ಲಂಕೇಶರ ‘ಅವ್ವ’ : ದುಡಿಮೆಯಲ್ಲಿ ಜೀವಿಸುವ ಅವಿರತ ತೀವ್ರತೆ

ಎನಿಗ್ಮಾ ಪೋಸ್ಟ್

ನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು,
ಹೆಂಟೆಗೊಂಡು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ
ಹಸುರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?

ಸತಿಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು;

ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.

ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ.

~

ಪಾರ್ವತಿದೇವಿ ಕೊಳೆಯಿಂದ ಕೂಡಿದ ತನ್ನ ಮೈಯ ಬೆವರಿಂದಲೇ ಗೊಂಬೆ ಮಾಡಿ ಅದಕ್ಕೆ ಜೀವ ಕೊಟ್ಟಳು; ಆತನೇ ಗಣಪತಿ ಎಂಬ ಕಥೆಯೊಂದು ಬರುತ್ತದೆ. ಕೃಷಿ ಸಂಸ್ಕೃತಿಯ ಮನಸ್ಸು ತಾಯಿ ಮತ್ತು ಮಗುವಿನ ಸಂಬಂಧವನ್ನು ರೂಪಕಗೊಳಿಸಿರುವ ಬಗೆಗಿನ ಅನನ್ಯ ನಿದರ್ಶನ ಈ ಕಥೆ.

ಲಂಕೇಶರ “ಅವ್ವ” ಕವಿತೆಯನ್ನು ಓದಿಕೊಳ್ಳುವಾಗೆಲ್ಲ, ಈ ಕಥೆಯೊಳಗಿನ ನೆಲದ ಗುಣವೇ ತಾನಾಗಿರುವ ಅವ್ವ ಕಾಣುತ್ತಾಳೆ. ಈ ಅವ್ವ ತನ್ನ ಸಂತಾನವನ್ನು ತನ್ನ ಬೆವರಿಂದಲೇ ಬಾಳಿಸುವವಳು. ನೆಲ, ಕೃಷಿ, ದುಡಿಮೆ, ಕುಟುಂಬ ಹೀಗೆ ಸಾಂದ್ರವಾದ ತನ್ಮಯತೆಯ ಹರಿವು ಆಕೆ.

“ನನ್ನವ್ವ ಫಲವತ್ತಾದ ಕಪ್ಪು ನೆಲ” ಎಂಬುದೇ ಒಂದು ಬೆಳಕಿನ ಸಾಕ್ಷಾತ್ಕಾರದ ಹಾಗಿದೆ. ನೆಲವನ್ನು ಬಿಟ್ಟು ಬದುಕಿಲ್ಲ; ಹಾಗೇ ತಾಯಿಯಿದ್ದರೇನೇ ಸಾತತ್ಯ. ಶ್ರಮ ಸಂಸ್ಕೃತಿಯನ್ನೂ ಮಾತೃ ಪರಂಪರೆಯನ್ನೂ ಒಂದೆಡೆಯಲ್ಲಿ ಕಂಡುಕೊಳ್ಳುವ ಪ್ರತಿಮೆ ಇದು.

“ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ”

ಈ ಅವ್ವನ ಕಥೆ, ಮಗುವಿಗೆ ಹಾಲೂಡಿದರೆ ಎದೆ ಬಿಗುವು ಸೋರಿಹೋದೀತು ಎಂದು ಆತಂಕಗೊಳ್ಳುವ “ಪೇಜ್ ಥ್ರೀ” ಮಮ್ಮಿಯದ್ದಲ್ಲ; ಬದಲಾಗಿ ನಿರಂತರ ಜೀವ ತೇಯುವ, ಎಲ್ಲ ನೋವನ್ನೂ ಒಂದು ನಿಟ್ಟುಸಿರಲ್ಲೇ ನುಂಗಿಕೊಳ್ಳುವ ಶಕ್ತಿವಂತೆಯ ಕಥೆ. ಮಗು ಪಡುವ ಅನೂಹ್ಯ ಸುಖದಲ್ಲೇ ಅವಳ ತಾಯ್ತನದ ಚೆಲುವು ಪುಳಕ ಗಳಿಸುತ್ತದೆ.

“ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ”

-ಹೀಗೆ ಯಾನ ಮುಗಿಸುವ ಅವ್ವ, ಅನ್ನ ಕೊಡುವ ಹೊಲದ ಕಸುವಿಗಾಗಿ, ಜೀವನದ ಜೊತೆಗಾರನ ಸಂತೋಷಕ್ಕಾಗಿ ತನ್ನದೆಂಬುವ ಪ್ರತಿ ಕ್ಷಣವನ್ನೂ ಒತ್ತೆಯಿಟ್ಟಿದ್ದವಳು. “ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ” ದುಡಿಮೆಯಲ್ಲಿ ತಾದಾತ್ಮ್ಯ ಸಾಧಿಸಿದ ಅವಳದ್ದು ನಿಸ್ವಾರ್ಥ ಪಯಣ: “ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.”

ಇವಳು ಕಣ್ಣೀರಿಟ್ಟಿದ್ದು ದಾರಿದ್ರ್ಯದ ದಣಿವಿನಲ್ಲಿ, ಕೈಗೆ ಫಸಲು ಬಾರದ ದುಃಖದಲ್ಲಿ, ಮನೆಯೊಳಗಿನ ಕರು ಸತ್ತು ಹೋದದ್ದರ ಕುರಿತ ತೀವ್ರ ಯಾತನೆಯಲ್ಲಿ. ಹಟ್ಟಿಯ ಮುದಿಯೆಮ್ಮೆ ತಪ್ಪಿಸಿಕೊಂಡಾಗೆಲ್ಲ ಪ್ರಾಣವನ್ನೇ ಹುಡುಕುವವಳ ಧಾವಂತದಲ್ಲಿ ಊರೂರು ಅಲೆದ ಈ ಅವ್ವ ಒಂದು ಕಾಳಜಿ, ಒಂದು ಕಳಕಳಿ, ಒಂದು ಸಂಸ್ಕೃತಿ, ಒಂದು ಪರಂಪರೆ.

ಹಾಗೆಂದು ಸತಿ ಸಾವಿತ್ರಿಯಂಥವರ ಆದರ್ಶವೇನೂ ಇವಳ ಮುಂದಿರಲಿಲ್ಲ. ಅದರ ಗರಜೂ ಇವಳಿಗಿರಲಿಲ್ಲ. ತನ್ನದೇ ಧಾಟಿಯಲ್ಲಿ ಬದುಕಿನ ಹಾಡು ಹಾಡಿದವಳು. ಅತ್ಯಂತ ಸಹಜವಾಗಿ, ಎಲ್ಲ ಸಿಟ್ಟು, ಸೆಡವು, ಸಣ್ಣತನಗಳ ಕಂತೆಯೇ ಆಗಿ ಬಾಳ ದಾರಿ ನಡೆದವಳು. ಆದರೆ ಅದೆಲ್ಲದರ ಹಿಂದೊಂದು ಸೂತ್ರವಿತ್ತು:

“ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.”

ಯಾವುದೇ ಸಂಗತಿಯ ಮೇಲೆ ಇಂಥದೊಂದು ಪೊಸೆಸಿವ್ ಆದ ಒಳಗೊಳ್ಳುವಿಕೆ ಸಾಧ್ಯವಾಗುವುದು ಅದರ ಕುರಿತ ನಿಷ್ಕಳಂಕ ಪ್ರೀತಿಯಿಂದ ಮಾತ್ರ. ಇದು ಸೋಗಿನ ಹಂಗು ಬೇಡುವುದಿಲ್ಲ. ಎಲ್ಲರಿಗೂ ಕೋಲೆ ಬಸವನ ಹಾಗೆ ಹೂಂ ಹೂಂ ಎನ್ನುತ್ತ, ಎಲ್ಲರನ್ನೂ ಮೆಚ್ಚಿಸುತ್ತ ತನ್ನ ಒಳ್ಳೆಯತನವನ್ನು ಸ್ಥಾಪಿಸಲು ಹೊಂಚುವುದಿಲ್ಲ. ಬದಲಾಗಿ, ಸಿಟ್ಟು ಅಥವಾ ದ್ವೇಷವನ್ನು ಎದುರಿಸುವುದಾದರೂ ಸರಿಯೆ, ಸತ್ಯದ ಅಲಗಿಗೆ ಒಡ್ಡಿಕೊಳ್ಳಬೇಕು ಎಂಬ ಸ್ವಾಭಿಮಾನದ ದೃಢತೆಯೊಂದಿಗಿರುತ್ತದೆ. ಅವ್ವ ಅಂಥವಳಾಗಿದ್ದವಳು.

“ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳು ಕಡ್ಡಿಗೆ ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ರೊಟ್ಟಿ, ಹಚಡಕ್ಕೆ
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.”

ಬದುಕುವುದಕ್ಕೆ ಯಾವುದೇ ಉದಾತ್ತವಾದ ನೆಪಗಳು ಬೇಕಿಲ್ಲ. ಶ್ರಮ ಸಂಸ್ಕೃತಿಯ ತಳಪಾಯವೇ, “ಶರೀರ ನಶ್ವರ” ಎಂಬ ಆತ್ಮವಂಚಕ ನಿಲುವಿನಿಂದ ದೂರ ಕಾಯ್ದುಕೊಳ್ಳುವುದು. ಅಸ್ತಿತ್ವದ ಪ್ರಶ್ನೆಯಲ್ಲೇ ಸತ್ಯದ ಬೆಳಕಿಗಾಗಿ ಕಾಯುವುದು. ಇರುವಷ್ಟು ದಿನ ತಲೆ ಬಾಗದೆ ಬದುಕುವ ಬಲವನ್ನು ಹಂಬಲಿಸುವುದು. ಹೀಗೆ ದುಡಿಮೆಯೊಂದಿಗೆ ಅವಿನಾಭಾವವೆಂಬಂತೆ ಒಂದಾಗಿ ಹೋಗಿದ್ದ ಅವ್ವ, ದುಡಿಯುತ್ತ ದುಡಿಯುತ್ತಲೇ ಸಾವಿನ ಬಾಗಿಲಲ್ಲೂ ನಿರಾಯಾಸವಾಗೇ ನಡೆದುಬಿಡುತ್ತಾಳೆ. “ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ” ಹೊರಟು ಹೋಗುತ್ತಾಳೆ.

ಅಷ್ಟೊಂದು ತೀವ್ರವಾಗಿ ಬದುಕಿದ್ದ ಅವ್ವ ಮತ್ತು ಹಾಗೆ ನಿರಾಳವಾಗಿ ಸಾವಿನೊಳಗೆ ನಡೆದುಬಿಟ್ಟ ಅವ್ವ -ಈ ಎರಡೂ ಚಿತ್ರಗಳು ಬಹುವಾಗಿ ಕಾಡುತ್ತವೆ. ಆರ್ದ್ರವಾದ ಸಂಬಂಧವೊಂದರ ಅಗಲುವಿಕೆಗೂ ಕರಗಿ ಕಣ್ಣೀರಾಗದವರ ಕಾಲದಲ್ಲಿ, ಅವ್ವ ಅದೊಂದು ಮುದಿಯೆಮ್ಮೆಗಾಗಿ, ಸತ್ತ ಕರುವಿಗಾಗಿ ಅಳುತ್ತ ಕೂತದ್ದು ಕಾಣಿಸುತ್ತದೆ.

ಬಹುಶಃ ಎಲ್ಲ ಅಳುವಿನ ಚಿತ್ರಗಳಲ್ಲೂ ಅವ್ವ ಮಸುಕು ಮಸುಕಾಗಿ ಇದ್ದೇ ಇರುತ್ತಾಳೆ.

ಲಂಕೇಶರು ಅವ್ವನನ್ನು, ತಾಯಗುಣವನ್ನು ಹಸಿರು ಪತ್ರ ಮತ್ತು ಬಿಳಿಯ ಹೂವಿನ ಜೊತೆಗಿನ ಜೀವನಸಿರಿ ಮತ್ತು ಸಡಗರಕ್ಕೆ ಸಂವಾದಿಯಾಗಿ ಕಾಣುತ್ತಾರೆ. ನೆಲ ಅನುಭವಿಸುವ ಋತುಗಳೆಲ್ಲವನ್ನೂ ಅವ್ವ ಅನುಭವಿಸುತ್ತಾಳೆ. ಇಲ್ಲಿ ಅನುಭವಿಸುವುದೆಂದರೆ ಸುಖಪಡುವುದಲ್ಲ; ಸುಖವನ್ನು ಧಾರೆಯೆರೆಯುವುದು. ಹಾಗೆಯೇ ಕಷ್ಟವನ್ನು, ಕ್ಷೋಭೆಯನ್ನು ತನ್ನೊಳಗೇ ಅರಗಿಸಿಕೊಳ್ಳುವುದು. ಮಣ್ಣಲ್ಲಿ ಬದುಕಿದ ಅವ್ವನದು ತೇವದ ಗುಣ; ತಂಪೆರೆಯುವ ಗುಣ; ಕಾಯುವ ಗುಣ.

ತಾವು ಕಂಡುದನ್ನು ಪ್ರಕೃತಿಯ ಸಮೀಪವಿಟ್ಟೇ ಕಾಣಿಸುವುದು, ಭಾವನಾತ್ಮಕವಾದದ್ದನ್ನು ಒಂದು ಘಳಿಗೆಯ ಮಟ್ಟಿಗಾದರೂ ಎಲ್ಲ ಉದ್ವೇಗಗಳ ಆಚೆಗೆ ಕೈಚಾಚುವ ಆಸೆಯಿಂದೆಂಬಂತೆ ಮತ್ತು ಅಲ್ಲಿಯೇ ಬದುಕು ನಿಜವಾಗಿಯೂ ಕಾದಿದೆ ಎಂಬ ವಿಶ್ವಾಸದಿಂದ ಸ್ವರಗೊಳಿಸುವುದು ಲಂಕೇಶರ ಬರವಣಿಗೆಯಲ್ಲಿನ ಒಂದು ಧಾರೆಯೂ ಹೌದು. ಇಡೀ ಬದುಕನ್ನೇ ಪ್ರಭಾವಿಸಿದ ಅವ್ವ ಆ ಬದುಕಿನ ಅಂತರಾಳದಲ್ಲೂ ತನ್ನಷ್ಟೇ ಎತ್ತರ ಬೆಳೆದು ನಿಲ್ಲುತ್ತಾಳೆ. ಪ್ರಕೃತಿಗೆ ಹತ್ತಿರವಾಗಿ ಬಾಳುವಾಗ, ನಿಜವಾಗಿಯೂ ಅನಗತ್ಯವಾದುದರ ಕುರಿತ ನಿರಾಕರಣೆಯೊಂದಿಗೇ ಅವ್ವ ಸಾಮಾನ್ಯ ಕಟ್ಟುಪಾಡುಗಳನ್ನು ದಾಟಿ ನಿಲ್ಲುತ್ತಾಳೆ. “ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ” ಎಂದು ಕವಿ ಹೇಳುವಾಗ, ಅದು ಅವ್ವ ಹೇಳಿಕೊಟ್ಟ ಬದುಕಿನ ಧ್ಯಾನದಲ್ಲಿ ಕಂಡುಕೊಂಡ ಸತ್ಯವೇ ಆಗಿದೆ.

ಅವ್ವ ಇಲ್ಲಿ ಒಂದು ಸಂಸಾರದ ನೊಗ ಹೊತ್ತವಳು ಮಾತ್ರವಾಗಿರದೆ, ಒಂದು ಪೀಳಿಗೆಯ ಬದುಕನ್ನೇ ತಿದ್ದಿ ತೀಡಿದ ಶಿಲ್ಪಿಯೂ ಆಗಿದ್ದಾಳೆ. ಅವಳು ಬಿಸಿಲೊಳಗೆ ಕರಗುತ್ತಲೇ ಜೀವಿಸಿದವಳು. ಜೀವನಕ್ಕಾಗಿ ಬಿಸಿಲನ್ನೇ ಕರಗಿಸುವ ಕಠಿಣ ದಾರಿಯನ್ನೂ ಉತ್ತರಿಸಿದವಳು. ಈ ಕರಗುವಿಕೆ ಮತ್ತು ಕರಗಿಸುವಿಕೆಯ, ಆರ್ದ್ರಗೊಳ್ಳುವುದು ಮತ್ತು ಆರ್ದ್ರಗೊಳಿಸುವುದರ ಅನವರತ ತುಡಿತ, ತಳಮಳ, ಗುದ್ದಾಟಗಳಲ್ಲೇ ಅವ್ವ ಬದುಕಿದ್ದಾಳೆ.

ಬಹುಶಃ ಎಲ್ಲ ಕಾಲದಲ್ಲೂ ನಿಜದ ಕಡೆಗೆ ನಡೆಯುವುದಕ್ಕಾಗಿನ ಉಲ್ಲಂಘನೆಯಾಗಿ ಅವ್ವ ಉರಿದೇಳುವವಳೇ.

ವೆಂಕಟ್ರಮಣ ಗೌಡ

Advertisements

ಸವತೆಹಳ್ಳಿಯ ಸೌಂದರ್ಯ ಲಹರಿ

ಎನಿಗ್ಮಾ ಪೋಸ್ಟ್

“ತಾತಾ, ಮೊನ್ನೆ ನಾನೊಂದು ಚಿತ್ರ ಬರೆದೆ ಗೊತ್ತಾ?” ಜಗುಲಿಯಲ್ಲಿ ಚಿಟ್ಟೆಯ ಮೇಲೆ ಕೂತಿದ್ದ ಜಲಜಾಕ್ಷಿ ಹೇಳಿದಾಗ, ಒಳಗೊಳಗೇ ಬೆಚ್ಚಿಬಿದ್ದಿದ್ದ ಯೋಗುಗೌಡ. ಹೇಗೋ ಸಾವರಿಸಿಕೊಂಡು, “ಏನು ಚಿತ್ರ ಮಗಳೆ?” ಎಂದು ತಡವರಿಸುತ್ತಲೇ ಕೇಳಿದ. “ಅದು ಹೀಗೇ ಅಂತ ಹೇಳೋಕ್ಕಾಗೋದಿಲ್ಲ ತಾತಾ. ನನ್ನ ಮನಸ್ಸಿಂದ ಅದು ಬಂತು ಅನ್ನೋದು ಮಾತ್ರ ನಿಜ” ಎಂದಳು ಜಲಜಾಕ್ಷಿ. ಅವಳ ಮುಖದಲ್ಲಿ ಆ ಹೊತ್ತಿನ ಹಿತವಾದ ಬಿಸಿಲಿನ ಅಷ್ಟೂ ಬಣ್ಣಗಳು ಒಂದು ಕ್ಷಣ ಹೊಳೆದಂತೆ ಕಂಡದ್ದು ಅವಳೊಳಗಿನ ಖುಷಿಯಿಂದಾಗಿಯೊ ಅಥವಾ ಆವಳು ಕೂತಿದ್ದ ಚಿಟ್ಟೆಯ ಜಾಗದ ಪ್ರಭಾವವೊ ಅರ್ಥವಾಗಲಿಲ್ಲ ಯೋಗುಗೌಡನಿಗೆ.

ಅಲ್ಲಿ ಕೂತರೆ ಸಾಕು, ಊರೊಳಗೆ ಎಂಟ್ರಿಯಾಗುವ ಯಾರೇ ಆದರೂ ಕಾಣಬೇಕು; ಹಾಗಿತ್ತು ಯೋಗುಗೌಡನ ಮನೆಯ ಜಗುಲಿಯ ವಿನ್ಯಾಸ. ಬೆಳಕು ಹರಿಯುವ ಹೊತ್ತಲ್ಲಿ ಜಗುಲಿಯ ಒಂದು ಮಗ್ಗುಲಲ್ಲಿರೋ ಆ ಚಿಟ್ಟೆಯ ಮೇಲೆ ಕೂತರೆ ಪೂರ್ವವನ್ನೆಲ್ಲ ಕೆಂಪೇರಿಸುತ್ತ ಮೇಲೇರುವ ದೊಡ್ಡ ಗೋಳದಂಥ ಸೂರ್ಯ ಕಾಣಿಸುತ್ತಾನೆ. ಸೂರ್ಯನ ಆ ಬಾಲಸ್ವರೂಪವನ್ನು ಕಣ್ತುಂಬಿಕೊಳ್ಳುವ ಸುಖಕ್ಕಾಗಿ ಯೋಗುಗೌಡ ಕಾದುಕೂತಿರುತ್ತಿದ್ದ ಕಾಲವಿತ್ತು. ಯೋಗುಗೌಡನಿಗೆ ಅಂಥದೊಂದು ಸುಖದ ಕನಸನ್ನು ಹಂಚಿದ್ದವನು ಅವನ ಅಪ್ಪ. ಅವನೇ ಆ ಮನೆಯನ್ನು ಕಟ್ಟಿದವನು. ಮೂಡುವ ದಿಕ್ಕು ಮನೆಯ ಅಂತಃಕರಣವನ್ನು ಯಾವಾಗಲೂ ಕಾಯುತ್ತಾ ಇರಬೇಕು ಎಂದೇ ಅವನು ಜಗುಲಿಯ ಪ್ರತಿ ಮೂಲೆಯೂ ಮುಂಜಾವದ ಸಿರಿಗೆ ತೆರೆದುಕೊಳ್ಳುವ ಹಾಗೆ ಕಟ್ಟಿದ್ದ. ನೆಲಮಟ್ಟದಿಂದ ಏಳು ಮೆಟ್ಟಿಲುಗಳಷ್ಟು  ಎತ್ತರದಲ್ಲಿದ್ದ ಮನೆ ಅದು. ಅಂಥ ಮನೆಯ ಜಗುಲಿಯಲ್ಲಿನ ಚಿಟ್ಟೆಯಂತೂ ಮತ್ತೆ ಅರ್ಧ ಆಳೆತ್ತರವಿತ್ತು. ಹಾಯಾಗಿ ಅಡ್ಡಾಗುವುದಕ್ಕೆ ಮಾತ್ರವಲ್ಲ, ಆನಿಸಿಕೊಂಡು ಕೂರುವುದಕ್ಕೂ ಆಗುವ ಹಾಗೆ ಕಟ್ಟಿದ್ದ ಆ ಚಿಟ್ಟೆ, ಎಂಥ ತಾಪತ್ರಯವನ್ನೂ ಮರೆಸಿಬಿಡುವಂಥ ತಂಪಾದ ನೇವರಿಕೆಯನ್ನು ಕರುಣಿಸಬಲ್ಲ ಹದವಾದ ಗಾಳಿಯ ತೋಳುಗಳಲ್ಲೇ ತೂಗುತ್ತಿತ್ತು ಯಾವಾಗಲೂ. ಯೋಗುಗೌಡನ ಅಪ್ಪ ತನ್ನ ಬದುಕಿನ ಒಂದು ಹಂತದಿಂದ ಆ ಚಿಟ್ಟೆಯ ಮಟ್ಟಿಗೆ ಅಧಿಪತಿಯಂತೆಯೇ ಬೆಳಗಿದ್ದವನು.

ಅಪ್ಪನ ಕಾಲ ಮುಗಿದು ಯೋಗುಗೌಡನ ಕೈಗೆ ಸವತೆಹಳ್ಳಿಯ ಪಂಚಾಯ್ತಿಕಟ್ಟೆ ವಾರಸುದಾರಿಕೆ ಬಂದಾಗ ಅವನಿಗೆ ಐವತ್ತರ ಮೇಲಾಗಿತ್ತು ಅನ್ನುವುದಕ್ಕಿಂತ ಹೆಚ್ಚಾಗಿ, ಅವನ ಬೆನ್ನಿಗೊಂದು ಚರಿತ್ರೆಯ ಹೆಗ್ಗಳಿಕೆಯೇ ಇತ್ತು. ಯೋಗುಗೌಡನನ್ನು ಸವತೆಹಳ್ಳಿಯ ಸಂತನ ಸ್ಥಾನಕ್ಕೆ ಏರಿಸುವಲ್ಲಿ ಅವನ ಅಪ್ಪ ಹೇಳಿದ ಒಂದೊಂದು ಕಥೆಯೂ, ಅಪ್ಪ ಕಲಿಸಿದ ಒಂದೊಂದು ಮಾತೂ ಕೈಗೂಡಿಸಿದ್ದವು. ಹುಡುಗಾಟಿಕೆಯೆಲ್ಲ ಮರೆತುಹೋದ ಮೇಲೂ ಮತ್ತೆ ರಾತ್ರಿಯ ಬಾನಲ್ಲಿ ನಕ್ಷತ್ರಗಳನ್ನೆಣಿಸಲು, ಚಂದ್ರನ ಓಟದ ಜೊತೆ ಒಂದಾಗುತ್ತ ಈ ಜೀವನದಾಚೆಗಿನ ದಿಗಂತದ ಸಾಮೀಪ್ಯ ಗಳಿಸಲು ಯೋಗುವಿಗೆ ಒದಗಿದ್ದು ಅಪ್ಪ ಬಹು ಸಮಯ ಕಳೆಯುತ್ತಿದ್ದ ಆ ಚಿಟ್ಟೆಯೇ ಆಗಿತ್ತು. ಅಲ್ಲಿ ಅಪ್ಪ ಮಲಗಿದ್ದರೆ ಒಂದು ಬಗೆಯಲ್ಲಿ, ಆನಿಸಿಕೊಂಡು ಕೂತಿದ್ದರೆ ಮತ್ತೊಂದೇ ಬಗೆಯಲ್ಲಿ ಆಕಾಶದ ಬೆಳಕು ಅವನ ಕಣ್ಣೊಳಗೆ ಮಿನುಗುತ್ತಿದ್ದುದು ಯೋಗಿಗೆ ಕಾಣಿಸುತ್ತಿತ್ತು.

ಯೋಗಿ ಅಪ್ಪನ ಆಸರೆಯಲ್ಲೇ ಬೆಳೆದವನು. ಹಸುಗೂಸಾಗಿದ್ದಾಗಲೇ ಅವನ ತಾಯಿ ಕಣ್ಮುಚ್ಚಿಬಿಟ್ಟಿದ್ದಳು. ಪುಣ್ಯಾತಗಿತ್ತಿ ಎಂಬ ಪದ ಸಿಕ್ಕಿತ್ತು ಅವಳಿಗೆ, ಊರ ಹೆಂಗಸರ ಬಾಯಲ್ಲಿ. ಯೋಗಿ ಬೆಳೆದದ್ದು ಇನ್ನಾವಳದೋ ಎದೆಹಾಲು ಕುಡಿದು. ತನಗೆ ಎದೆಹಾಲು ಕುಡಿಸುವುದಕ್ಕಿಂತಲೂ ಮಿಗಿಲಾದ ರಹಸ್ಯ ಸಂಬಂಧವೇನಾದರೂ ಆ ಹೆಂಗಸಿಗೂ ಅಪ್ಪನಿಗೂ ಮಧ್ಯೆ ಇತ್ತಾ ಎಂಬ ಅನುಮಾನ ಕೂಡ ಬೆಳೆದ ಯೋಗಿಯ ತಲೆಯೊಳಗೆ ಹೊಕ್ಕಿತ್ತು. ಆದರೆ ಅವನಿಗೆ ಎದೆಹಾಲುಣಿಸಿದ್ದ ಆ ಹೆಂಗಸು ಆಗಲೇ ಹಣ್ಣಾಗಿ ಹೋಗಿದ್ದಳು. ಅಂಥವಳ ಬಗ್ಗೆ ತಾನು ಏನೆಲ್ಲಾ ಯೋಚಿಸ್ತಾ ಕೂತಿದ್ದೀನಲ್ಲ ಅನ್ನುವ ನೋವು ಕೂಡ ಯೋಗಿಯನ್ನು ಬಾಧಿಸುತ್ತಿತಾದರೂ, ಒಂದು ಕಾಲದಲ್ಲಿ ಎಂಥ ಗಂಡಸನ್ನೂ ವಿಚಲಿತಗೊಳಿಸಬಲ್ಲ ಸುಂದರಿಯಾಗಿದ್ದಳು ಎಂಬುದು ಈಗಲೂ ಅವಳ ಚಹರೆಯಿಂದ ಗೊತ್ತಾಗುತ್ತದಲ್ಲ ಎನ್ನಿಸಿ ಮತ್ತೆ ಸಂಶಯದ ನೆರಳಿನಡಿಯಲ್ಲಿ ತೆವಳುತ್ತಿದ್ದ.

ಅಪ್ಪ ರಸಿಕನಾಗಿದ್ದನಾ ಎಂಬ ಪ್ರಶ್ನೆ ಕೂಡ ಅದೆಷ್ಟೋ ಸಲ ಕಾಡಿದ್ದಿದೆ ಯೋಗಿಯನ್ನು. ಅಪ್ಪ ಕಟ್ಟಿಸಿದ್ದ ಮನೆಯ ಸೊಗಸನ್ನು ಅಪ್ಪನಿಗಿಂತ ಹೆಚ್ಚು ಆಸ್ವಾದಿಸಿದ್ದು ತಾನೇ. ಯಾವ ಮೂಲೆಯಿಂದ ನೋಡಿದರೂ ಆ ಮನೆಯ ಗತ್ತೇ ಗತ್ತು. ಅದಕ್ಕೊಂದು ಸಿರಿವಂತಿಕೆಯ ಕಳೆ ತಾನೇತಾನಾಗಿಯೇನೊ ಎಂಬಂತೆ ಬಂದುಬಿಟ್ಟಿತ್ತು. ಅಷ್ಟೊಂದು ಆಸ್ಥೆವಹಿಸಿ ಕಟ್ಟಿದ್ದ ಮನೆಯನ್ನು ಅಪ್ಪ ಮಾತ್ರ ಯಾವತ್ತೂ ವಿಪರೀತವೆಂಬಂಥ ಮೋಹದಿಂದ ಕಂಡಿದ್ದೇ ಇರಲಿಲ್ಲ. ಆದರೆ ಅಪ್ಪ ಮಲಗುವುದಕ್ಕೆಂದು ಮಾಡಿದ್ದ ಆ ದೊಡ್ಡ ಕೋಣೆಯಲ್ಲಿದ್ದ ಶೃಂಗಾರಮಯ ಚಿತ್ರ ಹೇಳುತ್ತಿದ್ದುದೇನು ಹಾಗಾದರೆ? ಮಿಲನಕ್ಕೆ ಅಣಿಗೊಳ್ಳುತ್ತಿರುವ ಗಂಡು ಹೆಣ್ಣು. ಆ ಜೋಡಿಯ ಮುಖದಲ್ಲಿ ಪ್ರಜ್ವಲಿಸೋ ಕಾಮೋನ್ಮಾದ. ತನ್ನ ಹುಟ್ಟಿಗಿಂತ ಮುಂಚಿನಿಂದ ಶುರುವಾಗಿ, ತನಗೆ ಬುದ್ಧಿ ತಿಳಿಯುವ ಘಟ್ಟದತನಕ ಆ ಕೋಣೆಯೊಳಗೆ, ಆ ಶೃಂಗಾರಮಯ ಚಿತ್ರದ ಎದುರಿನಲ್ಲಿ ಏನೇನು ನಡೆದಿರಬಹುದು? ತಾನು ಬೆಳೆದ ಮೇಲಾದರೂ ಅದನ್ನು ಅಳಿಸಿಹಾಕಬೇಕೆಂದು ಅಪ್ಪ ಏಕೆ ಯೋಚಿಸಲಿಲ್ಲ? ಅಪ್ಪನ ಮುಖದೊಳಗೆ ಸದಾ ನಳನಳಿಸುತ್ತಿದ್ದ ಉಮೇದಿಗೂ ಆ ಚಿತ್ರಕ್ಕೂ ಏನಾದರೂ ಅಂತರ್ಗತ ಸಂಬಂಧವಿತ್ತಾ? ತಾನು ಆ ಚಿತ್ರವನ್ನು ನೋಡುತ್ತಲೇ ಬೆಳೆದೆ. ಊರೊಳಗಿನ ಯಾವುದೇ ಹೆಣ್ಣನ್ನೂ ತಾನೇ ಎಂದು ಬಿಂಬಿಸಿಬಿಡಬಲ್ಲಂಥ ಅಸಾಧಾರಣತೆಯಿಂದ ಮೈವೆತ್ತ ಹಾಗಿತ್ತು ಆ ಚಿತ್ರ. ವೈಯಕ್ತಿಕ ಎನ್ನುವಂಥ ಶರೀರದ ಹಂಗು ಮೀರಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಹೆಚ್ಚುಗಾರಿಕೆ ಅದು ಹೇಗೆ ಒಳಗೊಂಡಿತ್ತು ಆ ಚಿತ್ರದಲ್ಲಿ? ಯೋಗಿಗೆ ಯಾವತ್ತೂ ಆ ನಿಗೂಢತೆ ಬಗೆಹರಿಯಲೇ ಇಲ್ಲ. ಅಂಥ ಬಗೆಹರಿಯದ ಪ್ರಶ್ನೆಗಳನ್ನಿಟ್ಟುಕೊಂಡೇ ಅವನು ಅದೇ ಕೋಣೆಯೊಳಗೆ ಅದೇ ಚಿತ್ರದ ಮುಂದೆ ತನ್ನ ಹೆಂಡತಿಯನ್ನು ಕೂಡಿದ್ದ. ಅವಳು ಸುಖದ ನರಳಿಕೆಗಳಲ್ಲಿ ಆ ಕೋಣೆಯೊಳಗೊಂದು ಸಮುದ್ರವೇ ಉಕ್ಕಿತೆನ್ನುವಂಥ ಭಾಸ ಹುಟ್ಟಿಸುತ್ತಿದ್ದರೆ, ತಾನು ಮಾತ್ರ ಅನಿಯಂತ್ರಿತ ಯಾನದ ಪಥಿಕನಂತೆ ದಿಕ್ಕೆಟ್ಟು, ಎಲ್ಲ ಖಾಲಿಯಾದಂತಾಗಿ ಉರುಳಿಕೊಂಡುಬಿಟ್ಟಿರುತ್ತಿದ್ದ. ತನಗೆ ಹೆಣ್ಣಿನ ಜೊತೆ ಇಡಿಯಾಗಿ ಮೈಮರೆಯುವುದಕ್ಕೇ ಆಗುವುದಿಲ್ಲವೇ? ತನ್ನೊಳಗಿನ ಈ ದೋಷದ ಬಗ್ಗೆ ಯಾವತ್ತೋ ತಿಳಿದುಬಿಟ್ಟವನ ರೀತಿಯ ಜಾಣ್ಮೆಯಿಂದಲೇ ಅಪ್ಪ ಆ ಕೋಣೆಯನ್ನು ಅಂಥದೊಂದು ಶೃಂಗಾರಮಯ ಚಿತ್ರದ ಬಿಡಿಸಲಿಕ್ಕಾಗದ ಸಾಂಗತ್ಯದೊಂದಿಗೆ ಕೂಡಿಸಿ ಕಟ್ಟಿಸಿದನೆ? ಪ್ರಶ್ನೆಗಳು ಹೀಗೆ ಪೂರ್ತಿ ವಿರುದ್ಧ ದಿಕ್ಕಿನಲ್ಲಿ ತಿವಿಯತೊಡಗಿದಾಗಲಂತೂ ಮತ್ತಷ್ಟು ಕನಲಿಬಿಟ್ಟಿದ್ದ ಯೋಗಿ. ಆ ಕನಲಿಕೆಯನ್ನು ಇನ್ನೂ ಹೆಚ್ಚಿಸುವ ಹಾಗೆ, ತನಗೆ ಬುದ್ಧಿ ತಿಳಿದಾಗಿಂದಲೂ ಅಪ್ಪ ಜಗುಲಿಯಲ್ಲಿನ ಚಿಟ್ಟೆಯ ಮೇಲೆಯೇ ಮಲಗುತ್ತಿದ್ದನೆಂಬ ಸತ್ಯ ಯೋಗಿಯ ಕಣ್ಣೆದುರು ಬರೋದು. ಇದೆಲ್ಲ ಒಂದು ಕಡೆಯಾದರೆ, ತನ್ನೊಂದಿಗೆ ಕೂಡಿದ ಮಾರನೇ ಬೆಳಗು ತನ್ನ ಹೆಂಡತಿಯಲ್ಲಿ ಕಾಣಿಸುತ್ತಿದ್ದ ವಿಲಕ್ಷಣ ಉಲ್ಲಾಸ ಮತ್ತೊಂದು ಕಡೆಯಿಂದ ಯೋಗಿಯನ್ನು ಬಾಧಿಸುತ್ತಿತ್ತು. ಅಪ್ಪ ಕಟ್ಟಿದ್ದ ಆ ಮನೆ ಮತ್ತಷ್ಟು ಕಣ್ತುಂಬುವ ಹಾಗೆ ತನ್ನ ಹೆಂಡತಿ ಅದನ್ನು ಒಪ್ಪಗೊಳಿಸುತ್ತ, ಮನೆಯೊಳಗಿನ ಅಷ್ಟೂ ಕೋಣೆಗಳೊಳಗೆ ಹೋಗಿ ಬರುತ್ತ, ಕಿವಿ ನಿಮಿರುವುದಕ್ಕೆ ಕಾರಣವಾಗುವಂತೆ ಅದೇನೋ ಹಾಡು ಗುನುಗುತ್ತ ಅವಳು ಥಳಥಳಿಸುತ್ತಿದ್ದುದು ತನ್ನೊಂದಿಗೆ ಹಾಸಿಗೆಯಲ್ಲಿ ನಾಗಿಣಿಯಂತೆ ಹೊರಳುತ್ತ, ತಾನು ಅನಾಸಕ್ತನಂತೆ ಸೋರಿಹೋಗುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಸುಖದ ಶಿಖರ ಮುಟ್ಟುತ್ತಿದ್ದ ಇರುಳಿನ ಮಾರನೇ ಬೆಳಗೇ ಆಗಿರುತ್ತಿತ್ತು. ಅವಳಿಗೆ ತನ್ನ ತೆಕ್ಕೆಯ ಹಂಗನ್ನೂ ಮೀರಿದ ಬೇರೊಂದು ರಹಸ್ಯ ಬಿಗಿಯಾಲಿಂಗನದ ಕೃಪೆಯಾಗುತ್ತಿದೆಯಾ? ಕಣ್ಣಿಗೆ ಕಾಣುವುದಕ್ಕಿಂತ ಬೇರೆಯಾದ ಒಂದು ಪ್ರಭೆಯಲ್ಲಿ ಈ ಮನೆಯೊಳಗಿನ ಚಲನೆಗಳು ನಿಕ್ಕಿಯಾಗುತ್ತಿವೆಯಾ? ಹೀಗೆ ಮತ್ತೆ ಪ್ರಶ್ನೆಗಳ ಹುತ್ತದೊಳಗೆ ಭುಸುಗುಡುವಂತಾಗುತ್ತಿತ್ತು ಯೋಗಿಗೆ.

ಅದೊಂದು ದಿನ, ಅಲ್ಲಿಯತನಕವೂ ಅರಿವಿಗೇ ಬಂದಿರದಂಥ ಮತ್ತೊಂದು ಸಂಗತಿ ತಿಳಿದುಬಿಟ್ಟಿತ್ತು ಯೋಗಿಗೆ. ಬೆಳಗ್ಗೆ ಹೊಲ ತೋಟ, ಆಳು ಕಾಳು ಅಂತ ಅವನು ಮನೆಯಿಂದ ಹೊರಬಿದ್ದರೆ ಮತ್ತೆ ಬರುತ್ತಿದ್ದುದು ಮಧ್ಯಾಹ್ನದ ಊಟಕ್ಕೇ. ಊಟ ಮುಗಿಸಿ ಮತ್ತೆ ಹೊರಟರೆ ವಾಪಸಾಗುತ್ತಿದ್ದುದು ಮನೆಯೊಳಗೆ ದೀಪಗಳು ಬೆಳಗುತ್ತಿದ್ದ ಹೊತ್ತಿಗೇ. ಹೀಗಿರುವ ದಿನಚರಿಯಲ್ಲಿ ಅವತ್ತು ಅಚಾನಕ್ಕಾಗಿ ಮನೆಗೆ ಬಂದಿದ್ದ. ಆಗಿನ್ನೂ ಸಂಜೆ ಬೀಳುವುದಕ್ಕೆ ವೇಳೆಯಿತ್ತು. ನೋಡಿದರೆ ಹೆಂಡತಿ ಕಾಣಿಸಲಿಲ್ಲ. ಈ ಅಪ್ಪ ಮಾತ್ರ ಚಿಟ್ಟೆಯ ಮೇಲೆ ಕೂತು, ಮೊಮ್ಮಗನನ್ನು ಆಟವಾಡಿಸ್ತಾ ಇದ್ದ. ಒಳಕೋಣೆಗೆ ಹೋಗಿ ನೋಡಿದ್ರೆ ಅಲ್ಲೂ ಇರಲಿಲ್ಲ ಅವಳು. ಆಗಲೇ ಅವಳ ನಗು ಅತ್ಯಂತ ಮಿದುವಾಗಿ ಆದರೆ ಕಿವಿಯೊಳಗೆ ಅಲೆಗೊಳ್ಳುವಂತೆ ಕೇಳಿಸಿತ್ತು, ಮಲಗುವ ಕೋಣೆಯಿಂದ. ಒಂದು ಕ್ಷಣ ನಿಂತಲ್ಲೇ ಕುಸಿದಂತಾಯಿತು. ಈ ಅಪ್ಪನಿಗೆ ಮನೆಯೊಳಗೆ ಏನೇನು ನಡೆಯುತ್ತದೆ ಅನ್ನೋದು ಕೂಡ ತಿಳಿಯೋದಿಲ್ಲವಲ್ಲ ಎಂದು ಕೆಂಡ ಕಾರತೊಡಗಿದ. ಕಾಲುಗಳು ನಿಂತಲ್ಲಿ ನಿಲ್ಲಲಾರದೆ ನಡುಗತೊಡಗಿದವು. ಧುಮುಗುಡುತ್ತ, ದುಡುಗುಟ್ಟಿಕೊಂಡು ಸೀದಾ ಆ ಕೋಣೆಯ ಕಡೆ ನಡೆದ. ಬಾಗಿಲು ತೆರೆದೇ ಇತ್ತು. ಬಾಗಿಲ ಮರೆಯಿಂದಲೇ ಒಳಗಿಣುಕಿದ. ನೋಡುತ್ತಾನೆ: ಅಲ್ಲಿ ಅವಳು ಆ ಚಿತ್ರದ ಮುಂದೆ ವೈಯಾರಿಯಂತೆ ನಿಂತಿದ್ದಾಳೆ. ಆ ಚಿತ್ರದಲ್ಲಿನ ಹೆಣ್ಣಿನ ಶೃಂಗಾರದ ಭಂಗಿಯನ್ನೇ ಅನುಕರಿಸುವ ಪ್ರಯತ್ನ ನಡೀತಾ ಇದೆ. ಆ ಪ್ರಯತ್ನದಲ್ಲಿ ಮತ್ತೆ ಮತ್ತೆ ಸೋಲುತ್ತಿರುವುದಕ್ಕಾಗಿ ತನ್ನ ಬಗ್ಗೆ ತಾನೇ ನಾಚಿ ನಗುತ್ತಿದ್ದಾಳೆ. ಯೋಗಿ ನಡುಗಿಹೋದ. ಆ ತಲ್ಲಣದ ಕ್ಷಣದಲ್ಲಿ ಕೂಡ, ಸೊಂಟವನ್ನು ವಿಚಿತ್ರ ಬಿಂಕದಲ್ಲಿ ಬಾಗಿಸಿ ತುಂಬಿದೆದೆಯನ್ನು ಅತ್ಯಂತ ಉತ್ಕಟತೆಯಲ್ಲಿ ಅನುಗೊಳಿಸಿ ನಿಂತಿದ್ದ ಅವಳ ಲಾವಣ್ಯಕ್ಕೆ ಬೆರಗಾಗಿ ಹೋದ. ಇವಳ ಇಂಥ ಚೆಲುವು ತನಗೆ ಕಾಣಲೇ ಇಲ್ಲವೇ ಎನ್ನಿಸಿತು ಆ ಕ್ಷಣಕ್ಕೆ. ಆವಾಹಿಸಿಕೊಳ್ಳದೆ, ಅನುಭವಿಸದೆ, ಒಳಗೊಳ್ಳದೆ ಮಗುವಿಗೆ ಬರೀ ಅಪ್ಪನಾದದ್ದೇ ದೊಡ್ಡದು ಅನ್ನುವವನ ಹಾಗೆ ಇದ್ದಲ್ಲೇ ಇದ್ದುಬಿಟ್ಟೆನಾ ಅನ್ನಿಸಿ ತಲೆತಗ್ಗಿಸಿದ, ಅವಳೆದುರೇ ತಲೆತಗ್ಗಿಸಿದವನ ಹಾಗೆ. ಆ ಕಡೆ ಅವಳು ಒಂದು ಅನಪೇಕ್ಷಿತ ಮಧ್ಯಪ್ರವೇಶಕ್ಕೆ ತತ್ತರಿಸಿದ್ದಳು. ಎಲ್ಲ ಬಯಲಾದ ಹಾಗೆನ್ನಿಸಿ ಬಿಳಿಚಿಕೊಂಡುಬಿಟ್ಟಳು. ಅವತ್ತು ರಾತ್ರಿ ಯೋಗಿ ನಿಜವಾಗಿಯೂ ಅವಳನ್ನು ಬಯಸಿದ. ಗಾಢ ಬೆಸುಗೆಗೆ ಹಾತೊರೆದು ಏರಿಬರುವವಳಂತಿರುತ್ತಿದ್ದ ಅವಳು ಅವತ್ತು ಮಾತ್ರ ದೂರ ಸರಿದಳು. ಬೆಳಗ್ಗೆದ್ದು ನೋಡಿದರೆ ಮಲಗಿದ್ದಲ್ಲೇ ಹೆಣವಾಗಿದ್ದಳು.

ಅಪ್ಪನ ಮುಂದೆ ಗಳಗಳನೆ ಅತ್ತುಬಿಟ್ಟಿದ್ದ ಯೋಗಿ. ಹಿಂದಿನ ಸಂಜೆ ಏನಾಯಿತು ಅನ್ನುವುದನ್ನು ಹೇಳಿದಾಗ ಅಪ್ಪ ಆಡಿದ ಮಾತುಗಳಂತೂ ಇನ್ನೂ ಬಾಧಿಸಿದ್ದವು ಅವನನ್ನು. ಅವಳ ಲೋಕವನ್ನು ನೀನೇಕೆ ಚೂರುಮಾಡಿಬಿಟ್ಟೆ ಎಂಬರ್ಥದಲ್ಲಿ ಅಪ್ಪ ಪ್ರಶ್ನಿಸಿದ್ದ. ಹಾಗಾದರೆ, ಅವಳ ಆ ರೀತಿ ಅದೆಷ್ಟು ಕಾಲದಿಂದ ಅಬಾಧಿತವಾಗಿ ನಡೆದುಬಂದಿತ್ತು? ಅಪ್ಪನಿಗೆ ಅದೆಲ್ಲ ಗೊತ್ತಿತ್ತೇ? ಯೋಗಿಯ ಮುಂದೆ ಪ್ರಶ್ನೆಗಳು ಮುಗಿಯಲೇ ಇಲ್ಲ.

ಯೋಗಿಗೂ ಯೋಗಿಯ ಅಪ್ಪನಿಗೂ ದೊಡ್ಡ ಆಘಾತವಾದದ್ದು ಅವಳು ಆತ್ಮಹತ್ಯೆ ಮಾಡಿಕೊಂಡು ಬದುಕು ಮುಗಿಸಿಕೊಂಡಳೆಂಬ ಕಾರಣಕ್ಕೆ. ಅದಕ್ಕಿಂತ ದೊಡ್ಡ ಅಪರಾಧಿ ಭಾವದಿಂದ ಜರ್ಜರಿತವಾಗೋ ಹಾಗಾದದ್ದು ಮನೆತನದ ಮರ್ಯಾದೆ ಸಲುವಾಗಿ ಆತ್ಮಹತ್ಯೆ ಅನ್ನೋದನ್ನು ಮರೆಮಾಚಿ ಇಡೀ ಸವತೆಹಳ್ಳಿಯನ್ನು ವಂಚಿಸುವ ಸಂದಿಗ್ಧತೆಗೆ ಆಳಾದೆವಲ್ಲ ಎಂಬುದಕ್ಕೆ.

ಆ ತೀವ್ರ ಸಂಕಟದಿಂದ ಯೋಗಿಯ ಅಪ್ಪ ಹೊರಬರಲೇ ಇಲ್ಲ. ತನ್ನ ಹೆಂಡತಿ ಹಸುಗೂಸನ್ನೇ ತಬ್ಬಲಿಯಾಗಿಸಿ ಕಣ್ಮುಚ್ಚಿದ್ದುದು ಇನ್ನೂ ಮಾಸದ ಗಾಯದಂತಿರುವಾಗಲೇ ಸೊಸೆಯೂ ಹೊರಟುಹೋದಳೆಂಬುದು ಒಂದು ಯಾತನೆಯಾಗಿ ಆಕ್ರಮಿಸತೊಡಗಿತು. ಯೋಗಿಯ ಥರವೇ ಮೊಮ್ಮಗನೂ ಅಮ್ಮನ ಮಡಿಲ ಅನುಭೂತಿಯನ್ನು ಹಣೆಯಲ್ಲಿ ಬರೆದುಕೊಂಡು ಬರಲಿಲ್ಲವೇನೊ ಎನ್ನಿಸಿ ಹೃದಯ ಒಡೆದುಹೋಯಿತು. ತನ್ನ ಪಾಡೂ ಅಷ್ಟೇ ಆಗಿತ್ತಲ್ಲ ಅನ್ನಿಸಿ, ಇದೊಂದು ಶಾಪವಾ ಎಂಬ ಸಂದೇಹ ಯಾವತ್ತೂ ಜೀವ ಹಿಂಡುವ ಹಾಗೆ ಮತ್ತೆ ವ್ಯಾಪಿಸಿತು. ಈ ಮನೆಗೂ ಹೆಣ್ಣುಜೀವಕ್ಕೂ ಆಗಿಬರೋದಿಲ್ಲವಾ ಎಂಬುದು ಇನ್ನಿಲ್ಲದಂತೆ ತಿವಿಯತೊಡಗಿತು. ಈ ಮನೆತನ ಹೆಣ್ಣು ಜೀವ ಅಂತ ಕಂಡಿದ್ದು ಒಮ್ಮೆ ಮಾತ್ರವಂತೆ. ಅವಳು ನನ್ನ ಅಕ್ಕ. ಅವಳ ಮುಖವೂ ತನಗೆ ಗೊತ್ತಿಲ್ಲ. ಭಯಂಕರ ರೀತಿಯಲ್ಲಿ ಸಾವಿನ ಪಾಲಾಗಿದ್ದಳು ಅನ್ನುವ ನೋವಿನ ಕಥೆ ಮಾತ್ರವೇ ಗೊತ್ತು. ಅವಳು ಹಾಗೆ ಸತ್ತಾಗ ನಾನಿನ್ನೂ ಹುಟ್ಟಿ ಕೆಲವೇ ತಿಂಗಳಾಗಿದ್ದವಂತೆ. ಮಗಳ ಸಾವಿನ ಬೆನ್ನಲ್ಲೇ ಅಮ್ಮ ಕೂಡ ಹೋಗಿಬಿಟ್ಟಿದ್ದಳಂತೆ. ಬೇರೆ ಯಾರದೋ ಕೈಗಳಲ್ಲಿ ನಾನು ಬೆಳೆದೆನಂತೆ. ತನಗೆ ಹೆಣ್ಣು ಹುಟ್ಟಲಿ ಎಂದು ಬಯಸಿದ್ದಿತ್ತು ಯೋಗಿಯ ಅಪ್ಪ. ಆದರೆ ಯೋಗಿ ಹುಟ್ಟಿದ್ದ. ಯೋಗಿಗಾದರೂ ಹೆಣ್ಣುಮಗುವಾಗಲಿ ಎಂದು ಹಂಬಲಿಸಿದ್ದ. ಮತ್ತೆ ಆಗಿದ್ದು ಗಂಡುಮಗುವೇ. ಅಪ್ಪ ಇಂಥದೊಂದು ಹೇಳಿಕೊಳ್ಳಲಿಕ್ಕಾಗದ  ಕೊರಗಿನಲ್ಲಿದ್ದಾಗಲೇ ತನ್ನ ಹೆಂಡತಿ ಸತ್ತುಹೋಗಿದ್ದು ಯೋಗಿಯನ್ನು ಒಳಗಿಂದೊಳಗೇ ಅಧೀರನನ್ನಾಗಿ ಮಾಡಿತ್ತು. ಹೆಂಡತಿ ಹಾಗೆ ಹೋಗಿಬಿಟ್ಟ ನಂತರ ಯಾವುದರ ಬಗ್ಗೆ ಯೋಗಿ ಹೆದರಿದ್ದನೋ ಅದೇ ಆಗಿಹೋಯಿತು. ಅಪ್ಪ ತೀರಿಕೊಂಡುಬಿಟ್ಟ. ಕಟ್ಟಕಡೇ ಕ್ಷಣದಲ್ಲಿ ಅಪ್ಪ ಏನನ್ನೋ ಹೇಳುವುದಕ್ಕೆ ಪ್ರಯತ್ನಿಸಿದ್ದ. ತಾನು ಅರ್ಥ ಮಾಡಿಕೊಂಡ ಹಾಗೆ ಅದು, ಆ ಕೋಣೆಯಲ್ಲಿದ್ದ ಚಿತ್ರವನ್ನು ಅಳಿಸಿಬಿಡು ಅನ್ನೋದಾಗಿತ್ತು. ಅದನ್ನು ಅಳಿಸಬೇಕು ಅನ್ನೋದು ಯಾವತ್ತಿನಿಂದಲೂ ತನ್ನ ಮನಸ್ಸಲ್ಲಿತ್ತು ಯೋಗಿಗೆ. ಆ ಕೆಲಸ ಮಾಡಿಮುಗಿಸಿಬಿಟ್ಟ. ಆದರೆ, ಅದೆಲ್ಲ ಆದ ಮೇಲೆ, ತನ್ನ ಮನಸ್ಸಲ್ಲಿದ್ದುದನ್ನು ತನ್ನ ಅಪ್ಪ ಹೇಳಿದ್ದು ಎಂಬ ನೆಪ ಮುಂದೆ ಮಾಡಿಕೊಂಡು ಸಾಧಿಸಿದೆನಾ ಎಂಬ ತಳಮಳ ಯಾವತ್ತೂ ಯೋಗಿಯ ಮನಸ್ಸನ್ನು ಕುಟುಕುತ್ತಲೇ ಉಳಿಯಿತು.

ಕೋಣೆಯಿಂದ ಆ ಚಿತ್ರವೇನೋ ಅಳಿದುಹೋಗಿತ್ತು. ಆದರೆ ಅದರ ಮುಂದೆ ನಿಂತು ಅತ್ಯಂತ ಏಕಾಂತದಲ್ಲಿ ಕಂಗೊಳಿಸಿದ್ದ ತನ್ನ ಹೆಂಡತಿ ಜೀವ ಕಳೆದುಕೊಳ್ಳಲು ತಾನೇ ಕಾರಣವಾಗಿಬಿಟ್ಟೆ ಅನ್ನುವುದು ಮಾತ್ರ ಅಳಿಸಿಹಾಕಿಬಿಡುವಂಥದ್ದಾಗಿರಲಿಲ್ಲ. ಚಿತ್ರದ ಮುಂದೆ ನಿಂತು ನಕ್ಕಿದ್ದ ಅವಳ ನಗುವಿನ ಸದ್ದು ಕಿವಿಯಲ್ಲಿ ಮತ್ತೆ ಮತ್ತೆ ತುಂಬಿಕೊಂಡುಬಿಡೋದು. ಅದೆಂಥ ಸುಖದ ನಗುವಾಗಿತ್ತಲ್ಲ? ಅಂಥ ಸುಖವನ್ನು ಅವಳಿಗೆ ತಾನು ಕಡೆಯತನಕವೂ ಕೊಡಲಾರದೇ ಹೋದೆನಾ? ಅದರ ಬದಲಾಗಿ ವಿನಾಕಾರಣ ಅವಳನ್ನು ಅನುಮಾನಿಸಿದೆ. ಅದು ತನ್ನ ಮನಸ್ಸೊಳಗೇ ಹುಟ್ಟಿದ ಪಾಪ. ಹೀಗೆ ಯೋಗಿ ಕನಲುವುದು ದಿನೇದಿನೇ ಹೆಚ್ಚಿತು.

ಒಂದರ ಬೆನ್ನಿಗೊಂದರಂತೆ ಮನೆಯೊಳಗೆ ಸಂಭವಿಸಿದ ಎರಡು ಸಾವುಗಳು ಯೋಗುಗೌಡನನ್ನು ಮಹಾಮೌನಿಯಾಗಿಸಿಬಿಟ್ಟವು. ಮಗನನ್ನು ಬೆಳೆಸಬೇಕಾದ ಹೊಣೆಯೊಂದು ಹೆಗಲ ಮೇಲಿರಲಿಲ್ಲವೆಂದರೆ ತಾನು ಆಗಲೇ ಏನಾಗಿಹೋಗುತ್ತಿದ್ದೆನೊ ಎಂದೇ ಯೋಗುಗೌಡ ಎಷ್ಟೋ ಸಲ ಅಂದುಕೊಂಡದ್ದಿದೆ. ಆದರೆ ಸವತೆಹಳ್ಳಿಯ ಒಂದು ಥರದ ಧ್ಯಾನಸ್ಥ ಲಯದ ಆಪ್ತತೆಯಲ್ಲಿ ತಲೆಮಾರುಗಳನ್ನು ಕಂಡ ಮನೆತನವಾಗಿತ್ತು ಅದು. ಸವತೆಹಳ್ಳಿಯ ಪ್ರತಿ ನಡೆಗಳೂ ಯೋಗುಗೌಡನ ಮನೆತನದ ಜೊತೆ ಒಂದು ಬಂಧವಿಟ್ಟುಕೊಂಡೇ ಇರುತ್ತಿದ್ದವು. ಹಾಗೆಯೇ ಆ ಮನೆತನದೊಳಗಿನ ಎಲ್ಲವೂ ಊರ ಪಾಲಿನದೂ ಆಗಿರುತ್ತಿತ್ತು. ಯೋಗುವಿನ ಕಾಲದಲ್ಲಂತೂ ಅದೆಷ್ಟೋ ಸ್ಥಿತ್ಯಂತರಗಳು ಜರುಗಿಬಿಟ್ಟವು. ಪಂಚಾಯ್ತಿ ಕಟ್ಟೆಯ ಸಾಧ್ಯತೆಗಳು ಕ್ಷೀಣಿಸಿದ ತಲಗಳಿಗೆಗೆ ಯೋಗುಗೌಡ ಸಾಕ್ಷಿಯಾಗಬೇಕಾಯಿತು. ಸವತೆಹಳ್ಳಿಯ ಮಟ್ಟಿಗೆ ಅವನ ಹಿರಿಯರು ಹೊಂದಿದ್ದ ಹೊಣೆಗಾರಿಕೆಗಳೆಲ್ಲವನ್ನೂ ಒಂದು ಕಾಲದಲ್ಲಿ ನಿಭಾಯಿಸಿದ್ದವನ ಮುಂದೆ ಪ್ರಭಾವಳಿಯನ್ನು ತೆಗೆದಿಟ್ಟಂಥ ಅನುಭವವೊಂದು ದಟ್ಟವಾಗಿಬಿಟ್ಟಿತು. ಅಲ್ಲಿ ಶೂನ್ಯದ ಗೋಚರವಾಯಿತು. ಇದೆಲ್ಲ ವಿದ್ಯಮಾನಗಳ ಮಧ್ಯೆಯೂ ಸವತೆಹಳ್ಳಿ ಯೋಗುವನ್ನು ಯಾವತ್ತಿನದೇ ಗೌರವದಿಂದ ನೋಡಿತೆಂಬುದು ಮಾತ್ರ ಖರೆ. ಅದಕ್ಕಿಂತ ದೊಡ್ಡ ಧನ್ಯತೆಯಾಗಿ ಯೋಗುವಿನ ಪಾಲಿಗೆ ಒದಗಿದ ಸಂಗತಿಯಿತ್ತು. ಅದು, ಜಲಜಾಕ್ಷಿ.

ಅಪ್ಪ ಮತ್ತೆ ಮತ್ತೆ ಹಂಬಲಿಸಿದ್ದ ಕನಸು ಜಲಜಾಕ್ಷಿಯ ಹುಟ್ಟಿನೊಂದಿಗೆ ಕೈಗೂಡಿತ್ತು. ಈ ಮನೆಗೊಂದು ಹೆಣ್ಣುಜೀವ ಬೇಕು; ಮತ್ತದು ತುಂಬಿದ ಬಾಳನ್ನು ಬಾಳಬೇಕು ಎಂದು ಅಪ್ಪ ಅದೆಷ್ಟು ದೇವರುಗಳ ಮುಂದೆ ಕೈಮುಗಿದು ಕೇಳಿದ್ದನೊ? ಯೋಗುವಿನ ಮೊಮ್ಮಗಳಾಗಿ ಮನೆ ತುಂಬಿದ್ದಳು ಜಲಜಾಕ್ಷಿ.

ಜಲಜಾಕ್ಷಿ ಇಡೀ ಸವತೆಹಳ್ಳಿಯ ಸಂಭ್ರಮವಾದಳು. ಅವಳು ಬಂದ ಮೇಲೆ ಮತ್ತೆ ಯೋಗುಗೌಡನ ಮನೆಗೆ ಹಳೆಯ ಸಿರಿವಂತಿಕೆ ಬಂದಿತ್ತು. ಯೋಗುಗೌಡನ ಮಹಾಮೌನವನ್ನೂ ಮಣಿಸಿಬಿಟ್ಟಿದ್ದಳು ಆ ಮನೆಯ ಮುದ್ದಿನ ಮಗಳು. ಮನೆಯೆಂದರೆ ಜಲಜಾಕ್ಷಿ ಎಂಬಂತಾಗಿತ್ತು.

ಆ ಅಷ್ಟು ದೊಡ್ಡ ಮನೆಯಲ್ಲಿ, ಅವಳದೇ ಕನ್ನಡಿ ಅವಳದೇ ಮಂಚದ ಒಂದು ಪ್ರತ್ಯೇಕ ಪ್ರಪಂಚದಂತೆ ಅವಳ ಕೋಣೆ. ತನ್ನ ಓರಗೆಯ ಎಲ್ಲಾ ಹುಡುಗಿಯರನ್ನು ಜಲಜಾಕ್ಷಿ ಆ ಮನೆಯೊಳಗೆ ಸೇರಿಸುತ್ತಿದ್ದಳಾದರೂ, ಅವರಾರೂ ಗೆಳೆತಿಯ ಸಲಿಗೆಯನ್ನು ದುಂದು ಮಾಡುತ್ತಿರಲಿಲ್ಲ. ಹೀಗಾಗಿ ಅವರೆಲ್ಲರ ಕಣ್ಣಲ್ಲಿ ಜಲಜಾಕ್ಷಿ ದೊಡ್ಡವಳೇ ಆಗಿ, ಅವಳ ಆ ಕೋಣೆ ಬೆಚ್ಚಗಿನ ಸ್ವಪ್ನಕ್ಕೆ ಅವರನ್ನಿಳಿಸುವಂಥದ್ದಾಗಿ ಗಾಢವಾಗುಳಿದಿತ್ತು.

ಆ ಕೋಣೆಯೆಂದರೆ ಅದು ಒಂದೇ ಕೋಣೆಯಲ್ಲ. ಬಾಗಿಲು ತೆರೆದರೆ ಒಂದು, ಇನ್ನೊಂದು, ಮತ್ತೊಂದು ಎಂದು ಮೂರು ಕೋಣೆಗಳ ಪ್ರತ್ಯೇಕ ಮನೆಯೇ ಎಂಬಂತಿರುವ ಅದನ್ನು ಕೋಣೆಯೆಂದೇ ಕರೆದುಕೊಂಡು ಬರಲಾಗಿದೆ. ಈಗ ಜಲಜಾಕ್ಷಿ ಆ ಮನೆಯಲ್ಲಿರುವುದು ಹಾಗಿರಲಿ, ಊರೊಳಗೆ ಇರುವುದೇ ಅಪರೂಪ. ಹಾಗಾಗಿ ಆ ಕೋಣೆಯನ್ನು ಅವಳು ಬಳಸುವುದೂ ಅಷ್ಟೇ ಅಪರೂಪ. ಆದರೂ, ಅದು ಜಲಜಾಕ್ಷಿಗಾಗಿ ಇರುವಂಥದ್ದು ಎಂದುಕೊಂಡೇ ಅವಳ ಕೋಣೆ ಎಂದು ಗೌರವ ಮತ್ತು ವಿನೀತ ಭಾವವನ್ನು ತೋರುವುದು ಯೋಗುಗೌಡನ ಮನೆಯೊಳಗೆ ನಡೆದುಬಂದಿದೆ.

ಅವಳ ಆ ಕೋಣೆಯ ಮುಂಬಾಗಿಲು ತೆರೆದು ಒಳಹೋದರೆ ನೇರ ಮುಖಕ್ಕೆ ಮುಖ ಕೊಟ್ಟು ಸ್ವಾಗತಿಸುವುದೇ ಅಷ್ಟೆತ್ತರದ ಕನ್ನಡಿ. ಈಗಷ್ಟೇ ಅರಳಿದ್ದೆಂಬಂಥ ಭಾಸದಲ್ಲಿ ಒಂದು ಕ್ಷಣ ಅದ್ದಿ ತೆಗೆಯುವಂತಹ ಜೀವಂತ ಹೂಚಿತ್ರಗಳನ್ನು ಬಿಡಿಸಿರುವ ಮರದ ಚೌಕಟ್ಟು ಆ ಕನ್ನಡಿಗೆ. ಯೋಗುಗೌಡನ ಮನೆತನದ ಲಾಗಾಯ್ತಿನ ಆಸ್ತಿಯಂತೆ ಉಳಿದುಬಂದಿದ್ದ ಅದು ಜಲಜಾಕ್ಷಿಯ ಬೆಳವಣಿಗೆಯ ಪ್ರತಿ ಹಂತವನ್ನೂ ತನ್ನ ಕಣ್ಣಲ್ಲಿ ಹಿಡಿದಿದೆ. ನಾಲ್ಕು ತಲಗಳಿಗೆಯ ತರುವಾಯ ಹುಟ್ಟಿದ ಆ ಹೆಣ್ಣುಮಗಳಿಗೆ ಎಷ್ಟೊಂದು ಅಕ್ಕರೆಯಿಂದ ಚೆಲುವನ್ನು ದಯಪಾಲಿಸಿ ಧನ್ಯಗೊಂಡಂತಿದೆ. ಪುಟ್ಟ ಪೋರಿಯಾಗಿದ್ದಾಗ ಫ್ರಾಕನ್ನು ಸೀದಾ ಮೇಲೆತ್ತಿ ಬಾಯಿಗಿಟ್ಟು ಕಚ್ಚುತ್ತಿದ್ದ ಹುಡುಗಿಗೆ ಅನಂತರ ಪ್ರಾಯದ ವಜ್ಜೆಯನ್ನು ಎಂಥದೋ ಬಿಗಿತವನ್ನು ಸಂಭಾಳಿಸಲು ಕಲಿಸಿದ್ದು; ಕೋಡುಬಳೆ ತಿನ್ನುವಾಗಲೂ ಕನ್ನಡಿಯೆದುರೇ ನಿಂತು ತಾನು ಹೇಹೇಗೆಲ್ಲಾ ಜಗಿಯುತ್ತೇನೆ ಎಂದು ನೋಡುತ್ತ ದೊಡ್ಡವರನ್ನು ನಗಿಸುತ್ತಿದ್ದವಳಿಗೆ, ತನ್ನ ಬೆಳೆದ ಕಣ್ಣುಗಳ ಸಮುದ್ರದಲ್ಲಿ ಪೈಪೋಟಿಗೆ ಬಿದ್ದ ಕನಸುಗಳನ್ನು ಹೊತ್ತ ದೋಣಿ ಅಲೆಗಳನ್ನು ದಾಟುವಾಟದಲ್ಲಿ ಚೆಂದಗಟ್ಟಿದೆಯೆಂಬ ಸುಳಿವು ಕೊಟ್ಟಿದ್ದು; ಮೈನೆರೆದ ಅನುಭವವಾದ ಮೊದಲ ಕ್ಷಣದಲ್ಲಿ ತನ್ನ ತುಂಬಾ ಮೂಡಿದ್ದ ಆತಂಕದ ಕಂಪನದ ಬಾಧೆಯಲ್ಲಿ ಬೆಚ್ಚಿದ್ದವಳಿಗೆ ಲಜ್ಜೆಯ ಬಣ್ಣಗಳ ಗುರುತನ್ನು ಹೇಳಿಕೊಡುತ್ತ ಪುಳಕ ಮೀಯಿಸಿದ್ದು… ಎಲ್ಲವೂ ಎಲ್ಲವೂ ಇದೇ ಕನ್ನಡಿ.

ಈ ಕನ್ನಡಿಯ ಹೂಚಿತ್ರಗಳ ಚೌಕಟ್ಟನ್ನು ಮಾಡಿದ್ದ ಮಾಟದ ಕೈಯವನೇ ಕಟ್ಟಿದ್ದೆಂಬಂತಿದ್ದ ಒಂದು ಮಂಚ ಈ ಹಿಂದೆ ಯೋಗುಗೌಡನ ಮನೆತನದಲ್ಲಿತ್ತು. ಮನೆತನದ ಹಿರಿಯನೇ ಆ ಮಂಚವನ್ನು ಮಾಡಿದವನಾಗಿದ್ದ. ಅದು ನಾಲ್ಕು ತಲಗಳಿಗೆಯ ಹಿಂದೆ. ಜಲಜಾಕ್ಷಿಗಿಂತ ಮೊದಲು ಆ ಮನೆತನದಲ್ಲಿ ಹುಟ್ಟಿದ್ದ ಹೆಣ್ಣುಮಗಳಿಗಾಗಿ ಅವನು ಅಷ್ಟೊಂದು ಪ್ರೀತಿಯಿಂದ ಮಾಡಿದ್ದ ಆ ಮಂಚ ಎಂಥ ಚೆಂದವಿತ್ತೆಂದರೆ, ಅದನ್ನು ನೋಡುತ್ತಾ ನೋಡುತ್ತಾ ಇದ್ದರೆ ಅದು ಹೇಗೋ ಮೈತುಂಬಿದ ಹೆಣ್ಣುಮಗಳನ್ನೇ ಎದುರಲ್ಲಿ ಕಂಡಂತಾಗಿಬಿಡುತ್ತಿತ್ತಂತೆ. ಎಲ್ಲರೂ ಆ ಮಂಚದ ಸೊಗಸನ್ನು ಹೊಗಳುವವರೇ. ಆದರೆ ಹೊಗಳಿಕೆ ಕೇಳಿಸಿಕೊಳ್ಳಲು ಅದನ್ನು ತಯಾರು ಮಾಡಿದ್ದ ಹಿರಿಯನೇ ಇರಲಿಲ್ಲ. ಮಂಚವನ್ನು ಪೂರ್ತಿಗೊಳಿಸಿದ ದಿನ ಅದರ ಚೆಂದಕ್ಕೆ ತಾನೇ ಹುಚ್ಚನಂತಾಗಿ ಸಂಭ್ರಮಪಟ್ಟವನು ಮತ್ತೆ ಮೂರೇ ದಿನಗಳಲ್ಲಿ ಸತ್ತಿದ್ದ. ಆ ಮೂರು ದಿನಗಳಲ್ಲಿ ಅವನು ಮಂಕಾಗುತ್ತಾ ಮಂಕಾಗುತ್ತಾ , ಮಂಚ ತಯಾರಾದ ದಿನ ಎಷ್ಟು ಸಂಭ್ರಮಪಟ್ಟಿದ್ದನೊ ಅದಕ್ಕೆ ಪೂರ್ತಿ ವಿರುದ್ಧವಾಗಿ ವಿಚಿತ್ರ ಕನಲಿಕೆಯ ಸ್ಥಿತಿಗೆ ಹೋಗಿಬಿದ್ದಿದ್ದವನನ್ನು ಗಮನಿಸುವುದಕ್ಕೂ ಒಬ್ಬರೂ ಇರಲಿಲ್ಲ. ಎಲ್ಲರೂ ಮಂಚದ ಮೋಡಿಗೆ ಸಿಕ್ಕಿಬಿಟ್ಟಿದ್ದರು. ಆ ಹಿರಿ ಜೀವ ಅತ್ಯಂತ ದರಿದ್ರ ಮತ್ತು ಅನಾಥ ಭಾವದಲ್ಲಿ ಬಾಯೇ ಇಲ್ಲದಂಥ ಸ್ಥಿತಿಯಲ್ಲಿ ಏನೇನನ್ನೋ ಕನವರಿಸುತ್ತ ಎದೆ ಬಡಿದುಕೊಳ್ಳುತ್ತ ಉಸಿರು ಬಿಟ್ಟಿತ್ತು. ಎಂತಾ ಚೆಂದದ ಮಂಚ ಮಾಡಿದ್ದವ ಅದರ ಮೇಲೆ ಒಂದು ದಿನವಾದರೂ ಮಲಗಲಿಲ್ಲ; ಯಾವುದಕ್ಕೂ ಪಡೆದು ಬಂದಿರಬೇಕನ್ನೂದು ಎಷ್ಟು ಖರೆ ಎಂದೇ ಕೊರಗಿತ್ತು ಊರು. ಆಮೇಲೆ ಅವನ ಸಾವು ಮರೆತುಹೋಯಿತು; ಅವನ ನೆನಪು ಅಡಗಿಹೋಯಿತು. ಮಂಚ ಮಾತ್ರ ಎಲ್ಲರ ಕಣ್ಣಲ್ಲಿ ನಿಂತುಬಿಟ್ಟಿತು.

ಗೌಡನ ಮನೆಮಗಳ ಹೆಸರಲ್ಲೇ ತಯಾರಾದ ಮಂಚಕ್ಕೆ ಅದಾಗಲೇ ಪ್ರಾಯಕ್ಕೆ ಬಂದಿದ್ದ ಆಕೆಯೇ ಹಕ್ಕುದಾರಳಾಗಿದ್ದಳು. ಅದರ ಹೂಗೊಂಡೆ ಸುತ್ತಿದಂಥ ಕಾಲುಗಳ ಸೊಗಸಿಗೆ, ಕಾಲುಗಳ ತುದಿಯಲ್ಲಿ ನೆಲದಿಂದ ಒಂದಂಗುಲ ಮೇಲೆ ತೂಗುತ್ತಿರುವಂತೆ ಕಟ್ಟಿದ್ದ ಬೆಳ್ಳಿಗೆಜ್ಜೆಗಳ ಇಂಪಾದ ಉಲಿತಕ್ಕೆ, ಮಂಚದ ಮೈಯ ನಯಕ್ಕೆ ಅವಳು ಸೋಲುತ್ತಾ ಹೋಗುವಳು. ಮಂಚದೊಂದಿಗೆ ಒಬ್ಬಳೇ ಮಾತಾಡುತ್ತಾ ಎಷ್ಟೋ ಹೊತ್ತು ಕಳೆದುಬಿಡುವಳು. ಹೀಗೆ ಮಂಚದೊಂದಿಗೆ ಸಂಬಂಧ ಬೆಳೆದ ಕೆಲವೇ ದಿನಗಳಲ್ಲಿ ಅವಳು ಮತ್ತಷ್ಟು ಚೆಲುವೆಯಾಗುತ್ತಾ ಹೋದಳು. ಅಷ್ಟೇ ಮಟ್ಟಿಗೆ ಮನೆಮಂದಿಯಿಂದ ದೂರವಾಗುತ್ತಲೂ ಹೋದಳು. ಅದು ಎಷ್ಟಕ್ಕೆ ಬಂತೆಂದರೆ, ಮಂಚವನ್ನು ಬಿಟ್ಟು ಅವಳು ಉಳಿಯುವುದೇ ಅಪರೂಪವಾಯಿತು. ಆದರೆ ಮನೆಮಂದಿಗಾರಿಗೂ ಅದು ಕಾಡಲಿಲ್ಲ. ಬದಲಾಗಿ ಮಂಚದ ಬಗ್ಗೆಯೇ ಹೊಗಳುವರು.

ಹೀಗಿರುವಾಗಲೇ ಒಂದು ರಾತ್ರಿ ಊರೆಲ್ಲಾ ಮಲಗಿದೆ. ಗೌಡನ ಮನೆಯಲ್ಲೂ ಮಾತಿಲ್ಲ, ಕಥೆಯಿಲ್ಲ. ಆಳುಮಕ್ಕಳೂ ಎಚ್ಚರವಿರಲಿಲ್ಲ. ಇದ್ದಕ್ಕಿದ್ದಂತೆ ಯಾರೋ ಚೀರಿಕೊಂಡಂತೆ ಒಂದು ಭೀಕರ ದನಿ ಎದ್ದಿತ್ತು. ಇಡೀ ಊರನ್ನೇ ಬೆಚ್ಚಿಬೀಳಿಸಿದ್ದ ಚೀರಿಕೆಯಾಗಿತ್ತು ಅದು. ಎಚ್ಚರಾದ ಎಲ್ಲರಿಗೂ ಆ ಚೀರಿಕೆಯ ಕೊನೆಯ ಸೊಲ್ಲು ಎಲ್ಲಿಂದಲೋ ಕೇಳಿಬಂದಂತಾಯಿತೇ ಹೊರತು ಇಂಥ ದಿಕ್ಕಿನಿಂದಲೇ ಇಂಥ ಮನೆಯಿಂದಲೇ ಬಂತು ಎಂದು ತಿಳಿಯಲು ಆಗಲೇ ಇಲ್ಲ. ಗೌಡನ ಮನೆಮಂದಿಗೂ ಹಾಗೇ ಅನುಭವವಾಗಿತ್ತು. ರಾತ್ರಿ ಕಳೆದು ಬೆಳಗಾದಾಗಲೇ ಎಲ್ಲಾ ಗೊತ್ತಾದದ್ದು. ಮಂಚದ ಮೇಲೆ ಮಲಗಿದ್ದ ಗೌಡನ ಮಗಳು ಮಂಚದಿಂದ ಸಿಡಿದೇ ಬಿದ್ದಿದ್ದಾಳೆಂಬಂತೆ ಬಾಗಿಲ ಬಳಿ ಹೆಣವಾಗಿ ಬಿದ್ದಿದ್ದಳು. ಅಷ್ಟೊಂದು ಚೆಂದವಿದ್ದವಳ ಮುಖ ನೋಡಲಿಕ್ಕೇ ಆಗದ ಹಾಗೆ ವಿಕಾರವಾಗಿಬಿಟ್ಟಿತ್ತು. ಅವಳ ಮಂಚವೆಂದರೆ ಆಸೆಗಣ್ಣಿಂದ ನೋಡುತ್ತಿದ್ದವರೆಲ್ಲರ ಕಣ್ಣಲ್ಲಿ ಮಂಚದ ಬಗ್ಗೆಯೇ ಭಯ ತುಂಬಿದ ಅನುಮಾನ ಮೊಳೆತುಬಿಟ್ಟಿತು. ಮಾತು ಕಳಕೊಂಡು ದಕ್ಕಾಗಿ ಹೋಗಿದ್ದರು ಎಲ್ಲ. ಕನ್ನೆಹೆಣ್ಣಿನ ಹೆಣದೊಂದಿಗೇ ಆ ಮಂಚವನ್ನೂ ಸುಟ್ಟುಬಿಟ್ಟರು. ಮೋಹಿನಿ ನೆಲೆಯಾಗಿದ್ದ ಮಂಚ ಅದಾಗಿತ್ತೆಂಬ ಮಾತು ಹುಟ್ಟಿತ್ತು. ಹಾಗೆ ಅವತ್ತು ಸತ್ತುಹೋಗಿದ್ದವಳು ಯೋಗಿಯ ಅಪ್ಪನ ಅಕ್ಕ. ತಾನು ಕಂಡೇ ಇರದ ಆ ಅಕ್ಕ ತನ್ನ ಮನೆತನದ ಭಾಗ್ಯವನ್ನೇ ಬಸಿದುಕೊಂಡು ಹೋದಳಾ? ಮತ್ತೊಂದು ಹೆಣ್ಣು ಈ ಮನೆಯಲ್ಲಿ ಬಾಳಲಿಕ್ಕಾಗದಂತೆ ಆಗಿಹೋಯಿತಾ ಎಂದೇ ಯೋಗುಗೌಡನ ಅಪ್ಪ ಕೊನೆಯತನಕವೂ ಹಳಹಳಿಸಿದ್ದ.

ಗೌಡನ ಮನೆತನದಲ್ಲಿ ಅಂಥದೊಂದು ದುರಂತವಾದ ಮೇಲೆ ಯಾರೂ ಮಂಚದ ಬಗ್ಗೆ ಮೋಹಪಟ್ಟಿರಲಿಲ್ಲ. ಆ ಕೆಟ್ಟ ಘಟನೆಯ ನೆನಪು ಮುಂದಿನ ಪೀಳಿಗೆಗಳಲ್ಲೂ ಉಳಿದುಕೊಂಡು ಬಂದಿತ್ತು. ಹಾಗಿದ್ದಾಗಲೇ ಜಲಜಾಕ್ಷಿ ತನಗೊಂದು ಮಂಚ ಬೇಕೇ ಬೇಕೆಂದು ಹಠ ಹಿಡಿದಾಗ ಯೋಗುಗೌಡ ದಿಗ್ಭ್ರಾಂತನಾಗಿಹೋಗಿದ್ದ. ಕಡೆಗೂ ದೇವರಲ್ಲಿ ಪ್ರಸಾದ ಕೇಳಿ ಒಪ್ಪಿಗೆ ಸಿಕ್ಕಿದ ಮೇಲೆಯೇ ಮಂಚ ತಯಾರಾಗಿತ್ತು. ಈಗ ಜಲಜಾಕ್ಷಿಯ ಕೋಣೆಯಲ್ಲಿ ಕನ್ನಡಿಯಷ್ಟೇ ದೊಡ್ಡ ಆಸ್ತಿಯೆಂಬಂತಿರುವ ಈ ಹೊಸ ಮಂಚವೂ ತುಂಬಾ ಸುಂದರವಾದದ್ದೇ. ಜಲಜಾಕ್ಷಿಗೂ ಈ ಮಂಚವೆಂದರೆ ಇಷ್ಟ. ಈ ಮಂಚದ ಮೇಲೆ ಕೂತೇ ಅವಳು ಅಜ್ಜನ ಬಾಯಿಂದ ಹಳೇ ಮಂಚದ ಕಥೆ ಕೇಳಿಸಿಕೊಂಡಿದ್ದಿದೆ.

ಸವತೆಹಳ್ಳಿಗೊಂದು ವಿಸ್ತಾರ ತಂದವಳು ಕೂಡ ಜಲಜಾಕ್ಷಿಯೇ. ಅವಳಿಗೀಗ ತನ್ನ ಮಂಚದ ಬಗ್ಗೆ ವೈಯಕ್ತಿಕವಾದ ಮೋಹವಿಲ್ಲ. ಬದಲಾಗಿ ಅದರಲ್ಲಿರುವಂಥ ಕುಸುರಿಗೆ ಅವಳು ಶಿಲ್ಪಕಲೆಯಲ್ಲಿ ಆಸಕ್ತಿಯುಳ್ಳವಳಾಗಿ ಕುತೂಹಲಗೊಳ್ಳುತ್ತಾಳೆ. ಅವಳ ಈ ಕುತೂಹಲವೇ ಸವತೆಹಳ್ಳಿಯನ್ನು ಅವಳ ಹಾಗೆಯೇ ಮತ್ತೆಷ್ಟೋ ಆಸಕ್ತರ ಪಾಲಿಗೆ ಒಂದು ಪುಸ್ತಕವೆಂಬಂತೆಯೂ ಮಾಡಿದೆ. ಅವರೆಲ್ಲ ಸವತೆಹಳ್ಳಿಯ ಯಾವುದೋ ಒಂದು ಬಿಂದುವಿನಿಂದ ಅಗೋಚರ ಇತಿಹಾಸದ ಸುಳಿವು ಹುಡುಕಿ ಪುಳಕಿತರಾಗುತ್ತಾರೆ.

ಚಿಟ್ಟೆಯ ಮೇಲೆ ಕೂತಿದ್ದ ಜಲಜಾಕ್ಷಿಯನ್ನು ದಿಟ್ಟಿಸಿ ನೋಡುತ್ತಲೇ ಇದ್ದ ಯೋಗುಗೌಡ. ಊರೊಳಗಿನ ಹಾಳು ಮಂಟಪ, ಕೆರೆ ಕಲ್ಯಾಣಿಗಳ ಬಗ್ಗೆಲ್ಲ ಅವಳು ಕೇಳುವುದು, ಕೆದಕುವುದು ಇದ್ದೇ ಇತ್ತು. ಆದರೆ ಯಾವತ್ತೂ ಚಿತ್ರದ ಮಾತೆತ್ತಿದ್ದವಳಲ್ಲ. ಅಂಥವಳು ತಾನೇ ಚಿತ್ರ ಬರೆದಿದ್ದೇನೆ ಎಂದಾಗ ದಂಗುಬಡಿದುಹೋಗಿದ್ದ ಯೋಗು. ಚಿತ್ರ ಎಂದೊಡನೆ ಅವನನ್ನು ಕಾಡಿದ್ದು ತನ್ನ ಹೆಂಡತಿಯ ಸಾವಿಗೆ ಒಂದು ನೆವವಾದ ಆ ಶೃಂಗಾರಮಯ ಚಿತ್ರ.

“ತಾತಾ ನೀನು ಹೇಳಿದ್ದೆಯಲ್ಲ, ನಮ್ಮ ಮನೆತನದೊಳಗೆ ಮಂಚದ ಶಾಪದಿಂದಾಗಿ ಹೆಣ್ಣಿನ ಸಾವಾಯಿತು ಅಂತ. ಮುಖವೇ ಗೊತ್ತಿಲ್ಲದ ಆ ಹೆಣ್ಣೇ ನನ್ನ ಕಣ್ಣಲ್ಲಿ ಬಂದ ಹಾಗಾಯಿತು ನಾನು ಚಿತ್ರ ಬರೆಯೋವಾಗ” ಎಂದಳು ಜಲಜಾಕ್ಷಿ. ಅವಳ ಬಾಯಿಂದ ನಿರೀಕ್ಷಿಸಿಯೇ ಇರದ ಈ ಮಾತಿನಿಂದಂತೂ ಬೇರೆಯದೇ ರೀತಿಯಲ್ಲಿ ಭಯ ಒದ್ದ ಹಾಗಾಯಿತು ಯೋಗುವಿಗೆ. ತಲಗಳಿಗೆಯಷ್ಟು ಹಿಂದಿನ ಗೊತ್ತಿಲ್ಲದ ಹೆಣ್ಣಿನ ಚಹರೆ ಇವಳಿಗೆ ಕಾಣೋದೆಂದರೇನು? ಮಂಚದಲ್ಲಿ ನೆಲೆಗೊಂಡಿದ್ದ ಮೋಹಿನಿ ಇವಳ ಬೆನ್ನಿಗೇನಾದರೂ ಬಿದ್ದಿದೆಯಾ? ಅತ್ಯಂತ ಆತಂಕದ ಸೆಳಕೊಂದು ಪಾದದಿಂದ ನೆತ್ತಿಯತನಕವೂ ಹರಿದಂತಾಯಿತು. ಜಲಜಾಕ್ಷಿಗೆ ಏನಂತ ಉತ್ತರ ಹೇಳುವುದು ಎಂದು ತಡಕಾಡಿದ.

“ಅಲ್ಲ ತಾತಾ, ಮಂಚದ ಕಾರಣದಿಂದ ಆ ಹೆಣ್ಣು ಸತ್ತಳು ಅಂತಲೇ ಎಲ್ಲಾ ನಂಬಿದರಲ್ವಾ? ಆದರೆ ಅಲ್ಲೊಂದು ಕೊಲೆಯೇ ಆಗಿಹೋಗಿದ್ದಿರಬಹುದಲ್ವಾ? ಇಲ್ಲಾ ಆಕೆ ಸುಸೈಡ್ ಮಾಡಿಕೊಂಡುಬಿಟ್ಟಳೋ ಏನೊ? ಇದೆಲ್ಲಾ ಬಿಟ್ಟು ಆ ಮರದ ಮಂಚ ಏನು ಮಾಡಿರೋಕ್ಕೆ ಸಾಧ್ಯ ಹೇಳಿ ತಾತಾ.” ಮತ್ತೆ ಜಲಜಾಕ್ಷಿಯೇ ಮಾತು ತೆಗೆದಿದ್ದಳು. ಯೋಗು ಯಾವತ್ತೂ ಎದುರಿಸದೇ ಇದ್ದ ಮತ್ತು ಎದುರಿಸಲು ಎಂದೂ ಬಯಸದಂಥ ತರ್ಕ ಮುಂದಿಟ್ಟಿದ್ದಳು. ಈಗಂತೂ ಯೋಗು ಅಪ್ರತಿಭನಾಗತೊಡಗಿದ. ನಿಜವಾಗಿಯೂ ಮನೆಯೊಳಗೆ ನಡೆದ ಆತ್ಮಹತ್ಯೆಯನ್ನೇ ಗುಟ್ಟಾಗಿ ಎದೆಯೊಳಗೆ ಅಡಗಿಸಿಕೊಂಡಿದ್ದವರು, ಹೇಗಾಯಿತೆಂದೇ ಗೊತ್ತಿಲ್ಲದೆ ನಡೆದುಹೋದ ಸಾವನ್ನು ಅಂಥದೊಂದು ತರ್ಕದ ಅಷ್ಟೊಂದು ಬೆಳಕಿನಲ್ಲಿಟ್ಟು ನೋಡೋಕ್ಕೆ ಸಾಧ್ಯವಾ ಅನ್ನಿಸಿತು. ಜಲಜಾಕ್ಷಿಯ ಪ್ರಶ್ನೆಗೆ ಉತ್ತರಿಸಲಾರೆ ಎನ್ನಿಸಿ ತಲೆತಗ್ಗಿಸಿದ.

ಅವತ್ತು, ಮಲಗುವ ಕೋಣೆಯಲ್ಲಿ ಅಸಾಧಾರಣ ಏಕಾಂತದಲ್ಲಿ ಶೃಂಗಾರಮಯ ಚಿತ್ರದೆದುರು ತನ್ನ ಹೆಂಡತಿ ಆಹ್ಲಾದದ ಉನ್ನತಿಯಲ್ಲಿದ್ದುದು ಕಂಡಾಗಲೂ ಹೀಗೇ ತಲೆತಗ್ಗಿಸಿದ್ದೆನಲ್ಲ ಅನ್ನುವುದು ಅಯಾಚಿತವಾಗಿ ನೆನಪಾಯಿತು.

ವೆಂಕಟ್ರಮಣ ಗೌಡ

ರಾಧೆ ಕಟ್ಟಿದ ಬದುಕು

ಎನಿಗ್ಮಾ ಪೋಸ್ಟ್

ಗೋಕುಲದ ಪರಿಸರವನ್ನು ನಮ್ಮ ಮಿತಿಯಲ್ಲಾದರೂ ಕಣ್ಣೆದುರು ಕಟ್ಟಿಕೊಳ್ಳಲು ಪ್ರಯತ್ನಿಸುವುದಾದರೆ, ಅದು ಇಂಡಿಯಾದ ಯಾವುದೇ ಒಂದು ಕುಗ್ರಾಮದಂತೆ ಇದ್ದ ಪುಟ್ಟ ಹಳ್ಳಿ. ಬೆಂಗಳೂರಂಥ ಜನಗಾಡಲ್ಲಿ ವಾಹನಗಾಡಲ್ಲಿ ಉಸಿರು ಕಟ್ಟಿದಂತಾಗುವಾಗ ಎಂಥದೋ ಆಪ್ತತೆಯನ್ನು, ಮಾಧುರ್ಯವನ್ನು ಹಂಬಲಿಸಿ ಧ್ಯಾನಿಸುವ, ನಾವೆಲ್ಲರೂ ಕಂಡಿರುವ ಹಳ್ಳಿಗಳ ಹಾಗೆ ಇದ್ದಿರಬಹುದಾದ ಹಳ್ಳಿ. ನಾನಿಲ್ಲಿ ನನ್ನ ಹಳ್ಳಿಯ ಮಳೆ, ಬಿಸಿಲು, ಚಳಿ, ಗಾಳಿಯ ನೆನಪು ಮಾಡಿಕೊಂಡರೆ ಅಪ್ರಸ್ತುತವಾಗಲಿಕ್ಕಿಲ್ಲ ಎಂದುಕೊಳ್ಳುತ್ತೇನೆ. ಬಾಗಿಲು ಭದ್ರಪಡಿಸಿಕೊಂಡು ಒಳಗೆ ಹೂತು ಕುಳಿತುಕೊಳ್ಳಬೇಕಾದ ಜರೂರಿಲ್ಲದ ಹಳ್ಳಿ ಅದು. ಅಲ್ಲಿ ಪ್ರತಿಯೊಂದು ಮನೆಯ ಸಂಗತಿಯೂ ಇಡೀ ಹಳ್ಳಿಯ ಸಂಗತಿಯೇ. ನಿಗೂಢಗಳನ್ನು ಕಳಚಿಟ್ಟು ಬೆರೆತುಹೋಗುವ ಭಾವನದಿಯ ಒರತೆ ಅಲ್ಲಿ ಸದಾ ಜೀವಂತ. ಅಲ್ಲಿ ಮಳೆ ತರುವ ಸಂಭ್ರಮ, ಬಿರುಮಳೆಯ ಕಾರಣದ ದಿಗಿಲು, ಚಳಿಯು ತಂದಿಡುವ ಆಹ್ಲಾದ, ಬಿಸಿಲು ಕರುಣಿಸುವ ಬದುಕಿನ ಪಾಠಗಳು ಎಲ್ಲವೂ ಸಮೂಹದ ಬಯಲಲ್ಲೇ ಅನುಭವವಾಗುವಂಥದ್ದು. ಅವರ ಹಟ್ಟಿಯ ಹಸುಗರು ಕಳೆದುಹೋದರೆ ಅದು ಇತರರೆಲ್ಲರ ಪಾಲಿನ ದಿಗಿಲು. ಕತ್ತಲನ್ನು ಹರಡುವ ಸಂಜೆಯ ಧಾವಂತವನ್ನು ಸೀಳುತ್ತಲೇ ಹುಡುಗರೆಲ್ಲ ಅಂಬಾ ಎನ್ನುತ್ತ ಕಾಣೆಯಾದ ಕರುವಿನ ಹುಡುಕಾಟಕ್ಕಿಳಿಯುತ್ತಾರೆ. ದನವನ್ನು ಅಡಗಿಸಿಡುತ್ತಾನೆ ಎಂಬ ಆರೋಪವಿರುವ ಕಾರಣಕ್ಕಾಗೇ ಜನಮನದಲ್ಲಿ ನೆಲೆಗೊಂಡಿರುವ ಗುತ್ತದ ದೇವರಿಗೆ ಹರಕೆ ಕಟ್ಟುತ್ತಾರೆ. ಕಡೆಗೂ ಕರು ಕಂಡಾಗ ಹಳ್ಳಿಯೇ ಒಂದಾಗಿ ಸಂಭ್ರಮಿಸುತ್ತದೆ. ಸಂಕಟದ ಮಧ್ಯೆಯೇ ಒಂದು ಸಡಗರಕ್ಕಾಗಿ ಅಲ್ಲಿ ನಿರೀಕ್ಷೆಗಳು ಕುಡಿಯೊಡೆಯುತ್ತಿರುತ್ತವೆ. ಲವಲವಿಕೆಯನ್ನು ಕಾದಿಡುವ ತವಕಗಳು ದನಿಗೈಯುತ್ತಲೇ ಇರುತ್ತವೆ.

ಇಂಥದೊಂದು ಹಳ್ಳಿಯ ಚಿತ್ರ ಇವತ್ತು ಎಷ್ಟರ ಮಟ್ಟಿಗೆ ವಾಸ್ತವ ಎಂಬ ಎಚ್ಚರದ ಬಾಜುವಿನಲ್ಲೂ ಹೀಗೊಂದು ಭಾವುಕ ಸ್ಪರ್ಷವಿರುವ ಹಂಬಲ ತಪ್ಪಲ್ಲ ಎನ್ನಿಸುತ್ತದೆ. ಈ ಕಿರುದಾರಿಯ ಮೂಲಕ ಗೋಕುಲವನ್ನು ಅಸ್ಪಷ್ಟವಾಗಿಯಾದರೂ ಕಾಣುವುದು ಸಾಧ್ಯವಾಗುವುದಾದರೆ, ಅಲ್ಲಿ ಯಶೋದೆ ಮತ್ತು ನಂದರ ಮನೆಯಂಗಳದಲ್ಲಿ ಹುಡುಗರ ತಂಟೆ ಜೋರಾಗಿದೆ. ಆ ಎಲ್ಲ ತಂಟೆಕೋರರ ನಾಯಕ ಕೃಷ್ಣ. ಯಮುನೆಯ ಸಮೀಪ ಹೆಣ್ಣುಮಕ್ಕಳನ್ನು ಹುಡುಗರ ಗುಂಪೊಂದು ಗೋಳುಹೊಯ್ದುಕೊಳ್ಳುತ್ತಿದೆ. ಆ ಪುಂಡರ ನಾಯಕ ಅದೇ ಕೃಷ್ಣ.

ರಾಜಪುತ್ರ ಕೃಷ್ಣ ಗೋಕುಲದಲ್ಲಿ ಅವರದೇ ಮನೆಯ ಹುಡುಗನೆಂಬಂತೆ ಒಂದಾಗಿ ಹೋದವನು. ಅವನ ತಂಟೆ ತಕರಾರುಗಳೆಲ್ಲಕ್ಕೂ ಗೋಕುಲದ ಸರಳತೆಯದ್ದೇ ಲೇಪ. ರಾಜಮನೆತನದ ಎಳೆಯ ಶ್ರೀಕೃಷ್ಣನ ಮನಸ್ಸಲ್ಲಿ ಬಡವರ ಹಟ್ಟಿಯ ಪ್ರಾಣಬಿಂದುವನ್ನು ಗುರುತಿಸಬಲ್ಲ ಶಕ್ತಿ ಚಿಗಿತದ್ದು ಗೋಕುಲದೊಂದಿಗಿನ ಆತನ ಈ ಸಖ್ಯದ ಕಾರಣದಿಂದ. ಕೃಷ್ಣನ ಜೀವನದ ನಿಜವಾದ ಭಾಗ್ಯಗಳಲ್ಲಿ ಮೊದಲನೆಯದು ಆತನ ಗೋಕುಲದ ದಿನಗಳು. ಬುದ್ಧನನ್ನು, ಗಾಂಧಿಯನ್ನು ಓದಿಕೊಳ್ಳುವಾಗ ಅವರೊಳಗೆ ನಾವು ಕೃಷ್ಣನ ಇಂಥ ಭಾಗ್ಯವೇ ಅಂತರ್ ವಾಹಕದಂತೆ ಹರಿಯುವುದನ್ನು ಕಾಣುತ್ತೇವೆ. ಸಿದ್ಧಾರ್ಥ ಅರಮನೆಯ ಆಚೆಗಿನ ವಿದ್ಯಮಾನಗಳಿಗಾಗಿ ಕುತೂಹಲಿಸುತ್ತಾನೆ. ಸಾಮಾನ್ಯನ ಬದುಕು ಏನು ಎಂಬ ಅರಿವಿನಲ್ಲಿ ನಿಜವಾದ ಪ್ರೀತಿಯ ಹೊಳಹು ಗಳಿಸುತ್ತಾನೆ. ಗಾಂಧಿ ಸರಳತೆಯ ಬೆಳಕಿನಲ್ಲಿ ಜನರ ಎದೆಯೊಳಗೆ ನಡೆದುಬರುತ್ತಾರೆ.

ತಮ್ಮ ಕರುಳ ಕುಡಿಯಲ್ಲದಿದ್ದರೂ ಯಶೋದೆ ಮತ್ತು ನಂದರು, ಅಷ್ಟೇ ಯಾಕೆ ಇಡೀ ಗೋಕುಲ ಕೃಷ್ಣನನ್ನು ತಮ್ಮವನೆಂದು ತುಂಬಿಕೊಳ್ಳುವ ಪರಿ ಯಾವ ರಾಜಸಿರಿಗಿಂತ ದೊಡ್ಡದು. ಕೃಷ್ಣನನ್ನು ಯಶೋದೆಯಾಗಲಿ, ಗೋಕುಲವಾಗಲಿ ರಾಜಪುತ್ರನೆಂದು ನೋಡಲಿಲ್ಲ. ಗೊಲ್ಲತಿಯರು ಕೃಷ್ಣನ ತಂಟೆಕೋರತನದ ಬಗ್ಗೆ, ಪುಂಡತನದ ಬಗ್ಗೆ ಯಶೋದೆಯ ಬಳಿ ಬಂದು ದೂರು ಹೇಳಲು ಅಂಜಲಿಲ್ಲ. ಯಶೋದೆ ಕೂಡ ಅವನನ್ನು ದಂಡಿಸುವ ಅಧಿಕಾರವಿಟ್ಟುಕೊಂಡೇ ಅವನನ್ನು ಪ್ರೀತಿಸಿದಳು, ಪಾಲಿಸಿದಳು.

ಕೃಷ್ಣನನ್ನು ಗೋಕುಲದವರೆಲ್ಲ ಬೆರಗಿನಿಂದ ಕಾಣಲು ಇದ್ದ ಕಾರಣವೆಂದರೆ, ಆತ ಅವರಿಂದ ಆಗದ್ದನ್ನು ಮಾಡಿ ತೋರಿದ್ದು. ಕಾಳಿಂಗವನ್ನು ಮೆಟ್ಟಿ ನಿಂತ ಹುಡುಗನ ಚಿತ್ರ ಗೋಕುಲದ ಯಾವನ ಮನಸ್ಸಿನಿಂದಲೂ ಕಡೆಯವರೆಗೂ ಮರೆತುಹೋಗಿರಲಿಕ್ಕಿಲ್ಲ. ಗೋಕುಲವನ್ನೇ ತೊಳೆದುಹಾಕಿಬಿಡುವಂಥ ಮಳೆಯ ಪ್ರಹಾರಕ್ಕೆ ಪ್ರತಿಯಾಗಿ ಗೋವರ್ಧನಗಿರಿಯನ್ನು ಕಿರುಬೆರಳಲ್ಲಿ ಎತ್ತಿ ನಸುನಗುತ್ತ ನಿಂತು ಎಲ್ಲರನ್ನೂ ಕಾಯ್ದವನು ದೇವರಾಗಿ ಅವರ ಮನದಲ್ಲಿ ಅಚ್ಚೊತ್ತಲು ಹೆಚ್ಚು ಹೊತ್ತು ಬೇಕಾಗಿರಲಿಕ್ಕಿಲ್ಲ. ಅಷ್ಟಾಗಿಯೂ ಕೃಷ್ಣ ಯಾವ ಕ್ಷಣದಲ್ಲೂ ಅದೇ ತಂಟೆಕೋರನ, ಪುಂಡನ ರೂಪದಲ್ಲೇ ಅವರೊಳಗೆ ಉಳಿದ. ಅದು ಕೃಷ್ಣನ ರಾಜತಾಂತ್ರಿಕ ಶಕ್ತಿಯಿರಬಹುದು. ಗೋಕುಲದವರ ಮನದಾಚೆಯ ರಾಜಯೋಗಕ್ಕಿಂತ, ಅವರ ಮನದೊಳಗಿನ ಒಡ್ಡೋಲಗದಲ್ಲಿ ಶಾಶ್ವತ ನೆಲೆಯನ್ನು ಕೃಷ್ಣ ಬಯಸಿದ್ದಿರಬಹುದು.

ಇಂಥ ಕೃಷ್ಣನನ್ನು ರಾಧೆ ಹಂಬಲಿಸುತ್ತಾಳೆ. ಇದು ಕೃಷ್ಣನ ಪಾಲಿನ ಮತ್ತೊಂದು ಬಹುದೊಡ್ಡ ಭಾಗ್ಯ. ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬೇಕು. ರಾಧೆ ಮಾತ್ರವಲ್ಲ, ಗೋಪಿಕೆಯರ ಸಮೂಹವೇ ಕೃಷ್ಣನಿಗಾಗಿ ಎದೆಯ ಡವಡವವನ್ನು ಬಚ್ಚಿಡುತ್ತ ಕಾತರಿಸುತ್ತದೆ. ಈ ಕಾತರದ ಸೆಳವಿನಲ್ಲಿ ಸೆರೆಯಾದವರ ಪೈಕಿ ರಾಧೆಯೇ ಪ್ರತ್ಯೇಕವಾಗಿ ಕಂಡರೂ, ಅವಳೆಂದೂ ಕೃಷ್ಣನ ಬಗ್ಗೆ ಪೊಸೆಸಿವ್ ಆಗಿದ್ದಳೆಂದು ಅನ್ನಿಸುವುದಿಲ್ಲ. ಬಹುಶಃ ಆಕೆ ಈ ಮನೋಭಾವದಿಂದಾಗೇ ತನ್ನ ವಿಷಯದಲ್ಲಿ ಕೃಷ್ಣ ಕೂಡ ಪೊಸೆಸಿವ್ ಆಗದಂಥ ಸನ್ನಿವೇಶವನ್ನು ಕೂಡ ತನಗರಿವಿಲ್ಲದಂತೆ ಸಾಧ್ಯವಾಗಿಸಿಕೊಂಡಿದ್ದಿರಬಹುದು.

ಗೋಕುಲ ಬಿಟ್ಟು ಕೃಷ್ಣ ಮಧುರೆಗೆ ಹೊರಡಬೇಕಾಗಿ ಬಂದಾಗ ಗೋಕುಲದ ಹರೆಯದ ಹುಡುಗರಲ್ಲಿ ಎಷ್ಟು ಹುಚ್ಚು ಉಮೇದು ಇತ್ತೊ ಅಷ್ಟೇ ಮಟ್ಟಿನ ದುಃಖ ಗೋಪಿಕೆಯರನ್ನು ತುಂಬಿತ್ತು. ಆದರೆ ಇಲ್ಲಿಯೂ ಕೃಷ್ಣನ ದಾರಿಗೆ ಅಡ್ಡಿಯಾಗದ ಹಾಗೆ, ಸಡಗರಕ್ಕೆ ಭಂಗವಾಗದ ಹಾಗೆ ದುಃಖ ನುಂಗಿಕೊಂಡು ಗಟ್ಟಿಯಾಗಿ ನಿಂತುಬಿಡುತ್ತದೆ ಗೋಪಿಕಾ ಸಮೂಹ. ಕೃಷ್ಣ ಬಿಸುಟ ಕೊಳಲನ್ನು ರಾಧೆ ಎದೆಗೊತ್ತಿಕೊಳ್ಳುತ್ತಾಳೆ. ಬಹುಶಃ ಇನ್ನು ಮುಂದೆ ತಾನು ಕೃಷ್ಣನ ಕೊಳಲ ಉಲಿಯಾಗಲಾರೆ ಎಂಬ ಸಂಕಟ ಅವಳನ್ನು ಆ ಗಳಿಗೆ ತೀವ್ರ ಯಾತನೆಯಾಗಿ ಕಾಡಿರಲು ಸಾಕು. ಬಿಲ್ಲಹಬ್ಬದ ನೆಪದಲ್ಲಿ ರಾಜಕಾರ್ಯಕ್ಕಾಗಿ ಹೊರಟುನಿಂತ ಕೃಷ್ಣನಿಗೆ ವಿದಾಯದ ಕ್ಷಣ ಕಾಡಿದ್ದರೂ ಅದನ್ನು ಮರೆತು ಮುಂದುವರಿಯುವುದು ಅವನಿಗೆ ಸುಲಭವಿತ್ತು. ಆದರೆ ಎದೆಯೊಳಗೆ ಕಾದಿಟ್ಟ ಕನಸಾಗಿದ್ದ ಕೃಷ್ಣನ ವಿದಾಯ ಗೋಪಿಕೆಯರ ಪಾಲಿಗೆ ಅಷ್ಟೂ ಜೀವನಸಮಯದ ಆಘಾತವೇ ಆಗಿ ಎರಗಿರಲು ಸಾಕು. ರಾಧೆಯನ್ನು ಬೇರೆಯಾಗಿ ನೋಡುವುದಕ್ಕಿಂತ ಇಡೀ ಗೋಪಿಕಾ ಸಮೂಹದ ಮನಃಸ್ಥಿತಿಯಾಗಿ ಕಂಡುಕೊಳ್ಳುವುದು ಅವಶ್ಯವೆನ್ನಿಸುತ್ತದೆ.

ಕೃಷ್ಣ ಮತ್ತು ಗೋಪಿಕಾ ಸ್ತ್ರೀಯರ ಮಧ್ಯೆ ಇದ್ದ ಸಂಬಂಧವಾದರೂ ಎಂಥದಾಗಿತ್ತು? ಅಲ್ಲಿ ಉದ್ದಕ್ಕೂ ನಮಗೆ ಕಾಣುವುದು ಗೋಪಿಕೆಯರನ್ನು ಗೋಳುಹೊಯ್ದುಕೊಳ್ಳುವ ಕೃಷ್ಣ. ಅವರ ಬೈಗುಳವನ್ನು ಆಸ್ವಾದಿಸುವ ಕೃಷ್ಣ. ಕೃಷ್ಣನ ಬಗ್ಗೆ ಅವರೂ ಅಷ್ಟೆ. ಸಿಟ್ಟಾದಂತೆ ತೋರಿದರೂ ಅದು ಹುಸಿಮುನಿಸು. ಅವನ ತುಂಟತನದಿಂದ ಒಳಗೊಳಗೇ ಖುಷಿ. ಈ ಖುಷಿಯನ್ನು ಹಾಗೇ ಇಡು ದೇವರೆ ಎಂದು ಪ್ರಾರ್ಥಿಸುವಂತಿದ್ದ ಅವರ ಮನಃಸ್ಥಿತಿಯಲ್ಲಿನ ಪ್ರೇಮಕ್ಕೆ ವಾಂಛೆಯ ಎಂಜಲಿದ್ದಿರಲಾರದು.

ಗೋಪಿಕೆಯರೊಂದಿಗಿನ ಕೃಷ್ಣನ ಹುಡುಗಾಟ, ಸಖ್ಯದ ಹುಡುಕಾಟವೇ ಆಗಿದ್ದಿರಬಹುದು. ನಲ್ಲನಿದ್ದರೆ ಅವನಂತಿರಲಿ ಎಂದು ಗೋಪಿಕೆಯರೂ ಹಂಬಲಿಸಿದ್ದರೆ ಅದು ತಪ್ಪಲ್ಲ. ಇನ್ನೊಂದು ಮನಸ್ಸಿನ ಮೌನವನ್ನು ಆಲಿಸಬಲ್ಲ ಶಕ್ತಿ ನಿಜವಾದ ಸಖ್ಯಕ್ಕಿರುತ್ತದೆ. ಕೃಷ್ಣ ಮತ್ತು ಗೋಪಿಕೆಯರ ಮಧ್ಯೆ ಬೆಳೆದಿದ್ದ ಸಲಿಗೆ ಇಂಥ ಗೆಳೆತನದ ಭಾವದ್ದಾಗಿರಬಹುದು. ರಾಧೆ ಇಡೀ ಕೃಷ್ಣ ಕಥಾನಕದಲ್ಲಿ ಅಂಥ ಬೆಸುಗೆ ಬಯಸುವ ಗೋಪಿಕಾ ಸಮೂಹದ ಪ್ರತಿನಿಧಿ ಅಷ್ಟೆ. ಹದಿನಾರು ಸಾವಿರ ಗೋಪಿಕಾ ಸ್ತ್ರೀಯರು ಎಂಬುದು ಒಂದು ಸಮಷ್ಟಿ ಎಂಬ ಅರ್ಥ ಹೊಂದಿರುವಂತೆಯೇ, ಭಾವುಕ ಸಖ್ಯಕ್ಕೆ ಕಾತರಿಸಿದ ರಾಧೆಯ ಹಿರಿಮೆಯನ್ನೂ ಧ್ವನಿಸುತ್ತದೆಯೇ?

ಒಬ್ಬ ಸಾಧಾರಣ ಹೆಣ್ಣಾಗಿಯೇ ರಾಧೆ, ಕೃಷ್ಣನ ಲೋಕಕ್ಕೆ ಒಂದು ವಿಸ್ತಾರ ತಂದಳು ಎಂಬುದನ್ನು ಗಮನಿಸದೆ ಇರುವುದು ಸಾಧ್ಯವಿಲ್ಲ. ಕಡೆಗೂ ರಾಧೆ, ಅಥವಾ ಗೋಪಿಕಾ ಸಮೂಹ ಕೃಷ್ಣನನ್ನು ಗೋಕುಲದ ಗಂಧವಾಗಿ ಉಳಿಸಿಕೊಳ್ಳಲು ಹಂಬಲಿಸಿತು.

ಪುತಿನ ಅವರ “ಗೋಕುಲ ನಿರ್ಗಮನ”  ನಾಟಕದ ಕಡೆಯಲ್ಲಿ, ಕೃಷ್ಣನಿಲ್ಲದ ಗೋಕುಲ ಆತನ ನೆನಪನ್ನೇ ಮಿಡಿಯುತ್ತಿರುವ ಸನ್ನಿವೇಶ ಹೀಗೆ ಬರುತ್ತದೆ:

ಇದ್ದುದು ದಿಟ ಅವನೊಲಿದುದು ದಿಟ ನಾವು
ನಲಿದುದು ದಿಟ ಬಹ ನೆಚ್ಚು ದಿಟ

ಎಂದೆಂದೂ ಮುಗಿಯದ ವಸಂತಕ್ಕಾಗಿ ನಿರೀಕ್ಷಿಸುತ್ತಲೇ ಕೃಷ್ಣನನ್ನು ಬೀಳ್ಕೊಟ್ಟ ಗೋಕುಲ, ಅದರೊಳಗೆ ಬದುಕಿದ್ದ ರಾಧೆ, ಅವಳ ಗೆಳತಿಯರು -ಇವರೆಲ್ಲ ಬದುಕು ದಯಪಾಲಿಸಿದ್ದು ಕೃಷ್ಣನಿಗೆ ಮಾತ್ರವಲ್ಲ, ನಮ್ಮ ಕಾಲಕ್ಕೂ ಆ ಧ್ಯಾನದ ದೀಕ್ಷೆ ದಯಪಾಲಿಸುತ್ತಿರುವವರು.

ಹಾಗಾಗಿಯೇ ಗೋಕುಲ ಅನ್ನುವುದನ್ನು, ಅಂಥ ಮಾರ್ದವತೆಯನ್ನು ರಾಧೆಯ ಅಂತಃಕರಣದೊಳಗಿನ ಲೋಕ ಎಂದು ನೋಡಬೇಕೆಂಬ ಆಸೆಯಾಗುತ್ತದೆ.

ವೆಂಕಟ್ರಮಣ ಗೌಡ

%d bloggers like this: