ಯುದ್ಧ ಯಾವಾಗ ಆರಂಭವಾಯಿತೋ, ನಿಲ್ಲುವ ಲಕ್ಷಣಗಳಿಲ್ಲ. ನಿಂತರೆ ಸೃಷ್ಟಿಯೆ ನಿಂತು ಹೋದೀತು. ಇಷೆಲ್ಲಾ ಹೇಳಿದ ಮೇಲೆ, ಒಂದು ಪ್ರಶ್ನೆ ಉದ್ಭವಿಸುತ್ತದೆ. ಮಾಯೆ ಕೆಟ್ಟವಳೇ?….ಯಾಕೆ…ಮಾಯೆ ಯಾಕೆ ಕೆಟ್ಟವಳಾಗಬೇಕು? ಆಕೆ ಯಾರನ್ನೂ ನನ್ನ ತೆಕ್ಕೆಗೆ ಬಾ ಎಂದು ರಮಿಸಿಲ್ಲ, ಬಲವಂತ ಮಾಡಿಲ್ಲ. ಆದರೆ ಆಕೆಗೊಂದು ನೆಲೆ ಬೇಕು. ಹಾಗೆಯೇ ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು ಎನ್ನುವ ಕವಿವಾಣಿಯಂತೆ….ಈ ಮಾಯೆ ಎಲ್ಲಿಯೂ ಶಾಶ್ವತವಾಗಿ ನೆಲೆ ನಿಲ್ಲಳು. ಮನುಷ್ಯನ ಪುಣ್ಯವದು. ಸಿಕ್ಕ ನೆಲೆಯಲ್ಲಿ ಸುರೆಯಂತೆ ಆಳಲಾರಂಭಿಸುತ್ತಾಳೆ, ಇವಳು ರಾಜ್ಯಲಕ್ಷೀ. ಅಜ್ಞಾನ, ಅವಿದ್ಯೆ ಯಾವತ್ತಿಗೂ ಆಳಿಸಿಕೊಳ್ಳಲೇ ಹುಟ್ಟಿದ್ದು.

ಮನುಷ್ಯನೊಂದಿಗೆ ಹುಟ್ಟಿದವಳು ಈ ಸುರಸುಂದರಿ ಮಾಯೆ. ಆದರೆ ಮನುಷ್ಯ ನಾಶಗೊಂಡರೂ ಈಕೆ ನಾಶವಾಗುವ ಲಕ್ಷಣಗಳಿಲ್ಲ. ಏಕೆಂದರೆ ಈಕೆಗೆ ವರದಾನವಿದೆ…..ನೀನು ಅಮರ, ಅಮರ..ಅಮರಳಾಗು ಎಂದು. ಹುಲುಮಾನವ ಏನು ಮಾಡಬಹುದು? ಉತ್ತರ ಸರಳ, ಸರಳ. ಈ ಮಾಯೆಯನ್ನು ತೆಕ್ಕೆಗೇರಿಸದೆ ಪಕ್ಕದಲ್ಲಿ ಕುಳ್ಳಿರಿಸಿ. ಹಾಗೆ ಆಕೆಯ ಉಪಸ್ಥಿತಿಯ ಸಂಪೂರ್ಣ ಲಾಭವನ್ನೂ ಜೀವನೋಪಾಯಕ್ಕೆ, ಸೃಷ್ಟಿಯ ನಿರಂತರ, ನಿರ್ವಿಘ್ನ ಚಲನೆಗೆ ಬೇಕಾಗುವಷ್ಟು ಬಳಸಿಕೊಂಡು, ಮನದಲ್ಲಿ ಬೇರೂರಲು ಅವಕಾಶ ನೀಡದೆ ನಿಶ್ಚಿಂತೆಯಿಂದ ಬದುಕಬಹುದು. ನಿಶ್ಚಿಂತೆಯ ಇನ್ನೊಂದು ಅರ್ಥ ಸ್ವತಂತ್ರ. ಸ್ವತಂತ್ರದ ಮುಂದುವರಿದ ಅರ್ಥ ಮುಕ್ತನಾಗುವುದು, ನೀಡುವುದು. ನೀಡುವುದು ಎಂದರೆ ಸಂತೋಷ. ಸಂತೋಷ ಎನ್ನುವುದು ಆನಂದ, ಮಹದಾನಂದ….ಇದು ಮಾಯೆಯ ನಗುವಲ್ಲವೇ? ಹೌದು, ಇದು ವ್ಯೂಹ. ಬಾಳವ್ಯೂಹ. ಹೀಗಾಗಿ ಮಾಯೆಯೆನ್ನುವುದು ಮನಸ್ಸಿನ ಒಂದು ಅವಸ್ಥೆ ಅಷ್ಟೆ. ಮಾಯೆಯೂ ಇರಲಿ, ಜೊತೆಗೆ ಜಾಗ್ರತಬುದ್ಧಿಯ ಬಲವಿರಲಿ. ಜಾಗ್ರತಾವಸ್ಥೆಯಲ್ಲಿ ಮಾಯೆಯ ಆಟ ನಡೆಯದು. ಸ್ವಲ್ಪ ನಡೆದರೂ ಹೆಚ್ಚು ದೂರ ನಡೆಯಲಾಗದು ಅವಳಿಂದ. ಮಾಯೆಯನ್ನೆ ಆಡಿಸಿಕೊಂಡೂ ಬದುಕು ಸಾಧ್ಯ. ಅಷ್ಟೂ ಮಾಯೆಯಿಲ್ಲದೇ ಹೋದರೆ ಈ ಭೂಮಿ ಪ್ರತಿಸ್ವರ್ಗವಾಗುವುದು. ಉಹುಂ…ನಮಗ್ಯಾರಿಗೂ ಪ್ರತಿಸ್ವರ್ಗದ ಅಗತ್ಯವಿಲ್ಲ. ಈ ಭೂಸ್ವರ್ಗವೇ ಸಾಕು.

‘ವಿಜಯವಾಣಿ’ ಪ್ರಕಟಿತ

ಸಮುದ್ರದೊಡನೆ ನೆಂಟಸ್ತಿಕೆಯಾದರೂ. . .

ದೀಪಾ ಹಿರೇಗುತ್ತಿ

ಸುಕಿನ ನಾಲ್ಕು ಗಂಟೆಗೇ ಎದ್ದು
ಕುಪ್ಪಸವಿಲ್ಲದ ನಡುಗುವ ಎದೆಯಲಿ
ಗದ್ದೆಯಂಚಿನುದ್ದಕ್ಕೂ ನಡೆದುಹೋಗುತ್ತಾರೆ
ಮಗನ ಸಿಂಬಳ ತೆಗೆವಷ್ಟೇ
ಜತನವಾಗಿ ಗಿಡದಿಂದ
ತರಕಾರಿ ಬಿಡಿಸಿ
ಪಾಟೀಚೀಲಕ್ಕೆ ಪುಸ್ತಕ ತುಂಬಿದಷ್ಟೇ
ಕಾಳಜಿಯಿಂದ ಮೂಟೆ ಕಟ್ಟುತ್ತಾರೆ. . .

ಈಜಿಪ್ಟಿನ ಕ್ರೂರ ಬರಗಾಲದಲ್ಲೋ
ಬೇಂದ್ರೆ ಮಾಸ್ತರರ ಒಕ್ಕಲಗೇರಿಯಲ್ಲೋ
ಮಕ್ಕಳ ಮಾರುವ ಅಮ್ಮಂದಿರಂತೆ
ಏಜೆಂಟರು ಹೇಳಿದ ರೇಟಿಗೆ
ತಮ್ಮ ತರಕಾರಿ ಚೀಲ ಒಪ್ಪಿಸುತ್ತಾರೆ ಮತ್ತು
ಗಟ್ಟಿಯಾಗಿ ಚೌಕಾಶಿ ಮಾಡಲಾಗದ್ದಕ್ಕೆ
ನಿಡುಸುಯ್ಯುತ್ತ ತಮ್ಮನ್ನು ತಾವೇ
ಶಪಿಸಿಕೊಳ್ಳುತ್ತಾರೆ. .

“ಗೋಕರ್ಣದ ಸ್ಪೆಷಲ್ ತರಕಾರಿ”
ಚೀಟಿ ಅಂಟಿಸಿಕೊಂಡ
ಬೆಂಡೆ ಬದನೆ ಬಸಲೆ ಎಲ್ಲವೂ
ನೂರಾರು ಮೈಲು ಸಾಗಿ
ಉಳ್ಳವರ ಮೇಜಿನ ಮೇಲೆ
ಪರಿಮಳ ಬೀರುತ್ತ ಉಣ್ಣುವವರನ್ನು ಕಾಯುತ್ತಿವೆ

ಗದ್ದೆಗೆ ಹೋಗಿ ತರಕಾರಿ ಗಿಡಗಳ
ಕಳೆ ಕಿತ್ತು ನೀರು ಹನಿಸಿ
ಸುಸ್ತಾಗಿದ್ದಾಳೆ ದೇವಮ್ಮ
ಗಂಜಿಯ ಜತೆ ನೆಂಚಿಕೊಳ್ಳಲು
ಒಣಮೀನಿನ ಚೂರು ಸುಡಲು
ಕೆಂಡ ಕೆದಕುತ್ತಿದ್ದಾಳೆ. . .

%d bloggers like this: