ಹರಿದಾಸರು ಕಂಡ ಮನಸು

ನೋಡುವ ಬೆಡಗು । ದೀಪಾ ಫಡ್ಕೆ

`ಮನವ ನಿಲಿಸುವುದು ಬಲು ಕಷ್ಟ’, `ಮನವ ಶೋಧಿಸಬೇಕು ನಿಚ್ಚ’, `ಮನಶುದ್ಧಿಯಿಲ್ಲದವಗೆ ಮಂತ್ರದ ಫಲವೇನು?’ ಈ ಎಲ್ಲ ಕೀರ್ತನೆಗಳಲ್ಲಿ ಸಾಮಾನ್ಯಪದ ಮನ ಅಥವಾ ಮನಸ್ಸು. ಭಕ್ತಿಪಂಥದ ಹರಿದಾಸರು  ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ. ಹೌದು, ಅಷ್ಟು ಕುತೂಹಲಕಾರಿ ಈ ಮನಸ್ಸು. ಒಮ್ಮೊಮ್ಮೆ ಆತಂಕಕಾರಿ ಕೂಡ. ಪ್ರಜ್ಞೆ ಇರುವ ಮನುಷ್ಯನ ಮನಸ್ಸು ಆತನನ್ನು ಚಿಂತನೆಗೆ ಹಚ್ಚಿ, ಸಾಮಾನ್ಯನಿಂದ  ಅಸಾಮಾನ್ಯನನ್ನಾಗಿಸುತ್ತದೆ.

ಭಾರತೀಯ ದಾರ್ಶನಿಕ ಶಾಖೆಗಳಲ್ಲಿ, ಅದರ ತತ್ತ್ವಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ  ಮನಸ್ಸೆಂಬ ವಸ್ತುವಿಗೆ ಒಂದು ಉತ್ಕೃಷ್ಟ ಸ್ಥಾನ ದೊರೆತಿದೆ.ಭಾರತೀಯ ದರ್ಶನಶಾಸ್ತ್ರದಲ್ಲಿ ಆತ್ಮವನ್ನು ಸಂಬಂಧಿಸಿದಂತೆ ಬುದ್ಧಿ(ಜ್ಞಾನ), ಅಹಂಕಾರ(ಅಹಂ) ಮತ್ತು ಮನಸ್ಸು(ಮತಿ) ಎನ್ನುವ ಮೂರು ಪದಪ್ರಯೋಗವನ್ನು ಕಾಣಬಹುದು. ಬುದ್ಧಿ ಮತ್ತು ಅಹಂಕಾರ, ಮನಸ್ಸಿನ ಬೇರೆ ಬೇರೆ ಆಯಾಮಗಳೇ. ಆದರೂ ಮನಸ್ಸಿನ ಅತ್ಯುನ್ನತ ಸ್ತರವನ್ನು ಆತ್ಮವೆನ್ನುತ್ತಾರೆ. ಆತ್ಮನಿವೇದನಾ ಪ್ರಕ್ರಿಯೆಯನ್ನು ಅವಲೋಕಿಸಿದಾಗ, ಮನುಷ್ಯ ,ಒಂದು ಉನ್ನತವಾದ ಆದರ್ಶ, ಧ್ಯೇಯ, ಮತ ಅಥವಾ ವ್ಯಕ್ತಿಯ ಮುಂದೆ ತನ್ನ ಅಂತರಂಗದಲ್ಲಾಗುವ ಎಲ್ಲಾ ಕ್ರಿಯೆಗಳನ್ನು ಅನಾವರಣಗೊಳಿಸುವುದು ಆತ್ಮನಿವೇದನೆ. ಹರಿದಾಸರು ತಮ್ಮ ಇಷ್ಟದೈವ ಹರಿಯಲ್ಲಿ ಎಲ್ಲವನ್ನು ತೋಡಿಕೊಳ್ಳುವ, ಹಾಡಿಕೊಳ್ಳುವ ವಿಧಾನ ಆತ್ಮನಿವೇದನೆ.

ಮನಸ್ಸಿನ ಬಗ್ಗೆ ಭಾರತೀಯರು ಚಿಂತನೆ ಮಾಡಿದಷ್ಟು ಬೇರಾವ ದೇಶ, ಜನಾಂಗದವರು ಮಾಡಿಲ್ಲವೆನ್ನಬೇಕು. ಮನಸ್ಸು ಮತ್ತದರ ರಚನೆ, ಅದರ ಶಕ್ತಿ ಸಾಮಥ್ರ್ಯ, ಇತಿಮಿತಿಗಳು, ಮನಸ್ಸಿನ ನೆಮ್ಮದಿ, ಆರೋಗ್ಯಕ್ಕೆ ಪ್ರೇರಕವಾದ ಅಂಶಗಳು ಹಾಗೂ ಮನಸ್ಸಿನ ಅಸ್ವಸ್ಥತೆಗೆ ಕಾರಣವಾಗುವ ಅಂಶಗಳು ಇವೆಲ್ಲದರ ಕುರಿತು ವೇದಗಳ ಕಾಲದಿಂದಲೂ ಭಾರತೀಯರು ಯೋಚಿಸಿದ್ದಾರೆ. ತರ್ಕಬದ್ಧ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅಂಕೆ ಮೀರಿದ ಚಂಚಲಮನಸ್ಸಿನ ಹತೋಟಿ, ಅವ್ಯಕ್ತ ಹಾಗೂ ಅಗಾಧ ಶಕ್ತಿಯ ಸರಿಯಾದ ಬಳಕೆ, ಕ್ಷಣಮಾತ್ರದಲ್ಲಿ ನಿರಾಶೆ,ನೋವುಗಳಿಗೆ ಸಿಕ್ಕಿ ತೊಳಲಾಡುವ ಮನಸ್ಸನ್ನು ಶಾಶ್ವತ ಆನಂದದೆಡೆಗೆ ಕೊಂಡೊಯ್ಯುವ ವಿಧಾನಗಳನ್ನೂ ಹೇಳಿದ್ದಾರೆ.

ಹೊರಗಡೆ ಕಾಣುವ ಕಾಯ(ದೇಹ), ಒಳಗೆ ಇದೆ ಎಂದು ನಂಬುವ, ಕಾಣದ ಆತ್ಮ-ಇವೆರಡರ ನಡುವೆ ಇರುವ, ಅಂದರೆ ವ್ಯಕ್ತಿತ್ವದ ಅತ್ಯಂತ  ಕ್ರಿಯಾತ್ಮಕ ಭಾಗವೇ ಮನಸ್ಸು. ಮನಸ್ಸಿನ ಮೂರು ಗುಣಗಳನ್ನು ಪ್ರಸ್ತಾಪಿಸಿದ್ದಾರೆ. ಸತ್ವ, ತಮ ಹಾಗೂ ರಜ. ಸತ್ವ ಗುಣದಿಂದ ಮಾನಸಿಕ ಆರೋಗ್ಯ ಲಭ್ಯವಾದರೆ, ತಮೋಗುಣ ಮತ್ತು ರಜೋಗುಣಗಳಿಂದ ಮಾನಸಿಕ ಏರುಪೇರು ಉಂಟಾಗುತ್ತದೆ ಎಂದು ಋಗ್ವೇದದಲ್ಲಿ ಹೇಳಿದ್ದಾರೆ. ಯಜುರ್ವೇದದಲ್ಲಿ ಜ್ಞಾನದ ಒಳಸ್ತರವೇ ಮನಸ್ಸು ಎಂದಿದೆ. ಜ್ಞಾನಾರ್ಜನೆಯೇ ಮನಸ್ಸು. ಮನಸ್ಸು ಜಾಗೃತ ಸ್ಥಿತಿ ಮತ್ತು ಸ್ವಪ್ನ ಸ್ಥಿತಿ ಎನ್ನುವ ಎರಡು ವ್ಯವಸ್ಥೆಗಳಲ್ಲಿದ್ದು, ಆತ್ಮದ ಒಂದು ಭೂಮಿಕೆಯೇ ಮನಸ್ಸು ಎಂದಿದ್ದಾರೆ.

ಉಪನಿಷತ್ತುಗಳಲ್ಲಿ ಸಂವೇದನೆ, ಆಲೋಚನೆ,ಚಿತ್ತಸ್ಮೃತಿಯ ಬಗ್ಗೆ ಪ್ರಸ್ತಾಪವಿದೆ. ಜಾಗೃತ, ಸ್ವಪ್ನ, ಸುಷುಪ್ತಿ ಮತ್ತು ಸಮಾಧಿ ಎನ್ನುವ ನಾಲ್ಕು ಮಾನಸಿಕ ಸ್ಥಿತಿಗಳ ಉಲ್ಲೇಖವಿದೆ. ಆರು ಬಗೆಯ ಮಾನಸಿಕ ಶಕ್ತಿಗಳಾದ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ, ವೇದನಾಶಕ್ತಿ, ಸ್ಮರಾಶಕ್ತಿ, ಭಾವನಾಶಕ್ತಿಯ ಜೊತೆಗೆ  ಮನೀಶ(ನಿರ್ಧಾರ ಕೈಗೊಳ್ಳುವುದು), ಸಂಕಲ್ಪ ಮತ್ತು ಧಾರಣಶಕ್ತಿಯ ಬಗ್ಗೆ ವಿವರಿಸಲಾಗಿದೆ.

ವೇದಾಂತದಲ್ಲಿಯೂ ದೇಹ,ಮನಸ್ಸು ಆತ್ಮದ ಸಂಬಂಧಗಳನ್ನು ವಿವರಿಸಿದ್ದಾರೆ. ಜಗತ್ತಿನ ಅತ್ಯಂತ ಹಳೆಯ ಹಾಗೂ ಈಗಲೂ ಪ್ರಚುರವಿರುವ ವೈದ್ಯ ಪದ್ಧತಿ ಆಯುರ್ವೇದ. ಈ ವೈದ್ಯ ಪದ್ಧತಿಯನ್ನು ಅಥರ್ವಣವೇದದ ಒಂದು ಭಾಗವೆಂದು ಹೇಳಲಾಗಿದೆ. ಆಯುರ್ವೇದವನ್ನು ವಿವರಿಸಿರುವ ಚರಕ ಮತ್ತು ಸುಶ್ರುತ ಸಂಹಿತೆಯಲ್ಲಿ ಮನಸ್ಸು, ಮನಸ್ಸಿನ ಕ್ರಿಯೆಗಳು, ಮಾನಸಿಕ ಆರೋಗ್ಯ ಹಾಗೂ ಅನಾರೋಗ್ಯದ ಕುರಿತು ವಿಪುಲವಾದ ಮಾಹಿತಿ ಇದೆ. ಹೀಗೆ ಭಾರತೀಯರು ಪ್ರಾಚೀನಕಾಲದಿಂದಲೂ ಮನಸ್ಸನ್ನು ಕುರಿತು ಪ್ರೌಢ ಚಿಂತನೆಗಳನ್ನು ನಡೆಸಿದ್ದಾರೆ.

ಮನೋವಿಜ್ಞಾನಿಗಳ ಪ್ರಕಾರ ನಮ್ಮ ಮನಸ್ಸಿನಲ್ಲಿ ಎರಡು ಭಾಗಗಳಿವೆ. ಒಂದು ಜಾಗೃತ ಮನಸ್ಸು, ಇನ್ನೊಂದು ಸುಪ್ತ ಮನಸ್ಸು. ಜಾಗೃತ ಮನಸ್ಸಿನಲ್ಲಿ ಏನಾಗುತ್ತಿದೆ, ಏನೇನು ವಿಚಾರಗಳಿವೆ ಎಲ್ಲವೂ ನಮಗೆ ಗೊತ್ತಾಗುತ್ತದೆ. ಆದ್ದರಿಂದ ಅವುಗಳ ಮೇಲೆ ನಮ್ಮ ಸಂಪೂರ್ಣ ಹಿಡಿತವಿರುತ್ತದೆ. ಆದರೆ ನಮ್ಮ ಸುಪ್ತ ಮನಸ್ಸಿನಲ್ಲಿ ಏನಾಗುತ್ತಿರುತ್ತದೆ,ಏನೇನು ವಿಚಾರಗಳಿವೆ ಎಂಬುದೇ ನಮಗೆ ತಿಳಿಯುವುದಿಲ್ಲ. ನಮ್ಮ ಮನಸ್ಸನ್ನು ಒಂದು ಕೆರೆಗೆ ಹೋಲಿಸಿದರೆ ಮೇಲಿರುವ ತಿಳಿನೀರಿನ ಭಾಗವೇ ಜಾಗೃತ ಮನಸ್ಸು. ನೀರಿನ ಆಳಕ್ಕೆ ಹೋದಂತೆ ತಳದಲ್ಲಿ ಏನಿದೆ ಎಂದು ತಿಳಿಯುವುದಿಲ್ಲವೋ ಹಾಗೆ ನಮ್ಮ ಮನಸ್ಸು ಕೂಡಾ ನಿಗೂಢ. ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ನ ಪ್ರಕಾರ ನಮ್ಮ ಜಾಗೃತ ಮನಸ್ಸಿಗೆ ಹಿತವಲ್ಲದ ಆಸೆಗಳು, ವಿಚಾರಗಳು, ಅನುಭವಗಳು ಎಲ್ಲವೂ ಸುಪ್ತ ಮನಸ್ಸಿನೊಳಗೆ ತಳ್ಳಲ್ಪಡುತ್ತವೆ. ಅವು ಮತ್ತೆ ಜಾಗೃತ ಮನದೊಳಕ್ಕೆ ಬರದಂತೆ ನೋಡಿಕೊಳ್ಳುವ ಒಂದು ತೆರೆ ಜಾಗೃತ ಮನಸ್ಸು ಮತ್ತು ಸುಪ್ತ ಮನಸ್ಸಿನ ನಡುವೆ ಇರುತ್ತದೆ. ಹೀಗೆ ಮಾನವ ಸ್ವಭಾವವೂ ಅದರ ಶ್ರೀಮಂತಿಕೆ ಮತ್ತು ವೈವಿಧ್ಯಗಳಲ್ಲಿ, ಗಹನತೆಯಲ್ಲಿ, ಮನೋದೈಹಿಕ ವಿಸ್ತರಣದಲ್ಲಿ ಹಾಗೂ ಆತ್ಮೋನ್ನತಿಯಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಅಧ್ಯಯನ ಯೋಗ್ಯ ವಿಷಯ. ಅಷ್ಟೇ ಅಲ್ಲದೆ ಮನೋವಿಜ್ಞಾನಿ ಹಕ್ಲ್ಸಿಯ ಪ್ರಕಾರ “ಎಷ್ಟು ಅನ್ವೇಷಿಸಿದರೂ ಮುಗಿಸಲಾರದಂಥ ವಿಶಾಲವಾದ ಕ್ಷೇತ್ರವಿದು. ಅದೊಂದು ಮಾನವರೂಪಿ ಖಂಡ(ಹ್ಯೂಮನ್ ಕಾಂಟಿನೆಂಟ್) ಎಂದಿದ್ದಾನೆ.

ಮಾನವ ಸ್ವಭಾವಕ್ಕೆ ಎರಡು ಮುಖಗಳಿವೆ. ಒಂದು ಮಾನವನ ಅಸದೃಶತೆ(ಯುನಿಕ್ನೆಸ್).ಇದು ಪ್ರತಿ ಮನುಷ್ಯನಿಗೆ ಒಂದು ಬಗೆಯ ತನ್ನತನವನ್ನು ತಂದುಕೊಡುತ್ತದೆ. ಇನ್ನೊಂದು ಮಾನವನ ಸಾಮಾನ್ಯತೆ(ಕಾಮನ್ನೆಸ್). ಇದರಲ್ಲಿ ವ್ಯಕ್ತಿ ವೈಶಿಷ್ಟವಾದ ಅಸದೃಶತೆ ವಿಶ್ಲೇಷಣೆಗೆ ಮೀರಿದ ಲಕ್ಷಣವಾಗಿದೆ. ಸಿಗ್ಮಂಡ್ ಫ್ರಾಯ್ಡ್ ಅಪ್ರಜ್ಞೆ, ಪೂರ್ವಪ್ರಜ್ಞೆ ಮತ್ತು ಪ್ರಜ್ಞೆ ಎನ್ನುವ ವ್ಯವಸ್ಥೆಗಳನ್ನು ನಿರೂಪಿಸಿ ಮನಸ್ಸಿನ ವಿದ್ಯಮಾನಗಳನ್ನು ವಿವರಿಸುವ ಪ್ರಯತ್ನ ನಡೆಸಿದರು. ಆ ಪ್ರಯತ್ನ ಇಂದಿನವರೆಗೂ ನಡೆಯುತ್ತಿದೆ. ಅಷ್ಟು ಗಹನವಾದುದು ಮನಸ್ಸು.

ಮಾನವ ವ್ಯಕ್ತಿತ್ವವು ಅತ್ಯಂತ ಗಹನವಾದುದು. ಇದರ ವೈವಿಧ್ಯತೆಯ ವೈಶಾಲ್ಯತೆ ಎಷ್ಟಿದೆಯೆಂದರೆ ದಿಗ್ಭ್ರಮೆ ಹುಟ್ಟಿಸುವಷ್ಟು. ಪಂಡಿತನಿಂದ ಪಾಮರನವರೆಗೂ, ಸಾಮಾನ್ಯನಿಂದ ಜಿತೇಂದ್ರಿಯನವರೆಗೂ ಅನಂತ ವೈವಿಧ್ಯ ಕಣ್ಣ ಮುಂದೆ ಕಂಡುಬರುತ್ತದೆ. ಹಾಗೆಯೇ ಮನಸ್ಸಿನ ಬದಲಾಗುವ ಭೂಮಿಕೆಗಳೂ ಅಚ್ಚರಿ ಮೂಡಿಸುತ್ತವೆ. ಕೃಪಣ ವ್ಯಾಪಾರಿ ಶ್ರೀನಿವಾಸನಾಯಕ ಮೂಗುತಿ ಸಂದರ್ಭದಿಂದ ಭ್ರಮೆಗೊಳಗಾದವನಂತೆ ಸಂಪೂರ್ಣ ವೈರಾಗ್ಯ ತಾಳಿ ಪುರಂದರದಾಸನಾಗಿದ್ದು ಮನಸ್ಸಿನ  ವೈಶಿಷ್ಟಪೂರ್ಣ ವೈವಿಧ್ಯವಲ್ಲವೇ? ಕುತೂಹಲ ಮೂಡಿಸುತ್ತದೆ ಮನಸ್ಸು ಮತ್ತದರ ಭೂಮಿಕೆಗಳು.

ಉಪನಿಷತ್ತುಗಳಲ್ಲಿ ಮನಸ್ಸಿಗೆ ವಿವಿಧ ಹೆಸರುಗಳಿವೆ. ಬುದ್ಧಿ, ಚಿತ್ತ, ಸಂಜ್ಞಾನ, ಪ್ರಜ್ಞಾನ, ದೃಷ್ಟಿ, ಧೃತಿ, ಮತಿ, ಮನೀಷಾ, ಸ್ಮೃತಿ, ಸಂಕಲ್ಪ, ಕ್ರತು, ಕಾಮ ಮತ್ತು ವಶ. ಸರಿಯಾಗಿ ಅರ್ಥೈಸಿದರೆ ಇವೆಲ್ಲವೂ ಮನಸ್ಸಿನ ಕ್ರಿಯೆಗಳು. ವೇದಾಂತದ ಶಾಖೆಗಳಲ್ಲಿ ಒಂದಾದ ಅದ್ವೈತದಲ್ಲಿ ಮನಸ್ಸು ಒಂದು ಅಂತ:ಕರಣ.

ದ್ವೈತವನ್ನು ಪ್ರತಿಪಾದಿಸಿದ ಹರಿದಾಸರೆಲ್ಲರೂ ಮನಸ್ಸನ್ನು ನಿವೇದನೆಗೆ ಮಾಧ್ಯಮವಾಗಿಸಿಕೊಂಡಿದ್ದಾರೆ. ಪ್ರತಿಯೊಂದು ಕೀರ್ತನೆಯಲ್ಲಿ ವಿಶೇಷವಾಗಿ ಹರಿಯಲ್ಲಿ ಬಿನ್ನಹ ಮಾಡಿಕೊಳ್ಳುವಾಗ ಮನ, ಚಿತ್ತ, ಬುದ್ಧಿ ಇವುಗಳ ಪ್ರಯೋಗ ಕಂಡುಬರುತ್ತದೆ. ಭಕ್ತಿಪಂಥದ ಕೊಡುಗೆಯಾದ ನವವಿಧ ಭಕ್ತಿ ಮಾನಸಪೂಜೆಯಲ್ಲಿ ಕೊನೆಗೊಳ್ಳುವುದನ್ನು ಕಾಣುತ್ತೇವೆ. ಶ್ರವಣ, ಕೀರ್ತನೆ ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಹಾಗು ಆತ್ಮನಿವೇದನೆ ಎಲ್ಲವೂ ಮನಸ್ಸನ್ನು ಹರಿಯ ಪಾದಗಳಲ್ಲಿ ಶರಣು ಹೋಗುವುದೇ ಆಗಿದೆ. ಪುರಂದರದಾಸರ ಮಾನಸಿಕ ಪರಿವರ್ತನೆ, ಕನಕದಾಸರು ಕನಸಿನಲ್ಲಿ ಭಗವಂತನನ್ನು ಕಂಡ ಸನ್ನಿವೇಶ, ವಿಜಯದಾಸರಿಗೆ ಗುರು ಪುರಂದರದಾಸರು ಕನಸಿನಲ್ಲಿ ಆಶೀರ್ವದಿಸಿದ ಪರಿ ಎಲ್ಲವೂ ಮನಸ್ಸಿನ ಕ್ರಿಯೆಗಳೇ. ಬಾಹ್ಯದ ಪರಿವೆಯಿಲ್ಲದೆ ಮನಸ್ಸಿನ ಸಂಕಲ್ಪದ್ದೆ ಪಾರುಪತ್ಯ. “ಈಶ ನಿನ್ನ ಚರಣಭಜನೆ ಆಸೆಯಿಂದ ಮಾಡುವೆನು.”.. ಕನಕದಾಸರ ಈ ಕೀರ್ತನೆಯಲ್ಲಿ ಆಸೆ ಎನ್ನುವ ಪದ ಮನವನ್ನು ಸಂಬಂಧಿಸಿದ್ದು. ವ್ಯಾಸರಾಯಸ್ವಾಮಿಗಳು “ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟುಕುರುಡನೋ.”.. ಈ ಕೀರ್ತನೆಯಲ್ಲಿ ಅಂತರಂಗ ಮನವೇ ಆಗಿದೆ.

ಕರ್ಮಮಾರ್ಗ,ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ ಮುಕ್ತಿದಾಯಕ ಜೀವನಶೈಲಿಗಳು. ಇದರಲ್ಲಿ ಭಕ್ತಿಮಾರ್ಗ ಸರಳ ಹಾಗು ಸಾಮಾನ್ಯರಿಗೂ ಸುಲಭವಾದುದು.ಇಲ್ಲಿ ಕರ್ಮಬಂಧನವಿಲ್ಲದೆ, ಕಠಿಣ ಜ್ಞಾನಮಾರ್ಗದ ತೊಡಕಿಲ್ಲದೆ ಭಕ್ತಿಪೂರಿತ ಮಾನಸಪೂಜೆಯಿಂದಲೇ ಮುಕ್ತಿ ಪಡೆಯಬಹುದು. ಭಕ್ತಿಪಂಥದ ಎಲ್ಲ ಸಾಧಕರು ಈ ಮಾನಸಪೂಜೆಯಿಂದಲೇ ಮುಕ್ತಿ ಸಾಧಿಸಿದವರು. ಮನಸ್ಸು ಶುದ್ಧವಾಗಿದ್ದರೆ ಅಲ್ಲಿ ಹರಿ ನೆಲೆಸಿರುತ್ತಾನೆ. “ಇಟ್ಹಾಂಗೆ ಇರುವೆನೋ ಹರಿಯೇ”… “ತೇಲಿಸೋ ಇಲ್ಲಾ ಮುಳುಗಿಸೋ” ..ಈ ಕೀರ್ತನೆಗಳಲ್ಲಿ ದಾಸರ ಸಂಪೂರ್ಣ ಶರಣಾಗತಿಯನ್ನು ಕಾಣಬಹುದು. ಇಲ್ಲಿ ನಿಜಕ್ಕೂ ಶರಣು ಹೋಗುವುದು ಮನಸ್ಸು. ಮನಸ್ಸಿನ ಸಂಕಲ್ಪಭಾವವೇ ಅವರನ್ನು ಹರಿದಾಸ್ಯವನ್ನು ಅಪ್ಪಿಕೊಳ್ಳುವಂತೆ ಮಾಡಿರುವುದು. “ನಿನ್ನ ಚಿತ್ತಕ್ಕೆ ಬಂದುದನು ಮಾಡು ಸರ್ವೇಶ” ಎನ್ನುವಲ್ಲಿಯೂ ಹರಿದಾಸರ ದಾಸ್ಯಭಾವವನ್ನು ಗಮನಿಸಬಹುದು. ಸಖ್ಯ, ದಾಸ್ಯವೆಲ್ಲವೂ ಮನದ ಭಾವಗಳು. ಭಕ್ತಿಯಲ್ಲಿ ಜ್ಞಾನದ ಅಂಶ ಸೇರಿರುತ್ತದೆ. ಜ್ಞಾನವೆಂದರೆ ಅರಿವು. ಅರಿವು ಮತ್ತೆ ಮನಸ್ಸಿನ ಒಂದು ಸ್ತರ. ಯಾವುದಾದರೂ ಒಂದು ವಸ್ತುವಿನ ಅರಿವು ಮೂಡುವುದೇ ಜ್ಞಾನ. ಆದ್ದರಿಂದ ಭಕ್ತಿಯಿದ್ದಲ್ಲಿ ಜ್ಞಾನವಿರುತ್ತದೆ. ಆದರೆ ಭಕ್ತಿಯೆನ್ನುವುದು ಆಡಂಬರವಲ್ಲ.  ಅದು ಅಂತರಾಳದ ಜೀವಜಲ. ಢಂಬಾಚಾರವನ್ನು ಕಟುವಾಗಿ ಟೀಕಿಸಿರುವ ದಾಸರು “ಕಣ್ಣಿನೊಳಗೆ ನೋಡೋ ಒಳಗಣ್ಣಿನಿಂದಲಿ ನೋಡೋ ಮೂಜಗದ ದೊರೆಯ” ಎನ್ನುವ ಕೀರ್ತನೆಯಲ್ಲಿ “ಒಳಗಣ್ಣು” ಮನಸ್ಸನ್ನು ಪ್ರತಿಬಿಂಬಿಸುತ್ತದೆ. ಹರಿದಾಸರು ಈ ಪ್ರಪಂಚ ಕಂಡ ಸಂತಸಾಧಕರು. ಭಕ್ತಿಗೆ ಇನ್ನೊಂದು ಹೆಸರಾದ ಹರಿದಾಸರು ತಮ್ಮ ಎಲ್ಲ ಅಭಿವ್ಯಕ್ತಿಗಳಲ್ಲಿ ಮನಸ್ಸಿಗೆ  ಒಂದು ವಿಶೇಷ ಪ್ರಾಧಾನ್ಯತೆ ಕೊಟ್ಟಿರುವುದನ್ನು ಕಾಣಬಹುದು. ಮುಕ್ತಿಯೆನ್ನುವುದು,ವೈಕುಂಠಪ್ರಾಪ್ತಿಯೆನುವುದು  ಕಾಣದ ಅರಿಯದ ಲೋಕ. ಆದರೆ ಹರಿದಾಸರ  ಅಂತರಂಗದಲಿ ಹರಿವಾಸಿಸುವ ಕಾರಣ ಅವರು ಬದುಕಿದ್ದಾಗಲೇ ಮುಕ್ತಿ ಸಾಧಿಸಿದವರು. “ಬಲ್ಲವಗಿಲ್ಲಿದೆ ವೈಕುಂಠ” ಎಂದ ದಾಸರು “ಮನವ ದಂಡಿಸಿ ಪರಮಾತ್ಮನ ಕಾಣೋ ಕೊನೆಗೆ ನಿನ್ನೊಳಗೆ ನೀ ಜಾಣೊ ಮುಕ್ತಿ” ಎನ್ನುವ ಮೂಲಕ ಮನುಷ್ಯ ಶರೀರವನ್ನು ಸಾಧನ ಶರೀರವಾಗಿ ಕಂಡಿದ್ದಾರೆ. ಭಗವಂತನ ಜ್ಞಾನವನ್ನು ಭಕ್ತಿಯಿಂದ ಪಡೆದು ಮಾನಸಮಾರ್ಗದಲ್ಲಿ ಮುಕ್ತಿ ಪಡೆಯಲು ಕರೆನೀಡಿದವರು ಹರಿದಾಸರು.

ಇಂತಹ ಅದ್ಭುತ ಶಕ್ತಿಯಿದೆ ನಮ್ಮ ಮನಸ್ಸಿಗೆ. ಈ ಮನಸ್ಸು ನಮ್ಮನ್ನು ಭೂಮಿ ಮೇಲಿನ ಇತರ ಪ್ರಾಣಿಗಳಿಂದ ಭಿನ್ನವಾಗಿಸಿದೆ, ವಿಶೇಷವಾಗಿಸಿದೆ. ಇದಕ್ಕಾಗಿಯೇ ಅಲ್ಲವೇ ಪುರಂದರದಾಸರು ಪ್ರೀತಿಯಿಂದ ಗದರಿದ್ದು… “ಮಾನವಜನ್ಮ ದೊಡ್ಡದು ಅದ ಹಾನಿಮಾಡಲೀ ಬೇಡಿ ಹುಚ್ಚಪ್ಪಗಳಿರಾ…”

Advertisements

%d bloggers like this: