ರಾಧೆ ಕಟ್ಟಿದ ಬದುಕು

ಎನಿಗ್ಮಾ ಪೋಸ್ಟ್

ಗೋಕುಲದ ಪರಿಸರವನ್ನು ನಮ್ಮ ಮಿತಿಯಲ್ಲಾದರೂ ಕಣ್ಣೆದುರು ಕಟ್ಟಿಕೊಳ್ಳಲು ಪ್ರಯತ್ನಿಸುವುದಾದರೆ, ಅದು ಇಂಡಿಯಾದ ಯಾವುದೇ ಒಂದು ಕುಗ್ರಾಮದಂತೆ ಇದ್ದ ಪುಟ್ಟ ಹಳ್ಳಿ. ಬೆಂಗಳೂರಂಥ ಜನಗಾಡಲ್ಲಿ ವಾಹನಗಾಡಲ್ಲಿ ಉಸಿರು ಕಟ್ಟಿದಂತಾಗುವಾಗ ಎಂಥದೋ ಆಪ್ತತೆಯನ್ನು, ಮಾಧುರ್ಯವನ್ನು ಹಂಬಲಿಸಿ ಧ್ಯಾನಿಸುವ, ನಾವೆಲ್ಲರೂ ಕಂಡಿರುವ ಹಳ್ಳಿಗಳ ಹಾಗೆ ಇದ್ದಿರಬಹುದಾದ ಹಳ್ಳಿ. ನಾನಿಲ್ಲಿ ನನ್ನ ಹಳ್ಳಿಯ ಮಳೆ, ಬಿಸಿಲು, ಚಳಿ, ಗಾಳಿಯ ನೆನಪು ಮಾಡಿಕೊಂಡರೆ ಅಪ್ರಸ್ತುತವಾಗಲಿಕ್ಕಿಲ್ಲ ಎಂದುಕೊಳ್ಳುತ್ತೇನೆ. ಬಾಗಿಲು ಭದ್ರಪಡಿಸಿಕೊಂಡು ಒಳಗೆ ಹೂತು ಕುಳಿತುಕೊಳ್ಳಬೇಕಾದ ಜರೂರಿಲ್ಲದ ಹಳ್ಳಿ ಅದು. ಅಲ್ಲಿ ಪ್ರತಿಯೊಂದು ಮನೆಯ ಸಂಗತಿಯೂ ಇಡೀ ಹಳ್ಳಿಯ ಸಂಗತಿಯೇ. ನಿಗೂಢಗಳನ್ನು ಕಳಚಿಟ್ಟು ಬೆರೆತುಹೋಗುವ ಭಾವನದಿಯ ಒರತೆ ಅಲ್ಲಿ ಸದಾ ಜೀವಂತ. ಅಲ್ಲಿ ಮಳೆ ತರುವ ಸಂಭ್ರಮ, ಬಿರುಮಳೆಯ ಕಾರಣದ ದಿಗಿಲು, ಚಳಿಯು ತಂದಿಡುವ ಆಹ್ಲಾದ, ಬಿಸಿಲು ಕರುಣಿಸುವ ಬದುಕಿನ ಪಾಠಗಳು ಎಲ್ಲವೂ ಸಮೂಹದ ಬಯಲಲ್ಲೇ ಅನುಭವವಾಗುವಂಥದ್ದು. ಅವರ ಹಟ್ಟಿಯ ಹಸುಗರು ಕಳೆದುಹೋದರೆ ಅದು ಇತರರೆಲ್ಲರ ಪಾಲಿನ ದಿಗಿಲು. ಕತ್ತಲನ್ನು ಹರಡುವ ಸಂಜೆಯ ಧಾವಂತವನ್ನು ಸೀಳುತ್ತಲೇ ಹುಡುಗರೆಲ್ಲ ಅಂಬಾ ಎನ್ನುತ್ತ ಕಾಣೆಯಾದ ಕರುವಿನ ಹುಡುಕಾಟಕ್ಕಿಳಿಯುತ್ತಾರೆ. ದನವನ್ನು ಅಡಗಿಸಿಡುತ್ತಾನೆ ಎಂಬ ಆರೋಪವಿರುವ ಕಾರಣಕ್ಕಾಗೇ ಜನಮನದಲ್ಲಿ ನೆಲೆಗೊಂಡಿರುವ ಗುತ್ತದ ದೇವರಿಗೆ ಹರಕೆ ಕಟ್ಟುತ್ತಾರೆ. ಕಡೆಗೂ ಕರು ಕಂಡಾಗ ಹಳ್ಳಿಯೇ ಒಂದಾಗಿ ಸಂಭ್ರಮಿಸುತ್ತದೆ. ಸಂಕಟದ ಮಧ್ಯೆಯೇ ಒಂದು ಸಡಗರಕ್ಕಾಗಿ ಅಲ್ಲಿ ನಿರೀಕ್ಷೆಗಳು ಕುಡಿಯೊಡೆಯುತ್ತಿರುತ್ತವೆ. ಲವಲವಿಕೆಯನ್ನು ಕಾದಿಡುವ ತವಕಗಳು ದನಿಗೈಯುತ್ತಲೇ ಇರುತ್ತವೆ.

ಇಂಥದೊಂದು ಹಳ್ಳಿಯ ಚಿತ್ರ ಇವತ್ತು ಎಷ್ಟರ ಮಟ್ಟಿಗೆ ವಾಸ್ತವ ಎಂಬ ಎಚ್ಚರದ ಬಾಜುವಿನಲ್ಲೂ ಹೀಗೊಂದು ಭಾವುಕ ಸ್ಪರ್ಷವಿರುವ ಹಂಬಲ ತಪ್ಪಲ್ಲ ಎನ್ನಿಸುತ್ತದೆ. ಈ ಕಿರುದಾರಿಯ ಮೂಲಕ ಗೋಕುಲವನ್ನು ಅಸ್ಪಷ್ಟವಾಗಿಯಾದರೂ ಕಾಣುವುದು ಸಾಧ್ಯವಾಗುವುದಾದರೆ, ಅಲ್ಲಿ ಯಶೋದೆ ಮತ್ತು ನಂದರ ಮನೆಯಂಗಳದಲ್ಲಿ ಹುಡುಗರ ತಂಟೆ ಜೋರಾಗಿದೆ. ಆ ಎಲ್ಲ ತಂಟೆಕೋರರ ನಾಯಕ ಕೃಷ್ಣ. ಯಮುನೆಯ ಸಮೀಪ ಹೆಣ್ಣುಮಕ್ಕಳನ್ನು ಹುಡುಗರ ಗುಂಪೊಂದು ಗೋಳುಹೊಯ್ದುಕೊಳ್ಳುತ್ತಿದೆ. ಆ ಪುಂಡರ ನಾಯಕ ಅದೇ ಕೃಷ್ಣ.

ರಾಜಪುತ್ರ ಕೃಷ್ಣ ಗೋಕುಲದಲ್ಲಿ ಅವರದೇ ಮನೆಯ ಹುಡುಗನೆಂಬಂತೆ ಒಂದಾಗಿ ಹೋದವನು. ಅವನ ತಂಟೆ ತಕರಾರುಗಳೆಲ್ಲಕ್ಕೂ ಗೋಕುಲದ ಸರಳತೆಯದ್ದೇ ಲೇಪ. ರಾಜಮನೆತನದ ಎಳೆಯ ಶ್ರೀಕೃಷ್ಣನ ಮನಸ್ಸಲ್ಲಿ ಬಡವರ ಹಟ್ಟಿಯ ಪ್ರಾಣಬಿಂದುವನ್ನು ಗುರುತಿಸಬಲ್ಲ ಶಕ್ತಿ ಚಿಗಿತದ್ದು ಗೋಕುಲದೊಂದಿಗಿನ ಆತನ ಈ ಸಖ್ಯದ ಕಾರಣದಿಂದ. ಕೃಷ್ಣನ ಜೀವನದ ನಿಜವಾದ ಭಾಗ್ಯಗಳಲ್ಲಿ ಮೊದಲನೆಯದು ಆತನ ಗೋಕುಲದ ದಿನಗಳು. ಬುದ್ಧನನ್ನು, ಗಾಂಧಿಯನ್ನು ಓದಿಕೊಳ್ಳುವಾಗ ಅವರೊಳಗೆ ನಾವು ಕೃಷ್ಣನ ಇಂಥ ಭಾಗ್ಯವೇ ಅಂತರ್ ವಾಹಕದಂತೆ ಹರಿಯುವುದನ್ನು ಕಾಣುತ್ತೇವೆ. ಸಿದ್ಧಾರ್ಥ ಅರಮನೆಯ ಆಚೆಗಿನ ವಿದ್ಯಮಾನಗಳಿಗಾಗಿ ಕುತೂಹಲಿಸುತ್ತಾನೆ. ಸಾಮಾನ್ಯನ ಬದುಕು ಏನು ಎಂಬ ಅರಿವಿನಲ್ಲಿ ನಿಜವಾದ ಪ್ರೀತಿಯ ಹೊಳಹು ಗಳಿಸುತ್ತಾನೆ. ಗಾಂಧಿ ಸರಳತೆಯ ಬೆಳಕಿನಲ್ಲಿ ಜನರ ಎದೆಯೊಳಗೆ ನಡೆದುಬರುತ್ತಾರೆ.

ತಮ್ಮ ಕರುಳ ಕುಡಿಯಲ್ಲದಿದ್ದರೂ ಯಶೋದೆ ಮತ್ತು ನಂದರು, ಅಷ್ಟೇ ಯಾಕೆ ಇಡೀ ಗೋಕುಲ ಕೃಷ್ಣನನ್ನು ತಮ್ಮವನೆಂದು ತುಂಬಿಕೊಳ್ಳುವ ಪರಿ ಯಾವ ರಾಜಸಿರಿಗಿಂತ ದೊಡ್ಡದು. ಕೃಷ್ಣನನ್ನು ಯಶೋದೆಯಾಗಲಿ, ಗೋಕುಲವಾಗಲಿ ರಾಜಪುತ್ರನೆಂದು ನೋಡಲಿಲ್ಲ. ಗೊಲ್ಲತಿಯರು ಕೃಷ್ಣನ ತಂಟೆಕೋರತನದ ಬಗ್ಗೆ, ಪುಂಡತನದ ಬಗ್ಗೆ ಯಶೋದೆಯ ಬಳಿ ಬಂದು ದೂರು ಹೇಳಲು ಅಂಜಲಿಲ್ಲ. ಯಶೋದೆ ಕೂಡ ಅವನನ್ನು ದಂಡಿಸುವ ಅಧಿಕಾರವಿಟ್ಟುಕೊಂಡೇ ಅವನನ್ನು ಪ್ರೀತಿಸಿದಳು, ಪಾಲಿಸಿದಳು.

ಕೃಷ್ಣನನ್ನು ಗೋಕುಲದವರೆಲ್ಲ ಬೆರಗಿನಿಂದ ಕಾಣಲು ಇದ್ದ ಕಾರಣವೆಂದರೆ, ಆತ ಅವರಿಂದ ಆಗದ್ದನ್ನು ಮಾಡಿ ತೋರಿದ್ದು. ಕಾಳಿಂಗವನ್ನು ಮೆಟ್ಟಿ ನಿಂತ ಹುಡುಗನ ಚಿತ್ರ ಗೋಕುಲದ ಯಾವನ ಮನಸ್ಸಿನಿಂದಲೂ ಕಡೆಯವರೆಗೂ ಮರೆತುಹೋಗಿರಲಿಕ್ಕಿಲ್ಲ. ಗೋಕುಲವನ್ನೇ ತೊಳೆದುಹಾಕಿಬಿಡುವಂಥ ಮಳೆಯ ಪ್ರಹಾರಕ್ಕೆ ಪ್ರತಿಯಾಗಿ ಗೋವರ್ಧನಗಿರಿಯನ್ನು ಕಿರುಬೆರಳಲ್ಲಿ ಎತ್ತಿ ನಸುನಗುತ್ತ ನಿಂತು ಎಲ್ಲರನ್ನೂ ಕಾಯ್ದವನು ದೇವರಾಗಿ ಅವರ ಮನದಲ್ಲಿ ಅಚ್ಚೊತ್ತಲು ಹೆಚ್ಚು ಹೊತ್ತು ಬೇಕಾಗಿರಲಿಕ್ಕಿಲ್ಲ. ಅಷ್ಟಾಗಿಯೂ ಕೃಷ್ಣ ಯಾವ ಕ್ಷಣದಲ್ಲೂ ಅದೇ ತಂಟೆಕೋರನ, ಪುಂಡನ ರೂಪದಲ್ಲೇ ಅವರೊಳಗೆ ಉಳಿದ. ಅದು ಕೃಷ್ಣನ ರಾಜತಾಂತ್ರಿಕ ಶಕ್ತಿಯಿರಬಹುದು. ಗೋಕುಲದವರ ಮನದಾಚೆಯ ರಾಜಯೋಗಕ್ಕಿಂತ, ಅವರ ಮನದೊಳಗಿನ ಒಡ್ಡೋಲಗದಲ್ಲಿ ಶಾಶ್ವತ ನೆಲೆಯನ್ನು ಕೃಷ್ಣ ಬಯಸಿದ್ದಿರಬಹುದು.

ಇಂಥ ಕೃಷ್ಣನನ್ನು ರಾಧೆ ಹಂಬಲಿಸುತ್ತಾಳೆ. ಇದು ಕೃಷ್ಣನ ಪಾಲಿನ ಮತ್ತೊಂದು ಬಹುದೊಡ್ಡ ಭಾಗ್ಯ. ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬೇಕು. ರಾಧೆ ಮಾತ್ರವಲ್ಲ, ಗೋಪಿಕೆಯರ ಸಮೂಹವೇ ಕೃಷ್ಣನಿಗಾಗಿ ಎದೆಯ ಡವಡವವನ್ನು ಬಚ್ಚಿಡುತ್ತ ಕಾತರಿಸುತ್ತದೆ. ಈ ಕಾತರದ ಸೆಳವಿನಲ್ಲಿ ಸೆರೆಯಾದವರ ಪೈಕಿ ರಾಧೆಯೇ ಪ್ರತ್ಯೇಕವಾಗಿ ಕಂಡರೂ, ಅವಳೆಂದೂ ಕೃಷ್ಣನ ಬಗ್ಗೆ ಪೊಸೆಸಿವ್ ಆಗಿದ್ದಳೆಂದು ಅನ್ನಿಸುವುದಿಲ್ಲ. ಬಹುಶಃ ಆಕೆ ಈ ಮನೋಭಾವದಿಂದಾಗೇ ತನ್ನ ವಿಷಯದಲ್ಲಿ ಕೃಷ್ಣ ಕೂಡ ಪೊಸೆಸಿವ್ ಆಗದಂಥ ಸನ್ನಿವೇಶವನ್ನು ಕೂಡ ತನಗರಿವಿಲ್ಲದಂತೆ ಸಾಧ್ಯವಾಗಿಸಿಕೊಂಡಿದ್ದಿರಬಹುದು.

ಗೋಕುಲ ಬಿಟ್ಟು ಕೃಷ್ಣ ಮಧುರೆಗೆ ಹೊರಡಬೇಕಾಗಿ ಬಂದಾಗ ಗೋಕುಲದ ಹರೆಯದ ಹುಡುಗರಲ್ಲಿ ಎಷ್ಟು ಹುಚ್ಚು ಉಮೇದು ಇತ್ತೊ ಅಷ್ಟೇ ಮಟ್ಟಿನ ದುಃಖ ಗೋಪಿಕೆಯರನ್ನು ತುಂಬಿತ್ತು. ಆದರೆ ಇಲ್ಲಿಯೂ ಕೃಷ್ಣನ ದಾರಿಗೆ ಅಡ್ಡಿಯಾಗದ ಹಾಗೆ, ಸಡಗರಕ್ಕೆ ಭಂಗವಾಗದ ಹಾಗೆ ದುಃಖ ನುಂಗಿಕೊಂಡು ಗಟ್ಟಿಯಾಗಿ ನಿಂತುಬಿಡುತ್ತದೆ ಗೋಪಿಕಾ ಸಮೂಹ. ಕೃಷ್ಣ ಬಿಸುಟ ಕೊಳಲನ್ನು ರಾಧೆ ಎದೆಗೊತ್ತಿಕೊಳ್ಳುತ್ತಾಳೆ. ಬಹುಶಃ ಇನ್ನು ಮುಂದೆ ತಾನು ಕೃಷ್ಣನ ಕೊಳಲ ಉಲಿಯಾಗಲಾರೆ ಎಂಬ ಸಂಕಟ ಅವಳನ್ನು ಆ ಗಳಿಗೆ ತೀವ್ರ ಯಾತನೆಯಾಗಿ ಕಾಡಿರಲು ಸಾಕು. ಬಿಲ್ಲಹಬ್ಬದ ನೆಪದಲ್ಲಿ ರಾಜಕಾರ್ಯಕ್ಕಾಗಿ ಹೊರಟುನಿಂತ ಕೃಷ್ಣನಿಗೆ ವಿದಾಯದ ಕ್ಷಣ ಕಾಡಿದ್ದರೂ ಅದನ್ನು ಮರೆತು ಮುಂದುವರಿಯುವುದು ಅವನಿಗೆ ಸುಲಭವಿತ್ತು. ಆದರೆ ಎದೆಯೊಳಗೆ ಕಾದಿಟ್ಟ ಕನಸಾಗಿದ್ದ ಕೃಷ್ಣನ ವಿದಾಯ ಗೋಪಿಕೆಯರ ಪಾಲಿಗೆ ಅಷ್ಟೂ ಜೀವನಸಮಯದ ಆಘಾತವೇ ಆಗಿ ಎರಗಿರಲು ಸಾಕು. ರಾಧೆಯನ್ನು ಬೇರೆಯಾಗಿ ನೋಡುವುದಕ್ಕಿಂತ ಇಡೀ ಗೋಪಿಕಾ ಸಮೂಹದ ಮನಃಸ್ಥಿತಿಯಾಗಿ ಕಂಡುಕೊಳ್ಳುವುದು ಅವಶ್ಯವೆನ್ನಿಸುತ್ತದೆ.

ಕೃಷ್ಣ ಮತ್ತು ಗೋಪಿಕಾ ಸ್ತ್ರೀಯರ ಮಧ್ಯೆ ಇದ್ದ ಸಂಬಂಧವಾದರೂ ಎಂಥದಾಗಿತ್ತು? ಅಲ್ಲಿ ಉದ್ದಕ್ಕೂ ನಮಗೆ ಕಾಣುವುದು ಗೋಪಿಕೆಯರನ್ನು ಗೋಳುಹೊಯ್ದುಕೊಳ್ಳುವ ಕೃಷ್ಣ. ಅವರ ಬೈಗುಳವನ್ನು ಆಸ್ವಾದಿಸುವ ಕೃಷ್ಣ. ಕೃಷ್ಣನ ಬಗ್ಗೆ ಅವರೂ ಅಷ್ಟೆ. ಸಿಟ್ಟಾದಂತೆ ತೋರಿದರೂ ಅದು ಹುಸಿಮುನಿಸು. ಅವನ ತುಂಟತನದಿಂದ ಒಳಗೊಳಗೇ ಖುಷಿ. ಈ ಖುಷಿಯನ್ನು ಹಾಗೇ ಇಡು ದೇವರೆ ಎಂದು ಪ್ರಾರ್ಥಿಸುವಂತಿದ್ದ ಅವರ ಮನಃಸ್ಥಿತಿಯಲ್ಲಿನ ಪ್ರೇಮಕ್ಕೆ ವಾಂಛೆಯ ಎಂಜಲಿದ್ದಿರಲಾರದು.

ಗೋಪಿಕೆಯರೊಂದಿಗಿನ ಕೃಷ್ಣನ ಹುಡುಗಾಟ, ಸಖ್ಯದ ಹುಡುಕಾಟವೇ ಆಗಿದ್ದಿರಬಹುದು. ನಲ್ಲನಿದ್ದರೆ ಅವನಂತಿರಲಿ ಎಂದು ಗೋಪಿಕೆಯರೂ ಹಂಬಲಿಸಿದ್ದರೆ ಅದು ತಪ್ಪಲ್ಲ. ಇನ್ನೊಂದು ಮನಸ್ಸಿನ ಮೌನವನ್ನು ಆಲಿಸಬಲ್ಲ ಶಕ್ತಿ ನಿಜವಾದ ಸಖ್ಯಕ್ಕಿರುತ್ತದೆ. ಕೃಷ್ಣ ಮತ್ತು ಗೋಪಿಕೆಯರ ಮಧ್ಯೆ ಬೆಳೆದಿದ್ದ ಸಲಿಗೆ ಇಂಥ ಗೆಳೆತನದ ಭಾವದ್ದಾಗಿರಬಹುದು. ರಾಧೆ ಇಡೀ ಕೃಷ್ಣ ಕಥಾನಕದಲ್ಲಿ ಅಂಥ ಬೆಸುಗೆ ಬಯಸುವ ಗೋಪಿಕಾ ಸಮೂಹದ ಪ್ರತಿನಿಧಿ ಅಷ್ಟೆ. ಹದಿನಾರು ಸಾವಿರ ಗೋಪಿಕಾ ಸ್ತ್ರೀಯರು ಎಂಬುದು ಒಂದು ಸಮಷ್ಟಿ ಎಂಬ ಅರ್ಥ ಹೊಂದಿರುವಂತೆಯೇ, ಭಾವುಕ ಸಖ್ಯಕ್ಕೆ ಕಾತರಿಸಿದ ರಾಧೆಯ ಹಿರಿಮೆಯನ್ನೂ ಧ್ವನಿಸುತ್ತದೆಯೇ?

ಒಬ್ಬ ಸಾಧಾರಣ ಹೆಣ್ಣಾಗಿಯೇ ರಾಧೆ, ಕೃಷ್ಣನ ಲೋಕಕ್ಕೆ ಒಂದು ವಿಸ್ತಾರ ತಂದಳು ಎಂಬುದನ್ನು ಗಮನಿಸದೆ ಇರುವುದು ಸಾಧ್ಯವಿಲ್ಲ. ಕಡೆಗೂ ರಾಧೆ, ಅಥವಾ ಗೋಪಿಕಾ ಸಮೂಹ ಕೃಷ್ಣನನ್ನು ಗೋಕುಲದ ಗಂಧವಾಗಿ ಉಳಿಸಿಕೊಳ್ಳಲು ಹಂಬಲಿಸಿತು.

ಪುತಿನ ಅವರ “ಗೋಕುಲ ನಿರ್ಗಮನ”  ನಾಟಕದ ಕಡೆಯಲ್ಲಿ, ಕೃಷ್ಣನಿಲ್ಲದ ಗೋಕುಲ ಆತನ ನೆನಪನ್ನೇ ಮಿಡಿಯುತ್ತಿರುವ ಸನ್ನಿವೇಶ ಹೀಗೆ ಬರುತ್ತದೆ:

ಇದ್ದುದು ದಿಟ ಅವನೊಲಿದುದು ದಿಟ ನಾವು
ನಲಿದುದು ದಿಟ ಬಹ ನೆಚ್ಚು ದಿಟ

ಎಂದೆಂದೂ ಮುಗಿಯದ ವಸಂತಕ್ಕಾಗಿ ನಿರೀಕ್ಷಿಸುತ್ತಲೇ ಕೃಷ್ಣನನ್ನು ಬೀಳ್ಕೊಟ್ಟ ಗೋಕುಲ, ಅದರೊಳಗೆ ಬದುಕಿದ್ದ ರಾಧೆ, ಅವಳ ಗೆಳತಿಯರು -ಇವರೆಲ್ಲ ಬದುಕು ದಯಪಾಲಿಸಿದ್ದು ಕೃಷ್ಣನಿಗೆ ಮಾತ್ರವಲ್ಲ, ನಮ್ಮ ಕಾಲಕ್ಕೂ ಆ ಧ್ಯಾನದ ದೀಕ್ಷೆ ದಯಪಾಲಿಸುತ್ತಿರುವವರು.

ಹಾಗಾಗಿಯೇ ಗೋಕುಲ ಅನ್ನುವುದನ್ನು, ಅಂಥ ಮಾರ್ದವತೆಯನ್ನು ರಾಧೆಯ ಅಂತಃಕರಣದೊಳಗಿನ ಲೋಕ ಎಂದು ನೋಡಬೇಕೆಂಬ ಆಸೆಯಾಗುತ್ತದೆ.

ವೆಂಕಟ್ರಮಣ ಗೌಡ

Leave a comment