ಚೌಟರ ‘ಅರ್ಧಸತ್ಯ: ಬಾಕಿ ಸುಳ್ಳಲ್ಲ’

ದೀಪಾ ಫಡ್ಕೆ

“ಅರ್ಧಸತ್ಯ: ಬಾಕಿ ಸುಳ್ಳಲ್ಲ”. ಅತ್ಯಂತ ಕುತೂಹಲ ಮೂಡಿಸುವ ಶೀರ್ಷಿಕೆ. ಸುಮಾರು ೧೬೪ ಪುಟಗಳ ಸರಳ, ಸುಂದರ ನಿರೂಪಣೆಯ ಚಿಕ್ಕ, ಚೊಕ್ಕ ಕಾದಂಬರಿ.  ನಮ್ಮ ಪುರಾಣ, ಇತಿಹಾಸದಲ್ಲಿ, ನಮ್ಮ ಪ್ರಜ್ಞೆಗೆ ಮುಟ್ಟಿದ್ದು ಬರೀ ಅರ್ಧಸತ್ಯವೇ; ಉಳಿದದ್ದು ನಮಗೆ ದಕ್ಕದೆ ಹೋಗುತ್ತದೆ. ಅಂದರೆ ಉಳಿದರ್ಧವನ್ನು ಊಹಿಸಲಷ್ಟೇ ಅವಕಾಶ. ಮನುಷ್ಯ ಬದುಕಿನ ಮಿತಿಯಿದು. ಸಾವಿನ ನಂತರ ಏನು? ಅನ್ನುವಷ್ಟೇ ಊಹೆಗೆ ನಿಲುಕದ ವಿಷಯವಿದು. ಇಂತಹ ಅರ್ಧಸತ್ಯದ ಅರ್ಧ ಚೌಕಟ್ಟನ್ನು ಡಿ.ಕೆ. ಚೌಟರು ಹಿಡಿದುಕೊಂಡು ದೆಯ್ಯುವಿನ ಮೂಲಕ ಉಳಿದರ್ಧ ಚೌಕಟ್ಟನ್ನು ಜೋಡಿಸುವ ಪ್ರಯತ್ನ ಮಾಡಿದ್ದಾರೆ.

ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಬಾಲ್ಯ, ಓಡಾಡಿದ ಸ್ಥಳಗಳು, ನೋಡಿದ ಜೀವನ ಎಲ್ಲವೂ ಮನಃಪಟಲದಲ್ಲಿ ಅಸ್ಪಷ್ಟವಾಗಿ ಮುದ್ರೆಯಾಗುತ್ತಾ ಹೋಗುತ್ತಿರುತ್ತದೆ. ಆ ಹೊತ್ತಿನಲ್ಲಿ ಗಮನ ನೀಡುವ ವ್ಯವಧಾನವಿರದೇ ಹೋಗುತ್ತದೆ. ಮಧ್ಯವಯಸ್ಸು ಅಥವಾ ಒಂದು ಹಂತ ದಾಟಿದ ಮೇಲೆ ನಮ್ಮ ಮನಸ್ಸಿನ ಫೋಟೊ ಲ್ಯಾಬ್‌ನಲ್ಲಿರುವ ನೆಗೇಟಿವ್ಸ್‌ಗಳನ್ನು ಪ್ರಿಂಟ್ ಹಾಕುವ ಮನಃಸ್ಥಿತಿ ಏರ್ಪಾಡಾಗುತ್ತದೆ. ಅಂದರೆ ಕಳೆದುಹೋದ ಅರ್ಧ ಬದುಕು ಮತ್ತು ಮುಂದಿರುವ ಅರ್ಧಬದುಕಿನ ನಡುವೆ ಒಂದೊಮ್ಮೆ ಎಚ್ಚರವಾಗುತ್ತಾನೆ. ಆಗಲೇ, ಆ ಕಳೆದ ಕಾಲದ ರೂಪಗಳೆಲ್ಲಾ ಹೆಚ್ಚು ಸ್ಪಷ್ಟವಾಗುತ್ತವೆ; ಹಾಗೆನೇ ಆಪ್ತವಾಗುತ್ತವೆ. ಇಂಥದ್ದೆ ಒಂದು ಪ್ರಯತ್ನ “ಅರ್ಧಸತ್ಯ: ಬಾಕಿ ಸುಳ್ಳಲ್ಲ” ಕಾದಂಬರಿ.

ಒಬ್ಬ ದೆಯ್ಯು – ಒಬ್ಬ ಗಾರ್ಗಿ: ಈ ಕಥೆಯನ್ನು ಆವರಿಸಿಕೊಂಡವರು. ದೆಯ್ಯು ಕಾದಂಬರಿಯ ನಿರೂಪಣಾಕಾರನಾದರೆ, ಗಾರ್ಗಿ ಆ ನಿರೂಪಣೆಯ ವಸ್ತುವಾದವಳು. ದೆಯ್ಯು ನಂಗೆ ಮಹಾಭಾರತದ ಸಂಜಯನಂತೆ ಕಾಣ್ತಾನೆ. ವ್ಯತ್ಯಾಸ ಏನಪ್ಪಾ ಅಂದ್ರೆ ಸಂಜಯ, ಆಗ್ತಾ ಇರೋದನ್ನು ವರದಿ ಒಪ್ಪಿಸುತ್ತಿದ್ದರೆ ಇಲ್ಲಿ ದೆಯ್ಯು ಆಗಿಹೋಗಿದ್ದನ್ನು ಪುನಃ ವರದಿ ಒಪ್ಪಿಸಿದ. ದೆಯ್ಯು ಸಂಜಯನಂತೆ ನಂಗೆ ಕಂಡ ಅಂದ ಕೂಡಲೇ ಕತೆಗಾರ ಧೃತರಾಷ್ಟ್ರನಂತೆ ಅಲ್ಲ, ಖಂಡಿತ ಅಲ್ಲ. ಧೃತರಾಷ್ಟ್ರನ ಒಳಗಣ್ಣು ಹೊರಗಣ್ಣು ಎರಡೂ ಕುರುಡಾಗಿತ್ತು. ಇಲ್ಲಿ ಕತೆಗಾರನ ಒಳಗಣ್ಣು, ಹೊರಗಣ್ಣು ಎರಡೂ ಸತ್ಯದ ಹಿಂದೆ ಬಿದ್ದಿತ್ತು. ಆತ್ಮಶೋಧನೆಯಲ್ಲೂ ತೊಡಗಿತ್ತು.

ನಮ್ಮ ತುಳುನಾಡು(ನಾನೂ ತುಳುನಾಡಿನವಳು) ಯಾವುದೇ ಒಂದು ಸಮುದಾಯದ ಕಥೆ ಹೇಳುವ ನಾಡಲ್ಲ. ನಮ್ಮಲ್ಲಿ ಪ್ರತಿಯೊಂದು ಸಮುದಾಯಕ್ಕೂ, ಪ್ರತಿ ಪಂಗಡಕ್ಕೂ ವಿಶಿಷ್ಟ ಗೌರವವಿದೆ. ಅವರಿಲ್ಲದೆ ಇವರಿಲ್ಲ, ಇವರಿಲ್ಲದೆ ಅವರಿಲ್ಲ ಎನ್ನುವ ಅವಿನಾಭಾವ ಸಂಬಂಧ. ಹೀಗಾಗಿ ಪ್ರತಿಯೊಂದು ಸಂಸ್ಕೃತಿಯೂ ಅಲ್ಲಿ ನಿರಾತಂಕವಾಗಿ ಉಸಿರಾಡುತ್ತಿದೆ. ಕತೆಗಾರ ಚೌಟರು ತಮ್ಮ ಬಾಲ್ಯದ ಒಡನಾಡಿ, ಆಪ್ತ, ದೆಯ್ಯು ಮುಗೇರನ ತಲೆತಲಾಂತರದಿಂದ ಬಂದ ಸಾಮಾಜಿಕ ಅಸ್ತಿತ್ವದ ಕಥೆ ಹೇಳಲು ಹೊರಟರೂ, ಅದು ಬರೀ ಮುಗೇರರ ಕಥೆಯಾಗದೆ ಗಾರ್ಗಿ ಅನ್ನುವ ಬ್ರಾಹ್ಮಣ ಹೆಣ್ಣೊಬ್ಬಳ ಸಂಘರ್ಷದ ಕಥೆಯಾಯಿತು. ಮುಗೇರರು ದಕ್ಷಿಣ ಕನ್ನಡ ಅಥವಾ ತುಳುನಾಡಿನ ಬಂಟ ಸಮುದಾಯದ ಮತ್ತು ಮೇಲ್ವರ್ಗದ ಮೂಲದಾಳುಗಳು. ಮುಗೇರ ಅನ್ನುವುದು ಪರಿಶಿಷ್ಟ ಪಂಗಡ. ಇವರು ಸುಮಾರು ಇಪ್ಪತ್ತು-ಇಪ್ಪತ್ತೈದು ತಲೆಮಾರಿಂದ ಗಡಿನಾಡು ಕುಂಬಳೆ, ಮಂಜೇಶ್ವರದ ವಾಸಿಗಳು. ದೆಯ್ಯು- ಮುಗೇರರ ಹಿರಿಯ ಮುಖಂಡ. ಕತೆಗಾರ ಚೌಟರ ಕಾಲಕ್ಕೆ ಅವನು ಅಜ್ಜ ದೆಯ್ಯುವಾಗಿದ್ದ ಎಂದು ಕಾಣುತ್ತದೆ. ಇಂತಹ ದೆಯ್ಯು ನಡೆದಾಡಿದ, ನೋಡಿದ, ಬಾಯಿಂದ ಬಾಯಿಗೆ ಕೇಳಿದ, ಪಾಡ್ದನದ ರೀತಿಯಲ್ಲಿ ಹೊನಲಾಗಿ ಹರಿದ ಕಥೆ ಅರ್ಧಸತ್ಯ.  ಕಥೆಯ ನಾಯಕಿ, ಕಣ್ಣು-ಗಾರ್ಗಿ. ಗಾರ್ಗಿಯ ಸಂಘರ್ಷದ ಕಥೆಯಿದು. ಗಾರ್ಗಿಯ ಸಂಘರ್ಷದ ಹಿಂದೆ ದೊಡ್ಡ ಸಂಕಲ್ಪವಿತ್ತು. ಈ ಸಂಕಲ್ಪ ಮಾಡಲೂ ಒಂದು ದೊಡ್ಡ ಸಂತಾಪ ಗಾರ್ಗಿಯ ಬದುಕಲ್ಲಾಗಿತ್ತು.

ಅರ್ಧಸತ್ಯದ ಕಥೆಯ ಸಣ್ಣ ನಿರೂಪಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಕಡಂಬಾರು, ಅರಿಬೈಲು ಮಂಜೇಶ್ವರದ ಆಸುಪಾಸಿನ ಸ್ಥಳಗಳು. ಸಜ್ಜನ, ಸಾತ್ವಿಕ ಮನದ, ವೇದಶಾಸ್ತ್ರ ಪಾರಂಗತರಾದ ರಾಮಚಂದ್ರ ಕಡಮಣ್ಣಾಯರು ಊರಿಗೆ ದೊಡ್ಡ ಮನುಷ್ಯ. ಅವರಿಗೆ ಹೆಣ್ಣು ಕೊಟ್ಟ ಮಾವ ಮಾಣಿಲತ್ತಾಯರೂ ಅಷ್ಟೇ ಯೋಗ್ಯ ಮನುಷ್ಯ. ಕಥಾನಾಯಕಿ ಗಾರ್ಗಿ ಕಡಮಣ್ಣಾಯರ ಏಕೈಕ ಪುತ್ರಿ. ವಿದ್ಯಾ, ಬುದ್ಧಿ ಸಂಪನ್ನೆ. ಹತ್ತು ಹನ್ನೆರಡರ ಎಳವೆಯಲ್ಲೇ ತನ್ನ ವಯಸ್ಸಿನ ಹುಡುಗರಿಗೆ ಪಾಠ ಮಾಡುತ್ತಿದ್ದ ಸರ್ವಗುಣ ಸಂಪನ್ನೆ. ವಿಧಿ ಅನ್ನುವುದೊಂದು ಇರುವುದಾದರೆ ಅದಕ್ಕೂ ಈ ಗುಣಿ ಹೆಣ್ಣಿನ ಮೇಲೆ ಮತ್ಸರವಾಗಿರಬೇಕು. ಗಾರ್ಗಿಯದು ಮೂಲಾನಕ್ಷತ್ರವೆನ್ನುವ ವಿಷಯ ಹೆತ್ತವರಿಗೆ ವಿಷವಾಗತೊಡಗಿತು. ಆ ಊರಿಗೊಬ್ಬ ಅರಸು, ಕುಂಬಳೆ ಅರಸು ಜಯಸಿಂಹ, ಈ ಸದ್ಗುಣಿ ಹೆಣ್ಣಿಗೆ ಸೋತಿದ್ದ. ಕೇಳುವಂತಿಲ್ಲ, ಅರಸು ಕ್ಷತ್ರಿಯ. ಅವನಿಗೊಬ್ಬ ಆಸ್ಥಾನ ವಿದ್ವಾಂಸ ಸರ್ವವಿದ್ಯಾ ಪಾರಂಗತ ಕೇಶವ ತಂತ್ರಿ.

ಮೂಲಾನಕ್ಷತ್ರದ ಬೆಂಕಿಯೊಂದಿಗೆ, ಕಡಮಣ್ಣಾಯರನ್ನು ಮತ್ತು ಮಾಣಿಲತ್ತಾಯರ ಸಮಸ್ತ ಕುಟುಂಬವನ್ನು ಸುಟ್ಟಿದ್ದು, ಗಾರ್ಗಿ, ವಿವಾಹಕ್ಕೂ ಮುನ್ನ ಋತುಮತಿಯಾದ ವಿಷಯ. ಆ ಕಾಲಕ್ಕೆ ಋತುಮತಿಯಾದ ಹೆಣ್ಣು ವಿವಾಹಕ್ಕೆ ಅಯೋಗ್ಯಳು, ಅಂತಹ ಹೆಣ್ಣನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗಟ್ಟುವ ಅನಿಷ್ಟ ಪದ್ಧತಿಯಿತ್ತು. ವೇದ, ಜ್ಯೋತಿಷ್ಯದ ಅತಿರಥ, ಮಹಾರಥರಾದ ಕಡಮಣ್ಣಾಯರು, ಮಾಣಿಲತ್ತಾಯರಿಗೆ ಎಲ್ಲಾ ರೀತಿಯಿಂದ ಲೆಕ್ಕಾಚಾರ ಹಾಕಿದರೂ ಗಾರ್ಗಿಯ ಬದುಕುಳಿಸಲು ಆಗದೇ ಇದ್ದಾಗ ಕಣ್ಣಿಗೆ ಬಿದ್ದದ್ದೇ ಕೇಶವ ತಂತ್ರಿ. ಅಷ್ಟೊತ್ತಿಗಾಗಲೇ ಅರಸು ಜಯಸಿಂಹನಿಗೆ ಆಸೆ ಮತ್ತೊಮ್ಮೆ ಚಿಗುರಿತ್ತು. ಗಾರ್ಗಿಯನ್ನು ಶಾಸ್ತ್ರದ ನೆಪದಿಂದ ಕಾಡಿಗಟ್ಟಿದರೆ ತಾನು ಕರೆತಂದು ಪಟ್ಟದ ರಾಣಿಯಾಗಿಸುವೆ ಎಂದು. ತಡೆಯದೆ ತಂತ್ರಿಯೊಂದಿಗೆ ಈ ಪ್ರಸ್ತಾಪ ಮುಂದಿಟ್ಟರೆ, “ಈ ಕೂಸಿಗೆ ಕ್ಷತ್ರಿಯ ಏನು ಚಂಡಾಲನ ಮನೆ ಬೆಳಕಾಗುವ ಯೋಗ್ಯತೆಯಿಲ್ಲ” -ಆಸ್ಥಾನ ವಿದ್ವಾಂಸನ ಕ್ರೂರ ನುಡಿ. ಭುಗಿಲೆದ್ದಿತು ಗಾರ್ಗಿಯ ಮನಸ್ಸು. ಹೆಣ್ಣಿನ ಬದುಕು ಮುಳುಗಿಸುವ ಪದ್ಧತಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ತನ್ನ ಬದುಕನ್ನು ತಾನೇ ರೂಪಿಸುವ ಹಟ ತೊಟ್ಟು ನಿರ್ಗಮಿಸುತ್ತಾಳೆ. ಇದು ಅಪ್ಪಟ ಮೌಲ್ಯಗಳ ಸಂಘರ್ಷ. ಮಹಾ ಪಂಡಿತ, ವೇದವಿದ್ಯಾ ಪಾರಂಗತ ಕೇಶವ ತಂತ್ರಿ ಅಹಂಕಾರದಿಂದ ಅನಾಗರಿಕನಾಗುತ್ತಾನೆ. ಪುಟ್ಟ ಹುಡುಗಿ ಗಾರ್ಗಿ ಅವನ ಅಹಂಕಾರ ದಮನ ಮಾಡುವ ನಾಗರಿಕ ಪ್ರಯತ್ನ ಮಾಡುತ್ತಾಳೆ.

ಗಾರ್ಗಿ ಕಾಡಿನ ಪಾಲಾಗುತ್ತಾಳೆ. ಆಕೆಯನ್ನು ಯಾರೂ ಕಾಡಿಗೆ ತಳ್ಳಿದ್ದಲ್ಲ, ಕಣ್ಣಿಗೆ ಬಟ್ಟೆ ಕಟ್ಟಿ ಬಿಟ್ಟಿದ್ದಲ್ಲ. ಮೂಢನಂಬಿಕೆಯನ್ನು ಹೀಗಳೆದು, ಮುಂದಿನ ಹೋರಾಟಕ್ಕೆ  ರಣ ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾಳೆ. ಅಲ್ಲಿಂದ ನಿಜವಾದ ಸಂಘರ್ಷ ಆರಂಭ. ಪುಟ್ಟ ಗಾರ್ಗಿ ಪ್ರೌಢೆಯಾಗುತ್ತಾಳೆ. ಮೂಲದಾಳು ದೆಯ್ಯು ಮತ್ತವನ ಮಗ ಬಡಜ ಗಾರ್ಗಿಯ ನೆರಳಾಗಿ ಬಂದು, ಕಾಡಿನಲ್ಲಿ ಹೊಸ ಗ್ರಾಮದ ಸೃಷ್ಟಿ ಮಾಡಿ ಮುಗೇರರ ಹುಡುಗರನ್ನು ಕತ್ತಿವರಸೆ, ಬಿಲ್ಲುಗಾರಿಕೆಯಲ್ಲಿ ಅಪ್ರತಿಮರಾಗುವಂತೆ ಗಾರ್ಗಿ ತಯಾರು ಮಾಡುತ್ತಾಳೆ.  ಅಲ್ಲೊಂದು ಹೊಸ ಲೋಕ ಸೃಷ್ಟಿಯಾಗುತ್ತದೆ. ಕೃಷಿಯ ಹೊಸ ರೂಪಗಳ ಪರಿಚಯ ಮಾಡಿಸಿ ಊರಿಗೆ ಮಾರಿಯಾಗಿ ಬಂದ ಬರಗಾಲವನ್ನು, ಆಹಾರ ಕ್ಷಾಮವನ್ನೂ ತನ್ನ ಕಾಡಿನೊಳಗಿರುವ ಗ್ರಾಮದೊಳಗೆ ನುಸುಳದಂತೆ ನೋಡಿಕೊಳ್ಳುತ್ತಾಳೆ. ಹೊಸ ರಾಜ್ಯದ ಕಲ್ಪನೆ ಮೂಡಿ ತಾನು ರಾಣಿಯಾಗದೆ ದೆಯ್ಯುವಿನ ಮಗ ಬಡಜನನ್ನು ಮುಗೇರರ ಅರಸನನ್ನಾಗಿಸಿದಳು ಗಾರ್ಗಿ. ಕೊನೆಗೂ ಗಾರ್ಗಿ ಸಾಮಾಜಿಕವಾಗಿ ಗೆಲ್ಲುತ್ತಾಳೆ.

ಈ ಪ್ರಪಂಚದ ನೀತಿಯೇ ಇದು. ಮಾಡಿದ್ದುಣ್ಣೋ ಮಹರಾಯ ಎಂಬಂತೆ, ಕೆಟ್ಟ ಮನಸ್ಸಿನಿಂದ ಅಹಂಕಾರದಿಂದ ಜ್ಯೋತಿಷ್ಯ ಹೇಳಿದ್ದ ಕೇಶವ ತಂತ್ರಿ ಗುಣವಾಗದ ರೋಗ ತಗುಲಿಸಿಕೊಂಡು ಹುಚ್ಚನಾಗಿ ಅಲೆಯುತ್ತಿದ್ದರೆ, ಒಳ್ಳೆತನಕ್ಕೆ ಮಿತಿಯಿಲ್ಲವೆನ್ನಲು, ಗಾರ್ಗಿಯ ಸೋತ ಹೆತ್ತಪ್ಪ ಕಡಮಣ್ಣಾಯರು ದುಷ್ಟ ಕೇಶವ ತಂತ್ರಿಯ ಮಗಳನ್ನು ಸಾವಿನಿಂದ ಪಾರು ಮಾಡಿ ಸಾಕುತ್ತಿರುತ್ತಾರೆ. ಎಲ್ಲವೂ ಇಲ್ಲೇ ಇದೆ. ಗುರುತಿಸುವ ಯತ್ನವಾಗಬೇಕಷ್ಟೆ. ಮುಗೇರರ ಸಾಮ್ರಾಜ್ಯ ಉದಯವಾದಷ್ಟೇ ರಭಸದಿಂದ ಅವಸಾನವೂ ಆತು. ಮತ್ತೊಮ್ಮೆ ಸಾಮಾನ್ಯ ಮನುಷ್ಯನ ಮನಸ್ಸಿನ ಮಿತಿಯನ್ನು ಹೇಳುತ್ತದಲ್ಲವೇ? ಗಾರ್ಗಿ ಶಾಕ್ತಪರಂಪರೆಯ ವಿದ್ಯೆಗಾಗಿ ಉತ್ತರದ ಕಡೆ ನಡೆಯುತ್ತಾಳೆ. ನನ್ನಲ್ಲಿ ಅಚ್ಚರಿ ಮೂಡಿಸೋದೇ ಮನುಷ್ಯನ ವಿವಿಧ ಮನಸ್ಥಿತಿಗಳು. ಅಹಂಕಾರ, ಅಸಹಾಯಕತೆ, ಮೂರ್ಖತನ, ಸಜ್ಜನಿಕೆ, ದುಷ್ಟತನ, ಕ್ಷಮೆ ಹೀಗೆ ಎಲ್ಲವೂ ಎಲ್ಲವೂ…

ಕಾದಂಬರಿಯ ನಿರೂಪಣೆ ಬಗ್ಗೆ ಹೇಳಬೇಕು. ನಂಗೆ ತೇಜಸ್ವಿಯವರ ಸಾಹಿತ್ಯವೆಂದರೆ ಬಹಳ ಇಷ್ಟ. ಅದೇ ನೇರ, ನಿರ್ಭೀತ ಬರವಣಿಗೆ ಚೌಟರದೂ. ಬಯಲಾಗುವ ಆಸೆ ಅಲ್ಲಲ್ಲಿ. ನಿರೂಪಣೆಯಲ್ಲಿ ಯಾರನ್ನೂ, ಯಾವುದನ್ನೂ ಬಿಟ್ಟಿಲ್ಲ. ಅದು ಸಂಬಂಧಗಳಿರಬಹುದು, ಊರ ಪಂಚರಿರಬಹುದು ಎಲ್ಲರತ್ತಲೂ ತಮ್ಮ ಮಾತಿನ ಚಾಟಿ ನಯವಾಗಿ ಬೀಸಿದ್ದಾರೆ. ಯವುದೇ ಉತ್ಪೇಕ್ಷೆಯಿಲ್ಲ. ಅಸಹಜವೆನ್ನಿಸುವ ಭಾವುಕತೆ ಇಲ್ಲ. ನಂಗೆ ಹೆಚ್ಚು ಆಪ್ತವಾಗಲು ಕಾರಣ ಅದು ನನ್ನೂರಿನ ಕಥೆಯೆಂತಲೋ ಗೊತ್ತಿಲ್ಲ. ಆ ದಂಬೆನೀರು, ತೋಡು, ಕೃಷಿ ಪದ್ಧತಿ, ನೀರಾವರಿಯ ವ್ಯವಸ್ಥೆ ಎಲ್ಲವೂ ಪರಿಚಿತ. ಕಾದಂಬರಿಯಲ್ಲಿ ಕತೆಗಾರ ಹೇಳಿರುವ ಊರ ಹಣ್ಣುಗಳಾದ ಕೊಟ್ಟೆಹಣ್ಣು, ವೈಲ್ಡ್ ಬೆರ್ರಿಯಾದ ಚೂರಿ ಮುಳ್ಳಿನ ಹಣ್ಣು, ನೆಕ್ಕರೆ ಮಾವು……ಒಂದೇ ಎರಡೇ. ಟಿಟೀ ಎಂದು ಕೂಗುವ ಟಿಟ್ಟಿಭ ಹಕ್ಕಿ, ಬಜಕೆರೆ ಹಕ್ಕಿ ಎಲ್ಲವೂ ನನ್ನ ಬಾಲ್ಯ ನೆನಪಿಸಿತು. ತುಳುನಾಡಿನ ಪರಿಚಯ ಯಾರಿಗಾದರೂ ಮಾಡಿಸಬೇಕೆಂದರೆ ಚೌಟರ ಅರ್ಧ ಸತ್ಯ ಮತ್ತು ಮಿತ್ತಬೈಲು ಯಮುನಕ್ಕೆ ಓದಲು ನೀಡಬೇಕು. ಅಷ್ಟು ತುಳುನಾಡನ್ನು ಕಾದಂಬರಿಯ ಮೂಲಕ ಪರಿಚಯಿಸಿದ್ದಾರೆ.

ಒಂದೊಳ್ಳೆಯ ಸಂದೇಶ ಈ ಕಾದಂಬರಿಯಲ್ಲಿ ಗಾರ್ಗಿಯ ಮೂಲಕ ಕತೆಗಾರ ನೀಡುವ ಯತ್ನ ಮಾಡಿದ್ದಾರೆ. “ಯಾವುದೇ ರಾಜ್ಯವನ್ನು ಹಿಂಸೆಂದ ಕಟ್ಟಿದರೆ ಅದು ಹೆಚ್ಚು ದಿನ ಬದುಕಲಾರದು. ದ್ವೇಷದ ರಾಜಕೀಯಕ್ಕೆ ಎಡೆ ಕೊಡಬೇಡಿ. ರಾಜ್ಯದಲ್ಲಿ ಎಲ್ಲ ಪ್ರಜೆಗಳು ಸಮಾನರು. ಸಮಾನ ಅವಕಾಶಗಳು ಪ್ರಜೆಗಳ ಹಕ್ಕು. ಜಾತಿಭೇದವಿಲ್ಲದ, ಲಿಂಗಭೇದವಿಲ್ಲದ ಸಮಾಜದ ಅಗತ್ಯವಿದೆ”. ಇಂದಿಗೂ ಈ ಮಾತುಗಳು ಪ್ರಸ್ತುತ. ಯಾವುದೇ ಸಮಾಜವನ್ನು ಹಿಂಸೆಯಿಂದ ಕಟ್ಟಿದರೆ ಅದು ಹೆಚ್ಚು ದಿನ ಬದುಕಲಾರದು.  ಯಾರಿಗೆ ಹೇಳೋಣ ಇದನ್ನು? ಕೇಳಬೇಕಾದ ಕಿವಿಗಳು ಕಿವುಡಾಗಿವೆ.

ಮುನ್ನಡಿಯಲ್ಲಿ ಡಾ.ನಾ.ಮೊಗಸಾಲೆಯವರು “ನನ್ನ ಓದಿನ ಮಿತಿಯಲ್ಲಿ ಇಂತಹ ಶಿರೋನಾಮೆಯ ಕಾದಂಬರಿ ಓದಿಲ್ಲವೆಂದೂ, ಕತೆಗಾರನೇ ಕತೆಯ ಪಾತ್ರವಾಗುವ ಅಪರೂಪದ ಕೃತಿಯಿದು” ಎಂದು ಹೇಳಿದ್ದಾರೆ. ನನ್ನದು ಇನ್ನೂ ಪುಟ್ಟ ಮಿತಿ. ಈ ಮಿತಿಯಲ್ಲಂತೂ ನಾನು ಇಂತಹ ಆಕರ್ಷಕ ಶೀರ್ಷಿಕೆಯ ಕೃತಿ ಓದೇ ಇಲ್ಲ. ಇನ್ನು ಕತೆಯಲ್ಲಿ ಕತೆಗಾರ ಪಾತ್ರವಾಗಿ ಬರುವ ವಿಷಯದಲ್ಲಿ, ನನಿಗನ್ನಿಸೋದು ಪ್ರತಿ ಕತೆಯಲ್ಲಿ, ಕವನದಲ್ಲಿ ಪಾತ್ರವಾಗಿ ಬಂದರೂ ಬಾರದಿದ್ದರೂ ಕೃತಿಕಾರನ ಸಣ್ಣ ಜೀವ ಕತೆಯುದ್ದಕ್ಕೂ ಉಸಿರಾಡುತ್ತಿರುತ್ತದೆ ಎಂದು. ಎಷ್ಟೆಂದರೂ ಸಾಹಿತ್ಯ ಅನ್ನೋದು ಮನುಷ್ಯನ ಭಾವದ ಅಭಿವ್ಯಕ್ತಿಯಲ್ಲವೇ.

ಚೌಟರು ಕತೆ ಮುಗಿಸಿ ಮೌನ ತಬ್ಬುತ್ತಾರೆ. ಕತೆ ಓದಿ ಮುಗಿಸಿದ ಮೇಲೆ ನನ್ನದೂ ಒಂದು ನಿಟ್ಟುಸಿರು. ಕೊನೆಯಲ್ಲಿ ದೆಯ್ಯು ಹೇಳುತ್ತಾನೆ: “ಮುಗೇರರ ಸಾಮ್ರಾಜ್ಯ ಅವನತಿ ಪಡೆಯಲು ಕಂಬಳೆ ಅರಸರಿಗೆ ನೆರವಾದ ಸೇನೆಯ ಮುಖ್ಯರಲ್ಲಿ, ನಿಮ್ಮ ಮನೆತನವೂ ಸೇರಿದೆ. ಅದೇ ಮನೆತನದ ಕುಡಿ ನೀವು.” ಹೀಗಂದ ದೆಯ್ಯುವಿನ ಮಾತಿನಲ್ಲಿ ಅಸಹನೆಯಿತ್ತೆ? ತಿಳಿಯದು, ಅದೂ ಅರ್ಧ ಸತ್ಯವಾದೀತು ಹೇಳಿದರೆ. ಕತೆಗಾರ, ದೆಯ್ಯುವಿಗೆ ಉತ್ತರಿಸದೆ ಅದುವರೆಗೂ ತನ್ನೆಲ್ಲ ಸವಾರಿಗಳಿಗೆ ಒಡನಾಡಿಯಾಗಿದ್ದವನನ್ನು ಬಿಟ್ಟು ಒಂಟಿಯಾಗಿ ಹೋಗುವ ತೀರ್ಮಾನಕ್ಕೆ ಬರುತ್ತಾನೆ. ಆ ಮನದಲ್ಲಿ ದುಗುಡವಿತ್ತೇ? ಅವಮಾನವಿತ್ತೇ? ತಿಳಿಯದು. ಮತ್ತೆ ನಿಟ್ಟುಸಿರು. ಗಾರ್ಗಿಯ ಸಂಘರ್ಷ ಕೇಳಿಯೋ? ಮುಗೇರರ ಸಾಮ್ರಾಜ್ಯದ ಪತನದ ಕಥೆ ಕೇಳಿಯೋ ಅಥವಾ ಪತನವಾಗುತ್ತಿರುವ ಮಾನವ ಮೌಲ್ಯಗಳನ್ನು ನೋಡಿಯೋ ತಿಳಿಯುತ್ತಿಲ್ಲ. ಬರೀ ಮೌನ.

Advertisements

%d bloggers like this: